ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?

ಈ ವರ್ಷ ಅಡಿಕೆ ಬೆಳೆಗಾರರು ಬಹಳ ಸಮಸ್ಯೆಯನ್ನು  ಅನುಭವಿಸಿದ್ದಾರೆ. ಮೊದಲು ಸಿಂಗಾರ ಒಣಗುವ ಸಮಸ್ಯೆ , ನಂತರ ಮಿಡಿ ಕಾಯಿ ಉದುರುವುದು, ಈಗ ಮತ್ತೆ ಬಲಿಯುತ್ತಿರುವ (ಹಸ) ಕಾಯಿಗಳ ಉದುರುವಿಕೆ. ಬರೇ ಉದುರುವುದು ಮಾತ್ರವಲ್ಲ. ಕಾಯಿಯಲ್ಲಿ  ಸುಟ್ಟಂತಹ ಕಪ್ಪು ಕಲೆಗಳಿವೆ. ಕೊಳೆತ ಇಲ್ಲ. ಇದು ಯಾವ ಸಮಸ್ಯೆ ಎಂಬುದು ನಿಘೂಢವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಿದ್ದಾರೆ.
Dropped tender arecanut

  • ಕಳೆದ 2 ವರ್ಷಗಳಲ್ಲಿ  ಅದೇನೂ ಮಹಾ ಮಳೆಯೋ, ಅಡಿಕೆಗೆ ಭಾರೀ ಕೊಳೆ ರೋಗ ಬಂತು.
  • ಸುಮಾರು 25-30% ಬೆಳೆ ನಷ್ಟವಾಯಿತು. ಈ ವರ್ಷವೂ ಮತ್ತೆ ಮಳೆ ಧಾರಾಕಾರವಾಗಿ ಸುರಿಯಿತು.
  • ಅಡಿಕೆಗೆ ಕೆಲವು ಕಡೆ ಕೊಳೆ ರೋಗ ಬಂದಿದೆ. ಮತ್ತೆ ಕೆಲವು ಕಡೆ ಕೊಳೆ ರೋಗಕ್ಕೆ ಬೇಕಾದಷ್ಟು ಅಡಿಕೆಯೇ ಇಲ್ಲ.
  • ಅಳಿದುಳಿದ ಅಡಿಕೆಗಳೂ ಈಗ ಉದುರಲಾರಂಭಿಸಿದೆ.
  • ಕಾರಣ ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವರ ದೃಷ್ಟಿಕೊನದಲ್ಲಿ ಹೇಳುತ್ತಿದ್ದಾರೆ.

ಕೊಳೆ ರೋಗವೇ?

disease symptom in nuts

  • ಕೆಲವರು ಇದನ್ನು ಕೊಳೆ ರೋಗ ಎನ್ನುತ್ತಾರೆ.ಇನ್ನು ಕೆಲವರು ಅಲ್ಲ ಎನ್ನುತ್ತಾರೆ.
  • ಕೊಳೆ ರೋಗದ ಸಾಮಾನ್ಯ ಲಕ್ಷಣಗಳಾದ  ಕಾಯಿಯ ಮೇಲ್ಪಾಗದಲ್ಲಿ ಅಂಟಿಕೊಂಡಿರಬೇಕಾದ ಶಿಲೀಂದ್ರಗಳು (Maicilia)  ಕಾಣಿಸುವುದಿಲ್ಲ.
  • ಕಾಯಿಯ ಮೇಲ್ಮೈಯಲ್ಲಿ ಸುಟ್ಟಂತಹ ಕಲೆಗಳು 25 ಪೈಸೆಯ ನಾಣ್ಯದ ಗಾತ್ರದಲ್ಲಿ ಕಾಣಿಸುತ್ತಿದೆ.
  • ಈ ಕಾಯಿಗಳು ಕೆಲವು ಸಮಯದ ವರೆಗೆ ಗೊನೆಯಲ್ಲಿ ಇರುತ್ತವೆ.
  • ಕೊನೆಗೆ ಉದುರುತ್ತದೆ. ಉದುರಿದ ತರುವಾಯ ಒಂದೆರಡು ದಿನದಲ್ಲಿ ಅದರ ಮೇಲ್ಮೈಯಲ್ಲಿ ಶಿಲೀಂದ್ರ ಬೆಳವಣಿಗೆ ಆಗುತ್ತದೆ.

