ಕಾಫೀ ತೋಟಗಳಿಗೆ ಹೂ ಮಳೆ ನೀರಾವರಿ.

ಹೂ ಮಳೆ ಎಂದರೆ ಕಾಫೀ ಹೂ ಮೊಗ್ಗು ಬರುವ ಸಮಯದಲ್ಲಿ ಅಗತ್ಯವಾಗಿ ಬರಲೇ ಬೇಕಾಗುವ ಮಳೆ ಬಾರದಿದ್ದ ಪಕ್ಷದಲ್ಲಿ  ತುಂತುರು ನಿರಾವರಿ ರೂಪದಲ್ಲಿ ಸಸ್ಯಗಳ ಮೇಲ್ಪಾಗಕ್ಕೆ  ಮಳೆಯೋಪಾದಿಯಲ್ಲೇ ನೀರ ಸಿಂಚನ ಮಾಡುವುದಕ್ಕೆ  ಹೂ ಮಳೆ  ಎನ್ನುತ್ತಾರೆ..

  • ಸಾಮಾನ್ಯವಾಗಿ ರೋಬಸ್ಟಾ ತಳಿಯ ಹೂ ಮೊಗ್ಗು ಅರಳುವ ಸಮಯದಲ್ಲಿ ಮಳೆ ಬಂದು ಕೃಪೆ ತೋರುತ್ತದೆ.
  • ಕೆಲವೊಮ್ಮೆ  ಅದು ಕೈ ಕೊಡುತ್ತದೆ.
  • ಆ ಸಮಯದಲ್ಲಿ ವಿಸ್ತಾರವಾದ ಬರೇ ಕಾಫೀ ಗಿಡಗಳು ಮಾತ್ರವಲ್ಲದೆ ಮರಮಟ್ಟುಗಳೂ  ಸದಸ್ಯರಾಗಿರುವ  ಕಾಫೀ ತೋಟಕ್ಕೆ ಕೃತಕ ಮಳೆಯನ್ನು ಸೃಷ್ಟಿಸಲು ಬೇಕಾಗುವುದು ದೈತ್ಯ ಸ್ಪ್ರಿಂಕ್ಲರ್  ಮೂಲಕ ನೀರಾವರಿ.
  • ಇದನ್ನು ರೈನ್ ಗನ್ ನೀರಾವರಿ ಎನ್ನುತ್ತಾರೆ.
  • ಇದು ಮಳೆಯ  ತದ್ರೂಪವಾಗಿರುತ್ತದೆ.

ಯಾಕೆ ಈ ನೀರಾವರಿ:

  • ರೋಬಸ್ಟಾ ಕಾಫೀ ಒಣ ಹವೆಯನ್ನು ತಡೆಯಲಾರದು.
  • ಅರೆಬಿಕಾ ಕಾಫಿ ಗಿಂತ  ರೋಬಸ್ಟಾ ಕಾಫಿಯು  ನೀರಾವರಿಗೆ ಚೆನ್ನಾಗಿ ಸ್ಪಂದಿಸುತ್ತದೆ.
  • ರೋಬಸ್ಟಾ ಕಾಫಿ ಫೆಬ್ರವರಿ ಎರಡನೇ ವಾರದ ತರುವಾಯ ಹೂ ಮೊಗ್ಗು ಬಿಡಲಾರಂಭಿಸುತ್ತದೆ.
  • ಕೊನೇ ವಾರಕ್ಕೆ   ಹೂ ಅರಳುವ ಸಮಯ. ಈ ಸಮಯದಲ್ಲಿ ಮಳೆ ಬರುವುದು ವಾಡಿಕೆ.
  • ಮಳೆ ಬಾರದಿದ್ದರೆ  ನೀರಾವರಿ ಮಾಡದಿದ್ದರೆ  ಒಣ ಹವೆಯ   ಕಾರಣದಿಂದ  ಹೂ ಮೊಗ್ಗು ಅರಳದೆ  ಕರಟಿ ಹೋಗುತ್ತದೆ.
  • ಈ ಸಮಯದಲ್ಲಿ ಮಳೆಯೋಪಾದಿಯಲ್ಲಿ ಬಾರೀ ನೀರಾವರಿ ಮಾಡಿದರೆ ಹೂ ಚೆನ್ನಾಗಿ ಕಚ್ಚಿಕೊಂಡು  ಕಾಯಿ ಚೆನ್ನಾಗಿ ಕಟ್ಟಿಕೊಳ್ಳುತ್ತದೆ.

