ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ.

ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ. ಗುಟ್ಕಾ ತಯಾರಕರಿಂದ ಬೇಡಿಕೆ ಇರುವ ಕಾರಣ ಖರೀದಿಯಲ್ಲಿ ಉತ್ಸಾಹ ಇದೆ ಎನ್ನುತ್ತಾರೆ. ಅದೇನೇ ಇರಲಿ. ದರ ಏರಿಕೆ ಆಗುವುದು  ಬೆಳೆಗಾರರ ಹಿತದೃಷ್ಟಿಯಿಂದ ಅಂತೂ ಅಲ್ಲವೇ ಅಲ್ಲ.  ಮಾರುಕಟ್ಟೆಯಲ್ಲಿ ಅಡಿಕೆ ಇಲ್ಲ ಎಂಬ  ಸುದ್ದಿ ಹರಿದಾಡುವುದು ಸಹ ವ್ಯಾಪಾರಿಗಳ ಹಿತಕ್ಕಾಗಿ. ದೊಡ್ಡ ದೊಡ್ಡ ವ್ಯಾಪಾರಿಗಳು  ಕಡಿಮೆ ಬೆಲೆಗೂ ಖರೀದಿ ಮಾಡುತ್ತಾರೆ. ಹೆಚ್ಚಿನ ಬೆಲೆಗೂ ಖರೀದಿ ಮಾಡುತ್ತಾರೆ. ಸರಾಸರಿ ಅವರ ಎಲ್ಲಾ ಖರ್ಚು ವೆಚ್ಚಗಳನ್ನು  ಸೇರಿಸಿ  ಲಾಭದಲ್ಲಿ ಮಾರಾಟ ಮಾಡಿದರೆ ಮಾತ್ರ ಬೆಳೆಗಾರರಿಂದ ಮತ್ತೆ ಅಡಿಕೆ ಖರೀದಿ ಮಾಡಲಿಕ್ಕೆ ಸಾಧ್ಯ.  ಈ ಕಾರಣಕ್ಕಾಗಿಯೇ ಬೆಲೆ ಏರಿದೆ ಎಂದರೂ ತಪ್ಪಾಗಲಾರದು. ಬೆಲೆ ಏರಿಕೆ ಸಮಯದಲ್ಲಿ ಬೆಳೆಗಾರರು ಮಾರಾಟವನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಾರೆ. ಹಾಗಾಗಿ ಖರೀದಿಗೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಆದರೂ ಈ ವಾರ ಮತ್ತು ಕಳೆದ ವಾರದಲ್ಲಿ ದಾವಣಗೆರೆ, ಶಿವಮೊಗ್ಗ, ಹೊಸನಗರ, ಚೆನ್ನಗಿರಿ ಮಾರುಕಟ್ಟೆಯಲ್ಲಿ  ಭಾರೀ ಪ್ರಮಾಣದಲ್ಲಿ ಅಡಿಕೆ ಮಾರಾಟಕ್ಕೆ ಬಂದಿದೆ. ರಾಜ್ಯದ ಅತೀ ದೊಡ್ಡ ಅಡಿಕೆ ಮಾರುಕಟ್ಟೆಯಾಗಿ ಪರಿಗಣಿಸಲ್ಪಟ್ಟ  ದಾವಣಗೆರೆಯಲ್ಲಿ  ಮೊನ್ನೆ ದಾಖಲೆಯ 30,000 ಚೀಲ ಅಡಿಕೆ ಖರೀದಿಯಾಗಿದೆ. ಶಿವಮೊಗ್ಗದಲ್ಲಿ 2010 ಚೀಲ ಮಾರಾಟವಾಗಿದೆ. ಹೊಸನಗರದಲ್ಲಿ 2294 ಚೀಲ ಹಾಗೂ ಚೆನ್ನಗಿರಿಯಲ್ಲಿ 2118 ಚೀಲ ಅಡಿಕೆ ಖರೀದಿಯಾಗಿದೆ. ಉಳಿದೆಲ್ಲಾ ಮಾರುಕಟ್ಟೆಯಲ್ಲಿಯೂ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರಾಟವಾಗಿದೆ.  ಸರಾಸರಿ ದರ 48800 ತನಕವೂ – ಗರಿಷ್ಟದರ 49500 ತನಕವೂ ಇತ್ತು. ಹಾಗಾಗಿ ಅಡಿಕೆ ಖರೀದಿ ಕ್ಷೇತ್ರದಲ್ಲಿ ಉತ್ಸಾಹ ಇದೆ. ಇದು ಸ್ವಲ್ಪ ಸಮಯದ ತನಕ ಧಾರಣೆಯನ್ನು ಮೇಲೆ ಕೊಂಡುಹೋಗಲಿದೆ. ಹಾಗೆಯೇ ಕೆಲವೇ ಸಮಯದಲ್ಲಿ ಮತ್ತೆ ಇಳಿಕೆಯೂ ಆಗುವ ಸಾದ್ಯತೆ ಇದೆ.

