ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ – ಕಾರಣ ಏನು ಗೊತ್ತೇ?

ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ

ಕೊಳೆರೋಗ ಅಡಿಕೆ ಬೆಳೆಗೆ, ಕರಿಮೆಣಸು, ಕೊಕ್ಕೋ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಳೆಗಾಲದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದ್ದು, ಈ ರೋಗವು ಬರೇ ಬೆಳೆ ಮಾತ್ರವಲ್ಲದೆ ಮರವನ್ನೂ ನಿತ್ರಾಣಗೊಳಿಸುತ್ತದೆ. ರೋಗ ಹೆಚ್ಚಳಕ್ಕೆ ವಾತಾವರಣದ ಜೊತೆಗೆ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ವಿಧಾನವೂ ಒಂದು ಕಾರಣವಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಕಾರಣ ಹೆಚ್ಚಿನವರ ತೋಟದಲ್ಲಿ ಕೊಳೆ ರೋಗ ಪ್ರಾರಂಭವಾಗಿದೆ.

ಅಡಿಕೆಗೆ ಕಾಯಿಗೆ ಕೊಳೆ ಬಂದು ಉದುರುವುದು, ಅದು  ಉಲ್ಬಣವಾದರೆ ಗೊನೆ ಬುಡದ ಮೃದು ಭಾಗದ ಮೂಲಕ  ಸುಳಿಗೆ ಹರಡುವುದು, ಕರಿಮೆಣಸಿನ ಬಳ್ಳಿಯ ಬುಡದ ಬೇರು ಕೊಳೆಯುವುದು, ತೆಂಗಿನ ಮರದ ಸುಳಿ ಕೊಳೆಯುವುದು, ರಬ್ಬರ್ ಮರದ ಎಲೆ ಉದುರುವುದು,  ಕೊಕ್ಕೋ ಎಲೆ ಉದುರುವುದು, ಕಾಯಿ ಕಪ್ಪಾಗುವುದು, ಗೆಲ್ಲು ಒಣಗುವುದು, ಮರಮಟ್ಟುಗಳಾದ ಮಾವು, ಹಲಸು ಗೆಲ್ಲು ಮರದ ಕಾಂಡಕ್ಕೆ ಕೊಳೆ ಬರುವುದು ಅತಿಯಾಗಿ ಮಳೆ ಬಂದಾಗ ಹೆಚ್ಚು. ಈ ವರ್ಷ ಮಳೆ ನಿರಂತರವಾಗಿ ಸುರಿದ ಕಾರಣ  ಹೆಚ್ಚಿನ ಕಡೆಯಲ್ಲಿ ಇದು ಆಗಿದೆ.  ಇದೆಲ್ಲಾ ಕೃಷಿಕರಿಗೆ ಗೊತ್ತಿರುವ ವಿಚಾರ. ಅದಕ್ಕೆ ಮುನ್ನೆಚ್ಚರಿಕೆಯಾಗಿ ಮಳೆಗಾಲ ಪೂರ್ವದಲ್ಲಿ ರೋಗಾಣುಗಳು ಮೊಳಕೆ ಒಡೆಯದಂತೆ ತಡೆಯಲು ಶಿಲೀಂದ್ರ ನಾಶಕ ಸಿಂಪರಣೆ ಮಾಡಲೇ ಬೇಕು. ಇದನ್ನು  ಸಮರ್ಪಕವಾಗಿ ಪಾಲಿಸದ ಕಡೆಗಳಲ್ಲಿ ಕೊಳೆಯಲು ಕಾರಣವಾದ ಶಿಲೀಂದ್ರದ ಹಾವಳಿ ಹೆಚ್ಚಾಗಿದೆ.

ಕೊಳೆ ರೋಗ ಏನು?

