ಸರಕಾರ ಗುಟ್ಕಾ ನಿಷೇಧ ಮಾಡಲು ಸಾಧ್ಯವೇ ?

ದೇಶದ ಅರ್ಥ ವ್ಯವಸ್ಥೆಗೆ ತಂಬಾಕು, ಮತ್ತು ಅದರ ಉತ್ಪನ್ನಗಳ ಮೂಲಕ ವಾರ್ಷಿಕ 43,000 ಕೋಟಿ ಆದಾಯ ಸಂಗ್ರಹ ಇದೆ. ಸುಮಾರು 4.6 ಕೋಟಿ ಜನ ಈ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಿದೆ. ಈ ಆದಾಯವನ್ನು ಕಳೆದು ಕೊಳ್ಳಲು ಮತ್ತು ಇಷ್ಟು ಕೆಲಸಗಾರರಿಗೆ ಬೇರೆ ಕೆಲಸ ಕೊಡಲು ನಮ್ಮ ಸರಕಾರಕ್ಕೆ  ಸಾಧ್ಯವಿದ್ದರೆ ಮಾತ್ರ ಗುಟ್ಖಾ  ಪಾನ್ ಮಸಾಲ ನಿಷೇಧ ಸಾಧ್ಯ. ಅದೂ ಈಗಿನ ಆರ್ಥ ವ್ಯವಸ್ಥೆಗೆ ಬಿದ್ದ ಹೊಡೆತವನ್ನು ತಡೆಯುವ ಶಕ್ತಿ ಯಾವ ಸರಕಾರಕ್ಕೂ ಇರಲಿಕ್ಕಿಲ್ಲ.

 • ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು ಕಡೆ ಪಾನ್ ಮಸಾಲಾ ಗುಟ್ಕಾ ಮುಂತಾದ ಉತ್ಪನ್ನಗಳನ್ನು ಬ್ಯಾನ್ ಮಾಡುವ ಸುದ್ದಿ ಪ್ರಕಟವಾಗುತ್ತಿದೆ.
 • ಇದರ ಸತ್ಯಾಸತ್ಯತೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ.
 • ಬರೇ ಸುದ್ದಿಗಳ ಮೂಲಕ ಕೋಟ್ಯಾಂತರ ಜನರ ಜೀವನದಲ್ಲಿ ಆಟ ಆಡಲಾಗುತ್ತಿದೆ.

ಮೊನ್ನೆ ಕರ್ನಾಟಕದಲ್ಲಿ ತಂಬಾಕು ಬ್ಯಾನ್ ಮಾಡಬಹುದು ಎಂಬುದಾಗಿ ಒಂದು ಪ್ರತಿಷ್ಟಿತ ಕಂಪೆನಿ ಹೇಳಿಕೆ ಕೊಟ್ಟಿತು. ಮಾಧ್ಯಮಗಳು ತಂಬಾಕು ಬ್ಯಾನ್ ಆದರೆ ಸಿಗರೇಟಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂಬ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

 • ಕಂಪೆನಿಯ ಶೇರು ಸ್ವಲ್ಪ ನೆಗೆಯಿತು, ಯಾರಿಗೋ ಲಾಭವಾಯಿತು.
 • ಇದೇ ಕಥೆ ಗುಟ್ಕಾ, ಅಡಿಕೆ, ತಂಬಾಕು ಮುಂತಾದವುಗಳ ವಿಷಯದಲ್ಲೂ ಆಗಾಗ  ಆಗುತ್ತಿರುತ್ತದೆ.

