ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ  ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು.  ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ.

ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ ಒಬ್ಬೊಬ್ಬ ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಒಟ್ಟಾರೆಯಾಗಿ  ಹೆಚ್ಚಿನೆಲ್ಲಾ ಸಮಸ್ಯೆ ಉಂಟಾಗಲು ಮೊನೋ ಕಲ್ಚರ್ ಒಂದು ಕಾರಣವಾದರೆ ಮತ್ತೊಂದು ಹವಾಮಾನ ವೈಪರೀತ್ಯ.  ಹವಾಮಾನ ವೈಪರೀತ್ಯದಿಂದ ಸಣ್ಣ ಪ್ರಮಾಣದಲ್ಲಿ ಹಾನಿ ಮಾಡುತ್ತಿದ್ದ  ಕೀಟ, ರೋಗ ಬಾಧೆಗಳು ದೊಡ್ಡ ಹಾನಿ  ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಇದರೊಂದಿಗೆ ನಮ್ಮ ರೈತರು ಸಮತೋಲನ ಗೊಬ್ಬರ ನಿರ್ವಹಣೆ ಮಾಡದೆಯೂ ಒಂದಷ್ಟು ಸಮಸ್ಯೆಗಳು ಉಂಟಾಗುತ್ತವೆ. ಏನಿದ್ದರೂ ಬಂದದ್ದನ್ನು ಎದುರಿಸಲೇಬೇಕು.ಎಲ್ಲೋ ಒಂದು ಕಡೆ ಮಣ್ಣಿನ ಶಕ್ತಿ ಕಡಿಮೆ ಇರುವಲ್ಲಿ  ಏನಾದರೂ ರೋಗ ಕೀಟ ಸಮಸ್ಯೆ  ಪ್ರಾರಂಭವಾದ ನಂತರ ಅದರ ಹಬ್ಬುವಿಕೆಗೆ ನಂತರ ಲಂಗು ಲಗಾಮು ಇರುವುದಿಲ್ಲ. ಈಗ ಆದದ್ದೂ ಅದೆ. ಉದಾಹರಣೆಗೆ ಹಳದಿ ಎಲೆ ರೋಗ.

