ಯಾರೂ ಕಲ್ಪಿಸಿಯೂ ಇರದಂತಹ ಸಂಚಲನವೊಂದು ಕರಿಮೆಣಸು ಮಾರುಕಟ್ಟೆಯಲ್ಲಿ ಜುಲೈ 2023 ರಲಿ ಘಟಿಸಿದೆ. ಹಾಗೆಯೇ ಅಡಿಕೆ ಮಾರುಕಟ್ಟೆಯಲ್ಲೂ ಒಂದು ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏನಾಗಬಹುದು? ಕರಿಮೆಣಸಿನ ಧಾರಣೆ ಏನಾಗಬಹುದು? ಇತರ ಉತ್ಪನ್ನಗಳಾದ ಕೊಬ್ಬರಿ, ಶುಂಠಿ, ಹಾಗೆಯೇ ರಬ್ಬರ್ ಧಾರಣೆ ಏನಾಗಬಹುದು ಎಂಬ ಕುತೂಹಲವೇ? ಕೆಲವು ಮಾರುಕಟ್ಟೆ ತಿಳುವಳಿಕೆ ಉಳ್ಳ ಜನರ ಹಾಗು ಪರಿಸ್ಥಿತಿಗಳ ಆಧಾರದ ಮೇಲೆ ಒಂದು ಊಹನೆ ಹೀಗಿದೆ.
2023 ರ ಜುಲೈ ತಿಂಗಳಲ್ಲಿ ಹಠಾತ್ತಾಗಿ ಕರಿಮೆಣಸು, ಮಾರುಕಟ್ಟೆಯಲ್ಲಿ ಬೃಹತ್ ಸಂಚಲನ ಉಂಟಾಯಿತು. 46000-47000 ದಲ್ಲಿ ಸುತ್ತಾಡುತ್ತಿದ್ದ ಧಾರಣೆ ಏಕಾಏಕಿ ಒಂದೇ ವಾರದಲ್ಲಿ 60000 ದ ಗಡಿ ದಾಟಿತು. ಹಾಗೆಯೇ ಮತ್ತೆ ವಾಪಾಸಾಗಿ ತಿಂಗಳಾಂತ್ಯಕ್ಕೆ 55,000 ದಲ್ಲಿ ನೆಲೆಗೊಂಡಿದೆ. ಜನ ದರ ಎರಿಕೆಯಾಗುತ್ತದೆ.ಇನ್ನು ಮುಂದೆ ಹಬ್ಬದ ದಿನಗಳಾದ ದೀಪಾವಳಿ, ನವರಾತ್ರೆ ಮುಂತಾದವು ಬರುವ ಕಾರಣ ದರ 80000 ಮುಟ್ಟಿದರೂ ಅಚ್ಚರಿ ಇಲ್ಲ ಎಂದು ಸುದ್ದಿ ಹರಿಬಿಟ್ಟರು. ಆಗಸ್ಟ್ ತಿಂಗಳಿಗೆ ಮತ್ತೆ ಪುನಹ ಚೇತರಿಕೆಯಾಗಿ 60000 ಕ್ಕೆ ಏರಿಕೆಯಾಗಿದೆ. ಕೃಷಿ ಅಭಿವೃದ್ದಿ ತಂಡವು ಈ ದರ ಏರಿಕೆಯನ್ನು ಒಂದು ಸಟ್ಟಾ ವ್ಯಾಪಾರ ಎಂದು ಅಂದಾಜು ಮಾಡಿತ್ತು. ದರ ಇಳಿಕೆ ಪ್ರಾರಂಭವಾದೊಂಡನೆ ಈ ಸಂದೇಹ ದೃಢಪಟ್ಟಿತು.ಮಾರುಕಟ್ಟೆ ಧಾರಣೆ ಏರಿಕೆಯ ಜೊತೆಗೆ ವ್ಯಾಪಾರಿಗಳು ತಮ್ಮ ಹಳೆಯ ಸ್ಟಾಕು ಕ್ಲೀಯರ್ ಮಾಡಿಕೊಂಡಿರಬೇಕು. ಅಥವಾ ಕಳುಹಿಸಿದ ಮಾಲು ಸರಿಯಾದ ಗುಣಮಟ್ಟದಲ್ಲಿಲ್ಲ ಎಂಬ ಕಾರಣಕ್ಕೆ ಏನೋ ಎಡವಟ್ಟು ಆಗಿರಬೇಕು. ಈ ಕಾರಣಕ್ಕೆ ದರ ಹಿಂದಕ್ಕೆ ಬಂದಿರಬೇಕು. ಕೆಂಪಡಿಕೆ ರಾಶಿ ದರ ಜುಲೈ ತಿಂಗಳಲ್ಲಿ ಏರಿಕೆಯಾಗುವ ಸೂಚನೆ ಗೋಚರವಾಯಿತು. 