ಹೆಚ್ಚಿನ ರೈತರು ನೆಲದ ಹುಳಕ್ಕೆ ಪ್ಯುರಡಾನ್ – ಫೋರೇಟ್ ಬಳಸುತ್ತಾರೆ . ಇದು ಪ್ರಭಲ ಕೀಟನಾಶಕ. ಅಗತ್ಯ ಇದ್ದರೆ ಮಾತ್ರ ಬಳಸಿದರೆ ಕ್ಷೇಮ.
- ಮಣ್ಣು ಸಂಬಂಧಿತ ಕೆಲವು ಜಂತು ಹುಳು ಹಾಗೂ ದುಂಬಿಗಳ ನಾಶಕ್ಕೆ ಫ್ಯುರಡಾನ್. ಫೋರೇಟ್ ಎಂಬ ಎರಡು ಬಗೆಯ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
- ಇವು ಮರಳಿನ (ರೆಸಿನ್) ಮೇಲೆ ಕೀಟನಾಶಕವನ್ನು ಲೇಪನಮಾಡಿ ತಯಾರಿಸುತ್ತಾರೆ.
- ಫ್ಯುರಡಾನ್ ನಲ್ಲಿ ವಾಸನೆ ಇಲ್ಲ ಫೋರೇಟ್ ನಲ್ಲಿ ವಾಸನೆ ಇದೆ.
- ಫ್ಯುರಡಾನ್ ನಲ್ಲಿ ಕಾರ್ಬೋಸಲ್ಫಾನ್ ಎಂಬ ಅಂಶ 3% (G granules) ಇದೆ.
- ಇದರಲ್ಲಿ ಕಾರ್ಬೋಮೇಟ್ ಇರುತ್ತದೆ.
- ಫೋರೇಟ್ ನಲ್ಲಿ 10 % (G granules) ಫೋರೇಟ್ ಅಂಶ ಇರುತ್ತದೆ.
- ಇದು ಆರ್ಗನೋಫೋಸ್ಫೇಟ್ ಸಂಯುಕ್ತ.
- ಇದು ಕೆಂಪು ಗುರುತಿನ ಅತಿ ಪ್ರಭಲ ಕೀಟನಾಶಕ.
ಈ ಕೀಟನಾಶಕ ಏನು :
- ಫ್ಯುರಡಾನ್ – ಫೋರೇಟ್ ಎರಡೂ ಪ್ರಭಲ ಕೀಟ ನಾಶಕ.
- ಇದು ಕೆಂಪು ಶ್ರೇಣಿಯಲ್ಲಿ ಬರುತ್ತದೆ.
- ಇದು ಬಳಕೆ ಮಾಡಿ 30 -40 ದಿನಗಳ ಕಾಲ ಉಳಿಕೆ ಅಂಶ ಇರುತ್ತದೆ.
- ಅಲ್ಪಾವಧಿಯಲ್ಲಿ ಕಠಾವಾಗುವ ಬೆಳೆಗಳಿಗೆ ಇದನ್ನು ಬಳಸಿದರೆ ಅದರಲ್ಲಿ ಕೀಟನಾಶಕದ ಅಂಶ ಉಳಿಯುತ್ತದೆ.
- ಅದು ಬಳಕೆದಾರರ ದೇಹಕ್ಕೆ ಹೋಗುತ್ತದೆ.
ಹೆಚ್ಚು ಬಳಕೆ ಎಲ್ಲಿ:
- ಆಲೂಗಡ್ಡೆ ಬೆಳೆಗಳಿಗೆ ನಮಟೋಡು ಮತ್ತು ಗಡ್ಡೆ ಕೊರೆಯುವ ಹುಳುಗಳ ನಿಯಂತ್ರಣಕ್ಕೆ ವಿಸೃತವಾಗಿ ಬಳಸುತ್ತಾರೆ.
- ತರಕಾರಿ ಬೆಳೆಗಳಾದ ಬದನೆ, ಬೆಂಡೆ, ಮೆಣಸು ಮುಂತಾದ ಬೆಳೆಗಳಿಗೆ ಜಂತು ಹುಳ ನಿಯಂತ್ರಕವಾಗಿ, ಏಫಿಡ್ ನಿಯಂತ್ರಕವಾಗಿ ಬಳಸುತ್ತಾರೆ.
- ಬೀಟ್ ರೂಟ್, ನವಿಲು ಕೋಸು, ಕ್ಯಾಬೇಜ್, ಗಡ್ಡೆಗೆ ಹಾನಿ ಮಾಡುವ ಕೀಟಗಳ ನಿಯಂತ್ರಣಕ್ಕೆ ಬಳಸುತ್ತಾರೆ.
- ಅಡಿಕೆ, ಬಾಳೆ , ಕಬ್ಬು, ನೆಲಕಡ್ಲೆ, ಹತ್ತಿ ಬೆಳೆಗಳಿಗೆ ಬೇರು ಹುಳ ನಿವಾರಣೆಗಾಗಿ ಬಳಕೆ ಮಾಡುತ್ತಾರೆ.
