ಅಡಿಕೆ- ಮಿಡಿ ಉದುರುವುದು- ಸ್ಪ್ರಿಂಕ್ಲರ್ ನೀರಾವರಿ.

by | Mar 3, 2022 | Crop Management (ಬೆಳೆ ನಿರ್ವಹಣೆ) | 0 comments

ಅಡಿಕೆ ತೋಟಗಳಿಗೆ ಸ್ಪ್ರಿಂಕ್ಲರ್ ನೀರಾವರಿ ಮಾಡುವುದಿದ್ದರೆ , ಅದು ಸಣ್ಣ ಮರಗಳು ಆಗಿದ್ದಲ್ಲಿ ಮಿಡಿ ಉದುರುವುದು ಜಾಸ್ತಿಯಾಗುತ್ತದೆ. ಅಡಿಕೆ ಹೂಗೊಂಚಲಿಗೆ  ನೀರು ತಾಗಿದಾಗ ಅದೂ ರಾತ್ರೆ, ಬೆಳಗ್ಗೆ ಪರಾಗಸ್ಪರ್ಶಕ್ಕೆ ಅನನುಕೂಲವಾಗುತ್ತದೆ.
ಅಡಿಕೆ ಬೆಳೆಯುವವರು ತಮ್ಮ ಅಡಿಕೆ ಸಸಿಗಳಿಗೆ ನೀರಿನ ಕೊರತೆ ಆಗದಿರಲಿ ಎಂದು ಸ್ಪ್ರಿಂಕ್ಲರ್ ನೀರಾವರಿ ಮಾಡುವುದು ಹೆಚ್ಚು. ಇದರಿಂದ ನೆಲವೆಲ್ಲಾ ಒದ್ದೆಯಾಗಿರುತ್ತದೆ. ಎಲ್ಲಾ ಬೇರುಗಳಿಗೂ ನೀರು , ಗೊಬ್ಬರ ಲಭ್ಯವಾಗಿ ಸಸಿ ಚೆನ್ನಾಗಿ ಬೆಳೆಯುತ್ತದೆ ಎಂಬುದು ಇವರ ಸಮಜಾಯಿಸಿ. ಸ್ಪ್ರಿಂಕ್ಲರ್ ನೀರಿನಲ್ಲಿ ನೆಲ ಒದ್ದೆಯಾಗಿ ಮೇಲ್ಪದರದಲ್ಲಿ ಹಬ್ಬುವ ಬೇರುಗಳಿಗೆ ಯಥೇಚ್ಚ ತೇವಾಂಶ ದೊರೆಯುತ್ತದೆ. ಸಸಿಗಳ ಬೆಳವಣಿಗೆ ಚೆನ್ನಾಗಿ ಇರುತ್ತದೆ ಎಲ್ಲವೂ ಸರಿ. ಆದರೆ ಇಳುವರಿ ಪ್ರಾರಂಭವಾದ ನಂತರ ಕೆಲವು ವರ್ಷಗಳ ವರೆಗೆ ಇಂತಹ ಮರಗಳಲ್ಲಿ ಮಿಳ್ಳೆ ಉದುರುವುದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

Nut fall due to over irrigation

ಆಧಿಕ ನೀರಾವರಿಯಿಂದ ಮಿಡಿ ಉದುರುತ್ತದೆ.

 • ನೀವು ಯಾವಾಗಲಾದರೂ ಬಿಡುವು ಮಾಡಿಕೊಂಡು  ಹನಿ ನೀರಾವರಿ ಮಾಡಿದ, ಅಥವಾ ಸೂಕ್ಷ್ಮ ಸಿಂಚನ( ಮೈಕ್ರೋ ಸ್ಪ್ರಿಂಕ್ಲರ್) ತೋಟಗಳಿಗೆ ಒಮ್ಮೆ ಭೇಟಿ ಕೊಡಿ.
 • ಅಲ್ಲಿ ಸ್ಪ್ರಿಂಕ್ಲರ್ ನೀರಾವರಿ ಮಾಡಿದ ತೋಟದಲ್ಲಿ ಉದುರಿದಷ್ಟು ಮಿಡಿಗಳು ಉದುರಿರುವುದು ಕಾಣಿಸುವುದಿಲ್ಲ.
 • ಎಲೆಗಳು ಸ್ವಲ್ಪ ಹಳದಿಯಾಗಿದ್ದರೂ, ನೆಲವೆಲ್ಲಾ ಒಣಗಿ ಬೆಂಕಿ ಕಡ್ಡಿ ಗೀರಿ ಬಿಸಾಡಿದರೂ ಹೊತ್ತಿ ಉರಿಯುವ ಸ್ಥಿತಿ ಇದ್ದರೂ ಕಾಯಿ ಕಚ್ಚುವಿಕೆ ಪ್ರಮಾಣ ಚೆನ್ನಾಗಿರುತ್ತದೆ.
 • ( ಕೆಲವು ಅಪವಾದಗಳು ಇರಬಹುದು ಚೆನ್ನಾಗಿ ನಿರ್ವಹಣೆ ಮಾಡಿದಲ್ಲಿ ಇದು ಕಾಣಸಿಗುತ್ತದೆ) ಇದಕ್ಕೆ ಕಾರಣ ಇಲ್ಲಿದೆ.

