ತೆಂಗಿನ ಮರದ ರಸ ಸೋರುವಿಕೆಗೂ ಉಳುಮೆಗೂ ಏನು ಸಂಬಂಧ?

ಉಳುಮೆ ರಹಿತ ತೆಂಗಿನ ತೋಟ

ತೆಂಗಿನ ಮರಕ್ಕೆ ಅತೀ ದೊಡ್ಡ ರೋಗ ಎಂದರೆ ಕಾಂಡದಲ್ಲಿ ರಸ ಸೋರುವಿಕೆ. ರಸ ಸೋರುವಿಕೆ ಪ್ರಾರಂಭವಾಗಿ ಕೆಲವು ವರ್ಷಗಳ ನಂತರ ಮರ ಕಾಯಿ ಬಿಡುವುದು ನಿಲ್ಲಿಸುತ್ತದೆ. ನಿಧಾನವಾಗಿ ಮರ ಕೃಶವಾಗುತ್ತಾ ಬರುತ್ತದೆ. ಇದಕ್ಕೆ ಮೂಲ ಕಾರಣ ಮರದ ಬೇರು ಸಮೂಹಕ್ಕೆ ತೊಂದರೆ ಮಾಡಿರುವುದೇ ಆಗಿರುತ್ತದೆ. ಮರದ ಬುಡ  ಭಾಗ ಉಳುಮೆ ಮಾಡುವಾಗ ಬೇರುಗಳಿಗೆ ಗಾಯ ಅಗಿ ಈ ತೊಂದರೆ ಉಂಟಾಗುತ್ತದೆ. ಪ್ರತೀಯೊಬ್ಬ ತೆಂಗು ಬೆಳೆಯುವವರೂ ತೆಂಗಿನ ಮರದ ಬೇರು ವ್ಯವಸ್ಥೆ ಹೇಗೆ ಇದೆ. ಯಾಕೆ ಅದಕ್ಕೆ ಗಾಯ ಮಾಡಬಾರದು ಎಂಬುದನ್ನು ತಿಳಿದಿರಬೇಕು.

ಮೇಲುಸ್ಥರದಲ್ಲಿ ಬೇರು ಹಬ್ಬಿ ಬೆಳೆಯುವ ಸಸ್ಯಗಳ ಬೇರುಗಳಿಗೆ ಯಾವುದೇ ತೊಂದರೆ ಆಗಬಾರದು. ಅದಕ್ಕೆ ಮತ್ತಷ್ಟು ಬೆಳವಣಿಗೆಗೆ ಅನುಕೂಲವಾಗುವಂತೆ ಮಣ್ಣು ಆಥವಾ  ಸಾವಯವ ವಸ್ತುಗಳನ್ನು ಮುಚ್ಚಿಗೆ (Mulching) ಮಾಡಬೇಕು. ಆಗ ಅದರ ಫಲಿತಾಂಶವೇ ಬೇರೆ ಇರುತ್ತದೆ.

 

 • ಕರಾವಳಿ, ಮಲೆನಾಡಿನಲ್ಲಿ ತೋಟ ಉಳುಮೆ ಮಾಡುವುದನ್ನು ಜನ ಬಿಡುತ್ತಿದ್ದಾರೆ. ಕೆಲವರು ಇನ್ನೂ ಮಾಡುತ್ತಿದ್ದಾರೆ.
 • ಆದರೆ ಬಯಲು ಸೀಮೆಯಲ್ಲಿ ಉಳುಮೆ  ಮಾಡದಿದ್ದರೆ ರೈತರಿಗೆ ತೃಪ್ತಿಯಿಲ್ಲ.
 • ನಿಜವಾಗಿಯೂ ಏಕದಳ ಸಸ್ಯಗಳ ಬುಡವನ್ನು ಅಗತೆ ಮಾಡುವುದು ಇಳುವರಿ ದೃಷ್ಟಿಯಿಂದ ಉತ್ತಮವಲ್ಲ.

