ಸಾವಯವ ಬಾಳೆ ಬೇಸಾಯ ಅಸಾಧ್ಯವಲ್ಲ.

by | May 26, 2020 | Fruit Crop (ಹಣ್ಣಿನ ಬೆಳೆ), Banana (ಬಾಳೆ) | 0 comments

ಸಾವಯವ ವಿಧಾನದಲ್ಲಿ ಬಾಳೆ ಬೆಳೆಸುವುದಾದರೆ ಆಗಾಗ ಪೋಷಕಗಳನ್ನು ಕೊಡುತ್ತಾ ತೀವ್ರ ನಿಗಾದಲ್ಲಿ ಬೆಳೆ ಬೆಳೆಸಬೇಕಾಗಿಲ್ಲ. ಬಾಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತದೆಯೋ ಅಷ್ಟನ್ನು ಒಂದು ಇಲ್ಲವೇ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕು. ಭಾರೀ ಗೊನೆ ಬಾರದಿದ್ದರೂ ಸರಾಸರಿ 25  ಕಿಲೋ ತೂಕದ ಗೊನೆ ಪಡೆಯಬಹುದು.

  • ತಿನ್ನುವ ಹಣ್ಣು ಆದ ಕಾರಣ ಸಾಧ್ಯವಾದಷ್ಟು  ರಾಸಾಯನಿಕ ಬಳಕೆ ಕಡಿಮೆ ಮಾಡಿ  ಬೆಳೆ ಬೆಳೆದರೆ ಆರೋಗ್ಯಕ್ಕೂ ಉತ್ತಮ.
  • ಈ ನಿಟ್ಟಿನಲ್ಲಿ ಯಾವ ಯಾವ ಸಾವಯವ ಪೋಷಕಗಳನ್ನು ಬಳಸಿ ಉತ್ತಮ ಬಾಳೆ  ಗೊನೆ ಪಡೆಯಬಹುದು ಎಂಬ  ಬಗ್ಗೆ ಮಾಹಿತಿ ಇಲ್ಲಿದೆ.

ಬಾಳೆ ನೆಟ್ಟು 10-12 ತಿಂಗಳ ಒಳಗೆ ಅದು ಗೊನೆ ಹಾಕಿ  ಕೊಯಿಲು ಆಗಿರುತ್ತದೆ. ಆ ಸಮಯದಲ್ಲಿ ಅದು ಬಯಸುವ ಪೋಷಕಾಂಶಗಳು ಅತ್ಯಧಿಕ. ಕೆಲವು ಆಧಿಕ ತೀಕ್ಷ್ಣ ಸಾವಯವ ಪೋಷಕಗಳು ಕಡಿಮೆ ಖರ್ಚಿನಲ್ಲಿ ಉತ್ತಮ ಗೊನೆಯನ್ನು ಕೊಡಬಲ್ಲವು.

ಸಾವಯವ ಪೋಷಕಗಳನ್ನೇ ಕೊಟ್ಟು ಬೆಳೆದ ಬಾಳೆ-ಸೊರಬದ ರೈತ.

ತೀಕ್ಷ್ಣ  ಪೋಷಕಾಂಶಗಳು:

  • ಸಸ್ಯ ಜನ್ಯ ಮತ್ತು ಪ್ರಾಣಿ ಜನ್ಯ  ಪೋಷಕಗಳಷ್ಟು ತೀಷ್ಣ ಸಾರವನ್ನು  ಒದಗಿಸಬಲ್ಲ ಬೇರೆ  ಸಾವಯವ ಪೋಷಕಗಳಿಲ್ಲ.
  • ಸಸ್ಯ ಜನ್ಯ ಪೋಷಕಗಳಲ್ಲಿ ಎಣ್ಣೆ  ಹಿಂಡಿ ಗೊಬ್ಬರಗಳು ಉತ್ಕೃಷ್ಟ. ಇದರಲ್ಲಿ ಮುಖ್ಯ ಪೋಷಕಗಳಲ್ಲದೆ  ಸೂಕ್ಷ್ಮ ಪೋಷಕಗಳೂ ಇರುತ್ತವೆ.
  • ಹಿಂಡಿ ಗೊಬ್ಬರಗಳಲ್ಲಿ ಹರಳು ಹಿಂಡಿ, ನೆಲಕಡ್ಲೆ ಹಿಂಡಿ, ಮತ್ತು ಹತ್ತಿ ಹಿಂಡಿ, ಉತ್ತಮ ಮೂಲದ್ದಾದರೆ ಬೇವಿನ ಹಿಂಡಿಗಳು  ಶ್ರೇಷ್ಟ. ಇದು ಎಣ್ಣೆ ತೆಗೆದ ಹಿಂಡಿಗಳಾಗಿರಬೇಕು.
  • ಎಲುಬಿನ ಗೊಬ್ಬರ, ಮೀನಿನ ಗೊಬ್ಬರ ಸಹ ತೀಕ್ಷ್ಣ  ಗೊಬ್ಬರಗಳಾಗಿರುತ್ತವೆ.
  • ಕ್ಯಾಲ್ಸಿಯಂ  ಮತ್ತು ಮೆಗ್ನೀಶಿಯಂ  ಪೋಷಕದ ಅಗತ್ಯಕ್ಕೆ ಖನಿಜ ಆಧರಿತ ಡೋಲೋಮೈಟ್  ಬಳಕೆ ಮಾಡಬೇಕು.
  • ಕೋಳಿ ಗೊಬ್ಬರ ತ್ವರಿತವಾಗಿ ಪೋಷಕಗಳನ್ನು ಬಿಡುಗಡೆ ಮಾಡುತ್ತದೆ.
  • ಇದರ ಜೊತೆಗೆ 1 ಕಿಲೋ ಪ್ರಮಾಣದಲ್ಲಿ ಬೂದಿಯನ್ನು ಸೇರಿಸಿದರೆ ಉತ್ತಮ ತೂಕದ ಗೊನೆ  ಪಡೆಯಬಹುದು.

ಎಣ್ಣೆ ಹಿಂಡಿಗಳಲ್ಲಿ ಸಾರಜನಕ ಅಂಶ ಹೆಚ್ಚು ಇರುತ್ತದೆ. ಉಳಿದ ರಂಜಕ ಮತ್ತು ಪೊಟ್ಯಾಶಿಯಂ ಕಡಿಮೆ ಇರುತ್ತದೆ. ಹತ್ತಿ ಹಿಂಡಿಯಲ್ಲಿ ಪೊಟ್ಯಾಶಿಯಂ  ಚೆನ್ನಾಗಿರುತ್ತದೆ. ಇದನ್ನು ಗಮನಿಸಿ ಬಳಕೆ ಮಾಡಬೇಕು.
ಎಣ್ಣೆ ಹಿಂಡಿಗಳ  ಜೊತೆಗೆ ಬಾಳೆಗೆ ಅಗತ್ಯವಾದ ಪೊಟ್ಯಾಶಿಯಂ ಸತ್ವಕ್ಕಾಗಿ ಮರ ಸುಟ್ಟ ಬೂದಿಯನ್ನು ಬಳಕೆ ಮಾಡಬೇಕು.
ಲಭ್ಯತೆ ಅನುಕೂಲ ಇದ್ದವರು  ರಂಜಕವಾಗಿ ಒಂದು ಬಾಳೆಗೆ 250- 500 ಗ್ರಾಂ ಪೌಡರ್ ತರಹದ  ಎಲುಬಿನ ಗೊಬ್ಬರವನ್ನು ಬಳಕೆ ಮಾಡಬಹುದು.

