ತರಕಾರಿಗಳಿಗೆ, ಹಣ್ಣು ಹಂಪಲುಗಳಿಗೆ ಇರುವೆಗಳು ಬರುವುದು ಸಾಮಾನ್ಯ. ಕೆಂಪು ಇರುವೆಗಳ ಉಪಟಳಕ್ಕೆ ಯಾವುದನ್ನೂ ಬೆಳೆಯುವುದು ಬೇಡ ಎನ್ನಿಸುತ್ತದೆ. ವಿಚಿತ್ರ ವಿಚಿತ್ರ ಇರುವೆಗಳು ನಾವು ಬೆಳೆದ ಫಲಕ್ಕೆ ತೊಂದರೆ ಮಾಡುತ್ತವೆ. ಯಾಕೆ ಇವುಗಳು ರೈತರ ಬೆಳೆಗೆ ತೊಂದರೆ ಮಾಡುತ್ತವೆ. ಅವು ಯಾಕೆ ಬರುವುದು ಇದಕ್ಕೆಲ್ಲಾ ಉತ್ತರ ಇಲ್ಲಿದೆ.
ಇವು ಬರಬೇಕಾದರೆ ಯಾವುದಾದರೂ ಕಾರಣ ಇರಬೇಕು. ಗಾಳಿ ಬಾರದೆ ಎಲೆ ಅಲ್ಲಾಡಲಿಕ್ಕಿಲ್ಲ. ಸಿಹಿ ಇಲ್ಲದೆ ಇರುವೆ ಬರಲಿಕ್ಕಿಲ್ಲ ಎಂಬ ಮಾತಿದೆ. ಇವುಗಳು ಬೆಳೆಗೆ ತೊಂದರೆ ಮಾಡಲು ಬರುವುದೋ ಅಥವಾ ಅವು ತಮ್ಮ ಆಹಾರ ಹುಡುಕಿ ಬಂದಾಗ ಅವುಗಳಿಂದ ತೊಂದರೆ ಆಗುವುದೋ? ಇದು ಒಂದು ನಿರುಪದ್ರವಿ ಕೀಟ. ಇದನ್ನು ಪರೋಪಕಾರಿ ಕೀಟ ಎಂತಲೇ ಹೇಳಬಹುದು. ಬೇರೆ ಬೇರೆ ತರಹದ ಇರುವೆಗಳು ಬೇರೆ ಬೇರೆ ಬೆಳೆಗೆ ಮುತ್ತಿಕೊಳ್ಳುತ್ತವೆ. ಕೆಲವು ಫಲಕ್ಕೂ ಇನ್ನು ಕೆಲವು ಗಿಡಕ್ಕೂ ಕೆಲವು ನಡೆದಾಡುವ ನೆಲದಲ್ಲೋ ಸಂಚರಿಸುತ್ತಾ ಕಿರಿ ಕಿರಿ ಉಂಟು ಮಾಡುತ್ತವೆ. ಇವುಗಳಿಂದ ನೇರವಾಗಿ ಯಾವ ತೊಂದರೆ ಇಲ್ಲ. ಇದು ಬೆಳೆಗೆ ತೊಂದರೆ ಮಾಡಲು ಮುತ್ತಿಕೊಳ್ಳುವುದೂ ಅಲ್ಲ. ಕೆಲವು ಇರುವೆಗೆಳಿಗೆ ಮರದ ಗೆಲ್ಲುಗಳು ವಾಸ ಸ್ಥಳವಾಗಿರುತ್ತವೆ. ಮತ್ತೆ ಕೆಲವು ಎಲೆಗಳನ್ನು ವಾಸಸ್ಥಳವಾಗಿ ಮಾಡಿಕೊಂಡಿರುತ್ತವೆ. ಮಾನವನಿಂದ ಅವುಗಳ ವಾಸಸ್ಥಳಕ್ಕೆ ಏನಾದರೂ ತೊಂದರೆ ಆದಾಗ ಅವು ಕಡಿಯುತ್ತವೆ ಅಷ್ಟೇ.
