ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆ ಸಿಂಗಾರ

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು.

ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ, ರೋಗ ನಾಶಕ ಹಾಗೂ ಪೋಷಕಾಂಶಗಳ ಸಿಂಪರಣೆ  ಪ್ರಾರಂಭಿಸಿದ್ದೇವೆ. ನೆರೆಯವರು ಸಿಂಪಡಿಸಿದರು ಎಂದು ನಾವು ಸಿಂಪಡಿಸುತ್ತೇವೆ. ಅಂಗಡಿಯವರು ಹೇಳಿದರು ಎಂದು ಸಿಂಪರಣೆ ಮಾಡುತ್ತೇವೆ. ಸಲಹಾಕಾರರು ಹೇಳಿದರು ಎಂದು ಸಿಂಪಡಿಸುತ್ತೇವೆ. ಆದರೆ ನಮಗೆ ನಿಜವಾಗಿಯೂ ಯಾವುದನ್ನು ಯಾವಾಗ ಸಿಂಪಡಿಸಬೇಕು ಎಂಬುದರ ಬಗ್ಗೆ ಕೆಲವರಿಗೆ ಗೊತ್ತೇ ಇಲ್ಲ.

ಡಾ. ವಿನಾಯಕ ಹೆಗಡೆಯವರು.

ಅಡಿಕೆ ಮರದ ಸಿಂಗಾರದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಇರುತ್ತವೆ. ಒಂದು ಹೂ ಗೊಂಚಲಿನಲ್ಲಿ ಲಕ್ಷಕ್ಕೆ ಹತ್ತಿರ ಗಂಡು ಹೂವುಗಳು ಇರಬಹುದು. ಸುಮಾರು 500 ಕ್ಕೂಮಿಕ್ಕಿ  ಹೆಣ್ಣು ಹೂವುಗಳು  ಇರಬಹುದು. (ಹೂ ಗೊಂಚಲಿನ ಗಾತ್ರವನ್ನು ಅವಲಂಭಿಸಿ) ಹಾಳೆ ಎಂಬ ರಕ್ಷಾಕವಚ ಬಲಿತು ಉದುರಿದ ತರುವಾಯ ನಮಗೆ ಹೂ ಗೊಂಚಲು ಕಾಣಿಸುತ್ತದೆ. ಈ ಹೂ ಗೊಂಚಲಿಗೆ ಒಂದು ರಕ್ಷಾಕವಚ ಇರುತ್ತದೆ. ಇದು ಕೆಲವೊಮ್ಮೆ ಹಾಳೆ ಎಂಬ ರಕ್ಷಾ ಕವಚ ಉದುರಿದ ಮರುದಿನವೇ ಒಡೆದುಕೊಳ್ಳಬಹುದು. ನಾಲ್ಕಾರು ದಿನಗಳ ತರುವಾಯವೂ ಒಡೆದುಕೊಳ್ಳಬಹುದು. ಸಾಮಾನ್ಯವಾಗಿ ಹಾಳೆ ಸ್ವಲ್ಪ ಬೇಗ ಬಲಿತು ಉದುರಿದ್ದರೆ, ಒಳಗಿನದ ಹೂ ಗೊಂಚಲು ಪಕ್ವವಾಗುವಷ್ಟು ಬಲಿತಿರದಿದ್ದರೆ ಒಂದು ವಾರದ ತನಕವೂ ಹೂ ಗೊಂಚಲಿನ ರಕ್ಷಾ ಪೊರೆ ಬಿಚ್ಚಿಕೊಳ್ಳುವುದಿಲ್ಲ.ಸಹಜವಾಗಿ ಬಿಚ್ಚಿಕೊಂಡ ಮರುದಿನ ಅಥವಾ ಅದೇ ದಿನದಿಂದ ಗಂಡು ಹೂವು ಅರಳಿ ಸುಮಾರು ಒಂದು ದಿನ ಕಾಲ ಅಲ್ಲೇ ಇದ್ದು ನಂತರ ಉದುರುತ್ತದೆ. ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗಂಡು ಹೂವುಗಳು ಅರಳಿ ಉದುರುತ್ತಾ ಸುಮಾರು 15-20 ದಿನದಲ್ಲಿ ಪೂರ್ತಿಯಾಗಿ ಅರಳಿ ಖಾಲಿಯಾಗುತ್ತದೆ. ಆ ನಂತರ ಹೂ ಗೊಂಚಲಿನಲ್ಲಿ ಹೂವನ್ನು ಧರಿಸಿದ ಕಡ್ಡಿ ಮತ್ತು ಹೆಣ್ಣು ಹೂವು ಮಾತ್ರ ಉಳಿಯುತ್ತದೆ. ಇದು ಪರಾಗಸ್ಪರ್ಶ ಆಗಿ  ಫಲಿತಗೊಂಡ ನಂತರ ಉಳಿಯುವುದು ಮಾತ್ರ ನಮ್ಮ ಪಾಲಿನ ಫಸಲು.

