ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ನಮ್ಮೆಲ್ಲರ ಚಿತ್ತ ಈಗ ಅಡಿಕೆ ಧಾರಣೆಯ ಏರಿಳಿತದ ಮೇಲೆ. ಈ ವರ್ಷದ ಹವಾಮಾನ ಮತ್ತು ಮುಂದಿನ ವರ್ಷದ ರಾಜಕೀಯ ವಿಧ್ಯಮಾನಗಳ ಕೃಪೆಯಿಂದ ಅಡಿಕೆಗೆ ಬೆಲೆ ಏರುವ ಸೂಚನೆಯೇ ಹೆಚ್ಚಾಗಿ ಕಾಣಿಸುತ್ತಿದೆ. ಈಗಾಗಲೇ ರಾಜ್ಯ ಚುನಾವಣೆಯ ಕಾವು ಮುಗಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದೆ. ಯಾವುದೇ ಪಕ್ಷವಾದರೂ ರೈತರಿಗೆ ತೊಂದರೆ ಮಾಡಲಾರರು. ಹಣ, ಸ್ವತ್ತು ಯಾವುದೇ ವಸ್ತು ಸಾಗಾಣಿಕೆಗೆ ಇರುವ ಅಡ್ಡಿ ಆತಂಕಗಳು ದೂರವಾಗಿವೆ. ಇದೇ ಕಾರಣದಿಂದ ಧಾರಣೆ ಏರಲು ಪ್ರಾರಂಭವಾಗಿದೆ.
ಅಡಿಕೆ ಧಾರಣೆ ಏರಿಕೆಯಾಗಬೇಕೇ? ಹಾಗಾದರೆ ಅದಕ್ಕೆ ಕೆಲವು ಅನುಕೂಲಕರ ಸನ್ನಿವೇಶಗಳು ಕೂಡಿ ಬರಬೇಕು. ಆಡಳಿತ ನಡೆಸುವವರ ಇಚ್ಚಾ ಶಕ್ತಿ, ಬೆಳೆ ಪರಿಸ್ಥಿತಿ, ಬೇಡಿಕೆ ಇವೆಲ್ಲಾ ಸನ್ನಿವೇಶಗಳು ಬೆಲೆಯನ್ನು ಮೇಲಕ್ಕೂ ಕೊಂಡೊಯ್ಯಬಹುದು, ಕೆಳಕ್ಕೂ ತಳ್ಳಬಹುದು.ಈಗ ನಮ್ಮಲ್ಲಿ ಎರಡು ಸಂಗತಿಗಳು ನಿಚ್ಚಳವಾಗಿ ಏರಿಕೆಗೆ ಬೆಂಬಲವಾಗಿವೆ. ಬೇಡಿಕೆ ಎಂಬುದು ಯಾವಾಗಲೂ ಬೆಳೆಗಾರರಿಗೆ ಬೆಂಬಲವಾಗಿಯೇ ಇದೆ. ಇದೇ ಬೇಡಿಕೆಗಾಗಿ ಆಮದು ಸಹ ಮಾಡಲಾಗುತ್ತಿದೆ. ಅಡಿಕೆ ಸಸ್ಯ ಕುಟುಂಬದಲ್ಲಿನ ಬೇರೆ ಬೇರೆ ಪ್ರವರ್ಗದ ಬೀಜಗಳನ್ನು ಗುಟ್ಕಾದ ಜೊತೆಗೆ ಸೇರಿಸಲಾಗುತ್ತದೆ. ಹಾಗಾಗಿ ಸಧ್ಯಕ್ಕೆ ಬೇಡಿಕೆ ಇದ್ದೇ ಇದೆ. ರಾಜಕೀಯವಾಗಿ ಮುಂದಿನ ವರ್ಷದ ತನಕ ಬೆಳೆಗಾರರಿಗೆ ಅನ್ಯಾಯ ಆಗುವ ಸಾಧ್ಯತೆ ಇಲ್ಲ. ಬೆಳೆ ಪರಿಸ್ಥಿತಿಯಂತೂ ಬಹಳ ಶೊಚನೀಯವಾಗಿದೆ. ಹಾಗಾಗಿ ಎಲ್ಲವೂ ಅನುಕೂಲಕರವಾಗಿಯೇ ಇದೆ.

