ಗೋಬರ್ ಗ್ಯಾಸ್ ಇರುವವರು ಪ್ರಾಮಾಣಿಕರು ಮತ್ತು ಸಜ್ಜನರು.

ಗೋಬರ್ ಗ್ಯಾಸ್ ಡ್ರಮ್

ಗೋಬರ್ ಗ್ಯಾಸ್ ಹೊಂದಿರುವ  ಮನೆಯವರು ಸ್ವಾವಲಂಬಿ  ಬದುಕಿನಲ್ಲಿ ವಿಶ್ವಾಸ ಇಟ್ಟುಕೊಂಡವರು. ತಾವು ಬದುಕುವ ಜೊತೆಗೆ ಮನುಷ್ಯರನ್ನೇ ನಂಬಿ ಬದುಕುವ ಜಾನುವಾರುಗಳಲ್ಲಿ ಪ್ರೀತಿ ಹೊಂದಿದವರು. ಮನುಷ್ಯ ಸಾಕಿದರೆ ಮಾತ್ರ ಜಾನುವಾರುಗಳು ಉಳಿಯುತ್ತವೆ.  ಮನುಷ್ಯನಿಗೆ ಉಪಕಾರ ಮಾಡುತ್ತಾ ತನ್ನ  ಜೀವನ ಸವೆಸುವ ಈ ಜೀವಿಯ  ಉಳಿವಿಗೆ ಗೋಬರ್ ಗ್ಯಾಸ್ ಹೊಂದಿದವರ ಕೊಡುಗೆ ಅಪಾರ. ಅದೇ ಕಾರಣಕ್ಕೆ ಅವರು ಪ್ರಾಮಾಣಿಕರು. ಸಜ್ಜನರು.

ಈ ಮಾತನ್ನು ಹೇಳಿದವರು ಮಂಗಳೂರಿನ  ಕೇಂದ್ರ ಮಾರುಕಟ್ಟೆಯ ಒಂದು ಬದಿಯಲ್ಲಿ ( ಸೌರಾಷ್ಟ್ರ  ಕ್ಲೋಥ್ ಸ್ಟೋರ್‍ ಪಕ್ಕ) ಒಬ್ಬರು ಪಾತ್ರೆ ಸಾಮಾನು ಹಾಗೂ ಮನೆ ಬಳಕೆಯ ಸಾಮಾನು ಸರಂಜಾಮು ಮಾರಾಟ ಮಾಡುವ ಅಂಗಡಿಯ ಮಾಲಕರು. ಇವರು ಉತ್ತರ ಭಾರತದವರು. ಯಾಕೋ ಒಮ್ಮೆ ಗೋಬರ್ ಗ್ಯಾಸ್  ಒಲೆಯ ಬರ್ನರ್ ಬೇಕಿತ್ತು. ಅಲ್ಲಿ ನೇತು ಹಾಕಿದ್ದು ನೋಡಿದೆ. ಖರೀದಿ ಮಾಡಿದೆ, ಹೊಂದಾಣಿಕೆ  ಆಗದಿದ್ದರೆ  ವಾಪಾಸು ಕೊಡಬಹುದೇ ಎಂಬ ವಿನಂತಿಯನ್ನೂ ಮಾಡಿದೆ. ಆಗ ಅವರು ಹೇಳಿದರು ನೀವು ಗೋಬರ್ ಗ್ಯಾಸ್  ಇದ್ದವರೆಂದರೆ “ಪ್ರಾಮಾಣಿಕರು”. ಯಾವಾಗಲೂ ವಾಪಾಸು ತಂದು ಕೊಡಿ ಎಂದರು. ಆ ಶಬ್ಧದ ಬಗ್ಗೆ ಅವರಲ್ಲಿ  ವಾಪಾಸು ಕೊಡುವಾಗ ಕೇಳಿದೆ.ಆಗ ಅವರು ಹೇಳಿದ ಮಾತು ಮೇಲಿನದ್ದು.

