ಕಳೆದ ವಾರ 50000 ದ ಆಸುಪಾಸಿನಲ್ಲಿದ್ದ ಕರಿಮೆಣಸಿನ ಬೆಲೆ ದಿಡೀರ್ ಆಗಿ ಒಂದೇ ವಾರದಲ್ಲಿ 56,000 ಕ್ಕೆ ಏರಿಕೆಯಾಗಿದೆ. ಕರಿಮೆಣಸು ಇದೆಯೇ ಎಂದು ಕೇಳುವ ಸ್ಥಿತಿ ಉಂಟಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ದರ 60,000 ತನಕ ಏರಿದೆ. ಇನ್ನೂ ಏರಿಕೆ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಮೆಣಸು ಬೆಳೆಯುವ ದೇಶಗಳಲ್ಲಿ ಉತ್ಪನ್ನದ ಕೊರೆತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ ಬೆಲೆ ಕಳೆದ ವರ್ಷ 50,000 ದ ಆಸು ಪಾಸಿಗೆ ಬಂದಿತ್ತು. ಒಮ್ಮೆ 55,000 ತನಕವೂ ಏರಿಕೆಯಾಗಿತ್ತು. ಮತ್ತೆ ಇಳಿಕೆಯಾಗಿ 50000 ಕ್ಕಿಂತ ಕೆಳಗೆ ಬಂತು. ಸುಮಾರು 6 ತಿಂಗಳಿಗೂ ಹೆಚ್ಚಿನ ಕಾಲ 48000-47000 ದಲ್ಲಿ ಮುನ್ನಡೆಯುತ್ತಿದ್ದ ಧಾರಣೆ ಯಾಕೆ ಏರಿಕೆಯಾಯಿತು, ಯಾರು ಇದರಲ್ಲಿ ಆಸಕ್ತಿ ತೋರಿಸಿದರು ಎಂಬುದು ಇನ್ನು ತಿಳಿಯಬೇಕಷ್ಟೇ. ಒಂದೇ ವಾರದಲ್ಲಿ ಜಾಗತಿಕ ಬೇಡಿಕೆ ಬಂತೋ, ದೇಶೀಯ ಬೇಡಿಕೆ ಬಂತೋ ತಿಳಿಯದು. ಒಟ್ಟಾರೆ ನೋಡಿದಾಗ ಯಾರೋ ಕರಿಮೆಣಸಿನಲ್ಲಿ ಸಟ್ಟಾ ವ್ಯಾಪಾರ ಮಾಡುವಂತೆ ಕಾಣಿಸುತ್ತಿದೆ. ಸರಿಯಾದ ಮಾರುಕಟ್ಟೆ ಲಯದಲ್ಲಿ ದಿನಕ್ಕೆ 50೦೦-60೦೦ ರೂ. ನಂತೆ ಏರಿಕೆ ಆಗುವುದು ಕಡಿಮೆ. ಆದರೆ ಈ ಬಾರಿ ಆಗಿದೆ. ಬೆಳೆಗಾರರು 50000 ದಾಟಿದಾಗ ಮಾಲನ್ನು ವಿಕ್ರಯಿಸುವ ಮನಸ್ಸು ಮಾಡಿದ್ದಾರೆ. ಕೆಲವು ಸ್ಥಳೀಯ ವ್ಯಾಪಾರಿಗಳು ದರ ಅಷ್ಟು ಇಷ್ಟು ಎಂದು ಟೆಂಮ್ಟ್ ಮಾಡಿ ಬೆಳೆಗಾರರಿಂದ ಮೆಣಸು ಖರೀದಿಸಿದ್ದಾಗಿದೆ.ವ್ಯಾಪಾರಿಗಳ ಪ್ರಕಾರ ಮೆಣಸಿನ ಅವಕ ಕಡಿಮೆ ಇದೆ. ಆದರೆ ದರ ಏರಿಕೆಯಾಗುತ್ತಿದೆ. ಇದು ಸಟ್ಟಾ ವ್ಯಾಪಾರವೇ ಎಂಬ ಸಂಶಯ ಬರುತ್ತಿದೆ.
