ಶುದ್ಧ ತೆಂಗಿನೆಣ್ಣೆಯಲ್ಲಿದೆ – ಅಪರಿಮಿತ ಆರೋಗ್ಯ ಗುಣಗಳು

ಶುದ್ಧ ತೆಂಗಿನ ಎಣ್ಣೆ

ಪ್ರಕೃತಿ ಸೃಷ್ಟಿಸಿದ ಹಲವಾರು ಔಷಧೀಯ ಸಸ್ಯ , ಮೂಲಿಕೆಗಳಲ್ಲಿ ತೆಂಗು ಒಂದು. ಇದು ಇಂದು ನಿನ್ನೆಯ ವಿಚಾರ ಅಲ್ಲ. ಅನಾದಿ ಕಾಲದಿಂದಲೂ ಇದ್ದದ್ದು. ಆದರೆ ಗೊತ್ತೀದ್ದೋ ಗೊತ್ತಿಲ್ಲದೆಯೋ ನಾವು ಬಳಸುವುದು ಕಡಿಮೆ ಮಾಡುತ್ತಿದೇವೆ.ತೆಂಗಿನ ಎಣ್ಣೆ ತಿಂದವರಿಗೆ ರೋಗ ಇಲ್ಲ.

 •  ಕೊಬ್ಬರಿ ಎಣ್ಣೆ ಎಂಬುದು ಹಸುವಿನ ತುಪ್ಪಕ್ಕೆ ಸರಿಸಾಟಿಯಾದ ವಸ್ತು ಎನ್ನುತ್ತಾರೆ.
 • ಇದು ಸಸ್ಯಜನ್ಯ ಎಣ್ಣೆಯಾಗಿದ್ದು, ತುಪ್ಪಕ್ಕಿಂತಲೂ ಮಿಗಿಲಾದ ಔಷಧೀಯ ಗುಣವನ್ನು ಪಡೆದಿದೆ.
 • ನಮ್ಮಲ್ಲಿ ಈಗಲೂ ಹಳ್ಳಿಯ ಜನ ಕಣ್ಣು ತುರಿಕೆ, ಮೈ ತುರಿಕೆ ಆದರೆ ಆ ಭಾಗಕ್ಕೆ ತೆಂಗಿನೆಣ್ಣೆಯನ್ನು ಹಚ್ಚಿ ಗುಣಪಡಿಸುತ್ತಾರೆ.
 • ಅಂದರೆ ತೆಂಗಿನೆಣ್ಣೆಗೆ  ಆಂಟೀ ಅಲರ್ಜಿ ಗುಣ ಇದೆ.
 • ಬಹುತೇಕ ಎಲ್ಲಾ ಔಷಧೀಯ ಎಣ್ಣೆಗಳಿಗೆ ಮೂಲ ತೆಂಗಿನೆಣ್ಣೆ.
 • ತೆಂಗಿನೆಣ್ಣೆಯಲ್ಲಿ ಕಾಯಿಸಿದ ಎಣ್ಣೆಯನ್ನು ಮಾತ್ರವೇ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ
 • ಕೆಲವರಿಗೆ ಆಗಾಗ ಗಂಟಲು ನೋವು ಬರುತ್ತದೆ. ಇದಕ್ಕೆ  ನಮ್ಮ ಹಿರಿಯರು ಅನುಸರಿಸುತ್ತಿದ್ದುದ್ದು, ತೆಂಗಿನೆಣ್ಣೆಯ ಲೇಪನ.
 • ತೆಂಗಿನೆಣ್ಣೆಯನ್ನು ದಿನಾ ಸ್ವಲ್ಪ ಸ್ವಲ್ಪ ಸೇವನೆ ಮಾಡುತ್ತಿದ್ದರೆ ಶರೀರಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ.
 • ಇದಕ್ಕೇ ಕೇರಳಿಗರು ಗಟ್ಟಿಮುಟ್ಟು, ಚುರುಕು.

