ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರ ತೋಟಗಾರಿಕಾ ಬೆಳೆಗಳಲ್ಲಿ ಅತೀ ಹೆಚ್ಚು  ಪೋಷಕಾಂಶಗಳನ್ನು ಬಯಸುವ ಬೆಳೆ. ವರ್ಷವಿಡೀ ಬೆಳವಣಿಗೆ ಇರುವ ಇದು ಎಲ್ಲಾ ಋತುಮಾನದಲ್ಲೂ ಏಕಪ್ರಕಾರ ಪೋಷಕಗಳನ್ನು ಬಯಸುತ್ತದೆ. ಬಹಳಷ್ಟು ರೈತರು ತೆಂಗಿಗೆ ಗೊಬ್ಬರ ಕೊಡುವ ವಿಚಾರದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಮರದ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಯಾವ ರೀತಿಯಲ್ಲಿ ಗೊಬ್ಬರ ಹಾಕಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ತೆಂಗಿನ ಮರದ ಶಿರ ಭಾಗ ಲಕ್ಷಣ ಅದರ ಆರೋಗ್ಯವನ್ನು ತಿಳಿಸುತ್ತದೆ. ಮರದ ಗರಿಗಳು ಚತ್ರಿಯಂತೆ ಬಿಡಿಸಿರಬೇಕು.  ಮರದಲ್ಲಿ 35 ಕ್ಕೂ ಹೆಚ್ಚು ಗರಿಗಳಿರಬೇಕು. ಗರಿಗಳು ಸಾಕಷ್ಟು (6-7 ಮೀಟರು) ಉದ್ದವಾಗಿರಬೇಕು.  ಪ್ರತೀ ಎಲೆ ಕಂಕುಳಲ್ಲಿಯೂ  ಹೂ ಗೊಂಚಲು ಇರಬೇಕು. ಈ ಕಾಯಿ ತುಂಬಿದ ಗೊಂಚಲುಗಳು ಗರಿಯ  ಆಶ್ರಯದಲ್ಲಿ ಸುರಕ್ಷಿತವಾಗಿರಬೇಕು. ಬೇಸಿಗೆಯಲ್ಲಿ ಹೆಚ್ಚು ಗರಿಗಳು ಉದುರುವುದು, ಗರಿಗಳ ಸಂಖ್ಯೆ ಕಡಿಮೆಯಾಗುವುದು ಆಗಬಾರದು. ಇದು ಆರೋಗ್ಯವಂತ ಮರದ ಲಕ್ಷಣ. ಇವೆಲ್ಲವೂ ನಿರ್ಧಾರವಾಗುವುದು ಎಳೆ ಪ್ರಾಯದಿಂದ ಸಸಿಯನ್ನು ಸಾಕುವ ಕ್ರಮದಿಂದ.

ಫಲ ಕೊಡುವ ತೆಂಗಿನ ಮರಕ್ಕೆ ಏನೆಲ್ಲಾ ಗೊಬ್ಬರ ಕೊಡಬೇಕು:

  • ತೆಂಗಿನ ಮರಕ್ಕೆ ವರ್ಷಕ್ಕೊಮ್ಮೆ ಗೊಬ್ಬರ ಕೊಡುವುದಲ್ಲ. ವರ್ಷದ ಎಲ್ಲಾ ತಿಂಗಳುಗಳಲ್ಲೂ ಶಿಫಾರಿತ ಪ್ರಮಾಣದವನ್ನು ವಿಭಜಿಸಿ ಕೊಡುವುದು ಬಹಳ ಉತ್ತಮ. 
  • ಇದರಿಂದ ಎಲ್ಲಾ ಋತುಮಾನದಲ್ಲೂ ಬರುವ ಹೂ ಗೊಂಚಲಿನಲ್ಲಿ ಹೆಚ್ಚು ಕಾಯಿಗಳು ಉಳಿಯುತ್ತದೆ.
  • ವರ್ಷಕ್ಕೊಮ್ಮೆ ಎರಡೂ ಬಾರಿ ಕೊಡುವ ಕಡೆ ಮಳೆಗಾಲದ ಕೊಯಿಲಿಗೆ ಹೆಚ್ಚು ಕಾಯಿಯೂ ಬೇಸಿಗೆಯ ಕೊಯಿಲಿಗೆ ಕಡಿಮೆ ಕಾಯಿಯೂ ಸಿಗುತ್ತದೆ.
  • ಮಳೆಗಾಲದಲ್ಲಿ ಮಾತ್ರ ಹೆಚ್ಚು ಕಾಯಿ ಕಚ್ಚುತ್ತದೆ. ಉಳಿದ ಸಮಯದಲ್ಲು ಉದುರುವುದು ಹೆಚ್ಚು.