48,000-49,000 ದ ಸಮೀಪದಲ್ಲಿದ್ದ ಬೆಲೆ ಏರಿಕೆಯಾಗಿ ಸರಾಸರಿ 54000 ತನಕವೂ ಏರಿಕೆಯಾಯಿತು. ಒಂದು ವಾರದ ಅವಧಿಯಲ್ಲಿ ಮತ್ತೆ ಸ್ವಲ್ಪ ಇಳಿಕೆಯೂ ಆಯಿತು. ತಿಂಗಳಾಂತ್ಯಕ್ಕೆ ಏರಿಕೆಯಾದಷ್ಟು ರಿಕವರ್ ಆಗಲಿಲ್ಲವಾದರೂ ತುಸು ಏರಿಕೆ ಕಂಡಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಈ ತನಕ ಹಳೆಯದು ಹೊಸತು ಅಡಿಕೆಗಳಿಗೆ ಇದ್ದ ಬೆಲೆ ಅಂತರ ಈ ಬಾರಿ ಬಾರೀ ಕಡಿಮೆಯಾಗಿ ರೂ. 20 ರ ಆಸು ಪಾಸಿಗೆ ಬಂದುದೇ ಒಂದು ವಿಶೇಷ. ಕೊಬ್ಬರಿ ದರ ಐತಿಹಾಸಿಕ ಇಳಿಕೆ ಕಂಡದ್ದು ಸ್ವಲ್ಪ ಚೇತರಿಕೆ ಪ್ರಾರಂಭವಾಗಿದೆ. ಶುಂಠಿಗೆ ಬೇಡಿಕೆ ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಮಾಲಿನ ಕೊರತೆ ಇದೆ. ಮುಂದೆ ಕೊಬ್ಬರಿ ಧಾರಣೆಯೂ ಏರಿಕೆ ಆಗುವ ಸಾಧ್ಯತೆ ಕಾಣಿಸುತ್ತದೆ. ಜನವರಿ ತನಕ ಶುಂಠಿ ಧಾರಣೆ ಏರಿಕೆ ಗತಿಯಲ್ಲೇ ಮುಂದುವರಿಯಬಹುದು ಎನ್ನುತ್ತಾರೆ.
ಕರಿಮೆಣಸು ಧಾರಣೆ ಏನಾಯಿತು, ಮುಂದೇನಾಗಬಹುದು?
ಜುಲೈ 28-2023 ಕ್ಕೆ ಕರಿಮೆಣಸಿಗೆ ಕೊಚ್ಚಿ ಮಾರುಕಟ್ಟೆಯಲ್ಲಿ ಕಿಲೋ ರೂ.25 ಹಿಂದೆ ಬಂದಿದೆ. ಕಾರಣ ಖರೀದಿದಾರರ ಆಸಕ್ತಿ ಕಡಿಮೆಯಾಗಿದೆ. ಅಡಿಕೆಯಂತೆಯೇ ಈ ಉತ್ಪನ್ನವೂ ಸಹ ಖರೀದಿದಾರರ ಬೇಡಿಕೆ ಮೇಲೆಯೇ ದರ ಹೆಚ್ಚು ಕಡಿಮೆ ಆಗುತ್ತದೆ. ಮಾಲು ಬೇಕು ಎಂದು ಕೇಳಿಕೆ ಇದ್ದಾಗ ಬೆಲೆ ಹೆಚ್ಚಾಗುತ್ತದೆ. ಮಾಲು ಬೇಕೇ ಎಂದು ಕೇಳಿದಾಗ ದರ ಇಳಿಕೆಯಾಗುತ್ತದೆ. ಕಲಬೆರಕೆ, ಗುಣಮಟ್ಟದ ಕೊರತೆ ಉಂಟಾದರೆ ಕಳುಹಿಸಿದ ಉತ್ಪನ್ನಕ್ಕೆ ಅವರು ಹೇಳುವ ಬೆಲೆಯಲ್ಲಿ ನೆಗೋಶಿಯೇಶನ್ ನಡೆಯುತ್ತದೆ. ಈಗಾಗಲೇ ದರ ಹೆಚ್ಚಳವಾದ ಸುದ್ದಿ ಜೊತೆಗೆ ಆಮದು ಮೆಣಸು ಬಂದಿದೆ ಎಂಬ ಸುದ್ದಿ ಇದೆ.ಶ್ರೀಲಂಕಾ ಮೂಲದ ಕರಿಮೆಣಸು ಕಿಲೋಗೆ 7.67 ಅಮೆರಿಕನ್ ಡಾಲರ್ ಗೆ (630.00 Rs) ಬಿಳಿ ಮೆಣಸು ಕಿಲೋ ಗೆ 12.33 ಡಾಲರ್ ಗೆ ಇದೆ ಎಂಬ ಜಾಹೀರಾತುಗಳು ಕಾಣಿಸುತ್ತಿವೆ. ಅದರ ಬೆಲೆ ನಮ್ಮ ಸ್ಥಳೀಯ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಇದೆ.ಇಂದು ಕೊಚ್ಚಿ ಮಾರುಕಟ್ಟೆಯಲ್ಲಿ ಆರಿಸದ ಮೆಣಸಿಗೆ ಕಿಲೋಗೆ. 598.00 ಮತ್ತು ಆರಿಸಿದ ಮೆಣಸಿಗೆ 618.00 ದಾಖಲಾಗಿದೆ.
ದರ ಇನ್ನೂ ಮತ್ತೆ ಬೆಲೆ ಏರಿಕೆ ಆಗುವ ಸಾದ್ಯತೆ ಇದೆ ಎನ್ನುತ್ತಾರೆ.
ಅಡಿಕೆ ಮಾರುಕಟ್ಟೆ ಏರಿಳಿತ:
ಅಡಿಕೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ರಾಶಿಯ ಸರಾಸರಿ ಬೆಲೆ 54,000-55,000 ದಲ್ಲಿ ನಿಲ್ಲುವ ಸಂಭವ ಇದೆ. ಜುಲೈ ತಿಂಗಳಲ್ಲಿ ಆದ ಹಿನ್ನಡೆ ಮುಂದೆ ಏರಿಕೆ ಆಗುವ ಸಾಧ್ಯತೆಯನ್ನು ದೂರಮಾಡುತ್ತದೆ. ಚಿತ್ರದುರ್ಗ , ದಾವಣಗೆರೆ ಮುಂತಾದ ಕಡೆ ಮಳೆ ಕಡಿಮೆಯಾದ ಕಾರಣ ಕೊಯಿಲು ಮತ್ತು ಸಂಸ್ಕರಣೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಪ್ರಾರಂಭವಾಗಿದೆ. ಇನ್ನು ಕೆಲವೇ ಸಮಯದಲ್ಲಿ ಹೊಸತು ಬರಲಿಕ್ಕಿದೆ. ಹಾಗಾಗಿ ರಾಶಿ ಬೆಲೆ 60000 ಕ್ಕೆ ತಲುಪಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಹಾಗೆಂದು ಎಲ್ಲಾ ಮಾಲನ್ನೂ ಮಾರಾಟ ಮಾಡಬೇಡಿ. ಕೆಲವೊಮ್ಮೆ ನಿರ್ಧಿಷ್ಟ ಕಾರಣ ಇಲ್ಲದೆಯೂ ದರ ಏರಿಕೆ ಆಗುತ್ತದೆ.
ಚೆನ್ನಗಿರಿ ಮಾರುಕಟ್ಟೆಯಲ್ಲಿ ಸರಾಸರಿ 54782 – ಗರಿಷ್ಟ 56712 ಬೆಲೆ ಇತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ 54059- 56099, ಸಿದ್ದಾಪುರದಲ್ಲಿ 51499-52399, ಶಿರಸಿಯಲ್ಲಿ 50548 -52599, ಸಾಗರದಲ್ಲಿ 53199 -54099, ತೀರ್ಥಹಳ್ಳಿಯಲ್ಲಿ 54049 -56099, ಹೊಸನಗರ 53811-54999, ಇತ್ತು. ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ 1500 ರೂ. ವ್ಯತ್ಯಾಸ ಇತ್ತು. ಖರೀದಿದಾರರ ಉತ್ಸಾಹ ಹೆಚ್ಚು ಇಲ್ಲದ ಕಾರಣ ದರ ಏರಿಕೆ ಸಂದೇಹ.
