ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಬೆಳೆಯಬಹುದು. ಈ ತಳಿಯ ಬೆಣ್ಣೆ ಹಣ್ಣಿಗೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಹಾಗಾಗಿಯೇ ಇದಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ. ಹಾಗಾದರೆ ಹ್ಯಾಸ್ ತಳಿ ಏನು, ಇದನ್ನು ಎಲ್ಲೆಲ್ಲಿ ಬೆಳೆದರೆ ಮಾತ್ರ ಫಲ ಪಡೆಯಬಹುದು ಎಂಬುದನ್ನು ತಿಳಿಯೋಣ.
ಬೆಣ್ಣೆ ಹಣ್ಣು, ಅವಕಯಾಡೋ,ದಲ್ಲಿ ಹಲವಾರು ತಳಿಗಳಿವೆ. ಗಾತ್ರದಲ್ಲಿ, ಬಣ್ಣದಲ್ಲಿ, ರಚನೆಯಲ್ಲಿ ಇರುವ ವ್ಯತ್ಯಾಸಕ್ಕನುಗುಣವಾಗಿ ತಳಿಗಳಿಗೆ ನಾಮಕರಣ ಮಾಡಲಾಗಿದೆ. ಈ ಹಣ್ಣಿನ ಮೂಲವೇ ಮಧ್ಯ ಅಮೆರಿಕಾದ ಮೆಕ್ಸಿಕೋ, ಗ್ವಾಟೇಮಾಲಾ ಹಾಗೂ ವೆಸ್ಟ್ ಇಂಡೀಸ್ ದ್ವೀಪಗಳು ಎನ್ನಲಾಗುತ್ತಿದೆ. ಬ್ರಿಟೀಷರು ಭಾರತಕ್ಕೆ ಬಂದಾಗ ಅವರ ಮೂಲಕ ಇದು ಪರಿಚಯಿಸಲ್ಪಟ್ಟಿತು ಎನ್ನಲಾಗುತ್ತದೆ. ಎಲ್ಲೆಲ್ಲಿ ಬ್ರಿಟೀಷರು ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದಾರೆಯೋ ಅಲ್ಲೆಲ್ಲಾ ಬಟರ್ ಪ್ರೂಟ್ ಬೀಜಗಳು ಪ್ರಸಾರವಾಗಿವೆ. ಮೈಸೂರು ಸಂಸ್ಥಾನದ ಪಬ್ಲಿಕ್ ಗ್ರಾರ್ಡನ್ಸ್ ನ ಮ್ಯಾನೇಜರ್ ಆಗಿದ್ದ ಜಾನ್ ಕೆಮರಾನ್ ಇವರು ಮೊಟ್ಟ ಮೊದಲ ಬಾರಿಗೆ 1990 ರ ಇಸವಿ ಸುಮಾರಿಗೆ ಬೆಂಗಳೂರಿನ ಬಟಾನಿಕಲ್ ಗಾರ್ಡನ್ ಗೆ ಪರಿಚಯಿಸಿದರು ಎಂಬ ಉಲ್ಲೇಖ ಇದೆ. ಬ್ರಿಟೀಷರು ವಾಸ್ತವ್ಯವಿದ್ದ ಕೆಲವು ಕಡೆ ಮಡಿಕೇರಿ ( ಕೊಡಗು) ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆ ಅವರ ಕಾಫೀ ತೋಟಗಳಲ್ಲಿ ತಮ್ಮ ಸ್ವ ಬಳಕೆಗಾಗಿ ಬೆಳೆಸಿದರು ಎಂಬ ಉಲ್ಲೇಖ ಇದೆ. ಅವರು ತಿಂದು ಬಿಸಾಡಿದ ಬೀಜಗಳಿಂದ ಅಲ್ಲಲ್ಲಿ ಸಸಿಗಳಾಗಿವೆ. ಅದರಲ್ಲೇ ಕೆಲವು ಮಿಶ್ರ ಪರಾಗ ಸ್ವರ್ಶದಿಂದ ಭಿನ್ನ ಆಕಾರದ ಹಣ್ಣುಗಳಾದದ್ದೂ ಇದೆ. ನಮ್ಮ ಜನ ವಿದೇಶಕ್ಕೆ ಹೋದಾಗ ತಂದ ಆಕರ್ಷಕ ಹಣ್ಣುಗಳಿಂದಲೂ ಇಲ್ಲಿ ಬೇರೆ ಬೇರೆ ಆಕಾರ, ಗಾತ್ರ ಬಣ್ಣದ ತಳಿಗಳಾಗಿವೆ. ನಮ್ಮ ರಾಜ್ಯದ ತೋಟಗಾರಿಕಾ ನಿರ್ಧೇಶಕರಾಗಿದ್ದ ಡಾ| ಎಂ ಎಚ್ ಮರಿಗೌಡ ಇವರು ಬಟರ್ ಪ್ರೂಟ್ ಎಂಬ ಹಣ್ಣಿನ ಸಸಿಗಳನ್ನು ರಾಜ್ಯದ ಮೂಲೆ ಮೂಲೆಯ ತೋಟಗಾರಿಕಾ ಕ್ಷೇತ್ರಗಳಿಗೆ ಪರಿಚಯಿಸಿದರು. ಈಗಂತೂ ಜಗತ್ತು ತುಂಬಾ ಹತ್ತಿರ ಆದ ಕಾರಣ ಬೇರೆ ಬೇರೆ ತಳಿಗಳ ಪರಿಚಯವಾಗಿದೆ. ನಮ್ಮ ದೇಶದ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳೂ ಸಹ ಇದರ ಬಗ್ಗೆ ಅಧ್ಯಯನ ಹಾಗೂ ತಳಿ ಅಭಿವೃದ್ದಿ ಕಾರ್ಯ ನಡೆಸುತ್ತಿವೆ.
- ಬೆಣ್ಣೆ ಹಣ್ಣು ಎಂದರೆ ಅದರ ಒಳಭಾಗದ ತಿರುಳು ಬೆಣ್ಣೆಯಂತೆ. ಯಾವ ಸಿಹಿಯೂ ಇಲ್ಲ.
- ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿಗಳು ಪ್ರೊಟೀನು, ಕೊಬ್ಬು ಕಾರ್ಬೋಹೈಡ್ರೆಟ್ , ನಾರು ಇತ್ಯಾದಿಗಳಿಂದ ಸಂಮೃದ್ಧವಾದ ಈ ಹಣ್ಣನ್ನು ಎಲ್ಲಾ ವಯೋಮಾನದವರೂ ತಿನ್ನಬಹುದು.
- ಇದನ್ನು ಬಳಸಿ ಬಹಳಷ್ಟು ಸಿದ್ದ ಉತ್ಪನ್ನಗಳೂ ಈಗ ತಯಾರಾಗುತ್ತಿವೆ.
- ತಾಜಾ ಹಣ್ಣಾಗಿ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಸಂಸ್ಕರಿತ ಉತ್ಪನ್ನಗಳು ತಯಾರಾಗುತ್ತಿರುವ ಕಾರಣ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.
- ಹಲವಾರು ತಳಿಗಳಿದ್ದರೂ ಸಹ ಹಾಸ್ (HASS) ಎಂಬ ತಳಿಯೊಂದು ವಿಶ್ವಮಾನ್ಯವಾಗಿದ್ದು, ಇದನ್ನು ನಮ್ಮ ರಾಜ್ಯದಲ್ಲಿ ಕೆಲವು ಆಯ್ದ ಪ್ರದೇಶಗಳಲ್ಲಿ ಬೆಳೆದರೆ ಚೆನ್ನಾಗಿ ಬರುತ್ತದೆ.
ಹಾಸ್ ಇದರ ಮೂಲ ಹೇಗೆ?
- ಹಾಸ್ ಎಂಬ ತಳಿಯ ಮೂಲ ಅಮೆರಿಕಾದ ಕ್ಯಾಲಿಫೋರ್ನಿಯಾ ಪ್ರಾಂತದ್ದು.
- 1923 ರಲ್ಲಿ ಇದನ್ನು ಒಂದು ಅದೃಷ್ಟ ತಳಿ ಎಂದು ಗುರುತಿಸಲಾಯಿತು.
