ಜುಲೈ ತಿಂಗಳ ಪ್ರಾರಂಭದಲ್ಲಿ ಕೆಂಪಡಿಕೆ ಧಾರಣೆ ಏರಿಕೆ ಪ್ರಾರಂಭವಾಗಿ ಬೆಳೆಗಾರರು ಹೆಚ್ಚಿನ ನಿರೀಕ್ಷೆ ಹೊಂದುವಂತಾಯಿತು. ಇನ್ನೂ ಏರಬಹುದು ಸ್ವಲ್ಪ ಕಾಯೋಣ ಎಂದು ಮಾರಾಟಕ್ಕೆ ಹಿಂದೇಟು ಹಾಕುವ ಸ್ಥಿತಿ. ಸಹಜವಾಗಿ ಎಲ್ಲರೂ ಹೀಗೇ ಮಾಡುವುದು. ಆದರೆ ದರ ಏರುತ್ತಾ ಏರುತ್ತಾ ಮುಂದೆ ಹೋಗುವುದಿಲ್ಲ. ಕೆಲ ಸಮಯದ ನಂತರ ಇಳಿಕೆ ಆಗಿಯೇ ಆಗುತ್ತದೆ. ಈಗ ಸ್ವಲ್ಪ ಇಳಿಕೆ ಸಾಧ್ಯತೆ ಕಾಣಿಸುತ್ತಿದೆ. ದರ ಏರಿಕೆಯಾಗುವಾಗ ಮಾಲು ಕೊಡಲು ಯಾವ ರೈತನಿಗೂ ಮನಸ್ಸು ಬರುವುದಿಲ್ಲ. ಕೊನೆಗೆ ಇಳಿಕೆಯಾಗುವಾಗ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದುವೇ ವ್ಯಾಪಾರದ ವ್ಯಾಖ್ಯಾನ.
ಕೆಂಪಡಿಕೆ ಮಾರುಕಟ್ಟೆ ಏರಿಕೆ ಪ್ರಾರಂಭವಾಗಿ ಎರಡು ವಾರಗಳಾಗಿದೆ. ಈಗ ಮತ್ತೆ ಇಳಿಕೆ ಸರದಿ. ಖರೀದಿದಾರರ ಗೋಡೌನ್ ನಿಂದ ಅಡಿಕೆ ಖಾಲಿಯಾಗುವಾಗ ದರ ಇಳಿಕೆ ಪ್ರಾರಂಭವಾಗುತ್ತದೆ.. ಯಾವಾಗಲೂ ಉತ್ತರ ಭಾರತದ ಖರೀದಿದಾರರು ತಮಗೆ ಬೇಕಾದಾಗ ಮಾತ್ರ ಬೇಡಿಕೆ ವ್ಯಕ್ತಪಡಿಸುತ್ತಾರೆ. ಹೆಚ್ಚು ಸಮಯದ ತನಕ ದಾಸ್ತಾನು ಇಡಲು ಯಾವ ವ್ಯಾಪಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಅದು ಕೋಟ್ಯಾಂತರ ರೂಪಾಯಿಗಳ ವ್ಯವಹಾರ. ದರ ಏರಿಕೆ ಪ್ರಾರಂಭವಾಗುವುದು ಹೆಚ್ಚಾಗಿ ರೈತರಿಂದ ಅಡಿಕೆ ಬರಲಿ ಎಂಬ ಕಾರಣಕ್ಕೆ ಅಲ್ಲವೇ ಅಲ್ಲ. ಖರೀದಿದಾರರು ತಮ್ಮ ದಾಸ್ತಾನನ್ನು ಮಾರಾಟ ಮಾಡುವುದಕ್ಕಾಗಿ. ಮಾರುಕಟ್ಟೆಯಲ್ಲಿ ಅಡಿಕೆ ದರ ಹೆಚ್ಚು ಇರುವಂತೆ ಮಾಡಿ ಆ ದರಕ್ಕೆ ವ್ಯಾಪಾರ ಮಾಡುತ್ತಾರೆ. ಸ್ಟಾಕು ಕಡಿಮೆ ಆದ ತಕ್ಷಣ ಮತ್ತೆ ಇಳಿಕೆ ಪ್ರಾರಂಭವಾಗುತ್ತದೆ.
