ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಅಡಿಕೆ ಮರಗಳು ಗಾಳಿಗೆ, ರೋಗಕ್ಕೆ ತುತ್ತಾಗಿ ಸತ್ತರೆ ಅಂತಹ ಮರಗಳನ್ನು ತಕ್ಷಣ ಕಡಿದು ಸೂಕ್ತ ವಿಲೇವಾರಿ ಮಾಡಬೇಕು. ಈ ವರ್ಷ ಶಿರ ಕೊಳೆ ಬಂದು, ಗಾಳಿಗೆ ಭಾರೀ ಪ್ರಮಾಣದಲ್ಲಿ ಮರಗಳು ಅರ್ಧರ್ಧ ತುಂಡಾಗಿ ಬಿದ್ದಿದೆ. ರೈತರು ಅದನ್ನು ಹಾಗೆಯೇ ಬಿಡುತ್ತಾರೆ. ಅದನ್ನು ಕಡಿಯದೆ ಹಾಗೆಯೇ ಬಿಟ್ಟರೆ ಏನಾಗುತ್ತದೆ ಈ ಬಗ್ಗೆ  ವಿಸ್ತೃತ ಲೇಖನ ಇದು.

ಸತ್ತ ಮರಮಟ್ಟು,ಮನುಷ್ಯ , ಪ್ರಾಣಿ ಯಾವುದಿದ್ದರೂ ಅದನ್ನು ತಕ್ಷಣ ಸೂಕ್ತ ವಿಲೇವಾರಿ ಮಾಡಬೇಕು. ಅದನ್ನು ಹಾಗೆಯೇ ಉಳಿಸಿಕೊಂಡರೆ ಅದರಿಂದ ಜೀವ ಇರುವಂತದ್ದಕ್ಕೆ ತೊಂದರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕೃಷಿ ಆಸಕ್ತಿ ಹೆಚ್ಚಾಗಿದೆ. ಆದರೆ ಕೆಲವು ವಿಚಾರಗಳಲ್ಲಿ ಸ್ವಲ್ಪ ಉದಾಸೀನ.  ಹಾಗೆಯೇ ಮಾಹಿತಿಯ ಕೊರತೆಯೂ. ಹಿಂದೆ ನಮ್ಮ ಹಿರಿಯರು ಒಂದು ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಅದರಿಂದ ಪಕ್ಕಾಸು, ನೀರು ಹಾಯಿಸುವ ದಂಬೆ ಮಾಡುತ್ತಿದರು. ಅನುಪಯುಕ್ತ ವಸ್ತುಗಳನ್ನು ಉರುವಲಿಗೆ  ಬಳಕೆ ಮಾಡುತ್ತಿದ್ದರು.  ಒಂದು ಬೈನೆ  ಮರ ಸಾಯುತ್ತದೆ ಎಂದು ಖಾತ್ರಿಯಾದಾಗ ಅದರ ತಿರುಳ್ಳಿನ ಹುಡಿ ತೆಗೆದು, ಕಾಂಡವನ್ನು ದಂಬೆಯಾಗಿ ನೀರು ಹಾಯಿಸಲು ಬಳಕೆ  ಮಾಡುತ್ತಿದ್ದರು. ಅಡಿಕೆ ಮರ ಸಾಯುವುದನ್ನೇ ಕಾದು ಕುಳಿತು ಅದನ್ನು ಕಡಿದು, ಮನೆ  ಕೊಟ್ಟಿಗೆಗೆ ಬೇಕಾದ ಮರಮಟ್ಟಿಗಾಗಿ ಬಳಕೆ ಮಾಡುತ್ತಿದ್ದರು. ಆಗೆಲ್ಲಾ ಉರುವಲು, ಮರಮಟ್ಟುಗಳಿಗೆ ಇವೆಲ್ಲಾ ಅಗತ್ಯ ವಸ್ತುಗಳಾಗಿದ್ದವು. ಬೇಲಿ ಕಟ್ಟಲೂ ಅಡಿಕೆ ಮರದ ಸಲಾಖೆಗಳನ್ನು  ಬಳಸುತ್ತಿದ್ದರು. ಈಗ ಉರುವಲಿನ ಆಗತ್ಯವೂ ಇಲ್ಲ. ಉಳಿದ ಯಾವ ಅಗತ್ಯಗಳೂ ಇಲ್ಲ. ಜನರಿಗೆ ಇದೆಲ್ಲಾ ಮಾಡುವ ತಿಳುವಳಿಕೆಯೂ ಇಲ್ಲ. ಒಂದು ತೆಂಗಿನ ಮರ ಯಾವುದೋ ಕಾರಣಕ್ಕೆ ಸತ್ತರೆ ಅದು ಅಲ್ಲೇ ಒಣಗಿ ಲಡ್ದಾಗಿ ಮಣ್ಣಾಗಬೇಕು.  ಹಾಗೆಯೇ ಅಡಿಕೆ ಮರ, ಬೈನೆ ಮರ ತಾಳೆ ಮರ ಎಲ್ಲವೂ. ನಮ್ಮ ಈ ಕ್ರಮ ಪ್ರಾರಂಭದಲ್ಲೇ ಹೇಳಿದಂತೆ ಸತ್ತ ವಸ್ತುವಿನ ಶಿಥಿಲವಾಗುವ ಕ್ರಿಯೆಯಲ್ಲಿ ಉಳಿದ ಜೀವ ಇರುವವುಗಳಿಗೆ ತೊಂದರೆ ಉಂಟುಮಾಡುತ್ತದೆ. ಸಣ್ಣ ಉದಸೀನ ಅಥವಾ ನಿರ್ಲಕ್ಷ್ಯ ಮತ್ತೆ ಇನ್ನೋಂದು ನಷ್ಟಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ಮರಗಳು,ಅಡಿಕೆ ಮರಗಳು ಅತ್ಯಧಿಕ ಸಂಖ್ಯೆಯಲ್ಲಿ ಕೆಂಪು ಮೂತಿ ಹುಳದಂತಹ ಕೀಟದ ತೊಂದರೆಗೆ ಸಿಲುಕಿ ಸಾಯುವುದು ಇದೇ ನಮ್ಮ ಉದಾಸೀನ  ಪ್ರವೃತ್ತಿಯಿಂದ ಎನ್ನಬಹುದು.