ತೆಂಗಿನೆಣ್ಣೆ ಮಾಡುವ ಕೊಬ್ಬರಿ- Oil Copra

ತೆಂಗಿನೆಣ್ಣೆಯ ಹೀಗೆಲ್ಲಾ ಬಳಸಬಹುದು:

 • ಯಾವುದೇ ತಿಂಡಿ ತಿನಿಸುಗಳನ್ನು  ಕರಿಯಲು ತೆಂಗಿನೆಣ್ಣೆಯನ್ನೇ ಬಳಕೆ  ಮಾಡಿ.
 • ದೋಸೆ, ಇಡ್ಲಿ ಮುಂತಾದ ತಿಂಡಿ ತಿನ್ನುವಾಗ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಲೇಪಿಸಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಿ.
 • ತಿಂಗಳಿಗೆ  ಎರಡು ಬಾರಿಯಾದರೂ ಇಡೀ ಮೈಗೆ ತೆಂಗಿನೆಣ್ಣೆ ಹಚ್ಚಿ ಸ್ನಾನ ಮಾಡಿ.
 • ಬಾಯಿ ಹುಣ್ಣು ನಿವಾರಣೆಗೆ ತೆಂಗಿನೆಣ್ಣೆ ಆಗುತ್ತದೆ. ಕೊಬ್ಬರಿ ಜಗಿದರೂ ಆಗುತ್ತದೆ.
 • ಗಂಜಿ ಉಟಕ್ಕೆ  ತುಪ್ಪದ ಬದಲಿಗೆ ತೆಂಗಿನೆಣ್ಣೆಯನ್ನು ಬಳಕೆ ಮಾಡುವುದನ್ನು  ಅಭ್ಯಾಸ ಮಾಡಿ.
 • ತೆಂಗಿಣ್ಣೆಯನ್ನು ನೇರವಾಗಿ ಬಳಕೆ ಮಾಡಲು ಅಸಾಧ್ಯವಾದವರು ಕೊಬ್ಬರಿಯನ್ನು  ಜಗಿಯುವ ಅಭ್ಯಾಸ ಮಾಡಿಕೊಳ್ಳಿ.
 • ಎಲ್ಲಕ್ಕಿಂತ ಮುಖ್ಯವಾಗಿ ತೆಂಗಿನೆಣ್ಣೆ ಹೇಗಿರುತ್ತದೆ, ಅದರ ಸುವಾಸನೆ ಏನು, ಬಣ್ಣ  ಏನು ಎಂಬುದನ್ನು ಬಳಕೆ  ಮಾಡುವ ಮುಂಚೆ ತಿಳಿಯುವುದು ಅಗತ್ಯ.

ಯಾವ ತೆಂಗಿನೆಣ್ಣೆ ಉತ್ತಮ:

 • ತೆಂಗಿನೆಣ್ಣೆ ಎಂಬ ಪರಮ ಪವಿತ್ರವಾದ ಖಾದ್ಯ ಎಣ್ಣೆಗೆ ಈಗ  ಕಲಬೆರಕೆ ಎಂಬ ಕಳಂಕ ಇದೆ.
 • ಇದು ನಿಜವೂ ಹೌದು.
 • ಮಾರುಕಟ್ಟೆಯಲ್ಲಿ ದೊರೆಯುವ ಕೇಶ, ನೋವಿನ ಎಣ್ಣೆಗಳಲ್ಲಿ ಕಲಬೆರಕೆಯ ತೆಂಗಿನೆಣ್ಣೆಯನ್ನು ಬಳಕೆ ಮಾಡಲಾಗುತ್ತದೆ.
 • ತಿನ್ನುವ ಶುದ್ಧ ಎಂದು ಮುದ್ರಿತವಾದ ಎಣ್ಣೆಯಲ್ಲೂ ಪೆಟ್ರೋಲಿಯಂ ಉತ್ಪನ್ನದ  ಕಲಬೆರಕೆ ಅತಿಯಾಗುತ್ತಿದೆ.
 • ಕೆಲವು ವಿಶೇಷ ಆಕರ್ಷಕ ಸುವಾಸಿತ ತೆಂಗಿನೆಣ್ಣೆಗಳೂ ಸಹ ಕಲಬೆರಕೆಯೇ ಆಗಿರುತ್ತದೆ.