ಕೊಚ್ಚಿ ಮಾರುಕಟ್ಟೆಯಲ್ಲಿ ದರ ಏರಿಕೆ:
ಅಡಿಕೆಗೆ ಉತ್ತರ ಭಾರತದ ಮಾರುಕಟ್ಟೆ ಇದ್ದಂತೆ ಕರಿಮೆಣಸಿನ ಮುಖ್ಯ ಮಾರುಕಟ್ಟೆ ಕೇರಳದ ಕೊಚ್ಚಿನ್ ಅಥವಾ ಎರ್ನಾಕುಳಂ. ಇಲ್ಲಿ ನಿಗದಿಯಾದ ದರದ ಮೇಲೆ ಮಾರುಕಟ್ಟೆಯಲ್ಲಿ ದರ ಏರಿಕೆ ಇಳಿಕೆ ಆಗುತ್ತದೆ. ಕೊಳ್ಳುವ ಗಿರಾಕಿಗಳು ಇದ್ದಾಗ (Buyers support)ಬೆಲೆ ಏರಿಸಲಾಗುತ್ತದೆ.ಈಗ ಕೊಳ್ಳುವರರ ಬೇಡಿಕೆ ಇದೆ. ಹಾಗಾಗಿ ಬೆಲೆ ಏರಿದೆ. ಕೊಚ್ಚಿ ಮಾರುಕಟ್ಟೆಯಲ್ಲಿ ಆಯ್ದ ಮೆಣಸಿನ ಬೆಲೆ 59,000 ಆಯದೆ ಇರುವ ಮೆಣಸಿನ ಬೆಲೆ 57000 ಹಾಗೂ ಹೊಸ (ಕಳೆದ ವರ್ಷದ) ಮೆಣಸಿಗೆ 56,000 ಬೆಲೆ ಇದೆ. ಆದರೆ ಸ್ಥಳೀಯ ವ್ಯಾಪಾರಿಗಳು ಇಲ್ಲಿನ ದರಕ್ಕಿಂತ 2000,3000,4000 ರೂ ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದಾರೆ.
ಸ್ಠಳೀಯ ಮಾರುಕಟ್ಟೆಯಲ್ಲಿ ಬೆಲೆ:
- ಸಕಲೇಶಪುರ: 630.00 SK Traders
- H.K.G & Bros, ಸಕಲೇಶಪುರ: 575.00
- ನಾಸಿರ್, ಸಕಲೇಶಪುರ: 620.00
- ಸಾಯಿನಾಥ್, ಸಕಲೇಶಪುರ: 600.00
- ಏಲಕ್ಕಿ ಮಾರುಕಟ್ಟೆ ಕಂಪೆನಿ, ಸಕಲೇಶಪುರ: 550.00
- ಪ್ರೇಮ್ ರಾಜ್, ಸಕಲೇಶಪುರ: 570.00
- ಬಾಳುಪೇಟೆ, ಗೀತಾ ಕಾಫೀ: 605.00
- ಭವರ್ಲಾಲ್ ಜೈನ್, ಮೂಡಿಗೆರೆ: 600.00
- ಮೂಡಿಗೆರೆ, A 1 ಟ್ರೇಡರ್ಸ್: 592.00
- ಹರ್ಷಿಕಾ, ಮೂಡಿಗೆರೆ: 600.00
- ಆರಿಹಂತ್ ಖಾಫೀ, ಚಿಕ್ಕಮಗಳೂರು: 590.00
- ನಿರ್ಮಲ್, ಚಿಕ್ಕಮಗಳೂರು: 550.00
- ಕಿರಣ್, ಚಿಕ್ಕಮಗಳೂರು: 590.00
- ಮಡಿಕೇರಿ, ಕಿರಣ್ ಟ್ರೇಡರ್ಸ್: 590.00
- ಮಡಿಕೇರಿ, ಸಿದ್ದಾಪುರ: 600.00
- ಶುಂಠಿಕೊಪ್ಪ, ಮಡಿಕೇರಿ: 600.00
- ಕೊಡಗು, ಗೋಣಿಕೊಪ್ಪ: 580.00
- ಕಳಸ ಖಾಸಗಿ: 580.00
- ಕಳಸ, ಕ್ಯಾಂಪ್ಕೋ: 560.00
- ಕಾರ್ಕಳ, ಕಾಮಧೇನು: 600.00