ಗುಟ್ಕಾ ನಿಷೇಧ ಎಷ್ಟು ಪ್ರಾಯೋಗಿಕ:

 • ಈ ತನಕ ಯಾವುದೇ ಸರಕಾರಕೂ ಗುಟ್ಕಾ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಆಗಿಲ್ಲ.
 • ನಿಷೇಧ ಮಾಡಿದವರೆಲ್ಲಾ ಮತ್ತೆ ಆ ಸುದ್ದಿಗೆ ಹೋಗಲಿಲ್ಲ.
 • ನಮ್ಮ ದೇಶದಲ್ಲಿ ಇಂಥಹ ಯಾವ ನಿಬಂದನೆಗಳೂ ಕೆಲಸ ಮಾಡುವುದಿಲ್ಲ.
 • ಗುಟ್ಕಾ ತಿನ್ನುವುದು  ಎಲೆ ಅಡಿಕೆ ತಿನ್ನುವುದು ಇದು ವ್ಯಕ್ತಿಯ ಸ್ವ ಆಯ್ಕೆಯೇ ಹೊರತು ಎಲ್ಲೂ ಬಲತ್ಕಾರ ಇಲ್ಲ.
 • ಇದು ಒಂದು ಚಟ. ಇದನ್ನು ಮಾನವ ಅವನ ಸ್ವ ತಿಳುವಳಿಕೆಯಲ್ಲಿ ಬಿಡಬೇಕೇ ಹೊರತು ಅದನ್ನು ಒತ್ತಾಯಪೂರ್ವಕ, ಕಾನೂನು ಮುಖಾಂತರ ನಿರ್ಭಂಧ ಹಾಕುವುದು ಅಸಾಧ್ಯ.

ತಿಂದು ಉಗುಳುವುದು ಕಾರಣವೇ?

 •  ಜಗತ್ತಿನಲ್ಲೇ ಅಡಿಕೆ ಮತ್ತು ಪಾನ್ ಮಸಾಲೆಯನ್ನು ತಿನ್ನುವವರು ಅತ್ಯಧಿಕ ಪ್ರಮಾಣದಲ್ಲಿರುವುದು ಭಾರತ ದೇಶದಲ್ಲಿ ಮಾತ್ರ.
 • ಗುಟ್ಕಾ ಪಾನ್ ಮಸಾಲಾ ಮುಂತಾದ ವಸ್ತುಗಳ ಬಳಕೆ ಕಡಿಮೆ ಇರುವ ಕೆಲವು ರಾಷ್ಟ್ರಗಳಲ್ಲಿ ಕೊರೋನಾ ತಾಂಡವ ಆಡಿದಷ್ಟು ನಮ್ಮ ದೇಶದಲ್ಲಿ ಆಗಿಲ್ಲ. 
 • ಇಷ್ಟಕ್ಕೂ ಗುಟ್ಕಾ , ಪಾನ್ ಮಸಾಲ ತಿಂದು ಉಗುಳಿದ ರಸದಲ್ಲಿ ವೈರಾಣು ಹರಡುತ್ತದೆ ಎಂಬುದಕ್ಕೆ ಬೆಂಬಲ ಸಾಲದು.
 • ಗುಟ್ಕಾ ಪಾನ್ ಮಾಸಾಲ ತಿಂದವರು ನಿರ್ದಿಷ್ಟ ಸ್ಥಳದಲ್ಲಿ ಉಗುಳುತ್ತಾರೆ.
 • ಉಗುಳಿದ್ದು ಬಣ್ಣದಲ್ಲಿ ಗೊತ್ತಾಗುತ್ತದೆ.
 • ಹಾಗೆಂದು ಏನೂ ತಿನ್ನದೆ ಉಗುಳಿದ್ದು ಕ್ಷಣ ಮಾತ್ರದಲ್ಲಿ ಆರಿ ಗೊತ್ತಾಗುವುದಿಲ್ಲ.
 • ಅದನ್ನು ಜನ ಮೆಟ್ಟುವುದು , ಆ ಮೂಲಕ ರೋಗ ಹರಡುವುದು ಗುಟ್ಕಾಕ್ಕಿಂತ ಬೇಗ.