 • ಗೋಬರ್  ಗ್ಯಾಸ್ ಎಂಬುದು ಒಂದು ಅಪಾಯರಹಿತ ಉಚಿತ ಇಂಧನ.
 • ಇದು ಶಾಶ್ವತ ಇಂಧನ ಎಂದರೂ ತಪ್ಪಿಲ್ಲ.
 • ಇಂದಿನ  LPG   ಗ್ಯಾಸ್ 3 ವರ್ಷಕ್ಕೆ  ತಿಂಗಳಿಗೆ 1 ಸಿಲಿಂಡರ್ ನಂತೆ ಖರೀದಿಸುವ ದರದಲ್ಲಿ ಇಡೀ ಸ್ಥಾವರವೇ ಆಗುತ್ತದೆ. 
 • ಇದು ವರ್ಷಾನು ವರ್ಷ ಬಾಳ್ವಿಕೆಯೂ ಬರುತ್ತದೆ.
 • ಯಾವ ಅಂತರರಾಷ್ಟ್ರೀಯ ಬಿಕ್ಕಟ್ಟು  ಸಹ ಇದಕ್ಕೆ ಲಾಗಾಮು ಹಾಕುವುದಿಲ್ಲ.
 • ಬೇಕಾದಾಗ ಬೇಕಾದಷ್ಟು ಸ್ವತಂತ್ರ ಇಂಧನ  ಇದು ಕೊಡುತ್ತದೆ.

ಗೋಬರ್ ಗ್ಯಾಸ್ ಮತ್ತು ಕೃಷಿಕರು:

ಗೊಬರ್ ಗ್ಯಾಸ್ ಸ್ಥಾವರ
 • ಕೃಷಿಕರು ಎಂದರೆ ಪಕ್ಕಾ ವ್ಯವಹಾರಸ್ತರಲ್ಲ. ಮನೆಗೆ ಯಾರೇ ಬರಲಿ, ನೀರು, ಕಾಫೀ ಚಹ ಕೊಟ್ಟು, ಊಟದ ಹೊತ್ತಿಗೆ ಬಂದವರಿಗೆ ಊಟ ಹಾಕಿ, ಏನಾದರೂ ಗಿಡ  ಹಣ್ಣು ಹಂಪಲು ಇತ್ಯಾದಿ ಕೇಳಿದರೆ  ಉಚಿತವಾಗಿ ಸಂತೋಷದಿಂದ ಕೊಡುವ ಹೃದಯವಂತರು.
 • ನಾವು ಮನೆಯಲ್ಲಿ ಗೋಬರ್ ಗ್ಯಾಸ್ ಮಾಡಿದ್ದು, 1987 ನೇ ಇಸವಿಯಲ್ಲಿ.
 • ಆಗ ಅದಕ್ಕೆ ಸರಕಾರದಿಂದ ( ಖಾದೀ ಗ್ರಾಮೋದ್ಯೋಗ ಮಂಡಳಿ) 50 % ಸಹಾಯಧನವೂ ಲಭ್ಯವಿತ್ತು.
 • ಆಗ ಒಂದು ಗೋಬರ್ ಗ್ಯಾಸ್ ಸ್ಥಾವರ ಮಾಡಲು ಡ್ರಮ್ ಒಲೆ ಎಲ್ಲಾ ಸೇರಿ ಆಗುತ್ತಿದ್ದ ವೆಚ್ಚ ಕೇವಲ ರೂ.8,500 ಮಾತ್ರ.
 • ಕಾಂಕ್ರೀಟ್ ರಿಂಗ್ ಹಾಕಿ ಮಾಡಲು ಆಗ ತಾನೇ ಪ್ರಾರಂಭವಾಗಿತ್ತು.
 • ಅದಕ್ಕೂ ಹಿಂದೆ ಶಿಲೆ ಕಲ್ಲಿನ ಟಾಂಕಿ ಮಾಡಿ ಮಾಡುತ್ತಿದ್ದರು.
 • ಅಂದಿನಿಂದ ಇಂದಿನ ವರೆಗೂ ಗೋಬರ್ ಗ್ಯಾಸ್ ನಮ್ಮ ಮನೆಯ ಇಂಧನದ ಅವಶ್ಯಕತೆಯನ್ನು ಬಹುತೇಕ ನೀಗಿಸಿದೆ.
 • ಆ ಸಮಯದಲ್ಲಿ ಕಟ್ಟಿಗೆಯ ಒಲೆಗಳೇ ಹೆಚ್ಚು. 
 • ಅಂತಲ್ಲಿ ಗ್ಯಾಸ್ನ, ಹೊಗೆ ರಹಿತ ಒಲೆ ಉರಿಸುವುದೆಂದರೆ ಒಂದು ಖುಶಿ.
 • ಕಣ್ಣು ಉರಿ ಇಲ್ಲ.ಲೈಟರ್ ಕಿಟ್ ಕಿಟ್ ಮಾಡಿದರೆ ಒಲೆ ಉರಿಯುತ್ತದೆ. 
 • ಆಗ ಅದರಲ್ಲಿ ಕೆಲವು ಸಮಯ ಪೆಟ್ರೋಮ್ಯಾಕ್ಸ್ ತರಹ ಲೈಟ್ ಸಹ ಉರಿಸಿದ್ದೆವು. ನಂತರ ಕರೆಂಟ್ ಬಂತು.
 • ಸಗಣಿಯನ್ನು ಗೊಬ್ಬರದ ಗುಂಡಿಗೆ ಹಾಕುವ ಬದಲು ನೀರಿನಲ್ಲಿ ಕಲಕಿ ಗ್ಯಾಸ್ ಗೆ ಬಿಡುವುದು.
 • ಆ ಸಮಯದ ತನಕ ನಮ್ಮ ಹಳ್ಳಿಗಳಲ್ಲಿ ಹಸು, ಎಮ್ಮೆ ಸಾಕುವವರು ಅವುಗಳ ಕಾಲ ಬುಡಕ್ಕೆ ಸೊಪ್ಪು ಸದೆ ಹಾಕಿ ಸಾಕಾಣಿಕೆ ಮಾಡುತ್ತಿದ್ದರು.
 • ಗೋಬರ್ ಗ್ಯಾಸ್  ಎಂಬ ವ್ಯವಸ್ಥೆ ಪ್ರಾರಂಭವಾದ ನಂತರ ಅದು  ಬದಲಾಗಿ ಹಟ್ಟಿ ತೊಳೆಯುವ ಪದ್ದತಿ ಚಾಲ್ತಿಗೆ ಬಂತು. 
 • ಪ್ರಾರಂಭದಲ್ಲಿ ಗೋಬರ್ ಗ್ಯಾಸ್ ಡ್ರಂ ಎಂಬುದು  ಕಬ್ಬಿಣದ ತಗಡಿನಿಂದ ತಯಾರು ಮಾಡುತ್ತಿದ್ದರು.
 • ಅದು ಕೆಲವೇ ಸಮಯದಲ್ಲಿ ಫೈಬರ್ ಡ್ರಂ ಗೆ ಬದಲಾಯಿತು.

