ರೇಶ್ಮೆ ವ್ಯವಸಾಯ ಮನೆ ಮಂದಿ ಸೇರಿ ತಮ್ಮ ಸಂಪಾದನೆಯನ್ನು ತಾವೇ ಗಳಿಸುವ ವೃತ್ತಿ. ಇದನ್ನು ಮಾಡಲು ದೈಹಿಕ ಶ್ರಮ ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಬರೇ ಇಷ್ಟೇ ಅಲ್ಲ. ರೇಶ್ಮೆ ವ್ಯವಸಾಯ ಹೆಚ್ಚು ಇರುವ ಕಡೆ ಇದಕ್ಕೆ ಪೂರಕವಾಗಿ ಸ್ವ ಉದ್ಯೋಗ ಮಾಡಿ ಆದಾಯಗಳಿಸಲೂ ಅನುಕೂಲ ಇದೆ.
- ನಮ್ಮ ರಾಜ್ಯದ ರಾಮನಗರ, ಕನಕಪುರ, ಕೋಲಾರ, ಶಿಡ್ಲಘಟ್ಟ, ಹಾಗೆಯೇ ಚಿತ್ರದುರ್ಗ ಕಡೆ, ಅಲ್ಲದೆ ಉತ್ತರದಲ್ಲಿ ರಾಮದುರ್ಗ, ಬೆಳಗಾವಿ ಸುತ್ತಮುತ್ತ ಹಲವಾರು ರೈತರು ರೇಶ್ಮೆ ವ್ಯವಸಾಯ ಮಾಡುತ್ತಾ ಒಬ್ಬ ಸರಕಾರೀ ನೌಕರ ಮಾಸಿಕ ಸಂಬಳ ಪಡೆದಂತೆ, ತಮಗೆ ಬೇಕಾದಷ್ಟು ಆದಾಯವನ್ನು ಪಡೆಯುತ್ತಾರೆ.
ರೇಶ್ಮೆ ವ್ಯವಸಾಯ ಹೇಗೆ:
- ನಿಮ್ಮಲ್ಲಿ ಹೊಲ ಇದೆಯೇ ? ನೀರಿನ ಅನುಕೂಲ ಇದೆಯೇ.
- ಏನಾದರೂ ವೃತ್ತಿ ಮಾಡಿ ಸಂಪಾದನೆ ಮಾಡಬೇಕೆಂಬ ಹಂಬಲ ಇದೆಯೇ?
- ನಿಮಗೆ ರೇಶ್ಮೆ ವ್ಯವಸಾಯ ಒಳ್ಳೆಯದು.
- ಹೊಲದ ಸಿದ್ದತೆ ಮಾಡಿ ಹಿಪ್ಪು ನೇರಳೆ ಬೆಳೆಸಬೇಕು.
- ಮೊಟ್ಟೆ ಅಥವಾ ಚಾಕಿ ಹುಳು ತಂದು ಹುಳುಗಳಿಗೆ ಸೊಪ್ಪು ತಿನ್ನಿಸಿ ಅದು ಗೂಡು ಕಟ್ಟುವ ತನಕ ಬೆಳೆಸಬೇಕು.
- ಗೂಡನ್ನು ಸಂಗ್ರಹಿಸಿ ಮಾರಾಟ ಮಾಡಿದರೆ ಹಣ ದೊರೆಯುತ್ತದೆ.
- ದಿನದಲ್ಲಿ ಸುಮಾರು 3-4 ಗಂಟೆ ಇದಕ್ಕಾಗಿ ಮೀಸಲಿಡಬೇಕು ಅಷ್ಟೇ.
ರೇಶ್ಮೆ ವ್ಯವಸಾಯ ಮಾಡಲು ಕಷ್ಟ ಇಲ್ಲ. ರೇಶ್ಮೆ ಇಲಾಖೆ ಇದೆ. ರೇಶ್ಮೆ ಅಭಿವೃದ್ದಿ ಮಂಡಳಿ ಇದೆ. ಸಂಶೋಧಾನ ಕೇಂದ್ರಗಳಿವೆ.ಮಾಡುವವರಿಗೆ ಮಾತ್ರ ಅದರ ಜೊತೆಗೇ ಇದ್ದು ಕೆಲಸ ಮಾಡುವ ಹಠ ಬೇಕು ಅಷ್ಟೇ. ಸರಕಾರದಿಂದ ಹಲವಾರು ಸೌಲಭ್ಯಗಳೂ ಇವೆ.
