ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು.


ತೆಂಗು ಅಡಿಕೆಯ ಮಧ್ಯಂತರದಲ್ಲಿ ಸೆಣಬು ಬೆಳೆದರೆ ರಂಜಕ ಚೆನ್ನಾಗಿ ಲಭ್ಯವಾಗುತ್ತದೆ

 • ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ.
 • ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ.
 • ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ.

ಹೇಗೆ ಕೊಡಬೇಕು:

 • ನಿಮ್ಮ ಮಣ್ಣಿನ ಗುಣ ಹೇಗಿದೆ ಎಂಬುದನ್ನು ಮೊದಲಾಗಿ ತಿಳಿದುಕೊಳ್ಳಿ.ಅದು ಆಮ್ಲೀಯವೇ – ಕ್ಷಾರೀಯವೇ ಅಥವಾ ಸರಿಸುಮಾರು ತಟಸ್ಥವಾಗಿದೆಯೇ ಎಂದು ತಿಳಿದು ರಂಜಕ ಗೊಬ್ಬರವನ್ನು ಆರಿಸಿ ಕೊಡಬೇಕಾದುದು ಕ್ರಮ.
 • ಹುಳಿ ಮಣ್ಣು ಇರುವಲ್ಲಿ ನೀರಿನಲ್ಲಿ ಕರಗುವ ರೂಪದ ಡಿ ಎಪಿ, ಅಮೋನಿಯಂ ಫೋಸ್ಫೇಟ್, ಸೂಪರ್ ಫೋಸ್ಫೆಟ್ , ಟ್ರಿಪ್ಪಲ್ ಸೂಪರ್ ಪೋಸ್ಫೇಟ್ ಇವುಗಳನ್ನು  ಕೊಡುವಾಗ ಮಣ್ಣು ಇನ್ನಷ್ಟು ಹುಳಿಯಾಗುತ್ತದೆ.
 • ಸಾಮಾನ್ಯ ನಿರ್ವಹಣೆಯಲ್ಲಿ ಮಣ್ಣಿಗೆ ಕೊಡಮಾಡಲ್ಪಡುವ ರಂಜಕ ಗೊಬ್ಬರದಲ್ಲಿ ಶೇ.10 ರಷ್ಟು ಮಾತ್ರ ಬೆಳೆಗೆ ಲಭ್ಯವಾಗುತ್ತದೆ. ಈ ಸಮಸ್ಯೆ ನಿವಾರಣೆಗಾಗಿ  ಕಂಡುಕೊಂಡ ಪರಿಹಾರಗಳು ಇವು.

ಮಣ್ಣಿನ ಗುಣಧರ್ಮ, ಬೆಳೆಯ ಸ್ವಭಾವ, ನೀರಿನ ಲಭ್ಯತೆ, ಸಸ್ಯದ ಬೆಳೆವಣಿಗೆಯ ಹಂತಕ್ಕನುಗುಣವಾಗಿ ಈ ಪೋಷಕವನ್ನು  ಕೊಟ್ಟರೆ ಉತ್ತಮ ಫಲಿತಾಂಶ ಇದೆ. ಮಣ್ಣಿನ ರಸ ಸಾರ pH 6.5 -7  ತನಕ ಮತ್ತು ಅದಕ್ಕಿಂತ ಹೆಚ್ಚು  ಇರುವ ಮಣ್ಣಿಗೆ DAP, SOP, MAP TSP  ಮುಂತಾದ ನೀರಿನಲ್ಲಿ  ಕರಗುವ ರಂಜಕ ಗೊಬ್ಬರ ಕೊಟ್ಟರೆ ಅದು ಬೆಳೆಗಳಿಗೆ ಲಭ್ಯವಾಗುತ್ತದೆ.

 • ಅಲ್ಪಾವಧಿ ಬೆಳೆಗಳಾದ ನೀರು ನಿಲ್ಲಿಸದೇ ಬೆಳೆಯುವ ಜೋಳ, ತರಕಾರಿ ಮುಂತಾದವುಗಳಿಗೆ ಈ ಗೊಬ್ಬರಗಳು ಉತ್ತಮವಾಗುತ್ತದೆ.
 • ನಾಟಿ ಮಾಡುವಾಗ  ಹಾಗೂ ಕೆಲವು ಆರಂಭಿಕ ಹಂತದಲ್ಲಿ  ಬೆಳವಣಿಗೆ ಚುರುಕುಗೊಳಿಸಲು ಈ ಗೊಬ್ಬರ ಸಹಕಾರಿ.

