ಶುಂಠಿ- ಎಲೆಗೆಳು ಹಳದಿಯಾಗದಂತೆ ತಡೆಯುವ ವಿಧಾನ.

ಬ್ಯಾಕ್ಟೀರಿಯಾ ಸೊರಗು ಬರುವುದು ಮುಖ್ಯವಾಗಿ ಗಡ್ಡೆಗಳಲ್ಲಿ ಸೋಂಕು ಇರುವ ಕಾರಣದಿಂದ. ಗಡ್ಡೆಗಳನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕತೆ ಬೇಕು. ಮಣ್ಣು ಒಮ್ಮೆ ಬೆಳೆ ಬೆಳೆದ ಸ್ಥಳ ಆಗಿರಬಾರದು. ಬಿತ್ತನೆ ಗಡ್ಡೆಯನ್ನು  ಉಪಚರಿಸಿಯೇ ನಾಟಿ ಮಾಡಬೇಕು.

  • ಬ್ಯಾಕ್ಟೀರಿಯಾ ಸೊರಗು ರೋಗವು ಗಿಡವನ್ನು ತಕ್ಷಣಕ್ಕೆ ಸಾಯುವಂತೆ ಮಾಡುವುದಿಲ್ಲ.
  • ಎಲೆ ಹಳದಿಯಾಗುತ್ತಾ ಕೊನೆಗೆ ಸಾಯುತ್ತದೆ.  ಇದು ಬೆಳಯನ್ನು ಏಳಿಗೆಯಾಗಲು ಬಿಡದ ರೋಗ.
  • ಇದು ಸುಡೋಮೋನಾಸ್ ಸೋಲನೇಸಿಯಾರಂ ಎಂಬ  ಬ್ಯಾಕ್ಟೀರಿಯಾ ( ದುಂಡಾಣು) ದಿಂದ ಬರುತ್ತದೆ.
  • ಇದು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಕಂಡು ಬರುವುದು ಜಾಸ್ತಿ.
  • ಮಣ್ಣು ಮತ್ತು ಬೀಜದಿಂದ ಇದು ಬರುವುದು ಜಾಸ್ತಿ.  ಮೊದಲಾಗಿ  ಇದು ಸಸ್ಯದ ಕುತ್ತಿಗೆಯ ಭಾಗಕ್ಕೆ  ಭಾಧಿಸುತ್ತದೆ.
  •   ನಂತರ ಅದು ಬೇರಿಗೆ ಅಥವಾ ಗಡ್ಡೆಗೆ ಪ್ರಸಾರವಾಗುವುದು.

ಕಾಣಿಸುವ ಚಿನ್ಹೆಗಳು:

  • ಮೊದಲಾಗಿ ಒಂದು ಗಡ್ಡೆಯ ತುಂಡನ್ನು ಕೊರೆದು ನೋಡಿ. ಅದರಲ್ಲಿ ನೀರು ಬಂದಂತಹ ಚಿನ್ಹೆ ಇದ್ದರೆ ಅದಕ್ಕೆ  ಬ್ಯಾಕ್ಟೀರಿಯಾ ಸೋಕು ಇದೆ ಎಂದರ್ಥ.
  • ಕೆಲವೊಮ್ಮೆ ಬ್ಯಾಕ್ಟೀರಿಯಾ  ಸಸ್ಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತದೆ.
  • ಗಿಡದ ಕುತ್ತಿಗೆ ಭಾಗದಲ್ಲಿ ನೀರಿನಲ್ಲಿ ನೆನೆಸಿಟ್ಟ ತರಹದ ಮಚ್ಚೆಗಳು  ಕಂಡು ಬಂದರೆ ಈ ಸೋಂಕು ಇರಬಹುದು.
  • ಇದು ಬೀಜದ ಗಡ್ಡೆ ಮೂಲಕ ಬರುವುದು. ರೋಗವು ಕಾಂಡದ ಮೇಲ್ಭಾಗ ಮತ್ತು  ಬೇರಿನ ಕಡೆಗೆ ಇರುತ್ತದೆ.

  • ಕೆಳಭಾಗದ ಎಲೆಗಳು ಸ್ವಲ್ಪ ಜೊಲ್ಲು ಬಿದ್ದು, ಎಲೆಯ ಅಂಚುಗಳಲ್ಲಿ ಮುರುಟಿಕೊಳ್ಳುವಿಕೆ ಇದ್ದರೆ ಅದು ಬ್ಯಾಕ್ಟೀರಿಯಾ ಸೊರಗು ರೋಗ ಇರಬಹುದು.
  • ರೋಗ ಹೆಚ್ಚಾದಂತೆ ಗಿಡದ ಎಲೆ ಹಳದಿಯಾಗಿ ಸೊರಗುತ್ತದೆ. ಗಿಡದ ಕಾಂಡದಲ್ಲಿ ಸ್ವಲ್ಪ ಕಪ್ಪು ಗೀರು ಕಾಣಿಸಿಕೊಳ್ಳುತ್ತದೆ. ಕಾಂಡವನ್ನು ಹಿಚುಕಿದಾಗ ಕೈಗೆ  ಕೀವಿನಂತಹ  ರಸ ಬರುತ್ತದೆ.