ಕೆಂಪಡಿಕೆ ಧಾರಣೆ ಎಲ್ಲೆಲ್ಲಿ ಹೇಗಿದೆ?

ಪ್ರಮುಖ ಮಾರುಕಟ್ಟೆಗಳಾದ ದಾವಣಗೆರೆ, ಚೆನ್ನಗಿರಿ, ಚಿತ್ರದುರ್ಗ, ಶಿವಮೊಗ್ಗ, ಸಾಗರ, ಹೊಸನಗರ, ಶಿರಸಿ  ಮುಂತಾದ ಕಡೆಯಲ್ಲಿ ಸರಾಸರಿ ದರ 48500 ದಾಟಿದೆ.  ಹೊಚ್ಚ ಹೊಸ ಅಡಿಕೆಗೂ 47300 ತನಕ ಇದೆ. ಸಾಗರ, ಶಿರಸಿ, ಯಲ್ಲಾಪುರ, ಶಿಕಾರಿಪುರ, ಆನವಟ್ಟಿ ಇಲ್ಲೆಲ್ಲಾ ಕೊಯಿಲು – ಬೇಯಿಸುವಿಕೆ, ನಡೆಯುತ್ತಿದ್ದು, ಇನ್ನೇನು ಒಂದೆರಡು ವಾರದದಲ್ಲಿ ಹೊಸ ಅಡಿಕೆ ಮಾರುಕಟ್ಟೆಗೆ ಬರಲಿದೆ.

  • ಚೆನ್ನಗಿರಿ: ರಾಶಿ;  ಗರಿಷ್ಟ: 49500, ಸರಾಸರಿ: 48685
  • ಚಿತ್ರದುರ್ಗ: ರಾಶಿ: ಗರಿಷ್ಟ:48800, ಸರಾಸರಿ: 47900
  • ದಾವಣಗೆರೆ: ರಾಶಿ: ಗರಿಷ್ಟ:49400, ಸರಾಸರಿ: 47900
  • ಹೊಸನಗರ: ರಾಶಿ: ಗರಿಷ್ಟ: 49470, ಸರಾಸರಿ: 48799
  • ಶಿರಸಿ: ರಾಶಿ: ಗರಿಷ್ಟ:47818, ಸರಾಸರಿ:46423
  • ಸಾಗರ: ರಾಶಿ: ಗರಿಷ್ಟ:48609, ಸರಾಸರಿ: 47899
  • ಶಿವಮೊಗ್ಗ: ರಾಶಿ: ಗರಿಷ್ಟ:49558, ಸರಾಸರಿ:48809
  • ಶಿಕಾರಿಪುರ: ರಾಶಿ: ಗರಿಷ್ಟ:48358, ಸರಾಸರಿ:47200
  • ಹೊನ್ನಾಳಿ: ರಾಶಿ: ಗರಿಷ್ಟ:48550, ಸರಾಸರಿ:48550
  • ಶಿರಾ: ರಾಶಿ: ಗರಿಷ್ಟ:46000, ಸರಾಸರಿ:44000
  • ಸಿದ್ದಾಪುರ: ರಾಶಿ: ಗರಿಷ್ಟ:48800, ಸರಾಸರಿ:48696
  • ಯಲ್ಲಾಪುರ: ರಾಶಿ: ಗರಿಷ್ಟ:54290, ಸರಾಸರಿ: 49899
  • ತರೀಕೆರೆ: ರಾಶಿ: ಗರಿಷ್ಟ:47000, ಸರಾಸರಿ:45000
  • ಆನವಟ್ಟಿ: ರಾಶಿ: ಗರಿಷ್ಟ:48099, ಸರಾಸರಿ: 46033
  • ಕೊಪ್ಪ: ಇಡಿ: ಗರಿಷ್ಟ:48699, ಸರಾಸರಿ:47000 ಬೆಟ್ಟೆ: 53299, 51410.
  • ತೀರ್ಥಹಳ್ಳಿ: ರಾಶಿ: ಗರಿಷ್ಟ:49299, ಸರಾಸರಿ:48989

