ಮೆಣಸಿನ ಕಾಯಿಯ ಅತೀ ದೊಡ್ದ ಆರ್ಥಿಕ ಬೆಳೆಯಾಗಿದ್ದು, ಮೆಣಸು ಬೆಳೆಗಾರರು ಈ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ಕೀಟ ನಿರ್ವಹಣೆಗೇ ತಗಲುತ್ತದೆ. ಈ ಕೀಟಗಳಲ್ಲಿ ಮುಖ್ಯವಾದುದು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿ. ಯಾರೇ ಬೆಳೆ ಬೆಳೆದರೂ ಈ ಕೀಟ ಅವರನ್ನು ಬಿಟ್ಟಿದ್ದಿಲ್ಲ. ಇನ್ನೇನು ಸಸಿ ಬೆಳೆದು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುವಾಗಈ ಕೀಟ ಹಾಜರ್. ಎಲೆಗಳು ಮುರುಟಿಕೊಂಡು ಅಲ್ಲಿಗೇ ಬೆಳೆವಣಿಗೆ ಕುಂಠಿತವಾಗುತ್ತದೆ.
ಥಿಪ್ಸ್ ನುಶಿ ಏನು – ಹೇಗೆ:
- ಇದು ಒಂದು ರಸ ಹೀರುವ ಕೀಟ ಇಅದರ ಹೆಸರು Scirtothrips dorsalis and yellow mite, Polyphagotarsonemus latus
- ಇದು ಬೆಳೆಯ ಯಾವುದೇ ಹಂತದಲ್ಲಿ ಬರಬಹುದಾದ ಕೀಟ.
- ಈ ಕೀಟ ಅತೀ ಸಣ್ಣದಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.
- ಇವು ಎಲೆಯ ಕೆಳ ಭಾಗದಲ್ಲಿ ಕುಳಿತು ರಸ ಹೀರುತ್ತವೆ.
- ಎಲೆಗಳು ತುದಿಯಿಂದ ಒಳಮೈಗೆ ಮುದುಡಿಕೊಳ್ಳುತ್ತವೆ.
- ಈ ರೀತಿ ಮುರುಟುವುದಕ್ಕೆ ಇದನ್ನು ಮುರುಟು ರೋಗ ಎನ್ನುತ್ತಾರೆ.
- ಚಂಡಿ ರೋಗ ಎಂಬುದಾಗಿಯೂ ಕರೆಯುತ್ತಾರೆ.
- ಪ್ರಾರಂಭದಲ್ಲಿ ಇದು ಸ್ವಲ್ಪ ಸ್ವಲ್ಪ ಇರುತ್ತದೆ. ನುಶಿಯ ಸಂಖ್ಯಾಭಿವೃದ್ದಿಯಾದಂತೆ ಹೆಚ್ಚಾಗುತ್ತಾ ಬರುತ್ತದೆ.
- ಸಸಿ ಮಡಿಯಲ್ಲಿಯೂ ಈ ಕೀಟ ಬಾಧೆ ಕಂಡು ಬರುತ್ತದೆ.
- ನಾಟಿ ಮಾಡಿದ 1-2 ತಿಂಗಳಲ್ಲಿಯೂ ಕಂಡು ಬರುತ್ತದೆ.
- ಇದು ಹೆಚ್ಚಾದರೆ ಇಡೀ ಬೆಳೆಯೇ ಹೋಯಿತು ಎಂದರ್ಥ.
ಈ ನುಶಿಗಳು ರಸ ಹೀರುವುದು ಮಾತ್ರವಲ್ಲ. ಮುರುಟು ರೋಗದ ನಂಜಾಣುವನ್ನು ಗಿಡದಿಂದ ಗಿಡಕ್ಕೆ ಹರಡುತ್ತದೆ. ಹೂ ಬಿಡುವ ಮುಂಚೆ ಆದರೆ ಹೂ ಮೊಗ್ಗು ಬರಲು ತಡೆಯೊಡ್ಡುತ್ತದೆ. ಹೂ ಬಿಡುವ ಹಂತದಲ್ಲಿ ಹೂ ಮೊಗ್ಗುಗಳು ಉದುರುತ್ತವೆ. ಮಿಡಿಯಾಗುವ ಹಂತದಲ್ಲಿ ಮಿಡಿಗಳು ಉದುರುತ್ತವೆ.