ಪುಷ್ಪ ಮಂಜರಿಯ ಡೈ ಬ್ಯಾಕ್
ಪುಷ್ಪ ಮಂಜರಿಯ ಡೈ ಬ್ಯಾಕ್

ಸಿಂಗಾರಕ್ಕೆ ಸಿಂಪರಣೆ ಯಾಕೆ ಬೇಕು:

 • ಅಡಿಕೆ ಮರದ ಸಿಂಗಾರ (ಹೂ ಗೊಂಚಲು) ಅರಳಿ ಕೆಲವು ದಿನಗಳು ಕಳೆದ ನಂತರ ನಾವು ಮರದ ಬುಡ ನೋಡಿದಾಗ ಬುಡದಲ್ಲಿ ರಾಶಿ ರಾಶಿ ಮಿಡಿಗಳು ಉದುರಿದ್ದು ಕಂಡು ಬರುತ್ತದೆ.
 • ಮೇಲೆ ಹೂ ಗೊಂಚಲನ್ನು ನೋಡುವಾಗ ಅರಳುವಾಗ ಮುತ್ತಿನಂತೆ ಒತ್ತೊತ್ತಾಗಿ ಜೋಡಿಸಿದಂತಿದ್ದ  ಹರಳು ಅಥವಾ ಮಿಡಿಗಳ ಸಂಖ್ಯೆ ವಿರಳವಾಗಿ ಖಾಲಿ ಹೂಗೊಂಚಲು ಕಾಣಿಸುತ್ತದೆ.
 • ಆಗ ನಮಗೆ ಬೇಸರವಾಗಿ ಏನು ಮಾಡುವುದು ಎಂದು ಯಾರಲ್ಲಿಯಾದರೂ ಸಲಹೆ ಕೇಳುತ್ತೇವೆ.
 • ಯಾರ ತೋಟದಲ್ಲಿ ಫಸಲು ಚೆನ್ನಾಗಿರುತ್ತದೆಯೋ ಅವರ ಕೃಷಿ ಗುಟ್ಟನ್ನು ತಿಳಿದು ಅದರಂತೆ ನಾವೂ ಮಾಡುತ್ತೇವೆ.
 • ಮಿಡಿ ಉದುರಿದೆ. ಈಗ ಒಂದು ಸಿಂಪರಣೆ ಆಗಬೇಕು.
 • ಯಾವುದು, ಅಂಗಡಿಯವನು ಹೇಳುತ್ತಾನೆ. ಇವೆರಡನ್ನೂ ಸೇರಿಸಿ ಹೊಡೆಯಿರಿ ಎಂದು.
 • ನಾವು ಅದನ್ನು ಯಥಾವತ್ ಪಾಲಿಸುತ್ತೇವೆ.
 • ನಮ್ಮ ತೋಟದ ಪರಿಸ್ಥಿತಿ, ಬಿಸಿಲು, ನೆರಳು, ನೀರಾವರಿ, ಮರದ ಆರೋಗ್ಯ ಇದನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲ.
 • ನಾವು ಯಾವುದೇ ಕೀಟನಾಶಕ, ಶಿಲೀಂದ್ರ ನಾಶಕ  ಸಿಂಪಡಿಸದೆ ಫಸಲು ಉಳಿಸಿಕೊಂಡವರ ತೋಟಕ್ಕೆ ತಮ್ಮ ತೋಟವನ್ನು ಹೋಲಿಕೆ ಮಾಡುವುದಿಲ್ಲ.
 • ನೇರವಾಗಿ ಸಿಂಪರಣೆ ಮಾಡುವುದಕ್ಕೇ ಮುಂದಾಗುತ್ತೇವೆ.
 • ಅಡಿಕೆ ಮರದ ಸಿಂಗಾರಕ್ಕೆ ನಮ್ಮ ಹಿರಿಯರು ಎಷ್ಟು ಸಿಂಪರಣೆ ಮಾಡಿದ್ದರು, ಸಿಂಪರಣೆ ಮಾಡದವರ ಹೊಲದಲ್ಲಿ ಹೇಗೆ ಕಾಯಿ ಚೆನ್ನಾಗಿ ಕಚ್ಚಿಕೊಳ್ಳುತ್ತದೆ ಎಂಬುದನ್ನು ನಾವು ಅವಲೋಕನ ಮಾಡಿ ಸಿಂಪರಣೆಗೆ ಮುಂದಾದರೆ ಒಳ್ಳೆಯದು.
ಪರಾಗಸ್ಪರ್ಷ ಆಗದ ಮಿಡಿ. ಇದಕ್ಕೆ ಯಾವ ಕೀಟವೂ ಬಾಧಿಸಿಲ್ಲ.
ಪರಾಗಸ್ಪರ್ಷ ಆಗದ ಮಿಡಿ. ಇದಕ್ಕೆ ಯಾವ ಕೀಟವೂ ಬಾಧಿಸಿಲ್ಲ.
ಪರಾಗಸ್ಪರ್ಷ ಆದ ಮಿಡಿ. ಇದಕ್ಕೂ ಯಾವ ಕೀಟವೂ ಬಾಧಿಸಿಲ್ಲ.
ಪರಾಗಸ್ಪರ್ಷ ಆದ ಮಿಡಿ. ಇದಕ್ಕೂ ಯಾವ ಕೀಟವೂ ಬಾಧಿಸಿಲ್ಲ.