ಚಾಲಿ ಅಡಿಕೆ ಮಾರುಕಟ್ಟೆ:

ಒಂದೆರಡು ದಿನಗಳಲ್ಲಿ ಮತ್ತೆ ಸ್ವಲ್ಪ ಚೇತರಿಕೆ ಅಗಬಹುದು ಎಂಬ ಭರವಸೆ ಇದೆ.

ಈ ಹಿಂದೆ ಹೇಳಿದಂತೆ ಚಾಲಿ ಅಡಿಕೆ ದಾರಣೆ ಸ್ವಲ್ಪ ಸ್ವಲ್ಪ ಏರಿಕೆಯಾಗಲಾರಂಭಿಸಿದೆ. 39500-40000 ಕ್ಕೆ ಇಳಿಕೆಯಾಗಿದ್ದ ಹಳೆ ಅಡಿಕೆ ಧಾರಣೆ ಚೇತರಿಕೆಯಾಗಿ ಹೊರ ಮಾರುಕಟ್ಟೆಯಲ್ಲಿ 42000-43000 ಏರಿಕೆಯಾಯಿತು. ನಿನ್ನೆ ಇಂದು ಹಣಕಾಸಿನ ಕೊರತೆಯಿಂದ ರೂ. 500 ಹಿನ್ನಡೆಯ ಸೂಚನೆ ಕಂಡು ಬಂದರೂ ಸಹ ಒಂದೆರಡು ದಿನಗಳಲ್ಲಿ ಮತ್ತೆ ಸ್ವಲ್ಪ ಚೇತರಿಕೆ ಅಗಬಹುದು ಎಂಬ ಭರವಸೆ ಇದೆ.

ಕ್ಯಾಂಪ್ಕೋ ದಲ್ಲಿ ಹೊಸ ಚಾಲಿ ದರ 36500-37000  ತನಕ  ಹಾಗೂ ಸಿಂಗಲ್ ಚೋಲ್ 41500-42000 ತನಕ ಡಬ್ಬಲ್ ಚೋಲ್ 43000-445 ತನಕ ಇದೆ. ಖಾಸಗಿಯವರಲ್ಲಿ ಎಲ್ಲದಕ್ಕೂ ರೂ.5 ಹೆಚ್ಚು ಇದೆ. ಕರಿಗೋಟು, ಉಳ್ಳಿಗಡ್ಡೆ, ಪಟೋರಾ ಅಡಿಕೆಗೆ ಬೇಡಿಕೆ ಚೆನ್ನಾಗಿದೆ. ಬೆಲೆ ಇಳಿಕೆಯಾಗಿಲ್ಲ. ಕಾರಣ ಇವೆಲ್ಲಾ  ಕೆಂಪಡಿಕೆ ದರ ಏರುವಾಗ ಹೆಚ್ಚು ಬೇಡಿಕೆಯಲ್ಲಿ ಇರುತ್ತದೆ,

  • ಮಂಗಳೂರು: ಹೊಸತು:36500-37000 ಹಳತು:42000-42500 ಡಬ್ಬಲ್:42500-44000
  • ಪುತ್ತೂರು: ಹೊಸತು:36500-37000 ಹಳತು:42000-42500 ಡಬ್ಬಲ್:42000-44000
  • ಸುಳ್ಯ: ಹೊಸತು:36500-37500 ಹಳತು:42000-43000 ಡಬ್ಬಲ್:42500-44000
  • ಕಾರ್ಕಳ: ಹೊಸತು:36೦00-37000 ಹಳತು:42000-425000 ಡಬ್ಬಲ್:42500-44000
  • ಕುಂದಾಪುರ: ಹೊಸತು:36500-37000 ಹಳತು:40000-42000 ಡಬ್ಬಲ್:42500-43500
  • ಬೆಳ್ತಂಗಡಿ: ಹೊಸತು:36500-37000 ಹಳತು:40000-42000 ಡಬ್ಬಲ್:42000-43500
  • ಹೊನ್ನಾವರ: ಹಳತು:38000-39000
  • ಕುಮಟಾ: ಹಳತು:39500-40200 ಹೊಸತು:35300-36200
  • ಸಾಗರ: 37500-38500
  • ಸಿರ್ಸಿ:39500-40600
  • ಸಿದ್ದಾಪುರ: 38300-40100
  • ಯಲ್ಲಾಪುರ: 39400-40900

