ತೆಂಗು- ಕಾಂಡದಲ್ಲಿ ರಸಸೋರುವ ತೊಂದರೆ ನಿರ್ವಹಣೆಯ ವಿಧಾನ

coconut garden

ಹಾಸನ ಜಿಲ್ಲೆಯ ತೆಂಗು ರಾಜ್ಯದಲ್ಲೇ ಹೆಸರುವಾಸಿ. ಚನ್ನರಾಯಪಟ್ಟಣದ ತೆಂಗು ಎಂದರೆ ಹೆಸರುವಾಸಿ. ಆದರೆ ಇಲ್ಲೆಲ್ಲಾ ಈಗ ಪ್ರಾರಂಭವಾಗಿದೆ  ಕಾಂಡದಲ್ಲಿ ರಸ ಸೋರುವ  ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ.

ಹಾಸನ ಜಿಲ್ಲೆಯಲ್ಲಿ ಉತ್ತಮ  ಆದಾಯ ಕೊಡುವಂತಹ ಬೆಳೆ. ಈ ಜಿಲ್ಲೆಗಳಲ್ಲಿ ತೆಂಗಿನ ಪ್ರದೇಶ ವರ್ಷ ವರ್ಷವೂ ಹೆಚ್ಚಾಗುತ್ತಿದೆ. ತೆಂಗಿನ ಪ್ರದೇಶ ವಿಸ್ತರಣೆ ಆದಷ್ಟು ಇಳುವರಿ ಹೆಚ್ಚಾಗುತ್ತಿಲ್ಲ. ಹೊಸ ತೋಟಗಳಲ್ಲಿ ಇಳುವರಿ ಇದ್ದರೂ ಹಳೆ ಮರಗಳಿಗೆ  ಭಾರೀ ಪ್ರಮಾಣದಲ್ಲಿ  ರೋಗ ಮತ್ತು ಕೀಟ ಬಾಧೆ ಕಾಣಿಸಿಕೊಳ್ಳುತ್ತಿವೆ. ಕಾಡದ ರಸ ಸೊರುವಿಕೆ, ರೈನೋಸರಸ್ ದುಂಬಿ ಹಾವಳಿ, ಕೆಂಪು ಮೂತಿ ಹುಳ, ಸುಳಿ ಕೊಳೆ ರೋಗ ಮತ್ತು ರೋಗಸ್ ಬಿಳಿನೊಣದ ಹಾವಳಿ. ಇವುಗಳ ಹಾವಳಿಯಿಂದ ಇಳುವರಿ ಗಣನೀಯವಾಗಿ ಕುಂಠಿತವಾಗುವುದಲ್ಲದೆ ದಶಕಗಳ ಕಾಲಾವಧಿ ಇಳುವರಿ ನೀಡುವ ಮರಗಳನ್ನು ಕೆಲವೇ ತಿಂಗಳುಗಳಲ್ಲಿ ಕಳೆದು ಕೊಳ್ಳಲಾಗುತ್ತಿದೆ.

  • ಈ ಜಿಲ್ಲೆಯಲ್ಲಿ ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಅರಕಲಗೂಡು ಮತ್ತು ಬೇಲೂರು ತಾಲ್ಲೂಕಿನಲ್ಲಿ ಈ ಪೀಡೆ ಬಾದೆಯಿಂದ ಸರಾಸರಿ ಪ್ರತಿ ತಾಲ್ಲೂಕಿನಲ್ಲಿ 50% ಮರಗಳು ನಶಿಸಿಹೋಗುತ್ತಿವೆ.
  • ರೈತರು ಈ ಪೀಡೆಗಳ ಮಹತ್ವವನ್ನು ಅರಿತು ಸಾಮೂಹಿಕವಾಗಿ ಸಮಗ್ರ ನಿರ್ವಹಣೆ ಕೈಗೊಳ್ಳಬೇಕು.
stem bleeding effected plant - ರಸ ಸೋರುವ ರೋಗ ಬಂದ ಮೊದಲ ಲಕ್ಷಣ

ರಸಸೋರುವಿಕೆ (Stem bleeding)ರೋಗದ ಲಕ್ಷಣಗಳು:

