ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಹಾಕಬೇಕು?

ಅಡಿಕೆ ಸಸಿ ನೆಡುವಾಗ ಗೊಬ್ಬರ ಹಾಕುವುದು

ಇದು ಅಡಿಕೆ ಸಸಿ ನೆಡುವ ಸೀಸನ್. ಎಲ್ಲಿ ನೊಡಿದರೂ ಯಾರಲ್ಲಿ ಕೇಳಿದರೂ ಅಡಿಕೆ ಸಸಿ ನೆಡುವ ಬಗ್ಗೆಯೇ ಮಾತುಗಳು. ಕೆಲವರು ನರ್ಸರಿಗಳಿಂದ ಗಿಡ ತರುತ್ತಾರೆ.ಕೆಲವರು ಅವರವರೇ ಗಿಡ ಮಾಡುತ್ತಾರೆ. ಬಹುತೇಕ ಜನ ಅಡಿಕೆ ಬೆಳೆಯುತ್ತಿರುವವರು ಅಸಾಂಪ್ರದಾಯಿಕ ಪ್ರದೇಶದವರು. ಅಡಿಕೆ ಕೃಷಿಗೆ ಹೊಸಬರು. ಇಂತವರಿಗೆ ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಬಳಸಬೇಕು, ಯಾವ ಸಮಯದಲ್ಲಿ ನೆಡಬೇಕು ಎಂಬ ಮಹತ್ವದ ಮಾಹಿತಿ ಇಲ್ಲಿದೆ.

ಅಡಿಕೆ ಸಸಿ ನೆಡುವವರೆಲ್ಲರೂ ಮಹತ್ ಆಕಾಂಕ್ಷೆಯಲ್ಲಿ ನೆಡುವವರು. ಬೇಗ ಫಲ ಕೊಡಬೇಕು, ಅಧಿಕ ಇಳುವರಿ ಬರಬೇಕು. ಇದೆಲ್ಲಾ ಸಹಜವಾದ ಮನೋಸ್ಥಿತಿ. ಅದಕ್ಕಾಗಿ ಸಣ್ಣದರಿಂದಲೇ ಅದಕ್ಕೆ ಯಾವ ಕೊರತೆಯೂ ಆಗದಿರುವಂತೆ ಸಾಕಬೇಕು ಎಂಬ ಹಂಬಲ ಇವರದ್ದು. ಇದು ಸರಿ, ಆದರೆ ಅಡಿಕೆ ಸಸಿಗೆ ಆ ಪ್ರಾಯದಲ್ಲಿ ಪೋಷಕಗಳನ್ನು ಹೀರಿಕೊಳ್ಳುವ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಎಷ್ಟು ಇರುತ್ತದೆ ಎಂಬುದು ಮೊದಲಾಗಿ ತಿಳಿದಿರಬೇಕು. 

ನಮ್ಮ ಮಕ್ಕಳು ಚೆನ್ನಾಗಿ ಬೆಳೆಯಲಿ ಎಂದು ಜೀರ್ಣಿಸಲು  ಕಷ್ಟವಾಗುವ ಆಹಾರವನ್ನು ಎಳೆ ಪ್ರಾಯದಲ್ಲಿ ಕೊಡುವುದಿಲ್ಲ. ಆಹಾರ ತಿನ್ನುವ ತನಕ ತಾಯಿಯ ಹಾಲು, ಆನಂತರ ಅದರ ಜಠರ , ಕರುಳಿನಲ್ಲಿ ಜೀರ್ಣ ಅಗುವಂತಹ ಹದ ದ್ರವ ಪದಾರ್ಥ ಹಾಗೆಯೇ ಮುಂದುವರಿದು ರಾಗಿ ಅಂಬಲಿ, ನಂತರ ಹಾಲು, ಅನ್ನ ಅನಂತರ ಮಾಮೂಲು ಎಲ್ಲರಂತೆ ಆಹಾರ ಕೊಡುವುದು ಕ್ರಮ. ಇದೇ ರೀತಿಯಲ್ಲಿ ಸಸ್ಯಗಳಿಗೂ ಆಹಾರ ಕ್ರಮವನ್ನು ಅನುಸರಿಸಬೇಕು. ಎಳೆ ಪ್ರಾಯದ ಸಸಿಗಳ ಬೇರುಗಳು ಯಾವ ರೀತಿಯ ಆಹಾರವನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆಯೋ ಅದನ್ನು ಮಾತ್ರ ಕೊಡಬೇಕು.