ಆಡಳಿತಾತ್ಮಕ ಬೆಂಬಲ:

 • ಮುಂದಿನ ವರ್ಷದ ಎಪ್ರೀಲ್ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುತ್ತದೆ.
 • ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲುವ ಸಲುವಾಗಿ ತಮ್ಮ ಅಧಿಕಾರಾವಧಿಯ ಕೊನೆ ಹಂತದಲ್ಲಿ ಆಡಳಿತಾರೂಢ ಪಕ್ಷ ಯಾವುದೇ ಇದ್ದರೂ ಮತದಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ.
 • ಕೇಂದ್ರ ಸರಕಾರ ಮನಸ್ಸು ಮಾಡಿದರೆ ನಮ್ಮ ದೇಶಕ್ಕೆ ಅಡಿಕೆ ಆಮದು ಆಗುವುದನ್ನು ಬಿಗಿ ಮಾಡಿದರೆ ಸಾಕು.
 • ಸ್ಥಳೀಯ ಅಡಿಕೆ ಬೆಳೆಗಾರರಿಗೆ ಭಾರೀ ಅನುಕೂಲವಾಗುತ್ತದೆ. ಇದನ್ನು ಮಾಡಿಯೇ ತೀರುತ್ತಾರೆ.
 • ಈಗಾಗಲೇ ಆಮದು ವ್ಯವಹಾರ ಬಿಗಿ ಗೊಳಿಸಿ, ಗಡಿಯಲ್ಲಿ ಕಳ್ಳ ಮಾಲು ನುಸುಳದಂತೆ ಬಿಗಿ ಬಂದೋಬಸ್ತುಗಳನ್ನು ಕೇಂದ್ರ ಸರಕಾರ ಮಾಡಿದೆ.
 • ಇದೇ ಕಾರಣಕ್ಕೆ ಎಪ್ರೀಲ್ 2023 ರ ಕೊನೇ ವಾರದಲ್ಲಿ ದರ ಏರಿಕೆ ಪ್ರಾರಂಭವಾಗಿದೆ.
 • ಕಳೆದ ಒಂದು ವಾರದಲ್ಲಿ ಮಾರುಕಟ್ಟೆ ಸ್ವಲ್ಪ ಹಿನ್ನಡೆಯಾದದ್ದು. ರಾಜ್ಯ ಚುನಾವಣೆಯ ಕಾರಣದಿಂದ.
 • ಚುನಾವಣೆ ಮುಗಿಯುತ್ತಿದ್ದಂತೆ ಖಾಸರಿಯವರು ದರ ಏರಿಕೆಗೆ ಮುಂದಾಗಿದ್ದಾರೆ.
 • ಚಾಲಿ ದರವೂ ಏರಿದೆ. ಕೆಂಪಡಿಕೆ ದರವೂ ಏರಿದೆ. 

ಬೆಳೆ ಉತ್ಪಾದನೆಯಲ್ಲಿ ಭಾರೀ ಕುಸಿತ:

ಒಣಗಿ ಹೋದ ಅಡಿಕೆ ತೋಟಗಳು
ಒಣಗಿ ಹೋದ ಅಡಿಕೆ ತೋಟಗಳು
 • ಈ ವರ್ಷ ಬೆಳೆಯುವ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ ಮಳೆ ಬಾರದೆ ನೀರಿನ ಕ್ಷಾಮ ಎದುರಾಗಿದೆ.
 • ಸಾಮಾನ್ಯವಾಗಿ ಕೊಳೆ ರೋಗ ಬಂದು ಬೆಳೆ ಕಡಿಮೆಯಾಗುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವಂತದ್ದು.
 • ಆದರೆ ಈ ವರ್ಷ ಕೊಳೆ ಬರುವುದಕ್ಕೆ ಮುಂಚೆಯೇ ಬೆಳೆ ಹಾಳಾಗಿದೆ.
 • ಕೆಲವು ಅಂದಾಜುಗಳ ಪ್ರಕಾರ ಈ ವರ್ಷ 50% ದಷ್ಟು ಬೆಳೆ ಕಡಿಮೆಯಾಗುವ ಸಾಧ್ಯತೆ ಇದೆ.
 • ಬೇಸಿಗೆಯ ಬೇಗೆ ಜೊತೆಗೆ ಮೈಟ್ ಕೀಟದ ತೊಂದರೆಯಿಂದಾಗಿ ನೀರು ಇರುವಲ್ಲಿಯೂ ಅಡಿಕೆ ಮರಗಳ ಗರಿ ಒಣಗಿರುವುದು ಕಂಡು ಬರುತ್ತಿದೆ.
 • ಎಲ್ಲಾ ಕಡೆಯಲ್ಲೂ ನೀರಿನ ಕೊರತೆ ಉಂಟಾಗಿದೆ. ಎಲ್ಲೆಂದರಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ.
 • ಮಧ್ಯಾನ್ಹದ ತಾಪಮಾನ 38-39 ಡಿಗಿ ತನಕ ಏರಿಕೆಯಾಗಿ ಅಡಿಕೆ ತೆಂಗಿನ ಮರಗಳು ಬೇಗೆಯನ್ನು ತಾಳಿಕೊಳ್ಳಲಾರದೆ ಸೊರಗಿವೆ.
 • ಇದರಿಂದಾಗಿ ಎಪ್ರೀಲ್ ಮೊದಲ ವಾರದ ತನಕ ಮರದಲ್ಲಿ ಅಡಿಕೆ ಮಿಡಿಗಳು ಕಾಣಿಸುತ್ತಿದ್ದುದು ಉದುರಲು ಪ್ರಾರಂಭವಾಗಿದೆ.
 • ನೀರು, ಗೊಬ್ಬರ ಯಾವುದಕ್ಕೂ ಸ್ಪಂದಿಸದ ಸ್ಥಿತಿ ಉಂಟಾಗಿದೆ.
 • ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಮಳೆ ಬಂದು ವಾತಾವರಣ ತಂಪಾಗಿದೆ.
 • ಆದರೆ ಈ ತನಕ ಆದ ಹಾನಿ ಬಹುಷಃ ತೋಟಗಳು ಇನ್ನು ಎರಡು ವರ್ಷ ತನಕ ಫಲ ಕೊಡಲಾರವೋ ಎಂಬಷ್ಟು ಹಾನಿಗೊಳಗಾಗಿವೆ.
 • ಉತ್ಪಾದನೆ ಅಂತೂ ಇನ್ನೂ ಎರಡು ವರ್ಷಗಳ ತನಕ ಹೆಚ್ಚಳವಾಗುವುದಿಲ್ಲ.
 • ಹೊಸ ತೋಟಗಳಿಂದಾಗಿ ಉತ್ಪಾದನೆಗೆ ಹೆಚ್ಚಾಗಬಹುದು ಎಂಬ ಭೀತಿ ದೂರವಾಗಿದೆ.
 • ಹಳೆ ತೋಟಗಳು ಹಾಳಾಗಿವೆ. ಹೊಸ ತೋಟಗಳೂ ಸಹ ಅಂತಹ ಉತ್ತಮ ಬೆಳೆವಣಿಗೆಯಲ್ಲಿಲ್ಲ.
 • ಹಾಗಾಗಿ ಬೆಳೆ ಹೆಚ್ಚಳ ಆಗುವುದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಇದೆ.

ಚಾಲಿಗೆ ಬೆಲೆ ಏರಬಹುದು:

ಹೊಸ ಚಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಹಳತೂ ಮೇಲೆ ಏರಲಿದೆ.
ಹೊಸ ಚಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಹಳತೂ ಮೇಲೆ ಏರಲಿದೆ.
 • ಇನ್ನು ಮಳೆಗಾಲ ಪ್ರಾರಂಭವಾಗುವ ಕಾರಣ ಈ ಸಮಯದಲ್ಲಿ ಖರೀದಿದಾರರು ದಾಸ್ತಾನು ಮಾಡುವುದು ಸಾಮಾನ್ಯ.
 • ಮಳೆಗಾಲದಲ್ಲಿ ಸ್ವಲ್ಪ ಬೇಡಿಕೆ ಹೆಚ್ಚು. ಜೊತೆಗೆ ಈ ಸಮಯದಲ್ಲಿ ಸಾಗಾಟ ಇತ್ಯಾದಿಗಳಿಗೆ ತೊಂದರೆಯೂ ಇರುತ್ತದೆ.
 • ಹಾಗಾಗಿ ಉತ್ತರ ಭಾರತದ ಖರೀದಿದಾರರು ಸ್ವಲ್ಪ ಪ್ರಮಾಣದಲ್ಲಿ ಮಳೆಗಾಲಕ್ಕೆ ಮುಂಚೆ ದಾಸ್ತಾನು ಮಾಡುತ್ತಾರೆ.
 • ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗುತ್ತಿದೆ.
 • ಈಗಾಗಲೇ ಖಾಸಗಿ ವರ್ತಕರು 48,000 ತನಕ ಹಳತನ್ನು ಖರೀದಿಸುತ್ತಿದ್ದಾರೆ.
 • ಹೊಸತಕ್ಕೆ ಬೇಡಿಕೆ ಚೆನ್ನಾಗಿದು 40,000 ತನಕ ಖರೀದಿ ನಡೆಯುತ್ತಿದೆ.
 • ಮುಂದಿನ ವಾರದಿಂದಲೇ ಸಾಂಸ್ಥಿಕ ಖರೀದಿದಾರರೂ ಸಹ ಬೆಲೆ ಏರಿಕೆಗೆ ಮುಂದಾಗುವ ಸಾಧ್ಯತೆ ಇದೆ.
 • ಹಳತು ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ದರ ಏರಿಕೆ ಸ್ವಲ್ಪ ವಿಳಂಬವಾಗಬಹುದು.
 • ಜೂನ್ ಕೊನೆ ಒಳಗೆ ಹಳೆ ಅಡಿಕೆಗೆ 50,000 ತನಕ ಏರಿಸುವ ಸಾಧ್ಯತೆ ಇದೆ.


ಕೆಂಪಡಿಕೆ ಭಾರೀ ಏರಿಕೆ ಸಾಧ್ಯತೆ:

 • ಚೇಣಿ ವಹಿಸಿಕೊಂಡವರಲ್ಲಿ ಹೆಚ್ಚಿನವರು ಈಗಾಗಲೇ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಇದೆ.
 • ಮುಂದಿನ ಬೆಳೆ ಗುತ್ತಿಗೆ ಹಾಗೂ ರಾಜ್ಯ ಚುನಾವಣೆ ಸಮಯದಲ್ಲಿ ದರ ಇಳಿಕೆಯಾಗಬಹುದು ಎಂಬ ಭೀತಿಯಲ್ಲಿ ಮಾರಾಟ ಮಾಡಿದ್ದಾರೆ.
 • ಬೆಳೆಗಾರರು ಮುಂಗಡ ಪಡೆದು ಸಾಂಸ್ಥಿಕ ಖರೀದಿದಾರಲ್ಲಿ ಇಟ್ಟಿರುತ್ತಾರೆ.
 • ಇನ್ನು ಮುಂದಿನ ಮಳೆಗಾಲದಲ್ಲಿ ತೋಟ ನಿರ್ವಹಣೆಗೆ ಅಧಿಕ ಹಣಕಾಸಿನ ಅಗತ್ಯವಿರುವ ಕಾರಣ ಮಾರಾಟದ ಸಿದ್ದತೆಯಲಿದ್ದಾರೆ.
 • ಈ ಕಾರಣದಿಂದ ಮುಂದೆ ದರ ಏರಿಕೆ ಆಗಬಹುದು.
 • ಈ ಬಾರಿ ರಾಶಿಗೆ 50,000 ದಾಟಿ ಮುಂದೆ ಹೋಗವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ.
 • ಸರಾಸರಿ 47,000-48,500 ಕ್ಕೆ ಖರೀದಿ ನಡೆಯುತ್ತಿದೆ. ಬಿಡ್ ಮಾಡುವರೂ ಇದ್ದಾರೆ.