  • ಈ ರೋಗವು ಥೆಲವಿಯಾಪ್ಸಿಸ್ ಪ್ಯಾರಡಕ್ಸ್ (Thielaviopsis paradoxa) ಶಿಲೀಂಧ್ರದಿಂದ ಬರುತ್ತದೆ.
  • ಅದಕ್ಕೆ ಕಾರಣ ಅಸಮರ್ಪಕ ಪೋಷಕಾಂಶ ಮತ್ತು ನೀರು ನಿರ್ವಹಣೆ ಹಾಗೂ ಸಮಸ್ಯಾತ್ಮಕ ಮಣ್ಣು.
  • ಮೊದಲ ಹಂತದಲ್ಲಿ ಕಾಂಡದಲ್ಲಿ ಕೆನ್ನೆತ್ತರು ಬಣ್ಣದ  ರಸ ಸೋರುವ ಚಿಹ್ನೆ ಕಂಡುಬರುತ್ತದೆ.
  • ಈ ಹಂತದಲ್ಲಿ  ಕೆಳಭಾಗದ ಗರಿಗಳು ಸ್ವಲ್ಪ ಸ್ವಲ್ಪ  ಒಣಗಿ ಜೋಲುಬೀಳುತ್ತವೆ.
  • ಗರಿಗಳ ಸಂಖ್ಯೆ ಕಡಿಮೆಯಾಗುತ್ತಾ  ಬರುತ್ತದೆ. ಕ್ರಮೇಣ ಕಾಂಡದಲ್ಲಿ ರಸ ಸೋರುವಿಕೆ ಹೆಚ್ಚಾಗುತ್ತಾ ಮೇಲ್ಮುಖವಾಗಿ ಹಬ್ಬುತ್ತವೆ.
  • ಅಂತಹ ಮರಗಳಲ್ಲಿ ಹರಳು ಮತ್ತು ಕಾಯಿ ಉದುರುತ್ತವೆ.
stem bleeding - ರಸ ಸೋರುವಿಕೆ
  • ಈ ಚಿಹ್ನೆಗಳು ಕಂಡು ಬಂದ ಕೆಲವೇ ತಿಂಗಳುಗಳಲ್ಲಿ ತೆಂಗಿನ ಮರವು ಸಂಪೂರ್ಣವಾಗಿ ಒಣಗಿ ಹೋಗುತ್ತದೆ.
  • ರೋಗ ಪೀಡಿತ ಮರಗಳು ಶಕ್ತಿ ಕಳೆದುಕೊಂಡು ಆಹಾರಾಂಶಗಳನ್ನು ಹೀರಲಾಗದೆ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಕೆಲವು ಸಂದರ್ಭಗಳಲ್ಲಿ ಮರಗಳು ಬಂಜೆಯಾಗಿ ಸಾಯುತ್ತವೆ.
  • ಈ ಹಂತದಲ್ಲಿ ಇತರೆ ಕೀಟಗಳ ಹಾವಳಿಯಿಂದ ಮರದಲ್ಲಿ ಹಾಲಿನಂತೆ ರಸ ಸೋರುತ್ತದೆ.
  • ಅಣಬೆ ರೋವಾಗಿದ್ದರೆ ಅಂತಹ ಮರದ ಬುಡದಲ್ಲಿ ಅಣಬೆ ಕಂಡು ಬರುತ್ತದೆ.
gum oozing - ಮೇಣ ಸ್ರಾವ

ತೆಂಗಿನ ಮರಕ್ಕೆ ರಸ ಸೋರುವ ಸಮಸ್ಯೆ  ಉಂಟಾದರೆ ಚಿಕಿತ್ಸೆ ಮಾಡಬೇಕು. ಒಂದು ವೇಳೆ ಹಾಗೆ ಬಿಟ್ಟರೆ ಉಳಿದ ಮರಗಳಿಗೆ ಹರಡುತ್ತದೆ. ಅಡಿಕೆಗೂ ಇದು ಪ್ರಸಾರವಾದ ಉದಾಹರಣೆ ಇದೆ. ಆದ ಕಾರಣ ಬಾರದಂತೆ ಮುನ್ನೆಚ್ಚರಿಕಾ ವಿಧಾನ ಅನುಸರಿಸುವುದು ಉತ್ತಮ.

