ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ ಪರಿಣಾಮ ಹೆಚ್ಚು.
- ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ.
- ನಾವು ಇನ್ನೂ ಅಡಿಕೆ ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು ತಡ ಮಾಡುತ್ತೇವೆ.
- ಮಳೆ ಸರಿಯಾಗಿ ಹಿಡಿದ ನಂತರ ಅಲ್ಪ ಸ್ವಲ್ಪ ಮಳೆಯನ್ನೂ ಲೆಕ್ಕಿಸದೇ ಸಿಂಪರಣೆ ಮಾಡುತ್ತೇವೆ.
- ಇದರಿಂದ ಏನಾಗುತ್ತದೆ ಇಲ್ಲಿದೆ ಮಾಹಿತಿ.
ರೋಗ ಪ್ರಾರಂಭ:
- ಸಾಮಾನ್ಯವಾಗಿ ಸ್ಪ್ರಿಂಕ್ಲರ್ ನೀರಾವರಿ ಮಾಡುವ ಸದಾ ತೇವವಾಗಿರುವ ತೋಟಗಳಲ್ಲಿ ಕೊಳೆ ರೋಗಕ್ಕೆ ಕಾರಣವಾದ Phytophthora arecae ಶಿಲೀಂದ್ರ ತೋಟದಲ್ಲೇ ಬೀಜಾಣು ರೂಪದಲ್ಲಿ ಇರುತ್ತದೆ.
- ಮೊದಲ ಮಳೆ ಜೊತೆಗೆ ಹೆಚ್ಚಿನ ಆರ್ಧ್ರತೆಯಲ್ಲಿ ಇದು ಬೀಜಾಂಕುರಗೊಳ್ಳಲಾರಂಭಿಸುತ್ತದೆ.
- ಇದೇ ಸಮಯದಲ್ಲಿ ಆಗಾಗ ಮಳೆ, ಗಾಳಿ ಮತ್ತು ಸಿಡಿಲು ಮಿಂಚುಗಳು ಉಂಟಾಗುತ್ತದೆ.
- ಇದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಶಿಲೀಂದ್ರದ ಬೀಜಾಣುಗಳ ಪ್ರಸಾರಕ್ಕೆ ಮತ್ತು ಮೊಳೆಯುವಿಕೆಗೆ ಸಹಕಾರಿಯಾಗುತ್ತದೆ.
- ಸಾಮಾನ್ಯವಾಗಿ ತೆಂಗಿನ ಮರದ ಗರಿ ಕೊಳೆಯುವ ರೋಗ ಪ್ರಾರಂಭವಾಗುವುದು ಮುಂಗಾರು ಮಳೆ ಪ್ರಾರಂಭದಲ್ಲಿ.
- ಅದೇ ರೀತಿಯಲ್ಲಿ ಎಳೆಯ ಅಡಿಕೆ ಗಿಡಗಳಲ್ಲೂ ಇದೇ ಸಮಯದಲ್ಲಿ ಸುಳಿ ಕೊಳೆ ಪ್ರಾರಂಭವಾಗುತ್ತದೆ. ಇದೆಲ್ಲಾ ಒಂದೇ ಕುಟುಂಬಕ್ಕೆ ಸೇರಿದ ಶಿಲೀಂದ್ರಗಳಿಂದ ಆಗುವ ತೊಂದರೆ.
ಅಡಿಕೆಯ ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರವನ್ನು ಅವು ಬೀಜಾಂಕುರವಗುವ ಸಮಯದಲ್ಲೇ ಹತ್ತಿಕ್ಕಿದರೆ ಅದರ ತೊಂದರೆ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಅಡಿಕೆ ಮರದ ಹೂ ಗೊಂಚಲು ಸಂದಿನಲ್ಲಿ, ಹಿಂದಿನ ವರ್ಷದ ಹಳೆಯ ಹೂಗೊಂಚಲು ಬುಡದಲ್ಲಿ ಬೀಜಾಣುಗಳು ಇರುತ್ತವೆ. ಈ ಬೀಜಾಣುಗಳು ಮೊದಲ ಮಳೆ ಬಂದಾಗ ಬೀಜಾಂಕುರವಾಗಲು ಸಜ್ಜಾಗುತ್ತದೆ.
- ಈಗ ಅದಕ್ಕೆ ಪ್ರತಿರೋಧ ಉಂಟು ಮಾಡುವ ಕೊಳೆ ರೋಗ ನಿಯಂತ್ರಕವನ್ನು ಸಿಂಪರಣೆ ಮಾಡಿದರೆ ಅವುಗಳ ಸಂಖ್ಯಾಭಿವೃದ್ದಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.
- ಬೋರ್ಡೋ ದ್ರಾವಣಕ್ಕೆ ಬರೇ ಶಿಲೀಂದ್ರ ನಿಯಂತ್ರಕ ಗುಣ ಮಾತ್ರವಲ್ಲ.
