ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಬೆಳೆಗೆ ಈಗ ಬರುವ ರೋಗ ಮಾರಣಾಂತಿಕವಾಗಿದ್ದು, ಇದನ್ನು ಸಹ ಗುಣಪಡಿಸಲು ಸಾಧ್ಯವಿದೆ. ರೋಗ ಪ್ರಾರಂಭವಾಗುವ ಹಂತದಲ್ಲಿ ಇದನ್ನು ಗುರುತಿಸಿ, ಉಪಚಾರಮಾಡುವುದು ಪ್ರಾಮುಖ್ಯ. ಮಳೆ ಬರುತ್ತಿದೆ ಎಂದು ಮನೆಯಲ್ಲೇ ಕುಳಿತರೆ  ಅಥವಾ ತೋಟಕ್ಕೆ ಹೋದಾಗ ಬಳ್ಳಿಯ ಸ್ಥಿತಿಗತಿಯನ್ನು ಕೂಲಂಕುಶವಾಗಿ ಗಮನಿಸದೇ ಇದ್ದರೆ  ರೋಗ ಸೋಂಕು ತಗಲಿ ಅದು ಬಹಳ ತ್ವರಿತವಾಗಿ ಉಲ್ಬಣಿಸಿ ಬಳ್ಳಿ ಸಾಯುತ್ತದೆ.  ಈಗಕರಿಮೆಣಸು ಬೆಳೆಗಾರರಿಗೆ ಇರುವ ಪ್ರಾಮುಖ್ಯ ಕೆಲಸ ತೋಟಕ್ಕೆ ಹೋದಾಗ ಬಳ್ಳಿಯ ಆರೋಗ್ಯವನ್ನು ಗಮನಿಸುತ್ತಾ ಇರುವುದು.

ಕರಿಮೆಣಸು ಬೆಳೆಗೆ ಮಳೆಗಾಲ ಕಷ್ಟದ ಕಾಲ. ಈ ಸಮಯದಲ್ಲಿ ಫೈಟೋಪ್ಥೆರಾ ಕ್ಯಾಪ್ಸಿಸಿ Phytophthora capsici ಎಂಬ ಶಿಲೀಂದ್ರ ಮೆಣಸಿನ ಬಳ್ಳಿಗೆ ಬಾದಿಸಿ ಬುಡ ಭಾಗವನ್ನೇ ಕೊಳೆಯುವಂತೆ ಮಾಡುತ್ತದೆ. ಇದನ್ನು ಶೀಘ್ರ ಸೊರಗು  ರೋಗ  (Quick wilt) ಎಂದು ಕರೆಯುತ್ತಾರೆ. ಮಳೆ ಚೆನ್ನಾಗಿ ಬರುತ್ತಿರುವ ಕಾರಣ ಎಲೆಗಳು ಬಾಡುವುದೂ ಗೊತ್ತಾಗದೆ ರೋಗ ಹೆಚ್ಚಿನ ಸಮಯದಲ್ಲಿ ನಾವು ಗಮನಿಸುವಾಗ ಮಿತಿ ಮೀರಿರುತ್ತದೆ. ಆದರೆ ರೋಗ ಸೋಂಕು ತಗಲಿ ಸ್ವಲ್ಪ ದಿನ ಆಗಿರುತ್ತದೆ. ರೋಗ ತಗಲಿದ ಪ್ರಾರಂಭಿಕ ಲಕ್ಷಣ ಗೊತ್ತಿದ್ದರೆ, ಅದಕ್ಕೆ ಉಪಚಾರ ಮಾಡಿ ಗುಣಪಡಿಸಬಹುದು. ಅಂತಹ ಬಳ್ಳಿಯಲ್ಲಿ ಹಾಲಿ ವರ್ಷದಲ್ಲಿ ಫಸಲು ನಷ್ಟವಾದರೂ ಮುಂದಿನ ವರ್ಷ ಚೆನ್ನಾಗಿ ಫಲ ಕೊಡಬಲ್ಲುದು.   

