ಸಾರಜನಕ ಗೊಬ್ಬರ ನಮ್ಮ ಹೊಲದಲ್ಲೇ ಇದೆ ಗೊತ್ತೇ?

ಸಾರಜನಕ  ಗೊಬ್ಬರವಾಗಿ ರಾಸಾಯನಿಕ ರೂಪದ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದವುಗಳನ್ನೇ  ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ನಮ್ಮ ಸುತ್ತಮುತ್ತ ಇರುವ ಸಸ್ಯ ಮತ್ತು ಸಾವಯವ ವಸ್ತುಗಳಲ್ಲಿ  ನೈಸರ್ಗಿಕ ಸಾರಜನಕ ಸಾಕಷ್ಟು ಇದೆ.

ಇದು ವಾತಾವರಣದ ಸಾರಜನಕವನ್ನು ಮಣ್ಣ್ಣಿಗೆ ತಲುಪಿಸುವ ಸಸ್ಯ ಬೇರುಗಳು. ಇಲ್ಲಿರುವ ಗಂಟುಗಳಲ್ಲಿ ಸಾರಜನಕ ಇದೆ

 • ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ.
 • ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ.
 • ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ ಪ್ರಮಾಣದಲ್ಲಿ ಉಳಿಸಬಹುದು.

ಮಣ್ಣು ಎಂಬ ವಸ್ತು ಉತ್ಪಾದನೆಯಾದದ್ದು ಶಿಲೆಗಳು ಶಿಥಿಲವಾಗಿ. ಈ ಶಿಥಿಲ ಕಣಗಳಲ್ಲಿ ಸಾರಜನಕದ ಅಂಶ ಎನೂ ಇಲ್ಲ. ಆದರೆ ಆ ಶಿಥಿಲ ವಸ್ತುಗಳ ಮೇಲೆ ಹಾವಸೆ, ಸಸ್ಯಗಳು ಬೆಳೆದು ಅದು ಸತ್ತು, ಎಲೆ ಉದುರಿಸಿ ಮಣ್ಣಿಗೆ ಸೇರಿ  ತೇವಾಂಶದಲ್ಲಿ  ವಿಘಟನೆಗೊಂಡು ಮಣ್ಣಿನಲ್ಲಿ ಸಾರಜನಕ ಅಂಶ ಇರುವಂತೆ ಮಾಡಿದೆ.

ಈ ರೀತಿ ಸಾವಯವ ವಸ್ತುಗಳು ಸಾರಜನಕ ಗೊಬ್ಬರವಾಗು ತ್ತವೆ.

 •  ಆಯಾಯಾ  ಋತುಮಾನದಲ್ಲಿ ಮಳೆ,ಸಿಡಿಲು, ಮಿಂಚುಗಳಿಂದಲೂ ಮಣ್ಣಿಗೆ ಸಾರಜನಕ ದೊರೆತು ಮಣ್ಣು ಸುಮಾರು 2-5 %  ಸಾರಜನಕ ಹೊಂದುವಂತೆ ಮಾಡಿದೆ.
 • ಇದು ನಮ್ಮ ಬೆಳೆಗಳ ಅಧಿಕ ಇಳುವರಿಗೆ ಸಾಕಾಗದ ಕಾರಣಕ್ಕೆ ಮಾತ್ರ ನಾವು ರಾಸಾಯನಿಕ ಮೂಲದ ಸಾರಜನಕ ಉತ್ಪಾದನೆಗೆ ಮುಂದಾದದ್ದು.

