ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ ಕಡಿಮೆ -ಮಾರುಕಟ್ಟೆಗೆ ಮಾಲು ಇಲ್ಲ.

ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ

ಕೆಂಪು ರಾಶಿ ಅಡಿಕೆ ಮಾರುಕಟ್ಟೆ ಹೇಗಾದರೂ ಒಮ್ಮೆ 55,000 ತಲುಪಿತು. ಆದರೆ ಶುಕ್ರವಾರದ ಮಾರುಕಟ್ಟೆ, ಭಾನುವಾರದ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಹಾಗೂ ಇಂದು 12-09-2022 ಸಾಗರ, ಶಿವಮೊಗ್ಗದಲ್ಲಿನ ವ್ಯವಹಾರ ನೋಡುವಾಗ ಸ್ವಲ್ಪ ಸ್ವಲ್ಪ ಹಿಂದೆ ಬರುವ ಲಕ್ಷಣ ಕಾಣಿಸುತ್ತಿದೆ.  ನಿಖರವಾಗಿ ಹಿಂದೆ ಬಂತು ಎಂಬಂತಿಲ್ಲ. ಇನ್ನೂ ಒಂದೆರಡು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿ ಅಂದಾಜು ಮಾಡಬಹುದಷ್ಟೇ. ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸ್ವಲ್ಪ ಮುಂದೆ ಬಂದಿದ್ದಾರೆ. ಅಡಿಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ದರ ಏರಿಸಲಾಗಿದೆ ಎನ್ನುತ್ತಾರೆ. ಚಾಲಿ ದರ ಏರಿಕೆ- ಇಳಿಕೆ ಕ್ಯಾಂಪ್ಕೋ ನಡೆಯನ್ನು ಅವಲಂಭಿಸಿ ಇದೆ ಎಂಬುದಾಗಿ ವರ್ತಕರು ಅಭಿಪ್ರಾಯಪಡುತ್ತಾರೆ.

ದರ ಏರಿಕೆ  ಆಗುವಾಗ ಯಾವ ಬೆಳೆಗಾರರೂ ಅನಿವಾರ್ಯ ತುರ್ತು ಅಗತ್ಯ ಇಲ್ಲದೆ ವಿನಹ ಮಾರಾಟಕ್ಕೆ ಮುಂದಾಗುವುದಿಲ್ಲ. ಇಳಿಕೆಯಾದಾಗ ಮಾರಾಟಕ್ಕೆ ಮುಂದಾಗುತ್ತಾರೆ. ಇದು ಮನುಷ್ಯ ಸಹಜ ಗುಣ. ಕೆಲವು ಬೆಳೆಗಾರರಲ್ಲಿ ಕೆಂಪಡಿಕೆ ದಾಸ್ತಾನು ಇದೆ. ದರ ಏರಿಕೆ ಆಗಲಿ ಎಂದು ಕಾಯುತ್ತಿದ್ದಾರೆ. ಈಗ ದರ ಸ್ವಲ್ಪ ಕುಸಿದದ್ದನ್ನು ನೋಡಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬರುತ್ತಿದೆ. ಅದರೆ ಎಲ್ಲವೂ ಮಾರಾಟವಾಗುತ್ತಿಲ್ಲ. ಉತ್ತರ ಭಾರತದಲ್ಲಿ ಮಳೆ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗಿದೆ ಎಂಬುದು ಕಾರಣ. ಶಿವಮೊಗ್ಗ, ಚೆನ್ನಗಿರಿ, ಭದ್ರಾವತಿ, ಚಿತ್ರದುರ್ಗ ಮಾರುಕಟ್ಟೆಗೆ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಬಂದ ಕಾರಣವೂ ದರ ಸ್ವಲ್ಪ ಇಳಿಸಿದ್ದು ಇರಬಹುದು. ಸೋಮವಾರದ  ಚಾಲಿಗೆ ಬೇಡಿಕೆ ಅಷ್ಟೊಂದು ಹುರುಪಿನಲ್ಲಿ ಇಲ್ಲ. ಬಹುಷಃ ಪಿತೃ ಪಕ್ಷ ಕಳೆಯುವ ತನಕ ಇದೇ ಪರಿಸ್ಥಿತಿ ಮುಂದುವರಿಯಬಹುದು. ಯಲ್ಲಾಪುರದಲ್ಲಿ ಶುಕ್ರವಾರ ಸರಾಸರಿ 54,899 ಹಾಗೂ ಗರಿಷ್ಟ  57,218  ದರ ಇದ್ದುದು ಇಂದು ಸರಾಸರಿ 53,000 ಕ್ಕೆ ಇಳಿಕೆಯಾಗಿದೆ. ಈಗಾಗಲೇ ಚೇಣಿ ವ್ಯವಹಾರ  ಭರದಿಂದ ಸಾಗುತ್ತಿದೆ. ಕೆಲವು ಕಡೆ ಅಡಿಕೆ ಕೊಯಿಲು, ಸಂಸ್ಕರಣೆ ಪ್ರಾರಂಭವಾಗಿದೆ. ಮಳೆ ನಿಂತರೆ ಕೊಯಿಲು ಪ್ರಮಾಣ ಹೆಚ್ಚಾಗಿ ದರ ಏರಿಕೆಗೆ ಬ್ರೇಕ್ ಬೀಳಬಹುದು. ಹಾಗೆಂದು ವರ್ತಕರ ನಡೆ ಬೆಳೆಗಾರರ ನಿರೀಕ್ಷೆಯಂತೆ ಇರುವುದಿಲ್ಲ ಎಂಬುದೂ ಸತ್ಯ.

