ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ. ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.
- ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ.
- ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ ಆಗದೆ ಇದ್ದರೆ, ಅದರಿಂದ ಸಸ್ಯಕೆ ಬೇಕಾದಷ್ಟು ಆಹಾರ ದೊರೆಯದೇ ಇದ್ದರೆ,
- ಆ ಸಸ್ಯ ಮತ್ತೊಂದು ಬೇರನ್ನು ಬಿಡುತ್ತದೆ. ಅದು ತನ್ನ ಉಳಿವಿಗಾಗಿ ಮತ್ತೆ ಮತ್ತೆ ಬೇರುಗಳನ್ನು ಬಿಡುತ್ತಾ ಇರುತ್ತದೆ.
ಬೇರು ಮೇಲೆ ಬರಲು ಕಾರಣ:
- ಮುಖ್ಯವಾಗಿ ಬೇರುಗಳ ಹಬ್ಬುವಿಕೆಗೆ ಅಡ್ಡಿ ಉಂಟಾಗುವುದೇ ಇದಕ್ಕೆ ಕಾರಣ.
- ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ದಿಯಾಗುವುದು ಇದೆ.
- ಆ ಕಾರಣದಿಂದ ಬೇರು ಮೇಲೆ ಬರುತ್ತದೆ.
- ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1 ರಷ್ಟು ಮಾತ್ರ ಎನ್ನಬಹುದು.
- ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
- ನೀರು ನಿಂತಲ್ಲೆ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿ ಆಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
- ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.
- ಸಹಜವಾಗಿ ಬದುಕುವ ಹೋರಾಟದಲ್ಲಿ ಮೇಲೆ ಮೇಲೆ ಬೇರು ಕೊಟ್ಟು ಬದುಕುತ್ತದೆ.
ನೆಲದ ಜೌಗುತನ ಅಥವಾ ಶೀತ ಮಣ್ಣು:
- ಹೆಚ್ಚಾಗಿ ಬೇರು ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.
- ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು.
- ಆದರೆ ನೆಲದಲ್ಲಿ ನೀರು ಕೆಳಗೆ ಇಳಿಯಲು ಅಡ್ಡಿ ಇರುತ್ತದೆ.
- ಉದಾಹರಣೆಗೆ ತಳಭಾಗದಲ್ಲಿ ಜಂಬಿಟ್ಟಿಗೆ ಮಣ್ಣು, ಜೇಡಿ ಅಂಟು ಮಣ್ಣು ಇದ್ದರೆ ಅಲ್ಲಿ ನೀರು ಹೆಚ್ಚು ಸಮಯದ ತನಕ ನಿಂತಿರುತ್ತದೆ.
- ಆಗ ಬೇರುಗಳ ಮೇಲ್ಮೈಯಲ್ಲಿರುವ ಶ್ವಾಸೋಸ್ಚ್ವಾಸದ ಅಂಗಗಳಿಗೆ ಹಾನಿಯಾಗುತ್ತದೆ.
- ಕೊಳೆಯುತ್ತದೆ. ಕೊಳೆತರೆ ಅಲ್ಲಿ ಕವಲು ಬೇರುಗಳು ಹುಟ್ಟುವುದಿಲ್ಲ.
- ಕವಲು ಬೇರುಗಳು ಹುಟ್ಟದಿದ್ದರೆ ಮತ್ತೆ ಹೊಸ ಬೇರು ಹುಟ್ಟಿಕೊಳ್ಳುತ್ತದೆ.
- ಅದಕ್ಕೂ ಅಡ್ಡಿಯಾದರೆ ಮತ್ತೆ ಮೇಲೆ ಮೇಲೆ ಬೇರುಗಳು ಹುಟ್ಟಿಕೊಳ್ಳುತ್ತಾ ಇರುತ್ತದೆ.
ಇಲ್ಲಿ ತೋರಿಸಲಾದ ಚಿತ್ರದಲ್ಲಿ ಅಡಿಕೆ ಮರದ ಕೆಳಭಾಗದ ಬೇರುಗಳು ಕೊಳೆತು ಸತ್ತ ಪರಿಣಾಮದಿಂದ ಮೇಲೆ ಮೇಲೆ ಬೇರುಗಳು ಬಂದಿರುವುದನ್ನು ಎಲ್ಲರೂ ಗಮನಿಸಬಹುದು.
- ನೀರು ಒಂದು ಗಂಟೆಗೂ ಹೆಚ್ಚು ಕಾಲ ಹರಿಯದೆ ನಿಂತರೆ ಅದು ಬೇರುಗಳ ಪ್ರಾಮುಖ್ಯ ಉಸಿರಾಟದ ಅಂಗಕ್ಕೇ ವಿಷಕಾರಿಯಾಗುತ್ತದೆ.
- ಇಂತಹ ಮರಗಳು ಹೆಚ್ಚಿನ ಸಂದರ್ಭಗಳಲ್ಲಿ ಎಲೆ ಹಳದಿಯಾಗಿ, ಶಿರಭಾಗ ಸಪುರವಾಗುತ್ತಾ ಬರುತ್ತದೆ.
