ಕೆಸು Colocasia or Taro ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಇದರಲ್ಲಿ ನೂರಾರು ವಿಧಗಳಿದ್ದು, ಕೆಲವೇ ಕೆಲವು ಅಡುಗೆ ಉದ್ದೇಶಕ್ಕೆ ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ ಹುಟ್ಟಿದರೆ ಅದನ್ನು ನಿರ್ನಾಮ ಮಾಡಲು ಸಾಧ್ಯವೇ ಆಗುವುದಿಲ್ಲ. ಇದನ್ನು ನಿರ್ನಾಮ ಮಾಡುವುದು ಎಂದರೆ ಅದು ಭಗೀರಥ ಪ್ರಯತ್ನ ಎಂದೇ ಹೇಳಬಹುದು. ಇದು ಕಳೆಯಾಗಿ ಕಂಡರೂ ಅದು ಬೆಳೆಯುವುದು ಮಾತ್ರ ಫಲವತ್ತಾದ ಮಣ್ಣಿನಲ್ಲಿ ಎಂಬುದು ಇಲ್ಲಿ ಉಲ್ಲೇಖನೀಯ.
ಒಳ್ಳೆಯವರಿಗೆ ಕಾಲವಿಲ್ಲ ಎಂಬ ಹಿರಿಯರ ಮಾತಿದೆ. ಅದೇ ಪ್ರಕಾರ ಇದರಲ್ಲಿ ಕೆಲವು ಉತ್ತಮ ಗುಣದ ಅಂದರೆ ತುರಿಕೆ ರಹಿತವಾದ ತಳಿಗಳಿವೆ. ಅವುಗಳು ಬೇಗ ಅಳಿಯುತ್ತವೆ. ಯಾವುದಕ್ಕೂ ಉಪಯೋಗ ಇಲ್ಲದ ಕೆಲವು ತಮ್ಮ ಸಂತತಿಯನ್ನು ರಕ್ತಬೀಜಾಸುರನಂತೆ ಹೆಚ್ಚಿಸಿಕೊಳ್ಳುತ್ತವೆ. ಇದರ ಗಡ್ಡೆಯ ಒಂದು ತುಂಡು ನೆಲಸ್ಪರ್ಶಿಸಿಕೊಂಡರೂ ಅದು ಬದುಕುತ್ತದೆ. ಹಾಗಾಗಿ ಅದನ್ನು ಅಳಿಸಲು ಬಹಳ ಪ್ರಯಾಸ ಪಡಬೇಕಾಗುತ್ತದೆ.ನಮ್ಮ ಸುತ್ತಮುತ್ತ ಬೇರೆ ಬೇರೆ ತರಹ ಬೆಳೆಯುವ ಕೆಸುಗಳನ್ನು ಕಾಣಬಹುದು. ಅದರಲ್ಲಿ ಕೆಲವು ಗಡ್ಡೆಹೊಂದಿದವುಗಳು, ಮತ್ತೆ ಕೆಲವು ಹುಸಿ ಬೇರುಗಳನ್ನು ಬೆಳೆಸುವವುಗಳು ಇನ್ನು ಕೆಲವು ಗಡ್ಡೆ ಮತ್ತು ಹುಸಿ ಬೇರು ಎರಡನ್ನು ಹೊಂದಿರುವವುಗಳಿವೆ. ಕೆಲವು ಅಲಂಕಾರಿಕ ಕೆಸುಗಳಿದ್ದು ಅವು ಬಳ್ಳಿ ತರಹ ಬೆಳೆದು ಪ್ರತೀ ಗಂಟಿನಲ್ಲೀ ಬೇರು ಬಿಡುತ್ತವೆ. ಅಲ್ಲಿ ಮತ್ತೆ ಮೊಳಕೆ ಬಿಟ್ಟು ಸಸಿಯಾಗುತ್ತದೆ. ಇಲ್ಲಿ ಸಂಬೋಧಿಸಲಾದ ಹುಸಿ ಬೇರು ಎಂದರೆ ಬೇರಿನ ತರಹ ಕಾಣುವಂತದ್ದಾದರೂ ನೈಜ ಬೇರು ಬೇರೆ ಇರುತ್ತದೆ. ಅದು ನೆಲದಲ್ಲಿ ಸ್ವಲ್ಪ ಆಳಕ್ಕೆ ಇಳಿದು ಅಲ್ಲಿನ ಸಾರವನ್ನು ಸಸ್ಯಕ್ಕೆ ಸರಬರಾಜು ಮಾಡುತ್ತವೆ. ಹುಸಿ ಬೇರು ಎಂದರೆ ಬೇರಿನ ತರಹವೇ ಇದ್ದರೂ ಅದು ಬೇರಾಗಿರದೆ ಅದರ ಮೂಲಕ ಅವು ಸಂತಾನಾಭಿವೃದ್ದಿ ಹೊಂದುತ್ತವೆ.