- ಯಾಕೆ ಅದೃಷ್ಟ ತಳಿ ಎನ್ನುತ್ತೀರಾ? ಕ್ಯಾಲಿಫೋರ್ನಿಯಾ ದಲ್ಲಿ Rudolph Hass ಎಂಬವರು ತಮ್ಮ ಮನೆ ಹಿತ್ತಲಲ್ಲಿ ಬೆಳೆಸಲು ಒಂದು ಬೆಣ್ಣೆ ಹಣ್ಣಿನ ಕಸಿ ಮಾಡಿದ ಗಿಡ ನೆಟ್ಟರಂತೆ.
- ದುರದೃಷ್ಟವಶಾತ್ ಕಸಿ ಮಾಡಿದ ಭಾಗ ಸತ್ತು ಹೋಗಿ ಉಳಿದದ್ದು, ಬೇರು ಮೂಲ ಮಾತ್ರ.
- ನೆಟ್ಟ ಗಿಡವನ್ನು ತೆಗೆಯುವುದು ಯಾಕೆ ಎಂದು ಉಳಿಸಿಕೊಂಡರಂತೆ.
- ಆ ಸಸಿ ಬೆಳೆಯಿತು. ಫಲಕೊಟ್ಟಿತು. ಅದರ ಫಲ ಇವರ ನಿರೀಕ್ಷಿತ ಫಲಕ್ಕಿಂತ ಚೆನ್ನಾಗಿರುವುದನ್ನು ಗುರುತಿಸಿದರು.
- ಅದು ಎಲ್ಲರಿಂದಲೂ ಮೆಚ್ಚುಗೆ ಪಡೆಯಿತು.
- ವಿಶ್ವ ಮಾನ್ಯವೂ ಆಯಿತು. ಯಾರಲ್ಲಿ ಈ ತಳಿ ಲಭ್ಯವಾಯಿತೋ ಅವರ ಹೆಸರನ್ನೇ ಇದಕ್ಕೆ ನೀಡಲಾಯಿತು.
- ನೆಟ್ಟವರಿಗೂ ಗೊತ್ತಿಲ್ಲದೆ ಉಂಟಾದ ತಳಿಯಾದ ಕಾರಣ ಇದನ್ನು ಅದೃಷ್ಟದ ತಳಿ (Chance seedling)ಎಂದು ಕರೆಯಲಾಗುತ್ತದೆ.
- ಇದನ್ನೇ ಒಂದು ತಳಿ ಎಂದು ಮಾನ್ಯಮಾಡಲಾಯಿತು.
- ಕಸಿ ತಾಂತ್ರಿಕತೆಯಲ್ಲಿ ಅದರ ಸಸ್ಯಾಭಿವೃದ್ದಿಯನ್ನೂ ಸಹ ಮಾಡಲಾಯಿತು.
ಹಾಸ್ ತಳಿಯ ವಿಷೇಶತೆ:
- ಹಾಸ್ ತಳಿಯ ವಿಷೇಶತೆ ಏನೆಂದರೆ ಇದು ದೊಡ್ಡ ಗಾತ್ರದ ಕಾಯಿ ಅಲ್ಲ.5-6 ಕಾಯಿಗಳಿಗೆ 1 ಕಿಲೋ ತೂಗುತ್ತದೆ.
- ಸಾಧಾರಣ ಗಾತ್ರದ್ದಾಗಿರುತ್ತದೆ. ತುಂಬಾ ಸಮಯದ ತನಕ ಹಾಳಾಗದೆ ಉಳಿಯುತ್ತದೆ.
- ಬಲಿತು ಕಿತ್ತ ನಂತರವೂ ಅದರಷ್ಟಕ್ಕೇ ಹಣ್ಣಾಗುವುದೇ ಇಲ್ಲ. ಹಾಗಾಗಿ ಹೆಚ್ಚು ಸಮಯದ ತನಕ ಇದನ್ನು ಉಳಿಸಿಕೊಳ್ಳಬಹುದು.
- ಹಣ್ಣು ಮಾಡಲು ಇದನ್ನು ಒಂದು ಪ್ಲಾಸ್ಟಿಕ್ ಕೋಣೆಯಲ್ಲಿ (ಇಥೆಲಿನ ಟ್ರೀಟ್ಮ್ಂಟ್) ಇಡಬೇಕಾಗುತ್ತದೆ.