ಸಾವಯವ ಸಾರಜನಕ:

 • ಸಸ್ಯಗಳ ಎಲೆಗಳು ಮಣ್ಣಿಗೆ ಬಿದ್ದಾಗ ಅದು ಮಣ್ಣಿನಲ್ಲಿ ಕರಗಿ ಇಂಗಾಲದ ಡೈ ಆಕ್ಸೈಡ್ ಮತ್ತು ಅಮೋನಿಯಾ ಅನಿಲ ಬಿಡುಗಡೆಯಾಗುತ್ತದೆ.
 • ಇದು ಸಾರಜನಕವನ್ನು ಉತ್ಪಾದಿಸುತ್ತದೆ. ಹೀಗೆ ಗರಿಷ್ಟ ಪ್ರಮಾಣದಲ್ಲಿ ಸಾವಯವ ವಸ್ತುಗಳು ಮಣ್ಣಿಗೆ ಸೇರಿ ಕಳಿತು ಅದು ಸಾರಜನಕ ಪೋಷಕವಾಗುತ್ತದೆ.
 • ಇದೇ  ಸತ್ವದ ಮೇಲೆ ಕಾಡು ಮತ್ತು ಬೆಟ್ಟ ಗುಡ್ಡಗಳಲ್ಲಿ ಮರಗಳು, ಹುಲ್ಲುಗಳು ಬೆಳೆಯುತ್ತವೆ.
 • ಎಲ್ಲಿ ಯಾವುದೇ ಸಾವಯವ ವಸ್ತು ಇಲ್ಲವೋ ಅಲ್ಲಿ ಮಳೆಯ ಆಧಾರದಲ್ಲಿ ಬರೇ ಹಾವಸೆಯಾದರೂ ಬೆಳೆಯುತ್ತದೆ.
 • ಇದು ಸತ್ತ ನಂತರ ಸಾರಜನಕ ಸತ್ವವಾಗುತ್ತದೆ. ಸಸ್ಯ ಬೀಜಗಳು ಹುಟ್ಟಿಕೊಳ್ಳುತ್ತವೆ.

ಸೆಣಬಿನ ಗಿಡ ಎಲೆಯಲ್ಲಿ ಮತ್ತು ಬೇರಿನ ಮೂಲಕ ಸಾರಜನಕ ಕೊಡುತ್ತದೆ.


ನಾವು ಸಾವಯವ ಮೂಲದ ಮತ್ತು ರಾಸಾಯನಿಕ ಮೂಲ ಎಂಬೆರಡರ ಮಧ್ಯೆ ದ್ವಂದ್ವದಲ್ಲಿದ್ದೇವೆ. ವಾಸ್ತವವಾಗಿ ಸಾವಯವ ಮೂಲ ಎಂಬುದು ಶಾಶ್ವತ ಅಥವಾ ನವೀಕರಣವಾಗುವಂತದ್ದು. ರಾಸಾಯನಿಕ ಮೂಲದ್ದು ಕೃತಕ. ಅನಿವಾರ್ಯತೆ ಮತ್ತು .ಅಧಿಕ ಇಳುವರಿಗಾಗಿ ಇದನ್ನು ನಾವು ಬಳಸುತ್ತಿದ್ದೇವೆ.

 • ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನು  ಪೂರೈಕೆ ಮಾಡಿದಾಗ ಅದು ಸಾರಜನಕ ಸಮೃದ್ಧವಾಗುತ್ತದೆ.
 • 50 ಕಿಲೋ ಪ್ರಮಾಣದ ದ್ವಿದಳ ಸೊಪ್ಪು ಗಿಡವನ್ನು ಮಣ್ಣಿಗೆ ಸೇರಿಸಿದಾಗ ಸುಮಾರು 4 ಚದರ ಅಡಿಯ ಮಣ್ಣಿನಲ್ಲಿ ಸಾರಜನಕ ಅಂಶ ಹೇರಳವಾಗುತ್ತದೆ.
 • ಅದೇ ಪ್ರಮಾಣದಲ್ಲಿ ಬೆಳೆಗೆ ಬೇಕಾಗುವ ಪ್ರಮಾಣದ ಸಾರಜನಕವನ್ನು ಅನುಕೂಲ ಇದ್ದವರು ಸಾವಯವ ಮೂಲದಲ್ಲೇ ಹೊಂದಿಸಿಕೊಳ್ಳಬಹುದು.