ಸಂಶಯ ಇದ್ದರೆ ಇಂತಹ ಗಿಡದ ಕಾಂಡವನ್ನು ಕತ್ತರಿಸಿ ಒಂದು ಗಾಜಿನ ಲೋತದಲ್ಲಿ ಶುದ್ಧ ನೀರು ಹಾಕಿ, ಅದಕ್ಕೆ ನಿಧಾನವಾಗಿ ಇಳಿ ಬಿಟ್ಟರೆ , ಅಥವಾ ಹೈಡ್ರೋಜನ್ ಪೆರಾಕ್ಸೈಡ್ ನ ದ್ರಾವಣದಕ್ಕೆ ತಾಗಿಸಿದರೆ ನೊರೆ ನೊರೆ ಬಂದರೆ ಬ್ಯಾಕ್ಟೀರಿಯಾ ಸೋಂಕು ಇದೆ ಎಂದರ್ಥ.

ಪರಿಹಾರ:

  • ಇದಕ್ಕೆ ಶೇ.1 ರ ಬೋರ್ಡೋ ದ್ರಾವಣವನ್ನು  ಅಥವಾ ಕಾಪರ್ ಆಕ್ಸಿ ಕ್ಲೋರೈಡ್  ದ್ರಾವಣ  2 ಗ್ರಾಂ 1 ಲೀ. ನೀರು) ಸಿಂಪಡಿಸಬೇಕು. ಕಾಂಡ ತೋಯುವಂತೆ ಮಾಡಿದರೆ ಗಡ್ಡೆ ತನಕ ಇಳಿಯುತ್ತದೆ.
  • ಶುಂಠಿ ಬೆಳೆಯುವ ಎಲ್ಲಾ ರೈತರೂ ತಮ್ಮ ಗಿಡ ಹಳದಿಯಾಗಿದೆ ಎಂದು ಕಂಡು ಬಂದರೆ ಈ ಕೆಲವು ವಿಚಾರಗಳ ಅರಿತುಕೊಂಡು ಅದರ ಚಿನ್ಹೆ ಗಮನಿಸಿ ಉಪಚಾರ ಮಾಡಲೇ ಬೇಕು.
  • ಬಿತ್ತನೆ ಗಡ್ಡೆಯನ್ನು 200 ppm ಸಾಂದ್ರತೆಯ ಸ್ಟೆಪ್ಟೋಸೈಕ್ಲಿನ್  ದ್ರಾವಣದಲ್ಲಿ ಅದ್ದಿ ನಂತರವೇ ನಾಟಿ ಮಾಡಬೇಕು. ಶುಂಠಿ ಬೀಜಗಳನ್ನು ರೋಗ ಇಲ್ಲದ ಖಾತ್ರಿಯ ಮೂಲದಿಂದಲೇ ತರಬೇಕು.
  • ನೆಲವನ್ನು ಸಿದ್ದಪಡಿಸುವಾಗ ಒಮ್ಮೆ ಉಳುಮೆ ಮಾಡಿ,  ಸಾವಯವ ತ್ಯಾಜ್ಯಗಳನ್ನು ಹಾಕಿ ಸುಡುವುದರಿಂದ ಬ್ಯಾಕ್ಟೀರಿಯಾ ಅಲ್ಲದೆ ಜಂತು ಹುಳುಗಳೂ ಸಹ ನಾಶವಾಗುತ್ತದೆ.
  • ಜಂತು ಹುಳ ನಾಶಕ್ಕೆ ನೆಡುವ ಪಾತಿಗೆ  ಪಾಲಿಥೀನ್ ಶೀಟು ಹೊದಿಸುವುದು ಉತ್ತಮ. ಕಳೆಯೂ ಬರಲಾರದು.
  • ಬ್ಯಾಕ್ಟೀರಿಯ ಸೋಂಕು ಕಂಡು ಬಂದ ಹೊಲದ ಯಾವುದೇ ಬೀಜಗಳನ್ನು ಬಿತ್ತನೆಗೆ ಬಳಕೆ ಮಾಡಬಾರದು.

ಈ ವರ್ಷ ಬಹಳಷ್ಟು ರೈತರು ಶುಂಠಿಯನ್ನು ಬೆಳೆಸಿದ್ದಾರೆ. ಬೆಳೆಸುವ ಅವಸರದಲ್ಲಿ ಬಿತ್ತನೆ ಗಡ್ಡೆಯನ್ನು ಪರಾಮರ್ಶಿಸಲೂ ಹೋಗದೆ ನಾಟಿ ಮಾಡಿದ ಕಾರಣ  ಕೆಲವು ಕಡೆ ಈ ರೋಗ ಕಂಡು ಬಂದಿದೆ. ಪ್ರಾರಂಭಿಕ ಹಂತದಲ್ಲಿ ಇದನ್ನು ಗುರುತಿಸಿ ಮೇಲಿನ ನಿರ್ವಹಣೆಯನ್ನು ಮಾಡಿಕೊಳ್ಳಿ.

 

Leave a Reply

Your email address will not be published. Required fields are marked *

error: Content is protected !!