ಕೋಳಿ ಸಾಕುವವರಿಗೆ ಅದರ ಜೊತೆಗೆ ಕೆಲವು ಅಧಿಕ ಬೇಡಿಕೆ ಉಳ್ಳ, ಪಕ್ಷಿಗಳ ಸಾಕಾಣೆ ಮಾಡಬಹುದು. ಇವುಗಳಲ್ಲಿ ಗೌಗುಗನ ಹಕ್ಕಿ ಎಂಬುದು ಒಂದು. ಇದು ಮೊಟ್ಟೆಗೂ ಆಗುತ್ತದೆ. ಮಾಂಸಕ್ಕೂ ಆಗುತ್ತದೆ. ಸಣ್ಣ ಗಾತ್ರದ ಈ ಪಕ್ಷಿ ಅತೀ ಶೀಘ್ರ ಬೆಳವಣಿಗೆಯನ್ನು ಹೊಂದುತ್ತದೆ. ಇದರ ಮೊಟ್ಟೆ- ಮಾಂಸ ಎರಡೂ ಬಹಳ ಔಷದೀಯಗುಣ ಹೊಂದಿದೆ. ಇಂದಿನ ಸಾಮಾಜಿಕ ಆರೋಗ್ಯ ಸಮಸ್ಯೆಗೆ ಇದು ಪರಿಹಾರವಾಗಬಲ್ಲದು.
- ಗೌಜುಗನ ಹಕ್ಕಿ ಕಾಟುರ್ನಿಕ್ಸ್ ಕಾಟುರ್ನಿಕ್ಸ್ ಜಪೋನಿಕಾ (Coturnix Coturnix japonica) ಎಂಬ ಪ್ರಭೇಧಕ್ಕೆ ಸೇರಿದೆ.
- 11 ನೇ ಶತಮಾನದಿಂದಲೂ ಜಪಾನೀಯರು ಇದನ್ನು ಮುದ್ದಿನ ಹಕ್ಕಿ ಎಂದು ಸಾಕುತ್ತಿದ್ದ ಕಾರಣಕ್ಕೆ ಇದಕ್ಕೆ ಜಪನೀಸ್ ಗೌಜುಗನ ಹಕ್ಕಿ ಎಂದು ಹೆಸರು.
- ಇದನ್ನು ಹೋಲುವ ಹಕ್ಕಿಗಳು ಭಾರತ , ಶ್ರೀಲಂಕಾ, ಮತ್ತು ಮಯನ್ಮಾರ್ ಗಳಲ್ಲಿಯೂ ಕಂಡು ಬರುತ್ತಿದೆ.
- ಇದನ್ನು ನಮ್ಮ ಕರ್ನಾಟಕದಲ್ಲಿ ಲಾವಕ್ಕಿ, ಪುರಲಿ ಹಕ್ಕಿ ಕಾಡು ಪುರಲಿ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ.
- ನಮ್ಮ ರಾಜ್ಯದಲ್ಲಿ ಈಗ ಹಲವಾರು ಜನ ಇದನ್ನು ಸಾಕುತ್ತಿದ್ದಾರೆ
ಜಪಾನೀಸ್ ಗೌಜುಗನ ಹಕ್ಕಿ ಎಂಬುದು, ನಮ್ಮ ಕಾಡು ಗೌಜುಗನ ಹಕ್ಕಿಗಿಂತ ದೊಡ್ಡ ಗಾತ್ರವನ್ನು ಹೊಂದಿದೆ. ಬೆಳೆವಣಿಗೆ ತುಂಬಾ ಶೀಘ್ರವಾಗಿದೆ. ಅಧಿಕ ಮೊಟ್ಟೆಗಳನ್ನೂ ಇಡುತ್ತದೆ. ಪ್ರಪಂಚದಾದ್ಯಂತ ಇದನ್ನು ಸಾಕುತ್ತಾರೆ. ಭಾರತಕ್ಕೆ ಇದನ್ನು 1974 ರಲ್ಲಿ ಉತ್ತರ ಪ್ರದೇಶದ ಕೇಂದ್ರೀಯ ಪಕ್ಷಿ ಸಂಶೋಧನಾ ಸಂಸ್ಥೆಯು ಆಮದು ಮಾಡಿಕೊಂಡಿತು. ಅಂದಿನಿಂದ ಇದು ಭಾರತದಲ್ಲಿ ಅಲ್ಲಲ್ಲಿ ಪರಿಚಯಿಸಲ್ಪಟ್ಟು, ತಳಿ ಅಭಿವೃದ್ದಿಯನ್ನೂ ಮಾಡಲಾಗಿದೆ.