ರೋಗದ ಪ್ರಾರಂಭಿಕ ಲಕ್ಷಣಗಳು:

ರೋಗದ ಪ್ರಾರಂಭಿಕ ಲಕ್ಷಣ

ಈಗ ಬಳ್ಳಿಯಲ್ಲಿ ಹೂ ಕರೆ  ಬಂದಿರುತ್ತದೆ. ಎಲೆಗಳ ಸಂಖ್ಯೆಯೂ ಹೆಚ್ಚು ಇರುತ್ತದೆ. ಎಲೆಗಳು ಹಚ್ಚ ಹಸುರಾಗಿರುತ್ತದೆ.  ಆರೋಗ್ಯವಂತ ಬಳ್ಳಿಯ ಎಲೆ ಲಕ್ಷಣ  ಹೀಗೆ ಎಂಬುದು ಪ್ರತೀಯೊಬ್ಬ  ಬೆಳೆಗಾರನಿಗೂ ತಿಳಿದಿರಬೇಕು. (ಚಿತ್ರವನ್ನು  ಗಮನಿಸಿ). ಆ ರೀತಿಯ ಎಲೆಗಳ ಲಕ್ಷಣದಲ್ಲಿ ತುಸು ಬದಲಾವಣೆ ಉಂಟಾದರೆ ಅದನ್ನು ದೂರದಿಂದ ನೋಡಿಯೂ ಗಮನಿಸಬಹುದು. ಅಂತಹ ಬಳ್ಳಿಯ ಬುಡಕ್ಕೆ ಹೋಗಿ ಸೂಕ್ಷ್ಮವಾಗಿ ನೋಡಿ. ಅಲ್ಲಿ  ಕರೆಗಳು ಉದುರಿರಲೂ ಬಹುದು. ಕರೆಗಳ ಜೊತೆಗೆ ಎಲೆಗಳೂ ಉದುರಿರಬಹುದು. ಎಲೆಗಳಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕೆಗಳು ಕಾಣಿಸಬಹುದು. ಎಳೆ ಎಲೆಗಳು ಬಾಡಿದ ತರಹ ಕಾಣಿಸಬಹುದು. ಎಲೆಗಳು ಬೆರಳಿನಿಂದ ಸಿಡಿದಾಗ ತೊಟ್ಟು ಕಳಚಿ ಉದುರಬಹುದು.  ಇಂತಹ ಲಕ್ಷಣಗಳು ಕಂಡುಬಂದರೆ ಅದಕ್ಕೆ  ರೋಗ ತಗಲಿದೆ ಎಂದರ್ಥ. ಪ್ರಾರಂಭಿಕ ಹಂತದಲ್ಲಿ ಕರೆಗಳು ಉದುರಲಾರಂಭಿಸುತ್ತದೆ. ಎಲೆಗಳು ದಟ್ಟ ಹಸುರು ಬಣ್ಣದ ಬದಲಾಗಿ  ತಿಳಿ ಹಸುರು ಬಣ್ಣಕ್ಕೆ ತಿರುಗಿರುತ್ತದೆ. ಎರಡನೇ ಹಂತದಲ್ಲಿ ಎಲೆಗಳು ಉದುರಲಾರಂಭಿಸುತ್ತದೆ. ಅಂತಿಮ ಹಂತದಲ್ಲಿ ಎಲೆಗಳೆಲ್ಲಾ ಉದುರಿ ಕವಲು ಗೆಲ್ಲುಗಳು ಒಣಗಿ ಉದುರಿರುತ್ತವೆ. ಮುಖ್ಯ ಬಳ್ಳಿ ಮರಕ್ಕೆ ಅಂಟಿಕೊಂಡಿರುತ್ತದೆ. ಆದರೆ ಅದರ ಅಹಾರ ಸಾಗಾಣಿಕಾ  ನಾಳಗಳು  ಸತ್ತು ಹೋಗಿರುತ್ತದೆ.