ಬೇರು ಉಪಚಾರ:

ರೋಗ ತೀವ್ರವಾದ ಮರಗಳಿಗೆ ಎಕ್ಸಕೊನೆಜೋಲ್ 5 ಮಿ.ಲೀ ಔಷಧಿಯನ್ನ 100 ಮಿ.ಲೀ ನೀರಿಗೆ ಬೆರೆಸಿ 3 ತಿಂಗಳ ಅಂತರದಲ್ಲಿ ವರ್ಷಕ್ಕೆ 4 ಬಾರಿಯಂತೆ ಬೇರೋಪಚಾರ ಮಾಡಬೇಕು, ಬೇರು ಉಪಚಾರ ಮಾಡಲು ಕಿರುಬೆರಳು ಗಾತ್ರದ ಕಂದು ಬಣ್ಣದ ಹೊಸ ಬೇರನ್ನ ಆಯ್ಕೆ ಮಾಡಿಕೊಳ್ಳಬೇಕು. 1/2 ಕೆ.ಜಿ ಹಿಡಿಯುವ ಪಾಲಿಥೀನ್ ಚೀಲದಲ್ಲಿ 100 ಮಿ.ಲೀ ನೀರು ಹಾಕಿ, 5 ಮಿ.ಲೀ ಔಷಧಿ ಬೆರಸಬೇಕು, ಬೇರನ್ನು ಓರೆಯಾಗಿ ಕತ್ತರಿಸಿ ಪಾಲಿಥೀನ್ ಚೀಲದ ಒಂದು ಮೂಲೆಗೆ ತಾಗುವಂತೆ ಔಷಧಿಯ ಒಳಗೆ ಇಡಬೇಕು.

ಬೇರಿಗೆ ಔಷಧಿ ಕಟ್ಟಿ 24 ಗಂಟೆಗಳೊಳಗಾಗಿ ಬೇರು ಔಷಧಿಯನ್ನ ಹೀರಿಕೊಳ್ಳುತ್ತದೆ. ಹೀರಿಕೊಳ್ಳದಿದ್ದರೆ ಬೇರೊಂದು ಬೇರಿಗೆ ಕಟ್ಟಬೇಕು. ಬೇರು ಉಪಚಾರ ಮಾಡುವ ಮೊದಲು ತೆಂಗಿನ ಮರದಿಂದ ಕಾಯಿಗಳನ್ನು ಕೀಳಬೇಕು. ಬೇರಿನಿಂದ ಹೀರಲ್ಪಟ್ಟ  ಶೀಲಿಂಧ್ರನಾಶಕದ ಅಂಶ ಕಾಯಿಗಳಲ್ಲಿ ಮತ್ತು ಎಳೆನೀರಿನಲ್ಲಿ ಸೇರುವುದರಿಂದ 45 ದಿನಗಳವರೆಗೆ ಉಪಚಾರ ಮಾಡಿದ ಮರಗಳಿಂದ ಕಾಯಿ ಅಥವಾ ಎಳನೀರನ್ನು ಕೀಳಬಾರದು.

Bordox paste and cement plastering - ಬೋರ್ಡೋ ದ್ರಾವಣ ಮತ್ತು ಸಿಮೆಂಟ್ ಪ್ಲಾಸ್ಟರಿಂಗ್

ಮರಗಳಿಗೆ ಬೊರ್ಡೋ ಮುಲಾಮು ಲೇಪನ:

  • ತೆಂಗಿನ ಮರದ ಕಾಂಡ ಮೇಲೆ ಒಂದು ಮೀಟರ್‍ವರೆಗೆ ಬೋರ್ಡೋ ಪೇಸ್ಟ್ ಲೇಪಿಸುವುದು ಅಥವಾ ಸುಣ್ಣ ಹೊಡೆಯುವುದರಿಂದ ರೋಗಾಣುಗಳು ಮರವನ್ನ ಪ್ರವೇಶಿಸುವುದನ್ನ ಮತ್ತು ಕೀಟಗಳು ಮೊಟ್ಟೆಗಳನ್ನು ಇಡುವುದನ್ನು ತಪ್ಪಿಸಬಹುದು.
  • ಕಾಂಡದ ಮೇಲೆ ಉಳುಮೆ ಮಾಡುವಾಗ ಗಾಯವಾದರೆ ಬೋರ್ಡೋ ಪೇಸ್ಟನ್ನು ಅಥವಾ ಸುಣ್ಣವನ್ನು ಲೇಪಿಸಬೆಕು.
  • ಹಸಿರೆಲೆ ಗೊಬ್ಬರಗಳಾದ ಅಪ್‍ಸೆಣಬು, ದಯಂಚ ಅಥವಾ ದ್ವದಳ ದಾನ್ಯಗಳನ್ನು ಮರದ ಸುತ್ತ ಬೆಳೆದು ಮಣ್ಣಿಗೆ ಸೇರಿಸಿ, ಮಣ್ಣಿನ ಆರೋಗ್ಯವನ್ನ ಉತ್ತಮ ಪಡಿಸಿಕೊಳ್ಳಬಹುದು.
  • ಈ ರೋಗವು ಮಣ್ಣಿನ ಮೂಲಕ ಹರಡುವುದರಿಂದ ತೋಟಗಳಲ್ಲಿ ಸತ್ತು ಹೋದ ತೆಂಗಿನ ಮರಗಳು ಇದ್ದರೆ ಅಂತಹ ಮರಗಳನ್ನು ಸುಟ್ಟು ಹಾಕಬೇಕು
  • ಬೋರ್ಡೋ ಪೇಸ್ಟ್ ತಯಾರಿಸಲು 1 ಕಿಲೋ ಮೈಲುತುತ್ತೆ ಮತ್ತು  1 ಕಿಲೋ ಸುಣ್ಣ ಮತ್ತು  10 ಲೀ. ನೀರನ್ನು ಬೆರೆಸಿ ತಯಾರಿಸಬೇಕು.
  • ಇದಕ್ಕೆ ಪ್ಲಾಸ್ಟಿಕ್ ಬಕೆಟ್ ಇತ್ಯಾದಿ ಲೋಹವಲ್ಲದ ಪಾತ್ರೆಗಳನ್ನು ಉಪಯೋಗಿಸಬೇಕು.
Skin removing -ತೊಗಟೆ ಕೆತ್ತಿ ತೆಗೆಯುವುದು

ನಿಯಂತ್ರಣ ವಿಧಾನಗಳು:

ಪ್ರಥಮ ಚಿಕಿತ್ಸೆ: ಸಾಂಪ್ರದಾಯಿಕವಾಗಿ ಇಂತಹ ರಸ ಸೋರುವ ಸಮಸ್ಯೆ ಉಂಟಾದ ಮರಗಳಿಗೆ ಗೋಡಂಬಿ ಸಿಪ್ಪೆಯ ಎಣ್ಣೆಯನ್ನು ಲೇಪಿಸುವ ಕ್ರಮ ಇತ್ತು.

ಕೆಲವರು ಇಂತಹ ಮರಗಳಿಗೆ ರಸ ಸೋರುವ ಜಾಗಕ್ಕೆ ಮಡ್ ಆಯಿಲ್ ಅನ್ನು ಲೇಪನ ಮಾಡುವುದೂ ಇದೆ. 

ಪ್ರಾರಂಭಿಕ ಹಂತದಲ್ಲಿ ಸೋಂಕು ತಗಲಿದ್ದರೆ ಅದನ್ನು ಗುರುತಿಸಿದ್ದರೆ ಇದರಲ್ಲೂ ಸ್ವಲ್ಪ ಮಟ್ಟಿಗೆ ಪ್ರಯೋಜನ ಇದೆ.

