ಗೇರು ಮರದ ಚಿಗುರು ಹೀಗೆ ಆಗುವುದಕ್ಕೆ ಕಾರಣ.

cashew un productive

ಗೇರು ಮರಗಳ ಎಲ್ಲಾ  ಎಳೆ ಚಿಗುರು ಒಣಗುವ ಈ ಸಮಸ್ಯೆ ಯಾಕೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇತ್ತೀಚೆಗಿನ ಗೇರು ತೋಟಗಳಲ್ಲಿ ಇಂತಹ ಸಸ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಸಸ್ಯಾಭಿವೃದ್ದಿ ಮಾಡುವಾಗ ಸೂಕ್ತ ಸಸ್ಯ ಮೂಲದಿಂದ ಕಸಿ ಕಡ್ಡಿಗಳನ್ನು ಆಯ್ಕೆ ಮಾಡದೆ ಇರುವುದು. ಸಸಿಗಳಿಗೆ ಬೇಡಿಕೆ ಇದೆ ಎಂದು ಬೆಳೆಗಾರರ ಶ್ರಮದ ಮೇಲೆ ಆಟ ಆಡುವ ಮನೋಸ್ಥಿತಿ ಇದು ಎಂದರೂ ತಪ್ಪಾಗಲಾರದು.

Drying of leaf

 • ಗೇರು ಮರದ ವಿಶೇಷ ಎಂದರೆ ಅದು ಚಿಗುರಿದಾಗ ಹೂವಾಗುತ್ತದೆ.
 • ಚಿಗುರು ಬಂದು ಹೂವು ಬರುವ ತನಕ ಯಾವ ಸಮಸ್ಯೆಯೂ ಆಗದಿದ್ದರೆ ಹೂವು ಅರಳುತ್ತದೆ.
 • ಆ ನಂತರ ಹೂವಿಗೆ ಬರುವ ಕೀಟಗಳ ತೊಂದರೆ ಕಡಿಮೆಯಾದರೆ ಅಥವಾ ನಿಯಂತ್ರಿಸಿಕೊಂಡರೆ ಹೆಚ್ಚು ಫಸಲು ಉಳಿಯುತ್ತದೆ.
 • ಆದರೆ ಈ ರೀತಿಯ  ಸಮಸ್ಯೆಯುಳ್ಳ ಮರಗಳಲ್ಲಿ ಹೂವಾಗುವುದೂ ಇಲ್ಲ.
 • ಮರ ಏಳಿಗೆಯಾಗುವುದೂ ಇಲ್ಲ ಕಾರಣ ಇದು ಅನುತ್ಪಾದಕ ಮರ.

ಕೆಲವು  ಸಸ್ಯಗಳಿಗೆ ಕೀಟರೋಗ ನಿರೋಧಕಶಕ್ತಿ ಹುಟ್ಟು ಸಹಜವಾಗಿಯೇ ಇರುತ್ತದೆ. ಕೆಲವು ಬೇಗ ರೋಗ ರುಜಿನಗಳಿಗೆ ತುತ್ತಾಗುತ್ತದೆ. ರೋಗ ನಿರೋಧಕ ಶಕ್ತಿ ಉಳ್ಳ ಸಸ್ಯಮೂಲ ಆಯ್ಕೆಮಾಡಿದರೆ ಅದಕ್ಕೆ ಆ ಗುಣಬರುತ್ತದೆ. ರೋಗ ಇರುವ ಸಸ್ಯಮೂಲವನ್ನು ಆಯ್ಕೆಮಾಡಿದರೆ ಅದು ನಿರಂತರ ರೋಗಕ್ಕೆ ತುತ್ತಾಗುತ್ತಾ ಇರುತ್ತದೆ.

ಇದು ಯಾವ ಸಮಸ್ಯೆ:

Cashew plant effected

 • ಗೇರುಮರಗಳೂ ಸ್ವಭಾವಿಕವಾಗಿ ರೋಗಕೀಟನಿರೋಧಕ ಶಕ್ತಿಪಡೆದಿರುತ್ತವೆ.
 • ಇದು ಬೇಗ ಕೀಟಬಾಧೆಗೆ ತುತ್ತಾಗುವ ಗುಣದ ಸಸ್ಯವಾಗಿದೆ.
 • ಕೆಲವು ವರ್ಷ ಇದು ಕೀಟಗಳಿಂದ ಬಚಾವಾಗಬಹುದಾದರೂ ಹೆಚ್ಚಿನ ಸಂದರ್ಭಗಳಲ್ಲಿ ಚಿಗುರುವ ಸಮಯದಲ್ಲಿ ಇದಕ್ಕೆ ಟಿ-ಸೊಳ್ಳೆಯ ಕಾಟ ಖಾಯಂ.
 • ಆದ ಕಾರಣ ಇದರಲ್ಲಿ ಬಂದ ಚಿಗುರೆಲ್ಲಾ ಒಣಗುತ್ತದೆ. ಫಲಬರುವುದೇ ಇಲ್ಲ.
 • ಇದನ್ನು ಸಸ್ಯಾಭಿವೃದ್ದಿ ಮಾಡುವವರು  ಕಸಿ ಕಡ್ಡಿ  ಆಯ್ಕೆಗೆ ಬಳಕೆ ಮಾಡಬಾರದು.
 • ಇಂತಹ ಮರ ಇದ್ದರೆ ಅದನ್ನು ತೆಗೆದುಬಿಡಬೇಕು.
 • ಸಾಮಾನ್ಯವಾಗಿ ಗೇರುಸಸಿಗೆ ಬೇಡಿಕೆ ಚೆನ್ನಾಗಿದೆ ಎಂದು ಸಸ್ಯಮೂಲ ಆಯ್ಕೆಯಲ್ಲಿ ಉದಾಸೀನ ತಳೆದ ಕಾರಣ ಇದರ ಸಸ್ಯಗಳು ಈಗ  ಹೆಚ್ಚಾಗಲಾರಂಭಿಸಿದೆ.