ರೋಗದ ಪ್ರಾರಂಭಿಕ ಲಕ್ಷಣ

ಬಾಧಿಸುವುದು ಎಲೆಗೆ ಅಲ್ಲ. ಬುಡಕ್ಕೆ:

ಶಿಘ್ರ ಸೊರಗು  ರೋಗ ಬಾಧಿಸುವುದು ನಾವೆಲ್ಲಾ ಹೊರ ಲಕ್ಷಣದಲ್ಲಿ ಕಾನುವಂತೆ ಎಲೆಗಳಿಗೆ ಅಲ್ಲ. ಅದು ಬುಡಭಾಗಕ್ಕೆ. ಬುಡ ಭಾಗದ ಬೇರು ವಲಯಕ್ಕೆ ರೋಗ ಕಾರಕ ಶಿಲೀಂದ್ರ ಬಾಧಿಸುತ್ತದೆ. ನೀರು ಹೆಚ್ಚಾದಾಗ ಈ ಶಿಲೀಂದ್ರ ಬಾದಿಸುತ್ತದೆ ಎನ್ನುತ್ತಾರೆ. ಮಣ್ಣಿನಲ್ಲಿ ತೇವ ಅಂಶ ಹೆಚ್ಚಾಗಿ ಅದು ಸಮರ್ಪಕವಾಗಿ ಬಸಿಯದೇ ಇದ್ದರೆ  ಅಲ್ಲಿ  ಮಣ್ಣು ಹೆಪ್ಪುಗಟ್ಟಿದ ತರಹ ಅಗಿ ಬೇರುಗಳಿಗೆ ಉಸಿರಾಟಕ್ಕೆ ತೊಂದರೆ ಆದ ಕಡೆ ರೋಗ ಸೋಂಕು ತಗಲುತ್ತದೆ.  ಬಳ್ಳಿಯ ಬುಡ ಭಾಗದ ಸೂಕ್ಷ್ಮವಾದ ಕುಸುರಿ ಬೇರುಗಳು ( harry roots)  ಮೊದಲು  ಕೊಳೆತು ಹೋಗುತ್ತದೆ. ಆಗ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸುತ್ತದೆ. ಕ್ರಮೇಣ  ಎಲ್ಲಾ ಬೇರುಗಳೂ ಕೊಳೆಯುತ್ತಾ ಬರುತ್ತದೆ. ಬೇರು ಕೊಳೆತ ತರುವಾಯ ಮರಕ್ಕೆ  ಹಬ್ಬಿರುವ ಮುಖ್ಯ ಬಳ್ಳಿಯ ಬುಡದ ಅಂಗಾಂಶಗಳು ಕೊಳೆಯುತ್ತಾ ಇಡೀ ಬಳ್ಳಿ ಸಾಯುತ್ತದೆ.

