ಮಂಗಳ ಇಂಟರ್ಸಿ – ಇದು ಹೊಸ ತಳಿ ಅಲ್ಲ.

ಇಂಟರ್ ಸಿ ಮಂಗಳ ತಳಿಯ ಅಡಿಕೆ ಗೊನೆ

ಅಧಿಕ ಇಳುವರಿ ಮತ್ತು ಎತ್ತರಕ್ಕೆ  ಬೆಳೆಯುವುದಿಲ್ಲ ಎಂಬ ಕಾರಣಕ್ಕೆ  ರೈತರು   ಇಂಟರ್ಸಿ ಅಥವಾ ಇಂಟರ್ ಮಂಗಳ, ಅಥವಾ ಇಂಟರ್ ಸೆ, ತಳಿಯನ್ನು  ಬಯಸುತ್ತಾರೆ. ಆದರೆ ಇಂಟರ್ ಸೆ ಎಂಬುದರ ವಾಸ್ತವಿಕತೆ ಏನು ಗೊತ್ತೇ?

 • ಇದು ಅಡಿಕೆ ಸಸಿ  ನೆಡುವ ಸೀಸನ್. ಕೆಲವು ಕಡೆ ಬೀಜದ ಅಯ್ಕೆಯೂ  ಪ್ರಾರಂಭವಾಗಿದೆ.
 • ಬಹುತೇಕ ನರ್ಸರಿಗಳಲ್ಲಿ ಇಂಟರ್ ಮಂಗಳಕ್ಕೇ ಹೆಚ್ಚು ಬೇಡಿಕೆ.
 • ಇದನ್ನೇ ಎಲ್ಲರೂ ಅಧಿಕ ಪ್ರಮಾಣದಲ್ಲಿ ಮಾಡುವವರು.
 • ರೈತರು ಬಯಸುವುದು ಇದನ್ನೇ.

ಇಂಟರ್ ಸಿ ಎಂದರೇನು:

 • ಇಂಟರ್ಸಿ ಎಂದರೆ ಏನು. ಎಂಬ ಬಗ್ಗೆ ನರ್ಸರಿಗಳವರಿಗೂ, ಬೆಳೆಸಲು ಇಚ್ಚಿಸುವವ ರೈತರಿಗೂ  ಗೊತ್ತಿದ್ದಂತೆ  ಕಾಣುತ್ತಿಲ್ಲ.?
 • ಇದು ಇಂಟರ್ಸಿ ಅಲ್ಲ. ಇಂಟರ್ ಸೆ. (Inter-se) ಇದು ಶುದ್ಧ ಗುಣದ ತಳಿಯ ಉತ್ಪಾದನೆ ಅಷ್ಟೇ.
 • ಇದರ ಪೂರ್ವಾಪರ ಗೊತ್ತಿಲ್ಲದೆ ನರ್ಸರಿಗಳವರು ಸಸಿ ಮಾರುತ್ತಾರೆ, ರೈತರು ಸಸಿ ನೆಡುತ್ತಾರೆ.
 • ಎಲ್ಲರೂ ತಿಳಿದಂತೆ ಇದು ಒಂದು ಹೊಸ ತಳಿ ಅಲ್ಲವೇ ಅಲ್ಲ.

ಇಂಟರ್ ಸಿ ಮಂಗಳ

 ಇಂಟರ್ ಸೆ ಯಾಕೆ ಬಂತು:

 • 1972ನೇ ಇಸವಿಯಲ್ಲಿ  ಕೇಂದ್ರೀಯ  ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು  ಚೀನಾ ಮೂಲದ ಅಡಿಕೆ ತಳಿಯನ್ನು ತಂದು ಮಂಗಳ ಎಂಬ ನಾಮಕರಣ ಮಾಡಿ ಹೊಸ ಆಶಾದಾಯಕ ತಳಿಯನ್ನು ಬಿಡುಗಡೆ ಮಾಡಿತು.
 • ಆ ಸಮಯದಲ್ಲಿ ಸಾಧಾರಣ ಇಳುವರಿ ಕೊಡಬಲ್ಲ ಸ್ಥಳೀಯ ಎತ್ತರದ ತಳಿಗಳ ಅಡಿಕೆಯೇ ಚಾಲ್ತಿಯಲ್ಲಿತ್ತು.
 • ಅಧಿಕ ಇಳುವರಿಯ ಇನ್ನೊಂದು ತಳಿ ಬೇಕು ಎಂಬ ಉದ್ದೇಶದಿಂದ ವಿಜ್ಞಾನಿಗಳು ಆಯ್ಕೆ ಮಾಡಿದ್ದು ಈ ತಳಿಯನ್ನು.
 • ಅವರ ಆಯ್ಕೆಯ ಮಾನದಂಡಗಳೆಲ್ಲಾ ಇದಕ್ಕೆ ಇದ್ದವು.
 • ಅವುಗಳೆಂದರೆ, ಅಂತರ ಗಣ್ಣುಗಳು ಹತ್ತಿರವಾಗಿದೆ.ಇಳುವರಿ ಸ್ಥಿರತೆ ಇದೆ.
 • ಕಾಯಿಕಚ್ಚುವಿಕೆ ಪ್ರಮಾಣ 60%ಕ್ಕೂ ಹೆಚ್ಚು ಇದೆ.
 • ಮರದಲ್ಲಿ 8-10 ಆರೋಗ್ಯವಂತ ಗರಿಗಳು ಇರುತ್ತವೆ.
 • ರೋಗ ಕೀಟ ಬಾಧೆ ತಡಕೊಳ್ಳುವ ಶಕ್ತಿ ಇರುವುದನ್ನು ಮನಗಂಡು ಮಂಗಳ ತಳಿಯನ್ನು ಬಿಡುಗಡೆ ಮಾಡಿದ್ದರು.
 • ಕ್ರಮೇಣ ಈ ತಳಿಯಲ್ಲಿ ಮೇಲೆ ತಿಳಿಸಲಾದ ಪ್ರಮುಖ ಗುಣಗಳ ಕ್ಷೀಣತೆ ಉಂಟಾಗಲಾರಂಭಿಸಿ ಮಂಗಳದ ನೈಜ ಗುಣ ಲಕ್ಷಣ ಕಡಿಮೆಯಾಗಲಾರಂಭಿಸಿತು.
 • ಆ ಸಮಯದಲ್ಲಿ ಮಂಗಳ ತಳಿಯ ಶುದ್ಧ ಗುಣವನ್ನು ಮರಳಿ ಪಡೆಯುವುದಕ್ಕಾಗಿ ಮತ್ತೆ ಶುದ್ಧ ಗುಣಹೊಂದಿದ ಮರದಲ್ಲಿ ಕ್ರಾಸಿಂಗ್ ಮಾಡಿ ಪಡೆದ ಬೀಜವೇ ಮಂಗಳ ಇಂಟರ್- ಸೆ.

ಮಂಗಳದ  ಶುದ್ಧ ತಳಿ  ಇದು:

