ಕೃಷಿಕ ಎಂದರೆ ಕಿಸಕ್ಕೆಂದು ನಗೆಯಾಡುವ ಈ ಸಮಾಜ, ಅವರ ಹಣಕಾಸಿನ ಚಲಾವಣೆಯಲ್ಲೇ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ನಯವಾಗಿ ರೈತನಿಗೆ ದೊಡ್ದ ದೊಡ್ದ ಟೋಪಿಯನ್ನೂ ಹಾಕುವವರೂ ಇವರೇ.

ಕೃಷಿಕರ ಹುಟು ಗುಣ:
- ‘ಮೋಸ ಹೋಗುವವರು ಇದ್ದ ಕಾರಣ ಮೋಸ ಮಾಡುವವರು ಇರುತ್ತಾರೆ’ ಇದು ಹೇಳಲಿಕ್ಕೆ ಮಾತ್ರ ಆಗುತ್ತದೆಯೇ ಹೊರತು ಮೋಸ ಹೋಗುವುದಲ್ಲ.
- ಕೃಷಿಕರು ಹುಟ್ಟು ಗುಣದಲ್ಲಿ ಸಜ್ಜನ ಗುಣದವರು.
- ಇವರು ಯಾರಿಗೂ ವಂಚನೆ ಮಾಡುವುದಿಲ್ಲ.
- ಬೇರೆಯವರು ಮೋಸ ಮಾಡುತ್ತಾರೆ ಎಂದು ಕಲ್ಪನೆಯನ್ನೂ ಮಾಡುವುದಿಲ್ಲ.
- ಕೃಷಿಕರಲ್ಲಿ ಲಾಭ ಬಡುಕತನ ಇಲ್ಲ. ಸಾಮಾಜಿಕ ಕಳಕಳಿ ಇದೆ.
- ಎಲ್ಲದಕ್ಕಿಂತ ಕೃಷಿಕರಾದ ನಾವು ಇನ್ನೂ ಸುಮಾರು 20 ವರ್ಷಗಳಷ್ಟು ಹಿಂದೆ ಇದ್ದೇವೆ..
- ನಾವು ನಂಬಿಕೆ- ವಿಶ್ವಾಸ ಎಂಬ ಕಾಲದಲ್ಲೇ ಇದ್ದೇವೆ. ಕಾಲ ಸ್ಥಿತಿ ಬದಲಾದಂತೆ ನಾವು ವೇಶ ಬದಲಿಸಲೇ ಇಲ್ಲ.

ಇದುವೇ ನಮ್ಮ ಒಂದು ವೀಕ್ ನೆಸ್. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಕೆಲವು ವ್ಯಾವಹಾರಿಕ ಕೃಷಿಕರೂ ಸೇರಿದಂತೆ ಸಮಾಜದ ಇತರೆಲ್ಲಾ ವರ್ಗ ಕೃಷಿಕನನ್ನು ಮೋಸ ಮಾಡುವವರೇ .
ರೈತರ ಜೊತೆ ಚೌಕಾಶಿ:
- ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಒಂದಷ್ಟು ತರಕಾರಿಯೋ, ಹಣ್ಣು ಹಂಪಲೋ ಇವುಗಳನ್ನು ಹಿಡಿದುಕೊಂಡು ಪಟ್ಟಣದ ಗ್ರಾಹಕರಿರುವ ಸ್ಥಳದಲ್ಲಿ ಮಾರಾಟ ಮಾಡಲು ಹೋಗಿ,
- ಲಕ್ಷಾಂತರ ರೂಪಾಯಿ ಬೆಲೆಯ ಕಾರಿನಲ್ಲಿ ಬರುವ ಖರೀದಿ ಮಾಡುವವ ಎಷ್ಟಪ್ಪಾ ರೇಟು ಎನ್ನುತ್ತಾ
- ನೀವು ಹೇಳಿದ್ದಕ್ಕಿಂತ ಅರ್ಧ ಪಟ್ಟು ಕಡಿಮೆ ಬೆಲೆಗೆ ಚರ್ಚೆ ಮಾಡುತ್ತಾನೆ.
ನಿಮ್ಮ ಹೊಲದಲ್ಲಿ ಬೆಳೆದದಲ್ಲವೇ ಯಾಕೆ ಅಷ್ಟು ಬೆಲೆ ಎನ್ನುತ್ತಾನೆ. ಯಾವತ್ತೂ ನಿಮ್ಮ ಯಾವುದೇ ಕೃಷಿ ಉತ್ಪನ್ನ ಖರೀದಿ ಮಾಡುವಾಗ ನಿಮ್ಮನ್ನು ಗೌರವಯುತವಾಗಿ ಕಾಣುವುದೇ ಇಲ್ಲ.
ನೀವು ಖರೀದಿಸುವಾಗ:

- ಕೃಷಿಕರು ಸಮಾಜದಲ್ಲಿ ಎಲ್ಲರಂತೆ ಜೀವಿಸುವವರೇ.
- ನನಗೂ ಇತರರಿಗೂ ವ್ಯತ್ಯಾಸ ಎಂದರೆ ವೃತ್ತಿ ಮಾತ್ರ ಬೇರೆ.
- ಈ ವೃತ್ತಿಯಲ್ಲಿ ಆದಾಯದ ಖಾತ್ರಿ ಇಲ್ಲ.
- ಉಳಿದದ್ದಕ್ಕೆ ಅದು ಇದೆ.
- ಯಾವುದೇ ಒಂದು ವಸ್ತುವನ್ನು ನೀವು ಖರೀದಿ ಮಾಡುವಾಗ ನಮ್ಮ ಸ್ಥಾನ ಸಮಾಜದಲ್ಲಿ ಏನು ಎಂಬುದು ಗೊತ್ತಾಗುತ್ತದೆ.
- ನಾವು ಚರ್ಚೆ ಮಾಡಿದರೆ ನಮ್ಮನ್ನು ಯಾರೂ ಗಣನೆಗೂ ತೆಗೆದುಕೊಳ್ಳುವುದಿಲ್ಲ.
ಕೃಷಿಕರೊಂದಿಗೆ ವ್ಯವಹಾರ ಲಾಭದ್ದು:
- ನನ್ನ ಕೆಲವೊಂದು ಮಿತ್ರರು ಕೃಷಿ ಮಾಡುವುದನ್ನು ಬಿಟ್ಟು ವ್ಯಾಪಾರಕ್ಕಿಳಿದು ಕೆಲವೇ ಸಮಯದಲ್ಲಿ ನನ್ನಲ್ಲಿ ಮಾತನಾಡಿಸುವುದನ್ನೇ ಬಿಟ್ಟದ್ದುಂಟು.
- ನಿಜವಾಗಿಯೂ ಕೃಷಿ ಮಾಡುವುದಕ್ಕಿಂತ ಕೃಷಿಕನಿಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನು ಮಾರಾಟ ಮಾಡುವುದು ಲಾಭದಾಯಕ.
- ಒಂದೊಂದು ಯಂತ್ರ ಸಾಧನಗಳಲ್ಲಿ ಕನಿಷ್ಟ 40-50 % ಲಾಭಾಂಶ ಇದೆ.
- ಕೃಷಿಕರಿಗೆ ಅಗತ್ಯವಾದ ಗೊಬ್ಬರ, ಕೀಟ ನಾಶಕದ ವ್ಯವಹಾರ ಮಾಡಿದರೆ ಎರಡು ಮೂರು ವರ್ಷ ದುಡಿದರೆ ಅವನು ಕೋಟ್ಯಾಧಿಪತಿಯಾಗಬಹುದು.
- ಒಬ್ಬ ಕೃಷಿಕ ತಲೆಮಾರಿನಿಂದ ಕೃಷಿ ಮಾಡುತ್ತಾ ಬಂದರೂ ಸಹ ಕೋಟಿ ಎಣಿಸಲು ಸಾಧ್ಯವಿಲ್ಲ.
ಸರಕಾರೀ ವ್ಯವಸ್ಥೆ:

- ಕೃಷಿಕರಿಗೆ ಬೆಳೆ ಬೆಳೆಸುವ ಮಾಹಿತಿ ಕೊಡುವುದು ಸುಲಭ.
- ಬೆಳೆಸುವುದು ಅವನ ಪ್ರಾರಬ್ಧ ಎಂಬುದು ಕಲಿತವರಿಗೆ ಗೊತ್ತು.
- ನಿಜವಾಗಿ ಹೇಳಬೇಕೆಂದರೆ ಕೃಷಿಕರಿಗೆ ಅಭಿವೃದ್ದಿ ಇಲಾಖೆಯವರು, ಕೃಷಿ ವಿಜ್ಞಾನಿಗಳು ಹೇಳುವ ಬೆಳೆ ತಂತ್ರಜ್ಞಾನ ಅಪ್ಡೇಡ್ ಅಗದ್ದೇ.
- ಇದನ್ನು ಅನುಸರಿಸಿ ಬೆಳೆ ಬೆಳೆದರೆ ರೈತ ಏನಾಗಬಹುದು.
- ಇದು ಅವರಿಗೆ ಚೆನ್ನಾಗಿ ಗೊತ್ತು.
- ಅವರನ್ನು ಆ ಕೆಲಸಕ್ಕೆ ನಿಯೋಜಿಸಿದವರಿಗೂ ಗೊತ್ತು.
- ಮಾಡುವುದಕ್ಕಿಂತ ಹೇಳುವುದು ಸುಲಭ ಎಂದು.
ಕೃಷಿಕರೂ ಕೃಷಿಕರನ್ನು ಶೋಷಿಸುವವರೇ:

- ಕೃಷಿ ಮಾಡುವ ಕೆಲವರಿಗೆ ಅದು ಒಂದು ವ್ಯವಹಾರ.
- ತಾವು ತಮ್ಮ ಸಹ ವೃತ್ತಿಯವರೊಂದಿಗೆ ವ್ಯವಹಾರ ಮಾಡಿ ನಾನು ಸಿರಿವಂತನಾಗಬೇಕು ಎಂಬ ಮನೋಸ್ಥಿತಿಯ ಕೃಷಿಕರೂ ಸಾಕಷ್ಟು ಜನ ಇದ್ದಾರೆ.
- ಪ್ರಗತಿಪರ ಕೃಷಿಕರ ಪಟ್ಟ ಏರಿ, ನಾನು ಇದೇ ಗೊಬ್ಬರ ಹಾಕಿದ್ದು ಎಂದು ಹೇಳಿ ಬೇರೆಯವರಿಗೆ ಸಲಹೆ ಕೊಡುತ್ತಾರೆ.
- ಮುಂದಿನ ವರ್ಷ ಮತ್ತೊಂದು ವ್ಯವಹಾರಕ್ಕೆ ಇಳಿಯುತ್ತಾರೆ.
- ಸಸಿ ಮಾರಾಟ, ಗೊಬ್ಬರ ಮಾರಾಟ, ದಲ್ಲಾಳಿ ಗಿರಿ, ಮುಂತಾದ ವ್ಯವಹಾರದಲ್ಲಿ ನಮ್ಮ ಕೃಷಿಕರೂ ಏನೂ ಕಡಿಮೆಯಿಲ್ಲ.
ಇದಕ್ಕೆ ಪರಿಹಾರ ಇದೆ:
- ಕೃಷಿಕರು ಈ ತನಕ ಮಾಡಿದ ಒಂದು ಮಹಾನ್ ತಪ್ಪು ಎಂದರೆ ತಮ್ಮ ವೃತ್ತಿಯ ಎಲ್ಲಾ ಮಜಲುಗಳ ಪೂರ್ಣ ಪರಿಚಯ ಮಾಡಿಕೊಳ್ಳದಿರುವುದು.
- “ನನಗೆ ಎಲ್ಲಾ ಗೊತ್ತು” ಎಂಬ ಮನೋಭಾವನೆ, ಕೃಷಿಕರನ್ನು ಹಾಳು ಮಾಡಿದೆ.
- ಒಬ್ಬ ಉದ್ದಿಮೆದಾರ ಸಿಕ್ಕ ಸಿಕ್ಕವರ ಸಲಹೆ ಕೇಳುವುದಿಲ್ಲ.
- ನೈಜ ತಜ್ಞರ ಸಲಹೆಯನ್ನು ಒಮ್ಮೆ ಕೇಳಿ ನಂತರ ಅದನ್ನು ತಾನೇ ಅರ್ಥಯಿಸಿ ಅಳವಡಿಸುತ್ತಾನೆ.
- ಆದರೆ ಕೃಷಿಕ ಪ್ರತೀ ಹೆಜ್ಜೆ ಹೆಜ್ಜೆಗೂ ಬೇರೆಯವರನ್ನು ಅವಲಂಭಿಸುತ್ತಾನೆ. ಇದನ್ನು ಎಲ್ಲರೂ ಅವಕಾಶವಾಗಿ ಬಳಸಿಕೊಳ್ಳುತ್ತಾರೆ.
ಕೃಷಿಕರು ಇದರಿಂದ ಹೊರ ಬರಬೇಕು. ತಮ್ಮದೇ ಸಮಾನ ಮನಸ್ಕರ ವೇದಿಕೆ ಮಾಡಿಕೊಳ್ಳಬೇಕು. ಈಗ ಭಾರತ ಸರಕಾರ ರೈತ ಉತ್ಪಾದಕ ಕಂಪೆನಿ ಎಂಬ ಯೋಜನೆಯನ್ನು ರೈತರಿಗಾಗಿ ರೂಪಿಸಿದೆ. ಅದರ ಸದುಪಯೋಗ ರೈತರು ಮಾಡಿಕೊಂಡದ್ಡೇ ಆದರೆ ರೈತರ ಶೋಷಣೆ ಸ್ವಲ ಮಟ್ಟಿಗೆಯಾದರೂ ಕಡಿಮೆಯಾಬಹುದು.