ಚೆನ್ನಾಗಿ ಒಣಗಿದ ಕೊಬ್ಬರಿ –completely dried copra

ತೆಂಗಿನ ಕಾಯಿಯ ಕೊಬ್ಬರಿಯನ್ನು ನಿಮ್ಮೆದುರೇ ಎಣ್ಣೆ ತೆಗೆದು ಕೊಡುವ ವ್ಯವಸ್ಥೆ ಇದ್ದರೆ ಅದನ್ನು ಶುದ್ಧ ತೆಂಗಿನೆಣ್ಣೆ ಎಂದು ಹೇಳಬಹುದು.ನಂಬಿಗಸ್ತ ಮೂಲದ್ದಲ್ಲದ ತೆಂಗಿನೆಣ್ನೆ ಬಳಸುವ ಬದಲು ತೆಂಗಿನ ಕೊಬ್ಬರಿಯನ್ನು ಸ್ವಲ್ಪಸ್ವಲ್ಪ ತಿನ್ನುವುದು ಆರೋಗ್ಯಕ್ಕೆ ಉತ್ತಮ.

ತೆಂಗಿನೆಣ್ಣೆಗೆ ಹಿರಿತನ ಇದೆ:

 • ಎಣ್ಣೆಗಳ ಇತಿಹಾಸದಲ್ಲಿ ತೆಂಗಿನೆಣ್ಣೆ ಮೊದಲಿನದ್ದು.
 • ಕಲಬೆರಕೆ ಇಲ್ಲದೆ ಶುದ್ಧ ತೆಂಗಿನೆಣ್ಣೆ ಉಪಯೋಗ ಇದ್ದಾಗ ಅದರಲ್ಲಿ ಔಷಧೀಯ ಗುಣವಿತ್ತು.
 • ಈಗ ಅದರ ಮೌಲ್ಯ ಕಳದುಕೊಳ್ಳುತ್ತಿರುವುದು ದುರದೃಷ್ಟಕರ.
 • ತೆಂಗಿನ  ಕೊಬ್ಬರಿಯಲ್ಲಿ  65 % ಎಣ್ಣೆ ಅಂಶ ಇದೆ.
 • ಇದು  ಉಳಿದೆಲ್ಲಾ ಎಣ್ಣೆ ಕಾಳುಗಳಿಗಿಂತ ಹೆಚ್ಚು. ಬರೇ ಎಣ್ಣೆ ಪ್ರಮಾಣ  ಮಾತ್ರವಲ್ಲ,
 • ಎಣ್ಣೆಯಲ್ಲಿ ಸತ್ವಾಂಶಗಳೂ ಉಳಿದೆಲ್ಲಾ ಎಣ್ಣೆಗಿಂತ ಹೆಚ್ಚು ಇದ್ದು, ಇದು ಆರೋಗ್ಯದ ದೃಷ್ಟಿಯಲ್ಲಿ  ಅತ್ಯುತ್ತಮ ಎಣ್ಣೆ.
 • ಇಷ್ಟಕ್ಕೂ ತೆಂಗಿನ ಕಾಯಿಯ ಎಣ್ಣೆ ನಮ್ಮ ಕಣ್ಣೆದುರಿಗೇ ತೆಗೆದು ಕೊಡುವ ಎಣ್ಣೆಯಾದ ಕಾರಣ ಇದರಷ್ಟು ಪರಿಶುದ್ಧ ಎಣ್ಣೆ  ಮತ್ತೊಂದಿರಲಿಕ್ಕಿಲ್ಲ.

ಆಧುನಿಕ ವಿಜ್ಞಾನ ತೆಂಗಿನ ಕಾಯಿಯಲ್ಲಿ – ಅದರ ನೀರಿನಲ್ಲಿ- ಎಳೆ ನೀರಿನಲ್ಲಿ – ಎಣ್ಣೆಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ಎಂಬುದನ್ನು ಸಂಶೋಧನೆಯಿಂದ ಕಂಡುಹಿಡಿದಿದೆ. ವೈರಸ್ ಶಿಲೀಂದ್ರ, ಬ್ಯಾಕ್ಟೀರಿಯಾ ಗಳ ವಿರುದ್ಧ ಇದು ಪರಿಣಾಮಕಾರೀ ಔಷಧಿ. ಯಾವುದೇ ಸಂಶೋಧನೆ ಇಲ್ಲದೇ ಅನುಭವದ ಮೇಲೆ ನಮ್ಮ ಹಿರಿಯರು  ಕಂಡುಕೊಂಡ  ಹಲವಾರು ಸತ್ಯಗಳು ಈಗಿನ ಸಂಶೋಧನೆಗಳಿಗೆ ತಳಹದಿಯಾಗಿದೆ.