ಎಳೆ ಪ್ರಾಯದ ಸಸಿಯ ಬೇರುಗಳು:

 •  ಎಳೆ ಪ್ರಾಯದ 5-6 ತಿಂಗಳು ಬೆಳವಣಿಗೆ ಆದ ಸಸಿಯಲ್ಲಿ ಬೇರುಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ.
 • ಪ್ಯಾಕೆಟ್ ನಲ್ಲಿ ಮಾಡಲ್ಪಟ್ಟ ಸಸಿಯಲ್ಲಿ ಬಂದ ಬೇರುಗಳು  ಪ್ಯಾಕೆಟ್ ನ ಒಳಗಿನ ಅವಕಾಶದಲ್ಲಿ ಮಾತ್ರ  ಒತ್ತೊತ್ತಾಗಿ ಹಬ್ಬಿಕೊಂಡು ಇರುತ್ತವೆ.
 • ಒಂದೆರಡು ಬೇರುಗಳು ಪ್ಯಾಕೆಟ್ ನಿಂದ ಹೊರ ಬಂದಿದ್ದರೂ ಅದು ಹೆಚ್ಚು ಉದ್ದ ಇರುವುದಿಲ್ಲ.
 • ಈ ಸಸಿಯನ್ನು ನೆಲದಲ್ಲಿ ನಾಟಿ ಮಾಡಿದಾಗ ಆ ಬೇರುಗಳು ಮಣ್ಣಿನಲ್ಲಿ ಸ್ಥಾಪಿತವಾದ ಮೇಲೆ ಆ ಮಣ್ಣಿಗೆ ಕೊಡುವ ಆಹಾರಗಳನ್ನು ಸ್ವೀಕರಿಸುತ್ತದೆ.
 • ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಆ ಮಣ್ಣಿನ ಗುಣವನ್ನು ಅವಲಂಭಿಸಿದೆ. 
 • ಸಾಮಾನ್ಯವಾಗಿ ಗಿಡ ನೆಟ್ಟು ಒಂದು ತಿಂಗಳ  ತರುವಾಯ ಪ್ಯಾಕೆಟ್ ನಿಂದ ಬೇರುಗಳು ಹೊರ ಬಂದು ಬುಡಭಾಗದಲ್ಲಿ ½- ¾  ಅಡಿ ತನಕ ಬೆಳೆಯಬಹುದು.
 • ಈ ಬೇರು ಬೆಳೆಯುವಿಕೆ ಮಣ್ಣಿನ ಬೆಚ್ಚಗೆತನ ,ಸಡಿಲತೆ, ಹಿತಮಿತವಾದ ತೇವಾಂಶವನ್ನು ಅವಲಂಭಿಸಿದೆ.
 • ಬುಡದಲ್ಲಿ ನೀರು ನಿಂತು, ಮಣ್ಣು ಕಲಸಿ ಹಾಕಿದಂತಾದರೆ, ತಳ ಭಾಗದಲ್ಲಿ ಗಟ್ಟಿ ಮಣ್ಣು ಇದ್ದರೆ, ಫಲವತ್ತಾದ ಮಣ್ಣು ಇಲ್ಲದಿದ್ದರೆ 1 ತಿಂಗಳಲ್ಲಿ 3-4 ಇಂಚು ಸಹ ಬೇರು ಬೆಳೆಯುವುದಿಲ್ಲ.
 • ಮಣ್ಣಿನಲ್ಲಿ ನೀರು ನಿಂತಂತಿದ್ದರೆ ಬೇರು ಬರುವ ಬದಲು ಕೊಳೆಯುತ್ತದೆ.