ಏನು ಈ ಹಕ್ಕಿಯ ವಿಶೇಷ:
- ಎಲ್ಲಾ ತರಹದ ಹವಾಮಾನಕ್ಕೆ ಹೊಂದಿಕೆಯಾಗುವ ಗುಣ ಇದರ ಮೊದಲ ವಿಶಿಷ್ಟತೆ.
- ಇದನ್ನು ಸಾಕಲು ಬಂಡವಾಳ ತುಂಬಾ ಕಡಿಮೆ ಸಾಕು. ಸ್ಥಳಾವಕಾಶವೂ ತುಂಬಾ ಕಡಿಮೆ ಸಾಕು.
- ಇದಕ್ಕೆ ಹೆಚ್ಚು ಆಹಾರ ಬೇಡ. ಕಡಿಮೆ ಆಹಾರ ತಿಂದು ಅತೀ ಶೀಘ್ರ ಬೆಳವಣಿಗೆಯನ್ನು ಹೊಂದುತ್ತದೆ.
- ತನ್ನ 5 ವಾರದ ಬೆಳವಣಿಗೆಯಲ್ಲಿ ಸುಮಾರು 500 ಗ್ರಾಂ ನಷ್ಟು ಆಹಾರ ತಿಂದು ಸುಮಾರು 200-250 ಗ್ರಾಂ ತೂಕ ಬರುತ್ತದೆ.
- ಹುಟ್ಟಿದ 7 ವಾರಗಳಲ್ಲಿ ಪ್ರೌಢಾವಸ್ಥೆಗೆ ತಲುಪುತ್ತದೆ. ತಕ್ಷಣ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ.
- ವರ್ಷ ಇಡೀ ಮೊಟ್ಟೆ ಇಡುತ್ತದೆ. ವಾರ್ಷಿಕ 280-290 ಮೊಟ್ಟೆಗಳನ್ನು ಇಡುತ್ತದೆ.
- ಒಂದು ವರ್ಷದಲ್ಲಿ ಮೂರರಿಂದ ನಾಲ್ಕು ಸಂತತಿಗಳನ್ನು ಪಡೆಯಬಹುದು.
- ಕೋಳಿಗಳಿಗೆ ಬರುವ ಯಾವ ರೋಗಗಳೂ ಇದಕ್ಕೆ ಬರಲಾರವು. ರೋಗ ನಿರೋಧಕ ಶಕ್ತಿ ಹೊಂದಿದೆ.
- ಸಾಮಾನ್ಯ ಕೋಳಿಯ ಮಾಂಸ ಮತ್ತು ಮೊಟ್ಟೆಯ ರುಚಿ ಮತ್ತು ಪೌಷ್ಟಿಕಾಂಶಗಳಿಗಿಂತ ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇದೆ ಎನ್ನುತ್ತಾರೆ.
ಕರ್ನಾಟಕ ಸರಕಾರವು ಈ ಗೌಜುಗನ ಹಕ್ಕಿ ಸಾಕಾಣೆಗೆ ಇದ್ದ ನಿಶೇಧವನ್ನು ಹಿಂತೆಗೆದುಕೊಂಡಿದೆ. ಆದ ಕಾರಣ ಇದನ್ನು ಸಾಕುವರೇ ಅನುಮತಿ ಬೇಡ. ಇತರ ಸಾಮಾನ್ಯ ಕೋಳಿಯಂತೆ ಇದನ್ನು ಸಾಕಬಹುದು.
ಇದರ ಮೊಟ್ಟೆಯ ಬಗ್ಗೆ ಹಿಂದೆ ಅಷ್ಟು ಮಹಿತಿ ಇರಲಿಲ್ಲ. ಈಗ ಹಾಗಿಲ್ಲ. ಇದನ್ನು ಎಲ್ಲಾ ಸ್ಟೋರುಗಳಲ್ಲಿ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಾರೆ. ಕೇರಳದಲ್ಲಿ ಇದರ ಮೊಟ್ಟೆಯನ್ನು ತಕ್ಷಣ ಒಡೆದು ಕುಡಿಯುವವರು ಬಹಳ ಜನ. ಇಲ್ಲಿನ ಎಲ್ಲಾ ಗೂಡಂಗಡಿಗಳಲ್ಲೂ ಇದರ ಮೊಟ್ಟೆ ಇರುತ್ತದೆ.
ಆಹಾರ ಏನು:
- ಕೋಳಿಗಳಿಗೆ ಕೊಡುವ ಆಹಾರವನ್ನೇ ಕೊಟ್ಟರೆ ಸಾಕಾಗುತ್ತದೆ.
- ಸಾಮಾನ್ಯ ಧಾನ್ಯ ಪದಾರ್ಥಗಳನ್ನೂ ಕೊಟ್ಟು ಸಾಕಬಹುದು.