ಸಿಂಪರಣೆಗಿಂತ ಮುಖ್ಯ ಇದು:

 • ಕಳ್ಳನನ್ನು ಮನೆಯೊಳಗೆ ಸೇರಿಸಿಕೊಂಡು ನಾವು ಬಂದೋಬಸ್ತು ಮಾಡಿದರೆ ಫಲವಿಲ್ಲ.
 • ನಮ್ಮೆಲ್ಲರ ಅಡಿಕೆ ತೋಟದಲ್ಲಿ ಈಗೀಗ ಕೊಯಿಲು ಎಂಬ ಕ್ರಿಯೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುವುದಿಲ್ಲ.
 • ಚಾಲಿ ಅಡಿಕೆ ಮಾಡುವ  ಕಡೆ, ಒಂದು ಎರಡು ಗೊನೆ ಉದುರಿ ಅಲ್ಲಿ ಹೂ ಗೊಂಚಲಿನ ಅವಶೇಷ ನೇತಾಡಿಕೊಂಡು ಇರುತ್ತದೆ.
 • ಇದನ್ನು ನಾವು ಮತ್ತೆ ಕೊಯಿಲು ಮಾಡುವಾಗ ತೆಗೆಸುವುದಿಲ್ಲ.
 • ತೆಗೆಯಲು ಹೇಳಿದರೂ ಆಳುಗಳು ಅದನ್ನು ಮರೆಯುತ್ತಾರೆ. 
 • ಹಾಗೆಯೇ ಮೊದಲು ಅರಳಿದ  ಒಂದು ಹೂ ಗೊಂಚಲು ಯಾವುದೋ ಕಾರಣಕ್ಕೆ ಒಣಗಿ ಮರಕ್ಕೆ ಅಂಟಿಕೊಂಡಿರುತ್ತದೆ.
 • ಇದನ್ನೂ ನಾವು ತೆಗೆಯಲು ಹೋಗುವುದಿಲ್ಲ.  ಇದನ್ನೇ ಕಳ್ಳನನ್ನು ಮನೆಯೊಳಗೆ ಸೇರಿಸಿಕೊಂಡಿರುವುದು ಎನ್ನುವುದು. 
 • ಈ ಶೇಷಗಳನ್ನು ಮರದಿಂದ ಸಂಪೂರ್ಣವಾಗಿ ತೆಗೆದರೆ ಸಿಂಪರಣೆ ಬಹುತೇಕ ಅಗತ್ಯವಿರುವುದಿಲ್ಲ.
 • ಇದನ್ನು ಇಟ್ಟುಕೊಂಡು ಸಿಂಪರಣೆ ಮಾಡುವುದರಿಂದಲೂ ಪ್ರಯೋಜನ ಇಲ್ಲ.