ಚಾಲಿ ದರ ಇಳಿಯದು:

  • ಚಾಲಿ ದರ ಇಳಿಯುವುದಿಲ್ಲ ಎಂಬುದು ಬೆಳಗಾರರಿಗೆ ಮನವರಿಕೆಯಾಗಿದೆ.
  • ಹಾಗಾಗಿ ಮಾರುಕಟ್ಟೆಗೆ ಅಡಿಕೆ ಬರುತ್ತಿಲ್ಲ. ಈ ವರ್ಷದ (ಹೊಸ ಅಡಿಕೆ ಫಸಲು new crop) ಈಗಾಗಲೇ 30% ನಷ್ಟವಾಗಿದೆ ಎಂಬ ಸುದ್ದಿ ಇದೆ.
  • ಮಳೆ – ಬಿಸಿಲಿನ ವಾತಾವರಣ ಇನ್ನೂ ಮುಂದುವರಿಯುತ್ತಿರುವ ಕಾರಣ ಇದು ಮತ್ತೂ 10% ಏರಿಕೆ ಆಗಬಹುದು ಎಂಬ ಅನುಮಾನ ಇದೆ.
  • ಕೆಲವು ಕಡೆ ಅಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. 
  • ಹಾಗಾಗಿ ಬೆಳೆಗಾರರು 500 ಆಗಲಿ ಅದಕ್ಕಿಂತ ಹೆಚ್ಚಾಗಲಿ ಆಗತ್ಯಕ್ಕೆ ತಕ್ಕಷ್ಟೇ ಮಾರಾಟ ಮಾಡುವುದು ನಿಶ್ಚಿತ.
  • ಬಹುತೇಕ ಅಡಿಕೆ ಬೆಳೆಗಾರರು ಈ ವರ್ಷದ ಹಳೆ ಅಡಿಕೆ ಧಾರಣೆ ಮತ್ತು ಬೇಡಿಕೆ ನೋಡಿ, ಮುಂದೆ ಹಳೆ ಅಡಿಕೆ ಮಾಡಿಯೇ ಮಾರಾಟ ಮಾಡುವ ಮನೋಸ್ಥಿತಿಯಲ್ಲಿದ್ದಾರೆ.
  • ಕೆಲವು ದೊಡ್ಡ ದೊಡ್ಡ ಬೆಳೆಗಾರರು ಹೊಸತು ದಾಸ್ತಾನು ಇಡಲು ಸಾಧ್ಯವಿಲ್ಲದ ಮಾಲನ್ನು ಮಾತ್ರ ಮಾರಾಟ ಮಾಡುತ್ತಾರೆ.
  • ಮುಂದಿನ ವರ್ಷದ ಫಸಲು ಕೈಗೆ ಬಂದ ತರುವಾಯ ಸ್ವಲ್ಪ ಸ್ವಲ್ಪ ಮಾರಾಟ ಪ್ರಾರಂಭಿಸುತ್ತಾರೆ.
  • ಹಾಗಾಗಿ ವರ್ತಕರು ಎಷ್ಟೇ  ದರ ಏರಿಕೆ ಮಾಡಿದರೂ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ತುಂಬಾ ಕಡಿಮೆ.