ಚಾಲಿ ಅಡಿಕೆ ದರ ಈ ತಿಂಗಳ ಕೊನೆ ಒಳಗೆ ಕ್ವಿಂಟಾಲಿಗೆ ಇನ್ನೂ 1000-1500 ರೂ ಏರಿಕೆ ಆಗಬಹುದು ಎಂಬ ಸುದ್ದಿ ಇದೆ.ಮಾರುಕಟ್ಟೆಗೆ ಅಡಿಕೆ ಬರುತ್ತಿಲ್ಲ. ವ್ಯಾಪಾರಿಗಳಿಗೆ ವ್ಯವಹಾರ ಕಷ್ಟವಾಗಿದೆ. ಹಾಗಾಗಿ ಈ ದರ ಏರಿಕೆ ಸಾಧ್ಯತೆ ಹೆಚ್ಚು.

ಕರಿಮೆಣಸು ಧಾರಣೆ:

ಕರಿಮೆಣಸು ದರ ಈಗ ಏರಿಕೆ ಆಗುವ ಸಾಧ್ಯತೆ ಕಡಿಮೆ

ಕರಿಮೆಣಸು ದರ ಈಗ ಏರಿಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಇಳಿಕೆ ಆಗುವ ಸಂಭವ ಇಲ್ಲ. ಕೆಲವು ಕಡೆ ಕೊಯಿಲು ಆಗುತ್ತಿದೆ. ಇನ್ನು ಒಂದೆರಡು ತಿಂಗಳಲ್ಲಿ ಬಹುತೇಕ ಎಲ್ಲಾ ಕಡೆ ಕೊಯಿಲಿಗೆ ಪ್ರಾರಂಭವಾಗುತ್ತದೆ.  ಸ್ವಲ್ಪ ಬೇಗ ಬೆಳೆದಂತೆ ಕಾಣಿಸುತ್ತದೆ. ಅಂತರ ರಾಷ್ಟ್ರೀಯ ಬೇಡಿಕೆ ಇದೆ. ಜೊತೆಗೆ ಆಮದು ಮೆಣಸು ಸಹ ಬೆಲೆ ಹೆಚ್ಚು ಇರುವ ಕಾರಣ ಸ್ಥಳೀಯ ಮೆಣಸಿಗೆ ಬೇಡಿಕೆ ಇದೆ. ಬೆಲೆ ಏರುವುದು  ಮುಂದಿನ ಮೂರು ತಿಂಗಳ ತನಕ ಕಷ್ಟವಾದರೂ ಎಂದಿನಂತೆ ಇಳಿಕೆ ಆಗುವ ಸಂಭವ ಇಲ್ಲ. ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ದರ ಇಳಿಕೆಯಾದ ಕಾರಣ ಸ್ಥಳೀಯವಾಗಿ ಕ್ವಿಂಟಾಲಿಗೆ 500-1000 ಕಡಿಮೆಯಾಗಿದೆ.

  • ಮಂಗಳೂರು:58,000-59,000
  • ಪುತ್ತೂರು:55,000-58,500
  • ಕಾರ್ಕಳ: 57,500-59,000
  • ಸಕಲೇಶಪುರ: 58,500-59,500
  • ಸಿರ್ಸಿ:57,000-58,000
  • ಮೂಡಿಗೆರೆ:59,00-60,500
  • ಚಿಕ್ಕಮಗಳೂರು:58,500-59,500
  • ಕಳಸ:58,500-59,000

ಕೊಬ್ಬರಿ ಧಾರಣೆ:

ತೆಂಗಿನ ಕಾಯಿ- ಕೊಬ್ಬರಿಗೆ ದರ ಏನೂ ಚೇತರಿಕೆ ಆಗಲಿಲ್ಲ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಕ್ವಿಂಟಾಲಿಗೆ ರೂ.500 ರಷ್ಟು ಏರಿಕೆಯಾಗಿದೆ.  ಸ್ಥಳೀಯ ಕೊಬ್ಬರಿಗೆ ಕ್ವಿಂಟಾಲಿಗೆ 8000-8500 ತಿಪಟೂರು ಮಾರುಕಟ್ಟೆಯಲ್ಲಿ 8500-9550 ತನಕ ದರ ಇದೆ. ಮುಂದಿನ ದಿನಗಳಲ್ಲಿ ಕ್ವಿಂಟಾಲಿಗೆ 500-1000 ಹೆಚ್ಚಳವಾಗಬಹುದು. ಕೊಬ್ಬರಿ ದರ ಏರಿಕೆಯಾಗಲು ಸರಕಾರದ ಮಧ್ಯಪ್ರವೇಶದ ಅಗತ್ಯ ಇದೆ ಎನ್ನುತ್ತಾರೆ ವರ್ತಕರು. ಹಸಿ ಕಾಯಿಗೆ ಕಿಲೊ 28-30 ರೂ ತನಕ ಇದೆ.

ಕಾಫೀ ಧಾರಣೆ:

ಕಾಫೀ ಧಾರಣೆ ಕಳೆದ ಕೆಲವು ಸಮಯದಿಂದ ಸ್ಥಿರವಾಗಿದೆ.ಈಗ ಕೊಯಿಲಿನ ಸಮಯ. ಹಾಗಾಗಿ ದರ ಸ್ವಲ್ಪ ಸಮಯದ ನಂತರ ಏರಿಕೆ ಆಗಬೇಕು.

  • ಅರೇಬಿಕಾ ಪಾಚ್ ಮೆಂಟ್:50 kg: 13700-13800-14000
  • ಅರೇಬಿಕಾ ಚೆರಿ:50kg:7400-7600
  • ರೋಬಸ್ಟಾ ಪಾರ್ಚ್ ಮೆಂಟ್:50kg:11000-11600
  • ರೋಬಸ್ಟಾ ಚೆರಿ:50 kg :6700-6850

ಏಲಕ್ಕಿ ಧಾರಣೆ:

  • ಹಸುರು:8mm-1900-2200
  • ಹಸುರು:7mm -1600-1700
  • ಬಿಳಿ ಜರಡಿ:1400
  • ಬಿಳಿರಾಶಿ:1200

ಶುಂಠಿ:

ಈ ವರ್ಷ ಶುಂಠಿ ದರ ಚೆನ್ನಾಗಿದೆ

ಈ ವರ್ಷ ಶುಂಠಿ ದರ ಚೆನ್ನಾಗಿದೆ. ಈಗ ಇಷ್ಟು ದರ ಇರುವ ಕಾರಣ ಮುಂದೆ ಫ಼್ಹೆಬ್ರವರಿ ಮಾರ್ಚ್ ಸುಮಾರಿಗೆ ಇನ್ನೂ ದರ ಹೆಚ್ಚಳವಾಗುವ ಸಂಭವ ಇದೆ. ಹಸಿ ಶುಂಠಿ-4500 ವಾಷಿಂಗ್ :5000 ದಿಂದ  ಪ್ರಾರಂಭವಾಗಿ 14000 ತನಕ ಇದೆ. ಹಾಗೂ ಬೀಜದ ಶುಂಠಿಗೆ ರೂ.16000 ತನಕ ದರ ಇದೆ.