 • ಅಡಿಕೆ ಸಸಿಯಲ್ಲಿ ಬೇರುಗಳು ಕಾಂಡದ ಗಂಟುಗಳ ಮೂಲಕ ಮೂಡುತ್ತವೆ.
 • ಪ್ರಾರಂಭದಲ್ಲಿ ಹೊರಡುವ ಬೇರುಗಳ ಮೇಲ್ಮೈ ರಚನೆ ಕೋಮಲವಾಗಿ ಬಹಳ ಸೆನ್ಸಿಟಿವ್ ಆಗಿರುತ್ತದೆ.
 • ಅದಕ್ಕೆ ಯಾವ ಬಾಹ್ಯ ತೊಂದರೆ ಆದರೂ ಸಹ ಅದು ವರ್ಣ ಕಳಕೊಳ್ಳುತ್ತದೆ.
 • ಒಳಭಾಗದ ಬೇರಿನ ಅಂಗಾಂಶಗಳಿಗೆ ತನ್ನ ರಕ್ಷಣೆ ಕೊಡುವುದಿಲ್ಲ.
 • ಬೇರಿನ ತುದಿ ಭಾಗ ಸುಮಾರು 4-6 ಇಂಚು ತನಕ ಬೆಳೆಯುವ ಭಾಗ ಇರುತ್ತದೆ.
 • ಆ ನಂತರ ಹೀರಿಕೊಳ್ಳುವ ಭಾಗ ಇರುತ್ತದೆ. ಅ ನಂತರ ಕವಲು ಬೇರುಗಳು ಹುಟ್ಟಿಕೊಳ್ಳುತ್ತವೆ.
 • ಕವಲು ಬೇರುಗಳು ಆಹಾರ ಹೀರಿಕೊಳ್ಳುವ ಕೆಲಸ ಮಾಡುತ್ತವೆ.
 • ಹಾಗಾಗಿ ನೆಡುವ ಸಮಯದಲ್ಲಿ ತೀಕ್ಷ್ಣ ಗೊಬ್ಬರಗಳನ್ನು ಬುಡಕ್ಕೆ ಕೊಡಬಾರದು.  
 • ಪ್ಯಾಕೆಟ್ ನಿಂದ ನೆಲಕ್ಕೆ ವರ್ಗಾಯಿಸಿದ ಗಿಡ ಪೋಷಕಾಂಶ ಹೀರುವ ಬೇರುಗಳನ್ನು ಬಿಡಲು ಕನಿಷ್ಟ 1 ತಿಂಗಳು ಸಮಯಾವಕಾಶ ಬೇಕು.  
 • ಆಗ ಬುಡದಿಂದ ¾ ಅಡಿ ದೂರದಲ್ಲಿ ಗೊಬ್ಬರ ಸ್ವಲ್ಪ ಸ್ವಲ್ಪ ಕೊಡಬಹುದು.
 • ಆರೋಗ್ಯವಂತ ಬೇರಿನ ಬಣ್ಣ ಬಿಳಿಯಾಗಿರುತ್ತದೆ. (White root)
 • ಬಣ್ಣ ಮಾಸಲು ಆಗಿದ್ದರೆ ಅಲ್ಲಿ ಘಾಸಿ ಆಗಿದೆ ಎಂದು ತಿಳಿಯಬಹುದು.
 • ಅಂತಹ ಬೇರು ಬೆಳವಣಿಗೆ ನಿಲ್ಲಿಸುತ್ತದೆ. ಮತ್ತೆ ಹೊಸ ಬೇರು ಬರಬೇಕು.
ಎಳೆ ಅಡಿಕೆ ಸಸಿಯ ಬೇರು
ಎಳೆ ಅಡಿಕೆ ಸಸಿಯ ಬೇರು

ಯಾವ ಗೊಬ್ಬರ ಕೊಡಬೇಕು?