ರೈತರು ತಿಳಿದುಕೊಂಡಂತೆ ಮರದ  ಬೇರುಗಳಿಗೆ ಗಾಯವಾದರೆ ಅದರ ಕೆಲವು ಉಪಯೋಗ ರಹಿತ ಬೇರುಗಳು ತುಂಡಾಗಿ ಹೊಸ ಬೇರು ಬರುತ್ತದೆ ಎನ್ನುತ್ತಾರೆ.  ಅದಕ್ಕಾಗಿಯೇ ಹೆಚ್ಚಿನವರು ಬುಡ ಮಾಡುವುದು, ಉಳುಮೆ ಮಾಡುವುದು ಮಾಡುತ್ತಾರೆ.

ತೆಂಗಿನ ಮರದ ಬೇರು ಹೀಗೆ ಇರುತ್ತದೆ.
ತೆಂಗಿನ ಮರದ ಬೇರು ಹೀಗೆ ಇರುತ್ತದೆ.
 • ಕೆಲವರು ಮಣ್ಣು ಸಡಿಲಮಾಡುವ ಉದ್ದೇಶದಿಂದ ಟ್ರ್ಯಾಕ್ಟರ್ ಹೊಡೆಸುತ್ತಾರೆ.
 • ಮತ್ತೆ ಕೆಲವರು ನೀರು ಚೆನ್ನಾಗಿ ಇಳಿಯಲೆಂದು ಮಣ್ಣು ಅಗೆತ ಮಾಡುತ್ತಾರೆ.
 • ಒಟ್ಟಿನಲ್ಲಿ ಬೆಳೆಯಲ್ಲಿ ಇಳುವರಿ ಚೆನ್ನಾಗಿ ಬರಲು ಇದೆಲ್ಲಾ  ಕಸರತ್ತುಗಳು. ಇದರ ಫಲಿತಾಂಶ ರೈತರು ಗ್ರಹಿಸಿದಂತೆ ಆಗುವುದಿಲ್ಲ.

ತೆಂಗಿನ ಮರದ ಬೇರು ವ್ಯವಸ್ಥೆ:

 • ತೆಂಗು ಅಡಿಕೆ ಮರಗಳಿಗೆ ತಾಯಿ ಬೇರು ಇಲ್ಲ.  ಇದರ ಬೇರುಗಳು ಬಲೆ ಹೆಣೆದಂತೆ ಒತ್ತೊತ್ತಾಗಿ  ಇರುತ್ತದೆ.
 • ಎಲ್ಲಾ ಬೇರುಗಳೂ ಮೂಡುವುದು ಮರದ ಬೊಡ್ಡೆಯ ಭಾಗದಿಂದ.
 • ತಾಯಿ ಬೇರು ಇಲ್ಲದಿದ್ದರೂ ಇದರ ಬೇರು ತಾಯಿ ಬೇರುಗಳು ಇರುವ ಮರಕ್ಕಿಂತಲೂ  ಬಧ್ರವಾಗಿರುತ್ತದೆ.
 • ಮಣ್ಣಿನಲ್ಲಿ ಇದು ಬಲಿಷ್ಟವಾಗಿ ಹಿಡಿದುಕೊಂಡಿರುತ್ತದೆ.
 • ತೆಂಗು, ಅಡಿಕೆ ಮರಗಳು ಬರೇ ಹಬ್ಬು ಬೇರುಗಳಿದ್ದರೂ ಸಹ ಯಾವುದೇ ಗಾಳಿ, ಮಳೆಗೆ  ಮಗುಚಿ ಬೀಳುವುದಿಲ್ಲ.
 • ಮರದ ಬೇರುಗಳಿಗೆ ಹಾನಿಯಾದರೆ ಅದು ಬೀಳಲೂ ಬಹುದು, ಜೊತೆಗೆ ಅದು ಮರದ ಆರೋಗ್ಯದ  ಮೇಲೂ ಪರಿಣಾಮ ಬೀರಬಹುದು.
ಬಲೆಯಂತೆ ಹೆಣೆದಿರುವ ಬೇರುಗಳು
ಬಲೆಯಂತೆ ಹೆಣೆದಿರುವ ಬೇರುಗಳು