  • ಶಿವಮೊಗ್ಗ: 10000 ದಿಂದ 14000
  • ಉಡುಪಿ: 8900-9000
  • ಶಿಕಾರಿಪುರ:6000 -6200
  • ಮೈಸೂರು:4000-5000
  • ಹಾಸನ:7000 -7200

ರಬ್ಬರ್ ಧಾರಣೆ:

ನೈಸರ್ಗಿಕ ರಬ್ಬರ್ ಬೆಲೆ ಸ್ವಲ್ಪ ಚೇತರಿಕೆಯಾದಂತೆ ಕಾಣಿಸುತ್ತದೆ. ಆದರೆ ಇದು ಬಗಳ ಮಂದಗನೆಯ ತರಹ ಇದೆ. ತುಂಬಾ ಅನಿಶ್ಚಿತತೆ ಕಾಣಿಸುತ್ತದೆ.  ಕೆಲವು ಮೂಲಗಳ ಪ್ರಕಾರ ಇನ್ನು ದರ ಇಳಿಕೆ ಆಗದೆ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎಂಬುದು. ಇಂತಹ ಹೇಳಿಕೆಗಳು ಹಿಂದೆಯೂ ಬಂದಿತ್ತು. ಆದರೆ ದರ ಇಳಿಕೆ ಆಗಿದೆ.

  • RSS 4:153
  • RSS 5:144
  • Lot:131
  • Scrap: 81-90

ಎಲ್ಲಿಯ ತನಕ ದರ ಏರಬಹುದು?

ಅಡಿಕೆ ಧಾರಣೆ ಏರಿಕೆ ಆದದ್ದು ಇಳಿಕೆ ಆಗಲೇಬೇಕು. ಬಹುಶಃ ಈ ಸಾರಿ ಇನ್ನೂ ಒಂದು ತಿಂಗಳ  ತನಕವೂ ದರ ಎರಿಕೆ ಮುಂದುವರಿಯುವ ಸಾಧ್ಯತೆ ಇದೆ.  ಈಗ ಕೆಲವು ದಿನ ಸ್ವಲ್ಪ ಹಿಂದೆ ಬರಬಹುದು. ಕಾರಣ ಮಳೆಗೆ ಒದ್ದೆಯಾದ ಅಡಿಕೆ ಮಾರುಕಟ್ಟೆಗೆ ಬರುತ್ತದೆ ಎಂಬ ಕಾರಣ. ಎಲ್ಲವೂ ಒದ್ದೆ ಆಗಿರುವುದಿಲ್ಲವಾದರೂ  ದರ ಇಳಿಕೆಗೆ ಇದು ಒಂದು ಅವಕಾಶ ಅಷ್ಟೇ. ಮುಂದೆ ಕೆಂಪಡಿಕೆ ದರ 50000 ದಾಟುವ ಮುನ್ಸೂಚನೆ ಇರುವ ಕಾರಣ ಚಾಲಿ ಅದರ ಹಿಂದೆಯೇ ಸುಮಾರು 3-4  ಸಾವಿರ ಕಡಿಮೆ ದರದಲ್ಲಿ  ಇರಬಹುದು ಎಂಬ ಲೆಕ್ಕಾಚಾರ ಇದೆ.

ಅಡಿಕೆ ದಾಸ್ತಾನು ಇದ್ದವರು ಮಾರುಕಟ್ಟೆಗೆ ಒಮ್ಮೆಲೇ ಮಾರಾಟ ಮಾಡಬೇಡಿ. ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. ದೊಡ್ಡ ಪ್ರಮಾಣದಲ್ಲಿ ಮಾಲು ಬಂದ ಮರುದಿನ ದರ ಇಳಿಕೆ ಆಗುತ್ತದೆ. ಇದು ಪ್ರತೀ ಬೆಳೆಗಾರರೂ ತಿಳಿದಿರಬೇಕಾದ ಸಂಗತಿ. ಮುಂದೆ ಲೋಕಸಭೆ ಚುನಾವಣೆ ಇರುವ ಕಾರಣ ಕರ್ನಾಟಕದ ಜನತೆಗೆ ಅದರಲ್ಲೂ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮಾಡುವುದರಿಂದ ರಾಜಕೀಯವಾಗಿ ಲಾಭ ಇದೆ ಎಂಬುದು ಹಾಲೀ ಸರಕಾರಕ್ಕೆ ಚೆನ್ನಾಗಿ ತಿಳಿದಿದೆ ,ಹಾಗಾಗಿ ಅಡಿಕೆ ಆಮದು ಸ್ವಲ್ಪ ಬಿಗು ಆಗಲಿದೆ. ದರ ಏರಿಕೆಗೆ ಇದು ಅನುಕೂಲವಾಗಲಿದೆ.

Leave a Reply

Your email address will not be published. Required fields are marked *

error: Content is protected !!