- ಕೆಸು ಎಂಬುದು ತೇವಾಂಶ ಹೆಚ್ಚು ಇರುವ ಪ್ರದೇಶದಲ್ಲಿ ಬೆಳೆಯುವ ತಂಪು ವಾತಾವರಣ ಅಪೇಕ್ಷಣೀಯ ಸಸ್ಯ ಎಂದೇ ಹೇಳಬಹುದು.
- ಬರೇ ತೇವಾಂಶ ಮಾತ್ರವಲ್ಲ ಫಲವತ್ತಾದ ಮೇಲ್ಮಣ್ಣು ಸಹ ಅದನ್ನು ಹುಲುಸಾಗಿ ಬೆಳೆಯಲು ಸಹಕರಿಸುತ್ತದೆ.
- ಬರದ ಸನ್ನಿವೇಶದಲ್ಲಿ ತನ್ನ ಬೆಳವಣಿಗೆಯನ್ನು ನಿಲ್ಲಿಸಿ ಸುಪ್ತವಾಗಿ ಇರುತ್ತದೆ.
- ತೇವಾಂಶ ಸಿಕ್ಕಿದ ತಕ್ಷಣ ಅದು ಮತ್ತೆ ಬೆಳೆಯಲಾರಂಭಿಸುತ್ತದೆ.
- ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರ ಜೊತೆಗೆ ಇದರ ಸಸ್ಯಗಳು ತಲೆ ಎತ್ತುತ್ತವೆ.
- ಮಳೆ ಮುಗಿಯುವ ತನಕ ಹುಲುಸಾಗಿ ಬೆಳೆಯುತ್ತವೆ.
- ಜೌಗು ಪ್ರದೇಶಗಳಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯುತ್ತಾ ಇರುತ್ತದೆ.
- ಆದರೆ ಇದರ ಎಲೆಗೆ ತಂಪಾದ ವಾತಾವರಣ ಅವಶ್ಯಕ.
- ವಾತಾವರಣ ಬಿಸಿಯಾದಾಗ ( ಬಿಸಿಲು ಕಾಲ) ಎಲೆಗಳು ಒಣಗಲಾರಂಭಿಸುತ್ತವೆ.
- ಆದರೆ ಅದರ ಬುಡಭಾಗ ಜೀವಂತವಾಗಿರುತ್ತದೆ.
- ಇದರ ಜೀವ ಇರುವುದು ಅದರ ಕಾಂಡದಲ್ಲೂ ಅಲ್ಲ.
- ಎಲೆಯಲ್ಲೂ ಅಲ್ಲ. ಗಡ್ಡೆ, ಮತ್ತು ಹುಸಿ ಬೇರುಗಳಲ್ಲಿ.
- ಅವು ಅನುಕೂಲ ಸಿಕ್ಕಾಗ ಬೆಳವಣಿಗೆ ಹೊಂದುತ್ತವೆ.
- ಹಾಗಾಗಿ ಎಲೆ ದಂಟು ಇವುಗಳನ್ನು ಎಷ್ಟೇ ಸವರಿದರೂ, ಬೆಂಕಿ ಕೊಟ್ಟರೂ ಗಡ್ಡೆ ಸಾಯದೆ ಇದ್ದರೆ ಅದು ಬದುಕುತ್ತದೆ.