ಅದು 2005-06 ರಲ್ಲಿ ಗೇರು ಬೆಳೆ ಅಭಿವೃದ್ದಿಗಾಗಿ ಒಂದು ಯೋಜನೆ ಬಂತು. ಆ ಸಮಯದಲ್ಲಿ ಸಾಕಷ್ಟು ಗೇರು ಸಸ್ಯೋತ್ಪಾದಕ ನರ್ಸರಿಗಳಿಗೆ ಅಧಿಕೃತ ಸಸ್ಯೋತ್ಪಾದಕ ನರ್ಸರಿ ಎಂಬ ಪರವಾನಿಗೆ ದೊರೆಯಿತು. ಆಗ ಪ್ರಾರಂಭವಾಯಿತು ಸಸ್ಯೋತ್ಪಾದನೆಯಲ್ಲಿ ಈ ರೀತಿಯ ಬೇಜವಾಬ್ಧಾರಿತನ.

 • ಇಂದು ಬಹಳ ಕಡೆ ಇಂತಹ ಅನುತ್ಪಾದಕ ಮರಗಳನ್ನು ಕಾಣಬಹುದು.
 • ಟಿ-ಸೊಳ್ಳೆ ಕೀಟವು ಇದು ಚಿಗುರುವ ಹಂತದಲ್ಲಿ ಬೇಗ ಇದಕ್ಕೆ ಧಾಳಿ ಮಾಡುತ್ತದೆ.
 • ಎಲೆಗಳು ಹಾಗೂ ಚಿಗುರುಮೊಗ್ಗು ಒಣಗಿಹೋಗುತ್ತದೆ.
 •  ಇತ್ತೀಚೆಗೆ ಗೇರುತೋಟಗಳು ಹೆಚ್ಚಾಗಲಾರಂಭಿಸಿದ್ದು, ಹೆಚ್ಚಿನ ಗೇರು ಬೆಳೆಗಾರರ ತೋಟದಲ್ಲಿ ಇಂತಹ ಮರಗಳ ಪ್ರಮಾಣ  2-4 % ದಷ್ಟು ಕಂಡುಬರುತ್ತಿದೆ.

ಏನು ಪರಿಹಾರ:

 • ಇದನ್ನು ಸರಿಪಡಿಸಲು ಯಾವ ಪರಿಹಾರವೂ ಇಲ್ಲ. ಎಲೆ ಉದುರಿಸುವ ಸಮಯ, ಹೊಸ ಚಿಗುರುಮೊಗ್ಗು ಮೂಡುವ ಸಮಯದಲ್ಲಿ ಕೀಟನಾಶಕ ಸಿಂಪರಣೆ ಮಾಡುವುದರಿಂದ ಚಿಗುರನ್ನು ಸ್ವಲ್ಪ ಪ್ರಮಾಣದಲ್ಲಿ  ಉಳಿಸಬಹುದು.
 • ಆದರೆ ಹೆಚ್ಚು ಕೀಟಬಾಧೆಗೆ ತುತ್ತಾಗುವ ಸಸ್ಯಮೂಲವನ್ನು ಉಳಿಸಿಕೊಳ್ಳುವ ಬದಲು ಅದನ್ನು ಗುರುತಿಸಿ ತೆಗೆದು ಹಾಕುವುದೇ ಸೂಕ್ತ.
 • ಇದು ಮುಂದಿನ ವರ್ಷ ಸರಿ ಆಗುತ್ತದೆ ಎಂದು ಕಾದು ನೋಡಬೇಡಿ. ಇದು ಸರಿ ಆಗುವುದೇ ಇಲ್ಲ

ಗೇರು ಬೆಳೆಗಾರರೇ ನೀವು ಬೆಳೆಸಿದ ಸಸ್ಯಗಳಲ್ಲಿ ಕೆಲವು ಹೂ ಬಾರದೆ ಇರುವ ಸಸ್ಯವೂ ಇರಬಹುದು, ಕೆಲವು ಪ್ರತೀ ವರ್ಷ ಹೊಸ ಚಿಗುರು ಒಣಗುವ ಸಸ್ಯ ಇರಬಹುದು. ಇದು ಸಸ್ಯದ ತಳಿ ದೋಷ. ಆದ ಕಾರಣ ಅದನ್ನು ಸರಿಪಡಿಸಲು ಹೋಗಬೇಡಿ. ಸಾಧ್ಯವಾದರೆ ಈ ಸಸ್ಯ ಕೊಟ್ಟ ನರ್ಸರಿಯವರನ್ನು ತರಾಟೆಗೆ ತೆಗೆದುಕೊಳ್ಳಿ. ಅದನ್ನು ಉಳಿಸಿಕೊಂಡರೆ ಮತ್ತೆ ನಿಮ್ಮ ತೋಟದಲ್ಲಿ ಉಳಿದ ಗಿಡಗಳಿಗೂ ಟಿ ಸೊಳ್ಳೆ ಉಪಟಳ ಹೆಚ್ಚಾಗುತ್ತದೆ.

error: Content is protected !!