ಕೊಳೆ ರೋಗ ಎಂದರೆ ಕೊಳೆಯುವಂತೆ ಮಾಡುವ ಒಂದು ಶಿಲೀಂದ್ರವು ಸಸ್ಯಾಂಗಗಳಲ್ಲಿ ಸೇರಿಕೊಂಡು ಬೆಳೆದು ಸಂತಾನಾಭಿವೃದ್ದಿಯಾಗುವುದು. ಅದು ಬೆಳೆಯುವುದು ಎಂದರೆ ಸಸ್ಯದ ಜೀವಕೋಶಗಳಲ್ಲಿ ಪರಾವಲಂಬಿಯಾಗಿ ಬದುಕಿ ಸಹಜೀವನ ನಡೆಸುವುದು. ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ಸೋಂಕು ತಗಲಿ ಸಸ್ಯ ಜೀವ ಕೋಶದ ಒಳಗೆ ಸೇರಿದಾಗ ಅಲ್ಲಿ ಸಂತಾನಾಭಿವೃದ್ದಿಯಾಗಿ ಅದನ್ನು ಬೇಯಿಸಿದ ತರಹ ಮಾಡುತ್ತದೆ. ಈ ಶಿಲೀಂದ್ರವು ಗಾಳಿಯ ಮೂಲಕ, ನೀರಿನ ಮೂಲಕ ಪ್ರಸಾರವಾಗುತ್ತದೆ. ಸೂಕ್ತ ವಾತಾವರಣ ಸಿಕ್ಕಾಗ ಅದು ಸಂಖ್ಯಾಭಿವೃದ್ದಿಯಾಗುತ್ತದೆ.  ಇದು ಬೆರಳೆಣಿಕೆಯಷ್ಟಲ್ಲ. ಕೋಟ್ಯಾಂತರ ಸಂಖ್ಯೆಯಲ್ಲಿ ಸಂತಾನಾಭಿವೃದ್ದಿಯಾಗುತ್ತದೆ. ಅಡಿಕೆಯಲ್ಲೂ ಅಷ್ಟೇ. ತೆಂಗಿನಲ್ಲೂ, ಮರಮಟ್ಟು ಯಾವುದಕ್ಕೆ ಕೊಳೆ ರೋಗದ ಶಿಲೀಂದ್ರ ಬಾಧಿಸಿದರೂ ಹಾಗೆಯೇ ಆಗುತ್ತದೆ. ಎಲ್ಲದಕ್ಕೂ ಒಂದೇ ಶಿಲೀಂದ್ರ ಬಾಧಿಸುವುದಲ್ಲ. ಶಿಲೀಂದ್ರದ ಬೇರೆ ಬೇರೆ ಉಪಜಾತಿಗಳು ಬಾಧಿಸುತ್ತವೆ. ಅಡಿಕೆಗೆ  Phytophthora meadii, ತೆಂಗಿಗೆ Phytophthora palmivora, ಕರಿಮೆಣಸಿಗೆ Phytophthora capsici. ಪಪ್ಪಾಯಕ್ಕೆ, ಕೊಕ್ಕೋ ಗೆ Phytophthora palmivora,  ಹೀಗೆಲ್ಲಾ ಶಿಲೀಂದ್ರಗಳಲ್ಲಿ ಉಪಜಾತಿಗಳಿವೆ. ತೇವಾಂಶ ಇರುವಾಗ ಈ ಜೀವಾಣು ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ. ಬಿಸಿಲು ಬಂದು ಒಣ ವಾತಾವರಣ ಉಂಟಾದಾಗ ಕೇವಲ 1-2 ಗಂಟೆಯೊಳಗೆ ಅದು ಸತ್ತು ಹೋಗುತ್ತದೆ.