ಏರಿಕೆಯಾದ ಅಡಿಕೆ ಧಾರಣೆ ಈ ವಾರದಲ್ಲಿ ತನ್ನ ವೇಗವನ್ನು ನಿಲ್ಲಿಸಿದೆ. ದರ ಏರಿಕೆಯಾಗುವ ಬದಲು ಸ್ವಲ್ಪ ಕಡಿಮೆಯೇ ಆಗುವ ಸ್ಥಿತಿ ಉಂಟಾಗಿದೆ. ಖರೀದಿದಾರರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಫೋರ್ಸ್ ಇಲ್ಲ. ಖರೀದಿದಾರರಲ್ಲಿ ಸ್ಪರ್ಧೆ ಇದ್ದರೆ ದರ ಎರಿಕೆ ಆಗುತ್ತಾ ಇರುತ್ತದೆ. ಇಲ್ಲವಾದರೆ ಸರಾಸರಿ ದರ ಕಡಿಮೆಯಾಗಲಾರಂಭಿಸುತ್ತದೆ. ಈ ವಾರ ಆ ಸ್ಥಿತಿ ಉಂಟಾಗಿದೆ. ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ಅಂತರ 2000 ತನಕ ಆಗಿದೆ. ಇದು ದರ ಮತ್ತೆ ಸ್ವಲ್ಪ ಹಿಂಜರಿಯುವ ಲಕ್ಷಣ. ಕಳೆದ ವಾರ ಚೆನ್ನಗಿರಿ ಮಾರುಕಟ್ಟೆಯಲ್ಲಿ ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ಸರಾಸರಿ 1000 ರೂ. ಗಳಷ್ಟು ವತ್ಯಾಸ ಇತ್ತು. ದರ 56,000 ತನಕವೂ ಹೋಗಿತ್ತು. ಈ ವಾರ ಅದು 55,000 ಕ್ಕೆ ಇಳಿಕೆಯಾಗಿದೆ. ಸರಾಸರಿ ದರ 53,000 ಕ್ಕೆ ಇಳಿಕೆಯಾಗಿದೆ. ಹೊಸನಗರ ಮಾರುಕಟ್ಟೆಯಲ್ಲಿ ಕಳೆದ ವಾರ 56,000 ಕ್ಕೆ ಏರಿಕೆಯಾಗಿದ್ದ ಧಾರಣೆ ಈ ವಾರ 54,000 ಕ್ಕೆ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ 55000 ದಿಂದ 53,000 ಕ್ಕೆ ಇಳಿಕೆಯಾಗಿದೆ. ಹಾಗೆಯೇ ಬಹುತೇಕ ಎಲ್ಲಾ ಮಾರುಕಟ್ಟೆ ಕೇಂದ್ರಗಳಲ್ಲಿ ದರ ಇಳಿಕೆ ಪ್ರಾರಂಭವಾಗಿದೆ. ಕೆಲವು ಮೂಲಗಳ ಪ್ರಕಾರ ದರ ಇನ್ನು ಮೇಲೆ ಏರುವ ಸಾಧ್ಯತೆ ಕಡಿಮೆಯಂತೆ.
ಯಾಕೆ ದರ ಇಳಿಕೆಯಾಯಿತು?
ಪ್ರಾರಂಭದಲ್ಲಿ ಹೇಳಿದಂತೆ ವ್ಯಾಪಾರಿಗಳು ಉತ್ತರ ಭಾರತದಿಂದ ಬೇಡಿಕೆ ಇರುವಾಗ ತಮ್ಮ ದಾಸ್ತಾನು ಮಾಲನ್ನು ವಿಲೇವಾರಿ ಮಾಡುವುದಕ್ಕೋಸ್ಕರ ದರ ಏರಿಸಿದ್ದಾರೆ. ಈಗ ಬೇಡಿಕೆ ಕಡಿಮೆಯಾಗಿದೆ. ಅಥವಾ ಹಣ ಸರಾಗವಾಗಿ ಬರುತ್ತಿಲ್ಲ. ಹಾಗಾಗಿ ದರ ಇಳಿಕೆಯಾಗಿದೆ. ಈಗ ಮಳೆ ಹೆಚ್ಚಾಗಿದ್ದು, ತಕ್ಷಣದ ಬೇಡಿಕೆಗೆ ಸಾಕಾಗುವಷ್ಟು ಅಡಿಕೆ ರವಾನೆಯಾಗಿದೆ. ಹಾಗಾಗಿ ಇನ್ನು ದರ ತುಂಬಾ ಇಳಿಕೆಯಾಗದಿದ್ದರೂ ಏರಿಕೆ ಸಾಧ್ಯತೆ ತುಂಬಾ ಕಡಿಮೆ. ಇನ್ನು ಮುಂದಿನ ದಿನಗಳಲ್ಲಿ ಸರಾಸರಿ ಖರೀದಿ ದರ ಕಡಿಮೆಯಾಗಲಾರಂಭಿಸುತ್ತದೆ. ಉತ್ತರ ಭಾರತದ ದೆಹಲಿ, ಪಂಜಾಬ್, ಉತ್ತರಾಖಂಡ, ಮುಂಬೈ ಮುಂತಾದ ಕಡೆ ಮಳೆರಾಯ ಭಾರೀ ಅನಾಹುತಗಳನ್ನು ಸೃಷ್ಟಿಸಿದ್ದು ಅಡಿಕೆಯ ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಸಾಗಾಣಿಕೆ, ಸಂಸ್ಕರಣೆಗೆ ತೊಂದರೆ ಉಂಟಾಗಿದ್ದು ಬೇಡಿಕೆ ಕುಸಿಯಲು ಕಾರಣವಾಗಿದೆ. ಅತಿಯಾದ ಮಳೆಗೆ ಅಡಿಕೆಯ ಗುಟ್ಕಾ ತಯಾರಿಕೆ ಕಷ್ಟವಾಗುತ್ತದೆ. ಅಡಿಕೆಯಿಂದ ಗುಟ್ಕಾ ತಯಾರಾಗುವಾಗ ವಾತಾವರಣದಲ್ಲಿ ತೇವಾಂಶ ಹೆಚ್ಚು ಇದ್ದಾಗ ಒಣಗಿಸುವ ಪ್ರಕ್ರಿಯೆ ಬೇಕಾಗುತ್ತದೆ. ಇದು ಹೆಚ್ಚುವರಿ ಖರ್ಚು ಆದ ಕಾರಣ, ಸ್ವಲ್ಪ ಸಮಯ ಉತ್ಪಾದನೆಯನ್ನು ಕಡಿಮೆ ಮಾಡಲಾಗುತ್ತದೆ. ಇದೆಲ್ಲಾ ಕಾರಣಗಳಿಂದ ದರ ಇಳಿಕೆಯಾಗಿದೆ. ಈ ತಿಂಗಳ ಕೊನೆಗೆ ಆಗಸ್ಟ್ ಮೊದಲವಾರದಿಂದ ಚಿತ್ರದುರ್ಗ, ಹಾಗೆಯೇ ಇತ್ತೀಚೆಗೆ ಸೇರ್ಪಡೆಯಾದ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕೊಯಿಲು ಪ್ರಾರಂಭವಾಗುತ್ತದೆ. ಈಗಾಗಲೇ ಗುತ್ತಿಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಪ್ರತೀವರ್ಷವೂ ನಡೆಯುತ್ತದೆ. ಹಾಗೆಯೇ ಈ ವರ್ಷವೂ ಆಗಿದೆ.
ಯಾವಾಗ ಏರಿಕೆ ಆಗಬಹುದು?
ಏರಿಕೆ ಇಳಿಕೆ ಎಂಬುದು ವರ್ಷದುದ್ದಕ್ಕೂ ಆಗುತ್ತಲೇ ಇರುತ್ತದೆ. ಒಮ್ಮೆ ಏರಿಕೆಯ ಗತಿ. ಮತ್ತೊಮ್ಮೆ ಇಳಿಕೆ. ಇಳಿಕೆ ಸ್ಥಿತಿ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯುತ್ತದೆ. ಏರಿಕೆ ಅವಧಿ ಕಡಿಮೆ ಇರುತ್ತದೆ. ಇನ್ನು ಕೊಯಿಲು ಪ್ರಾರಂಭವಾಗಿ ಮಳೆ ವಾತಾವರಣ ಇಲ್ಲದಿದ್ದ ಪಕ್ಷದಲ್ಲಿ ಎರಡು ತಿಂಗಳ ತರುವಾಯ ಮತ್ತೆ ಏರಿಕೆ ಪ್ರಾರಂಭವಾಗುತ್ತದೆ. ಅದರ ಬೆನ್ನಿಗೆ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಕೊಯಿಲು ಪ್ರಾರಂಭವಾಗುತ್ತದೆ. ಆಗ ಮತ್ತೆ ಇಳಿಕೆಯಾಗುತ್ತದೆ. ಈ ಮಧ್ಯೆ ಕೆಲವೊಮ್ಮೆ ಬೇಡಿಕೆ ಅಥವಾ ಸಟ್ಟಾ ವ್ಯಾಪಾರ ಪ್ರಾರಂಭವಾದರೆ ಮತ್ತೆ ದರ ಎರಿಕೆಯಾಗಬಹುದು. ಈ ವರ್ಷ ಎಲ್ಲಾ ಕಡೆಯಲ್ಲೂ ಬೆಳೆ ಕಡಿಮೆ ಇದೆ. ಹಾಗಾಗಿ ಬೆಲೆ ತೀರಾ ಕೆಳಕ್ಕೆ ಬೀಳುವ ಸಾಧ್ಯತೆ ಕಡಿಮೆ. ಮಳೆ ಕಡಿಮೆಯಾದ ಸಮಯದಲ್ಲಿ ಮತ್ತೆ ದರ ಏರಿಕೆ ಆಗುವ ಸಾಧ್ಯತೆ ಇದೆ.
