ಸರ್ವ ರೋಗ- ಕೀಟ ನಿಯಂತ್ರಣಕ್ಕೆ ಬೂದಿ ಮದ್ದು. ಹೇಗೆ ಗೊತ್ತೇ?

ಸರ್ವ ರೋಗ – ಕೀಟ ನಿಯಂತ್ರಕ ಬೂದಿ

ಸಾವಯವ ತ್ಯಾಜ್ಯಗಳಾದ ಮರಮಟ್ಟು ಹಾಗೂ ಬೆಳೆ ಉಳಿಕೆಗಳನ್ನು ಸುಟ್ಟಾಗ ಬೂದಿ  ದೊರೆಯುತ್ತದೆ. ಇದರಲ್ಲಿ  ವಿಶೇಷ ಶಕ್ತಿ ಇದ್ದು, ಅನಾದಿ ಕಾಲದಿಂದಲೂ ಇದನ್ನು ಒಂದು ಸಾಂಪ್ರದಾಯಿಕ ಸಾವಯವ ಕೀಟ- ರೋಗ ನಿಯಂತ್ರಕ ಮತ್ತು  ಬೆಳೆ  ಪೋಷಕವಾಗಿ ಬಳಸುತ್ತಾ ಬರಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಅನುಸರಿಸಲಾಗುತ್ತಿದ್ದ  ಈ ಕ್ರಮ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಹಿರಿಯರ ನಾಳ್ನುಡಿ ಸತ್ಯವಾದದ್ದು.

ಹಿಂದೆ ಹಳ್ಳಿಗಳಲ್ಲಿ  ಪ್ರತೀ ಮನೆಯಲ್ಲೂ ವರ್ಷಕ್ಕೆ ಒಂದಷ್ಟು ಕಟ್ಟಿಗೆ ಸುಟ್ಟ ಬೂದಿ (Wood Ash)ಸಿಗುತ್ತಿತ್ತು. ಈಗ ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆಗೆ ಎಲ್ ಪಿ ಜಿ ಇಂಧನ ಬಂದಿದೆ. ಬಿಸಿ ನೀರು ಸ್ನಾನಕ್ಕೆ ಸೋಲಾರ್ ವಾಟರ್ ಹೀಟರ್ ಬಂದಿದೆ. ಹಾಗಾಗಿ ಹಳ್ಳಿಗಳಲ್ಲಿ ಬೂದಿ ಕಾಣೆಯಾಗಿದೆ. ಕೆಲವು ಹಂಚಿನ ಅಥವಾ ಇಟ್ಟಿಗೆ ಕಾರ್ಖಾನೆಗಳಲ್ಲಿ , ತಂಬಾಕು ಮುಂತಾದ ಡ್ರೈಯರ್ ಮೂಲಕ ಒಣಗಿಸುವ ಕಡೆ ಮಾತ್ರ ಮರಸುಟ್ಟ ಬೂದಿ ಇರುತ್ತದೆ. ಭತ್ತವನ್ನು ಬೇಯಿಸಿ ಕುಚ್ಚಲಕ್ಕಿ ಮಾಡುವ ಮಿಲ್ ಗಳಲ್ಲಿ ಭತ್ತದ ಹೊಟ್ಟು ಸುಟ್ಟ ಬೂದಿ ಬಿಟ್ಟರೆ ಬೇರೆ ಎಲ್ಲಿಯೂ ಬೂದಿ ಸಿಗುವುದಿಲ್ಲ. ಹಾಗಾಗಿ ಕೃಷಿಯಲ್ಲಿ ಬೂದಿಯ ಬಳಕೆ ತುಂಬಾ ಕಡಿಮೆಯಾಗಿದೆ. ಬೂದಿಯ ಬಳಕೆ ಕಡಿಮೆಯಾದ ಕಾರಣದಿಂದ ಸಣ್ಣ ಪುಟ್ಟ ರೋಗ ಕೀಟ ಗಳಿಗೂ ನಾವು ರಾಸಾಯನಿಕ ಮೂಲವಸ್ತುಗಳನ್ನೇ ಬಳಸಬೇಕಾದ ಅನಿವಾರ್ಯತೆ ಬಂದಿದೆ.

  • ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ಕ್ಷಾರೀಯ ವಸ್ತು.
  • ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ.
  • ನಮ್ಮ ಹಿರಿಯರು ತರಕಾರಿ ಮುಂತಾದ ಕೆಲವು ಬೆಳೆಗಳಿಗೆ ರೋಗ ಕೀಟ ನಿಯಂತ್ರಣಕ್ಕೆ ಬೂದಿಯನ್ನೇ ಬಳಸುತ್ತಿದರು.
  • ಬೂದಿ ಬಳಸಿದ ಸೊಪ್ಪು ತರಕಾರಿ ಹಾಗೆಯೇ ಇನ್ನಿತರ ತರಕಾರಿ ರುಚಿ. ತೆಂಗಿಗೆ ಬೂದಿ ಹಾಕಿದರೆ ಕಾಯಿ ತಿರುಳು ದಪ್ಪವಾಗುತ್ತದೆ.ಅಡಿಕೆಗೆ ಬೂದಿ ಹಾಕಿದರೆ ಗುಣಮಟ್ಟದ ಅಡಿಕೆ ಸಿಗುತ್ತದೆ. ಮರಕ್ಕೆ ಎಲ್ಲಾ ರೀತಿಯ ಶಕ್ತಿ ಇರುತ್ತದೆ.
  • ಯಾಕೆಂದರೆ  ಅದರಲ್ಲಿ ಪೊಟ್ಯಾಶಿಯಂ ಮತ್ತು ಇನ್ನಿತರ ಸತ್ವ ಇರುತ್ತದೆ.
ಕಾರ್ಖಾನೆ ಬೂದಿ
ಕಾರ್ಖಾನೆ ಬೂದಿ

ಕೀಟ, ರೋಗ ನಿಯಂತ್ರಕ ಹೇಗೆ?