ಅಡಿಕೆ ಮರಗಳ ಹೂ ಗೊಂಚಲಿಗೆ ಸಿಂಪರಣೆ ಮಾಡುವುದು ಎಂದರೆ ಸಣ್ಣ ಖರ್ಚು ಅಲ್ಲ. ಕೀಟನಾಶಕ, ರೋಗ ನಾಶಕ ಇವೆರಡಕ್ಕೂ ದುಬಾರಿ ಬೆಲೆ ಇದೆ. ಅದಕ್ಕಿಂತ ದುಪ್ಪಟ್ಟು ಸಿಂಪಡಿಸುವವರ ಮಜೂರಿ ಆಗುತ್ತದೆ.  ಆದ ಕಾರಣ ಅಗತ್ಯ ಇದ್ದರೆ ಮಾತ್ರ ಸಿಂಪರಣೆ ಮಾಡಿ ಸಾಕಷ್ಟು ಉಳಿತಾಯ ಮಾಡಬಹುದು.

ಯಾವಾಗ ಯಾವುದನ್ನು ಸಿಂಪರಣೆ ಮಾಡಬೇಕು?

 • ಅಡಿಕೆ ಮರದ ಸಿಂಗಾರ ಅಥವಾ ಹೂ ಗೊಂಚಲನ್ನು ಪ್ರಾರಂಭದಲ್ಲಿ (ಡಿಸೆಂಬರ್ ಜನವರಿ) ಸೂಕ್ಷ್ಮವಾಗಿ ಗಮನಿಸಿ. ಆಗ ಸಿಂಗಾರದಲ್ಲಿ ಅಥವಾ ಹೊಂಬಾಳೆಯಲ್ಲಿ ಕೀಟ ಇರುವ ( ಸಿಂಗಾರ ತಿನ್ನುವ ಹುಳ) ಕುರುಹುಗಳು ಇದ್ದರೆ  ಆಗ ಸಿಂಗಾರಕ್ಕೆ ಕೀಟನಾಶಕದ ಸಿಂಪರಣೆ ಬೇಕು.
 • ಆ ಸಮಯದಲ್ಲಿ ಕ್ಲೋರೋಫೆರಿಫೋಸ್, ಮೊನೋಕ್ರೋಟೋಫೋಸ್, ಅಥವಾ ಲಾಂಬ್ಡಾಸೈಹೋಲ್ಥ್ರಿನ್ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.
 • ಒಂದು ವೇಳೆ ಈ ಎಲ್ಲಾ ಕುರುಹುಗಳು ಎಲ್ಲಿಯೂ ಇಲ್ಲವೆಂದಾದರೆ ಕೀಟನಾಶಕದ ಸಿಂಪರಣೆಯ ಅಗತ್ಯ ಇರುವುದಿಲ್ಲ.   
 • ಸಿಂಗಾರ ತಿನ್ನುವ ಹುಳದ ಬಾಧೆಗೆ ಒಮ್ಮೆ ಕೀಟನಾಶಕ ಸಿಂಪರಣೆ ಮಾಡಿದರೆ ಸಾಕಾಗುತ್ತದೆ. ಪದೇ ಪದೇ ಬೇಕಾಗುವುದಿಲ್ಲ.
ಹೂ ಗೊಂಚಲು ಹೀಗೆ ಇದ್ದರೆ ಕೀಟನಾಶಕ ಬೇಕು.
ಹೂ ಗೊಂಚಲು ಹೀಗೆ ಇದ್ದರೆ ಕೀಟನಾಶಕ ಬೇಕು.
 • ಈಗ ಅಡಿಕೆ ಮರದಲ್ಲಿ ಒಂದು ಎರಡು ಹೂ ಗೊಂಚಲುಗಳು ಬಿಟ್ಟಿವೆ. ಕಾಯಿ ಮೊದಲ ಗೊನೆಯಲ್ಲಿ ವಿರಳವಾಗಿ ಇದೆ.