ಕೊಳೆ ರೋಗ ಬಾಧಿತ ಅಡಿಕೆ

ಕೊಳೆ ರೋಗ ತರುವ ಶಿಲೀಂದ್ರಕ್ಕೆ ಮುಂಜಾಗ್ರತೆಯೇ ಪರಿಹಾರ:

ಕೊಳೆ ರೋಗದ ಶಿಲೀಂದ್ರವನ್ನು  ಬಂದ ನಂತರವೂ ಕೊಲ್ಲುವ ಶಿಲೀಂದ್ರ ನಾಶಕ ಇದೆ. ಆದರೆ ಅದು ಕಳ್ಳ ಮನೆಗೆ ಬಂದು ಕಳ್ಳತನ ಮಾಡಿದ ತರುವಾಯ ಬಂದೋಬಸ್ತು ಮಾಡಿದಂತೆ. ಇದು ಅಡಿಕೆಗೆ ಮಾತ್ರವಲ್ಲ ಎಲ್ಲಾ ಬೆಳೆಗಳಿಗೂ ಅನ್ವಯ. ಕೊಳೆ ರೋಗದ ಶಿಲೀಂದ್ರ ಬಾಧಿಸುವುದು ಮತ್ತು ಅದು ಪ್ರಸಾರವಾಗುವ ವೇಗ ಹೆಚ್ಚು. ಅದು ಪ್ರಸಾರವಾಗಿ ಅಂತಿಮ ಹಂತಕ್ಕೆ ಬಂದಾಗ ಅದು ಕೊಳೆಯಲ್ಪಡುತ್ತದೆ. ಆ ಸಮಯದಲ್ಲಿ ಅದು ನಮಗೆ ಗೊತ್ತಾಗುತ್ತದೆ. ಅದೇ ಕಾರಣಕ್ಕೆ ಕೊಳೆ ರೋಗ ಕಾರಕ ಶಿಲೀಂದ್ರ ಬಾರದಂತೆ ತಡೆಯಲು ಮುನ್ನೆಚ್ಚರಿಕಾ ಔಷಧಿ ಸಿಂಪಡಿಸಬೇಕು ಎಂದಿರುವುದು.  ಕೊಳೆ ರೋಗ ಬರುವುದು ಸಾಮಾನ್ಯವಾಗಿ ಮಳೆ ಬಂದ ನಂತರ ಹಾಗಾಗಿ ಮಳೆ ಗಟ್ಟಿಯಾಗಿ ಹಿಡಿದ ಮೇಲೆ ಸಿಂಪಡಿಸಿದರಾಯಿತು ಎಂದು ಕೆಲವರಿಗೆ ಯಾರು ಹೇಳಿದ್ದಾರೆಯೋ ತಿಳಿಯದು. ಕೊಳೆ ರೋಗದ ಬೀಜಾಣು ಮಳೆ ಪ್ರಾರಂಭವಾಗುವ ಸಮಯದಲ್ಲಿ  ವಾತಾವರಣದ ಏರುಪೇರಿಗೆ ಸಸ್ಯಗಳಲ್ಲಿ ಆಶ್ರಯಿಸುತ್ತವೆ. ಅದಕ್ಕೆ ಸೂಕ್ತ ವಾತಾವರಣ ಸಿಗುವ ವರೆಗೆ ಅದು ಸುಪ್ತಾವಸ್ತೆಯಲ್ಲಿ ಇರುತ್ತದೆ. ಮಳೆ ಚೆನ್ನಾಗಿ ಹಿಡಿಯುವಾಗ ಅದು ಅಂಕುರವಾಗಿರುತ್ತದೆ. ಆಗ ಶಿಲಿಂದ್ರವನ್ನು ಹದ್ದು ಬಸ್ತಿಗೆ ತರುವುದು ಕಷ್ಟ. ಅದಕ್ಕಾಗಿ ತಿಳಿದವರು ಮುಂಗಾರು ಮಳೆ ಪ್ರಾರಂಭದ ದಿನಗಳಲ್ಲಿ ಸಿಂಪರಣೆ ಮಾಡಬೇಕು ಎಂದದ್ದು.