- ಇವುಗಳು ಸಂಘ ಜೀವಿಗಳು. ಇದರಲ್ಲಿ ಸುಮಾರು 22000 ಕ್ಕೂ ಹೆಚ್ಚಿನ ವಿಧಗಳಿರುತ್ತವೆ.
- ಕೆಲವು ಕಚ್ಚುತ್ತವೆ. ಕೆಲವು ಹರಿದಾಡುವುದು ಮಾತ್ರ.
- ಕೆಲವು ದೊಡ್ದದಿರುತ್ತವೆ. ಕೆಲವು ತುಂಬಾ ಸಣ್ಣದಾಗಿಯೂ ಇರುತ್ತವೆ.
- ಮಣ್ಣು, ಮರ, ಮರದ ಎಲೆ , ಕೊಂಬೆ, ಪೊಟರೆ ಇಲ್ಲೆಲ್ಲಾ ವಾಸವಾಗಿರುತ್ತವೆ.
- ಇವು ಕಚ್ಚಿದಾಗ ಅದರ ಶರೀರದಿಂದ ಬಿಡುಗಡೆಯಾಗುವ ಆಮ್ಲವು (Formic acid) ಉರಿಯನ್ನು ಉಂಟು ಮಾಡುತ್ತದೆ.
ಇರುವೆಗಳು ಬರುವುದು ಯಾವ ಸೂಚನೆ:
- ಮನೆಯ ಸುತ್ತಮುತ್ತ ಸಣ್ಣದಾದ ಕಪ್ಪು ಇರುವೆ ಬರುವುದು ಉಂಟು. ಅವು ಕಚ್ಚುತ್ತವೆ. ಮನೆ ಒಳಗೆಯೂ ಬರುತ್ತವೆ.
- ಕಾರಣ ಇಷ್ಟೇ. ಅವುಗಳ ಆಹಾರ ಸಂಗ್ರಹ ಉಗ್ರಾಣದಲ್ಲಿ ಆಹಾರದ ಕೊರತೆ ಉಂಟಾಗಾಗ ಅದನ್ನು ಹುಡುಕಿಕೊಂಡು ಬರುವುದು.
- ಎಲ್ಲೆಲ್ಲಿ ಆಹಾರ ಇರುತ್ತದೆಯೋ ಅದನ್ನು ಹುಡುಕಿಕೊಂಡು ಬರುತ್ತವೆ.
- ಹೆಚ್ಚಾಗಿ ಮಳೆಗಾಲ ಕಳೆಯುತ್ತಾ ಬಂದಾಗ, ಮಳೆಗಾಲ ಪ್ರಾರಂಭದ ಸಮಯದಲ್ಲಿ ತಮ್ಮ ಗೂಡಿನಿಂದ ಹೊರಬಂದು ಆಹಾರ ಹುಡುಕುತ್ತವೆ.
- ಆ ಸಮಯಕ್ಕೆ ಅವುಗಳಿಗೆ ಆಹಾರದ ಅವಶ್ಯಕತೆಯೂ ಇರುತ್ತದೆ.
- ಬಹುಶಃ ಎಲ್ಲಾ ಕೀಟಗಳೂ ಹೀಗೇ.
- ಉದಾ: ಮಳೆಗಾಲ ಮುಗಿಯುವ ಸಮಯದಲ್ಲಿ ಹುಲ್ಲು, ಕಳೆಗಳು ಬೆಳೆಯುವಾಗ ಚಿಟ್ಟೆಗಳ ಸಂಖ್ಯೆ ಹೆಚ್ಚಳವಾಗುತ್ತದೆ.
- ಅವು ಮೊಟ್ಟೆ ಇಡುತ್ತವೆ. ಮತ್ತೆ ಹುಳಗಳಾಗುತ್ತದೆ.