ಕೊಳೆ ರೋಗ ಬಂದಾಗ ನಮಗೆ ಕಾಣಿಸುವ ರೋಗ ಚಿನ್ಹೆಗಳು ಇದರಲ್ಲಿ ಇಲ್ಲ, ಶಿಲೀಂದ್ರಗಳು ತೊಟ್ಟಿನ ಮೃದು ಭಾಗದ ಮೂಲಕ ಕಾಯಿಯ ಒಳಭಾಗಕ್ಕೆ  ಹೊಕ್ಕು ಅಲ್ಲಿ ತನ್ನ ಬೆಳವಣಿಗೆಯನ್ನು  ಪೂರೈಸಿ ನಂತರ ಉದುರುತ್ತದೆ. ಅಗ ಕಾಯಿಗಳು ತೊಗಟೆ ಬೆಂದಂತೆ ಆಗಿರುತ್ತವೆ.ಸ್ವಲ್ಪ ಮಟ್ಟಿಗೆ ವರ್ಣ ಕಳೆದುಕೊಳ್ಳುತ್ತದೆ. ಕಾಯಿಯ ಒಳ ಭಾಗ ಸಹ ಬೆಂದಂತೆ ಆಗಿ ವರ್ಣ ಕಳೆದು ಕೊಂಡಿರುತ್ತದೆ.
Rotting on nuts

  • ಈಗ ಉದುತ್ತಿರುವ ಕಾಯಿಯಲ್ಲಿ ಇಂತಹ ಲಕ್ಷಣಗಳು ಇರುವುದಿಲ್ಲ.
  • ಆದ ಕಾರಣ ಮಾಮೂಲು ಕೊಳೆ ರೋಗ ಎನ್ನುವಂತಿಲ್ಲ.
  • ಹಾಗೆಂದು ಪೂರ್ತಿಯಾಗಿ ಕೊಳೆ ರೋಗ ಅಲ್ಲವೆಂದೂ ಹೇಳುವಂತಿಲ್ಲ.
  • ಇದು ಕೊಳೆ ರೋಗದ ಇನ್ನೊಂದು ಮುಖ ಎನ್ನುತ್ತಾರೆ ಕೋಲ್ಮನ್ ರವರು. (ಪುಟ 5 ಮತ್ತು 6 ಅಡಿಕೆಯ ಕೊಳೆ ರೋಗ ಲೆಸ್ಲಿ ಸಿ ಕೋಲ್ಮನ್)

Areca disease management book Lessi C Colman

ಕೆಲವೊಮ್ಮೆ ಕೊಳೆ ರೋಗ ಶಿಲೀಂದ್ರವು ಬೇರೆ ನಮೂನೆಯಲ್ಲಿ ಗೋಚರವಾಗುತ್ತದೆ. ಕಾಯಿಯ ಮೇಲ್ಮೈಯಲ್ಲಿ ಯಾವುದೇ ಬಿಳಿ ಪದಾರ್ಥ ಇರುವುದಿಲ್ಲ. ಲೋಳೆ ಸಹ ಇರುವುದಿಲ್ಲ. ಆದರೆ ಕಾಯಿಯ ತೊಗಟೆಯ ಮೇಲೆ ಕೆಲವು ಭಾಗಗಳಲ್ಲಿ ಕಪ್ಪು ಮಿಶ್ರವಾದ ಹಸುರು ಬಣ್ಣ ಬರುವುದೂ ಉಂಟು ಎನ್ನುತ್ತಾರೆ ಕೋಲ್ಮನ್ ರವರು. ಇಂಥಹ ಕಾಯಿಗಳನ್ನು ಬೂತಕನ್ನಡಿ ಅಥವಾ ಸೂಕ್ಷ್ಮ ದರ್ಶಕದಲ್ಲಿ ನೊಡಿದಾಗ ನೂಲುಗಳು ಇರುವುದು ಕಾಣಿಸುತ್ತದೆ. ಇವು ಕಾಯಿಯ ಒಳ ಭಾಗದಿಂದ ಆಗ ತಾನೇ ಹೊರಬರಲು ಪ್ರಾರಂಬಿಸಿರುತ್ತವೆ ಅಷ್ಟೇ .

Normal phytopthera symptom in arecanut
ಮಾಮೂಲಿ ಕೊಳೆ ರೋಗದ ಲಕ್ಷಣ/ ಮಳೆ ಕಡಿಮೆ ಇರುವಲ್ಲಿ ಈ ರೀತಿ ಉದುರುತ್ತದೆ.