ಮುಖ್ಯವಾಗಿ ಕರಿಮೆಣಸು ಬಳ್ಳಿ ಬುಡದಲ್ಲಿ ನೀರು ನಿಲ್ಲಬಾರದು. ನೀರು ಹರಿದು ಹೋಗುವ ಕಾಲುವೆ ಬದಿಯಲ್ಲಿ ಬಳ್ಳಿ ಇದ್ದರೂ ಸಹ ಅದಕ್ಕೆ ರೋಗ ಬರುವುದಿಲ್ಲ. ಒಟ್ಟಿನಲ್ಲಿ ನೀರು ನಿಂತ ಸ್ಥಿತಿ ಉಂಟಾಗಬಾರದು. ನೀರು ನಿಂತರ ಅದು ಹಳಸಲು  ಬರುತ್ತದೆ. ಅಲ್ಲಿ ರೋಗದ ಶಿಲೀಂದ್ರ ಹೆಚ್ಚು ಚುರುಕಾಗುತ್ತದೆ. ಬಳ್ಳಿ ಬುಡದಲ್ಲಿ ಅಥವಾ ಬಳ್ಳಿ ಇರುವ ಭಾಗದಲ್ಲಿ ತೊಟ್ಟಿ ತರಹ ನೀರು ನಿಂತು ಅಲ್ಲಿ ಮಣ್ಣು ಕೆನೆಕಟ್ಟಿದ್ದರೆ ಅದನ್ನು ತಕ್ಷಣ ತೆಗೆದು ಸಹಜ ಸ್ಥಿತಿಗೆ ತನ್ನಿ. ನೀರು ಬಸಿಯಲು ವ್ಯವಸ್ಥೆ  ಮಾಡಿಕೊಡಿ.ನೀರು ಬಸಿಯಲು ಅನನುಕೂಲವಿರುವ ಕಡೆ(ಜೌಗು ಭೂಮಿ) ಕರಿ ಮೆಣಸು ಬೆಳೆಸಬೇಡಿ. ಗುಡ್ಡ ಭೂಮಿಯಲ್ಲಿ ನೀರು ಚೆನ್ನಾಗಿ ಬಸಿಯುವುದರಿಂದ ಅನುಕೂಲವಿದೆ.

ಅಹಾರ ಸಾಗಾಣಿಕಾ  ನಾಳಗಳು  ಸತ್ತು ಹೋಗಿರುತ್ತದೆ

ಕರಿಮೆಣಸು ಬೆಳೆಯುವವರು ತಿಳಿಯಬೇಕಾದದ್ದು:

ಯಾವುದೇ ಬೆಳೆಯಾದರೂ  ಅದಕ್ಕೆ  ಕಾಲ ಕಾಲಕ್ಕೆ ಅನುಗುಣವಾಗಿ ನಿರ್ವಹಣೆ ಮಾಡಲೇ ಬೇಕು. ಮೆಣಸಿನ ಬಳ್ಳಿ ಮಳೆಗಾಲ ಪ್ರಾರಂಭವಾದ ತಕ್ಷಣ ಚಿಗುರಲು  ಪ್ರಾರಂಭವಾಗುತ್ತದೆ. ಮೆಣಸಿನ ಬಳ್ಳಿಯ ಬೆಳವಣಿಗೆ ಬುಡದಿಂದ ತುದಿಯ ತನಕ ನಾಲ್ಕೂ ದಿಕ್ಕಿನಲ್ಲೂ ಇರುತ್ತದೆ. ಇದು ಒಂದು ತೆಂಗು, ಅಡಿಕೆ ಮರಕ್ಕೆ ಹೋಲಿಸಿದರೆ  3 ಪಟ್ಟಿಗೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ  ಬೇರಿನ ಬೆಳವಣಿಗೆಯೂ  ಇರುತ್ತದೆ, ಎಲೆ, ಫಸಲು (ಕರೆ) (spike) ಎಲ್ಲಾ ಇರುವಾಗ ಆಹಾರದ ಅವಶ್ಯಕತೆಯೂ ಹೆಚ್ಚಾಗಿರುತ್ತದೆ. ಈ ಎಲ್ಲಾ ಬೆಳವಣಿಗೆಗೆ ನಾವು ವರ್ಷಕ್ಕೆರಡು ಬಾರಿ ಕೊಡುವ ಗೊಬ್ಬರ ಸಾಕಾಗುವುದಿಲ್ಲ. ನಿಶಕ್ತಿಯೇ ಎಲ್ಲಾ ಅನಾರೋಗ್ಯಕ್ಕೂ ಕಾರಣವಾದಂತೆ  ಬಳ್ಳಿಯ ಬೆಳವಣಿಗೆಯ ಹಂತದಲ್ಲಿ  ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಗೊಬ್ಬರ ಕೊಡಬೇಕು. ಮೆಣಸಿನ ಬಳ್ಳಿಯ ಬುಡಭಾಗದಲ್ಲಿ  1/2  ಅಡಿ ಆಳದ ವರೆಗೆ ಮಾತ್ರ ಬೇರುಗಳು ನಿಬಿಡವಾಗಿರುತ್ತದೆ. ನಾವು ಬುಡಕ್ಕೆ ಕೊಡುವ ಗೊಬ್ಬರ ಇಲ್ಲಿಂದ ಕೆಳಕ್ಕೆ  ಇಳಿದು ಮೆಣಸಿಗೆ  ಲಭ್ಯವಾಗುವುದಿಲ್ಲ. ಅದಕ್ಕಾಗಿ  ಸಿಂಪರಣೆ ಮೂಲಕ  ಗೊಬ್ಬರ ಕೊಡುವುದು ಸೂಕ್ತ.