ಶಿಲೀಂದ್ರ ಸೋಂಕಿತವಾಗಿ ಸಸ್ಯ ಜೀವ ಕೋಶದ ಒಳಗೆ ಸೇರಿದಾಗ

ಕೊಳೆ ರೋಗಕ್ಕೆ ಔಷಧಿ:

ಕೊಳೆ ರೋಗ ಬಾರದಂತೆ ತಡೆಯಲು ಇದ್ದ ಔಷದೋಪಚಾರ ಬೋರ್ಡೋ ದ್ರಾವಣದ ಸಿಂಪರಣೆ. ಇದಕ್ಕೆ ಶತಮಾನಗಳ ಇತಿಹಾಸ ಇದೆ. ಇದರಲ್ಲಿ ಇಂದಿಗೂ ಫಲಿತಾಂಶ ಇದೆ. ಆದಾಗ್ಯೂ ಈಗ ತಜ್ಞರು ಹೊಸ  ತಗಾದೆಯಾಗಿ ತಾಮ್ರದ ಅಂಶ ಮಣ್ಣಿನಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳುತ್ತಿರುವ ಕಾರಣ ಕೆಲವು ಬೇರೆ ಔಷದೋಪಚಾರಗಳೂ ಬಂದವು. ಕೆಲವರು ಬೋರ್ಡೋ ಬದಲಿಗೆ ಕಾಪರ್ ಆಕ್ಸೀ ಕ್ಲೋರೈಡ್ (COC)ಬಳಕೆ  ಉತ್ತಮ ಎನ್ನುತ್ತಾರೆ. ಇದರಲ್ಲೂ ತಾಮ್ರ ಇದೆ. ಹಾಗೆಯೇ ಈಗ ಬಾಯರ್ ಕಂಪೆನಿಯವರ INFINTO ಎಂಬ ಹೆಸರಿನ broad spectrum ಶಿಲೀಂದ್ರ ನಾಶಕವನ್ನು ಕೆಲವು ರೈತರು ಬಳಸಲು ಪ್ರಾರಂಭಿಸಿದ್ದಾರೆ. ಪೊಟ್ಯಾಶಿಯಂ ಫೋಸ್ಪೋನೇಟ್ ಎಂಬ ರಾಸಾಯನಿಕವನ್ನೂ ಕೊಳೆ ರೋಗ ನಿಯಂತ್ರಣಕ್ಕಾಗಿ ಬಳಕೆ ಮಾಡಬಹುದು. ಎಲ್ಲದರಲ್ಲೂ  ಅಲ್ಪ ಸಲ್ಪ ನ್ಯೂನತೆಗಳಿರಬಹುದು. ಆದರೂ ಬಹುತೇಕ ಮುನ್ನೆಚರಿಕಾ ಸಿಂಪರಣೆಯಲ್ಲಿ  ಫಲಿತಾಂಶ ಕೊಡುತ್ತದೆ.

ಇಲ್ಲಿ ಕಾಣುತ್ತಿರುವ ಬಿಳಿ ಪದಾರ್ಥವೇ ಶಿಲೀಂದ್ರ . ಇದು ತಗಲಿದಲ್ಲಿ ಕೊಳೆ ಬರುತ್ತದೆ.
ಇಲ್ಲಿ ಕಾಣುತ್ತಿರುವ ಬಿಳಿ ಪದಾರ್ಥವೇ ಶಿಲೀಂದ್ರ . ಇದು ತಗಲಿದಲ್ಲಿ ಕೊಳೆ ಬರುತ್ತದೆ.