  • ಸತ್ತು ಕೆಲವು ಸಮಯವಾದ ಅಡಿಕೆ ಮರ, ತೆಂಗಿನ ಮರ, ಬೈನೆ ಮರ ,ಹಗೆಯೇ ತಾಳೆ ಮರಗಳ  ಕಾಂಡವನ್ನು ಒಮ್ಮೆ ಗಮನಿಸಿ.
  • ಅದರ ಒಳಗೆ ನೂರಾರು ಸಂಖ್ಯೆಯಲ್ಲಿ ಕೆಂಪು ಮೂತಿ ದುಂಬಿಗಳು ಇರುತ್ತವೆ.
  • ಅಲ್ಲಿಂದ ಅವು ಕಾಲ್ಕಿತ್ತಿದ್ದರೆ, ಅಂದರೆ ಮರ ತುಂಬಾ ಶಿಥಿಲವಾಗಿದ್ದರೆ ಅಲ್ಲಿ ಅದರ ಪ್ಯೂಪೆ,
  • ಮತ್ತು ರಸ ಹೀರಿ ಹಿಪ್ಪೆಯಾದ ಭಾಗಗಳು ಕಾಣಿಸುತ್ತದೆ.
  • ಹಾಗೆಯೇ ಅಲ್ಲಲ್ಲಿ ತೂತುಗಳು ಕಾಣಸಿಗುತ್ತದೆ.

ಸತ್ತ ಅಡಿಕೆ ಮರ ಕಡಿಯದಿದ್ದರೆ ಏನಾಗುತ್ತದೆ?