ತೆಂಗಿನ ಮರಇರಲಿ, ಅಡಿಕೆ ಮರ ಇರಲಿ, ಮಣ್ಣು ಫಲವತ್ತಾಗಿದ್ದರೆ ಹೆಚ್ಚು ಫಸಲು ಸಿಗುತ್ತದೆ. ಫಲವತ್ತಾದ ಮೆಕ್ಕಲು ಮಣ್ಣು ಇರುವ ಕಡೆ ಗೊಬ್ಬರ ಕೊಡುವುದು ಕಡಿಮೆಯಾದರೂ ಮರ ಸೊರಗುವುದಿಲ್ಲ. ಹಾಗಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಡೆಗೆ ಗಮನ ಕೊಡಬೇಕಾಗುತ್ತದೆ.

  • ಒಂದು ಫಲಕೊಡುವ ತೆಂಗಿನ ಮರಕ್ಕೆ 1200 ಗ್ರಾಂ ಸಾರಜನಕ, 400-500 ಗ್ರಾಂ ರಂಜಕ ಮತ್ತು 1500 ಗ್ರಾಮ್ ಪೊಟ್ಯಾಶ್ ಪೊಷಕಾಂಶ ಬೇಕು.
  • ಜೊತೆಗೆ 250-400 ಗ್ರಾಂ ನಷ್ಟು ಮೆಗ್ನೀಶಿಯಂ ಸಲ್ಫೇಟ್ ಹಾಗೆಯೇ 100 ಗ್ರಾಮ್ ನಷ್ಟು ಸತುವಿನ ಸಲ್ಫೇಟ್ ಕೊಟ್ಟರೆ ಕಾಯಿಯ ಗುಣಮಟ್ಟ ಉತ್ತಮವಾಗಿರುತ್ತದೆ.
  • ವರ್ಷಕ್ಕೊಮ್ಮೆ ಮರವೊಂದಕ್ಕೆ 1 ಕಿಲೋ ದಷ್ಟು ಸುಣ್ಣವನ್ನು ಕೊಡುವುದು ಅಗತ್ಯ.  
  • ಈ ಪ್ರಮಾಣವನ್ನು ಹೊಂದಿಸಲು ಸಾರಜನಕವಾಗಿ 2750  ಗ್ರಾಂ ಯೂರಿಯಾವನ್ನು ಕೊಡಬೇಕು.
  • ರಂಜಕ ಮೂಲದವಾಗಿ 2-2.5 ಕಿಲೋ ರಾಕ್ ಫೋಸ್ಫೇಟ್, ಅಥವಾ ಸೂಪರ್ ಫೋಸ್ಫೇಟ್  ಕೊಡಬೇಕು.
  • DAP ಕೊಡುವುದಾದರೆ ಮರಒಂದಕ್ಕೆ 1 ಕಿಲೋ ತನಕ ಕೊಡಬಹುದು. ಆಗ ಯೂರಿಯಾವನ್ನು ½  ಕಿಲೋ ಕಡಿಮೆ ಮಾಡಬೇಕು.
  • ಪೊಟ್ಯಾಶ್ ಗೊಬ್ಬರವಾಗಿ  ಮ್ಯುರೆಟ್ ಆಫ್ ಪೊಟ್ಯಾಶ್ ಅನ್ನು 2.5 ಕಿಲೊ ಕೊಡಬೇಕು.
  • ಇವುಗಳನ್ನು 12 ಕಂತು ಮಾಡಿ ಪ್ರತೀ ತಿಂಗಳೂ ಕೊಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಪ್ರತೀ ಎಲೆ ಕಂಕುಳಲ್ಲಿಯೂ  ಹೂ ಗೊಂಚಲು ಇರಬೇಕು
ಪ್ರತೀ ಎಲೆ ಕಂಕುಳಲ್ಲಿಯೂ ಹೂ ಗೊಂಚಲು ಇರಬೇಕು

ಯಾವ ಸ್ಥಳದಲ್ಲಿ ಗೊಬ್ಬರ ಕೊಡಬೇಕು?