ಗುಟ್ಖಾ ನಿಷೇಧದ ಪರಿಣಾಮ:

 • ಕರ್ನಾಟಕದ ಬಹುತೇಕ ಕೃಷಿ ಅರ್ಥವ್ಯವಸ್ಥೆ ಅಡಿಕೆಯ ಮೇಲೆ ನಿಂತಿದೆ.
 • ರಾಜ್ಯದಲ್ಲಿ ಸುಮಾರು  50 ಲಕ್ಷ ಕುಂಟುಂಬಗಳು ಅಡಿಕೆ ಬೆಳೆಯುವವರು.
 • ಸುಮಾರು 3000 ಕ್ಕೂ ಹೆಚ್ಚು  ಅಡಿಕೆ ವರ್ತಕರು, ಸುಮಾರು 5000 ಕ್ಕೂ ಹೆಚ್ಚು ಚಿಲ್ಲರೆ ಅಡಿಕೆ ವ್ಯಾಪಾರಸ್ಥರು ಇರಬಹುದು.
 •  ಕೆಲಸಗಾರ ವರ್ಗದಲ್ಲಿ ಸುಮಾರು 30% ಕ್ಕೂ ಹೆಚ್ಚು ಜನ ಅಡಿಕೆ ಬೆಳೆಯ ಮೇಲೆ ತಮ್ಮ  ವೃತ್ತಿಯನ್ನು ಅವಲಂಭಿಸಿದ್ದಾರೆ.
 • ಇವರೆಲ್ಲರ  ಜೀವನವನ್ನು ಅತಂತ್ರ ಸ್ಥಿತಿಗೆ ತಂದಂತಾಗುತ್ತದೆ.

ಬರೇ ಇಷ್ಟೇ ಅಲ್ಲ. ಅಡಿಕೆ  ಬೆಳೆಗಾರರು ಇಡೀ ಅರ್ಥ ವ್ಯವಸ್ಥೆಯಲ್ಲಿ ಖರೀದಿ ಸಾಮರ್ಥ್ಯ ವನ್ನು ಹೊಂದಿದವರು. ಇವರಿಂದಾಗಿ ಕೃಷಿ ಒಳಸುರಿಗಳಾದ ನೀರಾವರಿ, ರಸಗೊಬ್ಬರ, ಕೀಟನಾಶಕ, ರೋಗ ನಾಶಕ, ಕೃಷಿ ಯಂತ್ರ ಸಾಧನಗಳು ಮೂಂತಾದ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆ ನಿಂತಿದೆ.  ಇವರೆಲ್ಲರ  ಆರ್ಥಿಕ ನಷ್ಟಕ್ಕೂ ಇದು ಕಾರಣವಾಗುತ್ತದೆ.

ಗುಟ್ಕಾ ಯಾಕೆ ನಿಷೇಧಿಸಬೇಕು:

 • ಗುಟ್ಕಾ ಆಗಲಿ ಇನ್ಯಾವುದೇ ಚಟಗಳನ್ನು  ನಿಲ್ಲಿಸುವುದು ಅಸಾಧ್ಯ.
 • ಇದನ್ನು ಕಡಿಮೆ ಮಾಡುವುದು ಒಂದೇ ಇರುವ ಮಾರ್ಗ. 
 • ಮನುಷ್ಯನಿಗೆ ಚಟ ಅಂಟಿಕೊಳ್ಳುವುದು  ಬಿಡುವಿದ್ದಾಗ .
 • ಕೆಲಸದಲ್ಲಿ ತಲ್ಲೀನರಾದಾಗ ಈ ಚಟ ಕಡಿಮೆಯಿರುತ್ತದೆ. 
 • ಗುಟ್ಕಾ ಜಗಿಯುವುದು ಉಗುಳುವುದಕ್ಕೆ ಕೆಲವು ನಿರ್ಭಂಧ ಹಾಗೂ ದಂಡಗಳನ್ನು ವಿಧಿಸಬಹುದು.
 • ಸಾರ್ವಜನಿಕ ಸ್ಥಳಗಳಲ್ಲಿ  ಇದನ್ನು ತೀಂದು ಉಗುಳುವುದಕ್ಕೆ ದಂಡ ಹಾಗು ಶಿಕ್ಷೆಯನ್ನೂ ವಿಧಿಸಬಹುದು. 
 • ಗುಟ್ಕಾ ತಯಾರಕರು ಸಾಧ್ಯವಾದಷ್ಟು ಹಾನಿಕಾರಕ ತಂಬಾಕು ಮತ್ತಿನ್ನಿತರ ವಸ್ತುಗಳನ್ನು ಕಡಿಮೆ ಬಳಕೆ ಮಾಡಬಹುದು. 
 • ಇವು ಧಾನತ್ಮಕ ತಡೆಗಳು. ಸ್ವಲ್ಪ ಮಟ್ಟಿಗೆ  ಇದರಲ್ಲಿ ಚಟ ಕಡಿಮೆ ಮಾಡಬಹುದು.