ಹುಳಿ ಮಣ್ಣಿಗೆ  ರಸಸಾರ 6.5 ಕ್ಕಿಂತ ಕಡಿಮೆ ಇರುವ ಮಣ್ಣಿಗೆ  ನೀರಿನಲ್ಲಿ ಕರಗುವ ರಂಜಕ ಗೊಬ್ಬರವನ್ನು  ಬಳಸುವಾಗ ಮೊದಲಾಗಿ ಮಣ್ಣಿನ ರಸಸಾರವನ್ನು ತಟಸ್ಥೀಕರಿಸಿ ಬಳಸಿದರೆ ಪ್ರಯೋಜನ ಉತ್ತಮವಾಗುತ್ತದೆ. ಅದಕ್ಕಾಗಿಯೇ ಮಣ್ಣಿಗೆ ಸುಣ್ಣ ಅಥವಾ ಕ್ಯಾಲ್ಸಿಯಂ ಸತ್ವ ಕೊಡಬಲ್ಲ ಪೋಷಕಗಳನ್ನು ಕೊಡಬೇಕಾಗುತ್ತದೆ.

 •  ಹುಳಿಮಣ್ಣಿಗೆ ಕೊಡಲು ಶಿಫಾರಸು ಮಾಡುವ ಶಿಲಾ ರಂಜಕವನ್ನು ಧೀರ್ಘಾವಧಿ ಬೆಳೆಗಳಿಗೆ ಕೊಡುವುದರಿಂದ ಉತ್ತಮ ಪ್ರಯೋಜನ ಇದೆ.
 • ನೀರು ನಿಲ್ಲಿಸಿ ಬೆಳೆಯುವ ಭತ್ತದ ಗದ್ದೆಗೆ ಇದನ್ನು ಕೊಡಬಹುದು.
 • ಕೆಲವು ಬೆಳೆಗಳಿಗೆ ಪ್ರಾರಂಭಿಕ ಹಂತದಲ್ಲಿ ರಂಜಕದ ಅವಶ್ಯಕತೆ ಕಡಿಮೆ .
 • ಅಂತಹ ಬೆಳೆಗಳಿಗೆ ಶಿಲಾ ರಂಜಕವನ್ನು ಕೊಡಬಹುದು.
 • ಇದು ಹುಳಿ ಮಣ್ಣಿನ ಕೆಲವು ದುರ್ಬಲ ಆಮ್ಲಗಳ ಜೊತೆಗೆ ಕರಗಿ ಸಸ್ಯಗಳಿಗೆ ನಿಧಾನವಾಗಿ ಲಭ್ಯವಾಗುತ್ತದೆ.
 • ಕೆಲವು ಮಣ್ಣಿನಲ್ಲಿ ರಂಜಕದ ತೀವ್ರ ಕೊರತೆ ಇರುತ್ತದೆ.
 • ಅಂತಹ ಮಣ್ಣಿಗೆ ಶಿಲಾ ರಂಜಕವನ್ನು ಕೊಡುತ್ತಾ ಬಂದರೆ ರಂಜಕದ ಅಂಶ ಹೆಚ್ಚಳವಾಗುತ್ತದೆ.
ಕೆಲವು ಕಳೆಗಿಡಗಾಳಾದರೂ ಅದರಲ್ಲಿ ರಂಜಕ ಕರಗಿಸಿಕೊಡುವ ಶಕ್ತಿ ಇರುತ್ತವೆ

ನೀರಿನಲ್ಲಿ ಕರಗುವ ರಂಜಕ ಕೊಟ್ಟಾಗ ಆಗುವ ಸ್ಥಿತಿ:

 • ಮೇಲೆ ತಿಳಿಸಲಾದ  ನೀರಿನಲ್ಲಿ ಕರಗಬಲ್ಲ ರಂಜಕ ಗೊಬ್ಬರಗಳನ್ನು ಹುಳಿ, ತಟಸ್ಥ ಹಾಗು ಕ್ಷಾರ ಮಣ್ಣುಗಳಿಗೆ ನೀಡಿದಾಗಲೂ ಅದರಲ್ಲಿರುವ ರಂಜಕವು ನೀರಿನಲ್ಲಿ ಕರಗದ  ರೂಪಕ್ಕೆ ಪರಿವರ್ತನೆ ಹೊಂದುತ್ತದೆ. ಇದನ್ನು ನಿವಾರಿಸುವ ಕ್ರಮಗಳು ಹೀಗೆ.
 • ರಂಜಕ ಗೊಬ್ಬರ ಯಾವುದೇ ಇರಲಿ ಅದನ್ನು ನೇರವಾಗಿ ಎರಚುವುದು ಮಾಡಬಾರದು.
 • ಅದನ್ನು ಬೇರುಗಳ ಸನಿಹಕ್ಕೆ ಸಿಗುವಂತೆ ಮಣ್ಣಿಗೆ ಮಿಶ್ರಣ ಮಾಡಬೇಕು.
 • ಅಂದರೆ ಮಣ್ಣು ಕೆರೆದು ಗೊಬ್ಬರವನ್ನು ಕೊಡಬೇಕು. ಇದನ್ನು ರಂಜಕದ ಸ್ಥಿರೀಕರಣ ಎನ್ನುತ್ತಾರೆ.
 • ಹರಳು ರೂಪದ ರಂಜಕ ಗೊಬ್ಬರವನ್ನು ಹೀಗೆ ಪೂರೈಕೆ ಮಾಡುವುದರಿಂದ ಧೀರ್ಘ ಕಾಲದ ತನಕ ಅದು ಲಭ್ಯವಾಗುತ್ತಾ ಇರುತ್ತದೆ.
 • ಯಾವಾಗಲೂ ಸಾವಯವ ವಸ್ತುಗಳ ಜೊತೆಗೆ ಅಂದರೆ ಬೆಳೆಗಳ ಬುಡಕ್ಕೆ ಹಾಕಿದ ಸಾವಯವ ಗೊಬ್ಬರಕ್ಕೆ ರಂಜಕವನ್ನು ಮಿಶ್ರಣ ಮಾಡಿ ಒದಗಿಸಿದರೆ ಅದರ ಫಲ ಬಹಳ ಉತ್ತಮವಾಗಿರುತ್ತದೆ.
 • ಸಾವಯವ ಗೊಬ್ಬರಗಳ ವಿನಹ ರಂಜಕ ಸ್ಥಿರೀಕರಣ ಆಗುವುದಿಲ್ಲ.

ರಂಜಕ ಗೊಬ್ಬರವು ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ದೊರೆಯುವಂತಾಗಲು ದ್ವಿದಳ ಜಾತಿಯ ಸಸ್ಯಗಳನ್ನು ಹೊಲದಲ್ಲಿ ಬೆಳೆದರೆ ಅನುಕೂಲವಾಗುತ್ತದೆ. ರಂಜಕ ಕರಗಿಸಿಕೊಡುವ ಬ್ಯಾಕ್ಟೀರಿಯಾಗಳು  ಹೀರಿಕೊಂಡು ಸಾವಯವ ರೂಪಕ್ಕೆ ಪರಿವರ್ತಿಸಿ ಅದನ್ನು ಮೋನೋ ಫೋಸ್ಫೇಟ್ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಇದಕ್ಕಾಗಿ ಹೊಲದಲ್ಲಿ ಸೆಣಬು,ಡಯಂಚಾ, ಕ್ರೊಟಲೇರಿಯಾ, ಗ್ಲೆರಿಸೀಡಿಯಾ ಮುಂತಾದ ಸಸ್ಯಗಳನ್ನು ಬೆಳೆಸಿದರೆ ಅನುಕೂಲ. ಇವುಗಳ ಬೇರಿನ ಸುತ್ತ ಮೈಕೊರೈಜಾ  ಜೀವಾಣುಗಳು  ಆಶ್ರಯ ಪಡೆದಿರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ರಂಜಕ ಎಂಬ ಸಸ್ಯ ಬೆಳೆವಣಿಗೆ ಮತ್ತು ಅಧಿಕ ಇಳುವರಿಗೆ ಸಹಾಯಕವಾಗುವ ಪೋಷಕವನ್ನು ಬಳಕೆ ಮಾಡುವಾಗ ಅದನ್ನು ಯಾವ ರೀತಿಯಲ್ಲಿದ್ದರೆ ಸಸ್ಯಗಳು ಬಳಸಿಕೊಳ್ಳುತ್ತವೆ ಎಂಬುದನ್ನು ಅರಿತು ಬಳಕೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!