ಗೋಬರ್ ಗ್ಯಾಸ್ ಮತ್ತು ಅವ್ಯವಸ್ಥೆಗಳು:

ಹೊಗೆ ರಹಿತ ಸುರಕ್ಷಿತ ಇಂಧನ
ಹೊಗೆ ರಹಿತ ಸುರಕ್ಷಿತ ಇಂಧನ
 • ಆ ಸಮಯದಲ್ಲಿ ಹಳ್ಳಿ ಹಳ್ಳಿಯಲ್ಲಿ ಬಹಳಷ್ಟು ಜನ  ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದರು.
 • ಆದರೆ ಕೆಲವೇ ಸಮಯದಲ್ಲಿ ಒಂದಷ್ಟು ಜನ  ಅದನ್ನು ಮೂಲೆಗೆ ಹಾಕಿದರು.
 • ಕಾರಣ ಇಷ್ಟೇ. ಗೋಬರ್ ಗ್ಯಾಸ್ ಗೆ ಸರಕಾರದ ಸಬ್ಸಿಡಿ ಇದೆ ಎಂದ ತಕ್ಷಣ ನಾಯಿ ಕೊಡೆಗಳಂತೆ ಡ್ರಂ  ತಯಾರಕರು ಹುಟ್ಟಿಕೊಂಡರು. 
 • ತಯಾರಿಸಿದ ಡ್ರಂ ಗಳು ಕೆಲವೇ ಸಮಯದಲ್ಲಿ ಗ್ಯಾಸ್ ಲೀಕೇಜ್ ಆಗಿ ಜನರಿಗೆ ಬೇಸರ  ತರುವಂತೆ ಮಾಡಿತು.
 • ಮಾರಾಟಕ್ಕೆ ಇದ್ದ ಹುರುಪು ನಂತರ ರಿಪೇರಿಗೆ ಇರಲಿಲ್ಲ.
 • ಕೆಲವರು  ಅವರ ವ್ಯವಹಾರವನ್ನೇ ನಿಲ್ಲಿಸಿದ್ದು ಇದೆ.
 • ನಾವೂ ಹಾಗೆಯೇ ಕಷ್ಟವನ್ನು ಅನುಭವಿಸಿದ್ದೆವು.
 • ಕೊನೆಗೆ ಯಾರೋ ಒಬ್ಬರು ಆಗ ತಾನೆ ವಾಸ್ತು ಪ್ರಕಾರ ಮನೆ ಕಟ್ಟುವ ಮನಸ್ಸು ಮಾಡಿದ್ದರು. ಅವರ  ವಾಸ್ತು ಸ್ಥಳದಲ್ಲಿದ್ದ  ಗೋಬರ್  ಗ್ಯಾಸ್ ತೆಗೆಯಬೇಕಾಗಿ ಬಂತು.
 • ಆಗ ತಾನೇ ಎಲ್ ಪಿಜಿ ಗ್ಯಾಸ್  ಸ್ವಲ್ಪ ಪ್ರಚಾರಕ್ಕೆ ಬಂದಿತ್ತು.
 • ಆ ಡ್ರಂ ನಾನು ಖರೀದಿ ಮಾಡಿದೆ.
 • ಉಡುಪಿಯ ಮೂಕಾಂಬಿಕಾ ಇಂಡಸ್ಟ್ರೀಸ್ ಇವರ ತಯಾರಿಕೆಯಾದ ಆ ಡ್ರಂ ಇಂದಿನ ತನಕವೂ ಸಸೂತ್ರವಾಗಿ ಕೆಲಸ ಮಾಡುತ್ತಾ ಇದೆ. 
