ಎಣ್ಣೆ ತಾಳೆ ಬೆಳೆಗೆ ಮರುಳಾಗದಿರಿ. ಹೇಳುವಷ್ಟು ಸುಲಭದ ಬೆಳೆ ಅಲ್ಲ.

by | Feb 28, 2021 | Horticulture Crops (ತೋಟದ ಬೆಳೆಗಳು), Palm Fruit (ತಾಳೆ ಬೆಳೆ) | 0 comments

ಸರಕಾರದ ಇಲಾಖೆಗಳು ದೇಶೀಯವಾಗಿ ಖಾದ್ಯ ಎಣ್ಣೆ ಉತ್ಪಾದನೆಗಾಗಿ ನಮ್ಮನ್ನು ಹುರಿದುಂಬಿಸುತ್ತಿವೆ.ಆದರೆ ಎಣ್ಣೆ ತಾಳೆ  ಬೆಳೆ ನಮಗೆಷ್ಟು ಕೈ ಹಿಡಿಯಬಹುದು ಎಂಬುದನ್ನು ಇಲ್ಲಿ ಓದಿ ನಂತರ ನಿರ್ಧರಿಸಿ.
ತಾಳೆ ಎಣ್ಣೆ ಎಂಬುದು ಪ್ರಮುಖ ಖಾದ್ಯ ಮತ್ತು ಅಖಾಧ್ಯ ಎಣ್ಣೆ ಮೂಲವಾಗಿದ್ದು, ಇದನ್ನು  ರೈತರು ತಮ್ಮ ಹೊಲದಲ್ಲಿ  ಸಸಿ ನೆಟ್ಟು  ಬೆಳೆಸಿ ಅದರ  ಫಲದಿಂದ ಪಡೆಯಲಾಗುತ್ತದೆ. ಇದು ನಮ್ಮ ದೇಶದ ಮೂಲದ ಬೆಳೆಯಲ್ಲ. ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಿರುವ ಈ ತಾಳೆ ಮರ, ಈಗ ಖಾದ್ಯ ಎಣ್ಣೆ ಸ್ವಾವಲಂಭನೆ  ಉದ್ದೇಶದಿಂದ ನಮ್ಮ ದೇಶಕ್ಕೆ ಪರಿಚಯಿಸಲ್ಪಟ್ಟಿದೆ. ನಮ್ಮ ದೇಶದಲ್ಲಿ ತಾಳೆ ಬೆಳೆಯನ್ನು ಬೆಳೆಸಿ ಎಣ್ಣೆಯನ್ನು ದೇಶೀಯವಾಗಿಯೇ ಉತ್ಪಾದಿಸುವಂತಾದರೆ ನಾವು ಬೇರೆ ದೇಶದಿಂದ ತರುವ ವಿದೇಶೀ ವಿನಿಮಯ ಉಳಿಯುತ್ತದೆ ಎಂಬುದು ಸರಕಾರದ  ಉದ್ದೇಶವಾಗಿರುತ್ತದೆ.

Oil palm bunch

  • ಎಣ್ಣೆ ತಾಳೆ ಮರ ಎಂಬುದು ನಾವೆಲ್ಲಾ ಕಂಡಿರುವ ಈಚಲು ಮರದ ತರಹದ ಮರವಾಗಿದೆ.
  • ಇದರಲ್ಲಿ ಸುಧಾರಿತ ಹೈಬ್ರೀಡ್ ತಳಿಗಳು ಇವೆ.
  • ಈ ಸಸ್ಯ ನಿರ್ದಿಷ್ಟ ಪ್ರಾಯದ ತರುವಾಯ ತೆಂಗಿನಂತೆ ಗರಿ ಕಂಕುಳಲ್ಲಿ ಹೂ ಗೊಂಚಲು ಬಿಟ್ಟು ಅದರಲ್ಲಿ ಕಾಯಿಗಳಾಗಿ ಬೆಳೆಯುತ್ತದೆ.
  • ಈ ಕಾಯಿ ಗೊಂಚಲು ಬೆಳೆದ ತರುವಾಯ ಅದನ್ನು  ಕಿತ್ತು, ಅದರ ಕಾಯಿಗಳ ಸಿಪ್ಪೆಯ ರಸದಿಂದ ಎಣ್ಣೆ ತೆಗೆಯುತ್ತಾರೆ.
  • ಇದರಲ್ಲಿ ಸಿಪ್ಪೆಯ ಭಾಗದಿಂದ  Mesocarp ದೊರೆಯುವ ಎಣ್ಣೆ (known as crude palm oil)
  • ಒಳ ತಿರುಳಿನ ಎಣ್ಣೆ  Kernel oil  ಎಂಬ  ಎರಡು ಬಗೆಯ ಎಣ್ಣೆ ಲಭ್ಯ. ಇವೆರಡೂ ಖಾದ್ಯ ಎಣ್ಣೆಗಳೇ ಆಗಿರುತ್ತವೆ,