ಚಾಲಿ ಅಡಿಕೆಯ ಸ್ಥಿತಿ ಏನಾಗಬಹುದು?
ಚೋಲ್ ಅಡಿಕೆಗೆ ಬೇಡಿಕೆ ಹೆಚ್ಚು ಇಲ್ಲ. ಹೊಸ ಅಡಿಕೆಗೆ ಬೇಡಿಕೆ ಇದೆ. ಹೊಸತಕ್ಕೆ ಏರಿಕೆ ಆಗುವಾಗ ಹಳೆಯದಕ್ಕೆ ಏರಬೇಕು ಎಂಬುದು ಬೆಳೆಗಾರರ ಲೆಕ್ಕಾಚಾರ. ಆದರೆ ವ್ಯಾಪಾರಿಗಳು ಹಳೆಯದನ್ನು ಹಾಗೆಯೇ ಉಳಿಸಿಕೊಂಡು ಹೊಸತಕ್ಕೆ ದರ ಏರಿಸುತ್ತಿದ್ದಾರೆ. ಇತ್ತೀಚೆಗೆ ಗ್ರಾಹಕವರ್ಗದಲ್ಲಿ ಹಳೆಯದು, ಹೊಸತು ಎಂಬ ಆಯ್ಕೆ ಕಡಿಮೆಯಾಗಿದೆ. ಇದಕ್ಕೆ ಬೆರಕೆಯೂ ಒಂದು ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಬೆಲೆ ಯಾವುದಕ್ಕೆ ಕಡಿಮೆ ಇದೆ ಅದನ್ನು ಆಯ್ಕೆ ಮಾಡುವ ಮನೋಸ್ಥಿತಿ ಉಂಟಾಗಿದೆ ಎನ್ನುತ್ತಾರೆ. ಆಗಸ್ಟ್ ತಿಂಗಳಿಗೆ ಹೊಸ ಚಾಲಿಗೆ ಇನ್ನೂ 10-15 ರೂ. ಏರಿಕೆ ಸಾಧ್ಯತೆ ಇದೆ. ಈ ದಿನ (21-07-2023) ಖಾಸಗಿ ವ್ಯಾಪಾರಿಗಳು ಹಳೆ ಅಡಿಕೆಗೆ ಸ್ವಲ್ಪ ಬೆಲೆ ಏರಿಸಿದ್ದಾರೆ. ಹಾಗಾಗಿ ಒಂದೆರಡು ದಿನಗಳಲ್ಲಿ ಹಳೆ ಅಡಿಕೆಗೆ ಸ್ವಲ್ಪ 5-10 ರೂ. ತನಕ ದರ ಏರುವ ಸಾಧ್ಯತೆ ಕಂಡುಬರುತ್ತದೆ. ಬೆಳೆಗಾರರು ಆಗಸ್ಟ್ ಎರಡನೇ ವಾರದ ತನಕ ಕಾದು ಮಾರಾಟ ಮಾಡುವುದು ಸೂಕ್ತ. ಈ ವರ್ಷ ಹೊಸ ಬೆಳೆ ಭಾರೀ ಕಡಿಮೆ ಇದೆ. ಹಾಗಾಗಿ ದರ ಸ್ವಲ್ಪ ಏರಿಕೆ ಆದಾಗ ಹಳೆ ಅಡಿಕೆಯನ್ನು ಮಾರಾಟ ಮಾಡಿ, ಹೊಸತನ್ನು ಉಳಿಸಿಕೊಳ್ಳಬಹುದು. ಹೊಸ ಅಡಿಕೆಗೆ ಮುಂದಿನ ಜನವರಿ ಸುಮಾರಿಗೆ 47,500 ತನಕವೂ ಏರಿಕೆ ಆಗಬಹುದು.