- ಗಡ್ಡೆ ವರ್ಷದಿಂದ ವರ್ಷಕ್ಕೆ ಹಿರಿದಾಗಿ ಸಸ್ಯವು ಪುಷ್ಟಿಯಾಗಿ ಬೆಳೆಯುತ್ತದೆ.
ಕೆಸು ಯಾಕೆ ಹುಲುಸಾಗಿ ಬೆಳೆಯುತ್ತದೆ?
- ಇದರ ಸಸ್ಯಕ್ಕೆ ತಾಯಿ ಬೇರು ಎಂಬುದು ಇಲ್ಲ. ಎಲ್ಲವೂ ಮೇಲ್ಭಾಗದಲ್ಲಿ ಹಬ್ಬುವ ಬೇರುಗಳು.
- ಅವು ವಾತಾವರಣ ದಲ್ಲಿ ಉಷ್ಣಾಂಶ ಹೆಚ್ಚಾಗಿರುವಾಗ ಎಲೆ ಮತ್ತು ಕಾಂಡದ ಬೆಳವಣಿಗೆ ನಿಂತು ಅದು ಸತ್ತೇ ಹೋಗುತ್ತದೆ.
- ಆದರೆ ಗಡ್ಡೆ ಸುಪ್ತಾವಸ್ಥೆಯಲ್ಲಿ ಇರುತ್ತದೆ.
- ಯಾವುದೇ ಒಂದು ಸಸ್ಯ ವರ್ಗ ಸುಪ್ತಾವಸ್ಥೆಯಲ್ಲಿದ್ದುದು ಅದರಿಂದ ಬಿಡುಗಡೆ ಆಗುವಾಗ ಶಕ್ತಿಶಾಲಿಯಾಗಿ ಬೆಳೆಯುತ್ತದೆ.
- ಎಲೆ ಉದುರಿಸುವ ಸಸ್ಯಗಳೂ ಸಹ ಹಾಗೆಯೇ.
- ಕುಂಭ ಮಾಸದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಮೊಳೆಯಲು ಪ್ರಾರಂಭಿಸುತ್ತದೆ.
- ಅಲ್ಪ ಸ್ವಲ್ಪ ಮಳೆಯೂ ಅವುಗಳ ಬೆಳವಣಿಗೆಗೆ ಸಾಕಾಗುತ್ತದೆ.
- ಮೊದಲೇ ಹೇಳಿದಂತೆ ಅವು ಕಡೆ ಮೆಕ್ಕಲು ಮಣ್ಣು ಹೆಚ್ಚಾಗಿರುವ ಕಾರಣ ಅವು ಹುಲುಸಾಗಿ ಬೆಳೆಯುತ್ತದೆ.
- ಇವುಗಳ ಬೇರು ವ್ಯವಸ್ಥೆಯು ತನ್ನ ಸುತ್ತ ಮೆಕ್ಕಲು ಮಣ್ಣನ್ನು ತಂಗುವಂತೆ ಮಾಡುತ್ತದೆ.
- ಹಾಗಾಗಿ ಹುಲುಸಾಗಿ ಬೆಳೆಯುತ್ತದೆ. ಮೊದಲು ಒಂದು ನಂತಹ ಹೆಚ್ಚು ಹೆಚ್ಚು ಎಲೆಗಳು, ಕಂದುಗಳು ಬಂದು ಕೊಚ್ಚಿ ಹೋಗುವ ಮೆಕ್ಕಲು ಮಣ್ಣನ್ನು ತಡೆಯುತ್ತದೆ.
- ಹಾಗಾಗಿ ಅವು ವೇಗವಾಗಿ ಬೆಳೆಯುತ್ತದೆ. ಇದರ ಎಲೆ, ಮತ್ತು ಕಾಂಡದಲ್ಲಿ 90% ಕ್ಕೂ ಹೆಚ್ಚು ನೀರು ಇರುವ ಕಾರಣ ಇದರ ಬೆಳವಣಿಗೆಗೆ ನೀರೇ ಆಧಾರ.