- ಬೇಸಿಗೆ ಕಾಲದ ಬೆಳೆಗೆ ಮತ್ತು ಚಳಿಗಾಲದ ಬೆಳೆಗೆ ಈ ನುಶಿಯ ಹಾವಳಿ ಹೆಚ್ಚು.
- ಒಣ ವಾತಾವರಣ ಇದ್ದಾಗ ಇದರ ಸಂಖ್ಯಾಭಿವೃದ್ದಿ ಹೆಚ್ಚುತ್ತಾ ಹೋಗುತ್ತದೆ.
- ಮಳೆ ಬಂದರೆ ತಂತತಿ ಕ್ಷೀಣಿಸುತ್ತದೆ. ಗಾಳಿಯ ಮೂಲಕ ಗಿಡದಿಂದ ಗಿಡಕ್ಕೆ ಹರಡುತ್ತದೆ.
- ಬೆಳೆದ ಕೀಟವು ಎಲೆಯ ಕೆಳಗೆ 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.
- 4-5 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.
- ಬೆಳೆದ ಕೀಟವು 10-15 ದಿನಗಳ ತನಕ ಜೀವಿಸುತ್ತದೆ.
- ಡಿಸೆಂಬರ್ ಜನವರಿ ತಿಂಗಳಲ್ಲಿ ಈ ಕೀಟದ ಹವಳಿ ಜಾಸ್ತಿ.
ನಿಯಂತ್ರಣ:
- ಹೆಚ್ಚಿನ ರೈತರು ಇದರ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳನ್ನೇ ಬಳಕೆ ಮಾಡುತ್ತಾರೆ.
- ವಾಣಿಜ್ಯಿಕವಾಗಿ ಬೆಳೆ ಬೆಳೆಸುವಾಗ ಇದು ಅನಿವಾರ್ಯವೂ ಆಗಿರುತ್ತದೆ.
- ಈ ನುಶಿ ಬಾಧೆಗೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ.
-
– ಎಸ್- 3 , ಪಂಥ್ ಸಿ- 1, ಪಂಥ್ ಸಿ- 2, ಜ್ವಾಲಾ, ಮುಸಲವಾಡಿ, ಕೆ. 2425 ಮುಂತಾದ ತಳಿಗಳು ನಿರೋಧಕ ಶಕ್ತಿ ಪಡೆದಿವೆ.
ಯಾವ ಕಾರಣಕ್ಕೆ ಇದು ಹೆಚ್ಚಾಗುತ್ತಿದೆ:
- ಮೆಣಸನ್ನು ಏಕ ಬೆಳೆಯಾಗಿ ಬೆಳೆಸುವಾಗ ಈ ನುಶಿಯ ಸಮಸ್ಯೆ ಹೆಚ್ಚಾಗುತ್ತದೆ.
- ಇದನ್ನು ತಿನ್ನುವ ಕೆಲವು ಪರಾವಲಂಭಿ ಜೀವಿಗಳಿವೆ. ಗುಲಗುಂಜಿ ಹುಳ, ಕೆಲವು ಜೇಡಗಳು, ಕ್ರೈಸೋಫೆರ್ಲಾ ಮುಂತಾದವುಗಳು.
- ಇವು ನಿರಂತರ ಕೀಟನಾಶಕದ ಬಳಕೆಯ ಕಾರಣದಿಂದ ನಾಶವಾಗಿದೆ.
- ಮೆಣಸು ಬೆಳೆಯುವ ರೈತರು ಕೀಟ ಬಾರದಂತೆ ಮುನ್ನೆಚ್ಚರಿಕೆಯಾಗಿ ಸಿಂಪರಣೆ ಕೈಗೊಳ್ಳುತ್ತಾರೆ. ಅದು ಪರಭಕ್ಷಕಗಳ ನಾಶಕ್ಕೆ ಕಾರಣವಾಗುತ್ತಿದೆ.