ಕೊಳೆ ರೋಗ ಬರಲು ಕಾರಣ:

ಮಳೆಗಾಲದಲ್ಲಿ ಪ್ರತೀ ವರ್ಷ ಆಗುವ ಕಡಲ್ಕೊರೆತ,ಮನೆ, ಕೃಷಿ ಹಾನಿ ತರಹವೇ ಮಳೆ ಬಂದ ತಕ್ಷಣ ಕೊಳೆ ರೋಗವೂ. ಬಹುತೇಕ ಕೊಳೆ ರೋಗ ಬಂದು ಬೆಳೆ ಹಾಳಾಗಿದೆ ಎನ್ನುವವರು  ಮಳೆಗಾಲ ಸರಿಯಾಗಿ ಹಿಡಿಯದೆ ಸಿಂಪರಣೆ ಪ್ರಾರಂಭಿಸುವುದಿಲ್ಲ. ಮಳೆಗೆ ಮುಂಚೆ ಸಿಂಪಡಿಸಿದರೆ ಅದು ಖಾರವಾಗುತ್ತದೆ ಎಂಬುದು ಇವರ  ತರ್ಕ.

ಸುಣ್ಣ ಮತ್ತು ಮೈಲುತುತ್ತೆಗಳನ್ನು ಬೆರೆಸುವಾಗ ಅವರದ್ದೇ ಆದ ಕ್ರಮ ಅನುಸರಿಸುವವರಲ್ಲಿ ಕೊಳೆ ರೋಗ ಬರುತ್ತಲೇ ಇರುತ್ತದೆ. ಶೇ. 1 ರ ಬೋರ್ಡೋ ದ್ರಾವಣ ಎಂಬುದನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲಾರದವರು ಸಾಕಷ್ಟು ರೈತರಿದ್ದಾರೆ. ಸುಣ್ಣವನ್ನು ಯಾಕೆ ಹಾಕಲಾಗುತ್ತದೆ, ತುತ್ತೆಯ ಪಾತ್ರ ವೇನು ಎಂಬುದನ್ನು ತಿಳಿದಿರದ ಹಲವಾರು ರೈತರು ನಮ್ಮಲ್ಲಿದ್ದಾರೆ. 200 ಲೀ. ದ್ರಾವಣಕ್ಕೆ 2 ಕಿಲೊ ತುತ್ತೆ, 3-4 ಕಿಲೋ  ಸುಣ್ಣ ಹಾಕುವವರೂ ಇದ್ದಾರೆ.  ತುತ್ತೆ  ಹೆಚ್ಚು ಮಾಡುವವರೂ ಇದ್ದಾರೆ. ಶೇ. 1 ರ ಬದಲಿಗೆ ಶೇ.2 ರ ಬೋರ್ಡೋ ದ್ರಾವಣ ತಯಾರಿಸುವವರೂ ಇದ್ದಾರೆ. ಬೋರ್ಡೋ ದ್ರಾವಣ ಅಥವಾ ಕೊಳೆ ಔಷಧಿ ಸಿಂಪಡಿಸುವ ಸಮಯದಲ್ಲಿ ತನ್ನಲ್ಲಿರುವ ಜ್ಞಾನವನ್ನೆಲ್ಲಾ ಮರೆತು ಸಿಂಪರಣೆ ಮಾಡುವವನ ಜ್ಞಾನಕ್ಕೆ ಪ್ರಾಧಾನ್ಯತೆ ನೀಡುವ ಅದೆಷ್ಟೋ ಕೃಷಿಕರಿದ್ದಾರೆ.

ಕೊಳೆ ಔಷಧಿಗೆ ಕೀಟನಾಶಕ ಸೇರಿಸಿ ಸಿಂಪಡಿಸುವವರೂ ಇದ್ದಾರೆ.  ನುಶಿಗಳ ಮೂಲಕ ಕೊಳೆ ರೋಗ ಬರುವುದು ಎಂದು ವಾದಿಸುವವರೂ ಇದ್ದಾರೆ.  ಇಂತವರ  ತೋಟದಲ್ಲಿ ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚು. ಬಾರದಿರುವುದೂ ಇದೆ.  ಹಾಗೆಂದು ಸಾರ್ವರ್ತಿಕ ವಿಧಾನವನ್ನು ಮೀರಿ ತಮ್ಮದೇ ವಿಧಾನದಲ್ಲಿ  ಕೊಳೆ ಔಷಧಿ ಬಳಸುವವರು ಸದಾ ರೋಗಕ್ಕೆ ಆಹ್ವಾನ ಕೊಡುವವರು.