  ಸಸ್ಯಗಳೂ ಸಾರಜನಕ ಕೊಡುತ್ತವೆ:

ಈ ಗಿಡ, ಕ್ರೊಟಲೇರಿಯಾ ಸಾರಜನಕ ಕೊಡುವ ಗಿಡ
 • ದ್ವಿದಳ ಗಿಡಗಳು, ಹುಲ್ಲುಗಳು, ಸಸ್ಯಗಳು ತಮ್ಮ ಮೃದು ಎಲೆಗಳಲ್ಲಿ ಮತ್ತು ದ್ವಿದಳ ಸಸ್ಯಗಳು ತಮ್ಮ  ಬೇರುಗಳಲ್ಲಿ ಸಾರಜನಕ ಅಂಶವನ್ನು ಹೊಂದಿವೆ.
 • ಗ್ಲೆರಿಸೀಡಿಯಾ, ಸೆಣಬು,ಡಯಂಚಾ, ಕ್ರೊಟಲೇರಿಯಾ ಮುಂತಾದ ಸಸ್ಯಗಳನ್ನು ಗರಿಷ್ಟ ಪ್ರಮಾಣದಲ್ಲಿ  ಮಣ್ಣಿಗೆ ಸೇರಿಸಿದರೆ ಅದು ಸೇರಲ್ಪಟ್ಟ ಸ್ಥಳದಲ್ಲಿ ಸಾರಜನಕ ಅಂಶ ಹೆಚ್ಚಾಗುತ್ತದೆ.
 • ಸ್ವಲ್ಪಗಟ್ಟಿ ಎಲೆಗಳ ಕೆಲವು ಸಸ್ಯಗಳಲ್ಲಿ ಸಾರಜನಕ ಇದ್ದರೂ ಪ್ರಮಾಣ ಕಡಿಮೆ ಇರುತ್ತವೆ. ಉದಾಹರಣೆ ಅಕೇಶಿಯಾ, ಗೇರು, ಬೋಗಿ ಇತ್ಯಾದಿ ಮರಗಳು.
 • ಇದರಲ್ಲಿ ಲಿಗ್ನಿನ್ ಅಂಶ ಹೆಚ್ಚು ಇರುವ ಕಾರಣ ಸಾರಜನಕ ದೊರೆಯಲು  ತಡವಾಗುತ್ತದೆ.
 • ಇದು ವಿಘಟನೆಯಾಗಿ ಸಾರಜನಕ ದೊರೆಯುತ್ತದೆ.
ಚೆಗಚೆ ಗಿಡವೂ ಸಾರಜನಕ ಕೊಡುತ್ತದೆ

ಕೊಟ್ಟಿಗೆ ಗೊಬ್ಬರವೂ ಸಾರಜನಕದ ಗೊಬ್ಬರವೇ:

 • ನಮ್ಮ ಹಿರಿಯರು ಕೊಟ್ಟಿಗೆ ಗೊಬ್ಬರವನ್ನೇ ಸಾರಜನಕ ಗೊಬ್ಬರದ ಮೂಲವಾಗಿ ಬಳಸುತ್ತಿದ್ದರು.
 • ಕೊಟ್ಟಿಗೆ ಗೊಬ್ಬರಕ್ಕೆ ತರಾವಳಿಯ ಸೊಪ್ಪು ಸದೆಗಳನ್ನು ಹಾಕುತ್ತಿದ್ದರು.
 • ಹಸುಗಳಿಗೆ ತಿನ್ನಲೂ  ಸಹ ತರಹೇವಾರು ಹುಲ್ಲುಗಳನ್ನು ಉಪಯೋಗಿಸುತ್ತಿದ್ದರು.
 • ಈ ಕಾರಣದಿಂದ ಕೊಟ್ಟಿಗೆ ಗೊಬ್ಬರ ಸಹ ಸಾರಜನಕ ಸಂಪನ್ನವಾಗಿರುತ್ತಿತ್ತು.