ಎಣ್ಣೆ ತೆಗೆಯುವಿಕೆ –Oil extraction

 • ಮೈಗೆ, ತಲೆಗೆ ತೆಂಗಿನೆಣ್ಣೆ ಮಜ್ಜನ ಮಾಡಿ ಸ್ನಾನ ಮಾಡುವುದರಿಂದ ಚರ್ಮ ಮತ್ತು ರೋಮ ನಾಳಗಳು ಸುಸ್ಥಿತಿಯಲ್ಲಿರುತ್ತವೆ.
 • ತಲೆಗೆ ಕೇಶಗಳ ಬುಡದಲ್ಲಿ ಉಂಟಾಗುವ ತಲೆಹೊಟ್ಟು ಇಲ್ಲದಾಗುತ್ತದೆ.
 • ಕೇಶಕ್ಕೆ  ಹೊಳಪು ಬರುತ್ತದೆ. ಕೇಶ ಉದ್ದವಾಗುತ್ತದೆ. ಉದುರುವುವಿಕೆ ನಿಲ್ಲುತ್ತದೆ.
 • ಗಾಯಕ್ಕೆ ಹಚ್ಚಲು ಮುಲಾಮುಗಳ ಬದಲು  ತೆಂಗಿನೆಣ್ಣೆಗೆ  ಹಚ್ಚಿಕೊಂಡರೆ  ಗಾಯ ಕೀವಾಗುತ್ತಿರಲಿಲ್ಲ.
 • ತೆಂಗಿನ ಕಾಯಿಯ ನೀರನ್ನು 10:1 ಕ್ಕೆ ಕುದಿಸಿ ಅದನ್ನು ಗಡಿ ಎಣ್ಣೆಯಾಗಿ ಮಾಡುತ್ತಿದ್ದರು.
 • ಅದನ್ನು ಹಚ್ಚಿಕೊಂಡರೆ  ದೊಡ್ಡ ಗಾಯಗಳೂ  ವಾಸಿಯಾಗುತ್ತಿದ್ದವು.
 • ಚಳಿಗಾಲದಲ್ಲಿ ಚರ್ಮ ಸುಕ್ಕುಕಟ್ಟದಿರಲು, ತುಟಿ ಮತ್ತು ಚರ್ಮಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳುವುದು ತುಂಬಾ ಉತ್ತಮ.
 • ಕಂಬಳಿಹುಳ ಮೈಗೆ ತಾಗಿದರೆ  ಉಂಟಾಗುವ ತುರಿಕೆ ನಿವಾರಣೆಗೆ  ತೆಂಗಿನೆಣ್ಣೆ  ಹಚ್ಚಿಕೊಳ್ಳುತ್ತಿದ್ದರು.

ತೆಂಗಿನೆಣ್ಣೆ  ಜೀರ್ಣಕಾರಿ. ತಿಂದರೆ ಸುಲಭವಾಗಿ ಕರಗುತ್ತದೆ. ಪಲ್ಯ ಇತ್ಯಾದಿಗಳಿಗೆ ತೆಂಗಿನೆಣ್ಣೆ ಕಲಸಿ ಊಟಮಾಡಿ.ಒಗ್ಗರಣೆಗಂತೂ ತೆಂಗಿನೆಣ್ಣೆಯೇ ಬಳಸಿ. ತೆಂಗಿನೆಣ್ಣೆ ಕರುಳಿನಲ್ಲಿ ಜಾರೆಣ್ಣೆಯಾಗಿ ಕೆಲಸ ಮಾಡುತ್ತದೆ. ಖಾರದ ಪದಾರ್ಥಕ್ಕೆ ತೆಂಗಿನೆಣ್ಣೆ  ಹಾಕಿ ಕಲಸಿ ತಿಂದರೆ  ಖಾರ ತಗ್ಗುತ್ತದೆ. 5 ವರ್ಷದ ನಂತರದ ಮಕ್ಕಳಿಗೆ  ಊಟ ಮಾಡಿಸುವಾಗ 1 ಚಮಚ  ತೆಂಗಿನೆಣ್ಣೆ  ಬೆರೆಸಿ  ಊಟ ಮಾಡಿಸಿದರೆ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಬರುತ್ತದೆ  ಎಂಬ ಸಂಗತಿಯನ್ನು  ಹಿರಿಯರು ಹೇಳುತ್ತಾರೆ.

