ಹಾಗಲಕಾಯಿ ಯಾಕೆ ಕೊಳೆಯುತ್ತದೆ?

by | Mar 13, 2020 | Pest Control (ಕೀಟ ನಿಯಂತ್ರಣ), Vegetable Crops (ತರಕಾರಿ ಬೆಳೆ) | 0 comments

ಹಾಗಲಕಾಯಿ ಹಾಳಾಗುವುದಕ್ಕೆ ಕಣ್ಣು ದೃಷ್ಟಿ ಕಾರಣ ಎಂದು ಕೆಲವರು ಚಪ್ಪಲಿ, ಕಸಬರಿಕೆ ಕಟ್ಟುತ್ತಾರೆ.  ಆದರೂ ಕಾಯಿ ಹಾಳಾಗುವುದು ನಿಲ್ಲುವುದಿಲ್ಲ. ಕೊನೆಗೆ ನಮ್ಮಲ್ಲಿ ಹಾಗಲಕಾಯಿ ಆಗುವುದಿಲ್ಲ ಎಂದು ತೀರ್ಮಾನಕ್ಕೆ  ಬರುತ್ತಾರೆ. ಇದು ಯಾವ ಕಣ್ಣು ದೃಷ್ಟಿಯೂ ಅಲ್ಲ. ಕಾರಣ ಒಂದು ಕೀಟ ಅಷ್ಟೇ..

  • ಹಾಗಲಕಾಯಿಯ  ಕಹಿಗೂ ಕೀಟ ಬರುತ್ತದೆಯೇ ? ಇದು ಎಲ್ಲರ ಪ್ರಶ್ಣೆ.
  • ನಿಜವಾಗಿಯೂ ಕಹಿ ಇದ್ದರೂ ಬರುತ್ತದೆ. ಸಿಹಿ ಇದ್ದರೂ ಬರುತ್ತದೆ.
  • ಅದು ಹಣ್ಣು ತರಕಾರಿಗಳಿಗೆ ತೊಂದರೆ ಮಾಡುವ ಒಂದು ಕೀಟ.

ಯಾವ ಕೀಟ:

  • ಜೇನು ನೊಣದ ತರಹದ ಒಂದು ಕೀಟ ಏನಾದರೂ ನಿಮ್ಮ  ತರಕಾರೀ ಹಿತ್ತಲಲ್ಲಿ ಸುತ್ತಾಡುವುದನ್ನು ಕಂಡಿದ್ದೀರಾ?
  • ನಿಮ್ಮ ಮನೆಯ ಅಂಗಳದ ತುಳಸೀ ಗಿಡ ಹೂ ಬಿಡುವಾಗ ಒಂದು ಜಾತಿಯ ನೊಣ ಅದರ ಸುವಾಸನೆಗೆ ಸುತ್ತುವುದನ್ನು ಕಂಡಿದ್ದೀರಾ?
  • ಇದೇ  ಕೀಟ ಬಹುತೇಕ ಹಣ್ಣು  ಹಣ್ಣು ಹಂಪಲು ತರಕಾರಿಗಳಿಗೆ ಭಾರೀ ತೊಂದರೆ ಮಾಡುತ್ತದೆ.
  • ಇದು ಹಣ್ಣು ತರಕಾರಿಗಳ ಮೇಲಿನ ಮೇಲ್ಮೈಯಲ್ಲಿ ಮೊಟ್ಟೆಯನ್ನು ಇಡುವುದಕ್ಕಾಗಿ ಚುಚ್ಚಿ ಕುಳಿತಿರುತ್ತದೆ.
  •  ಹಣ್ಣು ತರಕಾರಿಗಳಲ್ಲಿ ಮೊಟ್ಟೆ ಇಡುವು ದೇ  ಇದರ  ಕೆಲಸ.
  • ಅಲ್ಲಿಯೆ ತನ್ನ ಸಂತಾನಾಭಿವೃದ್ದಿಯನ್ನು ಮಾಡುವುದು.
  • ಮೊಟ್ಟೆ ಇಟ್ಟು ಅದು ಹಾರಿ ಹೋಗುತ್ತದೆ. ಮೊಟ್ಟೆ ಅದರ ಒಳಗೆ ಬೆಳೆದು ಮರಿಯಾಗುತ್ತದೆ.

ಮರಿಯು ಫಲದ ಒಳಭಾಗದ  ತಿರುಳನ್ನು ತಿಂದು ಹಾಳು ಮಾಡುತ್ತದೆ. ಹೊರಗೆ ಕಾಣುವಾಗ ಯಾವುದೇ  ಹಾಳಾದ ಚಿನ್ಹೆ ಕಾಣಿಸದೇ ಇದ್ದರೂ ಸಹ ಒಳಗೆ ಹುಳಗಳು ಇರುತ್ತವೆ.