- ಕೆಲವೊಮ್ಮೆ ಇಂತಹ ಮರಗಳನ್ನು ಗಟ್ಟಿಯಾಗಿ ದೂಡಿದಾಗ ವಾಲುವುದೂ ಇದೆ.
ಜಂತು ಹುಳದ ಬಾಧೆ:
- ಅಡಿಕೆ ಮರದ ಬೇರುಗಳನ್ನು ಹಾಳು ಮಾಡುವ ಜಂತು ಹುಳಗಳು ( ನಮಟೋಡು, nematode) ಬಹುತೇಕ ಎಲ್ಲಾ ಕಡೆ ಇದೆ.
- ಕಾಡು ಕಡಿದ ತೋಟ, ಯಾವುದಾದರೂ ಜಮ್ತು ಹುಳ ಬಾಧಿತ ಸಸ್ಯಗಳಿದ್ದ ಜಾಗದಲ್ಲಿ ಇದು ಬೆಳೆಯಿಂದ ಬೆಳೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
- ಅಡಿಕೆ ಮರದ ಬೇರುಗಳಿಗೆ ಎರಡು ಪ್ರಕಾರದ ಜಂತು ಹುಳಗಳು ಬಾಧಿಸುತ್ತದೆ.
- ಒಂದು ಬೇರಿನ ಮೇಲ್ಮೈಯನ್ನು ಚುಚ್ಚಿ ಗಾಯಮಾಡುವಂತದ್ದು (burrowing nematode, . Radopholus simiiis ) ಇದು ಹಾನಿಮಾಡಿದಲ್ಲಿ ಬೇರು ಕೆನೆಬಣ್ಣದಲ್ಲಿ ಇರದೆ ಅದರ ಮೇಲ್ಮೈಯಲ್ಲಿ ಕಲೆಗಳಾಗಿ ಕಪ್ಪಗೆ ಕಾಣಿಸುತ್ತದೆ.
- ಇನ್ನೊಂದು ಬೇರಿನ ಮೇಲೆ ಗಂಟು ಗಂಟುಗಳಾಗುವಂತದ್ದು, (root- knot nematode. Meloidogyne illcognila)
- ಇವೆರಡೂ ಅಡಿಕೆ, ತೆಂಗು, ಕಾಫೀ, ಕರಿಮೆಣಸು ಮುಂತಾದ ಬೆಳೆಗಳ ಬೇರುಗಳಿಗೆ ತುಂಬಾ ಹಾನಿ ಮಾಡುತ್ತವೆ.
- ಈ ನಮಟೋಡುಗಳು ಕಣ್ಣಿಗೆ ಕಾಣಿಸದ ಜೀವಿಗಳಾಗಿದ್ದು, ನಿಯಂತ್ರಣ ಮಾಡುವುದು, ಪತ್ತೆ ಮಾಡುವುದು ಎರಡೂ ತುಂಬಾ ಕಷ್ಟದ ಕೆಲಸ.
ಈ ಜಂತು ಹುಳಗಳು ಬಾಧಿಸಿದಾಗ ಕೆಳಭಾಗದ ಬೇರಿಗೆ ಹಾನಿಯಾಗಿ ಮೇಲೆ ಮೇಲೆ ಬೇರು ಬರಲಾರಂಭಿಸುತ್ತದೆ. ಬೇರುಗಳ ಬೆಳವಣಿಗೆ ತುಂಬಾ ಗಿಡ್ಡವಾಗಿ ಆಹಾರ ಸಾಲದೆ ಮತ್ತೆ ಮತ್ತೆ ಮೇಲೆ ಮೇಲೆ ಬೇರು ಬರುತ್ತದೆ. ಎಲ್ಲಾ ಬೇರುಗಳಿಗೂ ಜಂತು ಹುಳ ತೊಂದರೆ ಮಾಡುವ ಕಾರಣ ಮರದ ಕಾಂಡ ಸಪುರವಾಗುವುದು, ನಳ್ಳಿ ಉದುರುವಿಕೆ, ಸಿಂಗಾರ ಒಣಗುವಿಕೆ, ಎಲೆ ಹಳದಿಯಾಗುವಿಕೆ, ಇದರ ಲಕ್ಷಣ.
- ಬೇರು ಹುಳ ಬಾಧೆ ಇದ್ದಾಗಲೂ ಹೀಗೇ ಆಗುತ್ತದೆ. ಎಳೆ ಸಸಿ ಇರುವಾಗ ಅಥವಾ ಮರ ಅದ ನಂತರವೂ
- ಬುಡ ಭಾಗಕ್ಕೆ ಕಳಿಯದ ಕಚ್ಚಾ ಸಾವಯವ ಗೊಬ್ಬರ ಹಾಕಿದಾಗ ಅಲ್ಲಿ ಅದು ಕೊಳೆಯುವಾಗ ಕಾಂಡ ಭಾಗಕ್ಕೆ ತೊಂದರೆ ಆಗಿ ಅದು ಗಾಯ ರೂಪ ಪಡೆದರೆ
- ಕೆಳಭಾಗದಲ್ಲಿ ಬೇರು ಬೆಳವಣಿಗೆಗೆ ಅಡ್ಡಿಯಾಗಿ ಮೇಲೆ ಮೇಲೆ ಬೇರು ಬರುವುದು ಹಲವು ಕಡೆ ಉಂಟಾಗುತ್ತದೆ.