ನಿಷೇಧ ಮಾಡಿದರೆ ಕಾಳಸಂತೆಯಲ್ಲಿ ಮಾರಾಟವಾಗುತ್ತದೆ. ಜನ ಎಲೆ ಅಡಿಕೆ ತಂಬಾಕು ತಿಂದಾದರೂ ತಮ್ಮ ಚಟವನ್ನು ನೀಗಿಸಿಕೊಳ್ಳುತ್ತಾರೆ. ಇದು ಮತ್ತೂ ಹಾಳು. ಇದೆಲ್ಲದ ಬದಲಿ ಸಾಮಾಜಿಕ ಶಿಕ್ಷಣದ ಮೂಲಕ ಜನರ ಮನ ಪರಿವರ್ತನೆ ಮಾಡುವುದು ಎಲ್ಲದಕ್ಕಿಂತ ಉತ್ತಮ.

 • ಜನ  ಗುಟ್ಕಾ ನಿಷೇಧ ಎಂದಾಕ್ಷಣ ಅಡಿಕೆಯ ಭವಿಷ್ಯ ಹೋಯಿತು ಎಂದು ಕುಳಿತುಕೊಳ್ಳುತ್ತಾರೆ.
 • ನಮ್ಮಲ್ಲಿ ಇಷ್ಟೊಂದು ವಿಧ್ಯಾವಂತರಿದ್ದಾರೆ.
 • ಅಡಿಕೆ ಬೆಳೆಗಾರರು ರಾಜಕೀಯದಲ್ಲೂ ಉನ್ನತ ಸ್ಥಾನಕ್ಕೆ ಏರಿದ್ದಾರೆ.
 • ಅವರೆಲ್ಲಾ ಏನು ಮಾಡುತ್ತಿದ್ದಾರೆ ತಿಳಿಯದಾಗಿದೆ.
 • ಇದನ್ನು ಸರಕಾರ, ಆರೋಗ್ಯ ಇಲಾಖೆ, ನ್ಯಾಯಾಂಗದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಬೇಕು.

ಗುಟ್ಕಾ ನಿಷೇಧ  ಇದೆಲ್ಲಾ ತಾತ್ಕಾಲಿಕ ನಿರ್ಧಾರಗಳೇ ಹೊರತು ಶಾಶ್ವತ ನಿರ್ಧಾರಗಳಲ್ಲ. ಇದರಿಂದ  ಸರಕಾರದ ಬೊಕ್ಕಸಕ್ಕೂ ಭಾರೀ ಹೊಡೆತ  ಬೀಳುತ್ತದೆ. ಇನ್ನು ಮುಂದಿನ ದಿನಗಳು ಸರಕಾರಕ್ಕೆ ಭಾರೀ ಕಷ್ಟದ ದಿನಗಳಾದುದರಿಂದ ಇಂಥಹ ಬೇಜವಾಬ್ಧಾರಿ ಕೆಲಸಕ್ಕೆ ಯಾವ ಸರಕಾರವೂ ಮುಂದಾಗುವುದಿಲ್ಲ ಎಂಬುದು ಅಕ್ಷರಶಃ ಸತ್ಯ.

 

Leave a Reply

Your email address will not be published. Required fields are marked *

error: Content is protected !!