ಅಡಿಕೆ ಬೆಳೆಯೇ ಆತಂಕದಲ್ಲಿದೆ:

 • ಅಡಿಕೆ ಬೆಳೆಯುವ ಬಹುತೇಕ ಎಲ್ಲಾ ಕಡೆ ಕೊಳವೆ ಬಾವಿಯ ನೀರನ್ನೇ ಆಶ್ರಯಿಸಲಾಗಿದೆ.
 • ಕೊಳವೆ ಬಾವಿಯ ನೀರು ಒಂದು ಅಧೃಷ್ಟ ಇದ್ದಂತೆ. ಯಾವಾಗಲೂ ಇದು ಕೈಕೊಡಬಹುದು.
 • ಒಂದಷ್ಟು ಸಮಯ ಇಳುವರಿ ಕೊಡುತ್ತಲೂ ಇರಬಹುದು. ಇದಕ್ಕೆ ಈ ವರ್ಷದಲ್ಲಿ ಆದದ್ದೇ ನಿದರ್ಷನ.
 • ಹೊಳೆ, ಹಳ್ಳಗಳಲ್ಲಿಯೂ ನೀರು ಎಪ್ರೀಲ್ ತಿಂಗಳಿಗೇ ಬತ್ತುವ ಸ್ಥಿತಿ ಉಂತಾಗಿದೆ.
 • ಒಂದಂತೂ ನಿಜ ಕೊಳವೆ ಬಾವಿಯಲ್ಲಿ, ತೋಡುವಾಗ ಇದ್ದ ನೀರಿನ ಇಳುವರಿ ಮುಂದಿನ ವರ್ಷ ಕಡಿಮೆಯಾಗುತ್ತದೆ.
 • ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುವುದಂತೂ ಖಾತ್ರಿ.
 • ಈ ವರ್ಷದಂತಹ ವಾತಾವರಣ ಹಾಗೂ ಲೆಕ್ಕಮಿತಿಯಿಲ್ಲದ ಅಂತರ್ಜಲದ ಬಳಕೆ ಕೆಲವೇ ಸಮಯದಲ್ಲಿ ಅಂತರ್ಜಲ ಎಂಬ ನೀರಿನ ಮೂಲ ಬರಿದಾಗಲೂ ಬಹುದು.
 • ಹಾಗಾಗಿ ಬೆಳೆ ಎಷ್ಟೇ ಹೆಚ್ಚಳವಾಗಲಿ ಇಳುವರಿ ಆ ಪ್ರಮಾಣದಲ್ಲಿ ಹೆಚ್ಚಳವಾಗುವುದಿಲ್ಲ.
 • ವರ್ಷ ಹೆಚ್ಚಾದಂತೆ ರೈತರಿಗೂ ಕೃಷಿಯಲ್ಲಿ ಉತ್ಸಾಹ ಕಡಿಮೆಯಾಗುತ್ತಾ ಬರುತ್ತದೆ.
 • ಹೊಸ ತಲೆಮಾರಿನವರಿಗೆ ಕೃಷಿ ರುಚಿಸುವುದಿಲ್ಲ. ನೈಪುಣ್ಯದ ಕೆಲಸಗಾರರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ.
 • ಈ ಕಾರಣದಿಂದ ತೋಟಗಳು , ಮತ್ತು ಉತ್ಪಾದನೆ ಕುಂಠಿತವಾಗಲೂ ಬಹುದು.

ಬೆಳೆಗಾರರು ಬೆಲೆ ಬಂದಿದಾಗ ಮಾರಾಟ ಮಾಡಿ ಅದರಲ್ಲಿ ಇನ್ನೂ ಇನ್ನೂ ತೋಟ ಮಾಡುತ್ತಾ ಮುಂದುವರಿಯಬೇಡಿ. ಮುಂದಿನ ದಿನಗಳಲ್ಲಿ ನೀರು, ಕೆಲಸಗಾರರು, ನಮ್ಮ ಕೃಷಿ ವ್ಯವಸ್ಥೆಗೆ ಕೈಕೊಡುವ ಸಾದ್ಯತೆ ಹೆಚ್ಚಾಗಿರುವ ಕಾರಣ ಇರುವ ತೋಟವನ್ನು ಚೆನ್ನಾಗಿ ನೋಡಿಕೊಳ್ಳಿ. ಸಾಧ್ಯವಾದಷ್ಟು ಉಳಿತಾಯ ಮಾಡಿಕೊಳ್ಳಿ. ಕೃಷಿ ಪೂರಕ ವೃತ್ತಿ, ಉದ್ದಿಮೆಗಳಲ್ಲಿ ಹಣ ಹೂಡುವುದರಿಂದ ಲಾಭ ಇದೆ.

Leave a Reply

Your email address will not be published. Required fields are marked *

error: Content is protected !!