  • ನಾವೆಲ್ಲಾ ತೆಂಗಿಗೆ ಗೊಬ್ಬರ ಕೊಡುವಾಗ ಮಾಡುವ ಅತೀ ದೊಡ್ಡ ತಪ್ಪು ಎಂದರೆ ಬುಡಕ್ಕೆ ತಂದು ಗುಪ್ಪೆ ಹಾಕುವುದು.
  • ಇದು ಸಮಂಜಸವಾದ ವಿಧಾನ ಅಲ್ಲ.  ತೆಂಗಿನ ಮರದ ಬುಡದಲ್ಲಿ ಇರುವ ಬೇರುಗಳು ಆಹಾರ ಸಂಗ್ರಹಿಸುವ ಬೇರುಗಳಾಗಿರುವುದಿಲ್ಲ.
  • ಅವು ಸುಮಾರು 1-1.5 ಮೀಟರ್ ಉದ್ದ ಬೆಳೆದ ನಂತರ  ಆಹಾರ ಸಂಗ್ರಹಿಸಿಕೊಡುವ ಕವಲು ಬೇರುಗಳನ್ನು  ಬಿಡುತ್ತದೆ.
  • ಆ ನಂತರದ ಸ್ಥಳದಲ್ಲಿ ಹಾಕಿದರೆ ಅದು ಬೇರುಗಳಿಗೆ ತಕ್ಷಣ  ಲಭ್ಯವಾಗುತ್ತದೆ. ನಮ್ಮಲ್ಲಿ ಒಬ್ಬರು ವೈದ್ಯರಿದ್ದರು.
  • ಅವರು ವೈದ್ಯಕೀಯ ವೃತ್ತಿ ಮಾಡುವವರಾಗಿದ್ದರೂ ಕೆಲವು ಅವರ ಕೃಷಿ ಕ್ರಮ ಸಂಶೋಧನಾತ್ಮಕವಾಗಿತ್ತು. 
  • ಅವರು ತಮ್ಮ ಜಾಗದಲ್ಲಿ ಬಾರ್ಡರ್ ಗಳಲ್ಲಿ 10 ಅಡಿಗೊಂದರಂತೆ ತೆಂಗಿನ ಸಸಿ ನೆಟ್ಟಿದ್ದರು.
  • ಅದನ್ನು ನೋಡಿ ಹೆಚ್ಚಿನವರು ಅಪಹಾಸ್ಯ ಮಾಡಿದ್ದರು.  ಕ್ರಮೇಣ ಬೆಳೆದಂತೆ ಅಪಹಾಸ್ಯ ಮಾಡಿದವರಿಗೆ  ಉತ್ತರವನ್ನು ಅದೇ ಕೊಟ್ಟಿತ್ತು.
  • ಅವುಗಳು  ಬೆಳಕನ್ನು ಅರಸಿಕೊಂಡು ಆ ಕಡೆ ಈ ಕಡೆ ವಾಲಿ ಆರೋಗ್ಯವಾಗಿ ಬೆಳೆದಿದ್ದವು.
  • ಇತ್ತೀಚೆಗೆ  ತೆಂಗಿಗೆ ಸುಳಿ ಕೊಳೆ ರೋಗ ಹೆಚ್ಚು. ನೆಟ್ಟ ಸುಮಾರು 20 ಕ್ಕೂ ಹೆಚ್ಚಿನ ಸಸಿಗಳಲ್ಲಿ 5-6 ಸುಳಿ ಕೊಳೆ ಬಾಧೆಯಿಂದ ಸತ್ತು ಹೋಯಿತು.
  • ಈಗ ಉಳಿದಿರುವವು ಉತ್ತಮ ಫಲ ಕೊಡುತ್ತಿವೆ.
  • ಹಾಗೆಯೇ ಅವರ ಇನ್ನೊಂದು ಬೇಸಾಯ ಕ್ರಮ ನಾಲ್ಕು ತೆಂಗಿನ ಮಧ್ಯಂತರದಲ್ಲಿ ತೆಂಗಿನ ಗರಿ ಅದರ ಸಿಪ್ಪೆ ಎಲ್ಲವನ್ನೂ  ಹರಡುತ್ತಿದ್ದರು.  
  • ಮರ ಎಲ್ಲಿಯೋ – ಗೊಬ್ಬರ ಎಲ್ಲಿಯೋ ಎಂದು ಕೆಲಸದವರೂ ನಗೆಯಾಡುತ್ತಿದ್ದರು.
  • ನಾನು ಕಂಡಂತೆ ಅವರು ತೆಂಗಿನಲ್ಲಿ ಪಡೆಯುವ ಇಳುವರಿ ಸರಾಸರಿ 150 ಕ್ಕೂ ಹೆಚ್ಚಿನ ಕಾಯಿಗಳು.