  • ಬಹಳ ವರ್ಷಗಳ ಹಿಂದೆ ಒಮ್ಮೆ ತರಕಾರಿ ಬೆಳೆಯುವ ಬಜಪೆ ಸುತ್ತಮುತ್ತ ಹೋಗಿದ್ದೆ.
  • ಅಲ್ಲಿ  ಎಲ್ಲಾ ತರಕಾರಿ ಬೆಳೆಯುವವರೂ ಬೂದಿಯನ್ನು ಬಿಟ್ಟು ಕೃಷಿ ಮಾಡುವುದೇ ಇಲ್ಲವಂತೆ.
  • ಇತ್ತೀಚೆಗೆ ಒಮ್ಮೆ  ಒಂದು ಸುತ್ತು ಅದೇ ಪ್ರದೇಶದಲ್ಲಿ ಓಡಾಡಿದಾಗ ಬಹಳಷ್ಟು ಜನ ತರಕಾರಿ ಕೃಷಿ ಮಾಡುವುದನ್ನು ಬಿಟ್ಟಿದ್ದಾರೆ.
  • ಕಾರಣ ಮತ್ತೇನಲ್ಲ. ಹಿಂದಿನಂತೆ ಈಗ ತರಕಾರಿ ಬೆಳೆಯಲು ಸುಲಭ ಇಲ್ಲವಂತೆ.
  • ಹಿಂದೆ ಬೂದಿ ಎರಚಿದರೆ ಹರಿವೆ,ಬಸಳೆ, ಅಲಸಂಡೆ, ಮುಂತಾದ ಸೊಪ್ಪು ತರಕಾರಿಗಳು ಚೆನ್ನಾಗಿ ಬರುತ್ತಿತ್ತಂತೆ.
  • ಈಗ ಬೂದಿ ಇಲ್ಲ. ಬದಲಿಗೆ ಕೀಟನಾಶಕ ಆಗಬೇಕು ಎನ್ನುತ್ತಾರೆ.
  • ಮಂಗಳೂರು ಮಲ್ಲಿಗೆ ಬೆಳೆಯುವ ಉಡುಪಿ ಜಿಲ್ಲೆ ಶಂಕರಪುರದ (Udupi jasmine) ಕೆಲವು ಮನೆಗಳಲ್ಲಿ ಈಗಲೂ ಒಂದು ಸಣ್ಣ  ಸಿಮೆಂಟ್ ಟ್ಯಾಂಕ್ ಇದೆ.
  • ಅದಕ್ಕೆ ಹಿಂದೆ ಅವರು ಮನೆಯಲ್ಲಿ ಅಡುಗೆ ಮಾಡಿದಾಗ  ಸಿಗುವ ಬೂದಿ ಮತ್ತು  ಹಸುವಿನ ಸಗಣಿ ಮತ್ತು ಮೂತ್ರ ಹಾಕಿ ಒಂದೆರಡು ದಿನ ಕೊಳೆಯಿಸಿ ಮಲ್ಲಿಗೆ ಗಿಡಕ್ಕೆ ಹಾಕುತ್ತಿದ್ದರಂತೆ.
  • ಹಿಂದೆ ಮನೆಯಲ್ಲಿ ಈಗಿನಂತೆ ಟಾಯ್ಲೆಟ್ ಗಳು ಇರಲಿಲ್ಲ.
  • ಆಗ ಮನೆಯವರು ರಾತ್ರೆ ಹೊತ್ತು ಬಕೆಟ್ ಗೆ ಮೂತ್ರ ವಿಸರ್ಜನೆ ಮಾಡಿ ಅದನ್ನು ಸಹ ಈ ತೊಟ್ಟಿಗೆ ಹಾಕುವುದು ಇತ್ತಂತೆ.
  • ಆ ಸಮಯದಲ್ಲಿ ಮಂಗಳೂರು ಮಲ್ಲಿಗೆಯಲ್ಲಿ ರೈತರು ಪಡೆಯುತ್ತಿದ್ದ ಇಳುವರಿ ಈಗಿನವರು ಯಾರೂ ಪಡೆಯುವುದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪ್ರಾಯದವರು.
  • ಇಂದು ಮಂಗಳೂರು ಮಲ್ಲಿಗೆ ಬೆಳೆಗೆ ಎಲ್ಲಿಲ್ಲದ ಕೀಟ ರೋಗ ಬಾಧೆಗಳು.
  • ಎಲ್ಲೂ ಸಿಗದ ಕೀಟ – ರೋಗ ನಾಶಕಗಳು ಇಲ್ಲಿ ಸಿಗುತ್ತವೆ ಬಳಸಲ್ಪಡುತ್ತವೆ.
  • ಹಿಂದೆ ಇದು ಯಾವುದೂ ಇಲ್ಲದೆ ಮಲ್ಲಿಗೆ ಬೆಳೆಯಲಾಗುತ್ತಿತ್ತು.
ಅಲಸಂದೆ ಬೆಳೆಯ ಕೀಟ ನಿಯಂತ್ರಕ ಬೂದಿ
ಅಲಸಂದೆ ಬೆಳೆಯ ಕೀಟ ನಿಯಂತ್ರಕ ಬೂದಿ

ಮಲ್ಲಿಗೆ ಮಾತ್ರವಲ್ಲ. ನಮ್ಮ ಹಿರಿಯರು ರಾಸಾಯನಿಕ  ಕೀಟ- ರೋಗ ನಾಶಕಗಳಿಲ್ಲದೆ ಬೆಳೆ ಬೆಳೆಯುತ್ತಿದ್ದುದೇ ಬೂದಿಯ ಬಳಕೆಯಿಂದ. ಇದು ಈಗಲೂ ಹಿರಿಯ ತಲೆಮಾರಿನವರಿಗೆ ಗೊತ್ತಿದೆ. ಅವರು ಇದನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ಉಡುಪಿಯ ಮಟ್ಟು ಗುಳ್ಳ (Mattu gulla or Udupi Gulla) ಬೆಳೆಯುವ ಒಬ್ಬ ರೈತ ಹೇಳುತ್ತಾರೆ, ಈಗ ನಾವು ಬಳಸುವ ರಾಸಾಯನಿಕಗಳೇ ಇಲ್ಲದಾಗ ಬರೇ ಬೂದಿ ಮತ್ತು ಸಗಣಿ ಗೊಬ್ಬರದಲ್ಲಿ ನಾವು ಹೆಚ್ಚು ಇಳುವರಿ ಪಡೆಯುತ್ತಿದ್ದೆವು. ಆಗಿನ ರುಚಿ ಈಗ ಇಲ್ಲ ಎಂದು.  