ಕೆಸುವಿನ ಸಂತಾನಾಭಿವೃದ್ದಿ ಹೇಗೆ:
- ಕೆಸುವು ತನ್ನ ಹುಸಿ ಬೇರುಗಳು ಮತ್ತು ಗಡ್ಡೆಯ ಮೂಲಕ ವಂಶಾಭಿವೃದ್ದಿ ಮಾಡುತ್ತವೆ.
- ಬಳ್ಳಿಕೆಸು ಎಂದು ಕರೆಯಲ್ಪಡುವ ಒಂದು ವಿಧ ತನ್ನ ಬುಡದಲ್ಲಿ ಬಳ್ಳಿ ತರಹ ಹುಸಿ ಬೇರುಗಳನ್ನು ಬೆಳೆಸುತ್ತದೆ.
- ಅದು ನೆಲದ ಮೇಲೆಯೇ ಹರಿದುಕೊಂಡು ಅನುಕೂಲ ಇದ್ದರೆ 1-2 ಮೀಟರು ತನಕವೂ ಬೆಳೆಯುತ್ತದೆ.
- ಇದರಲ್ಲಿ ಸುಮಾರು ½ ಅಡಿಗೆ ಒಂದರಂತೆ ಗಂಟುಗಳಿದ್ದು ಅವು ಮಣ್ಣಿಗೆ ತಾಗಿದಲ್ಲಿ ಬೇರನ್ನೂ ಬಿಡುತ್ತದೆ.
- ಹುಸಿ ಬೇರಿನ ತುದಿಯು ಕೊನೆಗೆ ಸಸಿಯಾಗಿ ಬೆಳೆಯುತ್ತದೆ.
- ಗಂಟುಗಳಲ್ಲೂ ಅನುಕೂಲ ಇದ್ದರೆ ಸಸಿಗಳಾಗುತ್ತದೆ.
- ಕೆಲವು ವಿಧಗಳು ಹುಸಿ ಬೇರನ್ನು ಬಿಡುವುದಿಲ್ಲ. ಅವುಗಳ ಬೇರುಗಳು ಗಡ್ಡೆಯ ಮೂಲಕ ಬೆಳೆಯುತ್ತದೆ.
- ಈ ಗಡ್ಡೆಯ ಒಂದು ಚೂರು ಬೇರ್ಪಟ್ಟರೂ ಅದು ನೆಲದ ಸಂಪರ್ಕಕ್ಕೆ ಬಂದಾಗ ಮೊಳಕೆ ಒಡೆದು ಸಸಿಯಾಗುತ್ತದೆ.
- ಮುಂಡಿ ಜಾತಿಯವುಗಳಲ್ಲಿ ಅವುಗಳ ಗಡ್ಡೆಚೂರುಗಳ ಮೂಲಕ ಸಂತಾನಾಭಿವೃದ್ದಿ ಆಗುವುದು ಜಾಸ್ತಿ.
- ಹೆಚ್ಚಾಗಿ ಇದರ ಗಡ್ಡೆಯನ್ನು ಹೆಗ್ಗಣಗಳು, ಮುಳ್ಳು ಹಂದಿಗಳು ತಿನ್ನುತ್ತವೆ.
- ತಿನ್ನುವಾಗ ಅದರ ಚೂರುಗಳು ಬಿದ್ದಲ್ಲೆಲ್ಲಾ ಸಸಿಯಾಗುತ್ತದೆ.
- ಗಡ್ಡೆಯ ಪ್ರತೀ ತುಂಡಿನಲ್ಲೂ ಸುಪ್ತಾವಸ್ತೆಯಲ್ಲಿ ಮೊಳಕೆಗಳಿರುತ್ತವೆ.