ಕೆಲವು ಮೂಲಗಳ ಪ್ರಕಾರ ಚಾಲಿಗೂ ಅಂತಹ ಬೇಡಿಕೆ ಇಲ್ಲ ಎಂಬ ಮಾಹಿತಿ ಇದೆ. ದರ ಎರಿಸಿದರೂ ಅಡಿಕೆ ಬರುವುದಿಲ್ಲ ಎಂಬ ಖಾತ್ರಿ ಇರುವ ಕಾರಣ ಖಾಸಗಿಯವರು 490 ತನಕ ಏರಿಸಿದ್ದಾರೆ. ಕ್ಯಾಂಪ್ಕೋ ಮಾತ್ರ ದರ ಸ್ಥಿರವಾಗಿ ಉಳಿಸಿಕೊಂಡಿದೆ. ಕ್ಯಾಂಪ್ಕೋ  ಸಂಸ್ಥೆಯ ವಾರ್ಷಿಕ ಮಹಾಸಭೆ ಇದೇ 24 ಕ್ಕೆ ಇರುವ ಕಾರಣ ದರ ಏರಿಸಬಹುದು ಎಂಬ ನಿರೀಕ್ಷೆ. ಇದು ಈಡೇರಿದರೆ ಖಾಸಗಿ ಮಾರುಕಟ್ಟೆಯಲ್ಲಿ 500 ಆಗಬಹುದು. ಇಲ್ಲವಾದರೆ ದರ ಸ್ವಲ್ಪ ಇಳಿಕೆಯಾಗಬಹುದು.

ಕೆಂಪಡಿಕೆ ದರ ಯಾವಾಗಲೂ ಏರಬಹುದು:

ಕೆಂಪು ರಾಶಿ ಅಡಿಕೆ 1
  • ಕೆಂಪಡಿಕೆ ರಾಶಿಯ ದರ ಯಾವಾಗಲೂ ಚಾಲಿಗಿಂತ 4000-5000 ಹೆಚ್ಚು ಇರುತ್ತದೆ.
  • 2019 ನೇ  ಇಸವಿಯ ನಂತರ ದರ ಚಾಲಿಗಿಂತ ಸ್ವಲ್ಪ ಹಿಂದೆಯೇ ಇದೆ.
  • ಇದು ಹೀಗೇ ಮುಂದುವರಿಯಲಾರದು. ಕೆಂಪಡಿಕೆಗೆ ಅದರದ್ದೇ ಆದ ಮಾರುಕಟ್ಟೆ ಇದ್ದು, ಯಾವಾಗಲೂ ಇದರ ದರ ಏರಿಕೆಯಾಗಬಹುದು.
  • ಗುಟ್ಕಾಕ್ಕೆ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಚಾಲಿ ಅಡಿಕೆ ಸೇರಿಸುತ್ತಿರುವ ಕಾರಣ ಕೆಂಪಡಿಕೆ ಹಿಂದೆ ಬಿದ್ದಿದೆ ಎನ್ನುತ್ತಾರೆ.
  • ಅದು ಏನೇ ಇದ್ದರೂ ವ್ಯಾಪಾರಿಗಳು ಯಾವುದೇ ಸಮಯದಲ್ಲಿ ಕೆಂಪಡಿಕೆಗೆ ಬೇಡಿಕೆ ಸೃಷ್ಟಿ ಮಾಡಿ ಬೆಲೆ ಏರಿಕೆ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. 
  • ದರ ಏರಿಕೆ ಆಗುತ್ತಿದ್ದರೆ ಮಾಲು ಬರುವುದು ಕಡಿಮೆ. 
  • ಬೇಡಿಕೆ ಚೆನ್ನಾಗಿದ್ದಾಗ ಬೆಲೆ ಸ್ಥಿರತೆ ಉಳಿಸಿಕೊಂಡು ಬೆಳೆಗಾರರಿಂದ ಮಾಲು ಸರಾಗವಾಗಿ ಮಾರುಕಟ್ಟೆಗೆ ಬರುವಂತೆ ಮಾಡಲಿಕ್ಕಾಗುತ್ತದೆ.
  • ಅದೇ ಕಾರಣಕ್ಕೆ ಕೆಂಪು ರಾಶಿಯ ಬೆಲೆ ಅಧಿಕ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲದೆ ಮುಂದುವರಿಯುತ್ತಿದೆ.
  • ಈ ವರ್ಷ ಮಳೆ ಕಾರಣದಿಂದಾಗಿ ಮತ್ತೆ ಚಾಲಿ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಇದೆ.

