ನೇಂದ್ರ ಬಾಳೆ – ಕೈಹಿಡಿದರೆ ಭಾರೀ ಲಾಭದ ಬೆಳೆ.

ನೇಂದ್ರ ಬಾಳೆ

ಒಂದು  ಬಾಳೆಗೊನೆಯಲ್ಲಿ ಸರಾಸರಿ 30  ಕಾಯಿಗಳು ಸರಾಸರಿ 20  ಕಿಲೋ ತೂಕ, ಸರಾಸರಿ  ಕಿಲೊ 30 ರೂ. ಬೆಲೆ ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆ ಒಂದೇ. ಇದನ್ನು ಹಣ್ಣಾಗಿಯೂ ತಿನ್ನಬಹುದು.  ಕರಿದು ಚಿಪ್ಸ್  ತಯಾರಿಸಬಹುದು.  ಹಣ್ಣಿನ ಹಲ್ವಾ, ಪಾಯಸ, ಹೀಗೆ ಹಲವಾರು ಅಡುಗೆ ಗಳಲ್ಲೂ ಇದರ ಬಳಕೆ ಇದೆ. ಇದು ಕೇರಳ ಅಲ್ಲದೆ ಕರ್ನಾಟಕ,ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಬೆಳೆಯಲ್ಪಡುತ್ತದೆ.

ನೇಂದ್ರದ ಮೂಲ:

  • ನೇಂದ್ರ ಬಾಳೆ ಅಥವಾ ನೇಂದ್ರನ್ ಇದು ಕೇರಳ ಮೂಲದ ಬಾಳೆ.
  • ತ್ರಿಶೂರು ಜಿಲ್ಲೆಯ  ಚಂಗಝಿಕೋಡು ಅಥವಾ ಚೆಂಗಲಿಕೊಂಡನ್  (Chengazhikudu or Changalikodan )ಎಂಬ  ಗ್ರಾಮದಲ್ಲಿ  ಬೆಳೆಯುತ್ತಿದ್ದ ಬಾಳೆ ತಳಿ.
  • ಚೆಂಗಲಿಕೋಡನ್ ನೇಂದ್ರನ್ ಬನನಾ ಎಂಬುದು ಇದರ ಹೆಸರು.
  • ಇದರ ಮೂಲ ಕೊಚ್ಚಿ ಅಥವಾ ಎರ್ನಾಕುಲಂ ಜಿಲ್ಲೆಯ ಹೊನೊಲುಲು  (Honolulu) ಪ್ರದೇಶದಿಂದ ತಂದದ್ದು ಎನ್ನಲಾಗುತ್ತದೆ.
  • ಇದು ಕೇರಳದ ಪ್ರವಿತ್ರ ದೇಗುಲವಾದ  ಗುರುವಾಯೂರು ಗೋಪಾಲ ಕೃಷ್ಣ  ದೇವರಿಗೆ ಪ್ರಿಯವಾದ ಹಣ್ಣು ಎನ್ನಲಾಗುತ್ತದೆ.
  •   ತ್ರಿಶೂರು ಜಿಲ್ಲೆಯ ಚಂಗಲಿಕೊಂಡನ್ ಪ್ರದೇಶಕ್ಕೆ ನೇಂದ್ರ  ಬಾಳೆಯ ಬೌಗೋಳಿಕ ಸ್ಥಾನಮಾನವೂ ದೊರೆತಿದೆ.
  • ಇಲ್ಲಿ  ನೇಂದ್ರ ಬಾಳೆ ಬೆಳೆಗಾರರ ಸಂಘವೂ ಇದೆ.

ನೇಂದ್ರದ ವಿಶೇಷ:

  • ನೇಂದ್ರ ಬಾಳೆಯ ಕಾಯಿಯಿಂದ ಧೀರ್ಘ ಕಾಲ ಕಾಪಿಡಬಹುದಾದ ಅತ್ಯುತ್ತಮ ಚಿಪ್ಸ್ ತಯಾರಿಸಲಾಗುತ್ತದೆ.
  • ಬೆಳೆಯಲ್ಪಡುವ ನೇಂದ್ರ ಬಾಳೆಯಲ್ಲಿ 75 % ಕ್ಕೂ ಹೆಚ್ಚು ಬಾಳೆ ಕಾಯಿ ಚಿಪ್ಸ್ ತಯಾರಿಕೆಗೇ ಬಳಕೆಯಾಗುತ್ತದೆ.
  • ಚಿನ್ನದ ಬಣ್ಣದ ಚಿಪ್ಸ್ ಇದರಲ್ಲಿ ಮಾತ್ರ ಅಗುವುದು.
  • ಈ ಚಿಪ್ಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ.
  • ಆ ಕಾರಣದಿಂದ ಈ ಬಾಳೆಗೆ ಯಾವಾಗಲೂ ಬೇಡಿಕೆ ಇರುತ್ತದೆ.
  • ನೇಂದ್ರ ಬಾಳೆ ನೆಟ್ಟು 9-10 ತಿಂಗಳಲ್ಲಿ  ಕಠಾವಿಗೆ ಬರುತ್ತದೆ.
  • ನೇಂದ್ರ ಬಾಳೆಯ ಹಣ್ಣಿನಿಂದ ಪ್ರಸಿದ್ದ ಬಾಳೆ ಹಣ್ಣಿನ ಹಲ್ವಾ ತಯಾರಿಸಲಾಗುತ್ತದೆ. ಇದನ್ನು ಪಾಯಸ ಸಹ ಮಾಡಲಾಗುತ್ತದೆ.
  • ಇದನ್ನು ಕಾಯಿ ಬಾಳೆ (ಪ್ಲಾಂಟೈನ್ ಬನಾನ (Plantain banana) ಎಂದು  ವರ್ಗೀಕರಿಸಲಾಗಿದೆ.

ನೇಂದ್ರದ ತಳಿಗಳು:

ಮೈಂದೊಲಿ ನೇಂದ್ರ
ಮೈಂದೊಲಿ ನೇಂದ್ರ

ನೇಂದ್ರದಲ್ಲಿ ಸುಮಾರು ನಾಲ್ಕು ತಳಿಗಳು ಚಾಲ್ತಿಯಲ್ಲಿದೆ. ಅದರ ಎರಡು ವಿಧಗಳು. ಒಂದು ಗಿಡ್ಡ ಮತ್ತು ಅಲ್ಪಾವಧಿಯ ತಳಿ. ಮತ್ತೊಂದು ದೊಡ್ಡ  ಧೀರ್ಘಾವಧಿಯ ತಳಿ. ಈ ವಿಧಗಳಲ್ಲಿ ಎರಡು  ಪರಸ್ಪರ ಪರಿವರ್ತನೆಯಿಂದ ಆದದ್ದು ಇರಬಹುದು. ಜಾಂಜೀ ಬಾರ್ ಇದು ಬೇರೆ ದೇಶದ ತಳಿ.

 ಮಂಜೇರಿ ನೇಂದ್ರ:

  • ಅಲ್ಪಾವಧಿಯ ತಳಿ  ಗಡ್ಡೆ ನೆಟ್ಟು ಸರಿಯಾದ ಆರೈಕೆಯಲ್ಲಿ  6  ತಿಂಗಳಲ್ಲಿ  ಗೊನೆ ಹಾಕಿ 8 ತಿಂಗಳಲ್ಲಿ ಕಠಾವಿಗೆ ಬರುತ್ತದೆ.
  • ಬಾಳೆ ಸುಮಾರು 6-7 ಅಡಿ ಎತ್ತರ. ಗೊನೆಯಲ್ಲಿ 3-4 ಹೆಣಿಗೆಗಳು ಮಾತ್ರ.
  • ಒಂದು ಹೆಣಿಗೆಯಲ್ಲಿ 8-10 ಕಾಯಿಗಳು ಮಾತ್ರ ಇರುತ್ತವೆ.
  • ಗೊನೆಯ ತೂಕ ಸರಾಸರಿ 12 ಕಿಲೋ.
  • ಇದನ್ನು ಮಂಜೇರಿ ನೇಂದ್ರ ಎನ್ನುತ್ತಾರೆ.
  • ಇದು ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಪಟ್ಟಣ.
ಮಂಜೇರಿ ನೇಂದ್ರ
ಮಂಜೇರಿ ನೇಂದ್ರ

ಮೈಂದೋಲಿ ನೇಂದ್ರ:

  • ಎತ್ತರದ ನೇಂದ್ರ ಸುಮಾರು 8 ಅಡಿ ತನಕವೂ ಬೆಳೆಯುತ್ತದೆ.
  • ಸುಮಾರು 4-5 ಹೆಣಿಗೆ ಇರುತ್ತದೆ. ಪ್ರತೀ ಹೆಣಿಗೆಯಲ್ಲಿ 8-10  ಕಾಯಿಗಳಿರುತ್ತವೆ.
  • ಗೊನೆ ಹಾಕಲು ಮತ್ತು ಬೆಳೆಯಲು ಗಿಡ್ದ ನೇಂದ್ರಕ್ಕಿಂತ 1 ತಿಂಗಳು ಹೆಚ್ಚು ಸಮಯಾವಧಿ ಬೇಕು.
  • ಗೊನೆಯ ತೂಕ ಸರಾಸರಿ 15 ಕಿಲೋ ಬರುತ್ತದೆ.
  • ಉತ್ತಮ ಆರೈಕೆಯಲ್ಲಿ 20 ಕಿಲೋ ತನಕವೂ ಬರುತ್ತದೆ.
  • ಇದನ್ನು ಮೈಂದೋಲಿ ನೇಂದ್ರ ಎನ್ನುತ್ತಾರೆ.