ಬಳ್ಳಿ ಬದುಕಿಸುವುದು ಹೇಗೆ?

ಈ ವರ್ಷ ರೋಗ ಬರಲಿಕ್ಕಿಲ್ಲ ಎಂದು ಸುಮ್ಮನೆ ಬಿಡುವಂತಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇ ಬೇಕು. ಕರಿಮೆಣಸಿಗೆ ಶೀಘ್ರ ಸೊರಗು ರೋಗ ಬಂದಾಗ ಬಳ್ಳಿ ತಕ್ಷಣ ಸಾಯುತ್ತದೆ. ಈ ವರ್ಷದ ಮಳೆಗೆ ಬಹಳಶ್ಟು ಕಡೆ ಶೀಘ್ರ ಸೊರಗು ರೋಗ ಭಾಧಿಸಿದ ವರದಿ ಇದೆ. ಇದು ಫೈಟೋಪ್ಥೆರಾ ಶಿಲೀಂದ್ರದಿಂದ ಬರುವ ಖಾಯಿಲೆ. ಇದು ಕರಿಮೆಣಸಿಗೆ ಯಾವುದೇ ಸೂಚನೆ ಇಲ್ಲದೇ ಬರುವ  ತುಂಬಾ ಹಾನಿಕಾರಕ ರೋಗ.