ಚಾಲಿ – ಎಲ್ಲೆಲ್ಲಿ ಯಾವ ದರ ಇತ್ತು?

ಚಾಲಿ ಅಡಿಕೆ ಹಿನ್ನೆಡೆ
  • ಮಂಗಳೂರು: ಹೊಸತು: 45000-47500-48500(ಖಾಸಗಿ)
  • ಹಳತು: 55000-56000-57000 (ಖಾಸಗಿ)
  • ಪುತ್ತೂರು- ಹೊಸತು: 45000-47500-48500(ಖಾಸಗಿ)
  • ಹಳತು: 55000-56000-57000 (ಖಾಸಗಿ)
  • ಸುಳ್ಯ –ಹೊಸತು: 45000-47500-48500(ಖಾಸಗಿ)
  • ಹಳತು: 55000-56000-57000 (ಖಾಸಗಿ)
  • ಬೆಳ್ತಂಗಡಿ- ಹೂಸತು: 45000-47500-48500(ಖಾಸಗಿ)
  • ಹಳತು: 55000-56000-56500 (ಖಾಸಗಿ)
  • ಕಾರ್ಕಳ- ಹೊಸತು: 45000-47500-48500(ಖಾಸಗಿ)
  • ಹಳತು: 55000-56000-56500 (ಖಾಸಗಿ)
  • ಕುಂದಾಪುರ- ಹೊಸತು: 45000-47500-48000(ಖಾಸಗಿ)
  • ಹಳತು: 55000-56000-56000 (ಖಾಸಗಿ)
  • ಉಳ್ಳಿಗಡ್ಡೆ:25000-30000
  • ಕರಿ ಕೋಕಾ:20,000-29000
  • ಪಟೋರಾ:  30000-39000
  • ಕುಮಟಾ -ಹೊಸತು: 43,000-44,000
  • ಹಳತು: 44,000-44100
  • ಸಾಗರ – ಹೊಸತು:40500- 41604
  • ಶಿರ್ಸಿ- ಹೊಸತು: 43685-44900
  • ಯಲ್ಲಾಪುರ – ಹೊಸತು:42800-44600
  • ಸಿದ್ದಾಪುರ- ಹೊಸತು:43500-44340

ಕೆಂಪಡಿಕೆ ಧಾರಣೆ:

  • ದಾವಣಗೆರೆ: ರಾಶಿ ; 50600-52700
  • ಭದ್ರಾವತಿ:ರಾಶಿ ;50400-53100
  • ಚೆನ್ನಗಿರಿ :ರಾಶಿ ; 52590-53690
  • ಚಿತ್ರದುರ್ಗ:53100-54000
  • ಶಿವಮೊಗ್ಗ: 51699-52599
  • ಸಿದ್ದಾಪುರ:ರಾಶಿ ;51899-52339
  • ಯಲ್ಲಾಪುರ:ರಾಶಿ ;53000-55300
  • ಸಿರ್ಸಿ:51200-52690
  • ಸಾಗರ:51800-52900
  • ತೀರ್ಥಹಳ್ಳಿ:ರಾಶಿ ;52000-52700
  • ಶಿಕಾರಿಪುರ:51,000-51,700
  • ಸಿರಾ:50,000-51,600

ಮಾರುಕಟ್ಟೆಯಲ್ಲಿ ಕೊಳ್ಳುವವರು ತುಂಬಾ ಕಡಿಮೆ ಇದ್ದಾರೆ. ಮಾರಾಟಕ್ಕೆ ಇಟ್ಟ ಪ್ರಮಾಣದಲ್ಲಿ 50 % ಖರೀದಿದಾರರು ಇಲ್ಲದೆ ಉಳಿಯುತ್ತಿದೆ. ಬಿಡ್ಡಿಂಗ್ ಮಾಡುವವರ ಸಂಖ್ಯೆ ಕಡಿಮೆ ಇದ್ದು, ಬೆಲೆ ಹೆಚ್ಚು ಹಾಕುವವರೇ ಇಲ್ಲದ ಸ್ಥಿತಿ ಉಂಟಾಗಿದೆ.