 • ಹಸು ಕೂಸುಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುವ ಅಂಬಲಿ ತರಹದ ಆಹಾರ ಕೊಟ್ಟಂತೆ ಅಡಿಕೆ ಸಸಿಗಳಿಗೆ ಸಹ ಅರಗಿಸಿಕೊಳ್ಳುವಂತಹ ಆಹಾರವನ್ನೇ ನೀಡಬೇಕು.
 • ನೆಡುವ ಸಮಯದಲ್ಲಿ ರಸಗೊಬ್ಬರಗಳನ್ನು ಕೊಡುವುದು ವ್ಯರ್ಥ.
 • ಅ ಸಮಯದಲ್ಲಿ ಕೊಟ್ಟ ರಸ ಗೊಬ್ಬರವನ್ನು ಸಸ್ಯಗಳು ಹೀರಿಕೊಳ್ಳಲಾರವು.
 • ಅದು ಇಳಿದು ಹೋಗಿ ನಷ್ಟವಾಗುವುದು.
 • ಪ್ಯಾಕೆಟ್ ಗಿಡಗಳನ್ನು ನೆಡುವಾಗ ಪ್ಯಾಕೆಟ್ ನಲ್ಲಿ ತುಂಬಲಾದ ಮಣ್ಣಿಗಿಂತ 2-3  ಪಾಲು ಹುಡಿ ಹುಡಿಯಾದ (ಚೆನ್ನಾಗಿ ಕಾಂಪೋಸ್ಟು ಆದ ಬಿಸಿ ಇಲ್ಲದ) ಕೊಟ್ಟಿಗೆ ಗೊಬ್ಬರವನ್ನು ಹಾಕಿ ನೆಟ್ಟರೆ ಸಾಕು.
 • ಕೊಟ್ಟಿಗೆ ಗೊಬ್ಬರ ಇಲ್ಲದಿದ್ದ ಪಕ್ಷದಲ್ಲಿ ಅಷ್ಟೇ ಪ್ರಮಾಣದ ಫಲವತ್ತಾದ ಮೇಲ್ಮಣ್ಣನ್ನು ಹಾಕಿ ನೆಡಬಹುದು.
 • ಕೆಲವು ಕಡೆ ಸುಡು ಮಣ್ಣು ಹಾಕುತ್ತಾರೆ. ಇದೂ ಆಗದೆಂದಿಲ್ಲ ಆದರೆ ಅದು ಸ್ವಲ್ಪ ಹಳೆಯದಾಗಿರಬೇಕು.
 • ತಾಜಾ ಸಗಣಿ ಗೊಬ್ಬರ ಕೊಡಬಾರದು. ತೀಕ್ಷ್ನ ಸಾವಯವ ಗೊಬ್ಬರಗಳಾದ ಹಿಂಡಿ ಗೊಬ್ಬರವನ್ನು ಸಹ ನೆಡುವಾಗ ಕೊಡಬೇಕಾಗಿಲ್ಲ. 
 • ನೆಡುವ ಸಮಯದಲ್ಲಿ  ಪ್ರತೀ ಗಿಡದ ಬುಡಕ್ಕೆ 100 ಗ್ರಾಂ ನಷ್ಟು ಶಿಲಾ ರಂಜಕ ಗೊಬ್ಬರ (Rock phosphate) ಗೊಬ್ಬರವನ್ನು ಮಣ್ಣಿಗೆ ಸೇರಿಸಬಹುದು. 
 • ಇದು ಇಳಿದು ಹೋಗುವುದಿಲ್ಲ. ಬೇರುಗಳು ಬೆಳೆದಾಗ ಅದು ಲಭ್ಯವಾಗುತ್ತದೆ.
 • ಹಸಿ ಕೊಟ್ಟಿಗೆ ಗೊಬ್ಬರವನ್ನು ಕೊಡಬಾರದು.
 • ನಂಬಿಕಾರ್ಹವಾದ ಸಿದ್ದ ರೂಪದ ಸಾವಯವ ಗೊಬ್ಬರ, ಎರೆ ಗೊಬ್ಬರವನ್ನು ಕೊಡಬಹುದು.
 • ಇದೆಲ್ಲವೂ ಸುಮಾರಾಗಿ ಒಂದು ಗಿಡಕ್ಕೆ 1-2 ಕಿಲೊ ಸಾಕು.