 • ಕಳೆದ ನಾಲ್ಕು ವರ್ಷಕ್ಕೆ ಹಿಂದೊಮ್ಮೆ ಬದಿ ಯಲ್ಲಿ ಸಗಣಿ ಗಟ್ಟಿ ಕಟ್ಟಿದ್ದನ್ನು ಬಿಡಿಸುವಾಗ ಕೋಲು ತಾಗಿ ಉಂಟಾದ ತೂತಿಗೆ  ಡ್ರಮ್ ಎತ್ತಿ 50 ರೂ. ಬೆಲೆಯ M Seal  ಲೇಪಿಸಿ ತೂತು ಮುಚ್ಚಿ ಸರಿಮಾಡಲಾಗಿದೆ. 
 • 1998 ರ ಸುಮಾರಿಗೆ ಡ್ರಂ ಪದ್ದತಿಯ ಗೋಬರ್ ಗ್ಯಾಸ್  ತೆರೆಮರೆಗೆ ಸರಿಯಿತು.
 • ಇಟ್ಟಿಗೆ ಮತ್ತು ಸಿಮೆಂಟ್ ನಲ್ಲಿ  ಡೂಮ್ ಮಾದರಿಯಲ್ಲಿ ಬಯೋ ಗ್ಯಾಸ್ ಎಂಬ ಹೆಸರಿನಲ್ಲಿ ಚಲಾವಣೆಗೆ ಬಂತು.
 • ಕೆಲಸ ಎಲ್ಲಾ ಅದೇ ಆದರೆ ಅಲ್ಲಿ ಡ್ರಂ ಮಾತ್ರ ಇಲ್ಲ. ಅಷ್ಟೇ.

LPG  ಗ್ಯಾಸ್ ಬಂತು ಗೋಬರ್ ಗ್ಯಾಸ್ ಹೋಯಿತು:

1995-96 ನೇ ಇಸವಿಯಲ್ಲಿ ಪೇಟೆ ಪಟ್ಟಣಗಳಲ್ಲಿ ಹಿಂದೆಯೇ ಇದ್ದ LPG   ಸಂಪರ್ಕ ಹಳ್ಳಿಗಳಿಗೂ ಬಂತು. ಗ್ಯಾಸ್ ಸಿಲಿಂಡರ್ ಕಷ್ಟ ಇಲ್ಲದೆ ಸಿಗುವಂತಾಯಿತು. ಒಂದಷ್ಟು ಜನ ಗ್ಯಾಸ್ ಸಿಲಿಂಡರ್  ಬದಲಾಗಿ ಗೋಬರ್ ಗ್ಯಾಸ್ ಗೆ ವಿರಾಮ ನೀಡಿದರು.  LPG ಗ್ಯಾಸ್ ಸಂಪರ್ಕ ಹೆಚ್ಚುತ್ತಾ  ಬಂತು. ಅದಕ್ಕೆ ಸಬ್ಸಿಡಿಯನ್ನೂ  ಕೊಟ್ಟರು. ಗೋಬರ್ ಗ್ಯಾಸ್ ನ ಎಲ್ಲಾ ಸಹಾಯಧನ ಸೌಲಭ್ಯವನ್ನೂ ತೆಗೆದು ಹಾಕಿದರು. ಹಳ್ಳಿಯ ಜನರಿಗೆ ಗ್ಯಾಸ್ ಭಾಗ್ಯದ ಅವಕಾಶವೂ ಬಂತು. ಕಟ್ಟಿಗೆಯೂ ಉಳಿಯಿತು. ಗೋಬರ್ ಗ್ಯಾಸ್ ಅಂತೂ ಹೇಸಿಗೆ ಎನ್ನುವಷ್ಟರ ಮಟ್ಟಿಗೆ  ಮೂಲೆ ಸೇರಿತು. ಕೆಲವೇ ಕೆಲವು ಜನ ಅದನ್ನು ಉಳಿಸಿಕೊಂಡರು ಅದಕ್ಕಾಗಿಯೇ  ಅವರನ್ನು ಪ್ರಾಮಾಣಿಕರು ಎಂದದ್ದಿರಬೇಕು.