- ಪುತ್ತೂರು, ದೇವಣ್ಣ ಕಿಣಿ: 555.00
- ಮಂಗಳೂರು, PBA: 580.00
- ಕ್ಯಾಂಪ್ಕೋ, ಮಂಗಳೂರು: 550.00
- ಸಿರ್ಸಿ, ಕದಂಬ: 550.00
- TSS ಸಿರ್ಸಿ:630.00
- ಸಾಗರ, APMC: 548.00
- ಬೆಳ್ತಂಗಡಿ: 560.00
ಕ್ಯಾಂಪ್ಕೋ ನಿಖರ ದರದಲ್ಲಿ ಬಿಲ್ ಮಾಡಿ ಖರೀದಿಸುತ್ತದೆ. ಖಾಸಗಿಯವರು ಕಡಿಮೆ ಬೆಲೆಗೆ ಬಿಲ್ ಮಾಡಿ ಖರೀದಿ ನಡೆಸುತ್ತಿರುವುದು ಕಂಡುಬರುತ್ತದೆ.
ಸಟ್ಟಾ ವ್ಯಾಪಾರದ ಸಂಶಯ:
ಕರಿಮೆಣಸಿನ ವ್ಯವಹಾರಕ್ಕೆ ಯಾರೋ ಭಾರೀ ಆಸಕ್ತಿಯಿಂದ ಪ್ರವೇಶವಾದಂತೆ ಕಾಣಿಸುತ್ತಿದೆ. ಮೆಣಸು ಹಿಂದಿನಿಂದಲೂ ಏಕಪ್ರಕಾರವಾಗಿ ಮಾರುಕಟ್ಟೆಗೆ ಬರುತ್ತಿರುತ್ತದೆ. ಸಣ್ಣ ಬೆಳೆಗಾರರು ದಾಸ್ತಾನು ಇಡುವ ಪ್ರತೀತಿ ಕಡಿಮೆ. ದೊಡ್ಡ ಬೆಳೆಗಾರರು ಬೆಲೆ ಅನಿಶ್ಚಿತತೆಗಾಗಿ ಸ್ವಲ್ಪ ಸ್ವಲ್ಪವೇ ಮಾರಾಟ ಮಾಡುತ್ತಿರುತ್ತಾರೆ. ಬೆಳೆಗಾರರಲ್ಲಿ ಭಾರೀ ದಾಸ್ತಾನು ಇಲ್ಲ ಎಂಬುದನ್ನು ಅರಿತುಕೊಂಡೇ ಈ ಸಮಯದಲ್ಲಿ ದರ ಏರಿಕೆ ಮಾಡಿರುವ ಸಾಧ್ಯತೆ ಇದೆ. ಸಟ್ಟಾ ವ್ಯಾಪಾರ (speculative trede) ಎಂದರೆ ಹೀಗೆ. ಯಾರೋ ಒಬ್ಬರು ಇಬ್ಬರು ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಲಾಭಮಾಡಿಕೊಳ್ಳುವುದಾಗಿರುತ್ತದೆ. ಇಂತಹ ವ್ಯವಹಾರ ಆದಾಗ ಬೆಲೆ ಭಾರೀ ನೆಗೆತ ಆಗುತ್ತದೆ.ಒಂದು ವೇಳೆ ಸಟ್ಟಾ ವ್ಯಾಪಾರವೇ ಆಗಿದ್ದರೆ ಕೆಲವೇ ಸಮಯದಲ್ಲಿ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿಯುವ ಸಾದ್ಯತೆ ಇದೆ. ನೈಜ ವ್ಯಾಪಾರವೇ ಆಗಿದ್ದಲ್ಲಿ ಇದೇ ದರ ಸ್ವಲ್ಪ ಸ್ವಲ್ಪ ಅವಕ ಹೊಂದಿ ಏರಿಕೆ, ಇಳಿಕೆಯಾಗುತ್ತಾ ಮುಂದುವರಿಯಬಹುದು. ಬೆಳೆಗಾರರು 70,000-80,000 ಈ ದರದ ಅಪೇಕ್ಷೆ ಗಾಗಿ ಎಲ್ಲವನ್ನೂ ಉಳಿಸಿಕೊಳ್ಳಬೇಡಿ. ಈಗಿನ ದರಲ್ಲಿ ಸ್ವಲ್ಪ ಮಾರಾಟ ಮಾಡಿ, ಸ್ವಲ್ಪ ಉಳಿಸಿಕೊಳ್ಳಿ.