- ಈಗ ಇಥೆಲಿನ್ ನ ಸಣ್ಣ ಪೊಟ್ಟಣಗಳು ಸಿಗುತ್ತದೆ. ಇಲ್ಲವೇ ಹಣ್ಣು ಮಾಡುವ ಕೋಣೆಯಲ್ಲಿ ಇಡಬೇಕಾಗುತ್ತದೆ.
- ಇದಕ್ಕೆ ಅದರದ್ಡೇ ಆದ ಒಂದು ರುಚಿ ಮತ್ತು ಸುವಾಸನೆ ಇರುತ್ತದೆ.
- ಕಸಿ ಮಾಡಿದ ಸಸಿಯಲ್ಲಿ ಸಣ್ಣ ಗಾತ್ರದ ಗಿಡದಲ್ಲೇ ಇಳುವರಿ ಬರಲಾರಂಭಿಸುತ್ತದೆ.
- ಇದರ ಗಿಡದ ಲಕ್ಷಣವೇ ಕುಬ್ಜ ಎನ್ನಬಹುದು. ತುಂಬಾ ಹೂ ಬಿಡುತ್ತದೆ.
- ವರ್ಷದಲ್ಲಿ ಒಂದು ಸಲ ಅಲ್ಲದೆ ಅಕಾಲಿಕವಾಗಿ 2-3 ಬಾರಿ ಹೂ ಬಿಡುತ್ತದೆ.
- ಬೇರೆಲ್ಲಾ ಬಟರ್ ಪ್ರೂಟ್ ಗಿಡ ಬೆಳೆದಂತೆ ನೆಲಕ್ಕೆ ನೆರಳು ಕೊಡುವಷ್ಟು ದಟ್ಟವಾಗಿ ಬೆಳೆಯುತ್ತದೆ.
- ಜಗತ್ತಿನ ಎಲ್ಲಾ ಭಾಗಗಳಲ್ಲೂ ವಾಣಿಜ್ಯಿಕವಾಗಿ ಬೆಳೆಯುತ್ತಿರುವ ತಳಿ ಇದೇ. ಇದರಲ್ಲಿ 30% ದಷ್ಟು ಕೊಬ್ಬಿನ ಅಂಶ ಇದೆ.
- ಈ ಕೊಬ್ಬಿನ ಅಂಶ 100% ಕೊಲೆಸ್ಟ್ರಾಲ್ ಮುಕ್ತವಾಗಿರುತ್ತದೆ.
- ಇದನ್ನೇ ಮೂಲವಾಗಿಟ್ಟುಕೊಂಡು ಕ್ರಾಸಿಂಗ್ ಮಾಡಿ ಬೇರೆ ಬೇರೆ ತಳಿಗಳನ್ನೂ ಮಾಡಲಾಗಿದೆ.
- ಆದರೂ ಮೂಲ ಹಾಸ್ ತಳಿಗೆ ಯಾವುದೇ ಕುಂದು ಬರಲಿಲ್ಲ.
ಹಾಸ್ ತಳಿ ಅಕಾಲಿಕವಾಗಿ ಹೂ ಬಿಟ್ಟು ಕಾಯಿಯಾಗುವ ಕಾರಣ ಆ ಸಮಯದಲ್ಲಿ ಉತ್ತಮ ಬೆಲೆ (ಕಿಲೋ-500-600 ತನಕ) ಸಿಗುತ್ತದೆ.ಸೀಸನ್ ನಲ್ಲಿ ಬಂದಾಗ ಉಳಿದ ತಳಿಗಿಂತ 50% ಹೆಚ್ಚಿನ ಬೆಲೆ ಸಿಗುತ್ತದೆ. ಕೆಡದ ಕಾರಣ ಅಂಗಡಿಯವರು ಹೆಚ್ಚು ಆಸಕ್ತಿ ವಹಿಸುತ್ತಾರೆ.
ಎಲ್ಲೆಲ್ಲಿ ಬೆಳೆಯಬಹುದು?
- ಎಲ್ಲಾ ಪ್ರದೇಶಗಳಲ್ಲೂ ಈ ತಳಿಯನ್ನು ಬೆಳೆಯಲು ಸಾಧ್ಯವಾಗದು.