ಗೊಬ್ಬರ ಮತ್ತು ಗೋಬರ್ ಗ್ಯಾಸ್:

 • ಗೋಬರ್ ಗ್ಯಾಸ್ ಬಂದ ತರುವಾಯ ಕೃಷಿಗೆ ತುಂಬಾ ಅನುಕೂಲ ಆಗಿದೆ.
 • ಕೃಷಿ ಕೆಲಸ ಸರಳವಾಗಿದೆ. ಗೊಬ್ಬರದ ಅವಶ್ಯಕತೆಗೆ ಇದು ಬಹಳವಾಗಿ ಸ್ಪಂದಿಸಿದೆ.
 • ಹಿಂದೆ ನಾವು ಸೊಪ್ಪು ಸದೆ ಹಾಕಿ ಗೊಬ್ಬರ ಮಾಡಿ ಅದನ್ನು ಎತ್ತಿ ಹೊತ್ತು ಬೆಳೆಗಳಿಗೆ ಬಳಸುತ್ತಿದ್ದೆವು.
 • ಗೋಬರ್ ಗ್ಯಾಸ್ ಬಂದ ನಂತರ ಗ್ಯಾಸ್ ತೆಗೆದದರ ಸಗಣಿ ನೀರನ್ನೇ ನೇರವಾಗಿ ಬೆಳೆಗಳಿಗೆ ಉಣಿಸುವ  ವ್ಯವಸ್ಥೆ ಪ್ರಾರಂಭವಾಯಿತು.
 • ಕೆಲಸ ಹಗುರವಾಯಿತು. ಪ್ರತಿಫಲವೂ ಹೆಚ್ಚಾಯಿತು.
 • ಹಿಂದಿನ ಗೊಬ್ಬರ ಮಾಡುವ ವಿಧಾನದಲ್ಲಿ ಆಗುತ್ತಿದ್ದ ಪೋಷಕಾಂಶಗಳ ನಷ್ಟವೂ  ಕಡಿಮೆಯಾಯಿತು.
 • ಗೋಬರ್  ಗ್ಯಾಸ್ ಸ್ಲರಿಯನ್ನು ಪಂಪಿನಲ್ಲಿ ಬೆಳೆಗಳ ಬುಡಕ್ಕೇ ಒಯ್ಯುವ  ವ್ಯವಸ್ಥೆಯೂ ಬಂತು.

ಗೋಬರ್ ಗ್ಯಾಸ್ ಗೆ ಪ್ರೋತ್ಸಾಹ ಬೇಕಿತ್ತು:

ಈಗ ಗೋಬರ್ ಗ್ಯಾಸ್ ಮಾಡಿಸುವುದೆಂದರೆ ಬಹಳ ದುಬಾರಿ. ಆ ಕಾರಣಕ್ಕೆ ಯಾರೂ ಅದರ ಗೋಜಿಗೆ ಹೋಗುತ್ತಿಲ್ಲ. ಕೃಷಿ ಮತ್ತು  ಹೈನುಗಾರಿಕೆ ಪ್ರೋತ್ಸಾಹಕ್ಕೆ   ಜೊತೆಗೆ ಗೋ ಸಂರಕ್ಷಣೆಗೆ  ಅನುಕೂಲವಾಗುವಂತೆ ಗೋಬರ್ ಗ್ಯಾಸ್ ಸಹಾಯಧನ  ಅಥವಾ ಇನ್ಯಾವುದೇ  ರಿಯಾಯಿತಿಯನ್ನು ಸರಕಾರ ಕೊಡಬೇಕು. ಗೋಬರ್ ಗ್ಯಾಸ್ ಹೆಚ್ಚಾದರೆ  ಹಸು ಸಾಕಾಣಿಕೆ ಉಳಿಯುತ್ತದೆ. ಕರೆಂಟ್ ಬಿಲ್ ರಿಯಾಯಿತಿ, ಅಥವಾ ಇನ್ಯಾವುದೇ ರಿಯಾಯಿತಿ ಗಳನ್ನು ಮಾಡಿದರೂ ಜನ ಇದನ್ನು ಮತ್ತೆ ಸ್ವೀಕರಿಸುತ್ತಾರೆ. 

