ಉತ್ತಮ ಮೆಣಸಿಗೆ 40 ರೂ. ಬೆಲೆ ಹೆಚ್ಚು.

ನಾವು ಹೆಚ್ಚಾಗಿ ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಉತ್ತಮ ಗಾರ್ಬಲ್ ಮಾಡಿದ ಮೆಣಸಿಗೆ  ಇತರ ಮೆಣಸಿಗಿಂತ 30-40 ರೂ. ಹೆಚ್ಚು ಇದೆ.  ಕೆಲವರು ಇದನ್ನು ಆನ್ಲೈನ್ನಲ್ಲಿ ಕಿಲೋ 400 ಕ್ಕೂ ಮಾರಿದ್ದು ಇದೆ.

ಪರಿಸ್ಥಿತಿ ಹೀಗೆ ಮಾಡಿದೆ:

  • ದೊಡ್ದ ದೊಡ್ಡ ಮೆಣಸು ಬೆಳೆಗಾರರು  ತೋಟವನ್ನು ಗುತ್ತಿಗೆ  ಕೊಡುತ್ತಾರೆ.
  • ಆಗ ಬಲಿತದ್ದು ಮಾತ್ರ ಕೊಯಿಲು ಮಾಡಿಸುವುದು  ಕಷ್ಟವಾಗುತ್ತದೆ.


Click to WhatsApp us and build your website now!

  • ಕೆಲಸಗಾರರ ಸಮಸ್ಯೆಯೂ ಸಹ ಇದಕ್ಕೆ ಅಡ್ಡಿಯಾಗಿದೆ.

ಯಾವಾಗ ಕೊಯಿಲು ಮಾಡಬೇಕು:

ಇಷ್ಟು ಹಣ್ಣು ಆಗುವಾಗ ಕೊಯ್ಯುವುದು ಉತ್ತಮ. ಕೊಯಿಲಿಗೆ ಒಂದು ವಾರ ಮುಂಚೆ ನೀರು ಕಡಿಮೆ ಮಾಡಿ.
  • ಮೆಣಸು ಕಾಳುಗಳು ಬೆಳೆಯಲು 8  ತಿಂಗಳು ಕಾಲಾವಧಿ ಬೇಕು.
  • ಈ ಲೆಕ್ಕಾಚಾರದಲ್ಲಿ ಜುಲೈ ತಿಂಗಳಲ್ಲಿ ಹೂ ಕರೆ ಬಿಟ್ಟ ಕಾಳುಗಳು ಬೆಳೆಯುವ ಸಮಯ ಫೆಬ್ರವರಿ ತಿಂಗಳ ಕೊನೆ.
  • ಆದಾಗ್ಯೂ ಚಳಿ ಹೆಚ್ಚು ಇಲ್ಲದ ಕಾರಣ ಕರಾವಳಿಯಲ್ಲಿ  ಫೆಬ್ರವರಿ ಎರಡನೇ ವಾರ ಬಲಿಯಲು ಪ್ರಾರಂಭವಾಗಬಹುದು.
  • ಆ ಸಮಯದ ವರೆಗೆ ಕೊಯಿಲಿಗೆ ಮುಂದಾಗಬೇಡಿ.
  • ಎಡೆ ಎಡೆಯಲ್ಲಿ ಒಂದೆರಡು ಕರೆಗಳು ಹಣ್ಣಾಗಿದ್ದರೆ ಅದು ಮಳೆಗಾಲ ಮುಂಚಿನ ಮಳೆಗೆ  ಹೂ ಕರೆ ಬಿಟ್ಟು ಉಳಿದ ಕರೆಗಳೇ ಹೊರತು ಬೆಳೆ ಸೀಸನ್ ನ ಕರೆಗಳಲ್ಲ.
ಬಲಿಯದ ಕಾಳು
  • ಬಳ್ಳಿಯಲ್ಲಿ ತುದಿ ಭಾಗದಲ್ಲಿ ಅರ್ಧ 10-15% ಕರೆಗಳಲ್ಲಿ ಹಣ್ಣು ಕಾಳುಗಳನ್ನು ಕಂಡಾಗ ಕೊಯಿಲಿಗೆ ಪ್ರಾರಂಭಿಸಿರಿ.
  • ಹಕ್ಕಿಗಳಿಂದ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೂ ಸಹ ಬಲಿತ ಕಾಳುಗಳನ್ನೇ ಕೊಯಿಲು ಮಾಡಿದರೆ ಆ ನಷ್ಟವೂ ಹೊಂದಿಕೆಯಾಗುತ್ತದೆ.
  • ಬಲಿತ ಕಾಳುಗಳ ಬಣ್ಣ ಎಳೆಯ ಕಾಳುಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದನ್ನು ಕೆಲಸಗಾರರಿಂದ ಗುರುತಿಸುವುದು ಕಷ್ಟವಾಗಬಹುದು.
  • ಆದರೂ ಬಲಿಯದ ಕಾಳುಗಳನ್ನು ಉಗುರಿನಲ್ಲಿ ಒತ್ತಿದಾಗ ಅದು ತುಂಡಾಗುತ್ತದೆ.
  • ಬಲಿತಿದ್ದರೆ ಸಿಪ್ಪೆ ಮಾತ್ರ ಗಾಯವಾಗುತ್ತದೆ.
ಬಲಿತ ಮೆಣಸು

