ಹಾಗಲಕಾಯಿ ಹಾಳಾಗುವುದಕ್ಕೆ ಕಣ್ಣು ದೃಷ್ಟಿ ಕಾರಣ ಎಂದು ಕೆಲವರು ಚಪ್ಪಲಿ, ಕಸಬರಿಕೆ ಕಟ್ಟುತ್ತಾರೆ. ಆದರೂ ಕಾಯಿ ಹಾಳಾಗುವುದು ನಿಲ್ಲುವುದಿಲ್ಲ. ಕೊನೆಗೆ ನಮ್ಮಲ್ಲಿ ಹಾಗಲಕಾಯಿ ಆಗುವುದಿಲ್ಲ ಎಂದು ತೀರ್ಮಾನಕ್ಕೆ ಬರುತ್ತಾರೆ. ಇದು ಯಾವ ಕಣ್ಣು ದೃಷ್ಟಿಯೂ ಅಲ್ಲ. ಕಾರಣ ಒಂದು ಕೀಟ ಅಷ್ಟೇ..
- ಹಾಗಲಕಾಯಿಯ ಕಹಿಗೂ ಕೀಟ ಬರುತ್ತದೆಯೇ ? ಇದು ಎಲ್ಲರ ಪ್ರಶ್ಣೆ.
- ನಿಜವಾಗಿಯೂ ಕಹಿ ಇದ್ದರೂ ಬರುತ್ತದೆ. ಸಿಹಿ ಇದ್ದರೂ ಬರುತ್ತದೆ.
- ಅದು ಹಣ್ಣು ತರಕಾರಿಗಳಿಗೆ ತೊಂದರೆ ಮಾಡುವ ಒಂದು ಕೀಟ.
ಯಾವ ಕೀಟ:
- ಜೇನು ನೊಣದ ತರಹದ ಒಂದು ಕೀಟ ಏನಾದರೂ ನಿಮ್ಮ ತರಕಾರೀ ಹಿತ್ತಲಲ್ಲಿ ಸುತ್ತಾಡುವುದನ್ನು ಕಂಡಿದ್ದೀರಾ?
- ನಿಮ್ಮ ಮನೆಯ ಅಂಗಳದ ತುಳಸೀ ಗಿಡ ಹೂ ಬಿಡುವಾಗ ಒಂದು ಜಾತಿಯ ನೊಣ ಅದರ ಸುವಾಸನೆಗೆ ಸುತ್ತುವುದನ್ನು ಕಂಡಿದ್ದೀರಾ?
- ಇದೇ ಕೀಟ ಬಹುತೇಕ ಹಣ್ಣು ಹಣ್ಣು ಹಂಪಲು ತರಕಾರಿಗಳಿಗೆ ಭಾರೀ ತೊಂದರೆ ಮಾಡುತ್ತದೆ.
- ಇದು ಹಣ್ಣು ತರಕಾರಿಗಳ ಮೇಲಿನ ಮೇಲ್ಮೈಯಲ್ಲಿ ಮೊಟ್ಟೆಯನ್ನು ಇಡುವುದಕ್ಕಾಗಿ ಚುಚ್ಚಿ ಕುಳಿತಿರುತ್ತದೆ.
- ಹಣ್ಣು ತರಕಾರಿಗಳಲ್ಲಿ ಮೊಟ್ಟೆ ಇಡುವು ದೇ ಇದರ ಕೆಲಸ.
- ಅಲ್ಲಿಯೆ ತನ್ನ ಸಂತಾನಾಭಿವೃದ್ದಿಯನ್ನು ಮಾಡುವುದು.
- ಮೊಟ್ಟೆ ಇಟ್ಟು ಅದು ಹಾರಿ ಹೋಗುತ್ತದೆ. ಮೊಟ್ಟೆ ಅದರ ಒಳಗೆ ಬೆಳೆದು ಮರಿಯಾಗುತ್ತದೆ.
ಮರಿಯು ಫಲದ ಒಳಭಾಗದ ತಿರುಳನ್ನು ತಿಂದು ಹಾಳು ಮಾಡುತ್ತದೆ. ಹೊರಗೆ ಕಾಣುವಾಗ ಯಾವುದೇ ಹಾಳಾದ ಚಿನ್ಹೆ ಕಾಣಿಸದೇ ಇದ್ದರೂ ಸಹ ಒಳಗೆ ಹುಳಗಳು ಇರುತ್ತವೆ.