 • ಉಳಿದ ಹೂ ಗೊಂಚಲುಗಳಲ್ಲಿ ಒಂದು ಇನ್ನೇನು ಪರಾಗ ಸ್ಪರ್ಶಕ್ಕೆ ಸಿದ್ದವಾದದ್ದು, ಹಾಗೂ  ಆಗ ತಾನೇ ಅರಳಿದ ಹೂಗೊಂಚಲು ಇದೆ.
 • ಈ ಹಂತದಲ್ಲಿ ಯಾವುದೇ ಕೀಟ ಹೂ ಗೊಂಚಲಿಗೆ ಬರುವುದಿಲ್ಲ. ಈಗ ಹವಾಮಾನ ವ್ಯತ್ಯಯದಿಂದಾಗಿ ಕೊಲೆಟೋಟ್ರಿಕಂ (Coll etotrichum gloeosporioides) ಶಿಲೀಂದ್ರದ ಬಾಧೆ ಹೆಚ್ಚಾಗಿ ಕಾಣಿಸುತ್ತಿದೆ.
 • ಕೊಲೆಟೋಟ್ರಿಕಂ ಶಿಲೀಂದ್ರ ವನ್ನು ಡೈ ಬ್ಯಾಕ್ Inflorescence die-back ಎಂದು ಕರೆಯುತ್ತಾರೆ.
 • ಹೂ ಗೊಂಚಲಿನ ಗಂಡು ಹೂವುಗಳ ಪುಷ್ಪ ಮಂಜರಿ ತುದಿಯಿಂದ ಒಣಗುತ್ತಾ ಬರುವುದು ಡೈ ಬ್ಯಾಕ್ ನ ಲಕ್ಷಣ.
 • ಇದು ಜನವರಿಯಿಂದ ಪ್ರಾರಂಭವಾಗಿ ಎಪ್ರೀಲ್ ಮೇ ತನಕವೂ ಇರುತ್ತದೆ.
 • ಹೂ ಗೊಂಚಲಿನಲ್ಲಿ ಹೆಣ್ಣು ಹೂವುಗಳು ಇರುವ ಸ್ಥಳವೇ ಬೇರೆ. ಗಂಡು ಹೂವುಗಳು ಇರುವ ಸ್ಥಳವೇ ಬೇರೆ.
 • ತುದಿ ಭಾಗ ಒಣಗುತ್ತಾ ಮುಂದುವರಿದು, ಹೆಣ್ಣು ಹೂವುಗಳು ಇರುವ ತನಕವೂ ಅದು ಒಣಗುತ್ತಾ ಬರುತ್ತದೆ. ಇದನ್ನು ಡೈ ಬ್ಯಾಕ್ ಎಂದು ಕರೆಯುತ್ತಾರೆ.
ಸ್ಕೇಲ್ ಇನ್ಸೆಕ್ಟ್ (ಕಡ್ಡಿ ಕೀಟ) ಕಾರಣದಿಂದ ಸಿಂಗಾರ ಒಣಗಿರುವುದೂ ಇದೆ.
ಸ್ಕೇಲ್ ಇನ್ಸೆಕ್ಟ್ (ಕಡ್ಡಿ ಕೀಟ) ಕಾರಣದಿಂದ ಸಿಂಗಾರ ಒಣಗಿರುವುದೂ ಇದೆ.