ತೆಂಗು ಅಡಿಕೆಗೆ ಬೇರು ವಲಯ  ಕ್ರಿಯಾತ್ಮಕವಾಗಿರುವ ಸ್ಥಳದಲ್ಲಿ ಗೊಬ್ಬರ ಮತ್ತು ನೀರಾವರಿ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತದೆ. ಅದರ ಎಲ್ಲಾ ತ್ಯಾಜ್ಯಗಳನ್ನೂ ಅದರ ಬುಡಕ್ಕೆ ಹಾಕಿ ಅದು ಕಾಂಪೋಸ್ಟ್ ಕ್ರಿಯೆಗೆ ಒಳಪಡುವಷ್ಟು ತೇವಾಂಶವನ್ನು ಒದಗಿಸುತ್ತಾ ಇದ್ದರೆ ಮಣ್ಣು ಫಲವತ್ತಾಗುತ್ತಾ ಹೋಗುತ್ತದೆ. ಮಣ್ಣು ಹೆಚ್ಚು ಹೆಚ್ಚು ಫಲವತ್ತಾದಂತೆ ಗೊಬ್ಬರ ಕಡಿಮೆ ಮಾಡಬಹುದು, ನೀರಾವರಿಯನ್ನೂ ಕಡಿಮೆ ಮಾಡಬಹುದು.

ಇಷ್ಟು ಬುಡದಲ್ಲಿ ಬಿಡಿಸುವುದು  ಮಾಡಲೇಬಾರದು
ಇಷ್ಟು ಬುಡದಲ್ಲಿ ಬಿಡಿಸುವುದು ಮಾಡಲೇಬಾರದು

ತೆಂಗಿನ ಮರದ ಬೇರು ಎಲ್ಲಿ ತನಕ ಇರುತ್ತದೆ?

  • ತೆಂಗಿನ ತೋಟದಲ್ಲಿ ಬುಡದಿಂದ ಸುಮಾರು 3-4 ಮೀಟರು ದೂರದಲ್ಲಿ ಅಗೆದು ನೋಡಿ, ಬೇರು ಕಾಣಲು ಸಿಗುತ್ತದೆ.
  • ಕೆಲವು ಸಡಿಲ ಮಣ್ಣು ಇರುವಲ್ಲಿ 5-6 ಮೀಟರು ದೂರಕ್ಕೆ ಅಗೆದರೂ ಬೇರು ಸಿಗುತ್ತದೆ.
  • ದೂರ ಹೋಗುವ ಬೇರುಗಳು ಹೆಚ್ಚು ಕ್ರಿಯಾತ್ಮಕ ಬೇರುಗಳಾಗಿದ್ದು, ಹೆಚ್ಚಿನ ಆಹಾರವನ್ನು ಮರಕ್ಕೆ ಸಂಗ್ರಹಿಸಿಕೊಡುವಂತವುಗಳು.
  • ಬೇರುಗಳು ದೂರ ದೂರ ಹೋದಷ್ಟೂ ಮರದ ಶಿರ ಭಾಗ ಅಗಲವಾಗಿ, ಉದ್ದದ ಗರಿಗಳು ಮೂಡುತ್ತಿರುತ್ತದೆ.
  • ನಾವು ಪೋಷಕಾಂಶಗಳನ್ನು ದೂರದಲ್ಲಿ ನೀಡಿದಷ್ಟೂ ಬೇರುಗಳು ಅಲ್ಲಿಗೆ ಅರಸಿಕೊಂಡು ಬರುತ್ತವೆ. 
  • ಅಲ್ಲಿ ಬೇರು ಸಮೂಹವೇ ವೃದ್ದಿಯಾಗುತ್ತದೆ.  ಬುಡ ಭಾಗದಲ್ಲಿ ನಾವು ಕಾಣುವ ಬೇರು ಸಮೂಹ ಏನಿದೆಯೋ ಅದು ಏಕದಳ ಸಸ್ಯಗಳ ಬೇರು ಮೂಡುವ ಸ್ಥಳವಾಗಿರುತ್ತದೆ.
  • ತಾಳೆ ಜಾತಿಯ ಮರಗಳಲ್ಲಿ ಬೇರುಗಳು ಕಾಂಡದ ಭಾಗದಿಂದ ಮೂಡುತ್ತಾ ಇರುತ್ತವೆ.
  • ಅವು ಹೀರುವ ಬೇರುಗಳಲ್ಲ. ಮರದ ಬೇರುಗಳು ದೂರ ಹೋದಷ್ಟೂ ಮರಕ್ಕೆ ಶಕ್ತಿ ಹೆಚ್ಚು.