- ಭತ್ತದ ಬೆಳೆಗೆ ನಾಟಿ ಮಾಡುವ ಹಂತದಿಂದ ತೆನೆಯಲ್ಲಿ ಹಾಲು ಕೂಡುವ ಹಂತದ ವರೆಗೂ ಇದನ್ನು ಬಳಕೆ ಮಾಡುವವರಿದ್ದಾರೆ.
- ಇಷ್ಟೇ ಅಲ್ಲದೆ ಇನ್ನೂ ಹಲವಾರು ಬೆಳೆಗಳಿಗೆ ಬಳಕೆ ಮಾಡುತ್ತಾರೆ.
ಇದು ಸಸ್ಯ ಶರೀರದ ಒಳಗೆ ಸೇರಿ ಎಲ್ಲಾ ಅಂಗಗಳಲ್ಲೂ ಸೇರಿಕೊಳ್ಳುತ್ತದೆ. ಇದನ್ನು ಬಳಸಿದ ನಂತರ 40 ದಿನಗಳ ಕಾಲ ಅದರ ಫಸಲಿನಲ್ಲಿ ಇದು ಉಳಿಯುತ್ತದೆ. ರೈತರು ಇದನ್ನು ಯಾವ ಕೀಟಕ್ಕೆ ಬಳಕೆ ಮಾಡಬೇಕು, ಮಾಡಬಾರದು ಎಂದು ತಿಳಿಯದೇ ಬಳಕೆ ಮಾಡಿದ್ದೇ, ಇದನ್ನು ನಿಷೇಧಿಸಬೇಕು ಎಂಬ ಒತ್ತಾಯಕ್ಕೆ ಕಾರಣವಾಗಿದೆ.
- ಕಾರ್ಬೋಫ್ಯುರಾನ್ ಅನ್ನು 2020 ಕ್ಕೆ ಇದು ನಿಷೇಧಕ್ಕೊಳಪಡಿಸಬೇಕು ಎಂಬ ಒತ್ತಾಯಗಳೂ ಇವೆ. ಅದು ಆಗಿದೆಯೂ ಸಹ.
ಇದನ್ನು ಹಾಕಿದರೆ ಏನಾಗುತ್ತದೆ:
- ಈ ಕೀಟನಾಶಕವನ್ನು ಕೆಲವು ನಿರ್ದಿಷ್ಟ ಬೆಳೆಗಳಿಗೆ ಬಳಕೆ ಮಾಡಲು ಮಾತ್ರ ಇದನ್ನು ಶಿಫಾರಸು ಮಾಡಲಾಗಿದೆ.
- ಆದರೆ ಅದನ್ನು ಜನ ಚಟದಂತೆ ಬಳಕೆ ಮಾಡಲು ಪ್ರಾರಂಭಿಸಿ ಈಗ ಇದರಿಂದ ಅನಾಹುತಗಳೇ ಆಗುತ್ತಿವೆ.
- ಫ್ಯುರಾಡಾನ್- ಫೋರೇಟ್ ಎರಡೂ ಕೀಟನಾಶಕಗಳು ನೆಲದಲ್ಲಿ ಅವಿತಿರುವ ಬೇರು ಭಕ್ಷಕ ಹುಳು ಮತ್ತು ಕಣ್ಣಿಗೆ ಕಾಣದ ಜಂತು ಹುಳುಗಳು, ದುಂಬಿಗಳ ನಿಯಂತ್ರಣಕ್ಕೆ ಇರುವಂತದ್ದು.
- ಇದನ್ನು ನೇರವಾಗಿ ಮಣ್ಣಿನ ಮೇಲೆ ಚೆಲ್ಲಿದಾಗ ಇದರ ಪರಿಣಾಮ ಸಮರ್ಪಕವಾಗಿ ದೊರೆಯಲಾರದು.
- ವಾತಾವರಣದಲ್ಲಿ ಇದು ಸೇರಿ ಉಸಿರಾಡುವವರಿಗೆ ತೊಂದರೆ ಆಗಬಹುದು.
- ಇದು ನಿರ್ವಾತ ಕ್ರಮದಲ್ಲಿ ಕೆಲಸಮಾಡುವ ಕೀಟ ನಾಶಕವಾಗಿದ್ದು,
- ಮಣ್ಣಿನ ಅಡಿ ಭಾಗದಲ್ಲಿ ಹಾಕಿ ಮುಚ್ಚಿದಾಗ ಅದು ಮಣ್ಣಿನ ಕಣಗಳ ಎಡೆಯಲ್ಲಿ ಪಸರಿಸಿ( ಫ್ಯುಮಿಗೇಶನ್) ಅಲ್ಲಿ ಅಡಗಿರುವ ಅಗತ್ಯ ಸೂಕ್ಷ್ಮಾಣು ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ.