- ಇದು ಬ್ಯಾಕ್ಟೀರಿಯಾ ನಿಯಂತ್ರಕವೂ ಹೌದು. ಇದು ಕೊಳೆ ರೋಗ ಬಾರದಂತೆ ತಡೆಯುವ ಮುನ್ನೆಚ್ಚರಿಕಾ ಔಷಧಿ ಮಾತ್ರ.
ಬೇಗ ಸಿಂಪರಣೆಯಿಂದ ಅನುಕೂಲ:
- ಅಡಿಕೆ ಮರಗಳಿಗೆ ಧೀರ್ಘ ಕಾಲದ ತನಕ ಉಳಿದುಕೊಂಡು ರೋಗ ಸಾಧ್ಯತೆಯನ್ನು ಕಡಿಮೆ ಮಾಡುವ ಔಷಧಿಯಲ್ಲಿ ಬೋರ್ಡೋ ದ್ರಾವಣವೇ ಪ್ರಮುಖವಾದುದು.
- ಪರಿಶುದ್ಧವಾದ ಮೈಲುತುತ್ತೇ ಮತ್ತು ಸುಣ್ಣಕ್ಕೆ ರೋಗ ಹತ್ತಿಕ್ಕುವ ಎಲ್ಲಾ ಗುಣಗಳೂ ಇವೆ.ಮೈಲು ತುತ್ತೆಯಲ್ಲಿ ತಾಮ್ರ ಮತ್ತು ಸಲ್ಫರ್ ಎರಡು ಸಸ್ಯಕ್ಕೆ ಬೇಕಾಗುವ ಪೋಷಕಾಂಶ ಇರುತ್ತದೆ.
- ತಾಮ್ರ ಒಂದು ಲಘು ಪೋಷಕಾಂಶ, ಸಲ್ಫರ್ ದ್ವಿತೀಯ ಅವಷ್ಯ ಪೋಷಕಾಂಶ. ಸುಣ್ಣದಲ್ಲಿ ಕ್ಯಾಲ್ಸಿಯಂ ಎಂಬ ದ್ವಿತೀಯ ಅವಶ್ಯ ಪೋಷಕಾಂಶ ಇರುತ್ತದೆ.
- ಇದನ್ನು ಮುಂಗಾರು ಮಳೆಗೆ ಮುಂಚೆ ಸಿಂಪಡಿಸಿದಾಗ ಅಡಿಕೆ ಮರಕ್ಕೆ ಈ ಮೂರು ಪೋಷಕಗಳು ದೊರೆತು ಕಾಯಿ ಉದುರುವಿಕೆ, ಮತ್ತು ಕೆಲವು ರಸ ಹೀರುವ ಕೀಟಗಳ ಸಮಸ್ಯೆಯೂ ಕಡಿಮೆಯಾಗುತ್ತದೆ.
- ಗಂಧಕ ಮತ್ತು ಕ್ಯಾಲ್ಸಿಯಂ ಈ ಸಮಯದಲ್ಲಿ ಸಸ್ಯಕ್ಕೆ ಅಂತರ್ಗತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಡುತ್ತದೆ.
- ಒಂದೆರಡು ಮೂಂಗಾರು ಪೂರ್ವ ಮಳೆ ಬಂದ ತಕ್ಷಣ ಮಿಳ್ಳೆ ಉದುರುವುದು ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರ ಸಮಸ್ಯೆ.
- ಇದಕ್ಕೆ ಏನು ಸಿಂಪಡಿಸಬೇಕು ಎಂದು ಎಲ್ಲರೂ ಕೇಳುತ್ತಾರೆ.
- ಕೀಟನಾಶಕ- ರೋಗ ನಾಶಕ ಸಿಂಪಡಿಸುವ ಬದಲು ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ ಖರ್ಚು ಕಡಿಮೆಯಾಗುತ್ತದೆ. ಇದರಿಂದ ತೊಂದರೆಯಂತೂ ಇಲ್ಲವೇ ಇಲ್ಲ. ಪರಿಹಾರವೂ ಸಿಗುತ್ತದೆ.
ಕೊಳೆ ರೋಗ ತಡೆಗೆ ಬೇರೆ ರೋಗ ನಾಶಕಗಳು ಇದೆಯಾದರೂ ಇದರಷ್ಟು ಧೀರ್ಘ ಕಾಲದ ತನಕ ಅದರ ಪರಿಣಾಮ ಇರುವುದಿಲ್ಲ. ಇದು ಅಗ್ಗವೂ ಆಗುತ್ತದೆ.ಶೇ 1 ರ ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಸಿಂಪರಣೆ ಮಾಡಬಾರದು.
ಒಂದು ಎಕರೆಗೆ ಎಷ್ಟು ದ್ರಾವಣ ಬೇಕಾಗಬಹುದು??