ರಾಜ್ಯ ಸರಕಾರ ಜನತೆಗೆ ಮನೆ ಹೊರಡದಂತೆ ಕರ್ಫ್ಯೂ ವಿಧಿಸಿದೆ. ಅಗತ್ಯ ಸಾಮಾಗ್ರಿಗಳಿಗೆ ವಿನಾಯಿತಿ ನೀಡಿದ್ದರೂ ಅಡಿಕೆ ಎಂಬುದು ಅಗತ್ಯ ಸಾಮಾಗ್ರಿಗಳ ಅಡಿಯಲ್ಲಿ ಬಾರದ ಕಾರಣ ಅಡಿಕೆ ಕೊಳ್ಳುವವರು ತಮ್ಮ ವ್ಯವಹಾರ ನಿಲ್ಲಿಸುವುದು ಗ್ಯಾರಂಟಿ. ಇನ್ನು ವ್ಯಾಪಾರ ಏನಿದ್ದರೂ ಪರಿಸ್ಥಿತಿ ಅನುಕೂಲಕರವಾಗಿ ಬಂದರೆ ಎಪ್ರೀಲ್ 1 ತರುವಾಯ.
- ಅಡಿಕೆ, ಕರಿಮೆಣಸು , ಶುಂಠಿ ಮುಂತಾದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಎಂಬುದು ಪರಿಸ್ಥಿತಿ ಸರಿಯಾಗಿದ್ದರೆ ಎಲ್ಲವೂ ಸಲೀಸಾಗಿ ಮುಂದುವರಿಯುತ್ತದೆ.
- ಎಲ್ಲಾದರೂ ಸ್ವಲ್ಪ ಪರಿಸ್ಥಿತಿ ಬಿಗಡಾಯಿಸಿದರೆ ಹೇಗೆ ಮಾರುಕಟ್ಟೆ ಕುಸಿಯುತ್ತದೆ ಎಂದೇ ಗೊತ್ತಾಗುವುದಿಲ್ಲ.
- ಒಮ್ಮೆ ಬಿದ್ದ ಮಾರುಕಟ್ಟೆ ಮತ್ತೆ ಏಳಲು ತುಂಬಾ ಸಮಯ ಹಿಡಿಸುತ್ತದೆ.
- ಈಗ ಅದೇ ಪರಿಸ್ಥಿತಿ ಉಂಟಾಗಿದೆ.
ಗಡಿ ಮುಚ್ಚಲ್ಪಟ್ಟಿದೆ:
- ಕರ್ನಾಟಕ – ಮಹಾರಾಷ್ಟ್ರ ಗಡಿ ಮುಚ್ಚಲ್ಪಟ್ಟಿದೆ.
- ಸಾರಿಗೆಗೆ ಇದು ಅಂತಹ ತೊಂದರೆ ಇಲ್ಲ ಎನ್ನಲಾಗುತ್ತಿದೆಯಾದರೂ ಇದು ಅಗತ್ಯ ಸಾಮಾಗ್ರಿ ಅಲ್ಲದ ಕಾರಣ ಸಾಗಾಣಿಕೆ ಕಷ್ಟ.
- ಟ್ರಕ್ ತೆಗೆಯುವವರಿದ್ದರೆ ತಾನೇ ಸಾಗಾಟ.
- ಹೊರ ರಾಜ್ಯಗಳಿಗೆ ಅಡಿಕೆ ಸಾಗಾಟ ಅಗದೆ ವಿನಹ ಏನೂ ಮಾಡಲಿಕ್ಕಾಗುವುದಿಲ್ಲ.
- ಲಾರೀ ಚಾಲಕರು ಈ ರಿಸ್ಕ್ ಅನ್ನು ಮೈ ಮೇಲೆ ಎಳೆದು ಕೊಳ್ಳಲಾರರು.
- ಸಾಗಾಟವು ಬಹುಷಃ ಇನ್ನೂ 10-15 ದಿನಗಳ ಕಾಲ ಬಂದ್ ಆಗಲಿದೆ.
- ಇಷ್ಟಕ್ಕೂ ಅಡಿಕೆಯು ಮಾರಾಟವಾಗುವ ರಾಜ್ಯಗಳಲ್ಲಿ ಕೊರೋನಾ ರೋಗ ಜೋರಾಗಿಯೇ ಇದೆ.
ಗುಟ್ಕಾ ಫ್ಯಾಕ್ಟರಿ ಸ್ಥಬ್ಧ:
- ಕೊರೋನಾ ಸೋಂಕು ದೇಶದಲ್ಲಿ ಉಲ್ಬಣವಾದ ಕಾರಣ ಗುಟ್ಕಾ ತಯಾರಿಕಾ ಘಟಕಗಳು ಹೆಚ್ಚಾಗಿರುವ ಮಹಾರಾಷ್ಟ್ರ, ದೆಹಲಿ, ಕಲ್ಕತ್ತಾ , ನಾಗ್ಪುರ ಮುಂತಾದ ಕಡೆ ಕರ್ಫ್ಯೂ ಇದೆ.
- ಹೆಚ್ಚು ಜನ ಒಂದೆಡೆ ಸೇರಬಾರದು.
- ಫ್ಯಾಕ್ಟರಿ ಮುಂತಾದ ಕೆಲಸಗಳಿಗೆ ಅನುಮತಿ ಇಲ್ಲ.
- ಆದ ಕಾರಣ ಆ ಕ್ಷೇತ್ರ ಇನ್ನು ಒಂದಷ್ಟು ದಿನ ಕೆಲಸಮಾಡುವ ಸಾಧ್ಯತೆ ಇಲ್ಲ.