- ಬೇಗ ಬೆಳೆಯುವ ಕಾರಣ ದ್ವಿದಳ ಧಾನ್ಯ, ಸ್ವಲ್ಪ ಕ್ಯಾಲ್ಸಿಯಂ, ಮತ್ತು ರಂಜಕ ಇರುವಂತ,ಮೆಕ್ಕೇ ಜೋಳ, ಗೋಧಿ ತೌಡು, ಮೀನಿನ ಪುಡಿ, ಉಪ್ಪು, ಲವಣ ಕಡಲೆ ಕಾಯಿ ಹಿಂಡಿ, ಸೋಯಾ ಬೀನ್, ಅಕ್ಕಿ ತೌಡು, ಸೂರ್ಯಕಾಂತಿ ಹಿಂಡಿ ಇವುಗಳನ್ನು ಸೇರಿಸಿ ಸ್ವಂತ ಆಹಾರ ತಯಾರಿಸಬಹುದು.
- 6 ತಿಂಗಳ ವಯಸ್ಕ ಹಕ್ಕಿಗೆ ದಿನಕ್ಕೆ 30-35 ಗ್ರಾಂ ಈ ರೀತಿ ಸಿದ್ಧಪಡಿಸಿದ ಆಹಾರ ಕೊಡಬೇಕು.
ಸಾಕಾಣಿಕೆ ಹೀಗೆ:
- ಇದನ್ನು ನಾಟಿ ಕೊಳಿಯಂತೆ ಬಯಲಲ್ಲಿ ಬಿಟ್ಟು ಸಾಕಲಿಕ್ಕಾಗುವುದಿಲ್ಲ.
- ಪಂಜರ ಪದ್ದತಿಯಲ್ಲಿ ಸಾಕಬೇಕು. ಫಾರಂ ಕೋಳಿ ಸಾಕಿದಂತೆ ಸಾಕಬಹುದು.
- ಸುಮಾರು 3000 ಚದರ ಅಡಿಯ ವಿಸ್ತೀರ್ಣದ ಪಂಜರದಲ್ಲಿ 15,000 ಹಕ್ಕಿಗಳನ್ನು ಸಾಕಬಹುದು.
- ನೆಲಕ್ಕೆ ದಪ್ಪ ಸತ್ತೆಯನ್ನು ಹಾಕಬೇಕು. ಇದರಲ್ಲಿ ಬಿದ್ದ ಹಿಕ್ಕೆಯು ಉತ್ತಮ ಗೊಬ್ಬರವಾಗಬಲ್ಲದು.
- ಒಂದು ಮಾಂಸದ ಕೋಳಿ ಸಾಕುವ ಸ್ಥಳಾವಕಾಶದಲ್ಲಿ 5-6 ಗೌಜುಗನ ಹಕ್ಕಿ ಸಾಕಬಹುದು.
- ಪಂಜರಕ್ಕೆ 1X1 ಇಂಚು ತೂತು ಇರುವ ಮೆಶ್ ಅನ್ನು ಪಂಜರಕ್ಕೆ ಬಳಸಬೇಕು.
- 3×2.5×1.5 (ಉದ್ದ ಅಗಲ ಎತ್ತರ) ದ ಪಂಜರದಲ್ಲಿ ಮೊದಲ ಎರಡು ವಾರ 100 ಹಕ್ಕಿಗಳನ್ನೂ, ನಂತರ 50 ಹಕ್ಕಿಗಳನ್ನೂ ಸಾಕಬಹುದು.
- ಪಂಜರಗಳನ್ನು ಒಂದರ ಮೇಲೆ ಒಂದರಂತೆ ಇಡಬಹುದು. ಮಧ್ಯದಲ್ಲಿ ಮರದ ಹಲಗೆ ಇಟ್ಟು, ತ್ಯಾಜ್ಯಗಳನ್ನು ತೆಗೆಯಲು ಅನುಕೂಲ ಇರಬೇಕು.
ಗೌಜುಗನ ಹಕ್ಕಿಯ ಆರೋಗ್ಯ ಗುಣ :
- ಇದರ ಮಾಂಸ ನಾಟಿ ಕೊಳಿಗೆ ಸಮ. ಮೊಟ್ಟೆಯಲ್ಲಿ ಹಳದಿ ಲೋಳೆ ಹೆಚ್ಚು.