ರಸಗೊಬ್ಬರಗಳನ್ನು ಕೊಡುವುದು ಯಾವಾಗ:

ಮೊದಲ ಪ್ರಾಶಸ್ತ್ಯ ನೆರಳಿಗೆ- ಸೆಣಬು ನೆಡಿ
ಮೊದಲ ಪ್ರಾಶಸ್ತ್ಯ ನೆರಳಿಗೆ- ಸೆಣಬು ನೆಡಿ
 • ನೆಡುವ ಸಮಯದಲ್ಲಿ ಮೇಲೆ ತಿಳಿಸಿದ ಸೌಮ್ಯ ಗೊಬ್ಬರಗಳನ್ನು ಕೊಟ್ಟು ಸುಮಾರು 1 ತಿಂಗಳು ಕಳೆದ ತರುವಾಯ ವಿಭಜಿತ ಕಂತುಗಳಲ್ಲಿ ರಸಗೊಬ್ಬರವನ್ನು ಕೊಡಬಹುದು.
 • ಈ ಸಮಯದಲ್ಲಿ  ಬೇರುಗಳು ಸ್ವಲ್ಪ ಬೆಳೆದು ಹೀರುವ ಸ್ಥಿತಿಗೆ ತಲುಪಿರುತ್ತವೆ.
 • ನೆಟ್ಟ ಸಮಯದಲ್ಲಿ ಸಸಿಗಳಿಗೆ ಸಾರಜನಕ ಮತ್ತು ರಂಜಕ ಗೊಬ್ಬರ ಅಗತ್ಯ.
 • ರಂಜಕವು ಬೇರಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.
 • ಸಾರಜನಕವು ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. 
 • ಸಸಿ ಹಂತದಲ್ಲಿ ಎಲೆಗಳ ಬೆಳವಣಿಗೆ ಚೆನ್ನಾಗಿ ಆಗಬೇಕು.
 • ಎಲೆಗಳು ಒಂದರಿಂದ ಒಂದು ದೊಡ್ಡದಾಗಿ ಬೆಳೆಯಬೇಕು.
 • ಆಗ ಸಸಿಯ ಆಹಾರ ಹೀರಿಕೊಳ್ಳುವ ಸಾಮಾರ್ಥ್ಯ ಚೆನ್ನಾಗಿದೆ ಎಂದು ತಿಳಿಯಬಹುದು.
 • ಒಂದು ವರ್ಷದ ತರುವಾಯ ಪೊಟ್ಯಾಶ್ ಗೊಬ್ಬರವನ್ನು ಕೊಡಲೇ ಬೇಕು.
 • ಸಾಮಾನ್ಯವಾಗಿ 20:20:0:13, ಅಥವಾ 15:15:15 ಗೊಬ್ಬರವನ್ನು ಗಿಡವೊಂದಕ್ಕೆ 50 ಗ್ರಾಂ ಗೆ ಮೀರದಂತೆ ಬುಡ ಭಾಗದಿಂದ ½ ಅಡಿ ದೂರದಲ್ಲಿ ನಾಲ್ಕು ಬದಿಗೆ ಬೀಳುವಂತೆ ಹಾಕಬೇಕು.
