ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ.

ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ.

ಮೆಣಸಿನ ಬೆಳೆಯಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಎಲೆ ಮುರುಟುವಿಕೆ. ಮೆಣಸು ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಈ ಸಮಸ್ಯೆ ಕಾಣಿಸುತ್ತದೆ. ಇದರಿಂದಾಗಿ ಭಾರೀ ಪ್ರಮಾಣದ ಇಳುವರಿ ಕಡಿಮೆಯಾಗುತ್ತದೆ. ಈ ರೋಗ ಯಾವ ಕಾರಣಕ್ಕೆ ಬರುತ್ತದೆ. ಯಾವ ಸಮಯದಲ್ಲಿ ಇದು ಹೆಚ್ಚು. ಇದನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

ಮೆಣಸನ್ನು ಜಗತ್ತಿನ ಎಲ್ಲಾ ಜನರೂ ಒಂದು ಪ್ರಮುಖ ಮಸಾಲೆ ವಸ್ತುವಾಗಿ ಬಳಕೆ ಮಾಡುತ್ತಾರೆ. ಎಲ್ಲಾ ದೇಶಗಳಲ್ಲೂ ಇದು ಒಂದು ಪ್ರಮುಖ ವಾಣಿಜ್ಯ ಬೆಳೆಯೂ ಹೌದು. ಮಸಾಲೆ ಪದಾರ್ಥಗಳನ್ನೂ ಬಳಸುವ ಉದ್ದೇಶ ರುಚಿ, ಬಣ್ಣ , ಸುವಾಸನೆ ಇತ್ಯಾದಿ ಉದ್ಡೇಶಗಳಿಗಾಗಿ. ಮೆಣಸನ್ನು ರುಚಿ, ಬಣ್ಣ  ಇವೆರದೂ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಾರೆ. ಮೆಣಸಿನ ಕಾಯಿಯ ಇತಿಹಾಸ  ಬಹಳ ಹಳೆಯದು. ಕೆಲವು ಹಿರಿಯರು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ಮೆಣಸು ಬಳಕೆ  ಅನಾದಿಕಾಲದಿಂದಲೂ ಇದ್ದಿಲ್ಲವೇನೋ. ಹಿಂದೆ ಖಾರದ ಉದ್ಡೇಶಕ್ಕೆ ಕರಿಮೆಣಸನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರಂತೆ.  ಮೆಣಸಿಗೆ ಚಿಲ್ಲಿ (Chilli) ಎನ್ನುತ್ತಾರೆ. Chili ಮೆಕ್ಸಿಕೋ ದೇಶದ ಭಾಷೆಯಿಂದ ಬಂದಿರಬಹುದು ಎನ್ನುತ್ತಾರೆ. ಕೊಲಂಬಸನ (1492 ರ ಸುಮಾರಿಗೆ) ಕಾಲದಲ್ಲಿ ಇದು ಜಗತ್ತಿನ ಬೇರೆ ಬೇರೆ ಬೇರೆ ದೇಶಗಳಿಗೆ ಪರಿಚಯಿಸಲ್ಪಟ್ಟಿತು ಎನ್ನುತ್ತಾರೆ. 16 ನೇ ಶತಮಾನದಲ್ಲಿ ಪೋರ್ಚುಗೀಸರ ಮೂಲಕ ಮೆಣಸು ಭಾರತಕ್ಕೆ ಇದು ಪರಿಚಯಿಸಲ್ಪಟ್ಟಿತು ಎಂಬ ಮಾಹಿತಿ ಇದೆ.

ನಮ್ಮ ದೇಶದಲ್ಲಿ ಮೆಣಸಿ ಬೆಳೆ:

ನಮ್ಮ ದೇಶದ ಹೆಚ್ಚಿನೆಲ್ಲ ರಾಜ್ಯಗಳಲ್ಲಿ ಮೆಣಸನ್ನು ಹೆಚ್ಚೂ ಕಡಿಮೆ  ಪ್ರಮಾಣದಲ್ಲಿ ಬೆಳೆಯುತ್ತಾರೆ. ಕೆಲವು ಕಡೆ ವಾಣಿಜ್ಯಿಕವಾಗಿ ಬೆಳೆದರೆ  ಕೆಲವು ಕಡೆ ಮನೆ ಬಳಕೆಗಾಗಿ ಮಾತ್ರ ಬೆಳೆಯುತ್ತಾರೆ. ಇದರಲ್ಲಿ  ಹಸಿ ಮೆಣಸು( ಹಸುರು) ಮತ್ತು  ಒಣ ಮೆಣಸನ್ನು ಬಳಕೆ ಮಾಡಲಾಗುತ್ತದೆ. ಹಸುರು ಮೆಣಸನ್ನು  ತಾಜಾ ಬಳಕೆಗೆ ಹೆಚ್ಚಾಗಿ ಬಳಕೆ ಮಾಡುವುದು, ಒಣ ಮೆಣಸನ್ನು ದಾಸ್ತಾನು ಮಾಡಿ ಧೀರ್ಘ ಕಾಲದ ತನಕ ಕಾಪಿಡಬಹುದು. ಒಣ ಮೆಣಸು ಮಸಾಲೆಗೆ (ಅಡುಗೆ) ಕೆಂಪು ಬಣ್ಣವನ್ನೂ  ಜೊತೆಗೆ ಖಾರದ ರುಚಿಯನ್ನೂ ಒಂದು ರೀತಿಯ ಸುವಾಸನೆಯನ್ನೂ ನೀಡುತ್ತದೆ. ನಮ್ಮ ದೇಶದ ಒಟ್ಟು ಮೆಣಸಿನ ಉತ್ಪಾದನೆಯಲ್ಲಿ ಶೇ. 70ಕ್ಕಿಂತ ಹೆಚ್ಚು ಬೆಳೆಯು ದಕ್ಷಿಣ ಭಾರತದಲ್ಲಿ ಬೆಳೆಯಲ್ಪಡುತ್ತದೆ. ಅದರಲ್ಲೂ ಆಂದ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ತಮಿಳುನಾಡಿನಲ್ಲಿ  ಅತ್ಯಧಿಕ ಮೆಣಸಿನ ಬೆಳೆ ಬೆಳೆಯುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು  ಒಣ ಮೆಣಸಿನ  ಉದ್ದೇಶಕ್ಕೆ ಮೆಣಸಿನ ಬೆಳೆ ಬೆಳೆಯುವ ಪ್ರದೇಶಗಳು ಧಾರವಾಡ, ಹಾವೇರಿ, ಬ್ಯಾಡಗಿ, ಹಿರೇಕೆರೂರು , ಶಿಗ್ಗಾಂ ಪ್ರದೇಶಗಳಾದರೆ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲೂ  ಹಸಿ ಮೆಣಸಿನ ಉದ್ಡೇಶಕ್ಕೆ ಬೆಳೆ ಬೆಳೆಸುತ್ತಾರೆ. ಹೆಚ್ಚಿನ ಕಡೆ ಮುಂಗಾರು ಹಂಗಾಮಿನಲ್ಲಿ ಒಣ ಮೆಣಸಿನ  ಬೆಳೆ  ಜಾಸ್ತಿ. ಹಸಿ ಮೆಣಸಿಗೆ ವರ್ಷದುದ್ದಕ್ಕೂ ಬೇಡಿಕೆ ಇರುವ ಕಾರಣ ಮೂರೂ ಹಂಗಾಮಿನಲ್ಲೂ ಬೆಳೆ  ಬೆಳೆಯುತ್ತಾರೆ. ಬೆಳೆಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಬಿಜಾಪುರ, ಚಿತ್ರದುರ್ಗ  ಹಾಸನ, ಕೋಲಾರ ಇಲ್ಲೆಲ್ಲಾ ಅಧಿಕ ಪ್ರಮಾಣದಲ್ಲಿ ಹಸಿ ಮೆಣಸಿನ ಉದ್ದೇಶಕ್ಕೆ ಬೆಳೆ ಬೆಳೆಯುತ್ತಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ 15 ಸಾವಿರ ಹೆಕ್ಟೇರಿಗೂ ಹೆಚ್ಚು ಮೆಣಸಿನ ಬೆಳೆ ಪ್ರದೇಶ ಇರುತ್ತದೆ.