ನಳ್ಳಿ ಉದುರುವಿಕೆ ಮತ್ತು ನೀರಾವರಿ:

 • ಸಾಮಾನ್ಯವಾಗಿ ಎಲ್ಲಾ ಅಡಿಕೆ ತಳಿಗಳು ನೆಟ್ಟು 5 ವರ್ಷದ ಒಳಗೆ ಫಸಲಿಗೆ ಆರಂಭವಾಗುತ್ತದೆ.
 • ಅದರಲ್ಲೂ ಮಂಗಳ,ತಳಿ ಸ್ವಲ್ಪ ಬೇಗವೇ ಇಳುವರಿ ಪ್ರಾರಂಭವಾಗುತ್ತದೆ.
 • ಆಗ ಅದರ ಎತ್ತರ ನೆಲಮಟ್ಟದಿಂದ 5-6 ಅಡಿಯಷ್ಟು ಇರುತ್ತದೆ.ಸ್ಪ್ರಿಂಕರ್ ನೀರಾವರಿ ಮಾಡುವಾಗ ನೀರಿನ ಬಲವಾದ ಹನಿಗಳು ಹೂ ಗೊಂಚಲಿಗೂ ತಗಲುತ್ತದೆ.
 • ಹೂ ಗೊಂಚಲು ಒದ್ದೆಯಾಗುತ್ತದೆ. ಹೂ ಗೊಂಚಲು ಒದ್ದೆಯಾದಾಗ ಗಾಳಿಯಲ್ಲಿ ಪರಾಗ ಕಣಗಳು ಪ್ರಸಾರವಾಗಲು ಅಡ್ಡಿಯಾಗುತ್ತದೆ.
 • ಪರಾಗ ಕಣಗಳು ಸ್ವಲ್ಪ ತೊಳೆದೂ ಹೋಗುತ್ತದೆ. ಇದರಿಂದ ಪರಾಗ ಸ್ವೀಕರಿಸಲು ಪಕ್ವವಾಗಿರುವ ಮಿಡಿಗಳಿಗೆ ಸೂಕ್ತ ಸಮಯದಲ್ಲಿ ಪರಾಗ ಕಣಗಳು ಲಭ್ಯವಾಗದೆ ಅದು ಉದುರಿ ಹೋಗುವ ಸಾಧ್ಯತೆ ಹೆಚ್ಚು.
 • ಅಡಿಕೆಯಲ್ಲಿ 90% ದಷ್ಟು ಪರಾಗಸ್ಪರ್ಶ ಕ್ರಿಯೆಯು ಬೆಳಗ್ಗಿನ ಹೊತ್ತು, ಸಂಜೆಯ ಹೊತ್ತು ಗಾಳಿಯ ಮೂಲಕ ನಡೆಯುತ್ತದೆ.
 • ತೋಟದಲ್ಲಿ ಓಡಾಡುವಾಗ ಮೂಗಿಗೆ ಅಹಲ್ಲಾದಕರವಾದ ಸುವಾಸನೆ ಬರುವುದು ಏನಿದೆಯೋ ಅದು ಪರಾಗ ಕಣಗಳ ಪರಿಮಳವಾಗಿರುತ್ತದೆ.
 • ಈ ಪರಾಗ ಕಣಗಳು ಒದ್ದೆಯಾದರೆ ಅದರ ಸೂಕ್ಷ್ಮ ಹುಡಿ ರೂಪದಲ್ಲಿರುವಂತದ್ದು, ಅಂಟಿಕೊಳ್ಳುತ್ತದೆ.
 • ಗಾಳಿಯಲ್ಲಿ ಹಾರಾಡಲು ಅನನುಕೂಲವಾಗುತ್ತದೆ.
 • ಈ ಸಮಸ್ಯೆ ಸಸಿಗಳ ಹೂ ಗೊಂಚಲಿಗೆ ನೀರಿನ ಹನಿಗಳು ತಾಗುವಷ್ಟು ಸಮಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
 • ಮರ ದೊಡ್ದದಾದ ನಂತರ ಕಡಿಮೆಯಾಗುತ್ತದೆ.