- ಈ ಮೊಳಕೆಗಳು ತಾಯಿ ಗಡ್ಡೆಯಿಂದ ಬೇರ್ಪಟ್ಟಾಗ ತನ್ನ ಉಳಿವಿಗಾಗಿ ಮೊಳಕೆ ಒಡೆದು ಸಸಿಯಾಗುತ್ತದೆ.
- ಕೆಲವು ವಿಧಗಳು ಹೂ ಬಿಡುತ್ತವೆ. ಅದರ ಮೂಲಕ ಸಸಿಯಾಗುವುದು ತುಂಬಾ ಕಡಿಮೆ.
- ಇದರಲ್ಲಿ ಬೀಜಗಳಾಗುವುದು ಅಪರೂಪ.
ಕೆಸುವಿನ ನಿರ್ಮೂಲನೆ ಹೇಗೆ:
- ಕೆಸುವು ಯಾವುದೇ ಕಳೆ ನಾಶಕಕ್ಕೆ ಬಗ್ಗುವುದಿಲ್ಲ.
- ಅಂಟನ್ನು ಸೇರಿಸಿ ಅಧಿಕ ಸಾಂದ್ರತೆಯಲ್ಲಿ ಸಿಂಪಡಿಸಿದಾಗ ಸಾಯುವುದು ಇದೆ.
- ಆದರೆ ಪೂರ್ತಿ ನಿರ್ನಾಮ ಮಾಡಲಿಕ್ಕೆ ಕಷ್ಟವಾಗುತ್ತದೆ.
- ಹೆಚ್ಚಾಗಿ ಅವುಗಳು ಬೆಳೆಗಳ ಬುಡದಲ್ಲೇ ಇರುವ ಕಾರಣ ಕಳೆ ನಾಶಕಗಳನ್ನು ಸಿಂಪಡಿಸಿದರೆ ಬೆಳೆಗೆ ತೊಂದರೆ ಆಗುತ್ತದೆ.
- ಕಿತ್ತು ತೆಗೆದರೆ ಅವು ನಾಶವಾಗುತ್ತದೆ ಎಂಬುದು ಸರಿಯಲ್ಲ.
- ಕೀಳುವಾಗ ಅದರ ಬೇರು ತುಂಡುಗಳು ನೆಲದಲ್ಲಿ ಉಳಿಯುತ್ತದೆ. ಹಾಗಾಗಿ ಅದು ನಾಶವಾಗುವುದಿಲ್ಲ.
- ಕಿತ್ತು ತೆಗೆಯುವುದು ಒಂದೇ ಇದರ ನಿರ್ಮೂಲನೆಗೆ ದಾರಿ.
- ಇದನ್ನು ಕೀಳುವಾಗ ಅದನ್ನು ಕೈಯಿಂದ ಎಳೆದು ಕಿತ್ತರೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತದೆ.
- ಹಾಗಾಗಿ ಅಗೆಯುವ ಸಾಧನಗಳ ಸಹಾಯದಿಂದ ಗಡ್ಡೆ ಸಮೇತ ತೆಗೆಯಬೇಕು.
- ಒಂದು ಚೂರೂ ಬೇರು ಉಳಿಯಲು ಬಿಡಬಾರದು. ಕಿತ್ತ ಗಡ್ಡೆ ಮತ್ತು ಬೇರುಗಳನ್ನು ಮಾತ್ರ ಕತ್ತರಿಸಿ ಅದರ ಎಲೆ ದಂಟನ್ನು ತೋಟದಲ್ಲಿ ಹಾಕಬಹುದು.
- ಅದು ಹುಟ್ಟಿಕೊಳ್ಳುವುದಿಲ್ಲ. ಕೀಳುವ ಸಮಯದಲ್ಲಿ ತೋಟದಲ್ಲಿ ತೆಘಿನ ಸಿಪ್ಪೆ, ಅಡಿಕೆ ಸಿಪ್ಪೆ, ಗರಿ ಗಳನ್ನು ರಾಡಿ ಹಾಕಿ ಅದಕ್ಕೆ ಬೆಂಕಿ ಕೊಟ್ಟು ಅದರಲ್ಲಿ ಹಾಕಿ ಸುಡಬೇಕು.
- ಬೇರೆ ಕಡೆ ಹಾಕಿದರೆ ಅಲ್ಲಿ ಹುಟ್ಟಿಕೊಳ್ಳುತ್ತದೆ. ಕೆಸುವಿನ ಗಡ್ಡೆ ಎಂತಹ ಬಿಸಿಲಿಗೂ ಸಾಯಲಾರದು.
- ಅದರಲ್ಲಿ ಅಂತಹ ಶಕ್ತಿ ಇದೆ. ತೋಟದಲ್ಲಿ ಆಲ್ಲಲ್ಲಿ ಸಣ್ಣ ಸಣ್ಣ ಸುಡುವ ವ್ಯವಸ್ಥೆಗಳನ್ನು ಮಾಡಿಕೊಂಡರೆ ಅನುಕೂಲ.
- ಈ ರೀತಿ ಸುಡುವುದು ಹೊಗೆ ಹಾಕುವುದರಿಂದ ಬೆಳೆ ಸಸ್ಯಗಳ ಬೆಳವಣಿಗೆಗೆ ಅನುಕೂಲವೂ ಇದೆ.
- ಈ ಕಳೆಯ ಸಸ್ಯಗಳನ್ನು ನಿರ್ಮೂಲನೆ ಮಾಡಲು ಸೂಕ್ತ ಕಾಲ ಮಳೆಗಾಲದ ಪ್ರಾರಂಭದ ಸಮಯ.
- ಈ ಸಮಯದಲ್ಲಿ ಅವುಗಳ ಬೇರುಗಳು ಹೆಚ್ಚು ಉದಕ್ಕೆ ಬೆಳೆದಿರುವುದಿಲ್ಲ.
- ಬರೇ ಒಮ್ಮೆ ತೆಗೆದರೆ ಸಾಲದು. ಎಡೆಯಲ್ಲಿ ಮತ್ತೊಮ್ಮೆ ತೆಗೆಯಬೇಕು.
- ಹೀಗೆ ಮಾಡುವುದರಿಂದ ಮಾತ್ರ ಇದರ ನಿಯಂತ್ರಣ ಸಾಧ್ಯ.
ಬಹಳಷ್ಟು ಕೃಷಿಕರು ಕೆಸುವಿನ ಸಸ್ಯವನ್ನು ಮಳೆಗಾಲದಲ್ಲಿ ಕಿತ್ತು ಹರಿಯುವ ನೀರಿಗೆ ಬಿಡುತ್ತಾರೆ. ಇದು ನಮ್ಮ ಕೆಟ್ಟ ಬುದ್ಧಿ ಎಂದೇ ಹೇಳಬಹುದು. ಇದು ಬೇರೆಯವರ ಹೊಲದಲ್ಲಿ ಸೇರಿಕೊಳ್ಳುತ್ತದೆ. ಹಾಗೆಯೇ ನೀರು ಹರಿಯುವ ತೋಡುಗಳನ್ನು ಮೋರಿಗಳಲ್ಲಿ ನೀರಿನ ಹರಿವಿಗೆ ತೊಂದರೆ ಉಂಟುಮಾಡುತ್ತದೆ. ಅದರ ಬದಲಿಗೆ ಸುಡುವುದು ಉತ್ತಮ. ಸುಟ್ಟಾಗ ಅದರ ಬೂದಿ ನಮಗೆ ಗೊಬ್ಬರವಾಗಿ ಸಿಗುತ್ತದೆ. ಇದರ ಗಡ್ಡೆಯ ಬುಡದಲ್ಲಿ ಇರುವ ಮೆಕ್ಕಲು ಮಣ್ಣು ಫಲವತ್ತಾದ ಕಾರಣ ಅದನ್ನು ನೀರಿನಲ್ಲಿ ಬಿಟ್ಟು ನಷ್ಟಮಾಡಿಕೊಳ್ಳಬೇಡಿ.