  • ಅಡಿಕೆಗೆ ಬರುವ ರೋಗಗಳಲ್ಲಿ ಪ್ರಮುಖವಾದುದು, ಶಿಲೀಂದ್ರ ಸೋಂಕು. ಹಾಗೆಯೇ ಅದರ ಜೊತೆಗೆ  ಬ್ಯಾಕ್ಟೀರಿಯಾ ಸೋಂಕು ಸಹ ಇಲ್ಲ ಎನ್ನುವಂತಿಲ್ಲ.
  • ಶಿಲೀಂದ್ರಗಳ ಜೊತೆಗೆ ಬ್ಯಾಕ್ಟೀರಿಯಾ ಸಹ ಸ್ವಲ್ಪ ಮಟ್ಟಿಗೆ ತೊಂದರೆ ಉಂಟು ಮಾಡುತ್ತದೆ.
  • ಈ ಸಮಸ್ಯೆಯಲ್ಲಿ ಶಿಲೀಂದ್ರದ ಜೊತೆಗೆ ಬ್ಯಾಕ್ಟೀರಿಯಾ ಸೋಂಕು ಸಹ ಇರುವ ಸಾಧ್ಯತೆ ಇದೆ.

Black patches on nut

ಬೊರ್ಡೋ ದ್ರಾವಣವೇ ಪರಿಹಾರ:

  • ಕೆಲವು ರೈತರು ತಾವು ಬೋರ್ಡೋ ಹೊಡೆಯಲಿಲ್ಲ. “ಬಯೋ” ಕೊಳೆ ನಾಶಕ ಹೊಡೆದಿದ್ದೇವೆ.
  • ಆದ ಕಾರಣ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ.
  • ಅದು ನಿಜವೇ ಎಂಬುದು ನಂಬಲಿಕ್ಕಾಗದ್ದು.
  • ಈ ಕೊಳೆ ನಿವಾರಕದಲ್ಲಿ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಾಗಳೆರಡನ್ನೂ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿಡುವ ಗುಣ ಇಲ್ಲದಿಲ್ಲ.
  • ಈ ಸಮಯದಲ್ಲಿ ಸಾಲ್ಟ್ ಆಫ್ ಫೋಸ್ಪೋನಿಕ್ ಅಸಿಡ್ ಅನ್ನು ಸಿಂಪರಣೆ ಮಾಡಲಿಕ್ಕೆ ಕಷ್ಟ.
  • ಇದನ್ನು ಬಳಸುವುದಿದ್ದರೆ ಕನಿಷ್ಟ 6  ಗಂಟೆಯಾದರೂ ಅದು ಒಣಗಿ ಸಸ್ಯಗಳು ಹೀರಿಕೊಳ್ಳಬೇಕು.
  • ಅದಕ್ಕೆ ಅವಕಾಶ ಇಲ್ಲದ ಕಾರಣ ಬೋರ್ಡೋ ದ್ರಾವಣದ ಸಿಂಪರಣೆ ಒಂದೇ ಪರಿಹಾರ.
  • ಬೋರ್ಡೋ ದ್ರಾವಣಕ್ಕೆ ಶಿಲೀಂದ್ರ ಹಾಗೂ  ಬ್ಯಾಕ್ಟೀರಿಯಾ ನಾಶಕ ಗುಣ ಇದೆ. ಆದ ಕಾರಣ ತಕ್ಷಣಕ್ಕೆ ಇದೇ ಪರಿಹಾರ.

ಕಾಪರ್ ಹೆಚ್ಚಾದದ್ದು ಅಲ್ಲ:

It is not copper toxicity

  • ಕೆಲವು  ತಜ್ಞರು ಈ ಬಗೆಯ ಕಾಯಿ ಕಪ್ಪಗಾಗುವಿಕೆಗೆ  ಮೈಲು ತುತ್ತೆ  ಹೆಚ್ಚಾದುದು ಕಾರಣ ಎನ್ನುತ್ತಾರೆ.
  • ಇದು ನಿಜವಲ್ಲ.ಗೊನೆಯ ಕೆಲವೇ ಕಾಯಿಗಳಿಗೆ ಆಮ್ಲಕಾರಕವಾಗಲು ಸಾಧ್ಯವಿಲ್ಲ.
  • ಆಗುವುದಿದ್ದರೆ ಗೊನೆಯ ಎಲ್ಲಾ ಕಾಯಿಗಳಿಗೂ ಆಗಬೇಕು.
  • ಅದೇ ಪಾಕವನ್ನು ಬೇರೆ ಮರದ ಗೊನೆಗೆ ಹೊಡೆದಲ್ಲಿಯೂ ಆಗಬೇಕು.
  • ಇಷ್ಟಕ್ಕೂ ನಾವು ಸಿಂಪಡಿಸುವುದು ಶೇ.1 ರ ಬೋರ್ಡೋ ದ್ರಾವಣ.
  • ಇದಕ್ಕೆ ಕನಿಷ್ಟ 1 ಕಿಲೋ ಸುಣ್ಣ ಸೇರಿಸಿ ಕಲಕಿ ಮಿಶ್ರ ಮಾಡುತ್ತೇವೆ. ಆಗ ಅದು ಕ್ಷಾರೀಯವಾಗುತ್ತದೆಯೇ  ಹೊರತು ಆಮ್ಲಕಾರಕವಾಗುವುದಿಲ್ಲ.
  • ಒಮ್ಮೆ ಮಿಶ್ರಣವಾದರೆ ಆ ದ್ರಾವಣದಲ್ಲಿ ಅಲ್ಲಲ್ಲಿ ತಾಮ್ರದ ಅಂಶ ಹೆಚ್ಚು ಕಡಿಮೆ ಅಗುವ ಸಾಧ್ಯತೆ ಇರುವುದಿಲ್ಲ.
In side damage in nut
ಒಳಭಾಗದಲ್ಲಿ ಬೆಂದ ಲಕ್ಷಣ