ಇದು ಬರೇ ಅಡಿಕೆ ಮರ ಮಾತ್ರವಲ್ಲ, ತೆಂಗಿನ ಮರದಲ್ಲೂ ಹೀಗೆ ಅಗುತ್ತದೆ. ತೆಂಗಿನ ಮರದಲ್ಲಿ ಸಹ ಇಂತಹ ಸ್ಥಿತಿ ಉಂಟಾದಾಗ ಬೇರು ಮೇಲೆ ಬರುತ್ತದೆ.
ಹೀಗೆ ಆದಾಗ ಬುಡದ ಬೇರುಗಳಿಗೆ ಏನೋ ಹಾನಿ ಆಗಿರುತ್ತದೆ
ಪರಿಹಾರ:
- ನೀರು ನಿಲ್ಲದಂತೆ ಪ್ರತೀ ಗಿಡದ ಬುಡದ ನೀರು ಬಸಿಯಲು ಕಾಲುವೆ ಬೇಕು. ಸಸಿಗಳನ್ನು ನೆಡುವಾಗ ಹೊಂಡ ಎಷ್ಟೇ ಮಾಡಿದರೂ ಸಹ ಆಳದಲ್ಲಿ ನೆಡಬೇಡಿ.
- ಮುಕ್ಕಾಲು ಪಾಲು ಮಣ್ಣು ತುಂಬಿ,ಮೇಲು ಭಾಗದಲ್ಲಿ ಸಸಿ ನೆಡಬೇಕು.
- ಹೊಂಡದಲ್ಲಿ ತಳ ಭಾಗ ಜಂಬಿಟ್ಟಿಗೆ ಕಲ್ಲು, ಜೇಡಿ ಅಗಿದ್ದಲ್ಲಿ ಸಾಧ್ಯವಾದಷ್ಟು ಮೇಲೆ ಸಸಿ ನೆಟ್ಟು ನೀರು ಬಸಿಯಲು ವ್ಯವಸ್ಥೆ ಮಾಡಿ.
- ಬೇರು ಮೇಲೆ ಬಂದ ಗಿಡಗಳ ಬುಡಕ್ಕೆ ಮಣ್ಣು ಹಾಕಿ ಆ ಬೇರುಗಳು ವಿಶಾಲ ಪ್ರದೇಶಕ್ಕೆ ಹಬ್ಬಲು ಅವಕಾಶ ಮಾಡಿ ಕೊಡಿ.
- ಆಗ ಅದರ ಅಧಾರದಲ್ಲಿ ಮರ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.
ಜಂತು ಹುಳ ಇದ್ದಲ್ಲಿ ಸಾಧ್ಯವಾದಷ್ಟು ಜೈವಿಕ ಜಂತು ಹುಳ ನಾಶಕವನ್ನು ಮಳೆಗಾಲದಲ್ಲಿ ಕೊಡಿ. ಪ್ರಾರಂಭದಲ್ಲಿ ಫ್ಯುರಡಾನ್ ಬಳಸಿ ಒಮ್ಮೆ ಸಂಖ್ಯೆ ಕಡಿಮೆ ಮಾಡಿ. ಕೆಲವು ಸೊಪ್ಪು (ಚೊಗರು ಉಳ್ಳ) ದಡ್ದಾಲ, ಆಲ, ಕಾಸರಕ, ಕನಪ್ಪಟೆ, ಎಕ್ಕ, ಲಂಟಾನ ಮುಂತಾದ ಸೊಪ್ಪನ್ನು ಹಾಕಿ , ಚೆಂಡು ಹೂವಿನ ಸಸ್ಯವನ್ನು ಬೆಳೆಸಿ ಅದನ್ನು ಮತ್ತೆ ಮಣ್ಣಿಗೆ ಸೇರಿಸಿದರೆ ಜಂತು ಹುಳ ಕಡಿಮೆಯಾಗುತ್ತದೆ.
ಬೇರು ಮೇಲೆ ಬರುವುದು ಯಾವ ರೋಗವೂ ಅಲ್ಲ. ಇದಕ್ಕೆ ಬೇಸಾಯ ಕ್ರಮದಲ್ಲೇ ಪರಿಹಾರ ಹುಡುಕಬೇಕು. ಎಲ್ಲದಕ್ಕೂ ರೈತರು ಸ್ವಲ್ಪ ವೈಜ್ಞಾನಿಕವಾಗಿ ಗಮನಿಸಿ ನಿರ್ಧಾರಕ್ಕೆ ಬರುವುದು ಸೂಕ್ತ.
end of the article:——————————————————————————-
search words: Areca roots # uprooting of areca plant# root damage # roots and soil condition# water logging and root damage# nematode and root damage# root protection#