ಈ ಎಣ್ಣೆಗಳು ಶಿಲೀಂದ್ರದ ಬೆಳವಣಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

  • ರೋಗಕ್ಕೆ ತುತ್ತಾದ ಮರದ ಕಾಂಡದ ಅಂಗಾಂಶವನ್ನು  ಕತ್ತಿ ಅಥವಾ ಬಡಗಿಯವರು ಉಪಯೋಗಿಸುವ ಸಾಧನಗಳ ಮೂಲಕ ಕೆತ್ತಿ,  ತೆಗೆಯಬೇಕು.
  • ಆ ಭಾಗಕ್ಕೆ ಶೇ.5 ರ ಹೆಕ್ಸಾ ಕೊನೆಝಾಲ್ Contaf  fungicide ಲೇಪಿಸಬೇಕು.
  • ಕೆತ್ತಿ ತೆಗೆದ ತೊಗಟೆಯನ್ನು ಅಲ್ಲೇ ಇಡಬಾರದು. ಅದನ್ನು ಸುಟ್ಟು ನಾಶ ಮಾಡಬೇಕು.
cement plastering for full effected area- ಹಾನಿಯಾದ ಭಾಗಕ್ಕೆ ಸಿಮೆಂಟ್ ಪ್ಲಾಸ್ಟರಿಂಗ್
  • ಗಾಯಗಳಿಗೆ ಲೇಪನ ಮಾಡಿ ಸಿಮೆಂಟ್ ಗಾರೆಯನ್ನು ಹಾಕಬೇಕು.
  • ರೋಗ ಗ್ರಸ್ತ ಭಾಗಕ್ಕೆ ಟ್ರೈಕೋಡರ್ಮಾ (Tricoderma)  ಲೇಪಿಸಬೇಕು.
  • ಕೆಲವು ರೈತರು ಕಾಂಡಕ್ಕೆ  ರಾಸಾಯನಿಕ ಉಪಚಾರ ಮಾಡಿ ಆ ಭಾಗಕ್ಕೆ ಎಲ್ಲೆಲ್ಲಾ ರಸ ಸೋರುವಿಕೆ ಉಂಟಾಗಿದೆಯೋ ಅಲ್ಲಿ ತನಕ ಸಿಮೆಂಟ್ ಗಾರೆಯನ್ನು ಲೇಪನ ಮಾಡಿ ನಂತರ ಮರ ಸರಿಯಾದ ಉದಾಹರಣೆ ಇದೆ.
  • ತೆಂಗಿನ ಮರಕ್ಕೆ ಸಮತೋಲನ ಪ್ರಮಾಣದಲ್ಲಿ ಗೊಬ್ಬರಗಳನ್ನು ಕೊಡುತ್ತಾ ಸಾಕಬೇಕು.
  • ನೀರು ಬಸಿದು ಹೋಗದ ಪ್ರದೇಶಗಳಲ್ಲಿ ಅಧಿಕ ನೀರಾವರಿ ಮಾಡಬಾರದು.
  • ಮರಕ್ಕೆ ಬೇವಿನ ಹಿಂಡಿ ಅಥವಾ ಹರಳು ಹಿಂಡಿಯನ್ನು ಪ್ರತೀ  ಮರಕ್ಕೆ 5 kg ಯಂತೆ ಹಾಕಬೇಕು.
  • ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಟ್ರೈಕೋಡರ್ಮಾ  ಬೇವು ಅಥವಾ ಹರಳು ಹಿಂಡಿಯ (Castor meal) ಜೊತೆಗೆ ಮಿಶ್ರಣ ಮಾಡಿ ಹಾಕಬೇಕು.
  • ಬೇಸಿಗೆಯಲ್ಲಿ ನೀರೂತ್ತಾಯ ಮಾಡಬಾರದು. ಅಗತ್ಯ ಇರುವಲ್ಲಿ ಬಸಿ ಗಾಲುವೆಯನ್ನು ಮಾಡಬೇಕು.

ಯಾವುದೇ ಕಾರಣಕ್ಕೆ ಹಾನಿಗೊಳಗಾದ ಮರಕ್ಕೆ ಉಪಚಾರ ಮಾಡದೆ ಬಿಡಬಾರದು. ಇದರಿಂದ ಬೇರೆ ಮರಗಳಿಗೂ ಅದು ವ್ಯಾಪಿಸಬಹುದು.  ತೀವ್ರ ಹಾನಿಗೊಳಗಾದ ಮರಗಳನ್ನು ಉಳಿಸಬಾರದು. ಕಡಿದ ಮರಗಳನ್ನು 1 ಅಡಿ ತುಂಡು ಮಾಡಿ ನೇರವಾಗಿ ಇಟ್ಟು ಅದಕ್ಕೆ ಕೀಟನಾಶಕ ಕ್ಲೋರೋಫೆರಿಫೋಸ್ ಸುರಿದು  ಕೀಟಗಳು ಅಕರ್ಷಣೆ ಆಗದಂತೆ ತಡೆಯಬೇಕು. ಇದನ್ನು ಪೂರ್ಣ ಬಿಸಿಲು ಇರುವ ಜಾಗದಲ್ಲಿ ಇಡಬೇಕು.

ಡಾ. ನಾಗಾರಾಜ ಟಿ, ಕು. ಬಿಂದು ಎನ್, ಡಾ. ರಾಜೇಗೌಡ, ಡಾ. ಗಿರೀಶ್, ಕು. ಲಾವಣ್ಯ ಕೆ. ಎಸ್ ಮತ್ತು ಡಾ. ಸಂಕೇತ್. ಸಿ. ವಿ, ನಿಸರ್ಗ HS -ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನ

error: Content is protected !!