ತೃಣನಾದೆಯಲೋ ಮಾನವಾ.

ಸಮಸ್ತ ಆರ್ಥಿಕ ವ್ಯವಸ್ಥೆಯನ್ನೂ ಕ್ಷಣ ಮಾತ್ರದಲ್ಲಿ ನಾವು ಯಾರೂ ಕಲ್ಪಿಸದ ರೀತಿಯಲ್ಲಿ ಮಟ್ಟ ಹಾಕಿದ್ದು ಪ್ರಕೃತಿಯೇ. ಇನ್ನು ನಾವು ಪ್ರಕೃತಿಯ ಆಜ್ನೆಯಂತೆ ನಡೆಯಬೇಕು. ನಮ್ಮ ಆಟ ಏನೂ ನಡೆಯಲ್ಲ.

  • ಬ್ಯಾಂಕುಗಳಲ್ಲಿ ಹಣ ಇಲ್ಲ. ಜನರ ತಿರುಗಾಟ ಇಲ್ಲ.
  • ಮಾರುಕಟ್ಟೆ ಎಲ್ಲವೂ ಮಲಗಿದೆ. ಅಂಗಡಿ ಬಾಗಿಲುಗಳು ಮುಚ್ಚಿವೆ.
  • ಸಾರಿಗೆಯ ವಾಹನಗಳಿಲ್ಲ. ಎಲ್ಲರೂ ಅವರವರ ಮನೆಯಲ್ಲಿದ್ದಾರೆ.
  • ಇಡೀ ಅರ್ಥ ವ್ಯವಸ್ಥೆಯೇ ಸ್ಥಬ್ದವಾಗಿದೆ. ಇದು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ.

ಸಾಂಕ್ರಾಮಿಕ ರೋಗಗಳು ಕೋಟ್ಯಾಂತರ ರೂ.ಗಳನ್ನು ಬ್ಯಾಂಕಿನಲ್ಲಿಟ್ಟವರನ್ನೂ , ಸಾವಿರಾರು ಎಕ್ರೆ ಭೂಮಿ ಉಳ್ಳ ಜಮೀನುದಾರರನ್ನೂ, ಉನ್ನತ ಹುದ್ದೆಯಲ್ಲಿರುವ ಅಧಿಕಾರಿ,  ರಾಜಕೀಯ ಮುಖಂಡರನ್ನೂ ಅವರ ಸ್ಥಾನ ಮಾನಕ್ಕೆ ಅಂಜಿ ದೂರವಾಗುವುದಿಲ್ಲ. ಇದಕ್ಕೆ ಎಲ್ಲರೂ ಒಂದೇ. 

ಸಮಾಜ ಏನು ಮಾಡುತ್ತಿದೆ?

  • ಅವಿಧ್ಯಾವಂತರ ವಿಚಾರ ಬದಿಗಿರಲಿ. ವಿದ್ಯಾವಂತ ನಾಗರಿಕರೂ ಸಹ ಅನಾಗರೀಕರ ತರಹ  ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುವುದು ಕಾಣಿಸುತ್ತಿದೆ.
  • ಸಮಾಜವೇ ಅಲ್ಲೋಲ ಕಲ್ಲೋಲ ಸ್ಥಿತಿಯಲ್ಲಿರುವಾಗಲೂ ನಮಗೆ ಮದುವೆ, ಮುಂಜಿ, ಸಮಾರಂಭ, ಜಾತ್ರೆ ಗಳ ಹುಚ್ಚು ಅತಿಯಾಗುತ್ತಿದೆ.
  • ನಮ ಜನಕ್ಕೆ ಇನ್ನೂ ಸಹ ಇಂತಹ ಸಾಂಕ್ರಾಮಿಕ ರೋಗಗಳ ಗಂಭೀರತೆ ಅರಿವಿಗೆ ಬಂದಿಲ್ಲ.
  • ಎಲ್ಲವನ್ನೂ ಕ್ಷುಲ್ಲಕವಾಗಿ ತೆಗೆದುಕೊಳ್ಳುತ್ತಿದ್ದೇವೆ.
  • ನಾವು ಉಳಿದರೆ ನಾಳೆಯಾದರೂ ಭೂತದ ಕೋಲ ಮಾಡಬಹುದು.
  • ಜಾತ್ರೆ ಮಾಡಬಹುದು. ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಬಹುದು.


ಇಂಥಹ ಸಂದರ್ಭಗಳಲ್ಲಿ ಈ ಕೆಲಸವನ್ನು ಆದ್ಯತೆಯಲ್ಲಿ ಮಾಡುವುದು ಇಡೀ ಸಮಾಜಕ್ಕೆ ರೋಗದ ಪ್ರಸಾದ ವಿತರಣೆ ಮಾಡುವುದೂ ಒಂದೇ ಆಗಿದೆ.