  • ನನ್ನ ವೈಯಕ್ತಿಕ ಅಭಿಪ್ರಾಯದಂತೆ ಈ ರೋಗ ಪ್ರಾರಂಭಿಕ ಹಂತದಲ್ಲಿ  ಗುರುತಿಸಲ್ಪಟ್ಟಾಗ ಅದಕ್ಕೆ  ಉಪಚಾರವೋ ಅಥವಾ  ನಾಶವೋ ಮಾಡಿರುತ್ತಿದ್ದರೆ, ಅದು ಇಂದು ಹಬ್ಬುವುದು ಕಡಿಮೆಯಾಗುತ್ತಿತ್ತು. 
  • ಎಲೆ ಚುಕ್ಕೆ ರೋಗ, ಇದು ಸಹ ಹಾಗೆಯೇ. ಕಾಣಿಸಿಕೊಂಡ ಸಮಯದಲ್ಲಿ ಅದಕ್ಕೆ ಸಾಮೂಹಿಕವಾಗಿ ನಿವಾರಣೋಪಾಯ ಮಾಡಬೇಕು.
  • ಒಂದಷ್ಟು ಜನ ಏನೋ ಸಿಂಪರಣೆ ಮಾಡಿದರು.
  • ಮತ್ತೊಂದಷ್ಟು ಜನ ಸಾವಯವ ಎಂದು ಅದರ ಹಿಂದೆ ಹೋದರು.
  • ಸಿಕ್ಕ ಸಿಕ್ಕವರ ಸಲಹೆಯಂತೆ ಮನಬಂದ ಉಪಚಾರ ಮಾಡಿದರು.
  • ಇಲ್ಲಿ ಉಪಚಾರ ಮಾಡಿದವನಿಗೂ ಪರಿಹಾರ ಸಿಗಲಿಲ್ಲ.
  • ಕೊರೋನಾ ಒಂದನೇ ಅಲೆ , ಎರಡನೇ ಅಲೆ ಎಂಬಂತೆ ಒಮ್ಮೆ ನಿವಾರಣೆ ಆದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಬರಲಾರಂಭಿಸಿದೆ.
  • ಕೃಷಿ ವ್ಯವಸ್ಥೆಯಲ್ಲಿ  ಸಾಮೂಹಿಕ ರೋಗ, ಕೀಟ ನಿಯಂತ್ರಣ  ಹೇಳುವಷ್ಟು ಸುಲಭವಲ್ಲ. 
  • ಕೃಷಿ ಮಾಡುವ ಕೆಲವೊಂದಷ್ಟು ಜನರಿಗೆ ಇನ್ನೂ ರೋಗಕ್ಕೆ ಔಷಧಿ ಬೇರೆ, ಕೀಟಕ್ಕೆ ಬೇರೆ ಎಂದು ತಿಳಿದಿಲ್ಲ.
  • ಅವರವರ ವೃತ್ತಿ ಕ್ಷೇತ್ರದಲ್ಲಿ ಅಗತ್ಯವಾಗಿ ತಿಳಿದಿರಬೇಕಾದ ತಳಮಟ್ಟದ (Basic) ಜ್ಞಾನವನ್ನೂ ಸಂಪಾದಿಸದೆ ಕೆಲಸ ಮಾಡುವವರು ಎಂದರೆ  ಕೃಷಿಕರು (ಕೆಲವರಲ್ಲಿ ಇದು ಇದೆ).
  • ಒಗ್ಗಟ್ಟು, ಒಮ್ಮನಸ್ಸು ಎಂಬುದು ತುಂಬಾ ಕಡಿಮೆ ಇರುವ ಕ್ಷೇತ್ರವೂ ಇದುವೇ.
  • ಹಾಗಾಗಿ ನಮ್ಮಲ್ಲಿ ರೋಗ-ಕೀಟದ ತೊಂದರೆ ಉಂಟಾದರೆ ನಿವಾರಣೆ ಮಾಡಲಿಕ್ಕೆ ಭಾರೀ ಕಷ್ಟವಾಗುತ್ತದೆ.
ಕಾಯಿಯ ಸಿಪ್ಪೆಯನ್ನು ತೆಗೆದು ನೋಡಿದಾಗ ಅದರ ಒಳಭಾಗ ಬೆಂದ ತರಹ ಇರುತ್ತದೆ.
ಕಾಯಿಯ ಸಿಪ್ಪೆಯನ್ನು ತೆಗೆದು ನೋಡಿದಾಗ ಅದರ ಒಳಭಾಗ ಬೆಂದ ತರಹ ಇರುತ್ತದೆ.

ಅಡಿಕೆಯ ಕಾಯಿ ಯಾಕೆ ಹೀಗಾಗುತ್ತದೆ?

  • ಇದು ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಶಿಲೀಂದ್ರದಿಂದ ಬರುವ ಒಂದು ರೋಗ. 
  • ಎಲೆ ಚುಕ್ಕೆ ರೋಗ ನಮ್ಮಲ್ಲಿ ಇಲ್ಲ ಎಂದು ಹೇಳುವವರಿದ್ದಾರೆ.
  • ಅವರ ತೋಟದಲ್ಲಿ ಇಂತಹ ಕಾಯಿಗಳು ಉದುರುತ್ತಿವೆ.
  • ಅವರು ರೋಗ ಬಂದಿಲ್ಲ ಎಂದು ಹೇಳಬಹುದು. ಆದರೆ ರೋಗ ಪ್ರವೇಶವಾಗಿದೆ ಎಂಬುದನ್ನು ಈ ಕಾಯಿ ಉದುರುವಿಕೆ ತಿಳಿಸುತ್ತದೆ.
  • ರೋಗಾಣು ಬಾಧಿತ ಕಾಯಿಯ ಮೇಲ್ಮೈಯಲ್ಲಿ ಸುಟ್ಟಂತಹ ಮಚ್ಚೆಗಳಿರುತ್ತದೆ.
  • ಇದು ಬೆಂದಂತೆ ಕಾಣಿಸುತ್ತದೆ. ಕೆಲವು ಕಾಯಿಯ ಪೂರ್ತಿ ಆವರಿಸಿರುತ್ತದೆ.
  • ಮತ್ತೆ ಕೆಲವೊಮ್ಮೆ ತೇಪೆ ಹಾಕಿದಂತೆ ಅಲ್ಲಲ್ಲಿ  ಸುಟ್ಟ ಕಲೆಗಳಿರುತ್ತವೆ.
  • ರೋಗಾಣು ಬಾಧಿಸಿದ ಕಾರಣದಿಂದ ಅದು ಇನ್ನೂ ಬೆಳೆಯಲಿಕ್ಕೆ ಇರುವ ಮುಂಚೆ ಉದುರಿ ಬೀಳುತ್ತದೆ.
  • ಸಣ್ಣ ಮಿಡಿ ಹಂತದಿಂದಲೂ ಉದುರುತ್ತಿರುತ್ತದೆ.
ಒಳಭಾಗದ ತಿರುಳು ಅರ್ಧ ಬಲಿತಿರುತ್ತ
ಒಳಭಾಗದ ತಿರುಳು ಅರ್ಧ ಬಲಿತಿರುತ್ತ

