ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ ಎಲ್ಲಾ ತ್ಯಾಜ್ಯಗಳನ್ನು ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ.
- ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ.
- ಗುಂಡಿಯ ಒಳಗಡೆ ನೀರು ಹೆಚ್ಚಾಗಿರುತ್ತದೆ.
- ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ.
ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ. ಸೊಪ್ಪು , ತರಗೆಲೆ, ಇನ್ನಿತರ ವಸ್ತುಗಳು ಯಾವುದೇ ರೂಪಾಂತರ ಆಗದೆ ಉಳಿಯುತ್ತವೆ.
- ಕಾಂಪೋಸ್ಟು ಹೊರ ತೆಗೆಯುವಾಗ ಅದರಲ್ಲಿ ಬಿಸಿ ಇರಕೂಡದು.
- ಹಾಗಿದ್ದರೆ ಮಾತ್ರ ಅದರಲ್ಲಿ ಜೀವಾಣುಗಳು ಇರುತ್ತವೆ.
ಗುಂಡಿ ಪದ್ದತಿಯಲ್ಲಿ ತೆಗೆಯುವ ಸಮಯದಲ್ಲಿ ಹೆಚ್ಚಾಗಿ ಬಿಸಿ ಇರುವುದನ್ನು ಕಾಣಬಹುದು. ಇದು ಬರೇ ಸಾವಯವ ವಸ್ತುಗಳ ರಾಶಿ ಅಷ್ಟೇ.
- ಅಧಿಕ ಮಳೆಯಾಗುವ ಕರಾವಳಿ, ಮಲೆನಾಡಿನಲ್ಲಿ ಇಂಥಹ ಕಾಂಪೋಸ್ಟು ಗುಂಡಿಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ.
- ಆದ ಅದರ ಪೋಷಕಗಳು ನೀರಿನ ಜೊತೆಗೆ ನೆಲಕ್ಕೆ ಇಳಿದು ಹೋಗುವುದು ಜಾಸ್ತಿ. ಇದೆ.
- ಗುಂಡಿಯಲ್ಲಿ ತಯಾರಾದ ಕಾಂಪೋಸ್ಟು ದುರ್ಗಂಧದಿಂದ ಕೂಡಿದ್ದರೆ ಅದು ನೈಜ ಕಾಂಪೋಸ್ಟು ಆಗಿರುವುದಿಲ್ಲ.
ನಿಜವಾದ ಕಾಂಪೋಸ್ಟು ಯಾವುದು.
- ಸಾವಯವ ತ್ಯಾಜ್ಯಗಳು ಕಳಿಯುವುದು ಸೂಕ್ಷ್ಮಾಣು ಜೀವಿಗಳ ನೆರವಿನಿಂದ.
- ಸೂಕ್ಷ್ಮಾಣು ಜೀವಿಗಳು ಅರೋಬಿಕ್ ( ಗಾಳಿಯಾಡುವಲ್ಲಿ) ಬದುಕಿದಷ್ಟು ಗಾಳಿಯಾಡದ ಸ್ಥಿತಿಯಲ್ಲಿ ಬದುಕಲಾರದು.
- ನಾವು ಗುಂಡಿ ಪದ್ದತಿಯಲ್ಲಿ ಕಾಂಪೋಸ್ಟು ಮಾಡುವಾಗ ಅದರಲ್ಲಿ ಸೂಕ್ಷ್ಮಾಣು ಜೀವಿಗಳಿಗೆ ಬದುಕಲು ಸೂಕ್ತ ಹವಾ ಸ್ಥಿತಿ ಇರುವುದಿಲ್ಲ.
ಕಾಂಪೋಸ್ಟು ಮಾಡುವ ಸ್ಥಳಕ್ಕೆ ನೆರಳು ಮಾಡುವುದು ಅತೀ ಅಗತ್ಯ.
- ನೆಲಮಟ್ಟದಲ್ಲಿ ಎತ್ತರಿಸಿದ ರೀತಿಯಲ್ಲಿ ಕಾಂಪೋಸ್ಟು ಮಾಡುವುದು ಎಲ್ಲಾ ರೀತಿಯಲ್ಲೂ ಒಳ್ಳೆಯದು.
- ನೆಲಮಟ್ಟದಿಂದ ಮೇಲೆ ಇದ್ದಾಗ ಕಾಂಪೋಸ್ಟಿಗೆ ಹಾಕಿದ ತ್ಯಾಜ್ಯಗಳು ಬೇಗ ಕಳಿಯುತ್ತವೆ. ಅಲ್ಲಿ ಸೂಕ್ಕ್ಷ್ಮಾಣು ಜೀವಿಗಳಿಗೆ ಪ್ರಾಣವಾಯುವು ಸಮರ್ಪಕವಾಗಿ ಲಭ್ಯವಾಗಿ ಸಂಪಧ್ಭರಿತ ಕಾಂಪೋಸ್ಟು ತಯಾರಾಗುತ್ತದೆ.
- ನೆಲಮಟ್ಟದಲ್ಲಿ ಇಟ್ಟಿಗೆ ಅಥವಾ ಕಲ್ಲು ಚಪ್ಪಡಿಗಳಿಂದ ಸುಮಾರು 1 ಮೀ ಅಗಲದ ಅನುಕೂಲ ಇರುವಷ್ಟು ಉದ್ದದ ರಚನೆಗಳನ್ನು ಮಾಡಿಕೊಳ್ಳಿ.