ಎಲೆ ಮುರುಟುವ ಸಮಸ್ಯೆ :

ಎಲೆ ಮುರುಟುವ ಸಮಸ್ಯೆ

ಈ ಸಮಸ್ಯೆ ಎಲ್ಲಾ ಮೆಣಸಿನ ಬೆಳೆ ಬೆಳೆಯುವ ಪ್ರದೇಶಗಳಲ್ಲೂ ಕಂಡುಬರುತ್ತದೆ. ಇದು ರೋಗ ಅಲ್ಲ ಒಂದು ಕೀಟದಿಂದಾಗುವ ಸಮಸ್ಯೆ. ಕೀಟವೊಂದು ಎಲೆಯ ಭಾಗದಲ್ಲಿ ಕುಳಿತು ರಸ ಹೀರಲು ಪ್ರಾರಂಭಿಸಿದಾಗ ಎಲೆಗಳು ಮುರುಟಿಕೊಳ್ಳಲು ಪ್ರಾರಂಭವಾಗುತ್ತದೆ. ಜೇಡರ ನುಶಿ ಮಾಗೂ ಥ್ರಿಪ್ಸ್ ಇವೆರಡು ಎಲ್ಲೆ ಮುರುಟಿಕೊಳ್ಳಲು ಕಾರಣವಾಗುವ ಕೀಟಗಳು. ಮೆಣಸಿಗೆ  ಸುಮಾರು 50 ಕ್ಕೂ ಹೆಚ್ಚು ಬಗೆಯ ಕೀಟಗಳು ವಿವಿಧ ಹಂತಗಳಲ್ಲಿ ತೊಂದರೆ ಮಾಡುತ್ತವೆ.  ಇವುಗಳಲ್ಲಿ ಥ್ರಿಪ್ಸ್,ಜೇಡರ ನುಶಿ, ಬಿಳಿ ನೊಣ,  ಹೇನುಗಳು ಭಾರೀ ಹಾನಿ ಮಾಡುವಂತವುಗಳಾಗಿವೆ.

ಥ್ರೀಪ್ಸ್ ನುಶಿಯಿಂದಾಗುವ ಹಾನಿ:

ಥ್ರಿಫ್ಸ್ ನುಶಿ ಎಲೆಯಲ್ಲಿ ವಾಸ್ತವ್ಯ ಮಾಡಿ ಹಾನಿ ಮಾಡುವವುಗಳು. ಇವು ಅತ್ಯಂತ ಸಣ್ಣ  ಗಾತ್ರದ ಕೀಟಗಳಾಗಿರುತ್ತದೆ.  ಹಳದಿ ಅಥವಾ ಕಪ್ಪು ಬಣ್ಣದಲ್ಲಿ ಇರುತ್ತವೆ ಇವು ಎಲೆಯ ಅಡಿ ಭಾಗದಲ್ಲಿ  ಇದ್ದುಕೊಂಡು ಅಲ್ಲಿ  ರಸ ಹೀರುತ್ತವೆ. ಥ್ರಿಪ್ಸ್ ನುಶಿಗಳು ಮೆಣಸಿನ ಗಿಡಕ್ಕೆ ಬಾದಿಸಿವೆ ಎಂದಾದರೆ ಗಿಡದ ಎಲೆಯು ತುದಿ ಭಾಗದಿಂದ  ಒಳ ಭಾಕ್ಕೆ ಮುದುಡಿಕೊಳ್ಳುತ್ತವೆ. ಇದನ್ನು ಮುರುಟು ರೋಗ, ಚಂಡಿ ರೋಗ ಎಂಬುದಾಗಿಯೂ ಕರೆಯುತ್ತಾರೆ. ಸಣ್ಣ ಪ್ರಾಯದ ಸಸಿಗಳಲ್ಲಿ ಈ ಥ್ರಿಪ್ಸ್ ನುಶಿಯ ಕಾಟ ಹೆಚ್ಚು. ಸಸಿ ಮಡಿಯಲ್ಲಿ ನಾಟಿ ಮಾಡಿ ಎರಡು ತಿಂಗಳ ತನಕ ಹೆಚ್ಚಾಗಿರುತ್ತದೆ. ಸಂಖ್ಯೆ ಹೆಚ್ಚಾದಂತೆ ಕೀಟವು ಗಿಡಗಳಿಗೆಲ್ಲಾ ಪ್ರಸಾರವಾಗುತ್ತದೆ. ಇವುಗಳ ಬಾಧೆಯಿಂದ ಸಸಿಗಳು ತುಂಬಾ ಸೊರಗುತ್ತವೆ. ಹೂವು, ಮಿಡಿ ಉದುರುತ್ತದೆ. ಕೊನೆಗೆ ಗಿಡವೇ ಸತ್ತು ಹೋಗುತ್ತದೆ. ಮಳೆಗಾಲದಲ್ಲಿ ಇದರ ಉಪಟಳ ಕಡಿಮೆ. ಬೇಸಿಗೆಯಲ್ಲೂ ಕಡಿಮೆ. ಚಳಿಗಾಲದಲ್ಲಿ ಹೆಚ್ಚು. ಗಾಳಿಯ ಮೂಲಕ ಗಿಡದಿಂದ ಗಿಡಕ್ಕೆ ಪ್ರಸಾರವಾಗುತ್ತದೆ. ಕೀಟವು ಎಲೆಯ ಅಡಿ ಭಾಗದಲ್ಲಿ 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. 4-5 ದಿನಗಳಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.  ಜೀವಿತಾವಧಿಯಲ್ಲಿ ಸಂತಾನಾಭಿವೃದ್ದಿ ಮಾಡುತ್ತಾ ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ.