ಕೃಷಿಕರಿಗೆ ನೇರ ಹೊಡೆತ:

  • ಮೊನ್ನೆ ಯಾರೋ ಸಾಮಾಜಿಕ ಮಾದ್ಯಮದಲ್ಲಿ ಹಳ್ಳಿ – ಕೃಷಿಯಲ್ಲಿ ಕೊರೋನಾ ಭಯವಿಲ್ಲ ಎಂದಿದ್ದರು.
  • ಅದಕ್ಕೆ ಒಬ್ಬರು   ಹಳ್ಳಿಗಳಿಗೆ ಆಗಲೇ  ಕರೋನಾ ಬಂದಾಗಿದೆ ಎಂದೂ ಪ್ರತಿಕ್ರಿಯಿಸಿದ್ದರು.

ಇಂಥಹ ಮಾರುಕಟ್ಟೆ ಅವಕಾಶವೇ ಇಲ್ಲದಾಗಿದೆ

 

  • ನಿಜ ಹಳ್ಳಿಯ ಬದುಕಿಗೆ ಕೊರೋನಾ ಅಂಟಬೇಕಾಗಿಲ್ಲ. ಈಗಲೇ ಇಲ್ಲಿ ಕರೋನಾ ಹೇತು ಹೆಚ್ಚಾಗಿದೆ.
  • ಕಲ್ಲಂಗಡಿ ಬೆಳೆದ ಸಾವಿರಾರು ರೈತರ ಪಾಡು, ಬಾಳೆ ಬೆಳೆದ ರೈತರ ಪಾಡು, ಅನನಾಸು, ಇನ್ನೂ ಹಲವಾರು ತಾಜಾ ಕೃಷಿ ಉತ್ಪನ್ನ ಬೆಳೆದ ರೈತರ ಪಾಡು ರೋಗಕ್ಕಿಂತ ಹೆಚ್ಚಾಗಿದೆ.
  • ಇವರಿಗೆ ಸರಕಾರೀ ಉದ್ಯೋಗದ ಪಗಾರ ಇದ್ದರೆ ಮಾತ್ರ ಉಳಿಯಬಲ್ಲರು.
  • ಹೀಗಾಗಿದೆ ನಮ್ಮ ಹಳ್ಳಿಯ  ಸ್ಥಿತಿ.

ಹಳ್ಳಿಯ ಕೃಷಿಕರ ಪಾಡು ಕಟ್ಟಿ ಸಿದ್ದಮಾಡಿಟ್ಟ ಹೂಮಾಲೆಗಳನ್ನು ಮುಡಿಯುವವರಿಲ್ಲದಂತಾಗಿದೆ.

  • ಇದೂ ಸಾಲದಕ್ಕೇ ಹಳ್ಳಿಗಳಿಗೆ ಮುಂಬಯಿಯ ಜನ ಬಂದಿದ್ದಾರೆ.
  • ಬೆಂಗಳೂರಿನ ಜನ  ಬಂದಿದ್ದಾರೆ.
  • ದುಬೈ, ಹಾಗೆಯೇ ಇನ್ನೂ ಕೆಲವು ಹೊರದೇಶಗಳಿಂದ ಬಂದ ಅತಿಥಿಗಳಿದ್ದಾರೆ.
  • ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ.
ಯಾತ್ರೆಗಳಿಂದ ದೂರವಿರಿ

ನಮಗೆ ಯಾವಾಗ  ತಿಳುವಳಿಕೆ ಬರುವುದೊ?

  • ಒಂದು ದಿನ ಸ್ವಯಂ ಘೋಷಿತ ಕರ್ಫ್ಯೂ ನಡೆದುದು ನಮಗೆಲ್ಲಾ ಗೊತ್ತು.
  • ಇದನ್ನೂ ಕೆಲವು ಅನಾಗರೀಕ ಜನ ಅಪಹಾಸ್ಯ ಮಾಡಿದ್ದುಂಟು.
  • ಈ ಕರ್ಫ್ಯೂ ಹೇರಿದ್ದು ನಮ್ಮ ಬದುಕಿಗೆ ಅನುಕೂಲವಾಗಲಿ ಎಂದೇ ಹೊರತು ಯಾವುದೇ ರಾಜಕೀಯ ಪ್ರೇರಿತ ಅಲ್ಲ.
  • ಲಾಕ್ ಡೌನ್ ಎಂಬ ಆದೇಶ ಇದ್ದಾಗ್ಯೂ ನಾವು ಮನಬಂದಂತೆ ತಿರುಗಾಡುವುದು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲೇ ಹೊರತು ಇನ್ನೇನಕ್ಕೂ ಅಲ್ಲ.
  • ಈಗ ಅಂತಹ ಗಂಭೀರ ಪರಿಸ್ಥಿತಿ ಇಲ್ಲ. ವಾರ ತನಕ ಮನೆಯಲ್ಲಿದ್ದರೂ ಹೊಟ್ಟೆಗೆ  ತೊಂದರೆ ಆಗಲಿಕ್ಕಿಲ್ಲ.
  • ಆದರೆ ಪರಿಸ್ಥಿತಿ ಬಿಗಡಾಯಿಸಿದರೆ ಇದಕ್ಕಿಂತ ಕಠಿಣ ಪರಿಸ್ಥಿತಿ ಉಂಟಾಗಲಿದೆ.