ಇರುವೆಗಳ ಆಹಾರ ಯಾವುದು:
- ಒಂದೊಂದು ಜಾತಿಯ ಇರುವೆಗಳಿಗೆ ಒಂದೊಂದು ಪ್ರಿಯ ಆಹಾರ.
- ಬಹುತೇಕ ಎಲ್ಲವೂ ಸಿಹಿಯನ್ನು ಇಚ್ಚೆಪಡುತ್ತವೆ. ಇವು ಎಲ್ಲಾ ಸಸ್ಯಗಳಲ್ಲೂ ತಮ್ಮ ವಾಸ್ತವ್ಯವನ್ನು ಹೂಡುವುದಿಲ್ಲ.
- ಯಾವ ಗಿಡ-ಮರದಲ್ಲಿ ತಮಗೆ ಆಹಾರ ಸಿಗುತ್ತದೆಯೋ ಅಲ್ಲಿ ಗೂಡು ಕಟ್ಟಿ ವಾಸಿಸುತ್ತವೆ.
- ಹೆಚ್ಚಾಗಿ ಹಿಟ್ಟುತಿಗಣೆಗಳು, ಮೈಟ್ ಗಳು, ಹೇನು, ಶಲ್ಕ ಕೀಟಗಳು, ಹುಳಗಳು, ಶಿಲೀಂದ್ರಗಳು, ಕೆಲವು ಕೀಟಗಳು ಅವುಗಳ ಪ್ರಮುಖ ಆಹಾರ.
- ಅನ್ನವನ್ನು ಹೊರಗೆ ಬಿಸಾಡಿದರೆ ಅದಕ್ಕೆ ತಕ್ಷಣ ಶಿಲೀಂದ್ರಗಳು ಸೋಂಕು ಉಂಟಾಗುತ್ತದೆ.
- ಆಗ ಇವು ಹುಡುಕಿಕೊಂಡು ಬರುತ್ತವೆ. ಕೇಸರಿ ಬಣ್ಣದ ಒಂದು ಜಾತಿಯ ಇರುವೆ ಇದೆ.
- ಇದು ಶಿಲೀಂದ್ರಗಳನ್ನು ಹೆಚ್ಚಾಗಿ ತಿನ್ನುತ್ತದೆ.
- ಯಾವುದಾದರೂ ಒಂದು ಪತಂಗ, ದುಂಬಿ, ಹುಳ ಸತ್ತು ಹೋದರೆ ಅದರ ವಾಸನೆಗೆ ಹುಡುಕಿಕೊಂಡು ಬರುತ್ತವೆ.
- ಸಾವಯವ ವಸ್ತುಗಳು ವಿಘಟನೆಯಾಗುವಾಗ ( ಕಳಿಯುವಾಗ) ಬೆಳೆಯುವ ಶಿಲೀಂದ್ರವನ್ನೇ ಆಹಾರವಾಗಿ ಬಳಸಿಕೊಂಡು ಬದುಕುವ ಒಂದು ಜಾತಿ ಇದೆ.
- ಇದು ಕಚ್ಚಿದಾಗ ವಿಪರೀತ ನೋವು ಮತ್ತು ಬಾವು ಉಂಟಾಗುತ್ತದೆ.
- ಸಾಮಾನ್ಯವಾಗಿ ಕೃಷಿ ಬೆಳೆಗಳಿಗೆ ತೊಂದರೆ ಮಾಡುವ ಇರುವೆಗಳು ಬರುವುದು ಕೀಟದ ಲಾರ್ವೆಯನ್ನು ತಿನ್ನುವುದಕ್ಕಾಗಿ.
ಇರುವೆಗಳು ಜಾಸ್ತಿಯಾದರೆ ಈ ಸಮಸ್ಯೆ ಇದೆ:
- ನೆಲದಲ್ಲಿ ಹರಿದಾಡುವ ಇರುವೆ ಬರುವುದು ಆಹಾರ ಹುಡುಕಿಕೊಂಡು.
- ಅದೇ ರೀತಿಯಲ್ಲಿ ಇತರ ಇರುವೆಗಳೂ ಸಹ.
