ಅಡಿಕೆಗಿಂತಲೂ ಲಾಭದ್ದು ತೆಂಗಿನ ಬೆಳೆ.

by | Feb 12, 2020 | Krushi Abhivruddi | 0 comments

ಅಡಿಕೆಗೆ ಉತ್ತಮ ಬೆಲೆ ಇದೆ ಎಂದು ಎಲ್ಲರೂ ಅಡಿಕೆ  ಬೆಳೆಸುತ್ತಾರೆ. ಆದರೆ ಅದರ ಎಲ್ಲಾ ಖರ್ಚು ವೆಚ್ಚ ಮತ್ತು  ಕೊಯಿಲು, ಸಂಸ್ಕರಣೆ ಎಂಬ ನಮ್ಮ ಕೈಯಲ್ಲಾಗದ ಕೆಲಸ ನೋಡಿದರೆ ಅಡಿಕೆ ಬೆಳೆಯಷ್ಟು ಕಷ್ಟದ ಬೆಳೆ  ಬೇರೊಂದಿಲ್ಲ.

 • ತೆಂಗಿನ ಬೆಳೆ ಇದಕ್ಕಿಂತ ಭಿನ್ನ. ಕೊಯಿಲಿಗೆ ಸಮಯ ನಿರ್ಭಂದ ಇಲ್ಲ.
 • ಹಾಳಾಗುತ್ತದೆ ಎಂಬ ಭಯ ಇಲ್ಲ. ಬ್ಯಾನ್ ಆರೋಗ್ಯಕ್ಕೆ ಹಾಳು ಮುಂತಾದ ತೊಂದರೆಗಳೂ ಇಲ್ಲ.
 • ತೆಂಗಿನ ಮರಗಳ ಮಧ್ಯಂತರದ ಸ್ಥಳಾವಕಾಶದಲ್ಲಿ ಬುಡ ಭಾಗದಲ್ಲಿ, ಮರದ ಕಾಂಡದಲ್ಲಿ, ಮಧ್ಯಂತರದಲ್ಲಿ  ಬೆಳಕಿನ ಲಭ್ಯತೆಗೆ ಅನುಗುಣವಾಗಿ ಬೇರೆ ಬೇರೆ  ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಸಿದರೆ ತೆಂಗಿಗಿಂತ  ಹೆಚ್ಚಿನ ಆದಾಯವನ್ನು  ಪಡೆಯಬಹುದು.
 • ತೆಂಗಿನ ತೋಟ ಅಡಿಕೆ ತೋಟಕ್ಕಿಂತಲೂ ಲಾಭದಾಯಕವಾಗಲು ಇದು ಅಗತ್ಯ.

ತೆಂಗಿನ ಮರದ ಬೇರುಗಳು ಹಬ್ಬುವ ಜಾಗ ಯಾವಾಗಲೂ ಸಡಿಲವಾಗಿದ್ದು, ತೇವಾಂಶ ಒಳಗೊಂಡಿದ್ದರೆ ತೆಂಗಿನಲ್ಲಿ ಫಸಲು ಹೆಚ್ಚಾಗುತ್ತದೆ. ಇದಕ್ಕೆ ರೈತರಿಗೆ ಇರುವ ಆಯ್ಕೆ ಎಂದರೆ ಮಿಶ್ರ ಬೆಳೆಗಳನ್ನು ಇಡೀ ಹೊಲದಲ್ಲಿ  ಬೆಳೆಸುವುದು. ಕೆಲವು ಮಿಶ್ರ ಬೆಳೆಗಳಿಂದ  ಮುಖ್ಯ ಬೆಳೆಯನ್ನು  ಮಂಗಗಳಿಂದ ರಕ್ಷಿಸಿಕೊಳ್ಳಲೂ ಸಾಧ್ಯವಾಗುತ್ತದೆ.