- ಹುಳ ಬೆಳೆದಂತೆ ಕಾಯಿಯಿಂದ ಹೊರ ಬರುತ್ತದೆ. ಆಗ ಆ ಕಾಯಿ ಪೂರ್ತಿಯಾಗಿ ಕೊಳೆತು ಹಾಳಾಗಿರುತ್ತದೆ.
- ಹಾಗಲಕಾಯಿ , ಹೀರೇ ಕಾಯಿ, ಪಡುವಲಕಾಯಿ, ಸೌತೇ ಕಾಯಿ, ಕಲ್ಲಂಗಡಿ, ಕರಬೂಜ,ಮಾವು, ಪೇರಳೆ, ರೋಸ್ ಆಪಲ್ ಗಳು ಎಲ್ಲದಕ್ಕೂ ಇದು ತೊಂದರೆ ಮಾಡುತ್ತದೆ.
- ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ಈ ಕೀಟದ ಹಾವಳಿಯಿಂದ 30-40 % ದಷ್ಟು ಹಣ್ಣು ತರಕಾರಿಗಳು ಹಾಳಾಗುತ್ತವೆ.
ನಿಯಂತ್ರಣ ಹೇಗೆ:
- ಹಣ್ಣು ನೊಣವನ್ನು ನಿಯಂತ್ರಣ ಮಾಡಲು ರಾಸಾಯನಿಕ ಮತ್ತು ಜೈವಿಕ ಎಂಬ ಎರಡು ವಿಧಾನಗಳಿವೆ.
- ರಾಸಾಯನಿಕ ವಿಧಾನಗಳನ್ನು ಅನುಸರಿಸುವಾಗ ಕೊಯಿಲಿನ ಸಮಯ ನೋಡಿಕೊಂಡು ಸಿಂಪಡಿಸಬೇಕು.
- ಯಾವ ಕೀಟ ನಾಶಕ ಬಳಕೆ ಮಾಡುತ್ತೀರೋ ಅದರ ಉಳಿಕೆ ಅವಧಿ ( residual effect) ಮತ್ತು ಕೊಯಿಲಿನ ಸಮಯದ ಲೆಕ್ಕಾಚಾರ ಹಾಕಿಕೊಳ್ಳಬೇಕು.
- ಸಾಧ್ಯವಾದಷ್ಟು ಸ್ಪರ್ಶ ಕೀಟನಾಶಕವನ್ನು ಬಳಕೆ ಮಾಡಬೇಕು.
- ಬೇಗ ಕಟಾವು ಮಾಡುವ ತರಕಾರಿ ಬೆಳೆಗಳಿಗೆ ಕೀಟನಾಶಕ ಬಳಕೆ ಮಾಡುವುದು ಸೂಕ್ತವಲ್ಲ.
- ಕೀಟನಾಶಕಗಳಲ್ಲಿ ಎಕಾಲೆಕ್ಸ್ , ಇಮಿಡಾ ಕ್ಲೋಫ್ರಿಡ್ ಮುಂತಾದವುಗಳು ಹಣ್ಣು ನೊಣದ ನಿಯಂತ್ರಣಕ್ಕೆ ಸಹಕಾರಿ
ಜೈವಿಕ ನಿಯಂತ್ರಣ:
- ಜೈವಿಕ ನಿಯಂತ್ರಣ ಎಂದರೆ ಹಣ್ಣು ನೊಣದ ಸಂತಾನಾಭಿವೃದ್ದಿಯನ್ನು ಆಗದಂತೆ ತಡೆಯುವುದು.
- ಗಂಡು ಹಣ್ಣು ನೊಣಗಳನ್ನು ಬಂಧಿಸುವ ಫೆರಮೋನು ಟ್ರಾಪುಗಳನ್ನು ಅಲ್ಲಲ್ಲಿ ನೇತಾಡಿಸಬೇಕು.
- ಈ ಟ್ರಾಪುಗಳ ವಾಸನೆಯು ಹೆಣ್ಣು ನೊಣದ ವಾಸನೆಯಾಗಿರುವ ಕಾರಣ ಅಲ್ಲಿಗೆ ಗಂಡು ನೊಣಗಳು ಬರುತ್ತವೆ.
- ಅದರ ಸುತ್ತ ಸುತ್ತಿ ಸುತ್ತಿ ತಲೆ ತಿರುಗಿ ಬೀಳುತ್ತವೆ.