ನೆಲಕ್ಕೆ ಹಾಕಿದಾಗ ಮೊದಲೇ ಹೇಳಿದಂತೆ ಅದು ಸಸ್ಯ ಬೇರುಗಳ ಮೂಲಕ ಸಸ್ಯ ಶರೀರದ ಒಳಗೆಲ್ಲಾ ಸೇರಿ ಅಲ್ಲಿ ಉಳಿಯುತ್ತದೆ. ಅವಧಿಗೆ ಮುನ್ನ ಅದನ್ನು ಬಳಸಿದವರ ಶರೀರಕ್ಕೆ ಸೇರುತ್ತದೆ. ಹಸುಗಳಿಗೆ ತಿನ್ನಲು ಹಾಕುವ ಹಾಳೆಯಲ್ಲಿ, ಹಾಳೆಯ ತಟ್ಟೆ, ಪ್ಲೇಟುಗಳಲ್ಲೂ ಇದರ ಉಳಿಕೆ ಇರಬಹುದು.
- ಮಣ್ಣಿಗೆ ಇದು ಸೇರಲ್ಪಟ್ಟಾಗ ಅಲ್ಲಿನ ಸೂಕ್ಷ್ಮಾಣು ಜೀವಿಗಳು, ಎರೆ ಹುಳುಗಳಿಗೆ ಮಾರಕವಾಗಿ ಪರಿಣಮಿಸುತ್ತದೆ.
- ನೀರಿನ ಮೀನು, ಜಲಚರಗಳು, ನೀರು ಕುಡಿದ ಪಕ್ಷಿಗಳು ಸಾಯುತ್ತವೆ.
- ಈ ಕೀಟ ನಾಶಕವು ಅಂತರ್ ವ್ಯಾಪೀ ಗುಣದ್ದು. ಇದಕ್ಕೆ ಕೀಟಗಳೂ ಈಗ ಒಗ್ಗಿಕೊಂಡಂತಿದೆ.
ಸಾಮಾನ್ಯವಾಗಿ ಇದನ್ನು ಬೆಳೆಗಳಿಗನುಗುಣವಾಗಿ ಅತೀ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಆದರೆ ರೈತರು ಫಲಿತಾಂಶ ಸಿಗುತ್ತಿಲ್ಲ ಎಂದು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದು ಮತ್ತಷ್ಟು ನಿರೋಧಕ ಶಕ್ತಿ ಉಂಟಾಗುವಂತೆ ಮಾಡಿದೆ.
- ಕೆಲವು ತರಕಾರಿ ಬೆಳೆಗಾರರು ವಿಶೇಷವಾಗಿ ಬದನೆ, ಬೆಂಡೆ ಬೆಳೆಗಾರರು ಇದನ್ನು ಬಳಕೆ ಮಾಡುತ್ತಿದ್ದು,
- ಇದು ಸಂಪೂರ್ಣವಾಗಿ ತರಕಾರಿ ತಿನ್ನುವವರ ಶರೀರಕ್ಕೆ ಸೇರುತ್ತಿದೆ.
ಕೆಲವು ಕಡೆ ಕಾರ್ಬೋಫ್ಯುರಾನ್ ಅನ್ನು ನೀರಿನಲ್ಲಿ ಕರಗಿಸಿ ಮಾವು ತರಕಾರಿಯನ್ನು ಅದರಲ್ಲಿ ಅದ್ದಿ ಹುಳ ಸಾಯುವಂತೆ ಮಾಡಿ ಮಾರಾಟ ಮಾಡುವುದೂ ಇದೆ. ತರಕಾರಿಗಳಿಗೆ ತಾಜಾತನ ಹೆಚ್ಚು ಸಮಯ ಉಳಿಯಲು ಇದರಲ್ಲಿ ಅದ್ದುವ ಬಗ್ಗೆ ಮಾಹಿತಿ ಇದೆ.
- ಇಷ್ಟಕ್ಕೂ ಈ ಕೀಟನಾಶಕಗಳನ್ನು ಸಂಪೂರ್ಣವಾಗಿ ಪರಿಸರ, ಜೀವ ರಾಶಿಗೆ ಮಾರಕ ಎನ್ನುವಂತಿಲ್ಲ.
- ಕಡಿಮೆ, ಅಥವಾ ಶಿಫಾರಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಮಣ್ಣಿನ ಜೀವಾಣುಗಳಿಗೆ ತೊಂದರೆ ಆಗದೆ ಉತ್ತೇಜಕವೇ ಆದ ವರದಿಗಳಿವೆ.
ಮನುಷ್ಯನ ಬೇಜವಾಬ್ದಾರಿ ಬಳಕೆಯಿಂದ ಇವೆಲ್ಲಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಾವೇ ಅಸ್ವಾಸ್ಥ್ಯಗಳನ್ನು ಕರೆದುಕೊಂಡು ಬಂದಂತೆ ಆಗುತ್ತಿದೆ.