 • ಇದರ ನಿಯಂತ್ರಣಕ್ಕೆ ಮ್ಯಾಂಕೋಜೆಬ್ ಶಿಲೀಂದ್ರನಾಶಕ ಅಥವಾ ಝೈರಮ್ ಶಿಲೀಂದ್ರ ನಾಶಕವನ್ನು ಸಿಂಗಾರ ಅರಳಿ ಪರಾಗಸ್ಪರ್ಷಕ್ಕೆ ಸಿದ್ದವಾಗುವುದರ ಒಳಗೆ ಸಿಂಪಡಿಸಲು ಶಿಫಾರಸು ಮಾಡಲಾಗುತ್ತದೆ.
 • ಇತ್ತೀಚೆಗೆ ಸ್ಪರ್ಶ ಶಿಲೀಂದ್ರ ನಾಶಕಗಳಿಗೆ ಶಿಲೀಂದ್ರಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡ ಕಾರಣ ಅಂತರ್ವ್ಯಾಪಿ ಮತ್ತು ಸ್ಪರ್ಶ ಎರಡನ್ನೂ ಒಟ್ಟು ಸೇರಿಸಿರುವ ಶಿಲೀಂದ್ರ ನಾಶಕವನ್ನು  ಬಳಸಲು ಶಿಫಾರಸು ಮಾಡಲಾಗುತ್ತದೆ.  Mancozeb +   carbendazim ಈ ರೀತಿ.
 • ಸಿಂಗಾರ ಒಣಗುವ ತೊಂದರೆ ಇದ್ದಲ್ಲಿ  ಪ್ರತೀ ಲೀ. ನೀರಿಗೆ 3 ಗ್ರಾಂ ಪ್ರಮಾಣದಲ್ಲಿ ಇದನ್ನು ಸಿಂಪರಣೆ ಮಾಡಬೇಕು. 
 • ಅಡಿಕೆ ಮರದಲ್ಲಿ  ಹಾಳೆ ಉದುರಿ ಹೆಚ್ಚು ದಿನಗಳ ಕಾಲ  ಹೂಗೊಂಚಲಿನ ರಕ್ಷಾ ಕವಚ ಒಡೆಯದೆ ಇದ್ದರೆ ಅಂತಹ ಹೂ ಗೊಂಚಲಿಗೆ ಶಿಲೀಂದ್ರ ಬಾಧೆ ತಗಲುವ ಸಾಧ್ಯತೆ ಹೆಚ್ಚು.
 • ಹಾಳೆ ಉದುರಿದ ದಿನ ಇಲ್ಲವೇ ಮರುದಿನ ಈ ರಕ್ಷಾ ಪೊರೆ ಒಡೆದು ಹೂ ಗೊಂಚಲು ಬಿಚ್ಚಿಕೊಂಡರೆ ಅಂತಹ ಹೂ ಗೊಂಚಲಿಗೆ ಶಿಲೀಂದ್ರ ಬಾಧೆ ಸ್ವಲ್ಪ ಕಡಿಮೆ.
 • ಹಾಗಾಗಿ ಒಡೆಯದೆ ಇರುವ ಹೂ ಗೊಂಚಲನ್ನು ಕೋಲಿನ ಸಹಾಯದಿಂದ ಒಡೆದರೆ ಶಿಲೀಂದ್ರ ನಾಶಕ ಸಿಂಪರಣೆ ಇಲ್ಲದೆಯೂ ಸುಧಾರಿಸಬಹುದು.
 • ಒಂದು ಹೂ ಗೊಂಚಲಿಗೆ ಈ ಶಿಲೀಂದ್ರ ಬಾಧಿಸಿ ಅದರಲ್ಲಿ ಬೆರಳೆಣಿಕೆಯ ಮಿಡಿಗಳು ಇದ್ದರೆ ಅದನ್ನು ತೆಗೆದು ಉಳಿದ ಹೂ ಗೊಂಚಲಿಗೆ ಸೋಂಕು ತಗಲದಂತೆ ತಡೆಯಬಹುದು.