ಹೇಗೆ  ಕೊಯಿಲು ಮಾಡಬೇಕು:

  • ಮೊದಲಾಗಿ ಕೊಯಿಲು ಮಾಡುವವರಿಗೆ  ಬಲಿತ ಕಾಳಿನ ಮತ್ತು ಬಲಿಯದ ಕಾಳಿನ ಗುರುತು ಮಾಡಿಕೊಡಬೇಕು. ಆ ಪ್ರಕಾರ ಕೊಯಿಲು ಮಾಡಲು ಹೇಳಬೇಕು
  • ಮೊದಲು ಬಿಸಿಲು ಬೀಳುವ ಜಾಗದ ಬಳ್ಳಿಗಳ ಕೊಯಿಲು ಮಾಡಬೇಕು. ನೆರಳಿನ ಜಾಗದ್ದನ್ನು  ಕೊನೆಗೆ ಇಡಬೇಕು.
  • ಬಳ್ಳಿಯನ್ನು ಎರಡು ವಿಭಾಗ ಮಾಡಿಕೊಳ್ಳಬೇಕು. ತುದಿಯ ಅರ್ಧ ಭಾಗ ಬಿಸಿಲು ಚೆನ್ನಾಗಿ ಬೀಳುವ ಕಾರಣ ಬೇಗ ಬಲಿಯುತ್ತದೆ.
  • ಅದನ್ನು ಮೊದಲು ಕೊಯಿಲು ಮಾಡಬೇಕು.
ಸರಿಯಾಗಿ ಬೆಳೆದ ಕರಿಮೆಣಸು ಈ ರೀತಿ ಇರುತ್ತದೆ
  • ಎಲ್ಲಾ  ತುದಿ ಭಾಗದ ಕೊಯಿಲು ಮುಗಿದ ನಂತರ ಎರಡನೇ ಭಾಗದ್ದನ್ನು ಕೊಯಿಲು ಮಾಡಬೇಕು.
  • ಕೊಯಿಲು ಮಾಡುವ ಕರೆಯಲ್ಲಿ ಒಂದೆರಡಾದರೂ ಕಾಳುಗಳು ಹಣ್ಣಾಗಿದ್ದರೆ  ಒಳ್ಳೆಯದು.
  • ಕೊಯಿಲಿಗೆ ಒಂದು ವಾರಕ್ಕೆ ಮುಂಚೆ ನೀರು ನಿಲ್ಲಿಸಿದರೆ ಆ ಕಾಳಿನ ತಿರುಳು ಚೆನ್ನಾಗಿ ಕೂಡಿಕೊಂಡು ತೂಕ ಬರುತ್ತದೆ.
ಬಲಿಯದ ಮೆಣಸು ಒಣಗಿದಾಗ ಹೀಗಾಗುತ್ತದೆ

ಹೆಚ್ಚು ತೂಕ ಬರಲು ಕೊಯಿಲಿಗೆ 1 ತಿಂಗಳು ಮುಂಚೆ 1 ಕಿಲೋ ಪೊಟ್ಯಾಶಿಯಂ ನೈಟ್ರೇಟ್ , 200 ಲೀ. ನೀರು ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ. ಕೊಯಿಲಿಗೆ 15 ದಿನ ಇರುವಾಗ 1 ಕಿಲೋ ಸಲ್ಫೇಟ್ ಆಫ್ ಪೊಟ್ಯಾಶ್ ಅನ್ನು  200 ಲೀ. ನೀರು ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ.

  • ಸ್ವಲ್ಪ ಕೊಯಿಲು ಮಾಡಿ ಒಣಗಿಸಿದಾಗ ಅದು ಪೂರ್ತಿ ಬೆಳೆದಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ.

ಗುಣಮಟ್ಟದ ಮೆಣಸಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆ ಇರುತ್ತದೆ. ಭಾರತದ ಮೆಣಸು ಗುಣಮಟ್ಟಕ್ಕೆ  ಹೆಸರುವಾಸಿ. ಇದು ಉಳಿಯಲು ಬಲಿತ ಕಾಳನ್ನೇ ಕೊಯಿಲು ಮಾಡಿ.

 
 

One thought on “ಉತ್ತಮ ಮೆಣಸಿಗೆ 40 ರೂ. ಬೆಲೆ ಹೆಚ್ಚು.

  1. ದಯವಿಟ್ಟು ಆನ್ಲೈನ್ ನಲ್ಲಿ ಕರಿಮೆಣಸು ಮಾರಾಟ ಮಾಡುವುದು ತಿಳಿಸಿ

Leave a Reply

Your email address will not be published. Required fields are marked *

error: Content is protected !!