ಥ್ರೀಪ್ಸ್ ನುಶಿಯಿಂದಾಗುವ ಹಾನಿ

ಮೆಣಸಿನ ಕಾಯಿ ಬೆಳೆಯಲ್ಲಿ ಈ ಕೀಟದ ಸಮಸ್ಯೆಯಿಂದ ಶೇ.50-60 ರಷ್ಟು ಬೆಳೆ ನಷ್ಟ ಉಂಟಾಗುತ್ತದೆ. ಪರಿಸರದಲ್ಲಿ ಇದರ ಕೆಲವು ಭಕ್ಷಕ ಕೀಟಗಳಿವೆಯಾದರೂ ಅವುಗಳ ಸಂತತಿ ಕಡಿಮೆಯಾಗಿ ಈ ಕೀಟದ ಬಾಧೆ ಅಧಿಕಗೊಳ್ಳುತ್ತದೆ. ಈ ಕೀಟದ ನಿರ್ವಹಣೆಗೆ ಹಿಂದೆ ಡೈಮಿಥೊಯೇಟ್, ಮೋನೋಕ್ರೊಟೋಫೋಸ್  ಕಾರ್ಬೋಫ್ಯುರಾನ್ ಮುಂತಾದವುಗಳನ್ನು ಬಳಸುತ್ತಿದ್ದರು. ಈಗ  ಹೊಸ ಕೀಟನಾಶಕಗಳಾದ ಇಮಿಡಾಕ್ಲೋಫ್ರಿಡ್, ರೀಜೆಂಟ್ ಮುಂತಾದವುಗಳನ್ನು ಬಳಸುತ್ತಾರೆ. ಆದರೆ ಥ್ರಿಪ್ಸ್ ನುಶಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಕೀಟನಾಶಕ ಇಲ್ಲ. ಅದೇ ಕಾರಣಕ್ಕೆ ಥ್ರಿಪ್ಸ್ ನುಶಿ ಬಾಧೆಗೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಅಭಿವೃದ್ಧಿಪಡಿದ್ದಾರೆ. ಸಾಧ್ಯವಾದಷ್ಟು ಚಳಿಗಾಲದ ವಾತಾವರಣದಲ್ಲಿ ಮೆಣಸನ್ನು ಬೆಳೆಯುವುದು ಕಡಿಮೆಮಾಡಿ.ಸಸಿ ಹಂತದಲ್ಲಿ ಒಂದೆರಡು ಬಾರಿ ಎಲೆ ಅಡಿ ಭಾಗಕ್ಕೆ ವೆಟ್ಟೆಬಲ್ ಸಲ್ಫರ್ ಅನ್ನು ಸಿಂಪಡಿಸಿ ಪ್ರಾರಂಭಿಕ ಹಂತದಲ್ಲಿ ನುಶಿಯ ಪ್ರವೇಶವನ್ನು ತಡೆಹಿಡಿಯುವುದು ಸೂಕ್ತ.