ಶುಂಠಿ ಮಿಶ್ರ ಬೆಳೆ

ಯಾವ ಮಿಶ್ರ ಬೆಳೆ:

ಮೇವಿನ ಹುಲ್ಲು:

 • ನೀವು ಹೈನುಗಾರಿಕೆ ಮಾಡುತ್ತೀರಾ? ಹಾಗಾದರೆ  ತೆಂಗಿನ ಮಧ್ಯಂತರದಲ್ಲಿ  ಹೈಬ್ರೀಡ್ ನೇಪಿಯರ್ ಹುಲ್ಲು, ದ್ವಿದಳ ಸಸ್ಯಗಳಾದ ಹುರುಳಿ ಮುಂತಾದ ಬೆಳೆಗಳನ್ನು  ಬೆಳೆಯಿರಿ.
 •   ಪ್ರತ್ಯೇಕ ಸ್ಥಳದಲ್ಲಿ  ಇದನ್ನು  ಬೆಳೆಸಬೇಕಾಗಿಲ್ಲ. ಹುಲ್ಲು ಬೆಳೆಯಲು ಪ್ರತ್ಯೇಕ ಸ್ಥಳವನ್ನು ಮೀಸಲಿಡುವುದರಿಂದ ಅದಕ್ಕೆ ನೀರು ಕೊಡಬೇಕು, ಗೊಬ್ಬರ ಕೊಡಬೇಕು.
 • ಎಲ್ಲದಕ್ಕಿಂತ ಮುಖ್ಯವಾಗಿ ಅಷ್ಟು ಸ್ಥಳದ ಉತ್ಪಾದಕತೆ ನಷ್ಟ.
 • ಹುಲ್ಲು ಬೆಳೆದರೆ  ಅದಕ್ಕೆ ಕೊಡುವ ನೀರು ಮತ್ತು ಗೊಬ್ಬರದ ಸ್ವಲ್ಪ ಭಾಗ ತೆಂಗಿಗೆ ದೊರೆತು ತೆಂಗಿನ ಇಳುವರಿ ಹೆಚ್ಚಾಗುತ್ತದೆ.

ತೆಂಗಿನ ತೋಟದಲ್ಲಿ  ಕೊಕ್ಕೋ:

 • ಕೊಕ್ಕೋ ಬೆಳೆಯುವುದರಿಂದ ಒಂದು ಕೊಕ್ಕೋ ಗಿಡದಲ್ಲಿ ವರ್ಷಕ್ಕೆ 300-400 ರೂ ವರಮಾನ ಪಡೆಯಬಹುದು.
 • ಇಲ್ಲಿ ಕೊಕ್ಕೋ ಬೆಳೆದಾಗ ಪ್ರೂನಿಂಗ್ ತೀರಾ ಅಗತ್ಯವಲ್ಲ. ಆದ ಕಾರಣ ಇಳುವರಿ ಹೆಚ್ಚು ಬರುತ್ತದೆ.
 • ಇದರ ಸೊಪ್ಪು, ಫಲವತ್ತತೆ ಹೆಚ್ಚಳಕ್ಕೂ, ನೆರಳು ತೇವಾಂಶ ರಕ್ಷಣೆಗೂ ನೆರವಾಗುತ್ತದೆ.

ಮಂಗಗಳು ಬರುವ ತೋಟದಲ್ಲಿ  ಕೊಕ್ಕೋ ಬೆಳೆದರ  ಆ ಬೆಳೆಯ ಆಶೆಯನ್ನು ಬಿಡುವುದೇ ಆಗಿದ್ದರೆ ತೆಂಗಿನ ಕಾಯಿಯ ಫಸಲು ಉಳಿಯುತ್ತದೆ.