ಕೀಟನಾಶಕ ಸಿಂಪರಣೆ ಯಾವಾಗ ಬೇಕು?

ಇಂತಹ ಮಿಡಿ ಆಗುವ ಸಮಯಕ್ಕೆ ಕೀಟ ಸಮಸ್ಯೆ ಇರುತ್ತದೆ.
ಇಂತಹ ಮಿಡಿ ಆಗುವ ಸಮಯಕ್ಕೆ ಕೀಟ ಸಮಸ್ಯೆ ಇರುತ್ತದೆ.
 • ಅಡಿಕೆಯಲ್ಲಿ  ಪರಾಗಸ್ಪರ್ಶ ಆಗದ  ಹಾಗೂ ಆಗಷ್ಟೇ ಪರಾಗಸ್ಪರ್ಶ ಆದ ಮಿಡಿಗಳಿಗೆ ಯಾವ ಕೀಟದ ಸಮಸ್ಯೆಯೂ ಇರುವುದಿಲ್ಲ.
 • ಮಿಡಿ ಬೆಳೆಯುವ ಹಂತ ತೊಟ್ಟಿನಿಂದ ಹೊರಬಂದು ಸ್ವಲ್ಪ ಬೆಳವಣಿಗೆ ಹೊಂದುವ ಸಮಯ ಸಾಮಾನ್ಯವಾಗಿ ಎಪ್ರೀಲ್. ಮೇ ತಿಂಗಳಲ್ಲಿ ಪೆಂಟತೋಮಿಡ್ ಬಗ್ Pentatomid bug (Halyomorpha mannoreal F ಎಂಬ ಕೀಟ ತೊಂದರೆ ಮಾಡುತ್ತದೆ.
 • ಇದರಿಂದ ಅಡಿಕೆಯ ಮಿಡಿ ಕಾಯಿಗಳು ಉದುರುತ್ತವೆ.
 • ಉದುರಿದ ಮಿಡಿ ಕಾಯಿಗಳ ತೊಟ್ಟಿನ ಭಾಗದಲ್ಲಿ ಚುಚ್ಚಿದ ಗಾಯ ಇರುತ್ತದೆ.
 • ಕೆಲವೊಮ್ಮೆ ಅಪರೂಪವಾಗಿ ಕಡ್ಡಿ ಕೀಟ ( Scale insect) ಸಹ ತೊಂದರೆ ಮಾಡುತ್ತದೆ.
 • ಇದರ ತೊಂದರೆ ಪ್ರಾರಂಭವಾಗಲು ಮಿಡಿಗಳು ಕನಿಷ್ಟ 2-3 ತಿಂಗಳಾದರೂ ಬಲಿತಿರಬೇಕು.
 • ಎಪ್ರೀಲ್ ಮೇ ತಿಂಗಳಿಗೆ ಮಾತ್ರ ಅಷ್ಟು ಬಲಿತಿರುತ್ತದೆ. ಆಗ ಕೀಟನಾಶಕ ಸಿಂಪರಣೆ ಮಾಡಬೇಕು.
 • ಕೀಟನಾಶಕವಾಗಿ ಈಗ ಲಾಂಬ್ಡ್ರಾಸೈಹೋಥ್ರಿನ್,2 ಮಿಲಿ/1ಲೀ ನೀರು. ಇಮಿಡಾಕ್ಲೋಫ್ರಿಡ್ 2 ಮಿಲಿ/1ಲೀ ನೀರು., ಅಥವಾ ಮೋನೋಕ್ರೋಟೋಫೋಸ್  2.5 ಮಿಲಿ/1ಲೀ ನೀರು. ಸಿಂಪಡಿಸಬಹುದು. 
ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ಈ ಚಿನ್ಹೆ ಇರುತ್ತದೆ.
ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ಈ ಚಿನ್ಹೆ ಇರುತ್ತದೆ.
ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ತೊಟ್ಟಿನಲ್ಲಿ ಈ ಚಿನ್ಹೆ ಇರುತ್ತದೆ.
ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ತೊಟ್ಟಿನಲ್ಲಿ ಈ ಚಿನ್ಹೆ ಇರುತ್ತದೆ.

ಅನವಶ್ಯಕ ಕೀಟನಾಶಕ ಬೇಡ:

ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ತೊಟ್ಟಿನಲ್ಲಿ ಈ ಚಿನ್ಹೆ ಇರುತ್ತದೆ.
ಪೆಂಟಟೋಮಿಡ್ ಬಗ್ ಕೀಟ ಸಮಸ್ಯೆ ಇದ್ದರೆ ಕಾಯಿಯಲ್ಲಿ ತೊಟ್ಟಿನಲ್ಲಿ ಈ ಚಿನ್ಹೆ ಇರುತ್ತದೆ.

ಈಗ ಕೀಟನಾಶಕ ಸೇರಿಸಬೇಕಾದ ಅಗತ್ಯ ಇಲ್ಲ. ಇಷ್ಟಕ್ಕೂ ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಎರಡನ್ನೂ ಒಟ್ಟು ಸೇರಿಸಿ ಸಿಂಪಡಿಸಬಾರದು. ಎಪ್ರೀಲ್ ಮೇ ತಿಂಗಳಲ್ಲಿ ಶಿಲೀಂದ್ರನಾಶಕ ಬೇಡ. ಬರೇ ಕೀಟನಾಶಕ ಸಾಕು.

ಔಟ್ ಆಫ್ ಸಬ್ಜೆಕ್ಟ್:

ಕೆಲವು ಅಡಿಕೆ ಮರಗಳಿಗೆ ಯಾವುದೇ ಸಿಂಪರಣೆ ಮಾಡಿದರೂ ಮಿಳ್ಳೆ ಉದುರದಂತೆ ತಡೆಯುವುದಕ್ಕೆ ಆಗುವುದಿಲ್ಲ. ಅವು ಕಾಯಿ ಕಚ್ಚಿಕೊಳ್ಳುವುದೇ ಇಲ್ಲ. ಬೀಜದ ಆಯ್ಕೆ ಮಾಡುವಾಗ ಇಂತಹ ಗುಣ ಉಳ್ಳ ಮರಗಳ ಬೀಜ ಆರಿಸಬಾರದು. ಹವಾಮಾನ ಸಹ ಮಿಳ್ಳೆ ಉದುರುವುದಕ್ಕೆ ಪೂರಕ. ಒಮ್ಮೆ ಕೀಟನಾಶಕ, ಶಿಲೀಂದ್ರನಾಶಕ ಸಿಂಪರಣೆ ಮಾಡಿದರೆ ಅಂತಹ ತೋಟಗಳಲ್ಲಿ ಸಿಂಗಾರ ಒಣಗುವ ಸಮಸ್ಯೆ, ಕಾಯಿ ಚುಚ್ಚುವ ಕೀಟ ಸಮಸ್ಯೆ ನಿರಂತರವಾಗಿ ಇರುತ್ತದೆ.ಕೊಲೆಟ್ರೋಟ್ರಿಕಮ್ ಶಿಲೀಂದ್ರದ ಬಾಧೆ ಇತ್ತೀಚೆಗೆ ಹೆಚ್ಚಲು ಕಾರಣ ಹವಾಮಾನದ ವ್ಯತ್ಯಯ. ಕೆಲವು ಎತ್ತರದ ಮರಗಳಿಗೆ ಗಾಳಿಯಾಡುವಿಕೆ, ಬಿಸಿಲು ಇತ್ಯಾದಿಗಳ ಪರಿಪೂರ್ಣ ಲಭ್ಯತೆ ಇರುವಲ್ಲಿ ಈ ಬಾಧೆ ಕಡಿಮೆ ಇರುತ್ತದೆ. ಕೆಲವು ತಂಪಾಗಿರುವ ಸ್ಥಳ (ಕಣಿವೆಯಂತಹ ಪ್ರದೇಶ) ಗಳಲ್ಲೂ ಕಡಿಮೆ ಇರುತ್ತದೆ. ಪೂರ್ಣ ಬಿಸಿಲಿನ ಸ್ಥಳದಲ್ಲಿ ಹೆಚ್ಚು.  ಸ್ಥಳೀಯ ತಳಿಗಳಿಗೆ ಸ್ವಲ್ಪ ಕಡಿಮೆ.

ಅಗತ್ಯವಿಲ್ಲದೆ ಕೀಟನಾಶಕ ಸಿಂಪರಣೆ ಮಾಡುವುದರಿಂದ ಕೀಟಗಳಿಗೆ ನಿರೋಧಕ ಶಕ್ತಿ ಉಂಟಾಗುತ್ತದೆ. ಶಿಫಾರಸಿನ ಪ್ರಮಾಣಕ್ಕಿಂತ ಹೆಚ್ಚು ಹಾಕಿದರೆ ಸಹ ನಿರೋಧಕ ಶಕ್ತಿ  ಉಂಟಾಗುತ್ತದೆ. ಕಡಿಮೆ ಹಾಕಿದರೂ ಪ್ರಯೋಜನ ಇಲ್ಲ. ನಮ್ಮಲ್ಲಿ ಇರುವ ಯಾವ ಕೀಟನಾಶಕ, ರೋಗನಾಶಕಕ್ಕೂ ಅಡಿಕೆಗೆ ಬಳಸಲು ಅನುಮೋದನೆ ಇಲ್ಲ. ಅದಕ್ಕೆ ಒತ್ತಾಯಗಳು ಆಗುತ್ತಿವೆ.  ಅಗತ್ಯ ಇಲ್ಲದ ಸಮಯದಲ್ಲಿ ಸಿಂಪರಣೆ ಮಾಡಿದಾಗ  ಉಪಕಾರೀ ಕೀಟಗಳು ಸತ್ತು ಮತ್ತೂ ಮತ್ತೂ ರೋಗ – ಕೀಟ ಬಾಧೆ ಹೆಚ್ಚಾಗುತ್ತದೆ. ಕೀಟನಾಶಕದ ಬಳಕೆ ಕಡಿಮೆ ಮಾಡಿದಷ್ಟೂ ಕ್ರಮೇಣ ಡೈ ಬ್ಯ್ಯಾಕ್ ಆಗಲಿ, ಪೆಂಟಟೋಮಿಡ್ ಬಗ್ ಆಗಲಿ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!