- ಕೆಂಪು ಇರುವೆ ಕಾಟ ಜಾಸ್ತಿಯಾದರೆ ಅಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ.
- ಸಮಸ್ಯೆ ಬೇರೆ ಏನೂ ಅಲ್ಲ. ಅಲ್ಲಿ ಹಿಟ್ಟು ತಿಗಣೆ, ಅಥವಾ ಇನ್ನಿತರ ಶಲ್ಕ ಕೀಟಗಳು ಹೆಚ್ಚು ಇವೆ ಎಂದರ್ಥ.
- ಕೆಂಪು ಇರುವೆಗಳಿಗೆ ಇದು ಆಹಾರ. ಅದನ್ನು ತಿನ್ನುವ ಉದ್ದೇಶಕ್ಕೆ ಅವು ಅಲ್ಲಿ ಬರುತ್ತವೆ.
- ಯಾರ ಹೊಲದಲ್ಲಿ ಕೆಂಪು ಇರುವೆಗಳು ಹೆಚ್ಚು ಇವೆಯೋ ಅಲ್ಲಿ ಮೀಲೀ ಬಗ್ Mly bug ಅಥವಾ ಹಿಟ್ಟು ತಿಗಣೆ ಜಾಸ್ತಿ ಇದೆ ಎಂದು ತಿಳಿಯಬಹುದು.
- ಸಾಮಾನ್ಯವಾಗಿ ಹಿಟ್ಟು ತಿಗಣೆಗಳು ಕೆಲವು ನಿರ್ದಿಷ್ಟ ವರ್ಗದ ಸಸ್ಯಗಳಲ್ಲಿ ಮಾತ್ರ ಹೆಚ್ಚಾಗಿರುತ್ತವೆ.
- ಅವುಗಳು ಹಿಟ್ಟು ತಿಗಣೆ ಮತ್ತು ಶಲ್ಕ ಕೀಟಗಳಿಗೂ ಆಶ್ರಯವಾಗಿರುತ್ತವೆ.
- ಹಾಗಾಗಿ ಅಲ್ಲಿ ಕೆಂಪು ಇರುವೆಗಳು ಬರುತ್ತವೆ.
- ತೋಟಗಾರಿಕಾ ಬೆಳೆಗಳಾದ ಕೊಕ್ಕೋ , ಪೇರಳೆ, ಮಾವು, ಹಲಸು,ಪಪ್ಪಾಯಿ ಮುಂತಾದ ಮರಗಳಲ್ಲಿ ಕೆಂಪು ಇರುವೆ ಗೂಡು ಕಟ್ಟುವುದು ಜಾಸ್ತಿ.
- ಆ ಸಸ್ಯಗಳು ಹಿಟ್ಟು ತಿಗಣೆ, ಶಲ್ಕ ಕೀಟಗಳ ಆಶ್ರಯವೂ ಆಗಿರುತ್ತದೆ.
- ಸಣ್ಣ ಗಾತ್ರದ ಕಚ್ಚದ ಕೆಂಪು ಇರುವೆ ನೆಲದಲ್ಲಿ, ಕೆಲವು ಕಾಡುಗಿಡ, ತರಕಾರಿ ಗಿಡಗಳಲ್ಲಿ ಕಂಡುಬರುತ್ತದೆ.
- ಇದಕ್ಕೆ ಕಾರಣ ಸಹ ಇದುವೆ ಆಗಿರುತ್ತದೆ.
- ದಾಸವಾಳ, ತುಳಸಿ ಗಿಡಗಳಲ್ಲಿ ಕಚ್ಚದ ಕೆಂಪು ಇರುವೆ ಗಮನಿಸಿರಬಹುದು.
- ಅದು ಅಲ್ಲಿ ಇರುವ ತಿಗಣೆಯನ್ನು ತಿನ್ನಲು ಬರುವುದು.