ಜೇಡರ ನುಶಿ:

ಮೆಣಸಿನ ಕಾಯಿ ಬೆಳೆಯಲ್ಲಿ ಮೇಲ್ಮುಖವಾಗಿ ಎಲೆ ಮಡಚಿಕೊಳ್ಳುವುದು ಥ್ರಿಪ್ಸ್ ನುಶಿಯ  ಕಾಟವಾದರೆ, ಕೆಳಮುಖವಾಗಿ ಮಡಚಿಕೊಳ್ಳುವುದು ಜೇಡರ ನುಶಿಯ ಕಾಟ. ಇದನ್ನು ಮೈಟ್  ಎಂದು ಕರೆಯುತ್ತಾರೆ. ಇದು ಎಲೆಯ ಆಡಿ ಭಾಗದಲ್ಲಿ ಕುಳಿತು ರಸ ಹೀರಿ ಬೆಳೆಗೆ ಭಾರೀ ತೊಂದರೆ ಮಾಡುತ್ತದೆ. ಮೈಟ್ ಬಾಧಿಸಿದ ಮೆಣಸಿನ ಎಲೆಗಳು ಬಿರುಸಾಗಿಕಪ್ಪು ಹಸುರು ಬಣ್ಣಕ್ಕೆ ತಿರುಗುತ್ತವೆ. ಕಾಯಿಗಳು ಮುರುಟಾಗುತ್ತದೆ. ಎಲೆಗಳು ಕ್ರಮೇಣ ಹಳದಿಯಾಗಿ ಒಣಗಲು ಪ್ರಾರಂಭವಾಗುತ್ತದೆ.ಎಲೆಗಳ ಕೆಳಮಗ್ಗಲು ತುಕ್ಕು ಅಥವಾ ಗಂಗು ಹಿಡಿದಂತೆ ಕಾಣಿಸುತ್ತದೆ. ಇವು  ಪ್ರಖರ ಬೇಸಿಗೆಯಲ್ಲಿ, ಅಕ್ಟೋಬರ್ , ನವೆಂಬರ್, ಫೆಬ್ರವರಿ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಇದರ ನಿಯಂತ್ರಣಕ್ಕೂ ಕೆಲವು ಪರೋಪಜೀವಿಗಳು  ( ಭಕ್ಷಕಗಳು) ಇವೆ. ಆದರೆ ಅವುಗಳ ಸಂತತಿ ಕಡಿಮೆಯಾಗಿದೆ. ಮೈಟ್ ಗಳನ್ನು ನಿಯಂತ್ರಿಸುವ ಆಧುನಿಕ ಕೀಟನಾಶಕವಾದ ಒಬೆರಾನ್ ಅನ್ನು ಸಿಂಪಡಿಸಬಹುದು.ಬೆಳೆ ಹಾಕಿ ½ ಅಡಿ ಬೆಳೆದ ತಕ್ಷಣ 15 ದಿನಗಳ ಅಂತರದಲ್ಲಿ ನೀರಿನಲ್ಲಿ ಕರಗುವ ಗಂಧಕ (Weteble sulphur)  ಸಿಂಪಡಿಸುವುದರಿಂದ ಮೈಟ್ ಬರುವುದಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಪ್ರಭಲ ಕೀಟನಾಶಕದ ಬಳಕೆ   ಕಡಿಮೆಮಾಡಬಹುದು.

ಮೆಣಸಿನ ಬೆಳೆಯಲ್ಲಿ ಇವೆರಡು ಪ್ರಾಮುಖ್ಯ ಕೀಟಗಳಾದರೆ , ಬಿಳಿ ನೊಣ, ಕಾಯಿಕೊರಕ ಹೆಲಿಕೋವರ್ಪಾ ಕಾಂಡ ಕತ್ತರಿಸುವ ಕೀಟಗಳೂ ಸಹ ತೊಂದರೆ ಮಾಡುತ್ತವೆ. ಆದರೆ ತುಂಬಾ ಸಮಸ್ಯಾತ್ಮಕವಾಗಿ ಕಂಡುಬರುವಂತದ್ದು ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿಗಳು. ಇವುಗಳನ್ನು ನಿಯಂತ್ರಣ ಮಾಡಿಕೊಂಡಲ್ಲಿ ಮೆಣಸಿನ ಬೆಳೆಯನ್ನು ಸುಲಭವಾಗಿ ಬೆಳೆಯಬಹುದು.

Leave a Reply

Your email address will not be published. Required fields are marked *

error: Content is protected !!