ಸ್ವಯಂ ಸೇವಕರು ಅಥವಾ ಸಿಪಾಯಿಗಳು ಬೇಕಾಗಿದ್ದಾರೆ:

ಮೋಜಿನ ಪ್ರವಾಸಕ್ಕೆ ವಿದಾಯ ಹೇಳಿ
  • ಜನ ಹುಚ್ಚು ಕಟ್ಟಿ ಸುತ್ತಾಡುವುದು, ಜನ ಜಂಗುಳಿ ಉಂಟಾಗುವುದು ಇದನ್ನು ನಿಯಂತ್ರಿಸಲು ಸರಕಾರದ ವ್ಯವಸ್ಥೆಗೆ ಕಷ್ಟ ಸಾಧ್ಯ.
  • ಅದನ್ನು ಸ್ಥಳೀಯರ ಸಹಭಾಗಿತ್ವದಲ್ಲಿ ಮಾತ್ರ ನಿಯಂತ್ರಿಸಲು ಸಾಧ್ಯ.
  • ಸ್ಥಳೀಯ ಸಮಾಜ ಸೇವಾಕಾಂಕ್ಷಿಗಳು ಸ್ವಯಂ ಪ್ರೇರಿತವಾಗಿ ಅಲ್ಲಲ್ಲಿ ಜನರಿಗೆ ತಿಳುವಳಿಕೆ ಹೇಳುವ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಜನ ತಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ವರ್ತಿಸಬಾರದು. ಬಲ್ಲವರಿಂದ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಮನೋಸ್ಥಿತಿ ಇರಬೇಕು. ಆಗ ಎಲ್ಲವೂ ಸರಿಯಾಗುತ್ತದೆ. ನಂಬಿಕೆ ಎಂಬುದು ಅತೀ ಮುಖ್ಯ.

  •   ಪರಿಸರಕ್ಕೂ ಈ ವಿಷಯಕ್ಕೂ ಯಾಕೆ ತಳುಕು ಹಾಕುತ್ತೇವೆ ಎಂದೆಣಿಸದಿರಿ.
  • ಕೊರೋನಾ ಆಗಲಿ ಇನ್ಯಾವುದೇ ಸೂಕ್ಷ್ಮಾಣು ಜೀವಿಗಳಿಂದ ಹರಡುವ ರೋಗ ರುಜಿನಗಳನ್ನು ತರುವ  ರೋಗಾಣು ಯಾವಾಗಲೂ   ಒಂದೇ ರೀತಿ ಇರಬೇಕೆಂದೇನೂ ಇಲ್ಲ.
  • ಅದು ಪ್ರಕೃತಿಯಲ್ಲಿ  ವಾಹಕಗಳ ಮೂಲಕ ಪ್ರಸಾರವಾಗುತ್ತಾ ಮ್ಯುಟೇಶನ್ ಗೆ ಒಳಪಟ್ಟು  ರೂಪಾಂತರ ಹೊಂದಬಹುದು. ಔಷಧೋಪಚಾರಕ್ಕೆ ಸ್ಪಂದಿಸದೆಯೂ ಇರಬಹುದು.
  • ಆದ ಕಾರಣ ವಾಹಕಗಳಿಗೆ ಅವಕಾಶ ಸಿಗದಂತೆ ಮಾಡುವುದೇ ಒಂದು ಉತ್ತಮ ಪರಿಹಾರ.  ಇದಕ್ಕೆ ಮನೆ ಹೊರಗೆ ಬರಬಾರದು ಅಷ್ಟೇ.