ಅಡಿಕೆ ಉದುರಲು ಹೆಚ್ಚು ದಿನ ಬೇಕಾಗಿಲ್ಲ

ಕೊಳೆ ರೋಗ ತಡೆಯಲು ಬೋರ್ಡೋ ಯಾಕೆ?

ಕೊಳೆ ರೋಗ ಬಾರದಂತೆ ತಡೆಯಲು ಇತರ ಔಷಧಿಗಳೂ ಆಗದೆಂದಿಲ್ಲ. ಆದರೆ ಅದು ಕೆಲಸ ಮಾಡಬೇಕಿದ್ದರೆ ಸಸ್ಯ ಜೀವಕೋಶಗಳ ಒಳಗೆ ಸೇರಬೇಕು. ಹಾಗೆಯೇ ಅದು  ಕನಿಷ್ಟ 40 ದಿನಗಳ ಕಾಲವಾದರೂ ಉಳಿಕೆ ಅಂಶ ಹೊಂದಿರಬೇಕು. ಬೋರ್ಡೋ ದ್ರಾವಣ ಸಿಂಪಡಿಸಿದಾಗ ಮೈಲುತುತ್ತೆಯಲ್ಲಿರುವ ತಾಮ್ರದ ಅಂಶ ಶಿಲೀಂದ್ರಗಳ ಬೀಜಾಂಕುರವನ್ನು ತಡೆಯುತ್ತದೆ. ಹಾಗೆಂದು ಅದನ್ನೇ ಸಿಂಪಡಿಸಲು ಬರುವುದಿಲ್ಲ ಅದು ಆಮ್ಲೀಯವಾಗಿರುತ್ತದೆ. ಅದಕ್ಕೆ ಕ್ಷಾರೀಯ ವಸ್ತುವಾದ ಸುಣ್ಣವನ್ನು  ಅಗತ್ಯದಷ್ಟೇ ಸೇರಿಸಿದಾಗ  ಅದು ಆಮ್ಲೀಯತೆ  ಕಳೆದು ಕ್ಷಾರೀಯತೆ ಅಥವಾ ತಟಸ್ಥ ರೂಪಕ್ಕೆ ಬರಬೇಕು. ಹೆಚ್ಚು ಕ್ಷಾರೀಯವಾದರೂ ಉಪಯೋಗ ಇಲ್ಲ. ಅಮ್ಲೀಯವಾದರೂ ತೊಂದರೆ. ಅದಕ್ಕೆ ತಟಸ್ಥ ದ್ರಾವಣ ಆಗಿರಬೇಕು ಎನ್ನುತ್ತಾರೆ. ಬಹುಷಃ ತಟಸ್ಥ ದ್ರಾವಣ ಮಾಡಿ ಸಿಂಪರಣೆ ಮಾಡುವವರು ತೀರಾ ಕಡಿಮೆ ಇರಬಹುದು. 1:1 ಪ್ರಮಾಣದಲ್ಲಿ ಸೇರಿಸಿದರೂ ಅದು ಕ್ಶಾರೀಯವೇ ಆಗುತ್ತದೆ. ತಟಸ್ಥ ಸ್ಥಿತಿಯಲ್ಲಿದ್ದರೆ ಅವು ಮೂರೂ (ತಾಮ್ರ, ಗಂಧಕ, ಕ್ಯಾಲ್ಸಿಯಂ) ವಸ್ತುಗಳೂ ಸಸ್ಯ ಪೋಷಕವೂ ಆಗಿರುವುದರಿಂದ ಅದನ್ನು ಕಾಯಿಗಳ ಮೇಲೆ ಸಿಂಪಡಿಸಿದಾಗ ಅದನ್ನು ಕಾಯಿಯ ಹಸುರು ಭಾಗ ಸ್ವಲ್ಪ ಪ್ರಮಾಣದಲ್ಲಿ ಹೀರಿಕೊಂಡು ಅವು ಸಸ್ಯ ಜೀವ ಕೋಶಗಳಲ್ಲಿ ಇರುತ್ತವೆ. ಶಿಲೀಂದ್ರ ಒಳ ಪ್ರವೇಶಿಸದಂತೆ ರಕ್ಷೆ ಕೊಡುತ್ತದೆ. ಹೆಚ್ಚು ಕ್ಷಾರೀಯವಾದರೆ ಅದನ್ನು ಹೀರಿಕೊಳ್ಳುವುದಿಲ್ಲ. ಅದು ಕಾಯಿಯ ಮೇಲ್ಬಾಗದಲ್ಲಿ ಸುಣ್ಣ ಎಂಬ ನೈಸರ್ಗಿಕ ಅಂಟಿನ ಜೊತೆ ಬೆಸೆಯಲ್ಪಟ್ಟು ಅಂಟಿಕೊಂಡು ಸಹ ರಕ್ಷಣೆ ಕೊಡುತ್ತದೆ.