ಹಸು- ಎಮ್ಮೆ ಸಾಕುವವರು ಗೋಬರ್ ಗ್ಯಾಸ್ ಬಿಡಬೇಡಿ:

 • ಹಸು , ಎಮ್ಮೆ ತ್ಯಾಜ್ಯಗಳಾದ ಸಗಣಿ ಮೂತ್ರಗಳಲ್ಲಿ ಉಚಿತವಾಗಿ ಸಿಗುವ ಇಂಧನ  ಇದು.
 • ಜೊತೆಗೆ ನಾಳೆ ನೀವು ಟ್ಯಾಂಕರ್ ನಲ್ಲಿ ದ್ರವ ಸ್ಲರಿಯನ್ನು ಮಾರಾಟ ಮಾಡುವುದಿದ್ದರೂ ಸಹ ಇದು ಅನುಕೂಲಕರ.
 • ಹಸು, ಎಮ್ಮೆ ಸಾಕಣೆಯಲ್ಲಿ ಸ್ವಲ್ಪ  ಲಾಭ ಕಡಿಮೆ ಆದದ್ದನ್ನೂ ಇದರಲ್ಲಿ ಹೊಂದಾಣಿಕೆ ಮಾಡಬಹುದು.
 • ಒಂದು ಎರಡು ಹಸು  ಇದ್ದವರೂ ಇದನ್ನು ಮಾಡಿ ಇಂಧನ ಮಾಡಿಕೊಳ್ಳಬಹುದು.
 • ಇದಕ್ಕೆ ಕೋಳಿ ಹಿಕ್ಕೆ ಹಾಕಿದರೆ ಭಾರೀ  ಗ್ಯಾಸ್ ಬರುತ್ತದೆ.
 • ಕೊಳೆತ ಹಣ್ಣು ಹಂಪಲು ಹಾಕಿದರೆ ಸಹ  ಗ್ಯಾಸ್ ಬರುತ್ತದೆ.
 • ಇದು ಒಂದು ವೇಸ್ಟ್ ರೀ ಸೈಕ್ಲ್ಲಿಂಗ್ ಯುನಿಟ್ ಎಂದೇ ಹೇಳಬಹುದು.

ಮುಂದೆ ಗ್ಯಾಸ್ ಎಂಬುದು 1000 ರೂ ದಾಟುತ್ತದೆ. ಯಾವುದೇ ಕಾರಣಕ್ಕೆ ವಾಹನದಂತೆ ಮಿತ ವ್ಯವಯದ ವಿದ್ಯುತ್ ಅಥವಾ ಬ್ಯಾಟರಿ ಮೂಲಕ ಒಲೆ ಉರಿಸುವ ವ್ಯವಸ್ಥೆ ಬರಲಾರದು. ಒಲೆ ಉರಿಸಬೇಕಿದ್ದರೆ ಗ್ಯಾಸ್ ಬೇಕು. ಗ್ಯಾಸ್ ಬೇಕಿದ್ದರೆ ನಿರ್ಧರಿತ ದರ ಕೊಡಲೇ ಬೇಕು ಎಂಬ ಸ್ಥಿತಿ ಬರುತ್ತದೆ. ಆ ಸಮಯದಲ್ಲಿ ನಿಮ್ಮ ಕೈ ಹಿಡಿದು ಮುನ್ನಡೆಸುತ್ತದೆ ಈ ಗೋಬರ್ ಗ್ಯಾಸ್.  ಗೋಬರ್ ಗ್ಯಾಸ್ ಮಾಡುವವರು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿ ಎಂದರೆ ಹಳೆಯ ವಿಧಾನದ ಫೈಬರ್ ಡ್ರಂ  ಅಥವಾ ಎಚ್ ಡಿ ಪಿ ಇ ಡ್ರಂ ವಿಧಾನದ  ಸ್ಥಾವರವೇ ಶಾಶ್ವತ.

Leave a Reply

Your email address will not be published. Required fields are marked *

error: Content is protected !!