ಕರಿಮೆಣಸಿನ ಮಾರುಕಟ್ಟೆ ಸ್ಥಿತಿ :

ಕರಿಮೆಣಸು ಧಾರಣೆ ಎರಡು ತಿಂಗಳಿಂದ ತಟಸ್ಥವಾಗಿದ್ದು, ಖಾಸಗಿ ಮಾರುಕಟ್ಟೆಯಲ್ಲಿ ತುಸು ಚೇತರಿಕೆ ಕಾಣುತ್ತಿದೆ. ಹಾಗಾಗಿ ಸಣ್ಣ ಪ್ರಮಾಣದ ಏರಿಕೆ ಸಾಧ್ಯತೆ ಇರಬಹುದು. ನವೆಂಬರ್ ತಿಂಗಳ ತನಕ ದರ ಏರಿಕೆ ಆಗುವ ಅವಕಾಶ ಇದ್ದು, ನಂತರ ಹೊಸ ಬೆಳೆಯ ನಿಖರ ಲೆಕ್ಕಾಚಾರ ಹೊಂದಿ ಏರಿಕೆ –ಇಳಿಕೆ ನಿರ್ಧಾರವಾಗಲಿದೆ. ಈ ವರ್ಷ ಮೆಣಸಿನ ಬಳ್ಳಿಗಳಿಗೆ ರೋಗ ಹೆಚ್ಚಾಗಿದ್ದು, ಬೆಳೆ ಕಡಿಮೆಯಾಗುವ ಸಾಧ್ಯತೆ ಇದೆ.

ಪೆಪ್ಪರ್

  • ಮೂಡಿಗೆರೆ, ಚಿಕ್ಕಮಗಳೂರಿನ ಕೆಲವು ವ್ಯಾಪಾರಿಗಳು ಹಿಂದೆ 490-495 ದರದಲ್ಲಿ ಖರೀದಿ ಮಾಡುತ್ತಿದ್ದವರು ಈಗ 500 ಕ್ಕೆ ಏರಿಸಿದ್ದಾರೆ.
  • ಮಂಗಳೂರು, ಕಾರ್ಕಳದ ಖಾಸಗಿ ವ್ಯಾಪಾರಿಗಳು 485-490 ರ ಬೆಲೆಗೆ ಖರೀದಿ ಮಾಡುತ್ತಿದ್ದವರು 495 500 ಕ್ಕೆ ಏರಿಸಿದ್ದಾರೆ.
  • ಕ್ಯಾಂಪ್ಕೋ ಖರೀದಿ ದರ ಯಥಾಸ್ಥಿತಿಯಲ್ಲಿದೆ. ಆಮದು ಮುಗಿದರೆ ಬೆಲೆ ಏರಿಕೆ ಆಗಬಹುದು.
  • ಇನ್ನು ಬೇಡಿಕೆ ಹೆಚ್ಚಾಗುವ ಸಮಯ.
  • ಬಹಳಷ್ಟು ಕಂಪೆನಿಗಳು ಕರಿಮೆಣಸಿನ ಔಷಧಿ, ಹಾಗೂ ಇನಿತ ಮೌಲ್ಯವರ್ಧಿತ  ಉತ್ಪನ್ನಗಳಿಗೆ ಹಗುರದ ಕಡಿಮೆ ಬೆಲೆಯ ಮೆಣಸನು ಬಳಕೆ ಮಾಡುತ್ತಿರುವ ಕಾರಣ ಉತ್ತಮ ಮೆಣಸಿನ ಬಳಕೆ ಕಡಿಮೆಯಾಗಿದೆ.

ಹೊಸ ಸುದ್ದಿ:

ಈಗಾಗಲೇ ಶ್ರೀಲಂಕಾದಿಂದ 325 ರೂ ಬೆಲೆಗೆ ದೊಡ್ಡ ಪ್ರಮಾಣದ ಮೆಣಸು ಭಾರತಕ್ಕೆ ಆಮದು ಆಗುವುದಕ್ಕೆ ಸಿದ್ದವಾಗಿದೆ. ಇದು ನಿಖರ ಮಾಹಿತಿಯೇ ಆಗಿದ್ದಲ್ಲಿ ಬೆಲೆ ಸ್ವಲ್ಪ ಕುಸಿತವಾದರೂ ಆಗಬಹುದು. ಶ್ರೀಲಂಕಾ ಈಗ ಯಾವ ಬೆಲೆಯಾದರೂ ಸರಿ. ಹಣ ಬೇಕು ಎಂಬ ಸ್ಥಿತಿಯಲ್ಲಿರುವ ಕಾರಣ  ಕಡಿಮೆ ಬೆಲೆಗೆ ಭಾರತದಲ್ಲಿ ಬೆಳೆಯಲ್ಪಡುವ ಸಾಂಬಾರ ವಸ್ತುಗಳನ್ನು ಕೊಡಲು ಸಿದ್ದವಾಗಿದೆ.