ಕೀಟಗಳು ತುಂಬಾ ಬುದ್ದಿವಂತ ಜೀವಿಗಳು. ಅವು ಹೆಚ್ಚಾಗಿ ಎಲೆಯ ಅಡಿಯಲ್ಲಿ , ಬುಡದಲ್ಲಿ, ನೆಲದಲ್ಲಿ ವಾಸವಾಗಿರುತ್ತವೆ. ಇವು ಯಾವಾಗಲೂ ಎಲೆಯ ಮೇಲ್ಪ್ಭಾಗವನ್ನು  ತಿನ್ನುವುದಿಲ್ಲ. ಅಡಿ ಭಾಗದಲ್ಲಿ ವಾಸಿಸುತ್ತಾ ಅಲ್ಲಿರುವ ಹರಿತ್ತನ್ನು ತಿನ್ನುತ್ತವೆ. ರೋಗಗಳೂ ಪ್ರವೇಶವಾಗುವುದು ಮಣ್ಣಿನಿಂದ ಬುಡದ ಕಾಂಡಕ್ಕೆ ಮತ್ತು ಎಲೆ ಅಡಿ ಭಾಗಕ್ಕೆ.

  • ಎಲೆ ಸಹಜವಾಗಿದ್ದರೆ ಮಾತ್ರ ಕೀಟಗಳು ಅಲ್ಲಿಗೆ ಪ್ರವೇಶ ಮಾಡುತ್ತವೆ.
  • ಯಾವುದಾದರೂ ಬಾಹ್ಯ ವಸ್ತುಗಳು ಕಂಡು ಬಂದರೆ ಅವು ದೂರವಾಗುತ್ತವೆ .
  • ಉದಾಹರಣೆಗೆ ರಸ್ತೆ ಬದಿಯಲ್ಲಿರು ಮಾವಿನ ಮರದಲ್ಲಿ ಕಾಯಿ ಕಚ್ಚುವಿಕೆಗೆ ಯಾವ  ಕೀಟ ಸಮಸ್ಯೆಯೂ ಉಂಟಾಗುವುದಿಲ್ಲ.
  • ಎಲೆಗಳ ಮೇಲೆ ಧೂಳು, ಹೊಗೆಯ ಕರಿ ಲೇಪನವಾಗುತ್ತದೆ.
  • ಅದೇ ರೀತಿಯಲ್ಲಿ ಹೂ ಮೊಗ್ಗುಗಳ ಮೇಲೆಯೂ ಅದು ಅಂಟಿಕೊಳ್ಳುತ್ತದೆ.
  • ಆ ಕಾರಣದಿಂದ ಅಲ್ಲಿಗೆ ಚಿಗುರು , ಹೂವು ಹಾಳು ಮಾಡುವ ಬರುವ ಕೀಟಗಳು ಸುಳಿಯುವುದಿಲ್ಲ. ಗರಿಷ್ಟ ಇಳುವರಿ ಬರುತ್ತದೆ.
  • ಈ ಮರಗಳಿಗೆ ಯಾರೂ ಕೀಟ ನಾಶಕ ಸಿಂಪಡಿಸುವುದಿಲ್ಲ.
  • ಆದರೂ ಸಿಂಪಡಿಸಿದ ಮರಗಳಿಗಿಂತ ಉತ್ತಮ ಇಳುವರಿ ಇರುತ್ತದೆ.
  • ಎಲೆಗಳ ಮೇಲೆ ಏನಾದರೂ ಬಾಹ್ಯ ವಸ್ತುಗಳ ಲೇಪನ ಇದ್ದರೆ ಅದು ಅಸಹಜವಾಗಿ ಕಂಡು ಅಲ್ಲಿಗೆ ಕೀಟಗಳು ಪ್ರವೇಶಿಸಲು ಹಿಂಜರಿಯುತ್ತವೆ.
  • ಮಣ್ಣಿನ ಆಮ್ಲೀಯತೆ ಎಲ್ಲಾ ರೋಗ ಕಾರಕಗಳ ಪ್ರವೇಶಕ್ಕೆ ಆಸ್ಪದಮಾಡಿಕೊಡುತ್ತವೆ.
  • ಬೂದಿಯಂತಹ ವಸ್ತು ಕ್ಷಾರೀಯವಾಗಿದ್ದು, ರೋಗಕ್ಕೆ ಕಾರಣವಾಗ ಜೀವಾಣುಗಳನ್ನು ಬೆಳೆಯಲು ಅವಕಾಶ ಕೊಡುವುದಿಲ್ಲ.
ಬದನೆಗೆ ಹಿಂದೆ ಬೂದಿಯೇ ಮದ್ದು
ಬದನೆಗೆ ಹಿಂದೆ ಬೂದಿಯೇ ಮದ್ದು