ತೆಂಗಿನ/ಅಡಿಕೆಯ ಮರಕ್ಕೆ ಕೂದಲು ಬೇರುಗಳಿಲ್ಲ. ಒಂದು ಬೇರು ಬೊಡ್ಡೆಯಿಂದ ಪ್ರಾರಂಭವಾದುದು, ಕವಲೊಡೆಯುತ್ತಾ ಮುಂದೆ ಮುಂದೆ ಸಾಗುತ್ತದೆ. ಅದಕ್ಕೆ ಮತ್ತೆ ಕವಲುಗಳಾಗುತ್ತವೆ. ಹೀಗೇ ಮುಂದುವರಿಯುತ್ತದೆ. (main roots under favourable condition give rise to several lateral roots which subsequently branch and re branch)  ಕವಲು ಒಡೆದ ಬೇರುಗಳು ಆಹಾರ ಸಂಗ್ರಹಿಸಿ ಕೊಡುವ ಬೇರುಗಳು.

 • ಮಣ್ಣು ಸಡಿಲವಾಗಿದ್ದರೆ ಅದು 5 ರಿಂದ 7 ,ತುಂಬಾ ಸಡಿಲ ಮಣ್ಣು ಮತ್ತು  ಮೇಲುಮಣ್ಣು ಫಲವತ್ತೆತೆ ಇರುವಲ್ಲಿ ಅದು 20 ಮೀಟರು ತನಕವೂ  ಹೋಗುವುದು ಉಂಟು.
 • ಬೇರಿನ ತುದಿಯಲ್ಲಿ ಒಂದು ಕ್ಯಾಪ್ ತರಹದ ರಚನೆ ಇರುತ್ತದೆ.
 • ಇದು ಬೇರನ್ನು ಮುಂದೆ ಮುಂದೆ ದೂಡಿಕೊಂಡು ಹೋಗುತ್ತದೆ.
 • ಅದು ತುಂಡಾದರೆ ಅದರ ಬೆಳವಣಿಗೆ ನಿಲ್ಲುತ್ತದೆ.
 • ಅದರ ಕವಲು ಬೇರುಗಳು ಮಾತ್ರ ಕಾರ್ಯ ಮಾಡುತ್ತವೆ.
 • ಅದರ ಹಿಂದೆ ಸುಮಾರು 5  ಸೆಂ. ಮೀ. ದೂರದಲ್ಲಿ ಸ್ವಲ್ಪ ಬಿಳಿ ಬಣ್ಣದ ಮೃದು ತೊಗಟೆಯ ಭಾಗ ಇರುತ್ತದೆ.
 • ಇದು ಬೇರಿನ  ಹೀರಿಕೊಳ್ಳುವ  ಭಾಗ.  ಬೇರಿನ ಮೇಲೆ  ಇರುವ ಉಬ್ಬಿದ ಭಾಗ ಇರುತ್ತದೆ, ಅದು ಶ್ವಾಸೋಚ್ವಾಸ ನಡೆಸುವ ಭಾಗಗಳು.
 • ಒಂದು ಬೆಳೆದ ತೆಂಗಿನ ಮರದಲ್ಲಿ 1500- 8000 ತನಕ ಬೇರುಗಳು ಇರುತ್ತವೆ.  ಎಲ್ಲಾಆಹಾರ ಸಂಗ್ರಹಿಸಿಕೊಡುವ  ಬೇರುಗಳೂ ನೆಲದಲ್ಲಿ ಮೇಲ್ಭಾಗದಲ್ಲಿ ಹಬ್ಬಿರುತ್ತವೆ.