ಅನುಕೂಲತೆಗೆಳು ಎಷ್ಟು ಇವೆ:
- ಹಿಂದೆ ರೇಶ್ಮೆ ವ್ಯವಸಾಯ ಮಾಡುತ್ತಿದ್ದವರಿಗೆ ಉತ್ತಮ ಸೊಪ್ಪು ತಳಿ ಇರಲಿಲ್ಲ.
- ಈಗ ಹಾಗಿಲ್ಲ. ದಪ್ಪದ ದೊಡ್ಡ ಎಲೆಯ ಹಿಪ್ಪು ನೇರಳೆ ತಳಿಗಳು ಇವೆ. ಹಿಂದೆ ಬೇಕಾಗುತ್ತಿದ್ದ ಸೊಪ್ಪಿನ ಅರ್ಧ ಸಾಕಾಗುತ್ತದೆ.
- ಮೊಟ್ಟೆ ತಂದು ಮರಿ ಮಾಡಿ ಹುಳು ಸಾಕಣಿಕೆ ಮಾಡಬೇಕಾಗಿಲ್ಲ.
- ಈಗ ಚಾಕೀ ಹುಳುಗಳೇ ಲಭ್ಯ. ಎಷ್ಟು ಬೆಳೆದ ಹುಳುವಾದರೂ ಇಲ್ಲಿ ಲಭ್ಯವಿರುತ್ತದೆ.
- ಸೊಪ್ಪನ್ನು ಕತ್ತರಿಸಿ ಕೊಡಬೇಕಾಗಿಲ್ಲ. ಗೆಲ್ಲುಗಳನ್ನೇ ಹಾಕಿ ಹುಳುಗಳಿಗೆ ಮೇಯಿಸಬಹುದು.
- ಇದನ್ನು ರೆಂಬೆ ಪದ್ದತಿ ಎನ್ನುತ್ತಾರೆ. ಇದರಲ್ಲಿ ಸ್ವಚ್ಚತೆಗೆ ಹೆಚ್ಚು ಸಮಯ ಶ್ರಮ ಇರುವುದಿಲ್ಲ.
- ತಟ್ಟೆಗಳು ಬೇಕಾಗಿಲ್ಲ. ಬೇಕಾದಷ್ಟು ಗಾತ್ರದ ಸ್ಟಾಂಡ್ ಇಟ್ಟುಕೊಂಡು ಅದರಲ್ಲಿ ಮೆಶ್ ಹಾಕಿ ಹುಳು ಬಿಟ್ಟು ಸೊಪ್ಪು ಹಾಕಬಹುದು.
- ಇದನ್ನು ಜಪಾನ್ ಮಾದರಿಯ ತಿರುಗುವ ಚಂದ್ರಿಕೆಗಳು ಎನ್ನುತ್ತಾರೆ.
- ಹುಳು ಗೂಡು ಕಟ್ಟಲು ಚಂದ್ರಿಕೆ ಬೇಕಾಗಿಲ್ಲ. ಅದಕ್ಕೇ ತುಂಬಾ ಮಿತವ್ಯಯದ ಜಾಲರಿಗಳಿವೆ.
- ರೋಟರಿ ಚಂದ್ರಿಕೆಗಳಿವೆ. ಮನೆಯ ಸುತ್ತಲೂ ಇದನ್ನು ನೇತು ಹಾಕಬಹುದು. ಅಲ್ಲೇ ಅವು ಗೂಡು ಕಟ್ಟುತ್ತವೆ.ಈ ಗೂಡಿನ ಗುಣಮಟ್ಟ ಉತ್ತಮವಾಗಿರುತ್ತದೆ.
ಉದ್ಯೋಗಾವಕಾಶ:
- ಹಳ್ಳಿಯಲ್ಲಿದ್ದು ನೀವು ಯಾವುದಾದರೂ ಉದ್ಯೋಗ ಮಾಡಬೇಕೆಂದಿರುವಿರೇ ?
- ನಿಮ್ಮೂರಲ್ಲಿ ರೇಶ್ಮೆ ವ್ಯವಸಾಯ ಮಾಡುವವರಿದ್ದರೆ ಅವರಿಗೆ ಅನುಕೂಲವಾಗುವ, ನಿಮಗೆ ಆದಾಯ ಆಗುವ ವೃತ್ತಿ ಮಾಡಬಹುದು.
ಗೂಡು ಕಟ್ಟುವ ಮನೆಗಳು.