- ಇದರಲ್ಲಿ ನೀರು 7.4 ಗ್ರಾಂ, ಪ್ರೊಟೀನು1.3 ಕೊಬ್ಬು 1.1, ಶರ್ಕರ ಪಿಷ್ಟ ಮತ್ತು ಲವಣಾಂಶ 0.1, ಶಕ್ತಿ 15.9 ಕ್ಯಾಲೊರಿ, ಕ್ಯಾಲ್ಸಿಯಂ 7ಮಿಲಿ ಗ್ರಾಂ, ರಂಜಕ 22 ಮಿಲಿ ಗ್ರಾಮ್, ಕಬ್ಬಿಣ 0.38 ಮಿಲಿ ಗ್ರಾಂ, ಜೀವ ಸತ್ವ ಎ 300 ಐಯು, ಬಿ1 0.10, ಬಿ2 0.80 ಮತ್ತು ನಿಯಾಸಿನ್, 0.10 ಮಿಲಿ ಗ್ರಾಂ ಇರುತ್ತದೆ.
- ಇದರ ಮೊಟ್ಟೆಯಲ್ಲಿ ಭಾರೀ ರೋಗ ನಿರೋಧಕ ಶಕ್ತಿ ಇದೆ.
ಅಸ್ತಮಾ, ಅಲರ್ಜಿ, ಬೊಜ್ಜು, ಮಾನಸಿಕ ಒತ್ತಡ, ಮಧು ಮೇಹ, ರಕ್ತ ಹೀನತೆ, ಲಿವರ್ ಖಾಯಿಲೆ, ಆಸ್ಟ್ರೈಟಿಸ್, ಅಲ್ಸರ್, ನರಸಂಭಂದಿ ಖಾಯಿಲೆ, ಮೈಗ್ರೇನ್, ಹೃದಯದ ಖಾಯಿಲೆ ರಕದೊತ್ತಡ,ಕ್ಷಯ ರೋಗ, ಮೂತ್ರ ಕೋಶದ ಕಲ್ಲು, ಪಿತ್ಥಕೋಶದ ಕಲ್ಲು, ಕ್ಯಾನ್ಸರ್ ಚೇತರಿಕೆ, ಶಸ್ತ್ರ ಚಿಕಿತ್ಸೆಯ ನಂತರ ಗಾಯ ಒಣಗುವಿಕೆ ಮುಂತಾದ ತೊಂದರೆಗಳಿಗೆ ಮತ್ತು ರೋಗಗಳಿಗೆ ಚಿಕಿತ್ಸೆಗಾಗಿ ಈ ಕೋಳಿಯ ಮೊಟ್ಟೆಗಳನ್ನು ಬಳಸಬಹುದು.
ಇದು ಬುದ್ದಿ ಶಕ್ತಿ ಹೆಚ್ಚಿಸುತ್ತದೆ. ದೇಹಧಾರ್ಢ್ಯ ಸೌಂದರ್ಯ ವರ್ಧಕ ಎಂಬುದು ದೇಶ ವಿದೇಶಗಳಲ್ಲಿ ಸಂಶೋಧನೆಯಿಂದ ತಿಳಿದು ಬಂದಿದೆ. ಚೀನಾ ಜನರ ಬುದ್ಧಿಮತ್ತೆ, ಮತ್ತು ಆರೋಗ್ಯದ ಗುಟ್ಟು ಇದೇ ಕೋಳಿಯ ಮೊಟ್ಟೆ ಮಾಂಸ ಎನ್ನಲಾಗುತ್ತಿದೆ.
ಜಪಾನಿಸ್ ಗೌಜುಗನ ಹಕ್ಕಿ ಮರಿಗಳು ಕರ್ನಾಟಕದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಪನೀಸ್ ಕ್ವೇಲ್ ಹ್ಯಾಚರೀಸ್, ಮದ್ದೂರು ಮಂಡ್ಯ ಇಲ್ಲಿ ಲಭ್ಯ.9620377384, ಉತ್ತರ ಪ್ರದೇಶದ Director central VVS research Institute, VVS hatcheries Coimbotore, Namakkal, ಇಲ್ಲೆಲ್ಲಾ ಮರಿಗಳು ಸಿಗುತ್ತವೆ. ಪಶು ವೈದಕೀಯ ಮಹಾವಿಧ್ಯಾಲಯ ಹೆಬ್ಬಾಳ ಬೆಂಗಳೂರು, ಹಾಗೆಯೇ ರಾಯಚೂರು ಕೃಷಿ ವಿಶ್ವ ವಿಧ್ಯಾನಿಲಯ , ಸಮೀಪದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಈ ಬಗ್ಗೆ ತಾಂತ್ರಿಕ ಮಾಹಿತಿ ಇದೆ.
End of the article:———————————————————————
search words: Japanese Quail # Quail farming# Poultry Farming# Healthy egg# Goujugana hakki# Coturnix Coturnix japonica# Japanese Bird farming# hatcheries