ವಾತಾವರಣದ ಕಾರಣವೂ ಇದೆ:

  • ಕಳೆದ ಎರಡು ವರ್ಷಗಳಲ್ಲಿ ಅತಿಯಾಗಿ ಸುರಿದ ಮಳೆ ಅಡಿಕೆ ಮರದ ಬೇರು ವ್ಯವಸ್ಥೆಯನ್ನು ಸ್ವಲ್ಪ ಮಟ್ಟಿಗೆ ತೊಂದರೆ ಮಾಡಿದೆ.
  • ಮರದ ಆರೋಗ್ಯ ಸ್ವಲ್ಪ ಹದಗೆಟ್ಟಿದೆ. ಇದೇ ಹೆಚ್ಚು ಹೆಚ್ಚು ರೋಗಗಳು ಬರಲು ಕಾರಣವಾಗಿದೆ.
  • ಮಿಳ್ಳೆ ಉದುರುವುದು, ಸಿಂಗಾರ ಒಣಗುವುದು ಹೆಚ್ಚಾಗಿದೆ.
  • ಜೊತೆಗೆ ಮಳೆ ತಡವಾಗುವುದು ಸಹ ಒಂದು ಕಾರಣ.
  • ಕಳೆದ ವರ್ಷ ಮತ್ತು ಮಳೆ ತಡವಾಗಿ ಬಂದು ಹೆಚ್ಚಿನ ಮಳೆಯಾದ ಕಾರಣ ಅದು ಸಸ್ಯ ಗಳಿಗೆ ತೊಂದರೆ ಉಂಟು ಮಾಡಿದೆ.

ಅಡಿಕೆ ಬೆಳೆಗಾರರಿಗೆ ಮಳೆಗಾಲ ಯಾವಾಗಲೂ ತಲೆಬಿಸಿಯ ಕಾಲ. ಪ್ರತೀ ವರ್ಷ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕೆ ವಾತಾವರಣವೇ ಸಹಕರಿಸಬೇಕು. ಸಾಧ್ಯವಾದಷ್ಟು ಆಶಾಢ ಕಳೆಯವ ತನಕ 30 ದಿನಗಳ ಅಂತರದಲ್ಲಿ ಬೋರ್ಡೋ ಸಿಂಪರಣೆ  ಮಾಡಿ. ಅನುಕೂಲ ಇದ್ದವರು ಮಳೆಗಾಲದಲ್ಲಿ ಪ್ರತೀ ಮರದ ಬುಡಕ್ಕೆ 5  ಗ್ರಾಂ ಪ್ರಮಾಣದಲ್ಲಿ ಪೊಟ್ಯಾಶಿಯಂ ಫೋಸ್ಫೋನೇಟ್ ಹಾಕಿ. ಮಳೆಗಾಲದ ಕಂತಿನ ಗೊಬ್ಬರದಲ್ಲಿ ಸಾರಜನಕ ಗೊಬ್ಬರ ಕೊಡುವುದನ್ನು ಕಡಿಮೆಮಾಡಿ.
end of the article:—————————————————————-
search words: Mahali disease#Areca disease# areca cultivation# Areca garden management#Areca nut# Phytopthora  disease of areca#  Disease syptoms#  Bordox mixture#
ಪ್ರಶ್ನೆಗಳು:

  • ಆರೋಗ್ಯವಂತ ಅಡಿಕೆ ಮರದಲ್ಲಿ —— ಗರಿಗಳು ಇರಬೇಕು?
  • ಶೇ. 1 ರ ಬೋರ್ಡೋ ದ್ರಾವಣಕ್ಕೆ ಸುಣ್ಣ ಮತ್ತು ತುತ್ತೆ ಎಷ್ಟು ಪ್ರಮಾಣ?

ಉತ್ತರಗಳನ್ನು 9663724066 ಗೆ ವಾಟ್ಸ್ ಅಪ್ ಮಾಡಿ.

2 thoughts on “ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?

Leave a Reply

Your email address will not be published. Required fields are marked *

error: Content is protected !!