ಕಲ್ಲಂಗಡಿ ಬೆಳೆಗಾರರಾದ ಹಿರಿಯಡ್ಕದ ಸುರೇಶ್ ರವರು ಹೇಳುತ್ತಾರೆ ಈ ವರ್ಷ ಯಾವ ಗ್ರಹಚಾರವೋ ತಿಳಿಯದು. 14 ಎಕ್ರೆಯಲ್ಲಿ ಮಾಡಿದ ಕಲ್ಲಂಗಡಿಯನ್ನು ಯಾರಿಗೆ ಮಾರುವುದೋ , ಯಾರು ಕೊಳ್ಳುವವರೋ ಗೊತ್ತಾಗುತ್ತಿಲ್ಲ. ಈ ನಷ್ಟವನ್ನು ಹೇಗೆ ಹೊಂದಿಸಿಕೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ.
- ಉಡುಪಿಯಿಂದ ಹೊನ್ನಾವರ ತನಕ ವ್ಯಾಪಿಸಿರುವ ಸಾವಿರ ಎಕ್ರೆಗೂ ಮಿಕ್ಕಿದ ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ ಹೀಗೆಯೇ.
- ಅದೇ ರೀತಿ ರಾಜ್ಯದುದ್ದಕ್ಕೂ ಕಲ್ಲಂಗಡಿ ಬೆಳೆದವರ ಪಾಡು ಹೇಳ ತೀರದು.
ಈ ವರ್ಷ ಯುಗಾದಿಯ ತರುವಾಯ ಮೇ ತನಕ ಕಲ್ಲಂಗಡಿಗೆ ಭಾರೀ ಬೇಡಿಕೆ. ಆದರೆ ವಿಧಿ ಈ ವರ್ಷ ರೈತರ ಪರವಾಗಿಲ್ಲ. ಕೊರೋನಾ ಎಂದ ಶನಿ ವಕ್ಕರಿಸಿ ಬೆಳೆದವರ ಪಾಡನ್ನು ಹೈರಾಣಾಗಿಸಿತು.
ರೈತರ ಗೋಳು:
- ಹಿರಿಯಡ್ಕದಲ್ಲಿ ಸುರೇಶ್ ಇವರು ಕಳೆದ 10 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಾರೆ.
- ಅವರ ಅನುಭವದಲ್ಲಿ ಈ ವರ್ಷದ ತರಹ ಮಾರುಕಟ್ಟೆ ಕುಸಿದುದು ಇದೇ ಮೊದಲಂತೆ.
- ಕೊಳ್ಳುವವರೂ ಇಲ್ಲ. ಕೊಡರೂ ಬೆಲೆ ಇಲ್ಲ. ಕೆಲವೊಮ್ಮೆ ನಂತರ ಹಣ ಕೊಡುವ ಶರ್ತದ ಮೇಲೆ ವ್ಯಾಪಾರ.
ಇಷ್ಟಲ್ಲದೆ ನಮಗೆ ಮಿತವ್ಯಯದಲ್ಲಿ ಬೆಳೆ ಬೆಳೆಸುವ ಬಗ್ಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಗೊಬ್ಬರ, ಕೀಟನಾಶಕ ಮಾರಾಟಗಾರರ ಮೋಡಿಯ ಮಾತುಗಳನ್ನು ನಂಬಿಯೇ ಬೆಳೆ ಬೆಳೆಸುವುದಾಗಿದೆ ಎನ್ನುತ್ತಾರೆ.
- ಬೈಂದೂರು ಸಮೀಪದ ಕಿರಿಮಂಜೇಶ್ವರದಲ್ಲಿ ಪುಂಡಲೀಕ ಮಧ್ಯಸ್ಥರು ಕಲ್ಲಂಗಡಿ ಬೆಳೆಯ ಗುರುಗಳಿದ್ದಂತೆ.
- ಇವರು ಯಾವಾಗಲೂ ತಮ್ಮ ಬೆಳೆಯನ್ನು ಉತ್ತಮ ಬೆಲೆಗೇ ಮಾರಾಟ ಮಾಡುತ್ತಾರೆ.
- ಈ ವರ್ಷ ಅವರೂ ಸೋತದ್ದೇ. ಅದೇ ರೀತಿಯಲ್ಲಿ ಬೈಂದೂರಿನ ಇನ್ನೂ ಹಲವಾರು ರೈತರ ಕಥೆ ಹೇಳ ತೀರದು.
- ಕಲ್ಲಂಗಡಿ ಬೇಸಿಗೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುವ ಹಣ್ಣು.
- ಚಳಿಗಾಲದ ಹಣ್ಣಿಗೆ ಯಾವಾಗಲೂ ಸ್ವಲ್ಪ ಬೆಲೆ ಕಡಿಮೆ.ಬೇಸಿಗೆಯದ್ದಕ್ಕೆ ಸಮಾರಂಭಗಳು ಹೆಚ್ಚು ಇರುವ ಕಾರಣ ಬೆಲೆ ಇರುತದೆ .
- 1 ಎಕ್ರೆ ವಿಸ್ತೀರ್ಣದಲ್ಲಿ ಬೆಳೆದರೆ ಏನಿಲ್ಲವೆಂದರೂ 20-30 ಟನ್ ಇಳುವರಿ ಪಡೆದು ಭತ್ತಕ್ಕಿಂತ ಹೆಚ್ಚು ವರಮಾನ ಗಳಿಸುತ್ತಾರೆ.
- ಕರಾವಳಿಯ ಉದ್ದಕೂ ಸುಮಾರು 1000 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಇದೆ.