ತಾಳೆ ಎಲ್ಲಿ ಬೆಳೆಯುತ್ತದೆ:

Palm yield at good soil

  • ಎಣ್ಣೆ ತಾಳೆಯು ಮೂಲತಹ ಬೆಳೆಯುತ್ತಿದ್ದುದು, ಇಂಡೋನೆಶಿಯಾ, ಮಲೇಶಿಯಾ, ಆಫ್ರೀಕಾ ದೇಶದ ಕೆಲವು ಭಾಗಗಳ ಜ್ವ್ಲಾಲಾಮುಖಿಯಿಂದ ಉಂಟಾದ ಫಲವತ್ತಾದ ಮಣ್ಣಿರುವ ಭಾಗಗಳಲ್ಲಿ.
  • ಇಲ್ಲಿ ಅದಕ್ಕೆ ಬೇಕಾದಷ್ಟು ನೀರು, ಮಣ್ಣಿನ ಫಲವತ್ತತೆ ಇರುವ ಕಾರಣ ಅಧಿಕ ಇಳುವರಿ ಕೊಡುತ್ತದೆ.
  • ತಾಳೆ ಸಸ್ಯವು ಎಲ್ಲಾ ತರಹದ ಮಣ್ಣಿನಲ್ಲೂ ಬೆಳೆಯುತ್ತದೆ.
  • ಆದರೆ ಎಲ್ಲಾ ಕಡೆಯಲ್ಲೂ ಆರ್ಥಿಕ ಇಳುವರಿ ಕೊಡುವುದಿಲ್ಲ.
  • ಫಲವತ್ತಾದ ಮಣ್ಣು ಇರುವ ಜಾಗದಲ್ಲಿ  ಇದು ವರ್ಷಕ್ಕೆ ಸರಾಸರಿ 10 ಗೊಂಚಲು ಕಾಯಿಗಳನ್ನು ಕೊಡುತ್ತದೆ.
  • ಗೊನೆಯ ತೂಕ ಸರಾಸರಿ 40 ಕಿಲೋ ದಷ್ಟು ಇರುತ್ತದೆ.
  • ಫಲವತ್ತಾದ ಮಣ್ಣು ಇಲ್ಲದ ಪ್ರದೇಶಗಳಲ್ಲಿ ಮತ್ತು ವಾತಾವರಣದ ಅನುಕೂಲತೆಗಳು ಇಲ್ಲದ ಸಮಯದಲ್ಲಿ ಇದು ಸರಾಸರಿ 10-15 ಕಿಲೋ ತೂಕದ ಗೊನೆಯನ್ನು ಮಾತ್ರವೇ ಕೊಡುತ್ತದೆ.
  • ವರ್ಷದಲ್ಲಿ 5-6 ಗೊಂಚಲನ್ನು ಮಾತ್ರ ಕೊಡುತ್ತದೆ.
  • ನೀರಾವರಿ ಮಾಡಿ ಬೆಳೆಸುವುದೇ ಆದರೆ ಈ ಸಸ್ಯಕ್ಕೆ ದಿನಕ್ಕೆ 200 ಲೀ.ನಷ್ಟು ನೀರು ಬೇಕಾಗುತ್ತದೆ.
  • ಗೊಬ್ಬರವೂ ಬೇಕು. ಮಣ್ಣಿನ ಫಲವತ್ತತೆ ಕಡಿಮೆ ಇರುವಲ್ಲಿ ವರ್ಷಗಳು ಎಷ್ಟಾದರೂ ಹೂವು ಬಿಡುವುದಿಲ್ಲ.
  • ಹೂವು ಬಿಟ್ಟರೂ ಕಾಯಿ ಕಚ್ಚುವುದಿಲ್ಲ.

Harvesting method

ಯಾರು ಬೆಳೆಯಬಹುದು?