- ಇದನ್ನು ಮಡಿಕೇರಿಯ (ಕೊಡಗು) ಚೆಟ್ಟಳ್ಳಿ ಸಮೀಪ ನಾಮಧಾರೀ ಎಸ್ಟೇಟ್ ನಲ್ಲಿ ಮೊತ್ತ ಮೊದಲಾಗಿ ಬೆಳೆದು ಯಶಸ್ಸು ಕಾಣಲಾಗಿದೆ.
- ಅವರು ತಮ್ಮದೇ ಆದ ಕೌಂಟರ್ ಮೂಲಕ ಮಾರಾಟ ಮಾಡುತ್ತಾರೆ.
- ಕರ್ನಾಟಕದ ತಂಪಾದ ಹಾವಾಮಾನ ಇರುವ ಮಡಿಕೇರಿ, ಬೆಂಗಳೂರು, ಚಿಕ್ಕಮಗಳೂರು ಹಾಸನ , ಮೈಸೂರು, ಶಿವಮೊಗ್ಗ ಮೂಂತಾದ ಕಡೆ ಮಾತ್ರ ಬೆಳೆಯಬಹುದು.
- ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರದ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
- ಇಂತಹ ವಾತಾವರಣ ಇಲ್ಲದ ಕಡೆ ಈ ತಳಿ ಬೆಳೆಯುವುದು ಸೂಕ್ತವಲ್ಲ.
- ಹೆಚ್ಚು ತಾಪಮಾನ ಇರುವ ಪ್ರದೇಶಗಳಲ್ಲಿ ಇದನ್ನು ಬೆಳೆದರೆ ಎಲೆ ಸುಡುತ್ತದೆ. ಗಿಡ ಸಾಯಲೂ ಬಹುದು.
ಕರಾವಳಿ, ಬಯಲುಸೀಮೆ ಇಲ್ಲೆಲ್ಲಾ ಹಾಸ್ ತಳಿಯನ್ನು ಬೆಳೆಯುವುದು ಸೂಕ್ತವಲ್ಲ. ಅಲ್ಲಿ ಇದು ಬದುಕುವುದು ಕಷ್ಟ. ಬದುಕಿದರೂ ಕಾಯಿ ಕಚ್ಚಲು ಅಲ್ಲಿನ ವಾತಾವರಣದ ಉಷ್ಣತೆ ಅಡ್ಡಿ. ಇಲ್ಲಿಗೆ ಕೆಲವು ಸ್ಥಳೀಯ ತಳಿಗಳನ್ನು ಬಳಕೆ ಮಾಡುವುದು ಸೂಕ್ತ. ಆಯಾ ಸ್ಥಳದಲ್ಲಿ ಬೆಳೆಯುವ ತಳಿಗಳನ್ನು ಆಯ್ಕೆ ಮಾಡಿದರೆ ಉತ್ತಮ ಫಲ ಕೊಡುತ್ತದೆ. ಆದರೂ ಹೂ ಬಿಡುವ ಸಮಯದಲ್ಲಿ ವಾತಾವರಣದ ತಾಪಮಾನ 35 ಡಿಗ್ರಿಗಿಂತ ಹೆಚ್ಚಾದರೆ ಕಾಯಿಗಳು ಉದುರಿ ಹೋಗುತ್ತದೆ.
ಹಾಸ್ ತಳಿಯ ಎಲೆಗಳು ಮತ್ತು ಗೆಲ್ಲುಗಳ ನೋಟ ಸ್ವಲ್ಪ ಭಿನ್ನವಾಗಿರುತ್ತದೆ. ಎಲೆಯ ಅಡಿ ಭಾಗ ಮತ್ತು ಗೆಲ್ಲಿನಲ್ಲಿ ಸ್ವಲ್ಪ ಮಟ್ಟಿಗೆ ಬೂದಿ ಲೇಪನ ಇದ್ದಂತೆ ಕಾಣಿಸುತ್ತದೆ. ನರ್ಸರಿಗಳಲ್ಲಿ ಗಿಡ ಆಯ್ಕೆ ಮಾಡುವವರು ಇದನ್ನು ಗಮನಿಸಬೇಕು.