 • ಅಡಿಕೆ-ತೆಂಗು ಮುಂತಾದ ಬೆಳೆಗಳಲ್ಲಿ 60 % ಕ್ಕೂ ಹೆಚ್ಚು ಗಾಳಿಯ ಮೂಲಕ ಪರಾಗಸ್ಪರ್ಶ ನಡೆಯುತ್ತದೆ.
 • ಆದ ಕಾರಣ ಇದರಲ್ಲಿ ತಲೆಮಾರಿನಿಂದ ತಲೆಮಾರಿಗೆ ತಳಿಗುಣದಲ್ಲಿ ವ್ಯತ್ಯಾಸವಾಗುವುದು ಸಹಜ.
 • ಅದು ಮಂಗಳ ತಳಿಯಲ್ಲೂ ಆಗಿದೆ.
 • ಸರಿಪಡಿಸಲಿಕ್ಕಾಗಿ 1982ನೇ ಇಸವಿಯಲ್ಲಿ ಶುದ್ಧ ಗುಣ ಹೊಂದಿರುವ ಮಂಗಳ ತಳಿಗಳ ನಡುವೆ ಕ್ರಾಸಿಂಗ್ ಮಾಡಿ ( Inter crossing) ಇಂಟರ್-ಸಿ ಹೆಸರಿನಲ್ಲಿ ಬೀಜಗಳನ್ನು ಕೊಡಲಾಯಿತು.
 • ಶುದ್ಧ ಗುಣ ಹೊಂದಿದ ಮಂಗಳ ತಳಿಯ ಗಂಡು ಹೂವನ್ನು ತೆಗೆದು ಅದರ ಪರಾಗವನ್ನು ಸಂಗ್ರಹಿಸಲಾಗುತ್ತದೆ.
 • ಗಂಡು ಹೂವು ತೆಗೆದ ನಂತರ ಆ ಹೂ ಗೊಂಚಲಿಗೆ ಮಿಶ್ರ ಪರಾಗ ಸ್ಪರ್ಶ ಆಗದಂತೆ ಬಟ್ಟೆಯನ್ನು ಹೊದಿಸಲಾಗುತ್ತದೆ.
 • ಗಂಡು ಹೂವು ಮೊದಲು ಅರಳುತ್ತದೆ. ಸುಮಾರು 21 ದಿನದ ತರುವಾಯ ಹೆಣ್ಣು ಹೂವುಗಳು ಪರಾಗ ಸ್ವೀಕರಿಸಲು ಸಜ್ಜಾಗುತ್ತವೆ.
 • ಆ ಸಮಯದಲ್ಲಿ ಮೊದಲೇ ಸಂಗ್ರಹಿಸಿಟ್ಟ ಪರಾಗವನ್ನು ಆ ಮರದ ಹೆಣ್ಣು ಹೂವಿಗೆ ಪರಾಗ ಸ್ಪರ್ಶ ಮಾಡಲಾಗುತ್ತದೆ.
 • ಹೀಗೆ ಪರಾಗ ಸ್ಪರ್ಶಕ್ಕೊಳಗಾದ ಬೀಜದಲ್ಲಿ ಶುದ್ಧ ಗುಣ ಇರುತ್ತದೆ.
 • ಈ ಬೀಜವನ್ನೇ ನಾಟಿ ಮಾಡಿದರೆ ಅದರಲ್ಲಿ ತಾಯಿ ಮರದ ಎಲ್ಲಾ ನೈಜ ಲಕ್ಷಣಗಳು ಇರುತ್ತದೆ.
 • ತಲೆಮಾರು ಬದಲಾದಂತೆ ಅದರ ಬೀಜದಿಂದ ಮತ್ತೆ ಸಸಿ ಮಾಡಿ ನೆಟ್ಟಾಗ ಗುಣ ಶುದ್ಧತೆ ಕ್ಷೀಣಿಸುತ್ತಾ ಬರುತ್ತದೆ.
 • ಸುಮಾರು 35 ವರ್ಷಕ್ಕೆ ಹಿಂದೆ ಸಿಪಿಸಿಆರ್‍ಐ ನಲ್ಲಿ ಪರಸ್ಪರ ಕ್ರಾಸಿಂಗ್ ಮಾಡಿ ಇಂಟರ್- ಸಿ ತಳಿಯನ್ನು ಪಡೆಯಲಾಗಿದೆ.
 • ಆ ನಂತರ ಅಲ್ಲಿಂದ ಬೀಜ ತಂದು ಅಥವಾ ಬೇರೆ ಎಲ್ಲಿಂದಲೋ ಬೀಜ ತಂದು ತೋಟ ಮಾಡಿ ಬೆಳೆಸಿದವರಿಂದ ಪಡೆದ ಬೀಜವನ್ನು ನಾವು ಇಂಟರ್ಸಿ ಮಂಗಳ ಎಂದು  ನಾಟಿ ಮಾಡುತ್ತಿದ್ದೇವೆ.
 • ಇದಕ್ಕೆ ಎಷ್ಟು ತಲೆ ಮಾರು ಆಗಿದೆ ಎಂದು ಯಾರಿಗೂ ಗೊತ್ತಿಲ್ಲ.

ಈಗ ತಳಿ ಮಿಶ್ರಣ ಆಗಿದೆ:

 • ತಲೆಮಾರುಗಳು ಹೆಚ್ಚಾದಂತೆ ಕೃತಕ ಪರಾಗಸ್ಪರ್ಶ ನಡೆದು ಅದರ ಮೂಲ ಗುಣ ವ್ಯತ್ಯಾಸವಾಗುತ್ತದೆ.
 • ಅದು ಕೆಲವು ಧನಾತ್ಮಕ ಗುಣವನ್ನೂ ಪಡೆಯಬಹುದು ಮತ್ತೆ ಕೆಲವು ಅವಗುಣಗಳೂ ಬರಬಹುದು.
 • ಆದ ಕಾರಣ ರೈತರು ಮಂಗಳ ಇಂಟರ್ಸಿ ಬಗ್ಗೆ ಬಹಳಷ್ಟು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.
 • ಮಂಗಳ ಮೂಲ ತಳಿಗೂ ಇಂಟರ್ ಮಂಗಳಕ್ಕೂ ಅಂಥಃ ವ್ಯತ್ಯಾಸಗಳಿಲ್ಲ ದಾಗಿದೆ.
 • ಹಾಗೆ ನೋಡಿದರೆ ಮಿಶ್ರ ಪರಾಗ ಸ್ಪರ್ಶದಿಂದಲೇ ಕಾಯಿ ಕಚ್ಚುವ ಗುಣ ಪಡೆದ ಅಡಿಕೆಯಲ್ಲಿ ಈಗ ಪ್ರತೀಯೊಬ್ಬರ ತೋಟದಲ್ಲೂ ಇಂಟರ್- ಸೆ ಸ್ವಾಭಾವಿಕವಾಗಿಯೇ ಆಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
 • ಇಂಟರ್ ಮಂಗಳ  ಬೇಕು  ಎಂಬ  ಆಸಕ್ತಿ ಉಳ್ಳ ರೈತರು ಒಮ್ಮೆ ಇಂಟರ್ ಮಂಗಳ ಎಂದು ಬೆಳೆಸಿದ  ಹೊಸ ತೋಟವನ್ನು ವೀಕ್ಷಿಸಿ. ನಂತರ  ತೀರ್ಮಾನಿಸಿರಿ.

ಮಂಗಳ ಅಲ್ಲದೆ ಮೋಹಿತ್ ನಗರ ತಳಿಯಲ್ಲೂ 1991 ರಲ್ಲಿ ಇಂಟರ್ ಕ್ರಾಸಿಂಗ್ ಮಾಡಲಾಗಿದೆ. ಸುಮಂಗಳ, ಶ್ರೀಮಂಗಳ ತಳಿಯಲ್ಲಿ 1985ರಲ್ಲಿ ಇಂಟರ್ ಕ್ರಾಸಿಂಗ್ ಮಾಡಿ ಶುದ್ಧ ತಳಿ ಪಡೆಯಲಾಗಿದೆ.ಇದೆಲ್ಲವೂ ಹೊಸ ತಳಿ ಅಲ್ಲ. ಮೂಲ ತಳಿಯ ಶುದ್ಧತೆ (purity) ಉಳಿಸಿಕೊಳ್ಳಲು ಮಾಡಿದ್ದು ಅಷ್ಟೇ.  ಬಹಳ ಜನ ಇಂಟರ್ ಮಂಗಳ ಎಂದು ಸಸಿ ತಂದು ನಾಟಿ ಮಾಡಿದ್ದು, ಫಲ ಕೊಡುವಾಗ ಅದು ಸ್ಥಳೀಯ ತಳಿಯಂತೆಯೇ ಆಗಿದ್ದು ಕಂಡು ಬರುತ್ತದೆ.

 • ಪರಾಗಸ್ಪರ್ಷ ಮಾಡಿ ಪಡೆದ ಶುದ್ಧ ಬೀಜ ಅಥವಾ ಪ್ರಥಮ ತಲೆಮಾರಿನ ತೋಟದಿಂದ ಪಡೆದ ಬೀಜವಾಗಿದ್ದರೆ ಮಾತ್ರ ಅದರಲ್ಲಿ ತಳಿ ಶುದ್ಧತೆ ಇರಲು ಸಾಧ್ಯ.

ಹಾಗೆ ನೊಡಿದರೆ ಈಗ ಸಿ ಪಿ ಸಿ ಆರ್ ಐ ನಲ್ಲಿ ಇರುವ ಮೂಲ ಮೊದಲ ತಲೆಮಾರು ಆಗದ ಕಾರಣ, ಅದು ಮರ ಹೇಗೇ ಇದ್ದರೂ ಸಹ ಅದರ ವಂಶ ಗುಣದಲ್ಲಿ ಮಂಗಳದ ಮೂಲ ಗುಣ ಇದೆ. ತಲೆಮಾರು ಹೆಚ್ಚಾದಂತೆ ಅದಕ್ಕೂ ಸ್ಥಳೀಯ ತಳಿಗೂ ವೆತ್ಯಾಸ ಇಲ್ಲ.

Leave a Reply

Your email address will not be published. Required fields are marked *

error: Content is protected !!