ಗಾಳಿ ಬಾಳೆ ಸಾಮಾನ್ಯವಾಗಿ ಎಲ್ಲರೂ ಸಾವಯವದಲ್ಲೇ ಬೆಳೆಯುವ ಬೆಳೆ- Gali, (Hill banana)Suitable banana variety for Organic cultivation

ಗಾಳಿ ಬಾಳೆ ಸಾಮಾನ್ಯವಾಗಿ ಎಲ್ಲರೂ ಸಾವಯವದಲ್ಲೇ ಬೆಳೆಯುವ ಬೆಳೆ- Gali, (Hill banana)

  • ಎಣ್ಣೆ ಹಿಂಡಿ, ಕೋಳಿ ಗೊಬ್ಬರ, ಡಿಸ್ಟಿಲ್ಲರಿ ತ್ಯಾಜ್ಯ ( ಪ್ರೆಸ್ ಮಡ್) ಇವುಗಳನ್ನು  ಸಮ ಪ್ರಮಾಣದಲ್ಲಿ ಮಿಶ್ರಣ  ಮಾಡಿಕೊಂಡು
  • ಪ್ರತೀ ಬಾಳೆಗೆ 3  ಕಿಲೋ ಪ್ರಮಾಣದಲ್ಲಿ 4  ಕಂತುಗಳಲ್ಲಿ ಕೊಟ್ಟರೆ
  • ರಾಸಾಯನಿಕ ಗೊಬ್ಬರದಲ್ಲಿ ಬೆಳೆದ ಬಾಳೆಯಂತೆ ಇಳುವರಿ ಬರುತ್ತದೆ ಎನ್ನುತ್ತಾರೆ ರಾಷ್ಟ್ರೀಯ ಬಾಳೆ ಸಂಶೊಧನಾ ಸಂಸ್ಥೆಯವರು.
  • ಬಾಳೆಯ ಗಿಡ ಹೆಚ್ಚು ವಿಸ್ತಾರಕ್ಕೆ ಬೇರು ಬಿಟ್ಟರೆ ಅದರ ಬೆಳೆವಣಿಗೆ ಉತ್ತಮವಾಗುತ್ತದೆ.
  • ಬೇರು ಹೆಚ್ಚು ಬರಲು ಭತ್ತದ ಮಿಲ್ಲುಗಳ ಸುಟ್ಟ ಹೊಟ್ಟು ನೆರವಾಗುತ್ತದೆ.
  • ಎಲ್ಲದಕ್ಕಿಂತ ಮುಖ್ಯವಾಗಿ ಫಲವತ್ತಾದ ಮಣ್ಣಿನಲ್ಲಿ ಸಾವಯವ ಗೊಬ್ಬರ ಒಂದನ್ನೇ ಕೊಟ್ಟು ಬೆಳೆ ಬೆಳೆಯಲು ಸಾಧ್ಯವಿದೆ.

ಸಾವಯವ ಮೂಲದಲ್ಲಿ ಇರುವ ತೀಷ್ಣ ಸತ್ವದ ಪೋಷಕಗಳು ಇವು. ಬಾಳೆ ಗೊನೆಯ ಪುಷ್ಟಿಯಾಗಲು ಇದು ಸಾಕು. ಇದರ ಜೊತೆಗೆ ಸಮುದ್ರ ಪಾಚಿಯ ಗೊಬ್ಬರ ದ್ರವೀಕರಿಸಿ ಸಿಂಪರಣೆ  ಮಾಡಿದರೆ ಅದು ಕಾಯಿ ಪುಷ್ಟಿಯಾಗುವಂತೆ ಮಾಡುತ್ತದೆ.