ಕರಿಮೆಣಸು ಏರಿಕೆ:
ಕರಿಮೆಣಸಿನ ಧಾರಣೆ ಏರಿಕೆಯಾಗಿದೆ. ಬಹುಶಃ ಇದು ಮುಂದೆ ಹಬ್ಬದ ದಿನಗಳು ಬರಲಿವೆ. ಬೇಡಿಕೆ ಬರಲಿದೆ ಎಂಬ ಕಾರಣಕ್ಕೆ ದಾಸ್ತಾನು ಉದ್ದೇಶಕ್ಕೆ ದರ ಏರಿಕೆ ಮಾಡಿದ್ದಿರಬೇಕು. ಕ್ಯಾಂಪ್ಕೋ ಸಂಸ್ಥೆ ಕ್ವಿಂಟಾಲಿಗೆ 50,000 ದರ ಪ್ರಕಟಿಸಿದೆ. ಖಾಸಗಿಯವರು 52,000 ತನಕ ಖರೀದಿ ನಡೆಸುತ್ತಿದ್ದಾರೆ. ವ್ಯವಹಾರ ಸ್ವಲ್ಪ ಬೇಡಿಕೆ ಇರುವಂತೆ ಕಾಣಿಸುತ್ತಿದೆ. ಕೆಲವು ಮೂಲಗಳ ಪ್ರಕಾರ ವಿಯೆಟ್ನಾಂ, ಇಂಡೋನೇಶಿಯಾ, ಶ್ರೀಲಂಕಾ ಮುಂತಾದ ಕಡೆಗಳಲ್ಲಿ ಮಾಲು ಕೊರತೆ ಇರುವ ಕಾರಣ ಬೇಡಿಕೆ ಪ್ರಾರಂಭವಾಗಿದೆ ಎನ್ನಲಾಗುತ್ತದೆ. ಆಗಸ್ಟ್ – ಸಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಬೆಲೆ ಏರಿಸುವುದು ಸಹಜ. ಆ ಪ್ರಕಾರ ಈ ವರ್ಷವೂ ಬೆಲೆ ಬಂದಿದೆ. ಬಹುಶಃ 55,000-57,500 ತನಕ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಬಹುದು. ಈತನಕ ದಾಸ್ತಾನು ಇಟ್ಟವರು ಇನ್ನು ಒಂದು ತಿಂಗಳ ತನಕ ಇಟ್ಟುಕೊಳ್ಳಬಹುದು. ಇಳಿಕೆ ಸಾಧ್ಯತೆ ಇಲ್ಲ.
ಅಡಿಕೆ ಬೆಳೆಗಾರರಿರಲಿ, ಮೆಣಸು ಬೆಳೆಗಾರರಿರಲಿ, ಈಗಿನ ಸ್ಥಿತಿಯಲ್ಲಿ ಭಾರೀ ದರ ಏರಿಕೆ ನಿರೀಕ್ಷೆಯಲ್ಲಿ ಉತ್ಪನ್ನವನ್ನು ದಾಸ್ತಾನು ಇಡುವುದು ಸೂಕ್ತವಲ್ಲ. ಒಂದು ವರ್ಷದ ಅವಧಿಯಲ್ಲಿ ದರ ಏರಿಕೆ ಆದರೆ 10%ಕ್ಕಿಂತ ಹೆಚ್ಚು ಏರಿಕೆ ಆಗಬೇಕು. ಅದು ಆಗುತ್ತಿಲ್ಲ. ಹಾಗಾಗಿ ಅಗತ್ಯಗಳಿಗೆ ಸಾಲ ಸೋಲ ಮಾಡದೆ ಮಾಲನ್ನೇ ವಿಕ್ರಯಿಸುತ್ತಾ, ಏರಿಕೆ – ಇಳಿಕೆ ಎಲ್ಲಾ ಸಮಯದಲ್ಲೂ ಮಾಲನ್ನು ಮಾರಾಟ ಮಾಡುವುದೇ ಸೂಕ್ತ. ವ್ಯಾಪಾರಿಗಳ ನಡೆಯನ್ನು ಬೆಳೆಗಾರರು ಆಂದಾಜಿಸುವುದು ಕಷ್ಟ. ವ್ಯಾಪಾರಿಗಳೂ ಸಾಕಷ್ಟು ರಿಸ್ಕ್ ನಲ್ಲಿ ವ್ಯವಹಾರ ನಡೆಸುವವರಾಗಿರುತ್ತಾರೆ.