  • ಹುಳ ಬೆಳೆದಂತೆ ಕಾಯಿಯಿಂದ ಹೊರ ಬರುತ್ತದೆ. ಆಗ ಆ  ಕಾಯಿ ಪೂರ್ತಿಯಾಗಿ ಕೊಳೆತು ಹಾಳಾಗಿರುತ್ತದೆ.
  • ಹಾಗಲಕಾಯಿ , ಹೀರೇ ಕಾಯಿ, ಪಡುವಲಕಾಯಿ, ಸೌತೇ ಕಾಯಿ, ಕಲ್ಲಂಗಡಿ, ಕರಬೂಜ,ಮಾವು, ಪೇರಳೆ, ರೋಸ್ ಆಪಲ್ ಗಳು ಎಲ್ಲದಕ್ಕೂ ಇದು ತೊಂದರೆ ಮಾಡುತ್ತದೆ.
  • ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ಈ ಕೀಟದ  ಹಾವಳಿಯಿಂದ 30-40 % ದಷ್ಟು ಹಣ್ಣು ತರಕಾರಿಗಳು ಹಾಳಾಗುತ್ತವೆ.

ನಿಯಂತ್ರಣ ಹೇಗೆ:

  • ಹಣ್ಣು ನೊಣವನ್ನು ನಿಯಂತ್ರಣ ಮಾಡಲು  ರಾಸಾಯನಿಕ ಮತ್ತು ಜೈವಿಕ  ಎಂಬ ಎರಡು ವಿಧಾನಗಳಿವೆ.
  • ರಾಸಾಯನಿಕ ವಿಧಾನಗಳನ್ನು ಅನುಸರಿಸುವಾಗ ಕೊಯಿಲಿನ ಸಮಯ ನೋಡಿಕೊಂಡು ಸಿಂಪಡಿಸಬೇಕು.
  • ಯಾವ ಕೀಟ ನಾಶಕ ಬಳಕೆ ಮಾಡುತ್ತೀರೋ  ಅದರ ಉಳಿಕೆ ಅವಧಿ ( residual effect) ಮತ್ತು  ಕೊಯಿಲಿನ ಸಮಯದ ಲೆಕ್ಕಾಚಾರ ಹಾಕಿಕೊಳ್ಳಬೇಕು.
  • ಸಾಧ್ಯವಾದಷ್ಟು ಸ್ಪರ್ಶ ಕೀಟನಾಶಕವನ್ನು ಬಳಕೆ ಮಾಡಬೇಕು.
  • ಬೇಗ ಕಟಾವು ಮಾಡುವ  ತರಕಾರಿ ಬೆಳೆಗಳಿಗೆ ಕೀಟನಾಶಕ ಬಳಕೆ ಮಾಡುವುದು ಸೂಕ್ತವಲ್ಲ.
  • ಕೀಟನಾಶಕಗಳಲ್ಲಿ ಎಕಾಲೆಕ್ಸ್ , ಇಮಿಡಾ ಕ್ಲೋಫ್ರಿಡ್ ಮುಂತಾದವುಗಳು  ಹಣ್ಣು ನೊಣದ ನಿಯಂತ್ರಣಕ್ಕೆ ಸಹಕಾರಿ

ಜೈವಿಕ ನಿಯಂತ್ರಣ:

  • ಜೈವಿಕ ನಿಯಂತ್ರಣ ಎಂದರೆ ಹಣ್ಣು ನೊಣದ ಸಂತಾನಾಭಿವೃದ್ದಿಯನ್ನು ಆಗದಂತೆ ತಡೆಯುವುದು.
  • ಗಂಡು ಹಣ್ಣು ನೊಣಗಳನ್ನು ಬಂಧಿಸುವ ಫೆರಮೋನು ಟ್ರಾಪುಗಳನ್ನು  ಅಲ್ಲಲ್ಲಿ ನೇತಾಡಿಸಬೇಕು.
  • ಈ ಟ್ರಾಪುಗಳ ವಾಸನೆಯು ಹೆಣ್ಣು ನೊಣದ  ವಾಸನೆಯಾಗಿರುವ ಕಾರಣ ಅಲ್ಲಿಗೆ  ಗಂಡು ನೊಣಗಳು ಬರುತ್ತವೆ.

ಹಣ್ಣು ನೊಣ ಆಕರ್ಷಿಸುವ ಮಿತೇಲ್ ಯುಜಿನಾಲ್ ಹಾಕಿದ ಮರದ ಬಿಲ್ಲೆ.