ನೀರಾವರಿ ಹೇಗೆ ಮಾಡಬೇಕು:

  • ತೆಂಗಿನ ಬುಡಕ್ಕೆ ನೀರು ಕೊಡುವುದರ ಜೊತೆಗೆ ಬೇರು ವಲಯ ಇರುವಲ್ಲಿಯೂ ಬೇಸಿಗೆಯಲ್ಲಿ ನೀರು ಕೊಡುವುದು ಅಗತ್ಯ  ಸಾವಯವ ವಸ್ತುಗಳನ್ನು ಹಾಕಿದಾಗ ಅದು ಕಳಿಯುವಿಕೆಗೆ ಒಳಪಡಬೇಕಾದರೆ  ಸ್ವಲ್ಪ ತೇವಾಂಶ ಬೇಕಾಗುತ್ತದೆ.
  • ಒಣ ತ್ಯಾಜ್ಯಕ್ಕೆ ತೇವಾಂಶ ಸಂಪರ್ಕಿಸಿದಾಗ ಆಲ್ಲಿ ಸೂಕ್ಷ್ಮಾಣುಗಳು  ಕ್ರಿಯಾತ್ಮಕವಾಗಿ ಅದನ್ನು ಬೇಗ ಬೇಗ ಕಳಿಯುವಂತೆ ಮಾಡುತ್ತದೆ.
  • ಅದು ಗೊಬ್ಬರ ರೂಪದಲ್ಲಿ ಸಸ್ಯಗಳಿಗೆ ಲಭ್ಯವಾಗುತ್ತದೆ. ಹಾಗಾಗಿ ಹನಿ ನೀರಾವರಿ ಮಾಡುವುದಾದರೂ ತೆಂಗಿನ ಮರದ ನಾಲ್ಕೂ ದಿಕ್ಕಿಗೆ ಬುಡ ಭಾಗದಿಂದ  ಕನಿಷ್ಟ 2 ಮೀಟರು ದೂರದಲ್ಲಿ ನೀರಾವರಿ ಮಾಡಬೇಕು. ಆಗ ಫಲಿತಾಂಶ ಉತ್ತಮವಾಗಿರುತ್ತದೆ.

ತೆಂಗಿನ ಮರಕ್ಕೆ ಎಷ್ಟು ದೂರದಲ್ಲಿ ಗೊಬ್ಬರ ಕೊಡುತ್ತೇವೆಯೋ ಅಷ್ಟು ಉತ್ತಮ. ಬುಡ ಭಾಗವನ್ನು ಅಗೆದು, ಬೇರುಗಳನ್ನು ತುಂಡು ಮಾಡುವುದು ಮಾಡಿದರೆ ಮರಕ್ಕೆ ತೊಂದರೆ ಆಗುತ್ತದೆ. ಬುಡದ ಬೇರುಗಳಿಗೆ ಯಾವ ರೀತಿಯಲ್ಲೂ  ಗಾಯಗಳು ಆಗದಂತೆ ಜಾಗರೂಕತೆವಹಿಸಬೇಕು. ಮರದ  ಬುಡದಲ್ಲಿ ಮೂಡುವ ಬೇರುಗಳೇ ಬೆಳೆದು  ಮುಂದೆ ಆಹಾರ ಹೀರುವ ಬೇರುಗಳಾಗುವುದು. ಬುಡ ಬಿಡಿಸಿ ಅದಕ್ಕೆ ಗಾಯ ಮಾಡಿದರೆ ಬೇರುಗಳ ಸಂಖ್ಯೆ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!