ಬೂದಿ ಬಳಕೆಯ ಹಿನ್ನೆಲೆ:

  • ಸಾಮಾನ್ಯವಾಗಿ ನಮ್ಮ ಹಿರಿಯರು ಅಲಸಂಡೆ ಬೆಳೆಯುವಾಗ ಆ ದಿನ ಬಿಸಿನೀರು ಕಾಯಿಸಿದಾಗ ದೊರೆತ ಬೂದಿಯನ್ನು ಬಳ್ಳಿಯ ಮೇಲೆಲ್ಲಾ ಎರಚುತ್ತಿದ್ದರು.
  • ಸೌತೆ ಬೆಳೆ ಮಾಡುವಾಗಲೂ ಹಾಗೆಯೇ ಮಾಡುತ್ತಿದ್ದರು. ಸೌತೆ ಬಳ್ಳಿಯ ಮೇಲೆ ಬೂದಿ ಎರಚಿದರೆ ಹುಳ ಬರಲಾರದು.
  • ಹರಿವೆಗೆ ಬೂದಿ ಎರಚದೆ  ಇದ್ದರೆ  ತಾಜಾ ಎಲೆಯೇ ಸಿಗುತ್ತಿರಲಿಲ್ಲ. ಹರಿವೆಗೆ ರುಚಿಯೂ ಇರುವುದಿಲ್ಲ.
  • ಬೆಳೆಗಳಿಗೆ ಬಳಸಲಿಕ್ಕೆ ಬೂದಿ ಬೇಕು ಎಂದು ಸ್ವಲ್ಪವೂ ಬೂದಿಯನ್ನು ಹಾಳು ಮಾಡದೆ ಉಳಿಸಿಕೊಳ್ಳುತ್ತಿದ್ದರು.
  • ಬಸಳೆ ಎಂಬ ತರಕಾರಿಗೆ ಬೂದಿ ಇಲ್ಲದೆ  ಬೆಳೆಯಲು ಆಗುತ್ತಲೇ ಇರಲಿಲ್ಲ.  ಬೂದಿ ಬಳಸಿದ ಬಸಳೆಯ ರುಚಿಯೇ  ಭಿನ್ನವಾಗಿರುತ್ತದೆ.

ಬೂದಿ ಎರಚಿದಾಗ  ಕೀಟ  ನಿಯಂತ್ರಕವಾಗಿ ಕೆಲಸ ಮಾಡಿದರೆ ಅದು ತೊಳೆದು ಮಣ್ಣಿಗೆ ಸೇರಿದ ಮೇಲೆ ಪೋಷಕವಾಗಿ ಮತ್ತು  ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.ಇದು ಕ್ಷಾರೀಯ ಆದ ಕಾರಣ ರೋಗಕಾರಕಗಳನ್ನೂ ಹತ್ತಿರ ಬರಲು ಬಿಡುವುದಿಲ್ಲ. (repellent) ಹೊರತು ಇದು ರೋಗ ನಾಶಕ ಅಲ್ಲ.