ಸಸಿ ಹಂತದಲ್ಲಿ ಗೊಬ್ಬರ:

ಕದಳಿ, ಪುಟ್ಟು ಬಾಳೆ, ಏಲಕ್ಕಿ ಬಾಳೆಯನ್ನು ಕೆಲವರು ಸಾವಯವದಲ್ಲೇ ಬೆಳೆದು ಇಂತಹ ಗೊನೆ ಪಡೆಯುತ್ತಾರೆ. Some fermers grow this banana in Organic way

ಕದಳಿ, ಪುಟ್ಟು ಬಾಳೆ, ಏಲಕ್ಕಿ ಬಾಳೆಯನ್ನು ಕೆಲವರು ಸಾವಯವದಲ್ಲೇ ಬೆಳೆದು ಇಂತಹ ಗೊನೆ ಪಡೆಯುತ್ತಾರೆ.

  • ನಾಟಿ ಮಾಡುವಾಗ ಬೇರು ಬರಲು ಅನುಕೂಲವಾಗುವಂತೆ ಭತ್ತದ ಹೊಟ್ಟು ಸುಟ್ಟ ಬೂದಿಯನ್ನು ಸುಮಾರು 5-6 ಕಿಲೋ ಪ್ರಮಾಣದಲ್ಲಿ  ಹಾಕಿ.
  • ಮಣ್ಣಿಗೆ 100-150  ಗ್ರಾಂ ಪ್ರಮಾಣದಲ್ಲಿ ಡೋಲೋಮೈಟ್ ಸುಣ್ಣವನ್ನು ಮಿಶ್ರಣ ಮಾಡಿ.
  •  ನಿಮ್ಮ ಹೊಲದಲ್ಲಿ ಅಥವಾ ಸುತ್ತಮುತ್ತ ಮೇಲು ಮಣ್ಣು ಸಂಗ್ರಹವಾಗುವ ಸ್ಥಳದಿಂದ ಮಣ್ಣನ್ನು ಸಂಗ್ರಹಿಸಿ
  • ಅದನ್ನು ಸುಡು ಮಣ್ಣು ಮಾಡಿಕೊಂಡು ಅದನ್ನು ಒಂದು ಬಾಳೆ ಸಸ್ಯಕ್ಕೆ 5-10 ಕಿಲೋ ಪ್ರಮಾಣದಲ್ಲಿ ಹಾಕಿ.
  • ಗಡ್ಡೆ ನೆಡುವಾಗ ಸಾಧ್ಯವಾದಷ್ಟು ದೊಡ್ಡ ಗಡ್ಡೆಯನ್ನು ನೆಡಲು ಬಳಸಿ.
  • ಇಷ್ಟು ಮಾಡಿದರೆ ಸಸಿಯ ಪ್ರಾರಂಭಿಕ  ಮೊಳಕೆ ಚೆನ್ನಾಗಿ ಬರುತ್ತದೆ.

ಅಂಗಾಂಶ ಕಸಿಯ ಸಸಿಗಳನ್ನು ನೆಡುವಾಗ ಮೇಲಿನ ಸಾಮಾಗ್ರಿಗಳನ್ನು  ಹಾಕಿ, ನಾಟಿ ಮಾಡಿ ಎರಡು ವಾರದ ತರುವಾಯ 1 ಕಿಲೋ ನೆಲಕಡ್ಲೆ ಹಿಂಡಿ ಅಥವಾ ಹರಳು ಹಿಂಡಿಯನ್ನು ನೆನೆಸಿ ಅದನ್ನು ಸೋಸಿ, ದ್ರಾವಣ ಮಾಡಿಕೊಂಡು ಅದಕ್ಕೆ4-5 ಲೀ. ನಷ್ಟು ದನದ ಗಂಜಳವನ್ನು ಸೇರಿಸಿ, ಆ ದ್ರಾವಣವನ್ನು 100 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಸಸ್ಯದ ಬೆಳವಣಿಗೆ ಉತ್ತಮವಾಗುತ್ತದೆ.