ಚಾಲಿ ಮಾರುಕಟ್ಟೆ ಸ್ಥಿತಿ:
ಚಾಲಿ ಮಾರುಕಟ್ಟೆಯಲ್ಲಿ ಕರಾವಳಿಯ ಹೊಸ ಚಾಲಿಗೆ ಬೇಡಿಕೆ ಚೆನ್ನಾಗಿದೆ. ಒಂದು ವೇಳೆ ಹಳೆಯದು ಬೇಡಿಕೆಯಲ್ಲಿ ವ್ಯಾಪಾರವಾಗುತ್ತಿದ್ದರೆ ಈಗಾಗಲೇ ಹೊಸ ಚಾಲಿ ದರ 47500 ದಾಟುತ್ತಿತ್ತು. ದುರದೃಷ್ಟವೆಂದರೆ ಹಳೆ ಚಾಲಿಗೆ ಬೇಡಿಕೆ ತುಂಬಾ ಕಡಿಮೆಯಂತೆ. ಹಳೆಯದಾದರೇನು – ಹೊಸತಾದರೇನು ಕಡಿಮೆ ದರಕ್ಕೆ ಯಾವುದು ಲಭ್ಯವೋ ಅದನ್ನು ಆಯ್ಕೆ ಮಾಡುವ ಸ್ಥಿತಿ ಉತ್ತರಭಾರತದಲ್ಲಿ ಉಂಟಾಗಿದೆ ಎನ್ನುತ್ತಾರೆ. ಹೊಸ ಚಾಲಿ ಜುಲೈ ತಿಂಗಳಲ್ಲಿ ಸ್ವಲ್ಪ ಏರಿಕೆ ಆಗಿದೆ. ಜುಲೈ ಕೊನೆಗೆ 44000-45000 ತನಕ ತಲುಪಿದೆ. ಆಗಸ್ಟ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು. ಈಗ ಇರುವ ಪ್ರಶ್ನೆ ಹಳೆ ಚಾಲಿಗೂ ಹೊಸತಕ್ಕೂ ಯಾವ ದರ ವ್ಯತ್ಯಾಸ ತರುವುದು ಎಂಬುದು. ಹಳೆ ಚಾಲಿ ದರವನ್ನು ಏರಿಸದೆ ಇದ್ದರೆ ಹೊಸತು ಹಳೆಯದಕ್ಕೆ ಸಮನಾಗಲೇಬೇಕು. ಬಹುಶಃ ಈ ವರ್ಷ ಇಂತಹ ಸ್ಥಿತಿ ಬರುತ್ತದೆಯೇನೋ ಅನ್ನಿಸುತ್ತದೆ.ಹೊಸತು ಹಳೆಯದಾಗುವುದಕ್ಕೆ ಚೌತಿ ಗಡು ಎನ್ನುತ್ತಾರೆ. ಈ ವರ್ಷ ಆ ಸಮಯಕ್ಕೆ ಆದರೂ ಆಗಬಹುದು. ಈಗಾಗಲೇ ಮಳೆ ಕಡಿಮೆಯಾಗಿದೆ. ಅಡಿಕೆ ಹಣ್ಣಾಗಲು ಪ್ರಾರಂಭವಾಗಿದೆ. ಮುನ್ಸೂಚನೆಯಂತೆ ಒಂದು ತಿಂಗಳು ಮಳೆ ಬಾರದೆ ಇದ್ದರೆ ಚೌತಿ ಸಮಯಕ್ಕೆ ಹೊಸ ಅಡಿಕೆ (2023 ರ) ಅಡಿಕೆ ಮಾರುಕಟ್ಟೆಗೆ ಬರಲಿದೆ.ಹಳೆಯ ಅಡಿಕೆಯ ಗೌರವ ಕಡಿಮೆಯಾಗಲು, ಹಾಳಾದ ಅಡಿಕೆ ಸರಬರಾಜು ಆದದ್ದೇ ಪ್ರಮುಖ ಕಾರಣ ಎನ್ನಬಹುದು. ಶಿರಸಿ, ಯಲ್ಲಾಪುರಗಳಲ್ಲಿ ಈಗಾಗಲೇ 41,000-44,000 ತನಕ ಚಾಲಿ ದರ ಏರಿದೆ. ಇದೇ ಕಾರಣಕ್ಕೆ ಕರಾವಳಿಯ ಚಾಲಿಗೆ ಆಗಸ್ಟ್ ತಿಂಗಳಿಗೆ ಹೊಸತು 45000 ದಾಟುವ ಎಲ್ಲಾ ಸಾಧ್ಯತೆ ಕಾಣಿಸುತ್ತದೆ. ಹಳೆ ಚಾಲಿ ಈ ತಿಂಗಳು ರೂ. 5-10 ಏರಿಕೆ ಆಗುವ ಸಾಧ್ಯತೆ ಇದೆ. ಚಾಲಿ ದರ ಈ ವರ್ಷ ಹಾಗೂ ಮುಂದಿನ ವರ್ಷ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಎಲ್ಲಾ ಕಡೆ ಬೆಳೆ ತುಂಬಾ ಕಡಿಮೆ ಇದೆ.