 • ಹಿಂದೆ ಯುವಕರು ಹುಡಿ ಅನ್ನ ಉಣ್ಣುವ ಸಂಪ್ರದಾಯವಿತ್ತು.
 • ಬೆಳಿಗ್ಗೆ  ಮತ್ತು ಮಧ್ಯಾನ್ಹದ ಮಿಗತೆ ಅನ್ನವನ್ನು  ಅಗಲದ ಬಾಯಿಯ ಪಾತ್ರೆಯಲ್ಲಿ  ಹಾಕಿ ಅದನ್ನು ಆರಲು ಬಿಟ್ಟು
 • ಅದನ್ನು ಅದನ್ನು  ನಂತರ ಮಣ್ಣಿನ ಪಾತ್ರೆಯಲ್ಲಿ  ಹಾಕಿ ಇಟ್ಟು ಮರುದಿನ ಅದರಲ್ಲಿ ಒಂದು ಸೌಟು ತೆಂಗಿನೆಣ್ಣೆ ಮತ್ತು
 • ಉಪ್ಪಿನ ಕಾಯಿ ರಸದಲ್ಲೂ ಮತ್ತೊಂದು ಸೌಟನ್ನು ಮೊಸರು ಮತ್ತು ಉಪ್ಪು ಹಾಕಿ ಊಟ ಮಾಡುವುದು
 • ಶ್ರಮದ ಕೆಲಸ ಮಾಡುವವರಿಗೆ  ಹೆಚ್ಚಿನ ಶಕ್ತಿಯನ್ನು  ಕೊಡುತ್ತಿತ್ತಂತೆ .

ಹಿಂದೆ ಈಗಿನಂತೆ  ತೆಂಗಿನ ಮರಗಳು ಇರಲಿಲ್ಲ.  ಹೆಚ್ಚಿನ  ಕೃಷಿಕರಲ್ಲಿ  ತೆಂಗಿನ ಕಾಯಿಗೆ ಬರ. ಗಾಣದಲ್ಲಿ ಎಣ್ಣೆ ತೆಗೆಯಲು ಕಾಯಿ ಇಲ್ಲದವರು ಕಾಯಿ ತುಂಡು ಮತ್ತು ಬೆಲ್ಲವನ್ನು  ಜಗಿದಾದರೂ ಎಣ್ಣೆ  ಸೇವನೆ ಮಾಡುತ್ತಿದ್ದರು. ಊಟ ಮಾಡುವಾಗ ಗೋಟು ಕಾಯಿಯ ( ಒಣ ಕೊಬ್ಬರಿ)  ಚೂರುಗಳನ್ನು  ಜಗಿಯುತ್ತಿದ್ದರು. ಕೆಲವರು, ಸ್ವತಃ ಮನೆಯಲ್ಲೇ ಎರಡು ಮೂರು  ಕಾಯಿಯ ಎಣ್ಣೆ ತೆಗೆಯುತ್ತಿದ್ದರು. ಹಸಿ ಕಾಯಿಯನ್ನು  ಹೆರೆದು, ಅರೆದು ಹಾಲು ಸೋಸಿ ಕುದಿಸಿ  ಎಣ್ಣೆ ಪಡೆಯಬಹುದು. ಪರಿಶುದ್ಧವಾದ ಈ ಎಣ್ಣೆ, ತುಪ್ಪಕ್ಕೆ ಸಮನಾದುದು ಈಗಿನ ವರ್ಜಿನ್ ಕೋಕೋನಟ್ ಆಯಿಲ್ ಇದೇ ಆಗಿದೆ.

ಒಟ್ಟಿನಲ್ಲಿ ತೆಂಗಿನೆಣ್ಣೆ  ನಮ್ಮ ಕಾಲಬುಡದಲ್ಲೇ ಇರುವ ಔಷಧಿ. ನಮ್ಮ ಹಿರಿಯರಂತೆ ಆರೋಗ್ಯವಾಗಿ, ಧೀರ್ಘಾಯುವಾಗಿ ಬದುಕಲು  ತೆಂಗಿನೆಣ್ಣೆ  ಬಳಕೆ ಮಾಡಿ.

end of the article:—————————————————————————–
search words: coconut oil# pure coconut oil# edible oil# Adultreted  coconut oil# Oil seed#  medicinal value of coconut oil#  how to use coconut oil# coconut oil and health# uses of coconut oil#

Leave a Reply

Your email address will not be published. Required fields are marked *

error: Content is protected !!