ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ.

 • ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ.
 • ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ ಉತ್ತಮವಾಗಿದ್ದರೂ ಅದರ ಬಳಕೆ ಬಹಳ ಕಡಿಮೆ.
 • ಈ ಹಲಸು ಹಣ್ಣಾದರೆ ಬಿಸಾಡುವುದೇ. ಆ ಹಲಸನ್ನು ವೈನ್ ತಯಾರಿಗೆಗೆ ಬಳಸಿಕೊಳ್ಳಬಹುದು.
ವೈನ್ ಗೆ ಉತ್ತಮ ಅಂಬಲಿ ಹಲಸು

ವೈನ್ ತಯಾರಿಸುವ ವಿಧಾನ:

 • ಹಲಸಿನ ಹಣ್ಣಿನ ತೊಳೆ ಬಿಡಿಸಿಕೊಂಡ ನಂತರ ಚೆನ್ನಾಗಿ ರುಬ್ಬಿ.
 • ರುಬ್ಬಲು ಸಹಾಯವಾಗುವಂತೆ 1:1 ಅಥವಾ 1:2 ರ ಅನುಪಾತದಲ್ಲಿ ಹಲಸಿನ ಸೊಳೆಗೆ ನೀರನ್ನು ಸೇರಿಸಬೇಕು. ಈ
 • ರೀತಿಯಲ್ಲಿ ಅರೆದು ತೆಗೆದ ಹಲಸಿನ ರಸವನ್ನು 22 -24 ಡಿಗ್ರಿ ಬ್ರಿಕ್ಸ್ ನಲ್ಲಿ ಇರಲಿ.
 • ರಸಸಾರವು (pH) 3 ರಿಂದ 3.5 ರ ಒಳಗೆ ಇರುವ ಹಾಗೆ ಮಾಡಬೇಕು. ( ಸಾಮಾನ್ಯವಾಗಿ  ಇಷ್ಟು ರಸಸಾರ ಇರುತ್ತದೆ)
 • ನಂತರ ಕೊಳೆಸುವ ಗಾಜಿನ ಬಾಟಲಿಗೆ ಮುಕ್ಕಾಲು ಭಾಗ ಮಾತ್ರ ತುಂಬಬೇಕು.
 • ಪ್ರತಿ ಹತ್ತು ಕೆ.ಜಿ. ಗೆ 1.5 ಗ್ರಾಂ ಪೊಟಾಸಿಯಂ ಮೆಟಾಬೈಸಲ್ಫೈಟ್ ಅನ್ನು ಬೆರೆಸಿ ನಾಲ್ಕು ಘಂಟೆಗಳ ಕಾಲ ಹಾಗೆ ಬಿಡುವುದು.
 • ಆಮೇಲೆ ಪ್ರತಿ ಕೆ.ಜಿ. ಗೆ ಒಂದು ಗ್ರಾಂ ಈಸ್ಟ್ ಅನ್ನು ಬೆರೆಸಬೇಕು.
 • ನಂತರ ಬಾಟಲಿಗೆ ಬಟ್ಟೆ ಮುಚ್ಚಿ ಎರಡು ದಿನಗಳ ಕಾಲ ಗಾಳಿಯಾಡುವಂತೆ ಕೊಳೆಯಲು ಬಿಡಬೇಕು.
 • ಆಮೇಲೆ 14 -21 ದಿನಗಳ ಕಾಲ ಗಾಳಿಯಾಡದಂತೆ ಮುಚ್ಚಳ ಹಾಕಿ ಕೊಳೆಯಲು ಬಿಡಬೇಕು.
 • ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾದ ಇಂಗಾಲದ ಡೈ ಆಕ್ಸೈಡ್ ಹೊರಹಾಕಲು 4 ಅಥವಾ 6 ಮಿ.ಮಿ. ಪೈಪಿನ ಒಂದು ತುದಿಯನ್ನು ಬಾಟಲಿ ಒಳಗೂ ಇನ್ನೊಂದು ತುದಿಯನ್ನು ನೀರು ತುಂಬಿರುವ ಪಾತ್ರೆಯೊಳಗೂ ಬಿಡಬೇಕು.
 • ಮೊದಲ ಒಂದು ವಾರ ಇಂಗಾಲದ ಡೈ ಆಕ್ಸೈಡ್ ನ ಗುಳ್ಳೆಗಳ ಪ್ರಮಾಣ ತುಂಬಾ ಇರುತ್ತದೆ. ಕ್ರಮೇಣ ಕಡಿಮೆಯಾಗಲಾರಂಭಿಸುತ್ತದೆ.

 • ಗುಳ್ಳೆಗಳ ಬರುವಿಕೆ ಸಂಪೂರ್ಣ ನಿಂತರೆ ಹುದುಗುವಿಕೆ ಮುಗಿದಿದೆ ಎಂದರ್ಥ.
 • ನಂತರ ಪ್ರತಿ ಕೆ.ಜಿ.ಗೆ 200 ಮಿ.ಗ್ರಾಂ. ಬೆಂಟೊನೈಟ್ ಮಿಕ್ಸ್ ಮಾಡಿ ತಿಳಿಗೊಳಿಸಬೇಕು.
 • ತಿಳಿಯಾದ ವೈನನ್ನು ಸೋಸಿ ಬೇರೆ ಬಾಟಲಿಯಲ್ಲಿ ಗಾಳಿಯಾಡದಂತೆ ತುಂಬಿಸಿ 6 – 12 ತಿಂಗಳ ಕಾಲ ಪಕ್ವಗೊಳಿಸಬೇಕು.
 • ನಂತರ ದೀರ್ಘ ಕಾಲ ಹಾಳಾಗದಿರಲು 70 -74 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 15 -20 ನಿಮಿಷಗಳ ಕಾಲ ಪ್ಯಾಶ್ಚರೀಕರಿಸಿ ಇಡಬೇಕು.

ಹಲಸಿನ ಮೌಲ್ಯ ವರ್ಧನೆಯಲ್ಲಿ ವೈನ್ ತಯಾರಿಕೆಯೂ ಒಂದು. ಇದನ್ನು ವಾಣಿಜ್ಯಿಕವಾಗಿ ಮಾಡಲು ಹೇರಳ ಅವಕಾಶಗಳಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಇದು ಒಂದು ಆದಾಯದ ಕಸುಬು ಆಗಬಹುದು.

Leave a Reply

Your email address will not be published. Required fields are marked *

error: Content is protected !!