ನಮ್ಮ ರೈತರಿಗೆಲ್ಲಾ ಗೊತ್ತಿರುವ ವಿಚಾರವನ್ನು ಇಲ್ಲಿ ಹೇಳ ಬಯಸುತ್ತೇನೆ. ಸಸ್ಯಗಳಿಗೆ ನಂಜಾಣು ರೋಗ ಎಂದರೆ ಅದು ವೈರಸ್ ರೋಗ. ಇದಕ್ಕೆ ಔಷಧಿ ಇಲ್ಲ. ಅದನ್ನು ತೆಗೆದು ಅದರ ವಾಹಕಗಳನ್ನು ನಾಶ ಮಾಡಲು ಕೀಟನಾಶಕ ಬಳಸಲು ಶಿಫಾರಸು  ಮಾಡಲಾಗುತ್ತದೆ. ಅಷ್ಟೆ ಅಲ್ಲದೆ ಆ ಜಾಗವನ್ನ ಸ್ವಚ್ಛ ಗೊಳಿಸಿ ಬೆಳೆ ಉಳಿಕೆಗಳನ್ನು ಅಲ್ಲೆ ರಾಶಿ ಮಾಡಿ ಬೆಂಕಿ ಕೊಟ್ಟು ಸುಡಬೇಕು. ಆ ಜಾಗದಲ್ಲಿ ಮುಂದಿನ ಎರಡು ವರ್ಷ ಯಾವುದೆ ಬೆಳೆ ಬೆಳೆಸಬಾರದು. ಸಸ್ಯಗಳಿಗೆ ಬರುವ ವೈರಸ್ ಖಾಯಿಲೆಗೂ ಮಾನವನಿಗೆ ಬರುವ ವೈರಸ್ ಖಾಯಿಲೆಗೂ ಸಂಬಂಧ ಇರಲಿಕ್ಕಿಲ್ಲ.

ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ತಿಳಿಸಿ:

  • ನೂರಾರು ಕ್ವಿಂಟಾಲು ಅಡಿಕೆ ಇದೆ.
  • ಗಿರಾಕಿಗಳಿಂದ ಕಿಕ್ಕಿರಿದು ವ್ಯಾಪಾರಕ್ಕೆ ಬಿಡುವೇ ಇಲ್ಲ.
  • ಲಂಚ ಕೇಳದಿದ್ದರೂ ಸಿಗುತ್ತದೆ. ಐಷಾರಾಮಿ ಬಂಗಲೆ ಇದೆ.
  • ಆದರೆ ನಮ್ಮ ಈ ಅಷ್ಟ ಐಶ್ವರ್ಯಗಳನ್ನು ಮೆರೆಯಿಸಲು ಅವಕಾಶವೇ ಇಲ್ಲದಿದ್ದರೆ ಅದನ್ನು ಹಿಡಿದುಕೊಂಡು ಏನು ಮಾಡುವುದು.
  • ಅಡಿಕೆ ವ್ಯಾಪಾರ ವರ್ಷ ಗಟ್ಟಲೆ ಬಂದ್ ಆದರೆ, ಅಂಗಡಿಗಳು ತೆರೆಯದಿದ್ದರೆ  ಜನ ಮನೆ ಬಿಟ್ಟು ಹೊರ  ಬರುವುದೇ ವಿರಳವಾದ ಸ್ಥಿತಿ ಉಂಟಾದರೆ ಮಾಡುವುದು ಏನೂ ಎಂಬುದಕ್ಕೆ ಉತ್ತರ ಯಾರಲ್ಲಿದೆಯೋ ಗೊತ್ತಿಲ್ಲ.

ಮಿತಿ ಮೀರಿದರೆ ಏನು ಕಥೆ:

  • ಇಂದು ಮಾನವನಿಗೆ ಕೊರೋನಾ ಸಾಂಕ್ರಾಮಿಕ ರೋಗ ಬಂದಿರಬಹುದು.
  • ನಾಳೆ ಅದು ಉಲ್ಬಣವಾಗಿ ನಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ಕುರಿ, ಹಸುಗಳಿಗೂ ಸೋಂಕು ತಗಲಬಹುದು.
  • ಆದ ಕಾರಣ ಪ್ರಾರಂಭಿಕ ಹಂತದಲ್ಲಿ ಸರ್ವ ಪ್ರಯತ್ನ, ತ್ಯಾಗದಿಂದ ಅದನ್ನು ಹರಡದಂತೆ ತಡೆಯುವುದು ಅಗತ್ಯ.

ಒಂದು ವಾರ ಮನೆಯಲ್ಲಿದ್ದರೆ ರೋಗ ಹರಡುವಿಕೆ ತುಂಬಾ ಕಡಿಮೆಯಾಗಬಹುದು. ಹೀಗೇ ತಿರುಗಾಡುತ್ತಿದ್ದರೆ ಮುಂದೆ ವಾರ ಹೋಗಿ ತಿಂಗಳುಗಟ್ಟಲೆಯೂ ಆಗಬಹುದು. ಇದು ಎಲ್ಲರಿಗೂ ತಿಳಿದಿರಲಿ.

ಡಾ|| ರಾಜೇಶ್ವರಿ ಆರ್ ಹೊಳ್ಳ.
 

Leave a Reply

Your email address will not be published. Required fields are marked *

error: Content is protected !!