ಕೊಬ್ಬರಿ ದರ:

ಕೊಬ್ಬರಿ ದರ 19,000 ದಿಂದ 13,000 ಕ್ಕೆ ಇಳಿದದ್ದು ಮತ್ತೆ ಚೇತರಿಕೆ ಕಾಣಲೇ ಇಲ್ಲ. ಈಗಲೂ 13,500-13,750 ದರದಲ್ಲಿ ಇದೆ. ನವರಾತ್ರೆ ತನಕವೂ ಇದೇ ರೀತಿ ದರ ಮುಂದುವರಿಯಬಹುದು.

ರಬ್ಬರ್ ಧಾರಾಣೆ:

ನೈಸರ್ಗಿಕ ರಬ್ಬರ್ ನ ಬೆಲೆ ಈ ತಿಂಗಳು ಬಾರೀ ಕುಸಿತ ಕಂಡಿದೆ. ಇನ್ನೂ ಕುಸಿತವಾಗುವ ಸಂಭವ ಇದೆ. ಸಿಂಥೆಟಿಕ್ ರಬ್ಬರ್ ಬಳಕೆ ಹೆಚ್ಚಾಗಿದೆ. ಆಮದು ಸಹ ಆಗುತ್ತಿದೆ. ಹಾಗಾಗಿ ರಬ್ಬರ್ ಬೆಳೆಗಾರರ ಕಷ್ಟ ಹೇಳತೀರದಾಗಿದೆ.

  • 1 X Grade: 152.00
  • RSS 5 :136.00
  • RSS 4:146.00
  • RSS 3: 146.50
  • LOT:130.00
  • SCRAP 79-87

ಕಾಫೀ ಧಾರಣೆ:

ಕಾಫೀ ಬೀಜ

ಕಾಫೀ ಧಾರಣೆ ಸ್ಥಿರವಾಗಿದೆ.ಮುಂದಿನ ವರ್ಷವೂ ಮಳೆ ಹೆಚ್ಚಾದ ಕಾರಣ ಬೆಳೆ ಕಡಿಮೆಯಾಗುವ ಸಂಭವ ಇದೆ. ಹಾಗಾಗಿ ಬೆಲೆ ಕಡಿಮೆಯಾಗಲಾರದು.

  • ಅರೇಬಿಕಾ ಪಾರ್ಚ್ ಮೆಂಟ್:16,100-16,250 (50 kg)
  • ಅರೇಬಿಕಾ ಚೆರಿ:8,800-9,000
  • ರೋಬಸ್ಟಾ ಪಾರ್ಚ್ ಮೆಂಟ್:9,800-9,900
  • ರೋಬಸ್ಟಾ ಚೆರಿ: 4,500-4,600

ಅಡಿಕೆ ಬೆಳೆಗಾರರು ಸ್ವಲ್ಪ ಸ್ವಲ್ಪ ಮಾರಾಟ ಮಾಡುವುದು ಸೂಕ್ತ ಎಂಬ ಪರಿಸ್ಥಿತಿ ಇದೆ. ಒಂದೇ ಬಾರಿ ಮಾರಾಟ ಮಾಡಬೇಡಿ. ಇರುವ ದಾಸ್ತಾನನ್ನು 10 -12 ಪಾಲು ಮಾಡಿ ಪ್ರತೀ ತಿಂಗಳೂ ಇಂತಿಷ್ಟು ಪ್ರಮಾಣದಲ್ಲಿ ಮಾರಾಟ ಮಾಡುವುದು ತಿಂಗಳ ಸಂಬಳದಂತೆ ಆದಾಯವನ್ನು ಕೊಡುತ್ತದೆ. ಕರಿಮೆಣಸು ಬೆಳೆಗಾರರು ದಸ್ತಾನು ಇದ್ದರೆ ಸಲ್ಪ ಮಾರಾಟ ಮಾಡಿ. ರಬ್ಬರ್ ಆಗಾಗ ಮಾರಾಟ ಮಾಡುವುದು ಸೂಕ್ತ. 

Leave a Reply

Your email address will not be published. Required fields are marked *

error: Content is protected !!