ಕೊಬ್ಬರಿಗೆ ಬೆಲೆ ಏರಿಕೆಯಾಗುತ್ತದೆ:
ಈಗಾಗಲೇ ತೆಂಗಿನ ಕಾಯಿ ಬೆಲೆ ಏರಿಕೆ ಪ್ರಾರಂಭವಾಗಿದೆ. 8500-9000 ದ ಸುತ್ತಮುತ್ತ ಇದ್ದ ಉಂಡೆ ಕೊಬ್ಬರಿ ಬೆಲೆ 10000 ಕ್ಕೆ ತಲುಪಿದೆ. ಮುಂದಿನ ತಿಂಗಳು ಇದು ಇನ್ನೂ 2000 ದಷ್ಟು ಏರಿಕೆಯಾಗಬಹುದು ಎಂಬ ಮುನ್ಸೂಚನೆ ಕಾಣಿಸುತ್ತಿದೆ. ಹಸಿ ಕಾಯಿ ಕಿಲೋ 30 ತನಕ ಏರಿಕೆಯಾಗಿದೆ. ಹಾಗಾಗಿ ಚೌತಿ ಸಮಯಕ್ಕೆ ಕೊಬ್ಬರಿ ದರ ಏರಬಹುದು. ಹಸಿ ಕಾಯಿಗೂ ಏರಬಹುದು. ಮುಂದಿನ ವರ್ಷ ತೆಂಗಿನ ಬೆಳೆ ಕಡಿಮೆಯಾದ ಕಾರಣ ದರ ಏರಿಕೆ ಆಗಬಹುದು.
ಶುಂಠಿ ಧಾರಣೆ:
ಹೊಸ ಶುಂಠಿ ಬೆಳೆ ಕೀಳಬೇಕಷ್ಟೇ. ಹಳೆ ಶುಂಠಿ ದಾಸ್ತಾನು ಇಲ್ಲ. ಬೇಡಿಕೆ ಬಹಳ ಉತ್ತಮವಾಗಿದೆ. ಹಾಗಾಗಿ ಶುಂಠಿ ಬೆಳೆಗಾರರು ಈ ವರ್ಷ ಉತ್ತಮ ಆದಾಯ ಸಂಪಾದಿಸಲು ಅವಕಾಶ ಇದೆ.ಹಸಿ ಶುಂಠಿಗೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ ಸರಾಸರಿ 12500 ಗರಿಷ್ಟ 15000 ತನಕ ಇದೆ. ಹಾಸನ , ಸಕಲೇಶಪುರ ಕಡೆ 9000 -12000 ರೂ ತನಕ ಇದೆ. ಹಸಿ ಶುಂಠಿಗೆ ಈ ದರ ಬಂದದ್ದು ಒಂದು ದಾಖಲೆಯೇ ಎನ್ನಬಹುದು.
ಬೆಳೆಗಾರರು ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಾ ಇರುವುದು ಸೂಕ್ತ.ಬೆಲೆ ಹೆಚ್ಚಳ ಆಗುವಾಗಲೂ ಮಾರಾಟಕ್ಕೆ ಮಾಲು ಇರಬೇಕು. ಆ ರೀತಿಯಲ್ಲಿ ಮಾರಾಟ ಮಾಡುತ್ತಿರುವುದು ಲಾಭದಾಯಕ. ಮಾರುಕಟ್ಟೆ ಸ್ಥಿತಿಗತಿಯನ್ನು ನಿಖರವಾಗಿ ಹೀಗೆ ಎಂದು ಅಂದಾಜು ಮಾಡುವುದು ಅಸಾಧ್ಯ.