ನೆಲದಲ್ಲಿ ಬೇರುಗಳು ನೀರಿನ ಅನುಕೂಲ ಇದ್ದಾಗ ಅಪರೂಪದಲ್ಲಿ  5  ಮೀ. ತನಕವೂ ಇಳಿಯುತ್ತದೆ. ಸಾಮಾನ್ಯವಾಗಿ 50 % ಬೇರುಗಳು ನಮ್ಮಲ್ಲಿ 3  ಮೀ. ಒಳಗೆ ಇರುತ್ತವೆ.  ಕೆಳಸ್ಥರದ ಬೇರುಗಳ ಬಣ್ದದಲ್ಲಿ  ಬದಲಾವಣೆ ಇರುತ್ತದೆ. ಇದು ಮರಕ್ಕೆ ಆಧಾರವಾಗಿ ಇರುತ್ತವೆ.

ಉಳುಮೆ ಮಾಡಿದಾಗ ಏನಾಗುತ್ತದೆ:

ಬೇರುಗಳಿಗೆ ಹಾನಿ ಆದಾಗ ಮರದ ಕಾಂಡಕ್ಕೆ ಹಾನಿ ಉಂಟಾಗುತ್ತದೆ.
ಬೇರುಗಳಿಗೆ ಹಾನಿ ಆದಾಗ ಮರದ ಕಾಂಡಕ್ಕೆ ಹಾನಿ ಉಂಟಾಗುತ್ತದೆ.
 • ಉಳುಮೆ ಮಾಡಿದಾಗ ಅದರಲ್ಲೂ ಅರ್ಧ ಅಡಿಗಿಂತ ಆಳಕ್ಕೆ ಉಳುಮೆ ಮಾಡಿದರೆ ಮರದ ಆಹಾರ ಸಂಗ್ರಹಿಸಿಕೊಡುವ ಬೇರುಗಳು ತುಂಡಾಗುತ್ತವೆ.
 • ತುಂಡಾದ ಬೇರುಗಳ ಹಿಂದೆ ಕವಲು ಬೇರುಗಳು ಇದ್ದರೆ ಮಾತ್ರ ಆವು ಆಹಾರ ಸಂಗ್ರಹಿಸಿಕೊಡುತ್ತವೆ.
 • ತುಂಡಾದ ಬೇರುಗಳಲ್ಲಿ ಮತ್ತೆ ಕವಲು ಬೇರುಗಳು ಬರುತ್ತವೆಯಾದರೂ ಅದು ಬೆಳೆದು ಉದ್ದವಾಗಿ ಆಹಾರ ಸಂಗ್ರಹಿಸುವಾಗ ಸುಮಾರು 3-4 ತಿಂಗಳು ಕಳೆಯುತ್ತದೆ.
 • ಉಳುಮೆ ಮಾಡಲೇ ಬೇಕಿದ್ದರೆ  ಬುಡ ಭಾಗದ 2 ಮೀಟರ್  ಭಾಗವನ್ನು ಬಿಟ್ಟು ಮಾಡುವುದು ಉತ್ತಮ.
 • ಹದವರಿತ (3-4 ಇಂಚು)  ಉಳುಮೆಯಿಂದ ಬೇರು ಗಾಯವಾಗದೇ ಇದ್ದರೆ ಅಂತಹ ಸಮಸ್ಯೆ ಇಲ್ಲ.
 • ಬೇರಿಗೆ ನಿರಂತರ  ಗಾಯಗಳಾದಾಗ ಅದು ಕೊಳೆಯಲಾರಂಭಿಸುತ್ತದೆ. ಮತ್ತೆ ಬೇರೆ ರೋಗಗಳು ಬರುತ್ತವೆ.