ಇರುವೆಗಳನ್ನು ನಾಶ ಮಾಡಬೇಕಾಗಿಲ್ಲ:
- ಇವುಗಳಿಂದ ತೊಂದರೆ ಇದೆ ಎಂದು ಕೀಟನಾಶಕ ಸಿಂಪರಣೆ ಮಾಡಬೇಕಾಗಿಲ್ಲ.
- ಯಾವ ಬೆಳೆಯಲ್ಲಿ ಇರುವೆಗಳು ಬಂದು ತೊಂದರೆ ಮಾಡುತ್ತದೆಯೋ ಅಂತಹ ಬೆಳೆಗಳಲ್ಲಿ ಬೇರೆ ಕೀಟ ಇದೆ ಎಂಬುದನ್ನು ಅದು ತೋರಿಸಿಕೊಡುತ್ತದೆ.
- ಹಾಗಾಗಿ ಆ ಕೀಟದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
- ಇಲ್ಲಿ ಪೇರಳೆ ಹಣ್ಣೊಂದರ ಮೇಲೆ ಕೆಂಪು ಇರುವೆಗಳು ಸುತ್ತುತ್ತಿವೆ.
- ಕಾರಣ ಇದರಲ್ಲಿ ಹೇನು ಇದೆ. ಈ ಹೇನನ್ನು ತಿನ್ನುವುದಕ್ಕಾಗಿ ಇರುವೆಗಳು ಹೊಂಚು ಹಾಕುತ್ತಿವೆ.
- ಹಾಗೆಯೇ ತರಕಾರಿ ಬೆಳೆಗಳಲ್ಲೂ ಹೇನಿನ ಕಾಟ ಹೆಚ್ಚಾದರೆ ಅಲ್ಲಿ ಇರುವೆಗಳು ಬರುತ್ತವೆ. (secondary consumers)
- ಹಾಗಾಗಿ ಜೈವಿಕ ವಿಧಾನ ಅಥವಾ ಮುನ್ನೆಚ್ಚರಿಕಾ ವಿಧಾನದಲ್ಲಿ ಹೇನಿನ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡದ್ದೇ ಆದರೆ ಇರುವೆ ಅಲ್ಲಿಂದ ಪಲಾಯನ ಮಾಡುತ್ತದೆ.
ಇರುವೆಗಳ ನಿಯಂತ್ರಣ:
- ರಾಸಾಯನಿಕವಾಗಿ ಇರುವೆ ನಿಯಂತ್ರಣ ಮಾಡಬಹುದು.
- ಆದರೆ ಅವು ಉಪಟಳ ನೀಡುವಂತಿದ್ದರೆ ಮಾತ್ರ ತಕ್ಷಣದ ಪರಿಹಾರಕ್ಕೆ ಇದನ್ನು ಮಾಡಬಹುದು.
- ಯಾವುದೇ ತೊಂದರೆ ಇಲ್ಲವೆಂದಾದರೆ ರಾಸಾಯನಿಕ ನಿಯಂತ್ರಣ ಬೇಡ.
- ಇವುಗಳು ಒಂದು ರೀತಿಯಲ್ಲಿ ರೈತನ ಮಿತ್ರರೂ ಹೌದು.
- ಈ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ಇದನ್ನು ಪರಭಕ್ಷಕ ಎಂದು ಹೇಳಬಹುದು.
- ಕೆಲವೊಂದು ಸಂಧರ್ಭಗಳಲ್ಲಿ ಇವುಗಳ ಕಾಲಿನ ಮೂಲಕ ಕೀಟಗಳ ಮೊಟ್ಟೆಗಳು ಪ್ರಸಾರವಾಗುವುದೂ ಇದೆ.
- ಇವುಗಳು ಸಂಚರಿಸುವ ದಾರಿಗೆ ನೀರು ಚೆಲ್ಲಿದರೆ ಅವು ದೂರವಾಗುತ್ತದೆ.
- ವಿನೆಗರ್ ದ್ರಾವಣವನ್ನು ಚೆಲ್ಲಿದರೆ ಇರುವೆ ದೂರವಾಗುತ್ತದೆ.