- ಕೀಟ ನಾಶಕಗಳಲ್ಲಿ ಅಂತರ್ ವ್ಯಾಪೀ ಕೀಟನಾಶಕಗಳ ಬಳಕೆ ಹೆಚ್ಚಾದ ಕಾರಣ ನುಶಿಗಳು ನಿರೋಧಕ ಶಕ್ತಿ ಬೆಳೆಸಿಕೊಂಡಿವೆ.
- ರೈತರು ಶಿಫಾರಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟ ನಾಶಕ ಬಳಕೆ ಮಾಡುತ್ತಿದ್ದಾರೆ.
- ಎಲೆಗಳ ಅಡಿ ಭಾಗದಲ್ಲಿ ಕೀಟ ವಾಸವಾಗಿರುತ್ತದೆ, ರೈತರು ಮೇಲ್ಭಾಗದಲ್ಲೇ ಸಿಂಪರಣೆ ಮಾಡುತ್ತಾರೆ. ಇದು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿಲ್ಲ.
ಯಾವ ಸಿಂಪರಣೆ ಉತ್ತಮ:
- ಕೀಟ ಬರುವ ಮುಂಚೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಪರಣೆ ಮಾಡುವಾಗ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪರಣೆ ಮಾಡಬೇಕು. ಇದು ಎಲೆ ಅಡಿ ಭಾಗದಲ್ಲಿ ಲೇಪನವಾದಂತೆ ಅಂಟಿದರೆ ಒಳ್ಳೆಯದು.
- ಮೆಣಸಿನ ಜೊತೆಗೆ ಬಲೆ ಬೆಳೆಗಳಾದ ಚೆಂಡು ಹೂವು, ಬೆಂಡೆ, ಹತ್ತಿ ಬೆಳೆಸಿದರೆ ಅದಕ್ಕೆ ಮೊದಲು ನುಶಿಗಳು ಹಾನಿ ಮಾಡುತ್ತವೆ.
- ಪ್ರಾರಂಭದ ಹಂತದಲ್ಲಿ ಎಲೆ ಅಡಿ ಭಾಗಕ್ಕೆ ಬೀಳುವಂತೆ ವೆಟ್ಟೆಬಲ್ ಸಲ್ಫರ್ ಸಿಂಪರಣೆ ಮಾಡಿ.ಇದನ್ನು ರೋಗ ಬರುವ ಮುಂಚೆಯೇ ಮಾಡುವುದು ಉತ್ತಮ.
- ಯಾವಾಗಲೂ ಕೊನೇ ಹಂತದಲ್ಲಿ ಅನಿವಾರ್ಯವಾದಾಗ ಮಾತ್ರ ಅಂತರ್ವ್ಯಾಪೀ ಕೀಟನಾಶಕ ( ಇಮಿಡಾ ಕ್ಲೋಫ್ರಿಡ್- ರೀಜೆಂಟ್) ಬಳಕೆ ಮಾಡಬೇಕು. ಯವಾಗಲೂ ಶಿಫಾರಸಿಗಿಂತ ಹೆಚ್ಚು ಬಳಸಬಾರದು.
- ಮೆಣಸಿನ ಹೊಲಕ್ಕೆ ಬೆಳಗ್ಗಿನ ಸಮಯ 10 ನಿಮಿಷ ಕಾಲ ಹೊತ್ತು ತುಂತುರು ನೀರಾವರಿ ಮಾಡುವುದರಿಂದ ಅವು ತೊಳೆದು ಹೋಗಿ ನಾಶವಾಗುತ್ತದೆ. ( ತೆರೆದ ವಾತಾವರಣದಲ್ಲಿ ಬೆಳೆದಾಗ)
- ಎಲೆ ಅಡಿ ಭಾಗಕ್ಕೆ ಲೇಪನವಾಗುವಂತೆ ಬೂದಿ ಇತ್ಯಾದಿ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಕಾಣಬಹುದು.
ಚಳಿಗಾಲದಲ್ಲಿ ಮೆಣಸಿನ ಬೆಳೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಪರಭಕ್ಷಕ ಕೀಟಗಳು ನಾಶವಾಗುವಂತ ಕೀಟನಾಶಕ ಬಳಸಬೇಡಿ.