ಬರೇ ಇಷ್ಟೇ ಅಲ್ಲ. ಕೆಳಗೆ ಉದುರಿ ಬೀಳುವ ಮಿಡಿಗಳು ನೆಲದಲ್ಲಿ ರೋಗಾಣುಗಳ ಸಂಪರ್ಕಕ್ಕೆ ಬರುತ್ತದೆ. ಅದು ಮತ್ತೆ ಮರದ ಮಿಡಿಗಳಿಗೆ ಹರಡಿ ಶಿಲೀಂದ್ರ ರೋಗ ಬರುವ ಸಾಧ್ಯತೆಯೂ ಹೆಚ್ಚಾಗುತ್ತದೆ.

 • ಸಾಧಾರಣವಾಗಿ ಹೆಚ್ಚಿನ ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ಗೂಟವನ್ನು ನೆಲದಿಂದ 1.5-2 ಅಡಿ ತನಕ ಎತ್ತರ ಇಡುತ್ತಾರೆ.
 • ಅದಕ್ಕೆ ಸ್ಪ್ರಿಂಕ್ಲರ್ ಹಾಕಿದಾಗ ನೀರಿನ ಚಿಮ್ಮುವಿಕೆ ಮತ್ತೆ 5-6 ಅಡಿ ತನಕ ಇರುತ್ತದೆ.
 • ಆಗ 5-6-7 ಅಡಿ ತನಕದ ಮರದ ಸಿಂಗಾರಕ್ಕೂ ನೀರಿನ ಹೊಡೆತ ಬೀಳುತ್ತದೆ.
 • ಇದನ್ನು ಪ್ರತೀಯೊಬ್ಬರೂ ಅವರವರ ತೋಟದಲ್ಲಿ ಗಮನಿಸಬಹುದು.
 • ಮರ ಎತ್ತರವಾದ ನಂತರ ಮಿಡಿ ಉದುರುವ ಸಮಸ್ಯೆ ಕಡಿಮೆಯಾಗಲಾರಭಿಸುತ್ತದೆ.
 • ಎತ್ತರದ ಮರಗಳಿಗೆ ಶಿಲೀಂದ್ರ ಸೋಂಕು ಸಹ ಕಡಿಮೆ ಇರುತ್ತದೆ.
 • ಕೀಟ ಬಾಧೆಯೂ ಕಡಿಮೆ.

Avoid sprinkling of water to flowers

ಯಾವುದೇ ಕಾರಣಕ್ಕೆ ಅಡಿಕೆ, ತೆಂಗು ಹಾಗೆಯೇ ಬಹುತೇಕ ಪರಾಗಸ್ಪರ್ಶ ಆಗುವ ಬೆಳೆಗಳಿಗೆ ಹೂ ಭಾಗಕ್ಕೆ ನೀರು ಬೀಳಬಾರದು. ಅದು ಒಣಗಿ ಇದ್ದಾಗ ಪರಾಗ ಕಣಗಳ ವರ್ಗಾವಣೆ ಸಾಧ್ಯವಾಗುತ್ತದೆ. ಪರಾಗ ಕಣಗಳು ಅತೀ ಅಲ್ಪ ಪ್ರಮಾಣದಲ್ಲಿ ಇರುವ ಕಾರಣ ತೊಳೆದು ಹೋಗುವುದಕ್ಕೆ ಹೆಚ್ಚು ಕಾಲ ಬೇಡ. ಅಡಿಕೆಯ ಹೂ ಗೊಂಚಲಿಗೆ ನೀರು ಬೀಳುವುದರಿಂದ ಗಂಡು ಹೂವು ಅಪಕ್ವ ಹಂತದಲ್ಲೇ ಉದುರುತ್ತದೆ. ಮಿಡಿಗಳೂ ಸಹ ಉದುರುತ್ತದೆ.

ಪರಿಹಾರ ಏನು?