ಹೊಸ ತೋಟ ಅಥವಾ ನೆಟ್ಟು ಹಚ್ಚು ಸಮಯ ಆಗಿರದ  ಕಾಫೀ ಗಿಡಗಳಿಗೆ  ಈ ಸಮಯದಲ್ಲಿ ನೆಲ ಒಣಗಿರುವುದರಿಂದ ಸಸ್ಯಗಳು ನೀರೊತ್ತಾಯದಿಂದ ಬಹಳ ಸೊರಗಬಹುದು.

  • ಅದಕ್ಕೂ ಸಹ ನೀರಾವರಿ ಅತ್ಯಗತ್ಯ. ಮೊದಲೇ ಹೇಳಿದಂತೆ  ಇದಕ್ಕೆ  ಓವರ್ ಹೆಡ್ ಇರಿಗೇಶನ್ ನಷ್ಟು ಉತ್ತಮ ನೀರಾವರಿ ಬೇರೊಂದಿಲ್ಲ ಎಂಬುದು ಅನುಭವಿ ಬೆಳೆಗಾರರ ಅಭಿಪ್ರಾಯ.

ಹೂ ಮಳೆಯ ಲಾಭಗಳು:

  • ರೈನ್ ಗನ್ ಮೂಲಕ ಕೃತಕವಾಗಿ ಹೂ ಮಳೆ ಒದಗಿಸುವುದರಿಂದ ತೇವಾಂಶ ಒದಗಿಸುವಿಕೆ ಅಲ್ಲದೆ ಹಲವಾರು ಇತರ ಲಾಭಗಳೂ ಇವೆ.
  • ನೆಲ ಒಣಗಿದ್ದು ಆ ಸಮಯದಲ್ಲಿ ಒಂದು ಮಳೆ ಬಂದರೆ ಸಸ್ಯಗಳ ಲವಲವಿಕೆ ಹೆಚ್ಚಳವಾದಂತೆ  ಸ್ಪ್ರಿಂಕ್ಲರ್ ನೀರಾವರಿ ಮಾಡಿದಾಗ ಆಗುತ್ತದೆ.
  • ಈ ಸಮಯದಲ್ಲಿ ಗಿಡ ಚಿಗುರುವ ಸಮಯವಾಗಿದ್ದು, ಗಿಣ್ಣುಗಳ ಸಂಖ್ಯೆ ಹೆಚ್ಚುತ್ತದೆ.
  • ಗಿಣ್ಣುಗಳ ನಡುವಿನ ಅಂತರ ಹೆಚ್ಚುತ್ತದೆ.  ಪಾರ್ಶ್ವ ರೆಕ್ಕೆಗಳ ಬೆಳೆವಣಿಗೆ  ಸಹ ದುಪ್ಪಟ್ತಾಗುತ್ತದೆ.

  • ಎಲೆಗಳ ಮೇಲೆ  ನೀರು ಬಿದ್ದಾಗ ಅದು ಅಲ್ಲೇ ಅಹಾರ ಸಂಗ್ರಹಣೆ ಮಾಡಿ ಎಲೆಗಳ ಗಾತ್ರ ಸಹ ಹೆಚ್ಚುತ್ತದೆ.
  • ನೀರಾವರಿ ಇಲ್ಲದಿದ್ದರೆ  ಚಿಗುರುಗಳು ತುಂಬಾ ಸಣ್ಣದಾಗಿ ಬರುತ್ತದೆ.  ಎಲೆಗಳು ಉದುರುವುದೂ ಇದೆ.