ಭತ್ತದ ಅರೆ ಸುಟ್ಟ ಬೂದಿ
ಭತ್ತದ ಅರೆ ಸುಟ್ಟ ಬೂದಿ

ಹೇಗೆ ಬಳಸಬೇಕು:

  • ತಾಜಾ ಬಿಸಿ ಬೂದಿಯ ಬಳಕೆ ಉತ್ತಮವಲ್ಲ. ಅದನ್ನು ಸ್ವಲ್ಪ ಹಳತು ಮಾಡಿ ಬಳಕೆ ಮಾಡಬೇಕು.
  • ಬೂದಿಯನ್ನು ಸಸ್ಯಗಳ ಮೇಲೆ ಎಲೆಗಳ ಮೇಲೆ ಬೀಳುವಂತೆ  ತೆಳುವಾಗಿ ಎರಚಬಹುದು.
  • ಸ್ವಲ್ಪ ನೀರು ಸೇರಿಸಿ ಅದನ್ನು ಬುಡಕ್ಕೆ ಸ್ವಲ್ಪ ಸ್ವಲ್ಪ ಎರೆಯಬಹುದು.
  • ಹೆಚ್ಚು ನೀರು ಸೇರಿಸಿ ಅದನ್ನು ದ್ರಾವಣ ಮಾಡಿ  ಸೋಸಿ ದೊಡ್ದ ನಾಸಲ್ ನ ಸಿಂಪರಣಾ ಸಾಧನದಲ್ಲಿ ಸಿಂಪರಣೆಯನ್ನೂ ಮಾಡಬಹುದು.
  • ಮರ ಸುಟ್ಟ ಬೂದಿಯನ್ನು ಅಧಿಕ ಪ್ರಮಾಣದಲ್ಲಿ ಬಳಸಬಾರದು. ಅಡಿಕೆಗೆ 3-4  ಸೇರು, ತೆಂಗಿಗೆ 8-10 ಸೇರು ಹಾಗು ತರಕಾರಿಗಳಿಗೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಸಗಣಿ ಗೊಬ್ಬರವನ್ನು ಪೌಷ್ಟಿಕ ಮಾಡಲು ಇದನ್ನು ಮಿಶ್ರಣ ಮಾಡಿದರೆ ಬಹಳ ಒಳ್ಳೆಯದು.
  • ಮಾನವ ಮೂತ್ರ ಸೇರಿಸಿದರೆ ಬಹಳಷ್ಟು ಕೊಳೆ ರೋಗಗಳು ಇರದಲ್ಲಿ ನಿಯಂತ್ರಣವಾಗುತ್ತದೆ.

ಕಬ್ಬಿನ ಗದ್ದೆಯಲ್ಲಿ ರವದಿ ಸುಟ್ಟ ಹೊಲದಲ್ಲಿ ಇಳುವರಿ ಜಾಸ್ತಿ. ರೋಗ ಕೀಟ ಕಡಿಮೆ. ಇದಕ್ಕೆ ಕಾರಣ ಅಲ್ಲಿ ಲಭ್ಯವಾಗುವ ಬೂದಿ. ಬೂದಿಯ  ಇನ್ನೊಂದು ಮಹತ್ವ ಹೇಳುವುದೇ ಆದರೆ ಹಿಂದೆ ನಾಯಿಗೆ ಯಾವ ಚರ್ಮ ರೋಗ ಬಂದರೂ ಅದನ್ನು ಬೂದಿ ರಾಶಿಯಲ್ಲಿ ಮಲಗಿಸಿ ರೋಗ ಗುಣಪಡಿಸಲಾಗುತ್ತಿತ್ತು.

ಭತ್ತದ ಬೂದಿ
ಭತ್ತದ ಬೂದಿ

ಬೂದಿಯಲ್ಲಿ ಪ್ರಕಾರಗಳು:

  • ಮರಸುಟ್ಟ ಬೂದಿ ಒಂದು ಪ್ರಕಾರದ್ದು. ಇದರಲ್ಲಿ ಪೊಟ್ಯಾಶಿಯಂ, ಸುಣ್ಣ, ಗಂಧಕದ ಅಂಶ ಇರುತ್ತದೆ.
  • ಭತ್ತದ ಹೊಟ್ಟು ಕರಟುವಂತೆ ಸುಟ್ಟಾಗ ಸಿಗುವ ಒಂದು ಬೂದಿ, ಕಪ್ಪಾಗಿರುತ್ತದೆ. ಇದರಲ್ಲಿ ಸಿಲಿಕಾ ಅಂಶ ಇರುತ್ತದೆ.ಕಾರ್ಬನ್ ಅಂಶವೂ ಇರುತ್ತದೆ. ಇದನ್ನು ಬಳಸಿದಾಗ ಬೇರು ಚೆನ್ನಾಗಿ ಬೆಳೆಯುತ್ತದೆ. ಮಣ್ಣು ಸಡಿಲವಾಗುತ್ತದೆ. ಜೀವಾಣುಗಳು ಬದುಕಲು ಬೇಕಾಗುವ ಕಾರ್ಬನ್ ಅಂಶ ಉತ್ತಮವಾಗಿರುವ ಕಾರಣ ಅವು ಚೆನ್ನಾಗಿ ಬದುಕುತ್ತದೆ. ತೇವಾಂಶ ಸಂರಕ್ಷಣೆಗೆ ಉತ್ತಮ.
  • ಭತ್ತದ ಹೊಟ್ಟನ್ನು ಸಂಪೂರ್ಣವಾಗಿ ಸುಟ್ಟು ಪಡೆದ ಬೂದಿ ಮರ ಸುಟ್ಟ ಬೂದಿಯ ತರಹವೇ ಇರುತ್ತದೆ. ಇದರಲ್ಲಿ ಅಲ್ಪ ಸ್ವಲ್ಪ NPK ಅಂಶ ಇರುತ್ತದೆ.  ಅಧಿಕ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಬೆಳೆಗಳಿಗೆ ಹಿತ ಇತವಾಗಿ ಬಳಸಿದರೆ ಯಾವ ತೊಂದರೆಯೂ ಇಲ್ಲ.  
  • ಬೂದಿಯಲ್ಲಿ ಕಾರ್ಬನ್ ಅಂಶ 5-30 % ಕ್ಯಾಲ್ಸಿಯಂ 7-33%, ಪೊಟ್ಯಾಶಿಯಂ 3-12%, ಮೆಗ್ನೀಶಿಯಂ, ಮ್ಯಾಂಗನೀಸ್, ಫೋಸ್ಫ್ರರಸ್ , ಸೋಡಿಯಂ ಮುಂತಾದ ಅಗತ್ಯ ಪೋಷಕಗಳು ಇರುತ್ತವೆ.
  • ಸುಡುಮಣ್ಣು ಎಂಬ ತಯಾರಿಕೆಯಲ್ಲೂ ಬೂದಿಯ ಅಂಶ ಇರುತ್ತದೆ.
  • ಅದರಲ್ಲಿ ಅರೆ ಕರಕಲಾದ ಸಾವಯವ ತ್ಯಾಜ್ಯ್ಗಳು ಇರುವ ಕಾರಣ ಕಾರ್ಬನ್ ಅಂಶ ಚೆನ್ನಾಗಿದ್ದು, ಬಳಕೆ ಮಾಡಿದ ಬೆಳೆಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಬೂದಿಯನ್ನು ಹಾಳು ಮಾಡಬೇಡಿ. ಬೆಳೆ ಸಂರಕ್ಷಣೆಗಾದರೂ ಒಲೆ ಉರಿಸಿ ಬೂದಿ ಮಾಡಿಕೊಳ್ಳಿ.  ಅಲ್ಪ ಕಾಲಿಕ ಬೆಳೆಗಳಿಗೆ ಕೀಟ ನಾಶಕ ಬಳಸುವ ಬದಲು ಇದನ್ನು ಬಳಸಿ ಅರೋಗ್ಯ ಉಳಿಸಿ.ಇದನ್ನು ಧೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳಿಗೆ ಬಳಸಿದರೆ ಇಳುವರಿ ನಿಶ್ಚಿತವಾಗಿ ಹೆಚ್ಚಳವಾಗುತ್ತದೆ.  ಬೂದಿಯು ಕೆಲವು ಕಾರ್ಖಾನೆಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಅದನ್ನು ತಂದು ಬೆಳೆಗಳಿಗೆ ಬಳಸಿರಿ.
end of the article:————————————————–
search words: Wood ash # wood ash nutrients # natural source of potash# potash in wood ash # pest repallent wood ash# organic manure
;

Leave a Reply

Your email address will not be published. Required fields are marked *

error: Content is protected !!