 • ಎಳೆ ಪ್ರಾಯದ ಅಡಿಕೆ ಸಸಿಗಳಿಗೆ ನೀರಾವರಿ ಮಾಡುವಾಗ ಸೂಕ್ಷ್ಮ ನೀರಾವರಿಯನ್ನೇ ಮಾಡುವುದು ಸೂಕ್ತ.
 • ಒಂದು ವೇಳೆ ಹನಿ ನೀರಾವರಿಯಲ್ಲಿ ತೃಪ್ತಿ ಇಲ್ಲದಿದ್ದ ಪಕ್ಷದಲ್ಲಿ ಬುಡ ಭಾಗ ಮಾತ್ರ  ಒದ್ದೆಯಾಗುವ ಮೈಕ್ರೋ ಜೆಟ್ ನೀರಾವರಿ ಮಾಡಬಹುದು.
 • ಬುಡ ಭಾಗ ಹೆಚ್ಚು ತೇವವಾಗಿದ್ದಾಗ ಹೆಚ್ಚು ಹೆಚ್ಚು ಕಳೆಗಳು ಬೆಳೆಯುತ್ತವೆ.
 • ಕಳೆಗಳಲ್ಲಿ ಬಹುತೇಕ ಕೀಟಗಳು ಆಶ್ರಯ ಪಡೆದಿರುತ್ತವೆ.
 • ಅವುಗಳೇ ನಂತರ ಅಡಿಕೆ ಹೂ ಗೊಂಚಲಿಗೂ ತೊಂದರೆ ಮಾಡುತ್ತವೆ.
Micro jet irrigation

ಹನಿ ನೀರಾವರಿ ಕಷ್ಟವಾದವರು ಈ ರೀತಿ ನೀರು ಬೀಳುವ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.

 • ಸರಿಯಾದ ಅಳವಡಿಕೆ ಮತ್ತು ಸಮರ್ಪಕ ನಿರ್ವಹಣೆ ಮಾಡುವವರಿಗೆ ಹನಿ ನೀರಾವರಿ ಬಹಳ ಉತ್ತಮ.
 • ಸಣ್ಣ ಪ್ರಾಯದ ಸಸಿಗಳ ತೋಟಕ್ಕೆ ಸ್ಪ್ರಿಂಕ್ಲರ್ ಅಳವಡಿಸುವುದೇ ಆಗಿದ್ದರೆ  ತಗ್ಗಿನಲ್ಲಿ ಇರುವಂತೆ ಅಳವಡಿಸಬೇಕು.
 • ಇದರ ನೀರಿನ ಹನಿಗಳು ಹೂ ಗೊಂಚಲಿಗೆ ತಾಗದಂತೆ ಇರಬೇಕು.
 • ಸಾಧ್ಯವಾದಷ್ಟು ಹಗಲು ಹೊತ್ತು ಅದರಲ್ಲೂ ಪರಾಗಸ್ಪರ್ಶ ಕ್ರಿಯೆ ನಡೆಯುವ ಹೊತ್ತು ಬಿಟ್ಟು ಬೇರೆ ಸಮಯದಲ್ಲಿ ಸ್ಪ್ರಿಂಕ್ಲರ್  ಹಾಕಿ ನೀರುಹಾಯಿಸಬೇಕು.
 • ಬುಡ ತೋಯುವಂತೆ ನೀರಾವರಿ ಮಾಡಬಾರದು.

ಬಹುತೇಕ ರೋಗಗಳು ಮತ್ತು ಕೀಟಗಳು ಬರುವುದು ನಮ್ಮ ತೋಟ ನಿರ್ವಹಣೆಯ ಕೆಲವು ದೋಷಗಳಿಂದಾಗಿ. ಹೆಚ್ಚಿನ ರೋಗಗಳಿಗೆ ಅಧಿಕ ನೀರೇ ಕಾರಣ. ಅಡಿಕೆ ಮರಗಳಿಗೆ ನಾವೆಲ್ಲಾ ಎಣಿಸಿದಂತೆ ನೀರಾವರಿ ಬೇಕಾಗಿಲ್ಲ. ಅದು ಸ್ವಲ್ಪ ಒಣ ಹವೆಯನ್ನು ಬಯಸುವ ಬೆಳೆಯಾದ ಕಾರಣ ಬೇಕಾದಷ್ಟೇ ನೀರಾವರಿ ಮಾಡುವುದರಿಂದ ಸಸ್ಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ರೋಗ ಕೀಟ ಸಮಸ್ಯೆ ತಡೆಯುವುದಕ್ಕೂ ಒಳ್ಳೆಯದು.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!