  • ಅಡಿಕೆ ಮರವಾಗಲೀ.ತೆಂಗಿನ ಮರವಾಗಲೀ ಬೈನೆ, ತಾಳೆಮರಗಳು ವಯೋ ಸಹಜವಾಗಿ ಅಥವಾ ಸೀಡಿಲು ಬಡಿದೋ, ಗಾಳಿಗೆ ತುಂಡಾಗಿಯೋ  ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕಡಿಯಬೇಕಾಗಿ ಬರುತ್ತದೆ.
  • ಅದನ್ನು ತಕ್ಷಣ ವಿಲೇವಾರಿ ಮಾಡದೆ ಇದ್ದರೆ ಹಸಿ ಮರಗಳಲ್ಲಿ ಉತ್ಪಾದನೆಯಾಗುವ  ಒಂದು ರಸ ವಾತಾವರಣಕ್ಕೆ ಒಂದು ದುರ್ವಾಸನೆಯನ್ನು ಹೊರಸೂಸುತ್ತದೆ.
  • ಗಾಳಿ ಹೊಡೆತಕ್ಕೆ ಸಿಕ್ಕಿ ಅರ್ಧ ತುಂಡಾಗಿ  ಉಳಿದರ್ಧ ಭಾಗ ಹಾಗೆ ಇದ್ದರೆ ಅಲ್ಲಿ ಬೇರಿನ ಮೂಲಕ ಆಹಾರ ಮತ್ತು ನೀರು ಸರಬರಾಜು ಆಗುತ್ತಲೇ ಇರುತ್ತದೆ.
  • ಎಲೆಗಳು ಇದ್ದರೆ ಅದು ಉಪಯೋಗವಾಗುತ್ತಿತ್ತು.
  • ಅದು ಇಲ್ಲದ ಕಾರಣ ಅದು  ಕಾಂಡದ ಭಾಗದಿಂದ ಹೊರ ಸ್ರವಿಸಲಾರಂಭಿಸುತ್ತದೆ.
  • ಹೀಗೆ ಸ್ರವಿಸಿದ  ರಸವು ಕೊಳೆತ  ವಾಸನೆಯನ್ನು ಹೊರ ಸೂಸುತ್ತದೆ. 
  • ಸಿಡಿಲು ಬಡಿದ ತೆಂಗಿನ ಮರದ ಗರಿಗಳು ಒಣಗುತ್ತದೆ,
  • ಆಗ ಬೇರಿನ ಮೂಲಕ  ನಿರಂತರವಾಗಿ ಸರಬರಾಜು ಆಗುವ ಆಹಾರ ನೀರು ಉಪಯೋಗ ಆಗದೆ ಅದು ಕಾಂಡದ ನಾಳಗಳ ಮೂಲಕ ಸ್ರವಿಸಲಾರಂಭಿಸುತ್ತದೆ.
  • ಆ ವಾಸನೆಗೆ  ಕೊಳೆತಿನಿಗಳನ್ನು ಬಯಸುವ ಕೀಟಗಳಾದ  ಕಾಂಡ ಕೊರಕ, ಕೆಲವು ಹಾನಿಕಾರಕ ದುಂಬಿಗಳು, ಸೊಳ್ಳೆಗಳು ಬರುತ್ತವೆ.
  • ಸೊಳ್ಳೆಗಳು ಅಲ್ಲಿನ ರೋಗಕಾರಕಗಳನ್ನು ಪಸರಿಸುತ್ತವೆ.
  • ಇವುಗಳ ವಂಶಾಭಿವೃದ್ದಿಗೂ ಅದು ಆಶ್ರಯ ತಾಣವೂ ಆಗುತ್ತದೆ.
  • ಹಾನಿಕಾರಕ ಕೀಟಗಳ ವಂಶಾಭಿವೃದ್ದಿ ಆದರೆ ಆ ಮರ ಸಂಪೂಣವಾಗಿ ಒಣಗಿ ರಸ ಇಲ್ಲದಾದಾಗ ಅವು ಬೇರೆ ಮರವನ್ನು ಆಶ್ರಯಿಸಬೇಕಾಗುತ್ತವೆ.
  • ಬೇರೆ ಆರೋಗ್ಯವಂತ ಮರವನ್ನು ಅರಸಿ ಅವು ಸಂತಾನಾಭಿವೃದ್ದಿ ಮಾಡುತ್ತವೆ.
  • ಹೀಗೆ ಒಂದು ಮರದ ಮೂಲಕ  ಪ್ರಾರಂಭವಾದ  ಈ ಸಮಸ್ಯೆ ಬೇರೆ ಮರಗಳನ್ನು ಬಲಿ ತೆಗೆದುಕೊಳ್ಳುತ್ತದೆ.
ಹಸಿ ಮರಗಳಲ್ಲಿ ಉತ್ಪಾದನೆಯಾಗುವ  ಒಂದು ರಸ

ರೋಗಗಳೂ ಹೆಚ್ಚಾಗುತ್ತದೆ:

  • ಅಡಿಕೆ ಮರಗಳು ಹೆಚ್ಚಾಗಿ ಗಾಳಿಗೆ ಬೀಳುತ್ತವೆ. ಈ ವರ್ಷದಂತಹ ಹವಾಮಾನದಲ್ಲಿ  ಶಿರ ಕೊಳೆ (Crown rot) ರೋಗ ಬಂದೂ ಸತ್ತದ್ದಿದೆ. ಅಣಬೆ ರೋಗ ಬಂದು ಸಹ ಸಾಯುತ್ತದೆ.
  • ಮಿಂಚು ಹೊಡೆದು ಸಾಯುತ್ತದೆ. ಈ ಎಲ್ಲಾ ಕಾರಣಗಳಿಂದ ಸತ್ತಾಗಲೂ ಆ ಮರದ ಶಿಥಿಲ ಕ್ರಿಯೆಯಲ್ಲಿ ಕೆಲವು ರೋಗ ಕಾರಕಗಳು (ಶಿಲೀಂದ್ರಗಳು) ಉತ್ಪಾದನೆಯಾಗುತ್ತದೆ.
  • ಇವು ಆರೋಗ್ಯವಂತ ಮರಗಳಿಗೆ ಹರಡುತ್ತದೆ.
  • ಒಂದು ಮರ ಸತ್ತರೆ ಮತ್ತೆ ಎರಡು ಮೂರು ಅದಕ್ಕೆ ಸೇರ್ಪಡೆಯಾಗುತ್ತದೆ.  
  • ಅದು ವರ್ಷವೂ ಮುಂದುವರಿಯುತ್ತಿರುತ್ತದೆ.
  • ಸಾಮಾನ್ಯವಾಗಿ ಶಿರ ಕೊಳೆ ಬಂದ ವರ್ಷ ಆಗಾಗ ಅಲ್ಲಲ್ಲಿ ಮರಗಳು ಸಾಯುತ್ತಾ ಇರುತ್ತದೆ.
  • ಅಣಬೆ ರೋಗ ಬಂದಾಗ  ಅದು  ತುಂಬಾ ವರ್ಷದ ತನಕ ಒಂದು ಎರಡು ನಾಲ್ಕು ಹೀಗೆಲ್ಲಾ ಸಾಯುತ್ತಲೇ ಇರುತ್ತದೆ.
  • ಕಾರಣ ಮಣ್ಣಿನಲ್ಲಿ ಆ ಶಿಲೀಂದ್ರ ಬೀಜಾಣುಗಳು ಸೇರಿಕೊಂಡಿರುತ್ತವೆ.
ಕೊಳೆ ತಿನಿಗಳನ್ನು ಬಯಸುವ ಕೀಟಗಳನ್ನು ಆಕರ್ಷಿಸುವ ದ್ರವ ಸ್ರಾವ

ಕಡಿದ ಮೇಲೆ ಏನು ಮಾಡಬೇಕು?

  • ಮರಗಳನ್ನು ಕಡಿಯುವುದೇನೋ ಒಳ್ಳೆಯದು. ಕಡಿದ ಮರಗಳನ್ನು ಸೂಕ್ತ ವಿಲೇವಾರಿ ಮಾಡದಿದ್ದರೆ ಅದರಿಂದಲೂ  ಸಮಸ್ಯೆಗಳು ಹೆಚ್ಚಾಗುತ್ತದೆ.
  • ಹಸಿ ಮರಗಳನ್ನು ಕಡಿದು ಅಲ್ಲೇ ಬುಡದಲ್ಲಿ  ಹಾಕುವುದಲ್ಲ.
  • ಅದನ್ನು ಸಣ್ಣ 1 ಅಡಿಯ ತುಂಡುಗಳನ್ನಾಗಿ ಮಾಡಿ ಒಂದು ಕಡೆ  ನೇರವಾಗಿ ಇಡಬೇಕು.
  • ಆ  ತುಂಡುಗಳನ್ನು ಸುಡಬೇಕು ಅಥವಾ ನೇರವಾಗಿ ಇಟ್ಟ ತುಂಡುಗಳ ಮೇಲ್ಭಾಗಕ್ಕೆ ಕ್ಲೋರೋ ಫೆರಿಫೋನ್ ನಂತಹ ಕೀಟನಾಶಕವನ್ನು  ಹೊಯ್ಯಬೇಕು.
  • ಆಗ ಆ ರಸದ ವಾಸನೆಗೆ ಅಲ್ಲಿಗೆ ಬಂದ ಕೀಟಗಳು ಅದರ ರಸ ಹೀರಿದರೆ ಸತ್ತು ಹೋಗುತ್ತದೆ.
  • ತುಂಬಾ ಬಿಸಿಲು ಇರುವ ದಿನಗಳಲ್ಲಿ  ಸಣ್ಣ ತುಂಡು ಮಾಡಿ  ತೆರೆದ ಜಾಗದಲ್ಲಿ ಇಟ್ಟರೆ ಒಂದೆರಡು ದಿನದಲ್ಲಿ ತುಂಡುಗಳು ಒಣಗಿ ಹೋಗುತ್ತದೆ. 
  • ಒಟ್ಟಿನಲ್ಲಿ ಸತ್ತ ಮರದ ಭಾಗಗಳಿಂದ  ಅದರ ರಸ ಸ್ರಾವ ಆಗದಂತೆ ನೋಡಿಕೊಳ್ಳಬೇಕು. 
  • ತೆಂಗಿನ ಮರವನ್ನೂ ಸಹ ಅನಿವಾರ್ಯವಾಗಿ ಕಡಿಯಬೇಕಾಗಿ ಬಂದರೆ ಅದನ್ನೂ ಹೀಗೆಯೇ ತುಂಡು ಮಾಡಿ ಕೀಟನಾಶಕದ ಉಪಚಾರ ಮಾಡಬೇಕು.
  • ಇಲ್ಲವೇ ತಕ್ಷಣ ಒಣಗುವಂತೆ  ಮಾಡಬೇಕು.
  • ಮಿಂಚು ಬಡಿದ ಮರವನ್ನೂ ತಕ್ಷಣ ಕಡಿಯಬೇಕು.
  • ಸುಳಿ ಕೊಳೆ ರೋಗ ಬಂದ ಮರಗಳಲ್ಲಿ ಎಲ್ಲಾ ಗರಿ ಒಣಗಿ ಉದುರಿದ ನಂತರ ಮರವನ್ನು ಉಳಿಸಿಕೊಳ್ಳಬಾರದು.
  • ಅದನ್ನು ಕಡಿದು ವಿಲೇವಾರಿ ಮಾಡಬೇಕು.
  • ಹಾಗೆ ಬಿಟ್ಟರೆ ಅದಕ್ಕೆ ಕೆಂಪು ಮೂತಿ ದುಂಬಿ ಪ್ರವೇಶವಾಗುತ್ತದೆ.