ಶತಮಾನ ನೇಂದ್ರ:

ಶತಮಾನ ನೇಂದ್ರ
ಶತಮಾನ ನೇಂದ್ರ
  • ಇದು ಹೆಚ್ಚು ಹೆಣಿಗೆಗಳ ಜೊತೆಗೆ ಹೆಚ್ಚು ತೂಕ ಬರುವ ಬಾಳೆ.
  • ಇದನ್ನು ಬೆಳೆಸಿ ಸರಾಸರಿ 25 ಕಿಲೋ . ಇಳುವರಿ ಪಡೆದವರಿದ್ದಾರೆ.
  • ಬಾಳೆಯ ಎತ್ತರ ಸುಮಾರು 8 ಅಡಿ.
  • ವಾಣಿಜ್ಯಿಕ ಉದ್ದೇಶಕ್ಕೂ ಸೂಕ್ತವಾದದು.
  • ಇದರಲ್ಲಿ 100 ರಷ್ಟು ಕಾಯಿಗಳು ಆಗಬಹುದು ಎಂಬ ಲೆಕ್ಕಾಚಾರ .
  • ಸುಮಾರು  50-60   ಕಾಯಿ  ಆಗುತ್ತದೆ. ಉತ್ತಮ ಆರೈಕೆಯಲ್ಲಿ 35 ಕಿಲೊ ತನಕ ತೂಗುತ್ತದೆ.

ಜಾಂಜೀಬಾರ್:

  • ಇದು  ಶ್ರೀಲಂಕಾ ಮೂಲದ ಬಾಳೆ ಎನ್ನಲಾಗುತ್ತದೆ.
  • ಇದಕ್ಕೆ ಕುಂಡಿಗೆ ಇರುವುದಿಲ್ಲ.
  • ಹಾರ್ನ್ ಪ್ಲಾಂಟೇನ್ ಎಂಬುದಾಗಿ ಕರೆಯುತ್ತಾರೆ.
  • ಕಾಯಿ ದೊಡ್ದದು. ಒಂದು ಕಾಯಿ ½  ಕಿಲೋ ತನಕವೂ ತೂಗಬಲ್ಲುದು.
  • ಬಾಳೆ ಸಾಧಾರಣ ಎತ್ತರ. ಸರಾಸರಿ  3 ಹೆಣಿಗೆಗಳು ಇರುತ್ತವೆ.

ನೇಂದ್ರ ಬಾಳೆಯನ್ನು ಕರ್ನಾಟಕ,ಕೇರಳ, ತಮಿಳುನಾಡಿನಲ್ಲಿ ಅಧಿಕವಾಗಿ ಬೆಳೆಯುತ್ತರೆ. ಜಾಂಜೀಬಾರ್ ಹೊರತಾಗಿ ಉಳಿದ ಬಾಳೆಗೆ ಕಾಂಡ ಕೊರಕ ಹುಳುವಿನ ಉಪಟಳ ಅಧಿಕ. ಅಧಿಕ ಸಾವಯವ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರ ಕೊಟ್ಟರೆ  ಉತ್ತಮ ಇಳುವರಿ ಪಡೆಯಬಹುದು.

ಗಡ್ಡೆ ನಾಟಿ ಮಾಡುವಾಗ ಬಾಳೆ ತೋಟವನ್ನು ನೋಡಿ ಗಡ್ಡೆ ಆಯ್ಕೆ ಮಾಡಬೇಕು. ಈಗ ಅಂಗಾಂಶ ಕಸಿಯ ಮೂಲಕವೂ ಸಸಿ ತಯಾರಿಸಲಾಗುತ್ತದೆ. ಸಮರ್ಪಕ ಕೀಟ ನಿರ್ವಹಣೆ ಮತ್ತು ಉತ್ತಮ ನೆಡು ಸಾಮಾಗ್ರಿ ಆಯ್ಕೆ  ಮಾಡಿದರೆ  ಇತರ ಬಾಳೆಗಿಂತ  ಉತ್ತಮ ಆದಾಯ ಕೊಡಬಲ್ಲುದು.

Leave a Reply

Your email address will not be published. Required fields are marked *

error: Content is protected !!