  • ಸಾವಯವ ವಿಧಾನದಲ್ಲಿ ಬೆಳೆ ಬೆಳೆಸುವಾಗ  ನಾವು ಹಾಕುವ ಪೋಷಕಗಳನ್ನು ನೆಡುವಾಗ ಅಥವಾ ನೆಟ್ಟು ಕೆಲವೇ ಸಮಯದಲ್ಲಿ ಗರಿಷ್ಟ ಪ್ರಮಾಣದಲ್ಲಿ ಕೊಡಬೇಕು.
  • ಅವೆಲ್ಲಾ ಪೋಷಕಗಳನ್ನು ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಜೀರ್ಣಿಸಿ ಸಸ್ಯಗಳು ಬಳಸುವ ಸ್ಥಿತಿಗೆ ತರಬೇಕು.
  • ಸಾವಯವ ಪೋಷಕಗಳು ಸಸ್ಯಕ್ಕೆ ಲಭ್ಯವಾಗಲು ರಾಸಾಯನಿಕ ಗೊಬ್ಬರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
  •  ಆದ ಕಾರಣ ಬೇಗ ಗೊಬ್ಬರಗಳನ್ನು ಕೊಡಬೇಕು.

ಬಾಳೆ ಸಸ್ಯದಲ್ಲಿ 4 -6 ಎಲೆ ಬಂದಾಗ:

  • ಈ ಸಮಯಯಲ್ಲಿ ಗರಿಷ್ಟ ಪೋಷಕಾಂಶಗಳನ್ನೆಲ್ಲಾ ಒಟ್ಟು ಮುಗಿಸಬೇಕು.
  • ಸುಮಾರು 25  ಕಿಲೊ ತೂಕ ಬರುವ ಪಚ್ಚ ಬಾಳೆಗೆ  ಹಾಗೆಯೇ 12-15  ಕಿಲೋ ತೂಕ ಬರಬೇಕಾದ  ಇತರ  ಬಾಳೆಗಳಿಗೆ ಸುಮಾರು 2  ಕಿಲೋ ಹರಳು ಹಿಂಡಿ ಮತ್ತು 4-5  ಕಿಲೋ ಪ್ರಮಾಣದಲ್ಲಿ ಮರಸುಟ್ಟ  ಬೂದಿಯನ್ನು ಬಳಕೆ ಮಾಡಬೇಕು.
  • ಇದು ಗೊನೆ ಹಾಕುವ ತನಕ ಪೋಷಕಗಳನ್ನು ಒದಗಿಸುತ್ತಿರುತ್ತದೆ.

ಸಿಂಪರಣೆ ಮೂಲಕ ಪೊಷಕಗಳನ್ನು ಕೊಡುವುದಾದರೆ ಸದ್ಯಕ್ಕೆ ಪೊಟ್ಯಾಶ್ ಹೆಚ್ಚು ಇದ್ದು, ಸೂಕ್ಷ್ಮ  ಪೋಷಕಗಳಿರುವ ಏಕೈಕ ತಯಾರಿಕೆ ಸಮುದ್ರ ಪಾಚಿ. ಇದರ ಬೆಲೆಯೂ ದುಬಾರಿ ಇಲ್ಲ. ಇದನ್ನು 1 ಲೀ. ಗೆ  1 ಗ್ರಾಂ ನಂತೆ  ದ್ರವೀಕರಿಸಿ  ಸಿಂಪರಣೆ ಮಾಡಿದರೆ ಕಾಯಿ ಬೆಳೆವಣಿಗೆ ಉತ್ತಮವಾಗುತ್ತದೆ.

ಬಾಳೆಯನ್ನು ಸಾವಯವ ವಿಧಾನದಲ್ಲಿ ಬೆಳೆಸುವುದು ಅಸಾದ್ಯವಲ್ಲ. ಆದರೆ ಸ್ವಲ್ಪ ಖರ್ಚು ಹೆಚ್ಚು  ಬರಬಹುದು. ಈಗ ರಾಸಾಯನಿಕ ಗೊಬ್ಬರಗಳೂ ದುಬಾರಿಯಾದ ಕಾರಣ ಇದು ಸಮವಾಗುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!