- ಇಟ್ಟಿಗೆಗಳನ್ನು ಕಟ್ಟುವಾಗ ಅಲ್ಲಲ್ಲಿ ತೂತುಗಳನ್ನು ಇಡಬೇಕು. ಈ ತೂತುಗಳು ಕಾಂಪೋಸ್ಟು ಕ್ರಿಯೆಯನ್ನು ಚುರುಕು ಮಾಡುತ್ತವೆ.
- ಕಲ್ಲು ಚಪ್ಪಡಿಗಳನ್ನು ಇಡುವಾಗ ಅದಕ್ಕೆ ಪ್ಲಾಸ್ಟರಿಂಗ್ ಮಾಡಬಾರದು. ಅಲ್ಲಿನ ಸೆರೆಗಳು ಗಾಳಿಯಾಡಲು ನೆರವಾಗುತ್ತವೆ.
- ಸರಳವಾಗಿ ತಾತ್ಕಾಲಿಕ ಕಾಂಪೋಸ್ಟು ತಯಾರಿಕೆಗೆ ಅಡಿಕೆ ಮರದ ಅಥವಾ ಇನ್ಯಾವುದೇ ಮರದ ತುಂಡುಗಳನ್ನು ಹತ್ತಿರ ಹತ್ತಿರ ಇಟ್ಟು ಅದರ ಒಳಗೆ ತುಂಬಿಯೂ ಕಾಂಪೋಸ್ಟು ಮಾಡಬಹುದು.
- ಈಗ ಜಿಯೇಮೆಂಬ್ರಿನ್ ಶೀಟುಗಳ ಸಿದ್ದ ರೂಪದ ಕಾಂಪೋಸ್ಟು ತೊಟ್ಟಿಗಳು ಲಭ್ಯವಿದ್ದು, ಇದು ನೆಲದಲ್ಲಿ ಇಟ್ಟಾಗ ಕೆಲವು ಜೀವಿ ಇದನ್ನು ತಿಂದು ಹಾಳು ಮಾಡುತ್ತವೆ ಅದ ಕಾರಣ ಇದು ಆರ್ಥಿಕವಲ್ಲ.
- ಕಾಂಪೋಸ್ಟು ಕ್ರಿಯೆಯು ಸುಮಾರು 2 ತಿಂಗಳ ಒಳಗೆ ಮುಗಿಯುವ ಕಾರಣ ಅನುಕೂಲ ಇರುವವರು ಶಾಶ್ವತ ರಚನೆ ಮಾಡಿಕೊಂಡು ಇಲ್ಲದವರು ತಮ್ಮಲೇ ಲಭ್ಯವಿರುವ ವಸ್ತುಗಳಿಂದ ಕಾಂಪೋಸ್ಟು ಮಾಡಬಹುದು.
- ಯಾವುದೇ ರಚನೆಗಳನ್ನು ಮಾಡದೆಯೂ ಕಾಂಪೋಸ್ಟು ತಯಾರಿಸಬಹುದು. ನೆಲದ ಮೇಲೆ ಸಾವಯವ ತ್ಯಾಜ್ಯಗಳನ್ನು ಮತ್ತು ಅದಕ್ಕೆ ಸೇರಿಸುವ ಸಗಣಿ ರಾಡಿಯನ್ನು ಹಾಕಿ ಸುಮಾರು 1 ಅಡಿ ಎತ್ತರದ ತನಕ ಮಾಡಿ ಅದಕ್ಕೆ ಪಾಲಿಥೀನ್ ಶೀಟನ್ನು ಮುಚ್ಚಿ ಮಾಡುವ ಕಾಂಪೋಸ್ಟು ಉತ್ಕೃಷ್ಟವಾಗಿರುತ್ತದೆ.
- ಕಾಂಪೋಸ್ಟು ತಯಾರಿಸುವ ಜಾಗ ನೆರಳಿನ ಜಾಗ ಆಗಿರಬೇಕು. ಬಿಸಿಲಿನಲ್ಲಿ ಮಾಡುವುದು ಉತ್ತಮವಲ್ಲ.
- ದಿನಾ ಕಾಂಪೋಸ್ಟು ರಾಶಿಗೆ ತ್ಯಾಜ್ಯಗಳನ್ನು ಹಾಕುವವರು ಅದಕ್ಕೆ ಸೆಣಬಿನ ಚೀಲ ಇಲ್ಲವೇ ಪಾಲಿಥೀನ್ ಶೀಟನ್ನು ಹೊದಿಸಿದರೆ ಸಾರಜನಕದ ನಷ್ಟ ಉಂಟಾಗುವುದಿಲ್ಲ.
- ಶೀಟು ಹೊದಿಸುವಾಗ ಸಂಪೂರ್ಣ ನಿರ್ವಾತವಾಗದಂತೆ ಹೊದಿಸಿರಿ.
ಕಾಂಪೋಸ್ಟು ಮಾಡುವಾಗ ಅದಕ್ಕೆ ವೇಸ್ಟ್ ಡಿಕಂಪೋಸರ್ ಬಳಕೆ ಮಾಡುವುದು ತ್ವರಿತ ಕಳಿಯಲು ಸಹಾಯಕ. ಕಾಂಪೋಸ್ಟು ಮಾಡುವ ಬ್ಯಾಕ್ಟೀರಿಯಾ ಹಾಕಿದರೆ ಇನ್ನೂ ಉತ್ತಮ.