 • ಹೆಚ್ಚು ಗೊಬ್ಬರ ಕೊಟ್ಟರೆ ಆ ಸಸ್ಯಕ್ಕೆ ಅದನ್ನು ಹೀರಿಕೊಳ್ಳಲು ಸಾಧ್ಯವಿಲ್ಲ.
 • ಅದು ತುಂಬಾ ಸಮಯದ ತನಕ ಮಣ್ಣಿನಲ್ಲಿ ಉಳಿಯುವುದೂ ಇಲ್ಲ.
 • ಈ ಗೊಬ್ಬರವನ್ನು ದ್ರವ ಮಾಡಿ ಮಣ್ಣಿಗೆ ಸೇರಿಸಿದರೆ ಒಳ್ಳೆಯದು.
 • ನೆಡುವಾಗ ರಸಗೊಬ್ಬರ ಕೊಡಲೇ ಬೇಡಿ. ಅಗತ್ಯ ಇದ್ದರೆ ಗಿಡಕ್ಕೆ ಕಡಿಮೆ ಸಾಂದ್ರತೆಯಲ್ಲಿ ಸಿಂಪರಣೆ ಮೂಲಕ ಕೊಡಬಹುದು.
 • (19:19:19  100 ಲೀ.ನೀರಿಗೆ ½ ಕಿಲೊ.) ನೆಟ್ಟ ದಿನ ಗಿಡ ಬಾಡುವ ಸಾಧ್ಯತೆ ಇದ್ದಲ್ಲಿ 100 ಲೀ. ನೀರಿಗೆ 1 ಕಿಲೋ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪರಣೆ ಮಾಡಿದರೆ  ಎಲೆ ಬಾಡುವುದಿಲ್ಲ.
 • ಅದನ್ನು ಪ್ರತೀ ದಿನ ಮೂರು ದಿನಗಳ ಕಾಲ ಮುಂದುವರಿಸಬೇಕು.
 • ಹರಳು ಹಿಂಡಿ, ಬೇವಿನ ಹಿಂಡಿ, ನೆಲಕಡ್ಲೆ ಹಿಂಡಿ ಇತ್ಯಾದಿಗಳನ್ನು ನೆಡುವಾಗ ಮಣ್ಣಿಗೆ ಸೇರಿಸಿದರೆ ಅದು ಕರಗುವ ಕ್ರಿಯೆಯಲ್ಲಿ ಜೀವಾಣುಗಳ ಜೊತೆ ಬೆರೆತು ಉಂಟಾಗುವ ಕ್ರಿಯೆ ಸಸ್ಯಗಳ ಕೋಮಲ ಬೇರಿಗೆ ಹಾನಿ ಮಾಡಬಹುದು. ಹಾಗಾಗಿ ಅದನ್ನೂ ಸಹ ನೆಡುವ ಸಮಯದಲ್ಲಿ ಕೊಡಬೇಡಿ.
 • ಏನಿದ್ದರೂ ಅವುಗಳನ್ನು ನೆಟ್ಟ ಸಸಿ  ಹೊಸತಾಗಿ ಒಂದು ಎರಡು ಗರಿಯನ್ನು ಬಿಟ್ಟ ನಂತರ ಕೊಡಿ.
 • ಒಂದು ವರ್ಷದ ನಂತರ ರಸ ಗೊಬ್ಬರ ಕೊಡಬಹುದು.
ಬಿಸಿಲಿಗೆ ಎಲೆ ಹೀಗೆ ಆಗದಂತೆ ಜಾಗರೂಕತೆ ವಹಿಸಿ.
ಬಿಸಿಲಿಗೆ ಎಲೆ ಹೀಗೆ ಆಗದಂತೆ ಜಾಗರೂಕತೆ ವಹಿಸಿ.