- ಕೃಷಿ ಮಾಡುವವರು ಹುಳುಗೂಡು ಕಟ್ಟುಹ ಹಂತದಲ್ಲಿ ತಮ್ಮಲ್ಲಿ ಸ್ಥಳಾವಕಾಶದ ಕೊರತೆ ಮತ್ತು ಉತ್ತಮ ವಾತಾವರಣಕ್ಕಾಗಿ ಇಂತಹ ಮನೆಗಳನ್ನು ಬಯಸುತ್ತಾರೆ.
- ಇಂತಿಷ್ಟು ಸ್ಥಳಾವಕಾಶಕ್ಕೆ ಇಷ್ಟು ಮೊತ್ತವನ್ನು ನಿರ್ಧರಿಸಬಹುದು.
- ಇಲ್ಲಿ ಅದಕ್ಕೆ ಬೇಕಾದ ಸವಲತ್ತು ಸಲಕರಣೆಗಳು ಇರಬೇಕು.
ಚಾಕೀ ಸಾಕಣೆ:
- ರೇಶ್ಮೆ ವ್ಯವಸಾಯ ಮಾಡುವವರಿಗೆ ಮೊಟ್ಟೆ ಮರಿ ಮಾಡಿಕೊಳ್ಳುವ ಬದಲು, ಮರಿಯನ್ನೇ ಒದಗಿಸಿಕೊಡುವ ವ್ಯವಸ್ಥೆ ಚಾಕಿ ಸಾಕಾಣಿಕಾ ಮನೆ.
- ಇಲ್ಲಿ ಬೇಕಾದ ಹಂತದ( ಜ್ವರದ) ಹುಳುವನ್ನು ಕೊಡುವ ವ್ಯವಸ್ಥೆ ಮಾಡಿಕೊಂಡರೆ ಅದರಲ್ಲೂ ಆದಾಯ ಗಳಿಸಲು ಅವಕಾಶ ಇದೆ.
- ಒಂದು ವೇಳೆ ನಿಮಗೆ ರೇಶ್ಮೆ ವ್ಯವಸಾಯ ಮಾಡಲು ಅನನುಕೂಲ ಇದ್ದರೆ, ಸೊಪ್ಪು ಬೆಳೆಸಿ ಸೊಪ್ಪನ್ನು ಸಹ ಮಾರಾಟ ಮಾಡಬಹುದು.
- ಕಿಲೋ ಲೆಕ್ಕಾಚಾರದಲ್ಲಿ ಇದಕ್ಕೆ ಬೆಲೆ ಇದೆ.
- ಬಾಡಿಕೆ ಆಧಾರದಲ್ಲಿ ಬೇಕಾಗುವ ಸಲಕರಣೆ ಪೂರೈಕೆ ಮಾಡುವುದೂ ಸಹ ಒಂದು ಲಾಭದಾಯಕ ವೃತ್ತಿ.
ರೇಶ್ಮೆ ಗೂಡಿಗೆ ಈಗ ತಳಿ ಹೊಂದಿ ಕಿಲೋ ಗೆ 275 ರೂಪಾಯಿಗಳಿಂದ 450 ರೂ ತನಕ ಬೆಲೆ ಇದ್ದು, 100 ಮೊಟ್ಟೆ ಸಾಕಿದರೆ ಸುಮಾರು 50 ಕಿಲೋ ಗೂಡನ್ನು ಉತ್ಪಾದಿಸಬಹುದು. ಇದರಿಂದ ಸುಮಾರು 15,000-20,000 ರೂ. ತನಕ ಆದಾಯ ಪಡೆಯಬಹುದು. ಕೆಲವರು 500 -1000 ಮೊಟ್ಟೆ ತನಕ ಸಾಕುವವರಿದ್ದು ಉತ್ತಮ ಆದಾಯ ಪಡೆಯಬಲ್ಲರು.
ರೇಶ್ಮೆ ವ್ಯವಸಾಯದ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿ ಹುಳು ಸಾಕಣೆ ಮಾಡಿದರೆ ಬೇಗ ಕೃಷಿಯಲಿ ಆದಾಯ ಪಡೆಯಬಹುದಾದ ಬೆಳೆ ರೇಶ್ಮೆ ವ್ಯವಸಾಯ ಒಂದೇ. ಈ ಬೆಳೆಯಲ್ಲಿ ಸಾಕಷ್ಟು ಸರಳೀಕರಣ ಆಗಿ ಬೆಳೆಗಾರರಿಗೆ ಅನುಕೂಲ ಆಗಿದೆ.