  • ಅದರ ಸುತ್ತ ಸುತ್ತಿ ಸುತ್ತಿ ತಲೆ ತಿರುಗಿ ಬೀಳುತ್ತವೆ.
  • ಹೀಗೆ ಹಣ್ಣು ನೊಣದ  ಸಂತಾನಾಭಿವೃದ್ದಿಯನ್ನು ನಿಯಂತ್ರಿಸುವ  ವಿಧಾನ ಎಲ್ಲದಕ್ಕಿಂತ ಅಗ್ಗ.
  • ಇದರಲ್ಲಿ ಯಾರಿಗೂ  ಯಾವ ತೊಂದರೆಯೂ ಇರುವುದಿಲ್ಲ.

ಸತ್ತು ಬೀಳುವ ನೋಣ

ಹಣ್ಣು ನೊಣವನ್ನು ಆಕರ್ಷಿಸುವ ಟ್ರಾಪುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಬಿಲ್ಲೆಗೆ 20 ರೂ. ನಿಂದ 50 ರೂ. ತನಕ ಬೆಲೆ ಇರುತ್ತದೆ.

  • ಇದನ್ನು ಪ್ಲಾಸ್ಟಿಕ್ ನೀರಿನ ಬಾಟಲಿಯ ಒಳಗೆ ಸಿಕ್ಕಿಸಿ ನೊಣವನ್ನು ಆಕರ್ಷಿಸಬಹುದು.
  • ಇದನ್ನು ಬೆಳೆ  ಹೂ ಬಿಡುವ ಹಂತದಲ್ಲೇ ಮಾಡಿದರೆ ಪರಿಣಾಮ ಹೆಚ್ಚು. ತಡವಾದರೆ  ಫಲ ಕಡಿಮೆ.

ಇದು ಅಗತ್ಯ ಮಾಡಲೇ ಬೇಕು:

  • ಬರೇ ಟ್ರಾಪು ಹಾಕಿದರೆ ಸಾಲದು. ಟ್ರಾಪು ಹಾಕುವುದು ಒಂದು ರೀತಿಯಲ್ಲಿ ನೊಣದ ಇರುವಿಕೆಯನ್ನು ಪತ್ತೆ ಮಾಡುವ ವಿಧಾನ ಅಷ್ಟೇ.
  • ಹೊಲದಲ್ಲಿ ಹಾಳಾದ ಯಾವುದೇ ಹಣ್ಣು- ಕಾಯಿಗಳನ್ನು ನೆಲಕ್ಕೆ  ಬೀಳದಂತೆ ಜಾಗರೂಕತೆ ವಹಿಸಬೇಕು.
  • ಚಿತ್ರದಲ್ಲಿ ತೋರಿಸಿರುವಂತ ಚಿನ್ಹೆ ಉಳ್ಳ ಕಾಯಿಗಳನ್ನು ತಕ್ಷಣ ಕೊಯಿದು ಅದನ್ನು ಬೆಂಕಿಗೆ ಹಾಕಿ ಸುಡಬೇಕು.
  • ಇಲ್ಲವಾದರೆ ಒಂದು ಹುಳ ನೆಲಕ್ಕೆ ಬಿದ್ದರೂ ಸಹ ಅದು ಮತ್ತೆ ದುಂಬಿಯಾಗಿ ಮೊಟ್ಟೆ ಇಡುತ್ತದೆ.
  • ಒಂದು ಕಾಯಿಯಲ್ಲಿ ನೂರಕ್ಕೂ ಹೆಚ್ಚು ಹುಳಗಳಿರುತ್ತವೆ.
  • ಇದನ್ನು ನಾಶ ಮಾಡಿದರೆ ಮಾತ್ರ ಆ ಬೆಳೆ ಮತ್ತು ಮುಂದಿನ ಬೆಳೆಗೂ ಇದರ ತೊಂದರೆ ಕಡಿಮೆಯಾಗುತ್ತದೆ.

ಒಂದೇ ಕಡೆಯಲ್ಲಿ ತರಕಾರಿ ಬೆಳೆಯಬಾರದು. ಬದಲಿಸಿ ಬೆಳೆಯಬೇಕು, ನೆಲವನ್ನು ಒಮ್ಮೆ ಉಳಿಮೆ ಮಾಡಿ 3-5 ದಿನ ಒಣಗುವಂತೆ ಮಾಡಿದರೆ ನೆಲದಲ್ಲಿ ಅವಿತಿರುವ ದುಂಬಿ ( ಪ್ಯೂಪೆ) ಸಾಯುತ್ತದೆ.  ಹೀಗೆ ಮಾಡಿದರೆ  ಸಾಕಷ್ಟು ತೊಂದರೆ ಕಡಿಮೆಯಾಗುತ್ತದೆ.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!