          ಈ ರೋಗ ಬರುವ ಚಿನ್ಹೆಯು ಮುಂಚಿತವಾಗಿ ಗೊತ್ತಾಗುತ್ತದೆ.  ನೆಲದಲ್ಲಿ ಹಬ್ಬಿದ ಬಳ್ಳಿಯ ಎಲೆ ಮತ್ತು  ಬುಡಭಾಗದ ಎಲೆಗಳಲ್ಲಿ ಕಪ್ಪು ಚುಕ್ಕೆಗಳು, ಕರೆಯಲ್ಲಿ ಕಪ್ಪು ಕಲೆಗಳು ಇದ್ದರೆ ಈ ರೋಗ ಬರುವ ಮುನ್ಸೂಚನೆ. ಕಾಣುಕಾಣುತ್ತಿದ್ದಂತೇ ಚಿನ್ಹೆಗಳು ಜಾಸ್ತಿಯಾಗಿ ಬಳ್ಳಿಯ ಭಾಗಕ್ಕೆ ವ್ಯಾಪಿಸಿ ಬಳ್ಳಿ ಸಾಯುತ್ತದೆ. ಇದರ ನಿಯಂತ್ರಣಕ್ಕೆ ಬೇರೆ ಬೇರೆ ಶಿಲೀಂದ್ರ ನಾಶಕಗಳು ಮಾರುಕಟ್ಟೆಯಲ್ಲಿ  ಲಭ್ಯವಿದೆ. ವಿಜ್ಞಾನಿಗಳು  ಹೇಳುವ ಔಷದಿಯಲ್ಲದೆ ಬೇರೆ ಔಷಧಿಗಳೂ  ಮಾರುಕಟ್ಟೆಯಲ್ಲಿ ಇತ್ತೀಚೆಗೆ ಲಭ್ಯವಿದೆ. ಅದರ ಮಾಹಿತಿ ಕಲೆ ಹಾಕಿ ಬಳಕೆ ಮಾಡಿ. ಮೆಟಲಾಕ್ಸಿಲ್  ಮತ್ತು ಮ್ಯಾಂಕೋಜೆಬ್ ಒಳಗೊಂಡ ಶಿಲೀಂದ್ರ ನಾಶಕ ( Ridomil or Tata Master ) ಅಥವಾ ಮೆಟಲಾಕ್ಸಿಲ್ 35 %   ಇದನ್ನು ರೋಗ ಗುಣಪಡಿಸಲು ಬಳಸಬಹುದು. ಈ ಶಿಲೀಂದ್ರ ನಾಶಕವನ್ನು  ಡ್ರೆಂಚಿಂಗ್ ಗೆ ಬಳಕೆ ಮಾಡಬೇಕು. Ridomil Or Tata Master 2.5  ಗ್ರಾಂ  1  ಲೀ. ನೀರಿಗೆ ಬೆರೆಸಿ ರೋಗ ಲಕ್ಷಣ ಇರುವ ಬಳ್ಳಿ ಬುಡಕ್ಕೆ ಬಳ್ಳಿ ಗಾತ್ರ ಹೊಂದಿ – 5-10  ಲೀ  ಬುಡದ ಸುತ್ತಲೂ ಸುರಿಯಬೇಕು.  ಬೇರು ಇರುವ ಸ್ಥಳ ಕ್ಕೆಲ್ಲಾ ಇದು  ಪಸರಿಸಬೇಕು. ಹಾಗೆಯೇ ಮೆಟಲಾಕ್ಸಿಲ್ ಬಳಸುವುದಾದರೆ ಒಂದು ಲೀ. ನೀರಿಗೆ 1 ಮ್ ಗ್ರಾಂ ನಂತೆ ಹಾಕಿ ಡ್ರೆಂಚಿಂಗ್ ಮಾಡಬೇಕು. ಈ ಶಿಲೀಂದ್ರ ನಾಶಕ ಬಳ್ಳಿಯನ್ನು  ಸ್ವಲ್ಪ ನಿತ್ರಾಣಗೊಳಿಸುವ ಕಾರಣ  ಜೊತೆಗೆ ಹೊಸ ಬೇರು ಬರಲು ಪ್ರಚೋದಕವಾಗಿ ಹ್ಯೀಮಿಕ್ ಅಸಿಡ್ ಮತ್ತು ಬಳ್ಳಿಗೆ ಚೇತರಿಕೆಗೆ ಅನುಕೂಲವಾಗುವಂತೆ 10-20  ಗ್ರಾಂ 19:19:19  ಅನ್ನು  ಬುಡಕ್ಕೆ ಹಾಕಬೇಕು. ಆಗ ರೊಗ ಗುಣಮುಖವಾಗುತ್ತದೆ.

ನಿರ್ವಹಣೆ ಕ್ರಮ:

ರೋಗ ಬಂದಿರುವ ಬಳ್ಳಿಯನ್ನು ಗಮನಕ್ಕೆ ಬಂದ ತಕ್ಷಣ ತೆಗೆದು ನಾಶ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ರೋಗಕಾರಕ ಶಿಲೀಂದ್ರ ಕಡಿಮೆಯಾಗುತ್ತದೆ. ರೋಗ ಪ್ರಸಾರವೂ ಕಡಿಮೆಯಾಗುತ್ತದೆ. ಈ ಬಗ್ಗೆ ಕೆಲವು ರೈತರಲ್ಲಿ ಭಿನ್ನ ಅಭಿಪ್ರಾಯವೂ ಇದೆ. ರೋಗ ಬಂದ ಬಳ್ಳಿಯನ್ನು  ಹಾಗೇ ಬಿಟ್ಟು ಅಲ್ಲೇ ಬೇರೆ ಬಳಿ/ಸಸಿ ನಾಟಿ ಮಾಡಿದಲ್ಲಿಯೂ ಸಸಿ ಬೆಳೆದಿರುವ ಉದಾಹರಣೆ ಇದೆ.