ಅಡಿಕೆ- ತೆಂಗು ಮುಂತಾದ ತಾಳೆ ಜಾತಿಯ ಮರಗಳು ಮಾತ್ರವಲ್ಲ. ಎಲ್ಲಾ ತರಹದ ಸತ್ತ ಮರಮಟ್ಟುಗಳನ್ನು ಕಾರಣ ತಿಳಿದು  ತಕ್ಷಣ ಕಡಿದು ವಿಲೇವಾರಿ ಮಾಡಲೇಬೇಕು. ಈ ವರ್ಷದ ಮಳೆಯ ವಾತಾವರಣಕ್ಕೆ  ಹೆಚ್ಚಿನ ಕಡೆ ಮಾವು ಹಲಸು,ಗೇರು, ಬಟರ್ ಪ್ರೂಟ್ ಮುಂತಾದ ಮರಗಳಿಗೆ ಕಾಂಡ ಕೊರಕದ ಹಾವಳಿ ಹೆಚ್ಚಾಗಿದೆ. ತಿರುಳು ರಹಿತ ಮರಗಳಿಗೆ ಕಾಂಡ ಕೊರಕದ ತೊಂದರೆ ಹೆಚ್ಚು. ಮರಗಳು  ಕಾಂಡದಲ್ಲಿ  ತೂತು ಕೊರೆಸಿಕೊಂಡು ತತ್ತಿವೆ. ಇಂತಹ ಮರಗಳನ್ನು ಕಡಿದು ವಿಲೇವಾರಿ ಮಾಡದೆ ಇದ್ದರೆ ಅಲ್ಲಿಗೆ ಬಂದ ಕಾಂಡ ಕೊರಕದ ಹುಳ, ಮರ ಸಂಪೂರ್ಣ ಒಣಗಿ ಅದಕ್ಕೆ ರಸ ಹೀರಲು ರಸವೇ ಇಲ್ಲದಂತಹ ಸ್ಥಿತಿ ಬಂದಾಗ ದುಂಬಿಗಳಾಗಿ ಬೇರೆ  ಮರಗಳಿಗೆ ತೊಂದರೆ ಮಾಡುತ್ತದೆ. ಹಾಗಾಗಿ ಅದನ್ನು ತಕ್ಷಣ ಕಡಿದು ಸೂಕ್ತ ವಿಲೇವಾರಿ ಮಾಡಬೇಕು. ಯಾವಾಗಲೂ ಸತ್ತ ವರಮಟ್ಟುಗಳನ್ನು ಸುಡುವುದಕ್ಕಿಂತ ಅದನ್ನು ಒಣಗಿಸಿದರೆ ಯಾವ ತೊಂದರೆಯೂ ಇಲ್ಲ. ಅದು ನಂತರ ಲಡ್ದಾಗಿ ಗೊಬ್ಬರವಾಗುತ್ತದೆ. 

 .

Leave a Reply

Your email address will not be published. Required fields are marked *

error: Content is protected !!