  • ಫಲವತ್ತಾದ ಮಣ್ಣು ಉಳ್ಳ, ಯತೇಚ್ಚ ನೀರಾವರಿ ಅನುಕೂಲ ಉಳ್ಳ ಪ್ರದೇಶಗಳ ರೈತರು ಇದನ್ನು ಬೆಳೆಯಬಹುದು.
  • ಕಾಲುವೆ ನೀರಾವರಿ, ಹೊಳೆ ಬದಿಯ ನೀರಾವರಿ, ಬೆಟ್ಟ ಗುಡ್ಡಗಳ ಗುರುತ್ವ ನೀರಾವರಿ ಉಳ್ಳ ಪ್ರದೇಶಗಳಲ್ಲಿ  ಇದಕ್ಕೆ ಬೇಕಾಗುವಷ್ಟು ನೀರನ್ನು ಕೊಡಲು ಸಾಧ್ಯ.
  • ಇಂತಹ ಪ್ರದೇಶಗಳಲ್ಲಿ ಇತರ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲದ ಕಡೆ ಎಣ್ಣೆ ತಾಳೆ ಬೆಳೆಯಬಹುದು.
  • ಕೊಳವೆ ಬಾವಿಯ ನೀರು ಬಳಸಿ ಇಂತಹ ಅಧಿಕ ನೀರು ಬಯಸುವ ಬೆಳೆಗಳನ್ನು ಬೆಳೆಯುವುದು ಸೂಕ್ತವಲ್ಲ.
  • ಈ ಬೆಳೆಗೆ ಮಂಗಗಳ ಕಾಟ ಇಲ್ಲ ಎಂದೇ  ಹೇಳಬಹುದು.
  • ಯಾಕೆಂದರೆ ಇದರ ಗರಿಗಳಲ್ಲಿ, ಗರಿ ಅಲಗುಗಳಲ್ಲಿ ಮುಳ್ಳುಗಳಿರುತ್ತವೆ.
  • ಆದಾಯ ಸಹ ಅಷ್ಟೊಂದು ದೊಡ್ಡ ಮೊತ್ತವಲ್ಲ.
  • ಒಂದು ಎಕ್ರೆಗೆ  10-12 ಟನ್  ಇಳುವರಿ ಬರುತ್ತದೆ.
  • ಒಂದು ಟನ್ ಗೆ 14 ಸಾವಿರದ ತನಕ ಬೆಲೆ ಇರುತ್ತದೆ.
  • ತೋಟಗಾರಿಕಾ ಇಲಾಖೆಯವರು ಇದಕ್ಕೆ ಹನಿ ನೀರಾವರಿ ಮಾಡಲು, ಗೊಬ್ಬರ ಖರೀದಿಗೆ ಸಹಾಯಧನ ನೀಡುತ್ತದೆ.

ಅನನುಕೂಲಗಳು:

Handling is not easy

  •  ತಾಳೆ ಮರದಲ್ಲಿ ಬರುವ ಕಾಯಿ ಗೊಂಚಲನ್ನು ತೆಂಗಿನ ಕಾಯಿ ಕೀಳುವಂತೆ ಮರಕ್ಕೆ ಹತ್ತಿ ಕೀಳಲು ಆಗುವುದಿಲ್ಲ.
  • ಇದಕ್ಕೆ  ಕತ್ತಿ ಉಳ್ಳ ವಿಶೇಷ ಕೊಕ್ಕೆ ಬೇಕಾಗುತ್ತದೆ.
  • ಆಗಾಗ ಮರದ ಒಣ ಗರಿಗಳನ್ನು ಕಡಿದು ಮರದ ಕಾಂಡವನ್ನು ಸ್ವಚ್ಚಮಾಡಿಟ್ಟುಕೊಳ್ಳಬೇಕು.
  • ತೆಂಗಿನ ಕಾಯಿ ಅಡಿಕೆ, ಅಥವಾ ಇನ್ಯಾವುದೇ ಕೃಷಿ ಉತ್ಪನ್ನವನ್ನು ಮಾರಾಟ ಮಾಡಿದಂತೆ ಇದನ್ನು ಮಾರಾಟ ಮಾಡಲಿಕ್ಕೆ ಆಗುವುದಿಲ್ಲ.
  • ಇದನ್ನು ಕೆಲವು ಎಣ್ಣೆ ತೆಗೆಯುವ ಘಟಕ ಹೊಂದಿದವರು ಮಾತ್ರ ಖರೀದಿ ಮಾಡುತ್ತಾರೆ.
  • ಬೆಳೆ ಇರುವಲ್ಲಿ ಇವರು ಖರೀದಿ ಕೇಂದ್ರಗಳನ್ನು ತೆರೆಯುತ್ತಾರೆ.
  • ಸಧ್ಯಕ್ಕೆ ಕರ್ನಾಟಕದಲ್ಲಿ ಗಂಗಾವತಿಯಲ್ಲಿ ಎಣ್ಣೆ ತೆಗೆಯುವ ಘಟಕ ಇದೆ.
  • ರಾಜ್ಯದಲ್ಲಿ ಬೇರೆ ಬೇರೆ ಕಡೆ ಎಣ್ಣೆ ತೆಗೆಯುವ ಕಂಪೆನಿಗಳ ಘಟಕಗಳಿದ್ದುದ್ದು, ನಿಗೂಢ ಕಾರಣಗಳಿಂದ ಬಹುತೇಕ ಬಾಗಿಲು ಮುಚ್ಚಿ ಹೋಗಿವೆ.