ನೆಡುವ ಗಿಡ ಮತ್ತು ಸಮಯ:

 • ನೆಡಲು ಬಳಸುವ ಗಿಡ ನರ್ಸರಿಯಲ್ಲಿ  ತುಂಬಾ ನೆರಳಿನಲ್ಲಿ ಇದ್ದರೆ ಆ ಗಿಡವನ್ನು ನೆಡುವ ಮುಂಚೆ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಚಪ್ಪರ ಹಾಕಿ ಸ್ವಲ್ಪ ಸ್ವಲ್ಪವೇ ಸರಿಸುತ್ತಾ ಹೊಂದಾಣಿಕೆ ಆಗುವಂತೆ ಮಾಡಿ ನೆಡಬೇಕು.
 • ಒಂದು ವೇಳೆ ನೆಟ್ಟು ಹೊಸ ಚಿಗುರು ಬರುವ ತನಕ ಮಳೆ ಅಥವಾ ತುಂಬಾ ತಂಪು ವಾತಾವರಣ ಇದ್ದರೆ ತಕ್ಷಣ ನೆಡಬಹುದು.
 • ಬಿಸಿಲು ಇರುವಾಗ ನೆಟ್ಟರೆ ಗಿಡದ ಎಲೆಗೆ ಸೂರ್ಯನ ಬೆಳಕಿನ ಝಳ ತಗಲಿ ಅದು ಹರಿತ್ತು ಕಳೆದುಕೊಂಡು ಬಿಳಿಯಾಗಬಹುದು.
 • ತಕ್ಷಣ ನೆರಳು ಮಾಡುವುದಿದ್ದರೆ ಸಮಸ್ಯೆ ಇಲ್ಲ.
 • ಎಲೆಗಳಿಗೆ ಬಿಸಿಲು ತಾಗಿ ಬಿಳಿಯಾದರೆ ಆ ಸಸಿಯ  ಬೆಳವಣಿಗೆ ಕುಂಠಿತವಾಗುತ್ತದೆ.
 • ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಿರುವ ನೆರಳು ವ್ಯವಸ್ಥೆ ಇಲ್ಲದೆ ಬೆಳೆಸಿದ ಸಸಿ ಆಯ್ಕೆ ಮಾಡಿ.
 • ನಿಮ್ಮದೇ ಸಸಿ ಆಗಿದ್ದರೆ ನೆಡುವ ಮುಂಚೆ 1 ತಿಂಗಳು ಸಸಿ ಹೊರ ವಾತಾವರಣದಲ್ಲಿ ಹೊಂದಿಕೆಯಾಗುವಂತೆ ಬೆಳೆಸಿ ನೆಡಬೇಕು.

ಎಳೆ ಪ್ರಾಯದಲ್ಲಿ ಸಸಿಯನ್ನು ಜಾಗರೂಕತೆಯಲ್ಲಿ ಬೆಳೆಸಬೇಕು. ಜೀರ್ಣವಾಗುವ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಗೊಬ್ಬರ ಕೊಡಬಾರದು. ತೀರಾ ಕಡಿಮೆ ಸಂಖ್ಯೆಯಲ್ಲಿ ಬೇರುಗಳು ಇರುವ ಕಾರಣ ಬೇರಿಗೆ ಹಾನಿಯಾಗುವಂತೆ ಗೊಬ್ಬರಗಳನ್ನು ಕೊಡಬಾರದು. ಕೊಟ್ಟಿಗೆ ಗೊಬ್ಬರ, ಫಲವತ್ತಾದ ಮೆಕ್ಕಲು ಮಣ್ಣು, ಬೇರಿನ ಬೆಳವಣಿಗೆ ಪ್ರಚೋದಿಸುತ್ತದೆ ಮತ್ತು ಅದು ಸೌಮ್ಯ ಗೊಬ್ಬರವಾಗಿರುತ್ತದೆ. ಅದನ್ನೇ ನೆಡುವಾಗ ಹಾಕಿ, ನಂತರ 2 ತಿಂಗಳು ಕಳೆದು ರಸಗೊಬ್ಬರ ಹಿತಮಿತವಾಗಿ ಆಗಾಗ ಕೊಡುತ್ತಾ ಇರಿ.

Leave a Reply

Your email address will not be published. Required fields are marked *

error: Content is protected !!