ತೆಂಗಿನ ತೋಟದಲ್ಲಿ ತಂಬಾಕು

ಸಾಂಬಾರ ಬೆಳೆಗಳು: 

 • ಜಾಯೀ ಕಾಯಿ ತೆಂಗಿನ ಮರದ  ಮಧ್ಯಂತರಕ್ಕೆ  ಸೂಕ್ತ ಮಿಶ್ರ ಬೆಳೆಯಾಗಿದ್ದು,  ಎಷ್ಟು ತೆಂಗಿನ ಮರ ಇದೆಯೋ ಅಷ್ಟು ಜಾಯೀ ಕಾಯಿ ಮರಗಳನ್ನು  ಬೆಳೆಸಬಹುದು.
 • ಒಂದು  ಜಾಯೀ ಕಾಯಿ ಮರದಿಂದ ವರ್ಷಕ್ಕೆ 3000 ದಷ್ಟು ಆದಾಯವನ್ನು  ಪಡೆಯಬಹುದು.
 • ಎರಡು ಮರಗಳ  ಮಧ್ಯಂತರದಲ್ಲಿ ಒಂದರಂತೆ ಜಾಯೀ ಕಾಯಿ ನೆಡಬೇಕು.
 •   ಜಾಯೀ ಕಾಯೀ ಮರ ಇದ್ದಲ್ಲಿ  ತೆಂಗಿನ ಇಳುವರಿ ಹೆಚ್ಚಳವಾಗುತ್ತದೆ.
 • ನೆಲದ ತಂಪಾಗಿದ್ದು, ತೆಂಗಿಗೆ ನೀರು ಕಡಿಮೆ ಸಾಕಾಗುತ್ತದೆ.

ಸುವರ್ಣ ಗಡ್ಡೆ

 ಗಡ್ಡೆ ಗೆಣಸು

 • ತೆಂಗಿನ ತೋಟದ ಮಧ್ಯಂತರದಲ್ಲಿ ಕೆಸು ಬೆಳೆಯಬಹುದು.
 • ಸುವರ್ಣ ಗಡ್ಡೆ ಬೆಳೆಯಬಹುದು.
 • ಒಂದೆಕ್ರೆಯ ತೆಂಗಿನ ಹೊಲದಲ್ಲಿ ಸುವರ್ಣ ಗಡ್ಡೆ ಬೆಳೆದರೆ 2 ಲಕ್ಷಕ್ಕೂ ಹೆಚ್ಚು ಆದಾಯ ಇದೆ.
 • ಇವು ಮಳೆಗಾಲದ ಬೆಳೆಯಾಗಿದ್ದು, ಒಂದು ಕೆಸುವಿನ ಗಿಡದಲ್ಲಿ 3-5 ಕಿಲೋ ಕೆಸು ಗಡ್ಡೆ ದೊರೆಯುತ್ತದೆ.

ತೆಂಗಿನ ಮರದ ಕಾಂಡಕ್ಕೆ ಕರಿಮೆಣಸನ್ನು ಹಬ್ಬಿಸಿದರೆ  ಒಂದು ಮರದಲ್ಲಿ ಕನಿಷ್ಟ 5 ಕಿಲೋ ತನಕ ಒಣ ಮೆಣಸಿನ ಇಳುವರಿ ಪಡೆಯಲು ಸಾಧ್ಯ.

 • ತೆಂಗಿನ ಮಧ್ಯಂತರದಲ್ಲಿ ಶುಂಠಿ, ಅರಶಿನ ಬೆಳೆದರೆ  ಹೆಚ್ಚು ಅದಾಯ ದೊರೆಯುತ್ತದೆ.
 • ಇತ್ತೀಚೆಗೆ ತುಳಸಿಗೆ ಬೇಡಿಕೆ ಬಂದಿದ್ದು, ತೆಂಗಿನ ಮರದ ಮಧ್ಯಂತರದಲ್ಲಿ ತುಳಸಿ ಬೆಳೆ ಬೆಳೆಯುವುದರಿಂದ  ಆದಾಯ ಬರುತ್ತದೆ.
 • ಔಷದೀಯ ಸಸ್ಯಗಳಾದ ಕಿರಾತ ಕಡ್ಡಿ( ಕಾಲ ಮೇಘ) ಸಸ್ಯವನ್ನು ತೆಂಗಿನ ತೋಟದ ಮಧ್ಯಂತರದಲ್ಲಿ  ಮಿಶ್ರ ಬೆಳೆಯಾಗಿ ಬೆಳೆಯಬಹುದು.
 • ಇದು ಮಳೆಯಾಶ್ರಿತ ಬೆಳೆಯಾಗಿದ್ದು ಉತ್ತಮ ಆದಾಯ ಇದೆ.