- ಹೀಗೆ ಹಣ್ಣು ನೊಣದ ಸಂತಾನಾಭಿವೃದ್ದಿಯನ್ನು ನಿಯಂತ್ರಿಸುವ ವಿಧಾನ ಎಲ್ಲದಕ್ಕಿಂತ ಅಗ್ಗ.
- ಇದರಲ್ಲಿ ಯಾರಿಗೂ ಯಾವ ತೊಂದರೆಯೂ ಇರುವುದಿಲ್ಲ.
ಹಣ್ಣು ನೊಣವನ್ನು ಆಕರ್ಷಿಸುವ ಟ್ರಾಪುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಬಿಲ್ಲೆಗೆ 20 ರೂ. ನಿಂದ 50 ರೂ. ತನಕ ಬೆಲೆ ಇರುತ್ತದೆ.
- ಇದನ್ನು ಪ್ಲಾಸ್ಟಿಕ್ ನೀರಿನ ಬಾಟಲಿಯ ಒಳಗೆ ಸಿಕ್ಕಿಸಿ ನೊಣವನ್ನು ಆಕರ್ಷಿಸಬಹುದು.
- ಇದನ್ನು ಬೆಳೆ ಹೂ ಬಿಡುವ ಹಂತದಲ್ಲೇ ಮಾಡಿದರೆ ಪರಿಣಾಮ ಹೆಚ್ಚು. ತಡವಾದರೆ ಫಲ ಕಡಿಮೆ.
ಇದು ಅಗತ್ಯ ಮಾಡಲೇ ಬೇಕು:
- ಬರೇ ಟ್ರಾಪು ಹಾಕಿದರೆ ಸಾಲದು. ಟ್ರಾಪು ಹಾಕುವುದು ಒಂದು ರೀತಿಯಲ್ಲಿ ನೊಣದ ಇರುವಿಕೆಯನ್ನು ಪತ್ತೆ ಮಾಡುವ ವಿಧಾನ ಅಷ್ಟೇ.
- ಹೊಲದಲ್ಲಿ ಹಾಳಾದ ಯಾವುದೇ ಹಣ್ಣು- ಕಾಯಿಗಳನ್ನು ನೆಲಕ್ಕೆ ಬೀಳದಂತೆ ಜಾಗರೂಕತೆ ವಹಿಸಬೇಕು.
- ಚಿತ್ರದಲ್ಲಿ ತೋರಿಸಿರುವಂತ ಚಿನ್ಹೆ ಉಳ್ಳ ಕಾಯಿಗಳನ್ನು ತಕ್ಷಣ ಕೊಯಿದು ಅದನ್ನು ಬೆಂಕಿಗೆ ಹಾಕಿ ಸುಡಬೇಕು.
- ಇಲ್ಲವಾದರೆ ಒಂದು ಹುಳ ನೆಲಕ್ಕೆ ಬಿದ್ದರೂ ಸಹ ಅದು ಮತ್ತೆ ದುಂಬಿಯಾಗಿ ಮೊಟ್ಟೆ ಇಡುತ್ತದೆ.
- ಒಂದು ಕಾಯಿಯಲ್ಲಿ ನೂರಕ್ಕೂ ಹೆಚ್ಚು ಹುಳಗಳಿರುತ್ತವೆ.
- ಇದನ್ನು ನಾಶ ಮಾಡಿದರೆ ಮಾತ್ರ ಆ ಬೆಳೆ ಮತ್ತು ಮುಂದಿನ ಬೆಳೆಗೂ ಇದರ ತೊಂದರೆ ಕಡಿಮೆಯಾಗುತ್ತದೆ.
ಒಂದೇ ಕಡೆಯಲ್ಲಿ ತರಕಾರಿ ಬೆಳೆಯಬಾರದು. ಬದಲಿಸಿ ಬೆಳೆಯಬೇಕು, ನೆಲವನ್ನು ಒಮ್ಮೆ ಉಳಿಮೆ ಮಾಡಿ 3-5 ದಿನ ಒಣಗುವಂತೆ ಮಾಡಿದರೆ ನೆಲದಲ್ಲಿ ಅವಿತಿರುವ ದುಂಬಿ ( ಪ್ಯೂಪೆ) ಸಾಯುತ್ತದೆ. ಹೀಗೆ ಮಾಡಿದರೆ ಸಾಕಷ್ಟು ತೊಂದರೆ ಕಡಿಮೆಯಾಗುತ್ತದೆ.