ಮೆಣಸಿನ  ಬೆಳೆ  ಇರುವಲ್ಲಿ ಅಗತೆ ಇತ್ಯಾದಿ ಬೇಸಾಯ ಕ್ರಮ ಮಾಡಬಾರದು.

ಮುನ್ನೆಚ್ಚರಿಕೆ ವಿಧಾನ:

 ಮುಂಗಾರು ಮಳೆ ಪ್ರಾರಂಭವಾದ ಕೂಡಲೇ (ಮೇ ಕೊನೆಗೆ ಇಲ್ಲವೇ ಜೂನ್ ತಿಂಗಳ ಮೊದಲವಾರ)  ಪ್ರತೀ ಬಳ್ಳಿಗೆ 3-5 ಲೀಟರ್ ಶೇ. 2 ಅಥವಾ 3 ರ ಕಾಪರ್ ಆಕ್ಸೀ ಕ್ಲೋರೈಡ್ ನಿಂದ ಬಳ್ಳಿಯ ಬುಡ ಭಾಗ ಡ್ರೆಂಚಿಂಗ್ ಮಾಡಬೇಕು.  ಅದರೊಂದಿಗೆ ಶೇ. 1 ರ ಬೋರ್ಡೋ ದ್ರಾವಣವನ್ನು  ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು  ಆಗಸ್ಟ್ – ಸಪ್ಟೇಂಬರ್ ತಿಂಗಳಲ್ಲಿ  ಪುನಹ ಮಾಡಬೇಕು. ಮಳೆ ಹೆಚ್ಚು ಇದ್ದರೆ ಬಳ್ಳಿಯ ಬುಡವನ್ನು ಮತ್ತೊಮ್ಮೆ ಶೇ. 2 ರ ಕಾಪರ್‍ಆಕ್ಸೀ ಕ್ಲೋರೈಡ್ (COC) ನಿಂದ ತೋಯಿಸಬೇಕು. ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಪ್ರತೀ ಬಳ್ಳಿ ಬುಡಕ್ಕೆ 50 ಗ್ರಾಂ ಟ್ರೈಕೋಡರ್ಮಾ (10 20 ಸಿ ಪಿ ಯು) ನೀಡಬೇಕು. ಸ್ವಲ್ಪ ಎಲೆ ಹಳದಿಯಾಗಿದೆ ಎಂಬುದು ಗೋಚರವಾದರೆ ತಕ್ಷಣ ಬುಡಕ್ಕೆ 1/2  ಕಿಲೋ ಸುಣ್ಣದ ಹುಡಿ ಹಾಕಿ. ನೀರು ಬಸಿಯಲು  ವ್ಯವಸ್ಥೆ ಮಾಡಿ.

ಕರಿಮೆಣಸಿನ ಬಳ್ಳಿಗೆ ಮಳೆಗಾಲದಲ್ಲಿ ರೋಗ ಬರುವುದು  ಸಾಮಾನ್ಯ. ರೋಗ ಪ್ರಾರಂಭಿಕ ಹಂತದಲ್ಲಿದ್ದರೆ ಅದನ್ನು ಗುಣಪಡಿಸಲು ಸಾಧ್ಯವಿದೆ. ಅಂತಿಮ ಹಂತಕ್ಕೆ ಹೋಗಿದ್ದರೆ ಅದಕ್ಕೆ ಯಾವ ಚಿಕಿತ್ಸೆಯೂ ಫಲಕಾರಿಯಲ್ಲ. ರೋಗ ಬರುವ ಸಮಯದಲ್ಲಿ ಬೆಳೆಗಾರರು ಯಾವಾಗಲೂ ಬಳ್ಳಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದರೆ  ಬಳ್ಳಿ ಉಳಿಸಿಕೊಳ್ಳಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!