ಕಾಫೀ ಸಸ್ಯ ನಿತ್ಯ ಹರಿದ್ವರ್ಣದ ಸಸ್ಯವಾಗಿದ್ದು, ವರ್ಷದುದ್ದಕೂ ಎಲೆ ಇರುತ್ತದೆ. ಒಣ ಹವೆಯ ಸಮಯದಲ್ಲಿ ನೀರಾವರಿ ಇಲ್ಲದಿದ್ದರೆ  ಗರಿಷ್ಟ ಪ್ರಮಾಣದಲ್ಲಿ ಎಲೆ  ಉದುರುತ್ತದೆ.

  • ಈ ಸಮಯದಲ್ಲಿ ಸಸ್ಯಗಳಿಗೆ ಅಧಿಕ ಪೌಷ್ಟಿಕಾಂಶ ಬೇಕಾಗುತ್ತದೆ.
  • ನೆಲದಲ್ಲಿ  ಪೌಷ್ಟಿಕಾಂಶ ಇದ್ದರೂ ಸಹ ತೇವಾಂಶದ ಕೊರತೆಯಿಂದ ಅದು ದೊರೆಯುವುದಿಲ್ಲ.
  • ರೈನ್ ಗನ್ ನೀರಾವರಿ ಇದನ್ನು ಸರಿಪಡಿಸುತ್ತದೆ.
  • ನೆಲ ತೇವಗೊಂಡು ಪ್ರಾರಂಭದ ಮಳೆಯ ತರಹ ಕೆಲಸ ಮಾಡುತ್ತದೆ.

ನೀರಾವರಿ ಮಾಡದ ತೋಟಗಳಿಗಿಂತ ನೀರಾವರಿ ಮಾಡಿದ್ದರಲ್ಲಿ ಶೇ. 50 ರಿಂದ 75% ತನಕ ಇಳುವರಿ ಹೆಚ್ಚುತ್ತದೆ.

ತಯಾರಿ:

  • ತುಂತುರು ನೀರಾವರಿ ಪ್ರಾರಬಿಸುವ ಸಮಯದಲ್ಲಿ ಸಾಧ್ಯವಾದಷ್ಟು ಅಡ್ದಾದಿಡ್ಡಿ ಬೆಳೆದ ಮರದ ಗೆಲ್ಲುಗಳನ್ನು ತೆಗೆದರೆ ಒಳ್ಳೆಯದು.
  • ಉತ್ತಮ ಗುಣಮಟ್ಟದ ಕೆಲವು ಸ್ವಯಂಚಾಲಿತ ವ್ಯವಸ್ಥೆಗಳುಳ್ಳ ಸ್ಪ್ರಿಂಕ್ಲರ್ ಗಳ ಮೂಲಕ ನೀರಾವರು ಮಾಡಿದರೆ  ಅದು ನೀರನ್ನು ಬೇರೆ ಬೇರೆ ಹಂತಗಳಲ್ಲಿ ಚಿಮುಕಿಸಿ ಏಕ ಪ್ರಕಾರವಾಗಿ ನೆಲವನ್ನು ತೇವ ಗೊಳಿಸುತ್ತದೆ.

ಇತ್ತೀಚೆಗೆ  ಹನಿ ನೀರಾವರಿ ವ್ಯವಸ್ಥೆಗಳು  ಕಾಫೀ ತೋಟದಲ್ಲಿ  ಅಳವಡಿಕೆಯಾಗುತ್ತಿದೆಯಾದರೂ ಹೂವು ಬರುವ ಸಮಯದಲ್ಲಿ ತುಂತುರು ನೀರಾವರಿ ಕೊಡುವ ಪ್ರಯೋಜನವನ್ನು  ಈ ವ್ಯವಸ್ಥೆಗಳು ಕೊಡುತ್ತಿಲ್ಲ.

 
 
 
 
 
 
 

Leave a Reply

Your email address will not be published. Required fields are marked *

error: Content is protected !!