ಪ್ರಾಕೃತಿಕವಾಗಿ ಮಣ್ಣಿಗೆ ವಾತಾವರಣದಿಂದ ಸಾರಜನಕ, ರಂಜಕ ಹಾಗೆಯೇ ಇನ್ನಿತರ ಪೋಷಕಗಳನ್ನು ಕೆಲವು ಸಸ್ಯಗಳು ಹೀರಿಕೊಂಡು  ತಮ್ಮ ಬೇರುಗಳಲ್ಲಿ  ಸಂಗ್ರಹಿಸಿ ಒದಗಿಸುತ್ತವೆ.(Nitrogen fixing bacteria,Mycorrhiza)  ಇದರಿಂದಲೂ ಮಣ್ಣಿಗೆ ಸಾರಜನಕ ಲಭ್ಯವಾಗುತ್ತದೆ.

ಈ ಗಿಡ ಸಸ್ಬೆನಿಯಾ ಸಹ ಸಾರಜನಕ ಗಿಡ

 • ಮಣ್ಣಿನಲ್ಲಿ ಮೇಲು ಸ್ಥರದಲ್ಲಿ ಮಾತ್ರ ಹೆಚ್ಚಿನ ಸಾರಜನಕ ಅಂಶ ಇರುತ್ತದೆ.
 • ಕೆಳಗೆ ಹೋದಂತೆ ಅದು ಕಡಿಮೆಯಾಗುತ್ತಾ ಬರುತ್ತದೆ.
 • ಮಣ್ಣಿಗೆ ಮಳೆ ಹನಿ ಬಿದ್ದು, ಅಗೆತ ಮಾಡಿದಾಗ ಸಾರಜನಕ ಯುಕ್ತ ಮೇಲ್ಮಣ್ಣು ನಷ್ಟವಾಗುತ್ತದೆ.
 • ಇದನ್ನು ತಡೆದರೆ ಸಾರಜನಕ ತುಂಬಾ ಉಳಿಯುತ್ತದೆ.
 • ಕೆಲವು ನೈಸರ್ಗಿಕ ಕೃಷಿ ಮಾಡುವವರು ಬೆಳೆ ಉಳಿಕೆಯನ್ನು ಮಣ್ಣಿಗೆ ಹಾಗೆಯೇ ಬಿಡುತ್ತಾರೆ.
 • ಅದು ನಷ್ಟಕ್ಕೊಳಗಾಗದೆ ಉಳಿದರೆ ಅಲ್ಲಿ ಫಸಲು ಚೆನ್ನಾಗಿಯೇ ಬರುತ್ತದೆ.
 • ಅದು ಬೆಳೆಗೆ ಬೇಕಾಗುವ ಪ್ರಮಾಣದ ಸಾರಜನಕ ಮತ್ತು ಇನ್ನಿತರ ಪೋಷಕಾಂಶಗಳನ್ನು ಕೊಡುತ್ತದೆ.

ಮಣ್ಣಿನಲ್ಲಿ ಸೇರಿರುವ ಸಾವಯವ ಅಂಶಗಳೇ ಸಾರಜನಕದ ಆಗರ. ಸಾಧ್ಯವಾದಷ್ಟು ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸಿ ಅವು ನಷ್ಟಕ್ಕೊಳಗಾದಂತೆ ರಕ್ಷಿಸಿದರೆ ಸಾರಜನಕದ ಬಳಕೆ ಕಡಿಮೆ ಮಾಡಬಹುದು. ಬೆಳೆತ್ಯಾಜ್ಯಗಳಲ್ಲಿ ಬರೇ ಸಾರಜನಕ ಮಾತ್ರವಲ್ಲ, ಉಳಿದ ಪೋಷಕಗಳೂ  ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಇರುತ್ತವೆ. ಇವೆಲ್ಲವೂ ಸಸ್ಯಗಳು ಬಳಕೆ ಮಾಡುವ ಸ್ಥಿತಿಯಲ್ಲಿ ಇರುತ್ತವೆ

Leave a Reply

Your email address will not be published. Required fields are marked *

error: Content is protected !!