- ತರಕಾರಿ ಬೆಳೆಗಳಿಗೆ ವಿನೆಗರ್ ದ್ರಾವಣವನ್ನು ಸಿಂಪಡಿಸಿದರೆ ಇರುವೆ ಕಾಟ ಕಡಿಮೆಯಾಗುತ್ತದೆ.
- ಅಧಿಕ ಒತ್ತಡದದಲ್ಲಿ ನೀರು ಬಿಟ್ಟಾಗ ಅವುಗಳ ಆಹಾರಗಳಾದ ಹೇನು, ತಿಗಣೆ ತೊಳೆದು ಹೋಗುತ್ತದೆ.
- ಅಗ ಇರುವೆ ದೂರವಾಗುತ್ತದೆ. ಇವು ಮಣ್ಣಿನಲ್ಲಿ ಇದ್ದರೆ ಕೆಲವು ಕೀಟಗಳನ್ನು , ಹುಳಗಳನ್ನು ಸಾಯಿಸುತ್ತವೆ.
- ಮಣ್ಣನ್ನು ಸಡಿಲಮಾಡಿಕೊಂಡುತ್ತದೆ. ಹಾವುಗಳು ದೂರವಾಗುತ್ತದೆ ಎನ್ನುತ್ತಾರೆ.
- ಬೇರು ಹುಳ ಇದ್ದ ಕಡೆ ಕಬ್ಬಿನ ರಸ ತೆಗೆದ ಸಿಪ್ಪೆಯನ್ನು ಹಾಕಿ, ಅದಕ್ಕೆ ಇರುವೆಗಳು ಬಂದು ಬೇರು ಹುಳ ನಾಶ ಮಾಡುತ್ತವೆ ಎಂಬುದಾಗಿ ಕೆಲವು ರೈತರು ಹೇಳುತ್ತಾರೆ.
- ಒಟ್ಟಿನಲ್ಲಿ ಇದನ್ನು ವಿಷ ರಾಸಾಯನಿಕ ಬಳಸಿ ಕೊಲ್ಲುವುದಕ್ಕಿಂತ ಸುರಕ್ಷಿತ ವಿಧಾನದಲ್ಲಿ ದೂರ ಮಾಡುವುದು ಉತ್ತಮ.
ನಮ್ಮಲ್ಲಿ ಹೆಚ್ಚಿನ ರೈತರು ಬೆಳೆಗಳಿಗೆ ಇರುವೆ ಕಾಟ ಎನ್ನುತ್ತಾರೆ. ಇದು ತಪ್ಪು ತಿಳುವಳಿಕೆ. ಇವು ಬರುವುದು ಬೇರೆ ಒಂದು ಕೀಟದ ಕಾರಣದಿಂದ. ಇನ್ನೊಂದು ಕೀಟ ಇದೆ ಎಂಬುದರ ಸೂಚನೆಯನ್ನು ಇರುವೆಗಳು ತಿಳಿಸುವ ಒಂದು ಜೀವಿಗಳು.
ಇರುವೆಗಳು ಬರುವುದು ಸಿಹಿಗೆ ಮಾತ್ರವಲ್ಲ. ಕೆಲವು ನಿರ್ದಿಷ್ಟ ಆಹಾರ ಹುಡುಕಿಕೊಂಡು ಬರುತ್ತವೆ. ಇವುಗಳನ್ನು ಅವುಗಳ ಪಾಲಿಗೆ ಇರುವಂತೆ ಬಿಟ್ಟರೆ ಒಂದೆರಡು ದಿನದಲ್ಲಿ ಅದು ದೂರವಾಗುತ್ತದೆ. ತಮಗೆ ಬೇಕಾದಷ್ಟು ಆಹಾರ ಲಭ್ಯವಾದಾಗ ನಂತರ ಅವು ಗೂಡು ಸೇರಿಕೊಳ್ಳುತ್ತವೆ.