ತೆಂಗಿನ ಮರದ ಮಧ್ಯಂತರದಲ್ಲಿ  ಬಾಳೆಯನ್ನು ಬೆಳೆಸಿದರೆ ಒಂದು ಎಕ್ರೆ ತೆಂಗಿನ ಹೊಲದಲ್ಲಿ 1000 ದಷ್ಟು ಬಾಳೆಯನ್ನು  ಬೆಳೆಯಬಹುದು. ಇದರಿಂದ ಕನಿಷ್ಟ ವರ್ಷಕ್ಕೆ 2 -3 ಲಕ್ಷ ಆದಾಯ ಪಡೆಯಬಹುದು.

ಕೋಳಿ ಸಾಕಣೆ:

 • ತೆಂಗಿನ  ತೆಂಗಿನ ಹೊಲದಲ್ಲಿ ನಾಟೀ ಕೋಳಿ ಸಾಕಣೆ ಮಾಡಬಹುದು.
 • ಈ ರೀತಿ ಕೊಳಿ ಸಾಕಣೆ  ಮಾಡುವಾಗ ಅವುಗಳಿಗೆ ಹೆಚ್ಚಿನ ಆಹಾರವು ನೆಲದ ಹುಳು ಹುಪ್ಪಟೆ ಮೂಲಕವೇ ದೊರೆಯುತ್ತದೆ.
 • ಅತ್ತಿತ್ತ ಸುತ್ತಾಡುವಾಗ ಹಿಕ್ಕೆ ಹಾಕಿ ನೆಲವನ್ನು ಫಲವತ್ತಾಗಿಸುತ್ತವೆ.
 • ಕೋಳಿಗಳು ನೆಲದ ಎರೆ ಹುಳುಗಳನ್ನು  ಹಿಡಿದು ತಿನ್ನುತ್ತವೆ  ಎಂಬ ಭಾವನೆ  ಹಲವರಲ್ಲಿ.
 • ಆದರೆ ಅವು ಎಷ್ಟು ತಿಂದರೂ ಎರೆ ಹುಳು ಕಡಿಮೆಯಾಗದು.
 •  ಹಿಕ್ಕೆಯ ಮೂಲಕ ಎರೆಹುಳು ಹೆಚ್ಚಳಕ್ಕೆ  ಇದು ನೆರವಾಗುತ್ತದೆ.

ಪುಷ್ಪ ಬೆಳೆಯಾದ ಗ್ಲಾಡಿಯೋಲಸ್ – ಚೈನಾ ಆಸ್ಟರ್,  ತರಕಾರಿಗಳಾದ ಹೀರೆ, ಹಾಗಲ,  ಬುಡ ಭಾಗದ ಮಣ್ಣೀನಲ್ಲಿ ಹರಿವೆ, ಬಸಳೆ, ಸಿಹಿ ಗೆಣಸು,  ಅನಾನಸು  ಮುಂತಾದ ಬೆಳೆಗಳನ್ನು ಬೆಳೆಸಿದರೆ  ತೆಂಗಿನ ತೋಟದಲ್ಲಿ ಇಳುವರಿ ಹೆಚ್ಚುತ್ತದೆ. ಜೊತೆಗೆ ತೆಂಗಿನ ಫಸಲು ಇಡೀ ಕೃಷಿಯ ಲಾಭದ ಬಾಬ್ತು ಆಗಿರುತ್ತದೆ.

ತೆಂಗಿನ ಬೆಳೆ ಲಾಭದಾಯಕವಲ್ಲ ಎನ್ನುವವರು ಮಿಶ್ರ ಬೆಳೆ  ಬೆಳೆಸಿ ನಂತರ ಹೇಳಿ, ಅಡಿಕೆ ಆಗಬಹುದೇ ಅಥವಾ ತೆಂಗೇ ಉತ್ತಮವೇ ಎಂದು.  

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!