ಇಂತಹ ಕಾಯಿಗಳನ್ನು  ಪರೀಕ್ಷಿಸಿದಾಗ ಅದರಲ್ಲಿ ಕೊಲೆಟ್ರೋಟ್ರಿಕಮ್ ಶಿಲೀಂದ್ರದ ಇರುವಿಕೆ ಪತ್ತೆಯಾಗಿರುತ್ತದೆ. ಕಾಯಿಯ ಸಿಪ್ಪೆಯನ್ನು ತೆಗೆದು ನೋಡಿದಾಗ ಅದರ ಒಳಭಾಗ ಬೆಂದ ತರಹ ಇರುತ್ತದೆ. ಒಳಭಾಗದ ತಿರುಳು ಅರ್ಧ ಬಲಿತಿರುತ್ತದೆ. ಒಂದು ದಿನ ಕತ್ತರಿಸಿ ಹಾಗೆಯೇ ಇಟ್ಟರೆ ಒಳಭಾಗ ಕೆಂಪಗಾಗುವ ಕಾರಣ ಈ ಅಡಿಕೆ ಕರಿ ಕೋಕಾ ಅಡಿಕೆಯಾಗುವ ಸಂಭವ ಹೆಚ್ಚು. ಒಂದು ಗೊನೆಯ ಎಲ್ಲಾ ಕಾಯಿಗಳಿಗೂ ಈ ರೋಗಾಣು ಬಾಧಿಸುವುದಿಲ್ಲ. ಬಾಧಿಸಲೂ ಬಹುದು. ಬಾಧಿಸಿದ ಕಾಯಿ ಮಾತ್ರ ಉದುರುತ್ತದೆ.

ಏನು ಪರಿಹಾರ:

  • ಇಂತಹ ಅಡಿಕೆ ಉದುರುವಿಕೆ  ಹೊಸ ಸಮಸ್ಯೆ ಅಲ್ಲ.
  • ಹಿಂದಿನಿಂದಲೂ ಇತ್ತು. ಆದರೆ ಪ್ರಮಾಣ ಮಾತ್ರ ಬಹಳ ಕಡಿಮೆ ಇತ್ತು.
  • ಹಾಗಾಗಿ ಇದು ನಮ್ಮ ಗಮನಕ್ಕೆ ಅಷ್ಟಾಗಿ ಬಂದಿರಲಿಲ್ಲ.
  • ಈಗ ಇದು ಹೆಚ್ಚಿನ ಪ್ರಮಾಣದಲ್ಲಿ  ಕಾಣಲಾರಂಭಿಸಿದೆ.
  • ಅದು ವಾತಾವರಣದ ಕಾರಣದಿಂದ.
  • ಎಲೆ ಚುಕ್ಕೆ ರೋಗಕ್ಕೂ ಈ ತರಹ ಅಡಿಕೆ ಉದುರಿ ಬೀಳುವುದಕ್ಕೂ ಸಂಬಂಧವಿದ್ದು, ಕೊಲೆಟ್ರೋಟ್ರಿಕಂ ಶಿಲೀಂದ್ರದ ಹತೋಟಿಗೆ ಬೇಕಾದ ಕ್ರಮವನ್ನು ಕೈಗೊಳ್ಳಬೇಕು.
  • ಈ ಶಿಲೀಂದ್ರದ ಹತೋಟಿಗೆ ಸಧ್ಯಕ್ಕೆ  ಇರುವ ಶಿಲೀಂದ್ರ ನಾಶಕ ಪ್ರೊಪಿಕೊನೆಜ಼ೊಲ್ ಅಥವಾ ಟುಬೊಕೊನೆಜ಼ೋಲ್. (ಇದು ಶಿಲೀಂದ್ರ ನಾಶಕದ ತಾಂತ್ರಿಕ Content name) ಹೆಸರು.
  • ಇದರ ಮಾರಾಟ ಹೆಸರು  (Brand name)ಬೇರೆ ಬೇರೆ ಕಂಪೆನಿಯವು ಬೇರೆ ಬೇರೆ ಇರುತ್ತದೆ)
  • ಈ ಶಿಲೀಂದ್ರ ನಾಶಕವನ್ನು  ಒಂದು ಲೀ. ನೀರಿಗೆ 1 ಮಿಲಿ ಯಂತೆ ಮಿಶ್ರಣ ಮಾಡಿ ಎಲೆಗಳಿಗೆ ಮತ್ತು ಕಾಯಿಗಳಿಗೆ ಸಿಂಪಡಿಸಬೇಕು.
  • ಇದರಿಂದ ಎಲೆ ಚುಕ್ಕೆ ರೋಗದ ಹತೋಟಿಯೂ ಆಗುತ್ತದೆ.
  • ಜೊತೆಗೆ  ಈ ಸಮಸ್ಯೆ ಕಡಿಮೆಯಾಗುತ್ತದೆ.
  • ಬೇಸಿಗೆಯಲ್ಲಿ ಕೆಲವರು ಹೂ ಗೊಂಚಲಿಗೆ  ಶಿಲೀಂದ್ರ ನಾಶಕ ಸಿಂಪಡಿಸುವವರಲ್ಲಿ ಈ ಸಮಸ್ಯೆ  ಸ್ವಲ್ಪ ಕಡಿಮೆಯಿರುತ್ತದೆ.

ಎಲೆ ಚುಕ್ಕೆ ರೋಗ ಅಡಿಕೆಗೆ ಆತಂಕ:

  • ಎಲೆ ಚುಕ್ಕೆ ರೋಗ  ಎಂಬುದು ತುಂಬಾ ಹಿಂದೆಯೇ ಅಡಿಕೆ ಮರಗಳ ಎಲೆಗೆ ಕಾಯಿಗಳಿಗೆ ತೊಂದರೆ ಮಾಡುತ್ತದೆ ಎಂಬುದಾಗಿ ವಿಜ್ಞಾನಿಗಳು ಗುರುತಿಸಿದ್ದಾರೆ.
  • ಆಗ ಅದು ಕಡಿಮೆ ಹಾನಿ ಮಾಡುವ (minor pathogene) ರೋಗಕಾರಕವಾಗಿತ್ತು.
  • ಅದಕ್ಕೆ ಮ್ಯಾಂಕೋಜೆಬ್ ನಂತಹ ಕೆಲವು ಸ್ಪರ್ಶ ಶಿಲೀಂದ್ರ ನಾಶಕಗಳು  ಸಾಕಾಗುತ್ತಿತ್ತು.
  • ಕಳೆದ ಕೆಲವು ವರ್ಷದಿಂದ ಇದು ಉಲ್ಬಣ ಸ್ಥಿತಿಗೆ ಬಂದಿದೆ.
  • ಬಹುಶಃ ಈ ರೋಗಾಣುವಿನ ಮುಖ್ಯ ಆಶ್ರಯ ಸಸ್ಯ ಇಲ್ಲದಾಗಿರಬಹುದು ಅಥವಾ ಅಂತಹ ಆಶ್ರಯ ಸಸ್ಯದಲ್ಲಿ ಈ ರೋಗಾಣು ಉಲ್ಬಣ ಸ್ಥಿತಿಗೆ ತಲುಪಿ ಇತರ ಬೆಳೆಗೆ ಹಬ್ಬಿರಬಹುದು.
  • ಕೆಲವು ತಜ್ಞರ ಪ್ರಕಾರ ಈ ರೋಗಾಣು ಕಾಫೀ ಬೆಳೆಯಲ್ಲಿ  ಜಾಸ್ತಿ ಇತ್ತು ಎನ್ನುತ್ತಾರೆ.
  • ಅಲ್ಲಿಂದ ಇದು ಅಡಿಕೆಗೆ ಹರಡಿದೆ ಎನ್ನುತ್ತಾರೆ.
  • ಇನ್ನು ಕೆಲವರ ಪ್ರಕಾರ ರಬ್ಬರ್ ಬೆಳೆಯಲ್ಲಿ ಈ ರೋಗ  ಇದ್ದುದು, ಇತ್ತೀಚೆಗೆ ರಬ್ಬರ್ ಬೆಳೆ ಹೆಚ್ಚಾಗಿ,  ಅದರ ಬೆಲೆ ಕುಸಿತ ಉಂಟಾಗಿ ಅದಕ್ಕೆ ಕಾಲಕಾಲಕ್ಕೆ ಅಗತ್ಯವಾದ ನಿರ್ವಹಣೆ ಮಾಡದೆ ಈ ರೋಗ  ಉಲ್ಬಣವಾಗಿ ಹರಡಿದೆ ಎನ್ನುವವರೂ ಇದ್ದಾರೆ.
  • ಎರಡೂ ಬೆಳೆಗೂ ಈ ರೋಗಾಣು ಬಾಧಿಸುತ್ತದೆ. ಇದರಿಂದ ಬರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 
  • ಎಲೆಚುಕ್ಕೆ ರೋಗಕ್ಕೆ ಕಾರಣವಾದ Colletotrichum  ಶಿಲೀಂದ್ರ ಬೇರೆ ಬೇರೆ ಬೆಳೆಗೆ ತೊಂದರೆ ಮಾಡುತ್ತದೆ.
  • ಯಾವುದೋ ಕಾರಣಕ್ಕೆ ಅಡಿಕೆ ಮೇಲೆ ತನ್ನ ಪ್ರಭಾವ ತೋರಿಸಿದೆ.
  • ಇದು ಬರೇ ಎಲೆಗೆ ಮಾತ್ರವಲ್ಲ. ಕಾಯಿಗಳಿಗೆ, ಹಾಳೆಗೆ, ಹೂ ಗೊಂಚಲಿಗೆ  ಬಾಧಿಸಿ  ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ.
  • ಬೆಳೆಗಾರರು ಸಮತೋಲನ ಗೊಬ್ಬರ, ಅಗತ್ಯ ಬಿದ್ದಲ್ಲಿ ದ್ವಿತೀಯ ಪೋಷಕಾಂಶ (Secendary nutrients) ಮತ್ತು ಲಘು ಪೋಷಕಾಂಶಗಳನ್ನು  ಕೊಡುವುದರ ಮೂಲಕ ಮಣ್ಣಿನ ಶಕ್ತಿ ಹೆಚ್ಚಿಸಬೇಕು.
  • ರೋಗ ಬಂದಾಗ  ರೋಗಾಣು ಶೇಷಗಳು ಇರುವ ಹಾಳೆ, ಗರಿ ಇತ್ಯಾದಿಗಳನ್ನು  ಸುಡುವುದು ಅಥವಾ ಗಾಳಿಯಾಡದ ವಾತಾವರಣ (  ಕಪ್ಪು ಪ್ಲಾಸ್ಟಿಕ್ ಶೀಟು ಹೊದಿಸುವಿಕೆ) ದಲ್ಲಿ ಇರಿಸಿ ರೋಗ ಕಾರಕಗಳ ಸಂಖ್ಯೆಯನ್ನು ತಗ್ಗಿಸುವುದು ಮಾಡಬೇಕು.
  • ಇವೆಲ್ಲಾ ಮಾಡಿ ನಂತರ ರೋಗ ನಾಶಕ ಸಿಂಪರಣೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!