- ಎಕ್ರೆಗೆ ಸರಾಸರಿ 20 ಟನ್ ಇಳುವರಿ ಇದೆ. ಇದೆಲ್ಲವೂ ಈ ವರ್ಷ ಗಿರಾಕಿ ಇಲ್ಲದೆ ಹಾಳಾಗುತ್ತಿದೆ.
- ಸಾಲ ಸೋಲ ಮಾಡಿ ಬೆಳೆ ಮಾಡಿದ ರೈತರ ಪಾಡು ಹೇಳ ತೀರದು.
ಯಾಕೆ ಹೀಗಾಯಿತು:
- ಹಣ್ಣು ಹಂಪಲು ಮಾರಾಟ ವ್ಯವಹಾರಕ್ಕೆ ಈ ವರ್ಷ ಏನೋ ಗ್ರಹಚಾರ ಹಿಡಿದಿದೆ.
- ಇದು ಸಂಪೂರ್ಣವಾಗಿ ಕೋವಿಡ್ 19 ಅಥವಾ ಕೊರೋನಾ ಸೋಂಕಿನ ಕಾರಣದಿಂದ ಅಲ್ಲ.
- ಹಣ್ಣು, ತರಕಾರಿ ಮುಂತಾದವುಗಳ ಬಳಕೆಗೂ ಈ ವೈರಾಣು ಸೋಂಕು ಹರಡುವುದಕ್ಕೂ ಅಂಥಹ ಸಂಬಂಧ ಇಲ್ಲ.
- ಸಸ್ಯಗಳಲ್ಲಿ ಅದರ ಫಲದಲ್ಲಿ ವೈರಾಣು ಸೇರಲ್ಪಡುವುದಿಲ್ಲ.
- ಒಂದು ವೇಳೆ ಈ ಹಣ್ಣು ತರಕಾರಿಗಳನ್ನು ಸೋಂಕು ಇರುವವರು ಮುಟ್ಟಿದ್ದರೆ ಅದೇನಾದರೂ ಖರೀದಿಸಿದವನಿಗೆ ಹರಡಬಹುದು, ಅಷ್ಟೆ.
ಇದೆಲ್ಲವೂ ಕೆಲವು ಅಪಪ್ರಚಾರದಿಂದ ಆದ ರಗಳೆಗಳು. ಕಲ್ಲಂಗಡಿ, ಬಾಳೆ ಹಣ್ಣು ಹಾಗೆಯೇ ಇನ್ನಿತರ ತರಕಾರಿಗಳು ತಣ್ಣಗೆ. ಇದು ವೈರಸ್ ಸೋಂಕಿಗೆ ಹಾಳು ಎಂದು ಕೆಲವು ವಿಕೃತ ಮನಸ್ಸಿನ ಜನ ಅದನ್ನು ಸಾಮಾಜಿಕ ಮಾದ್ಯಮಗಳಲ್ಲಿ ಪ್ರಚಾರ ಮಾಡಿದ್ದೇ ಈ ಬೇಡಿಕೆ ಕುಸಿಯಲು ಕಾರಣ.
- ಹಾಗೆಂದು ಯಾವ ಅಂಗಡಿಯಲ್ಲೂ ಈಗ ಕಲ್ಲಂಗಡಿ 15 ರೂ. ಗಿಂತ ಕಡಿಮೆಗೆ ಲಭ್ಯವಿಲ್ಲ.
ಈ ವರ್ಷದ ಸೀಸನ್ ಹೀಗೆಯೇ:
- ಇಷ್ಟರ ತನಕ ಕಠಾವು ಆದ ಬೆಳೆ ಕಡಿಮೆ.
- ಇನ್ನೂ ಮೇ ತಿಂಗಳ ತನಕವೂ ಬೆಳೆ ಕಠಾವಿಗೆ ಇದೆ.
- ಈಗಾಗಲೇ ರಾಜ್ಯದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.
- ಸಭೆ ಸಮಾರಂಭಗಳು, ಜಾತ್ರೆ ಗಳು ಇಲ್ಲ.
- ಕೇರಳ ಈ ಕಲ್ಲಂಗಡಿಗೆ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು ಅಲ್ಲಿಯೂ ಈ ವರ್ಷ ಸ್ಥಬ್ಧವಾಗಿದೆ.
- ಇದರಿಂದ ಹಣ್ಣು ತರಕಾರಿಗಳ ಬಳಕೆ ಸಹಜವಾಗಿ ಕಡಿಮೆಯಾಗುವ ಸಾಧ್ಯತೆ ಇಲ್ಲದಿಲ್ಲ.
- ಒಂದು ವೇಳೆ ಈ ರೋಗ ನಿಯಂತ್ರಣಕ್ಕೆ ಸೂಕ್ತ ಲಸಿಕೆ ಬಂದು ಇದರ ಲಭ್ಯತೆ ಆದ ತರುವಾಯ ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರವೇ ಈ ಪರಿಸ್ಥಿತಿ ಸರಿಯಾಗಬಹುದು.
ಈ ವರ್ಷದ ಬೆಳೆ ಬಹುತೇಕ ಹಾಳಾಗುವುದಂತೂ ನಿಚ್ಚಳವಾಗಿದೆ. ಕಲ್ಲಂಗಡಿ ಬೆಳೆಗಾರರಿಗೆ ಯಾವುದೇ ಬೆಳೆ ವಿಮೆ ಈ ನಷ್ಟವನ್ನು ಸಹಿಸುವ ಶಕ್ತಿ ಕೊಡುವುದಿಲ್ಲ. ರೈತರ ತಲೆಗೆ ಅವರದ್ಡೇ ಕೈ.