ಗೊತ್ತಾಗದ ಸತ್ಯಗಳು :

  • ತಾಳೆ ಮರದ ಗೊಂಚಲನ್ನು ಕೊಯಿಲು ಮಾಡಿದ 24 ಗಂಟೆ ಒಳಗೆ ಎಣ್ಣೆ ತೆಗೆದರೆ  ಅದು ಖಾದ್ಯ ಎಣ್ಣೆಯಾಗುತ್ತದೆ.
  • ಇಲ್ಲವಾದರೆ ಅದು ಖಾದ್ಯವಲ್ಲದ ಬಳಕೆಗೆ ಸೂಕ್ತವಾಗುತ್ತದೆ.
  • ಕೆಲವೊಮ್ಮೆ ಇದರಲ್ಲಿ ಭಾರೀ ಮೋಸಗಳಾಗುವ ಅವಕಾಶಗಳಿದ್ದು, ಸಮೀಪವೇ ಎಣ್ಣೆ ತೆಗೆಯುವ ಘಟಕ ಇದ್ದರೆ ಮಾತ್ರ ಬೆಳೆಯುವುದು ಉತ್ತಮ.

ರೋಗ ಕೀಟಗಳಿಂದ ಮುಕ್ತವಲ್ಲ:

  • ತಾಳೆ ಮರಕ್ಕೆ ಇತರ ಬೆಳೆಗಳಿಗೆ ಇರುವಂತೆ ಕುರುವಾಯಿ ಕೀಟ (Rhinoceros beetle)   ಕೆಂಪು ಮೂತಿ ಹುಳದ (Red palm weevil) ಗರಿ ತಿನ್ನುವ ಹುಳ (Case worm) ದ ತೊಂದರೆ ಇದೆ.
  • ರೋಗಗಳಾದ ಕಾಂಡ ಕೊಳೆ ರೋಗ (Stem wet rot)  ಸುಳಿ ಕೊಳೆ ರೋಗ (Bud rot disease) ಬುಡ ಕೊಳೆ ರೋಗ  Basal stem rot ಮುಂತಾದವುಗಳು ಇವೆ.

ಇದಕ್ಕಿಂತ ತೆಂಗು ಉತ್ತಮ:

  • ನಮ್ಮ ದೇಶದ ಪುರಾತನ ತೆಂಗು, ತಾಳೆ ಬೆಳೆಗಿಂತ ಉತ್ತಮ ಎಂದರೆ ತಪ್ಪಲ್ಲ.
  • ಯಾಕೆಂದರೆ ಇದು ನಮಗೆ ಗೊತ್ತಿರುವ ಬೆಳೆ. ಕೊಳ್ಳಲು ಖರೀದಿ ಮಾಡುವ ಕಂಪೆನಿಗಳು ಬೇಕಾಗಿಲ್ಲ.
  • ಸ್ಥಳೀಯವಾಗಿಯೂ ಮಾರಾಟ ಮಾಡಬಹುದು.
  • ತಾಳೆ ಬೀಜದಲ್ಲಿ ಸಿಗುವಷ್ಟೇ ಎಣ್ಣೆ ಅಂಶ 60-65% ಎಣ್ಣೆ ತೆಂಗಿನ ಕೊಬ್ಬರಿಯಲ್ಲೂ ದೊರೆಯುತ್ತದೆ.
  • ಬರೇ ಕೊಬ್ಬರಿ ಮಾತ್ರವಲ್ಲ, ಹಸಿ ಕಾಯಿ, ಎಳನೀರು ಸಹ ಮಾರಾಟ ಮಾಡಬಹುದು.

ಇಂದಿನ ಧಾರಣೆಯಲ್ಲಿ ಸುಮಾರು 100 ಕಾಯಿ ಕೊಡುವ ಒಂದು ಎಕ್ರೆ ತೆಂಗಿನ ತೋಟ ಇದ್ದರೆ ತಾಳೆ ಬೆಳೆಯಷ್ಟೇ ಆದಾಯವನ್ನು ಪಡೆಯಬಹುದು. ಆದುದರಿಂದ ಹಿಂದೆ ಮುಂದೆ  ನೋಡದೆ ಯಾರದೋ ಒತ್ತಾಯಕ್ಕೆ ತಾಳೆ ಬೆಳೆಸಿ ನಷ್ಟ ಮಾಡಿಕೊಳ್ಳಬೇಡಿ.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!