 ಬೋರ್ಡೋ ದ್ರಾವಣ ಒಂದು ಸ್ಪರ್ಷ ಶಿಲೀಂದ್ರ ನಾಶಕವಾಗಿರುತ್ತದೆ. ಇದು ಬರೇ ಅಡಿಕೆ ಕೊಳೆ ರೋಗದ ಶಿಲೀಂದ್ರ ಮಾತ್ರವಲ್ಲ. ತೆಂಗು, ಕೊಕ್ಕೋ, ರಬ್ಬರ್,  ಮಾವು , ಹಲಸು, ದಾಳಿಂಬೆ ಹೀಗೆ ಬಹುತೇಕ ಬೆಳೆಗಳ ಕೊಳೆಯುವ  ರೋಗಗಳಿಗೆ  ರಕ್ಷಣೆ ಕೊಡುತ್ತದೆ. ಈಗ ಬೇರೆ ಶಿಲೀಂದ್ರನಾಶಕಗಳೂ ಬಂದಿವೆ.ಆದರೆ ಇದರಲ್ಲಿ ಯಾವುದನ್ನೂ ಅಡಿಕೆಗೆ ಬಳಸಿ ಎಂದು ಶಿಫಾರಸು ಮಾಡಲಾಗಿಲ್ಲ.

ಸ್ವಯಂಕೃತ ಎಡವಟ್ಟಿನಿಂದ ಕೊಳೆರೋಗ ಬರುತ್ತದೆ ಎಂದರೆ ಬಹಳಷ್ಟು ಜನರಿಗೆ ಬೇಸರವಾಗಬಹುದು. ಆದರೆ ಕೆಲವು ತಿಳುವಳಿಕೆ ಉಳ್ಳ ಬೆಳೆಗಾರರು ಸಾರ್ವತ್ರಿಕ ವಿಧಾನವನ್ನೇ ಅನುಸರಿಸುವವರಲ್ಲಿ ಕೊಳೆ ಬರುವುದು ತೀರಾ  ಕಡಿಮೆ. ತೀರಾ ವ್ಯತಿರಿಕ್ತ ಹವಾಮಾನದಲ್ಲಿ ಬರುವುದೇ ಇಲ್ಲ ಎಂದಿಲ್ಲ. ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಕೊಳೆ ರೋಗ ಎಂದು  ಬೊಬ್ಬೆ ಹಾಕುವ ಬದಲು ನಾವು ಅನುಸರಿಸುವ ಕ್ರಮ  ಹೇಗಿದೆ, ಇದು ಸರಿಯೇ ತಪ್ಪೇ ಎಂದು ಮತ್ತೊಮ್ಮೆ ಪರಾಮರ್ಶಿಸುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!