- ಅಲ್ಲಿಂದ ಬೇಡಿಕೆ ಇಲ್ಲದ ಕಾರಣ ಇಲ್ಲಿ ಅಡಿಕೆ ವ್ಯಾಪಾರ ಹಿಂದಿನಂತೆ ನಡೆಯಲಾರದು.
ವ್ಯಾಪಾರಿಗಳೂ ಬುದ್ಧಿವಂತರಾಗುತ್ತಾರೆ:
- ಅಡಿಕೆ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ರಿಸ್ ತೆಗೆದುಕೊಂಡು ವ್ಯವಹಾರ ಮಾಡುವಾಗ ಸಂದರ್ಭಾನುಸಾರ ಹೆಚ್ಚಿನ ಲಾಭ ಬೇಕಾಗುತ್ತದೆ.
- ಒಂದು ವೇಳೆ ಎಪ್ರೀಲ್ ಮೊದಲ ವಾರದಲ್ಲಿ ಅಡಿಕೆ ವ್ಯಾಪಾರ ಪ್ರಾರಂಭವಾದರೂ ಸಹ ಈಗ ಇದ್ದಂತೆ ದರ ಇರುವ ಸಾಧ್ಯತೆ ಕಡಿಮೆ.
- ಬಹುಷ ಭಾರೀ ಇಳಿಕೆಯಾದರೂ ಅಚ್ಚರಿ ಇಲ್ಲ.
ವ್ಯಾಪಾರೀ ತಂತ್ರಗಾರಿಕೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಕೆಲಸ ಮಾಡಲಿದೆ. ಬೇಡಿಕೆಯೇ ಇಲ್ಲ ಎಂದು ಬೆಲೆ ಇಳಿಸಬಹುದು. ಅವರ ಅನುಕೂಲಕ್ಕಾಗಿ ಅಡಿಕೆಯೇ ಇಲ್ಲ ಎಂದು ವದಂತಿಗಳನ್ನು ಹಬ್ಬಿಸಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲೂ ಬಹುದು. ಯಾವ ಸಾಧ್ಯತೆ ಇದೆ ಎಂದು ಊಹಿಸುವುದೂ ಕಷ್ಟ.
ಇದು ನಿಜ:
- ಈಗಾಗಲೇ ಸುಮಾರು ಒಂದು ತಿಂಗಳಿನಿಂದ ಉತ್ತಮ ಬೆಲೆಯಲ್ಲಿ ಖರೀದಿ ಮಾಡಿದ ಅಡಿಕೆ ಬಹಳಷ್ಟು ವ್ಯಾಪಾರಿಗಳಲ್ಲಿ ದಾಸ್ತಾನು ಇದೆ.
- ಇದನ್ನು ಹೇಗಾದರೂ ಮಾಡಿ ಲಾಭದ ಬೆಲೆಗೇ ಮಾರಾಟ ಮಾಡಿಯೇ ತೀರುತ್ತಾರೆ.
- ಆ ಸಮಯದಲ್ಲಿ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.
- ಅದು ತಾತ್ಕಾಲಿಕ ಬೆಲೆ ಏರಿಕೆಯಾಗಬಹುದೇ ಹೊರತು ಸ್ಥಿರವಾಗಲಿಕ್ಕಿಲ್ಲ.
ಬೆಳೆಗಾರರು ಏನು ಮಾಡಬೇಕು:
- ಎಪ್ರೀಲ್ ಮೊದಲ ವಾರದಲ್ಲಿ ವ್ಯಾಪಾರ ಪ್ರಾರಂಭ ಆದ ತಕ್ಷಣ ಮಾರಾಟಕ್ಕೆ ದುಂಬಾಲು ಬೀಳಬೇಡಿ.
- ಕೆಲವು ದಿನ ಕಾದು ನೊಡಿ.
- ಕೊರೋನಾ ರೋಗದ ಹತೋಟಿ ಆದರೆ ಬೆಲೆ ಏರಿಕೆಯಾಗುತ್ತದೆ.
- ಅದಿಲ್ಲವಾದರೆ ಬೆಲೆ ಇಳಿಕೆಯೇ ಆಗಬಹುದು.
- ಮಾರ್ಚ್ ತಿಂಗಳಲ್ಲಿಯೇ ಕೊರೋನಾ ಸುದ್ದಿ ಹರಿದಾಡಿ ಶೇರು ಮಾರುಕಟ್ಟೆ ನೆಲಕಚ್ಚಿದೆ.
- ಈ ಸೂಚನೆಯ ಆದಾರದಲ್ಲಿ ಬೆಳೆಗಾರರು ಹೊಸ ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮಾರ್ಚ್ 2-3 ನೇ ವಾರದಲ್ಲಿ ಮಾರಾಟ ಮಾಡಿದ್ದಾರೆ.
ಮೊದಲೇ ಈ ವರ್ಷ ಬೆಳೆ ಕಡಿಮೆ ಇದೆ. ಈ ತನಕ ಸುಮಾರು 40 % ದಷ್ಟು ಅಡಿಕೆ ಮಾರಾಟ ಆದ ಲೆಕ್ಕಾಚಾರ ಇದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸುಖಾಂತ್ಯವಾದರೆ ಬೆಲೆ ಏರಿಕೆಯಾಗಬಹುದು. ಆದ ಕಾರಣ ಹೇಗಾದರೂ ಜೂನ್ ತನಕ ಕಾಯುವುದೇ ಅನಿವಾರ್ಯವೆನಿಸುತ್ತದೆ.
ಸಮಯೋಚಿತ ಬರಹ,ಧನ್ಯವಾದಗಳು.