ವಿದೇಶಗಳಲ್ಲಿ ಬೆಳೆ ಕಡಿಮೆ ನಿಜ:
ವಿದೇಶಗಳಲ್ಲಿ ಅದರಲ್ಲೂ ವಿಯೆಟ್ನಾಂ ನಲ್ಲಿ ಮೆಣಸಿನ ಬೆಳೆಯಲ್ಲಿ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕೆಲಸಗಾರರ ಸಂಬಳ, ಸಿಗುವ ಹಣ ಈ ಕೃಷಿಗೆ ಲಾಭದಾಯಕವಲ್ಲ ಎಂದು ಬೆಳೆಗಾರರು ಈ ಕೃಷಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಶ್ರೀಲಂಕಾ ಎಲ್ಲಾ ಕಡೆಯಲ್ಲೂ ಸೋತಿದೆ. ಉಳಿದ ದೇಶಗಳಲ್ಲಿ ಬೆಳೆ ಇದ್ದರೂ ಮಾರುಕಟ್ಟೆಗೆ ಕೊರತೆ ಇದೆ. ಹಾಗಾಗಿ ಮೆಣಸಿಗೆ ಮುಂದಕ್ಕೂ ಹೆಚ್ಚು ಭವಿಷ್ಯ ಇದೆ. ಕರಾವಳಿ, ಮಲೆನಾಡಿಗಿಂತ ಉತ್ತಮವಾಗಿ ಬಯಲುಸೀಮೆಯ ಚಿತ್ರದುರ್ಗ, ಚಳ್ಳಕೆರೆ,ಭೀಮಸಮುದ್ರ ( ವಾಣಿವಿಲಾಸ ಅಣೆಕಟ್ಟಿನ ನೀರಾವರಿ ಪ್ರದೇಶಗಳಲ್ಲಿ)ಮೆಣಸು ಬಹಳ ಉತ್ತಮವಾಗಿ ಬೆಳೆಯುತ್ತಿದೆ. ರೋಗ ರುಜಿನಗಳು ಕಡಿಮೆ ಇದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಕರಾವಳಿ ಮಲೆನಾಡಿನ ಉತ್ಪತ್ತಿಯನ್ನು ಮೀರಿಸುವ ಉತ್ಪಾದನೆ ಇಲ್ಲಿಂದ ಬರುವ ಸೂಚನೆ ಇದೆ.
ಕರಿಮೆಣಸಿಗೆ ಯಾವಾಗಲೂ ಜುಲೈ ಆಗಸ್ಟ್ ನಿಂದ ಅಕ್ಟೋಬರ್ ತನಕ ದರ ಏರಿಕೆ ಹಂತದಲ್ಲಿರುತ್ತದೆ. ಕೊಯಿಲಿನ ಸಮಯದಲ್ಲಿ ಇಳಿಕೆಯಾಗುತ್ತದೆ.ಮುಂದೆ ಹಬ್ಬಗಳು ಇರುವ ಕಾರಣ ಬೆಲೆ ಹೆಚ್ಚಳವಾಗುವುದು ಎಂಬುದು ಇದಕ್ಕೆ ಸಬೂಬು. ಏನೇ ಇರಲಿ, ಬೆಲೆ ಈಗಲಾದರೂ ಏರಿಕೆಯಾಯಿತಲ್ಲವೇ ಸಂತೋಷಪಡಬೇಕು.