ಯಾವ ಪ್ರದೇಶಗಳಲ್ಲಿ ತೆಂಗಿನ ಮರದ ಬುಡದ ಬೇರುಗಳಿಗೆ ಗಾಯ ಆಗದಂತೆ ರಕ್ಷಣೆ ಇದೆಯೋ ಅಲ್ಲಿ ಕಾಂಡದಲ್ಲಿ ರಸ ಸೋರುವ ಸಮಸ್ಯೆ (Stem bleeding) ಇಲ್ಲ. ಎಲ್ಲಿ ಉಳುಮೆ ಮಾಡಲಾಗುತ್ತದೆಯೋ ಆಲ್ಲೆಲ್ಲಾ ಇದೆ. ಆದ ಕಾರಣ ರೈತರು ನೈಸರ್ಗಿಕವಾಗಿ ಎರೆಹುಳುಗಳಿಂದ  ಮಾತ್ರ ಉಳುಮೆ ಆಗುವಂತೆ ಬೇಸಾಯ ಕ್ರಮ ಆನುಸರಿಸಿರಿ. ಅದರ ತ್ಯಾಜ್ಯಗಳನ್ನು ನೆಲಕ್ಕೆ ಹಾಕಿ ತೇವಾಂಶ ಒದಗಿಸಿ. ನೈಸರ್ಗಿಕ ಉಳುಮೆ ಆಗುತ್ತದೆ. ರಸ ಸೋರುವಿಕೆ ನಿಯಂತ್ರಣಕ್ಕೆ ಬರುತ್ತದೆ. ತೆಂಗಿಗೆ ಕಾಂಡದಲ್ಲಿ ರಸ ಸೋರುವಿಕೆ ಉಂಟಾದರೆ ಅದು ನಂತರ ಅಡಿಕೆಗೂ ಪ್ರಸಾರವಾಗುತ್ತದೆ.

ಉಳುಮೆಯ ಬದಲು ಏನು ಮಾಡಬಹುದು?

 • ಉಳುಮೆಯ ಬದಲಿಗೆ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಕಳೆ ನಿಯಂತ್ರಣ ಮಾಡಬಹುದು.
 • ತೆಂಗಿನ ಅಥವಾ ಅಡಿಕೆ ತೋಟದಲ್ಲಿ ನೆಲವು ಉಳುಮೆ ಮಾಡಿದಂತೆ ಹದವಾಗಬೇಕಾದರೆ ಸಾವಯವ ಪದಾರ್ಥಗಳನ್ನು ಹಾಸುವುದು ಅತೀ  ಉತ್ತಮ.
 • ಇದರಿಂದ ಮಣ್ಣು ಫಲವತ್ತಾಗಿ ನೈಸರ್ಗಿಕ ಉಳುಮೆ ಮಾಡಿದಂತಾಗುತ್ತದೆ.
 • ಉಳುಮೆಗಿಂತ  ಮಧ್ಯಂತರದಲ್ಲಿ ಹಿಪ್ಪು ನೇರಳೆ ಬೆಳೆಸಿ ರೇಶ್ಮೆ ವ್ಯವಸಾಯ  ಮಾಡಿದರೆ  ಇಬ್ಬಗೆಯ ಲಾಭವಾಗುತ್ತದೆ.

ನಮ್ಮ ಹಿರಿಯರು ಮಾಡಿಕೊಂಡು ಬಂದದ್ದು ನೇಗಿಲಿನ ಅಥವಾ ಗುದ್ದಲಿಯ ಹದವಾದ ಉಳುಮೆಯಾಗಿತ್ತು. ಈಗ ನಾವು ಮಾಡುವ ಟ್ರಾಕ್ಟರ್ ಉಳುಮೆಯಲ್ಲಿ ಬೇರಿಗೆ ಹಾನಿಯಾಗುತ್ತದೆ. ಆದ ಕಾರಣ ಯಾವುದೇ ಕಾರಣಕ್ಕೂ ತೆಂಗಿನ , ಅಡಿಕೆ ತೋಟದ ಮಧ್ಯಂತರ ಉಳುಮೆ ಮಾಡಬೇಡಿ.
 

Leave a Reply

Your email address will not be published. Required fields are marked *

error: Content is protected !!